ಹಾಡು ಪಾಡು

ಮರೆಯಾದ ಕೊಡಗಿನ ಮದ್ದುಕಾರ ಮಾಞು

ಡಾ.ತೀತಿರ ರೇಖಾ ವಸಂತ

ಕೊಡಗು – ಕೇರಳ ಗಡಿಭಾಗ ಕುಟ್ಟದ ಹತ್ತಿರದ ಕಾಯಮಾನಿ ಅಚ್ಚಹಸುರಿನ ಸುಂದರ ಊರು. ಸದ್ದಿಲ್ಲದೆ ಸಮುದಾಯಗಳ ಸಾಮರಸ್ಯವನ್ನು ಮಾನವೀಯತೆಯ ಸೆಲೆಯಲ್ಲೇ ಬದುಕು ಕಟ್ಟಿಕೊಂಡಿರುವವರ ನೆಲೆ. ಶ್ರೀಮಂಗಲದಿಂದ ಕುಟ್ಟದ ಕಡೆಗೆ ಸಾಗುವ ದಾರಿಯಲ್ಲಿ ಬ್ರಹ್ಮಗಿರಿ ಕ್ಲಬ್ಬಿನಿಂದಾಚೆಯ ಕೆಳಗಿನ ಕಾಯಮಾನಿಯ ತಿರುವಿನಲ್ಲಿ ಸುಮಾರು ಏಳು ದಶಕಗಳಿಗೂ ಮೀರಿ ಹಲವು ಗಡಿಗಳನ್ನು ಮೀರುತ್ತಲೇ ಮಾನವೀಯತೆಯ ಗುಡಿಯಂತೆ ಬಾಳಿ ಬದುಕಿದವರು ನಾಟಿ ಔಷಧಿ ಕೊಡುವ ಮಾಞು.

ಮದ್ದುಕಾರ ಅಂಗಡಿ ಮಾಞು ಎಂದೇ ಸುತ್ತೆಲ್ಲಾ ಸದ್ದಿಲ್ಲದೇ ಸುದ್ದಿಯಾಗಿದ್ದವರು. ಇವರ ನಿಜವಾದ ಹೆಸರು ಮಾಯಿನ್ ಪಿ.ಎಂ. ಎಂದು ಗೊತ್ತಾಗಿದ್ದು ಇವರು ತೀರಿಹೋದ ಮೇಲೆಯೇ. ನಾನು ಕಳೆದ ಮೂವತ್ತು ವರ್ಷಗಳಿಂದಲೂ ಗಮನಿಸುತ್ತಾ ಬಂದಿರುವಂತೆ ಮಂದಸ್ಮಿತ, ಮಿತಭಾಷಿ, ಮುಗ್ಧಮನಸ್ಸಿನ ನಮ್ಮ ಮಾಞುವಿನ ದಿನಸಿ ಅಂಗಡಿ ಎಂದರೆ – ತಕ್ಷಣಕ್ಕೆ ಬೇಕಾದ ಎಲ್ಲವೂ ಅಲ್ಲೇ ಸಿಗುವ ಇಂದಿನ ʻಮಾಲ್’ಗಳಿಗಿಂತ ಕಮ್ಮಿಯೇನೂ ಆಗಿರಲಿಲ್ಲ. ಜೊತೆಗೆ ‘ಮದ್ದುಕಾರ’ ಎಂದೇ ಖ್ಯಾತನಾಗಿದ್ದ ನುರಿತ ನಾಟಿವೈದ್ಯ, ಸುತ್ತಲಿನ ಗಿಡ-ಮರ, ಬೇರು-ನಾರು, ಬಳ್ಳಿಗಳನ್ನೇ ಬಳಸಿ ಎಂತಹದೇ ಹಾವು ಕಡಿತದಿಂದ ಹಿಡಿದು ಕಾಮಾಲೆ, ಕೈ-ಕಾಲು ಉಳುಕುವ, ಮೈ ನೋಯುವ ಸಾಮಾನ್ಯ ಕಾಯಿಲೆಯವರೆಗೂ ನಾಟಿ ಔಷಧಿಕೊಟ್ಟು ಎಲ್ಲವನ್ನೂ ವಾಸಿ ಮಾಡುವ ಕೈಗುಣದ ಮೋಡಿಕಾರ.

