ಸ್ವಾಮಿ ಪೊನ್ನಾಚಿ
ವಿಪರ್ಯಾಸವೆಂದರೆ ಪರಿಸರಕ್ಕಾಗಿ ಇಷ್ಟೆಲ್ಲ ತ್ಯಾಗ ಮಾಡುತ್ತಿರುವ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯಿಂದಾಗಲಿ, ಸ್ವಯಂ ಸೇವಾ ಸಂಸ್ಥೆಗಳಿಂದಾಗಲಿ, ನಗರ ಪಾಲಿಕೆಗಳಿಂದಾಗಲಿ ಇದುವರೆಗೂ ಯಾವುದೇ ಬೆಂಬಲ ಸಿಕ್ಕಿಲ್ಲ ಈ ಬಿರುಬೇಸಿಗೆಯಲ್ಲಿ ಚಾಮರಾಜನಗರದ ರೈಲು ನಿಲ್ದಾಣದ ಆಸುಪಾಸು, ಕೋರ್ಟು ರಸ್ತೆ, ಚಾಮರಾಜನಗರದ ಜೋಡಿ ರಸ್ತೆಗಳಲ್ಲಿ ಗಾಡಿ ನಿಲ್ಲಿಸಲು, ತಣ್ಣಗೆ ಕೂತು ನಾಕು ಮಾತನಾಡಲು ನೆರಳಾಗಿದೆ ಎಂದರೆ ಅದಕ್ಕೆ ಕಾರಣ ಈಶ್ವರಿ ವೆಂಕಟೇಶ್ರವರು. ಈ ತಂಪು ಹೊತ್ತಲ್ಲಿ ಅವರನ್ನು ನೆನೆಸಿಕೊಳ್ಳಲು ಕಾರಣವೂ ಇದೆ. ನಾವೆಲ್ಲ ಬೇಸಿಗೆ ಬಂತೆಂದರೆ, ಈ ಬೇಸಿಗೆಯಲ್ಲಿ ತಣ್ಣಗಿರುವ ಯಾವ ಜಾಗಕ್ಕೆ ಪ್ರವಾಸಕ್ಕೆ ಹೋಗುವುದು? ಹೇಗೆ ತಂಪಾಗಿ ಕಾಲ ಕಳೆಯುವುದು? ಜೂನ್ ತಿಂಗಳಲ್ಲಿ ಮಕ್ಕಳನ್ನು ಯಾವ ಶಾಲೆಗೆ ಸೇರಿಸುವುದು? ಫೀಸು ಕಡಿಮೆ ಇದ್ದು, ಒಳ್ಳೆಯ ಶಿಕ್ಷಣ ಕೊಡುವ ಶಾಲೆ ಯಾವುದು? ಎಂದೆಲ್ಲಾ ಯೋಚಿಸುತ್ತಿದ್ದರೆ, ವೆಂಕಟೇಶ್ ಅವರು ಈ ಬೇಸಿಗೆಯಲ್ಲಿ ಗಿಡಗಳಿಗೆ ಎಲ್ಲಿಂದ ನೀರು ತರುವುದು? ಮಳೆ ಬರುವ ತನಕ ಅವು ಒಣಗದಂತೆ ಹೇಗೆ ತಡೆಯುವುದು? ಮಳೆ ಆದರೆ ಯಾವ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡುವುದು? ಎಂದೆಲ್ಲ ಯೋಚಿಸುತ್ತಿರುತ್ತಾರೆ. ಅಕ್ಷರಶಃ ಬಿಟ್ಟೂ ಬಿಡದೆ ಬೇಸಿಗೆಯಲ್ಲಿ ಟ್ಯಾಂಕರ್‌ಗಳಿಂದ ನೀರು ಹೊಡಿಸಿ, ನೆಟ್ಟಿದ ಗಿಡಗಳನ್ನು ಮಕ್ಕಳಂತೆ ಸಲಹುತ್ತಾರೆ. ಇದುವರೆಗೂ ಹದಿನೈದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಸ್ವಂತ ಖರ್ಚಿನಲ್ಲೇ ನೆಟ್ಟು, ಅವು ಮರವಾಗಿ ಬೆಳೆಯುವ ತನಕ ನೀರು, ಗೊಬ್ಬರ ಹಾಕಿ ಸಲಹುವ ಕಾಯಕವನ್ನು ಸದ್ದಿಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ. ವಿದ್ಯುತ್ ಇಲಾಖೆಯವರು ಕತ್ತರಿಸಿದ ಏಳೆಂಟು ಮರಗಳನ್ನು ಬಿಟ್ಟು, ಉಳಿದ ಯಾವ ಮರವೂ ಹಾಳಾಗದಂತೆ ಕಾಪಾಡಿದ್ದಾರೆ.
