‘ಎಲೆ? ಯಾವೂರೆಲೆ ಕಂಡರಿ ಇಲ್ಲಿ. ಅರೆಕಲ್ಲ ಮೇಲೆನೆ ಊಟ. ಪ್ಲಾಸ್ಟಿಕ್ ಲೋಟದಲ್ಲಿರೋ ನೀರಾ ಮುಂದಿರೋ ಅರೆಕಲ್ಲ ಮೇಲೆ ಚಿಮುಕಿಸಿ ರೆಡಿ ಮಾಡ್ಕಳಿ ಅಷ್ಟೆ’
ಮಹಾದೇವ ಶಂಕನಪುರ
ಕೊಳ್ಳೇಗಾಲದಿಂದ ಐದಾರು ಕಿ.ಮೀ. ದೂರದ ಟಿ.ನರಸೀಪುರ ಮೈಸೂರು ರಸ್ತೆ ಮಾರ್ಗದಲ್ಲಿರುವ ಕುಂತೂರು ಪ್ರಭುಸ್ವಾಮಿ ಬೆಟ್ಟ ಹಲವು ಕೌತುಕಗಳ ಸ್ಥಳ, ಅಪ್ಪ ಹೇಳುತ್ತಿದ್ದ ನೆನಪು. ಮಾದೇಶ್ವರ
ಅದೇ ಪ್ರಭುಸ್ವಾಮಿ ಮಠದಲ್ಲಿ ಹೂವಿನ ಊಳಿಗ ಮಾಡಿಕೊಂಡಿದ್ದ. ಗೊದ್ದೆ ಗೋಸುಂಬೆ ಒಡೆದು ತಂದು ಅಲ್ಲಿದ್ದ ಕೊಳವೊಂದರಲ್ಲಿ ಮುಳುಗಿಸಿ ಬಗೆಬಗೆಯ ಸುಗಂಧ ಪುಷ್ಪಗಳ ಮಾಡಿಕೊಡುತ್ತಿದ್ದ. ಅಂತಹ ಸೋಜಿಗದ ಕಲ್ಯಾಣಿ ಆ ಬೆಟ್ಟದಲ್ಲಿದೆ ಗೊತ್ತಾ, ಅದೇ ಬೆಟ್ಟದಲ್ಲಿ ಅಮಾವಾಸೆ ಹುಣ್ಣಿಮೆಗೆ ಕಲ್ಲು ನೀರು ಕರಗೋ ಹೊತ್ತಲ್ಲಿ ಪ್ರಭುಸ್ವಾಮಿ ಮದ್ದಲೆ ಸದ್ದಿಗೆ ಏಕಾಂತ ಧ್ಯಾನದಲ್ಲಿ ಕುಣಿಯುತ್ತಾನಂತೆ. ಅದಕ್ಕೆ ಸುತ್ತೇಳಳ್ಳಿ ಜನ ಇಂದಿಗೂ ಆ ರಾತ್ರಿಗಳು ಅತ್ತ ಸುಳಿಯುವುದಿಲ್ಲ ಎಂದು ಅಪ್ಪ ಹೇಳುತ್ತಿದ್ದ.
ಇಂಥದ್ದೇ ಕುತೂಹಲ ಹುಟ್ಟಿಸಿದ್ದ ಸ್ನೇಹಿತರಾದ ಶಂಭುಲಿಂಗಸ್ವಾಮಿ ಅದೊಂದು ಗೌರಿ ಹಬ್ಬ ಆದ ನಂತರದ ಒಂದು ಸೋಮವಾರ ತನ್ನ ಜೊತೆ ನನ್ನನ್ನು ಪ್ರಭುಸ್ವಾಮಿ ಬೆಟ್ಟ ಹತ್ತಿಸಿದ್ದರು. ಬೆಟ್ಟದ ಮೇಲೆ ಜನಜಂಗುಳಿ, ಸಡಗರ ಸಂಭ್ರಮ. ಬೆಟ್ಟದ ಮೇಲಿದ್ದ ಪ್ರಭುಸ್ವಾಮಿ ದೇವಸ್ಥಾನದ ತಂಬಡಪ್ಪ ಗುಡಿಯ ಎಲ್ಲ ಸ್ಥಳಗಳನ್ನು ತೋರಿಸುತ್ತ ನಮ್ಮ ಜೊತೆ ಮಾತಿಗಿಳಿದರು. ‘ಪ್ರಭುಸ್ವಾಮಿ ಐಕ್ಯ ಆಗಿರೋದು ಇಲ್ಲೇ. ಮತ್ತೇ ಉದ್ಭವಮೂರ್ತಿಯಾಗಿ ಒಡೆದು ಮೂಡಿರೋದು. ಇದೇ ಅವನು ನುಡಿಸುವ ಮದ್ದಲೆ’ ಎಂದು ದೇವಸ್ಥಾನದ ಗರ್ಭಗುಡಿಯನ್ನು ಅದರ ಮುಂದೆ ಕಟ್ಟಿದ್ದ ಚರ್ಮದಿಂದ ಬಿಗಿದಿದ್ದ ಮದ್ದಲೆಯನ್ನು ತೋರಿಸುತ್ತ ವಿವರಿಸ ತೊಡಗಿದರು.