ಹುಟ್ಟಿದ್ದು ಕೊಡವ ಮಾಪಿಳ್ಳೆ ಸಮುದಾಯದ ಮೂಲತಃ ಪೊನ್ನಂಪೇಟೆಯ ಸಮೀಪದ ಮಾಪಿಳ್ಳೆತೋಡಿನಲ್ಲಿರುವ ಕೊಡವ ಮುಸ್ಲಿಂ ಸಮುದಾಯದ ಪಾತೆರ ಮೊಯಿದುವಿನ ಮಗನಾಗಿ ಪ್ರೀತಿಸಿ ಮದುವೆಯಾಗಿದ್ದು ಕಾಯಿಮಾನಿಯ ಕೊಡವ ಭಾಷಿಕ ಸಮುದಾಯದ ಹುಡುಗಿಯನ್ನು. ಮಾಞು ಅವರನ್ನು ಮದುವೆಯಾದ ನಂತರ ಆಕೆಯ ಹೆಸರು ಕೈರುನ್ನೀಸಾ. ಅಕ್ಕ-ಪಕ್ಕದಲ್ಲೇ ಇದ್ದು ಕೊಂಡು ಎರಡೂ ಮನೆತನಗಳೊಂದಿಗೆ, ಊರು ನಾಡಿನೊಂದಿಗೆ, ಎಲ್ಲರ ಪ್ರೀತಿಯೊಂದಿಗೆ ಬಾಳಿ ಬದುಕಿದವರು. ಯಾವ ಸಿದ್ಧಾಂತ, ಕ್ರಾಂತಿ, ಬದಲಾವಣೆಯ ಬಿಸಿ ಇಲ್ಲದೆ ಬೆಚ್ಚನೆಯ ಮಾನವೀಯತೆಯ ಮಡಿಲೊಳಗೆ ಮನಮನದ ಮನಸ್ಸು ಗೆದ್ದವರು. ಸರಳ ಸಜ್ಜನಿಕೆಯ ಖ್ಯಾತಿ ಯಿಂದ ಬಾಳಿದವರು. ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳು. ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ, ಸಂಸಾರಸ್ಥರಾಗಿ ಹೊಸ ತಲೆಮಾರಿನ ಜೀವನ ಕಟ್ಟಿಕೊಂಡಿದ್ದಾರೆ. ತುಂಬು ಕುಟುಂಬದ ಸುಂದರ ಸಂಸಾರ ಈಗ ಇವರದು. ಪುಟ್ಟ ಅಂಗಡಿಯ ಪಕ್ಕದಲ್ಲೇ ಚೆಂದದ ಮನೆ ಯೊಳಗೆ ಸಂತಸದ ಸುಗ್ಗಿಯಲ್ಲಿ ಮಾಗಿದ್ದ ಮಾಞು ಕಳೆದ ಆರು ತಿಂಗಳಿಂದ ಕಾಡಿದ್ದ ಆರೋಗ್ಯದ ಸಮಸ್ಯೆಯಿಂದಾಗಿ ಮೊನ್ನೆ ತಾನೇ ತೀರಿಕೊಂಡರು. ನಾಟಿ ಔಷಧಿಯ ಮದ್ದು ಮಾಡಿ ಸಾವಿರಾರು ಜೀವಗಳನ್ನು ಉಳಿಸಿದ ಮದ್ದುಕಾರ ಮಾಞುವಿಗೆ ಮದ್ದು ಬೇಕಾದಾಗ ಮದ್ದು ಅರೆಯುವವನು ಬರಲು ಮರೆತೇ ಬಿಟ್ಟ. ಕಾಯಮಾನಿಯ ತಿರುವಿನ ಮಾಞು ಬಾಳ ತಿರುವನ್ನು ಹೊಕ್ಕು ಹೊರಟೇಬಿಟ್ಟರು. ಈ ಹೊತ್ತಿನಲ್ಲಿ ಸಂಸಾರದ, ಸಂಸರ್ಗದ ಸರ್ವರ ತುಂಬು ಮನದ ವಿದಾಯ, ಇತ್ತೀಚಿನ ದಿನಗಳಲ್ಲಿ ಕೊಡಗು ಎನ್ನುವ ನನ್ನ ಪ್ರೀತಿಯ ನಾಡು ಭಾಷೆ, ಜನಾಂಗ, ಧರ್ಮಗಳ ಹೆಸರಿನಲ್ಲಿ ಶೋಭೆಗೆ ಒಳಗಾಗಿ ತತ್ತರಿಸುತ್ತಿರುವ ಹೊತ್ತಿನಲ್ಲಿ ಮಾಞು ಎಂಬ ನಾಟಿ ವೈದ್ಯ ಇಲ್ಲವಾಗಿರುವುದು ಕೇವಲ ಕಾಕತಾಳೀಯ ಅಲ್ಲ ಎಂದು ನನಗನಿಸುತ್ತದೆ. ಜಾತಿ ಜನಾಂಗಗಳ ನಡುವೆ ಅಪನಂಬಿಕೆ ದ್ವೇಷಗಳು ಕೊಳ್ಳಿಯಿಡುತ್ತಿರುವ ಹೊತ್ತಲ್ಲಿ ಸಾಮರಸ್ಯದ ಔಷಧಿ ನೀಡುತ್ತಿದ್ದ ಮಾಞು ಇರಬೇಕಿತ್ತು ಎಂದೂ ಅನಿಸುತ್ತದೆ.

vasantharekha6@gmail.com

 

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಳೆ ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್ ರಿಯಾಲಿಟಿ ಶೋʼನ ಆಡಿಷನ್‌

ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…

18 mins ago

ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ

ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

29 mins ago

ಸಿನಿಮಾ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು : ನಿರ್ದೇಶಕ ಸುರೇಶ್‌ ಆಶಯ

ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…

32 mins ago

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳ ಕುರಿತು ಅರಿವು ಮೂಡಿಸಿ : ಜಿಲ್ಲಾಧಿಕಾರಿ ಸೂಚನೆ

ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…

35 mins ago

ಈ ದಿನ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಮೈಸೂರು : ಸಾಂಸ್ಕೃತಿಕ ನಗರಿಯ ಅರಮನೆಗೆ ಡಿ.20ರಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳ…

54 mins ago

ಹೈಕಮಾಂಡ್‌ ನನ್ನ ಪರವಾಗಿದೆ : ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಎರಡುವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನವಾಗಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ…

1 hour ago