ಅಂದಹಾಗೆ ಡಾ. ರಾಜ್‌ಕುಮಾರ್‌ರವರ ಹುಟ್ಟು ಹಬ್ಬದ ನೆನಪಿಗಾಗಿ ಏಪ್ರಿಲ್ ೨೪, ೨೦೧೭ರಲ್ಲಿ ಚಾಮರಾಜನಗರದ ರೈಲು ನಿಲ್ದಾಣದ ರಸ್ತೆಗಳಲ್ಲಿ ಶುರುವಾದ ಗಿಡ ನೆಡುವ ಕಾಯಕ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ರಸ್ತೆಯವರೆಗೂ ವೆಂಕಟೇಶ್ ಅವರನ್ನು ಕರೆದೊಯ್ಯುತ್ತಿದೆ. ಎಂಟು ವರ್ಷಗಳ ಹಿಂದೆ ಚಾಮರಾಜನಗರದ ಬೀದಿಗಳಲ್ಲಿ ಗಿಡ ನೆಡುವುದಕ್ಕೆ ಶುರು ಮಾಡಿದಾಗ ನೆಂಟರಿಷ್ಟರಿಂದ ಮೊದಲ್ಗೊಂಡು ಸ್ನೇಹಿತ ವಲಯದವರು ಕೂಡ ವೆಂಕಟೇಶ್‌ಗೆ ಹುಚ್ಚು ಹಿಡಿದಿದೆ ಎಂದೇ ಭಾವಿಸಿ, ಮೂದಲಿಸಿದರು. ಲೆಕ್ಕ ಪರಿಶೋಧಕರಾಗಿರುವ ಇವರು ಎಲ್ಲರಂತೆ ಸೈಟು, ಮನೆ, ಮಕ್ಕಳ ವಿದ್ಯಾಭ್ಯಾಸ ಎಂದು ತಲೆ ಕೆಡಿಸಿಕೊಳ್ಳದೆ, ಬರುವ ಆದಾಯದ ಜೊತೆಗೆ ಹೆಚ್ಚುವರಿ ಸಾಲ ಮಾಡಿಕೊಂಡು ಗಿಡ ನೆಡಲು ಪ್ರಾರಂಭಿಸಿದಾಗ ಸಹಜವಾಗಿ ಎಲ್ಲರಿಗೂ ಹುಚ್ಚರಂತೆಯೇ ಕಂಡರು. ಅದೇ ಮಂದಿ ಈಗ ಚಾಮರಾಜನಗರದ ಮುಖ್ಯ ರಸ್ತೆಗಳಲ್ಲಿ ಬೆಳೆದು ನಿಂತು ನೆರಳು ನೀಡುವ ಮರಗಳನ್ನು ನೋಡಿ; ಅದರ ನೆರಳಲ್ಲಿ ತಂಪಾದ ತಂಗಾಳಿಗೆ ಮುಖ ಒಡ್ಡಿದಾಗ ಧನ್ಯತಾಭಾವದಿಂದ ವೆಂಕಟೇಶ್ ಅವರನ್ನು ಸ್ಮರಿಸುತ್ತಾರೆ. ಗಿಡ ನೆಡಲು ಏಳೆಂಟು ವರ್ಷಗಳ ಹಿಂದೆ ಮಡದಿಯ ಚಿನ್ನ ಅಡವಿಟ್ಟಿದ್ದನ್ನು ಇದುವರೆಗೂ ಅವರಿಂದ ಬಿಡಿಸಿಕೊಳ್ಳಲಾಗಲಿಲ್ಲ. ಸ್ವಲ್ಪ ದುಡ್ಡು ಕಾಸು ಬಂತೆಂದರೆ ಸಾಕು! ಖಾಲಿ ಜಾಗದಲ್ಲಿ ಗಿಡ ನೆಡಲು ಪ್ಲಾನ್ ಮಾಡುತ್ತಾರೆ. ಬೇಸಿಗೆಯಲ್ಲಿ ನೀರು ಹಾಕಲು ಆಳುಗಳನ್ನು ನೇಮಿಸುತ್ತಾರೆ. ವಿಪರ್ಯಾಸವೆಂದರೆ ಪರಿಸರಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿರುವ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯಿಂದಾಗಲಿ, ಸ್ವಯಂ ಸೇವಾ ಸಂಸ್ಥೆಗಳಿಂದಾಗಲಿ, ನಗರ ಪಾಲಿಕೆಗಳಿಂದಾಗಲಿ ಒಂದೇ ಒಂದು ರೂಪಾಯಿ ಸಹಾಯ ಇದುವರೆಗೂ ಸಿಕ್ಕಿಲ್ಲ.