ಅಷ್ಟೊತ್ತಿಗೆ ಮಧ್ಯಾಹ್ನ ದಾಟುತ್ತಿತ್ತು. ಜನ ಬಿದಿರು ಪುಟ್ಟೆ, ಪಾತ್ರೆ, ಬಕೆಟ್ಟು, ಹಂಡೆಗಳು- ಹೀಗೆ ಅವುಗಳಲ್ಲಿ ಅನ್ನ ಸಾರು ಪಾಯಸ ಕಡ್ಲೆಹುಳಿ ಉಪ್ಪಿಟ್ಟು ಚಿತ್ರಾನ್ನ ಹಪ್ಪಳ ಸಂಡಿಗೆ ಮುಂತಾಗಿ ಮನೆಯಲ್ಲಿ ಮಾಡಿದ್ದ ಬಗೆಬಗೆಯ ಅಡುಗೆ ತಂದವರು ಒಂದೊಂದನ್ನು ಒಂದೊಂದು ಕಡೆ ಜಮಾಯಿಸಿ ಗುಡ್ಡೆ ಮಾಡಿದ್ದರು. ತಂಬಡಪ್ಪ ಆ ಅನ್ನಾಹಾರಗಳ ರಾಶಿಗೆ ಪೂಜೆ ಮಾಡಿ ಮಂಗಳಾರತಿ ಬೆಳಗಿ ಮುಂದಿನ ಕೆಲಸ ಶುರು ಮಾಡಿ ಎಂದರು. ಮುಖಂಡರು ನೆರೆದಿದ್ದವರನ್ನೆಲ್ಲ ‘ಬನ್ನಿಬನ್ನಿ ಊಟಕ್ಕೆ ಕೂತಳಿ’ ಎಂದರು. ದೇವಸ್ಥಾನದ ಪಕ್ಕದ ದೊಡ್ಡ ಹಾಸು ಕಲ್ಲುಬಂಡೆಯ ಮೇಲೆ ಬಂದಿದ್ದ ಜನವೆಲ್ಲ ವೃತ್ತಾಕಾರ ಕೂತರು. ನಾವು ಸಹ ಆ ವೃತ್ತದಲ್ಲಿ ಲೀನವಾದವು. ಊಟಕ್ಕೆ ಎಲೆ ಮಾತ್ರ ಬಂದಿರಲಿಲ್ಲ. ನನಗೆ ದಿಗಿಲಾಯಿತು. ಎಲೆಗಾಗಿ ಎದಿರು ನೋಡುತ್ತಿದ್ದೆ. ಸ್ನೇಹಿತ ಶಂಭುಲಿಂಗಸ್ವಾಮಿ ‘ಎಲೆ? ಯಾವೂರೆಲೆ ಕಂಡರಿ ಇಲ್ಲಿ. ಅರೆಕಲ್ಲ ಮೇಲೆನೆ ಊಟ. ಪ್ಲಾಸ್ಟಿಕ್ ಲೋಟದಲ್ಲಿರೋ ನೀರಾ ಮುಂದಿರೋ ಅರೆಕಲ್ಲ ಮೇಲೆ ಚಿಮುಕಿಸಿ ರೆಡಿ ಮಾಡ್ಕಳಿ ಅಷ್ಟೆ’ ಅಂದರು. ನೋಡು ನೋಡುತ್ತಿದ್ದಂತೆ ವೃತ್ತಾಕಾರ ಕುಳಿತ್ತಿದ್ದ ಎಲ್ಲರ ಮುಂದೆ ಬಂಡೆಕಲ್ಲಿನ ಮೇಲಕ್ಕೆ ಅನ್ನ ಹಾಕಿ ಸಾರು ಬಡಿಸುತ್ತ ಹಪ್ಪಳ ಸಂಡಿಗೆ ಹೀಗೆ ನೀಡುತ್ತಾ ಬಂದರು. ನಾವೂ ಕೂಡ ಅರೆಕಲ್ಲ ಮೇಲೆ ಇಕ್ಕಿದ್ದ ಅನ್ನವ ಕುಳಿ ಮಾಡಿ ಸಾರು ತುಂಬಿಸಿಕೊಂಡೆವು. ಹಾಗೆ ಬಂಡೆಕಲ್ಲ ಬಟ್ಟಲು ಮಾಡಿಕೊಂಡು ಊಟವನ ಮನಸೋ ಇಚ್ಛೆ ಉಂಡೆವು.
ಇದೇನು ಹೀಗೇ ಎಂದು ಕೇಳಿದೆ. ಇದು ಈ ಬೆಟ್ಟದ ಶರಣರ ಸನ್ನಿಧಿಯ ವಿಶೇಷ ಇದನ್ನು ‘ಎಡೆ ಪರ’ ಅಂತಾರೆ. ಊರಿನ ಶಿವಾಚಾರದವರು ತಮ್ಮ ಶಕ್ತಾನುಸಾರ ಅಡುಗೆ ಮಾಡಿ ಪ್ರಭುಸ್ವಾಮಿ ಬೆಟ್ಟಕ್ಕೆ ಎಡೆ ಸಲ್ಲಿಸುವುದು ಪದ್ಧತಿ. ಅದನ್ನ ಮೊದಲು ಪ್ರಭುಸ್ವಾಮಿ ಸನ್ನಿಧಿಗೆ ಅರ್ಪಿಸಿ ಆಮೇಲೆ ಬಂದವರಿಗೆಲ್ಲ ಅನ್ನ ಸಂತರ್ಪಣೆ ಮಾಡಲಾಗುವುದು. ಅಲ್ಲಮ ಪ್ರಭುದೇವರನ್ನು ಈ ಭಾಗದಲ್ಲಿ ಹೀಗೆ ಪ್ರಭುಸ್ವಾಮಿ ಅನ್ನೋದು ವಾಡಿಕೆ. ಆವಾಗ ಕಲ್ಯಾಣ ಕ್ರಾಂತಿಯ ಕಾಲ. ಅಲ್ಲಮಪ್ರಭು ಶರಣರ ಜೊತೆ ಇಲ್ಲಿಗೆ ಬಂದು ತಂಗಿದ್ದರಂತೆ.
ಅವರಿಗೆ ಬೆಟ್ಟದ ಕೆಳಗಿನ ಊರಿನ ಶಿವಭಕ್ತರು ಅನ್ನ ದಾಸೋಹ ನಡೆಸುತ್ತಿದ್ದರಂತೆ. ಎಲ್ಲಾ ಮನೆಯವರು ತಂದ ಎಡೆ ಅನ್ನವನ್ನ ಎಲ್ಲ ಶರಣರು ಸಹಪಂಕ್ತಿಯಲ್ಲಿ ಕೂತು ಉಣ್ಣುತ್ತಿದ್ದರು. ಇದು ಇಂದಿನ ‘ಎಡೆ ಪರ.
‘ಹೀಗೆ ಅರೆಕಲ್ಲ ಮೇಲೆ ಊಟ ಮಾಡಿದವರಿಗೆ ಸರ್ವ ಪಾಪ ನಿವಾರಣೆ ಆಗುವುದು. ಅಂತಹ ಕಾಲವೊಂದಿತ್ತು. ಯಾವುದೇ ಕಾಯಿಲೆ ಕಸಾಲೆ ಇದ್ದರೂ ವಾಸಿಯಾಗುತ್ತದೆ. ಈ ಎಡೆ ಪರು ಊಟ ಸರ್ವ ರೋಗ ನಿವಾರಕ. ಯಾರಿಗೂ ಇಲ್ಲಿ ಪಂಕ್ತಿ ಬೇಧ ಇಲ್ಲ. ಇದು ಕಲ್ಯಾಣದ ಶರಣರ ಸಹಪಂಕ್ತಿ ಭೋಜನದ ಆಚರಣೆಯ ಪ್ರತೀಕ ಎಂದು ಹಿರಿಯರೊಬ್ಬರು ಹೇಳಿದರು. ಎಡೆ ಪರು ಆಗುವ ಮೊದಲು ಮತ್ತು ಆದ ನಂತರ ಈ ಜಾಗವನ್ನು ಯಾರೂ ನೀರಾಕಿ ಶುದ್ಧಗೊಳಿಸುವುದಿಲ್ಲ.
ಸ್ವಾಭಾವಿಕವಾಗಿ ಮಳೆ ಸುರಿದು ತನಗೆ ತಾನೇ ಶುದ್ಧವಾಗುತ್ತದೆ ಎಂದು ತಂಬಡಪ ಹೇಳಿದರು. ನಾವು ಹೋಗಿದ ಹಿಂದಿನ ದಿನ ಮಳೆಯಾಗಿತ್ತು. ಹಾಗೇ ಬರುವ ವೇಳೆಗೆ ಮಳೆ ಬರುವ ಸೂಚನೆ ಇದ್ದು, ನಾವು ಬೇಗಬೇಗನೆ ಬೆಟ್ಟ ಇಳಿಯುತ್ತಿದ್ದೆವು. ಇಳಿಯುವಾಗ ಭಕ್ತರೊಬ್ಬರು ‘ಮಾದೇಶ್ವರ ಗೊದ್ದೆ ಗೋಸುಂಬೆಗಳ ತಂದು ಸುಗಂಧ ಪುಷ್ಪಗಳಾಗಿ ಮಾಡುತ್ತಿದ್ದುದು ಇದೇ ಕೊಳ ಎಂದು ತೋರಿಸಿದರು. ಆ ಕೊಳದ ನೀರನ್ನು ಜನ ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುತ್ತಿದ್ದರು. ಇದು ರೋಗ ನಿವಾರಕ ತೀರ್ಥ ಎಂದು ಯಾರೋ ಒಬ್ಬ ಹೇಳಿದ ಮಾತು ಹಾಗೆ ಎಲ್ಲರಿಗೂ ದಾಟುತ್ತಿತ್ತು.
shankanapuramahadeva@gmail.com
ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…
ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…
ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…