ಅವರು ನೆಟ್ಟ ಗಿಡಗಳನ್ನು ಪ್ರಾಣಿಗಳಿಂದ ತಪ್ಪಿಸಲು ಒಂದೇ ಒಂದು ಕ್ರಮವನ್ನು ಕೈಗೊಂಡಿಲ್ಲ, ಹಾಗೆಯೇ ಅವುಗಳ ಕಡೆ ತಿರುಗಿಯೂ ನೋಡಿಲ್ಲ! ಚಿಕ್ಕಂದಿನಲ್ಲಿ ಸಂಗೀತ ಕಲಿಯಲಾಗಲಿಲ್ಲವೆಂಬ ಕೊರಗಿನಿಂದ ಚಾಮರಾಜನಗರದ ಸಂಗೀತ ಆಸಕ್ತರು ಸಂಗೀತ ಕಲಿಯಲಿ ಎಂಬ ಸದುದ್ದೇಶದಿಂದ ೨೦೦೫ರಲ್ಲಿ ಈಶ್ವರಿ ಸಂಗೀತ ಸಂಸ್ಥೆಯನ್ನು ಪ್ರಾರಂಭಿಸಿದರು. ಸಂಗೀತ ಶಾಲೆ ಮುಚ್ಚಿ ಹೋಗದಿರಲಿ ಎಂದು ಕಡಿಮೆ ಸಂಖ್ಯೆಯ ಮಕ್ಕಳಿದ್ದಾಗಲೂ ತಾವೇ ಸ್ವತಃ ಶಿಕ್ಷಕರಿಗೆ ಸಂಬಳ ಕೊಟ್ಟು ಸಂಸ್ಥೆಯನ್ನು ಉಳಿಸಿದರು. ೨೦೧೬ರಲ್ಲಿ ಚಾಮರಾಜನಗರ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಅಗಲೀಕರಣ ಒಳಚರಂಡಿ ವ್ಯವಸ್ಥೆಗಾಗಿ ರಸ್ತೆ ಬದಿಯಲ್ಲಿ ಇದ್ದ ದೊಡ್ಡದೊಡ್ಡ ಮರಗಳನ್ನು ಕಡಿಯಲಾಯಿತು. ಅದಾಗಿ ಒಂದು ವರ್ಷವಾದರೂ ಮತ್ತೆ ಯಾರೂ ಗಿಡವನ್ನು ನೆಡಲೇ ಇಲ್ಲ. ತಾತನಿಂದ ಬಳುವಳಿಯಾಗಿ ಗಿಡ ನೆಡುವ ಪ್ರವೃತ್ತಿ ವೆಂಕಟೇಶ್ ಅವರ ರಕ್ತದಲ್ಲೇ ಬಂದಿದ್ದರಿಂದ ತಡಮಾಡದೆ ೨೦೧೭ರಿಂದ ಗಿಡ ನೆಡಲು ಪ್ರಾರಂಭಿಸಿದರು. ಈ ಪರಿಸರದ ಕೆಲಸ ತೃಪ್ತಿ ತಂದುಕೊಟ್ಟಿದ್ದರಿಂದ ಮತ್ತಷ್ಟು ಗಿಡಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಉದಯಶಂಕರ್, ಪುನೀತ್ ರಾಜ್‌ಕುಮಾರ್, ಡಾ.ರಾಜ್‌ಕುಮಾರ್ ಮುಂತಾದವರ ಹೆಸರಿನಲ್ಲಿ ಚಾಮರಾಜನಗರದ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟು ಸಲಹಿದರು. ಹೊಂಗೆ, ಮಹಾಘನಿ, ಕಾಡು ಬಾದಾಮಿ, ಜಂಬುನೇರಳೆ, ಅರಳೀಮರ, ಮೇ ಫ್ಲವರ್ ಟ್ರೀ… ಬಗೆ ಬಗೆಯ ಜಾತಿಯ ಗಿಡಗಳನ್ನು ನೆಟ್ಟರು. ಅರಣ್ಯ ಇಲಾಖೆ ಸಿಬ್ಬಂದಿ ರಾಜೇಂದ್ರ ಅವರು ಪ್ರಾರಂಭದಲ್ಲಿ ಸಸಿಗಳನ್ನು ಒದಗಿಸಿಕೊಟ್ಟದ್ದು ಇವರಿಗೆ ಮತ್ತಷ್ಟು ಸ್ಛೂರ್ತಿಯಾಯಿತು. ಗಿಡಗಳನ್ನು ನೆಟ್ಟದ್ದೆನೋ ಸರಿ! ಪ್ರಾಣಿಗಳಿಂದ ಅವುಗಳನ್ನು ರಕ್ಷಿಸಲು ಬೇಲಿ ಹಾಕುವುದಕ್ಕಾಗಿ, ಬೇಸಿಗೆಯಲ್ಲಿ ನೀರು ಒದಗಿಸುವುದಕ್ಕಾಗಿ ಸಿಕ್ಕಾಪಟ್ಟೆ ಹಣ ಖರ್ಚಾಗುತ್ತಿತ್ತು. ಹಾಗೆ ಇದುವರೆಗೂ ೧೫ ಸಾವಿರ ಗಿಡಗಳನ್ನು ಬೆಳೆಸಲು ಖರ್ಚು ಮಾಡಿರುವ ಹಣ ೫೦ ಲಕ್ಷ ರೂ.ಗಳಿಗೂ ಹೆಚ್ಚು. ಪರಿಸರದ ಮೇಲಿನ ಅದಮ್ಯ ಪ್ರೀತಿಯಿಂದ ಇಷ್ಟೆಲ್ಲ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ವೆಂಕಟೇಶರವರು. ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಕಡೆ ಗಮನ ಕೊಡುವುದು ಕಡಿಮೆಯಾಗಿ ಪರಿಸರದ ಕಡೆ ಹೆಚ್ಚು ಗಮನ ಹರಿಸುತಿದ್ದ ಇವರನ್ನು ಬದಲಾಯಿಸಲು ಸಾಧ್ಯವಾಗದೆ ಮಡದಿ ಜಯಲಕ್ಷಿ ಅವರು ಕೂಡ ವೆಂಕಟೇಶ್‌ರವರ ಜೊತೆನಿಂತು ಗಿಡಗಳನ್ನು ಪೋಷಿಸಲು ಶುರು ಮಾಡಿದ್ದಾರೆ. ಮನುಷ್ಯನಾದರೆ ಸ್ವಾರ್ಥಿ, ಎಷ್ಟು ಮಾಡಿದರೂ ಒಳ್ಳೆಯವರು ಎನ್ನುವುದಿಲ್ಲ. ಈ ಗಿಡಮರಗಳು ನಾಲ್ಕು ಜನಕ್ಕೆ ನೆರಳನ್ನು ಕೊಡುತ್ತವೆ. ಪ್ರಾಣಿ-ಪಕ್ಷಿಗಳಿಗೆ ಹಣ್ಣು ನೀಡುತ್ತವೆ. ಇವಕ್ಕೆ ದುಡಿದರೆ ಸಂತೃಪ್ತಿ ಎಂದು ಗಂಡ ಮಾಡುವ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾರೆ ಜಯಲಕ್ಷ್ಮಿಅವರು. ಮತ್ತೊಂದು ವಿಶೇಷವೆಂದರೆ ಈಶ್ವರಿ ವೆಂಕಟೇಶ್ ಅವರು ಜನಿಸಿದ್ದು ೧೯೭೨ ಜೂನ್ ೫ರ ವಿಶ್ವ ಪರಿಸರ ದಿನದಂದು. ಕಾಕತಾಳೀಯ ಎಂಬಂತೆ ಪರಿಸರಕ್ಕಾಗಿ ತಾನು ಜನಿಸಿದ್ದಿರಬಹುದೆಂದು ಗಿಡ ನೆಡುತ್ತಾ, ಸೇವೆ ಮಾಡಲು ನಿಂತಿದ್ದಾರೆ. ಆರ್.ಮುದ್ದು ಮಾದಯ್ಯ ಮತ್ತು ಮಹಾದೇವಮ್ಮ ದಂಪತಿಯ ಮಗನಾಗಿ ಚಾಮರಾಜನಗರದಲ್ಲಿ ಜನಿಸಿದ ಇವರಿಗೆ ಇಬ್ಬರು ಪುತ್ರರಿದ್ದಾರೆ.
ಆಡಿಯೋ ಕ್ಯಾಸೆಟ್ ನಿರ್ಮಾಣಕ್ಕೂ ಕೈ ಹಾಕಿದ ವೆಂಕಟೇಶ್‌ರವರು ಈಶ್ವರ ಸಂಗೀತ ಸಂಸ್ಥೆಯಿಂದ ಕರುಣಿಸಬಾರೋ ಮಾದೇವ, ಕರುಣಾ ಸಾಗರ ಮಾದೇವ, ಧರೆಗಿಳಿದ ಭಗೀರಥ ಮುಂತಾದ ಧ್ವನಿ ಸುರುಳಿಗಳನ್ನು ಹೊರತಂದು ಈಶ್ವರಿ ವೆಂಕಟೇಶ್ ಎಂದು ಮನೆ ಮಾತಾಗಿದ್ದಾರೆ. ನನಗೆ ಸನ್ಮಾನ ಬೇಡ, ಬಿರುದು ಬೇಡ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಲ್ಲಿ ಅನವಶ್ಯಕವಾಗಿ ಖರ್ಚು ಮಾಡುವ ಬದಲು ಅದೇ ದುಡ್ಡನ್ನು ಗಿಡ ನೆಡುವುದಕ್ಕೆ ವಿನಯೋಗಿಸಿದರೆ ಈ ಭೂತಾಯಿಯ ಋಣವನ್ನಾದರೂ ತೀರಿಸಬಹುದು, ಪರಿಸರ ಚಂದವಾಗುತ್ತದೆ. ಎಲ್ಲರೂ ಆ ನಿಟ್ಟಿನಲ್ಲಿ ಯೋಚಿಸಲಿ ಎನ್ನುತ್ತಾರೆ. ಇಷ್ಟು ದಿನಗಳಲ್ಲಿ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳಲು ನೀರನ್ನು ದಾನವಾಗಿ ಕೊಟ್ಟ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾರೆ. ಮೈಕುಗಳ ಮುಂದೆ ಪರಿಸರ ಜಾಗೃತಿ ಬಗ್ಗೆ ಮಾತನಾಡುವ ನಾವೆಲ್ಲ ಇಂತಹವರನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಕಾರ್ಯಕ್ಕೆ ಕೈಜೋಡಿಸುವ ಕೆಲಸ ಮಾಡಬೇಕಾಗಿದೆ.
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…
ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…
ಟೋಕಿಯೋ : ಜಪಾನ್‌ನ ಪೂರ್ವ ಮತ್ತು ಉತ್ತರ ಕರಾವಳಿ ತೀರದಲ್ಲಿ ೭.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶವನ್ನೇ…