ಕುಸುಮಾ ಆಯರಹಳ್ಳಿ
ಹದಿನಾರು ಎಂಬುದು ನಂಜನಗೂಡು ತಾಲ್ಲೂಕಿನ ಒಂದು ಗ್ರಾಮದ ಹೆಸರು. ಹೊಸಬರಿಗೆ ಇದೇನು ಊರಿಗೆ ನಂಬರಿನ ಹೆಸರಿದೆಯಲ್ಲಾ ಅಂದುಕೊಳ್ಳಬಹುದು. ಆದರೆ ಇದು ಮೂಲದಲ್ಲಿ ಯದುನಾಡು, ಮೈಸೂರಿನ ಯದುವಂಶಸ್ಥರ ಸಾಮ್ರಾಜ್ಯ ಸ್ಥಾಪನೆಯ ಬೇರುಗಳು ಇಲ್ಲಿವೆ. ಆಡುತ್ತಾ ಆಡುತ್ತಾ, ಯದುನಾಡು, ಹದಿನಾಡಾಗಿ, ಹದಿನಾರು ಆಗಿಹೋಗಿದೆ. ಈ ಊರಲ್ಲಿ ಒಂದು ದೊಡ್ಡ ಕೆರೆ ಇದೆ. ಅಲ್ಲಿಗೆ ಪ್ರತಿವರ್ಷ ಪಟ್ಟೆಬಾತು (ಇಂಗ್ಲಿಷಿನಲ್ಲಿ ÈÉ Bar headed goose)ಗಳು ಬರುತ್ತವೆ.ಅವನ್ನು ಹೆಬ್ಬಾತು ಎಂದೂ ಕರೆಯುತ್ತಾರೆ. ದಿನವೊಂದಕ್ಕೆ ೧,೬೦೦ ಕಿಲೋ ಮೀಟರ್‌ಗಿಂತ ಹೆಚ್ಚು ದೂರ ಕ್ರಮಿಸಬಹುದಾದ ಈ ಹೆಬ್ಬಾತುಗಳು ಸಂತಾ ನೋತ್ಪತ್ತಿ ಸಮಯದಲ್ಲಿ ಎತ್ತರದ ಪ್ರದೇಶದಲ್ಲಿ ವಾಸಿಸುತ್ತವಂತೆ. ಚಳಿಗಾಲದಲ್ಲಿ ಮಾತ್ರ ಕೆರೆ, ಸರೋವರದಂತಹ ಜಾಗಗಳಲ್ಲಿರುತ್ತವೆ. ಅವುಗಳ ಆಹಾರ ಹುಲ್ಲು, ಗೆಡ್ಡೆಗಳು, ಧಾನ್ಯಗಳು. ಹಾಗಾಗಿಯೇ ಅವು ಪ್ರತಿವರ್ಷ ಚಳಿಗಾಲದಲ್ಲಿ ನಮ್ಮ ಕರ್ನಾಟಕದ ಕೆಲವು ಗದ್ದೆ ಸೀಮೆಗಳನ್ನು ಹುಡುಕಿ ಬರುತ್ತವೆ. ಕಬಿನಿ, ಕೃಷ್ಣರಾಜ ಸಾಗರ ಅಣೆಕಟ್ಟೆಗಳಲ್ಲದೆ, ಹದಿನಾರು ಗ್ರಾಮದ ದೊಡ್ಡ ಕೆರೆಯಲ್ಲಿ ಕಾಣಿಸಿ ಕೊಳ್ಳುತ್ತವೆ. ಈ ಊರುಗಳನ್ನು ಗಮನಿಸಿ. ಅಲ್ಲಿ ನೀರೂ ಇದೆ. ಭತ್ತದ ಹುಲ್ಲೂ ಈ ಸಮಯದಲ್ಲಿ ಸಿಗುತ್ತದೆ. ಎಷ್ಟು ಅಚ್ಚರಿ! ಅಲ್ಲೆಲ್ಲೋ ಮಧ್ಯ ಏಷ್ಯಾದಲ್ಲಿರುವ ಹಕ್ಕಿಗಳಿಗೆ ಹದಿನಾರಿನಲ್ಲಿ ಕೆರೆ ಇದೆ ಎಂದೂ, ಆ ಊರಿನ ರೈತರು ಭತ್ತ ಬೆಳೆಯುತ್ತಾರೆಂದೂ ನಾಟಿ, ಕುಯ್ಲಿನ ಸಮಯದಲ್ಲಿ ತಮಗೆ ಸರಿಯಾದ ಸ್ಥಳ ಅದು ಎಂದೂ ಪತ್ತೆ ಹಚ್ಚಿವೆಯಲ್ಲಾ? ಇದೊಂದು ವಿಸ್ಮಯವೇ ಸರಿ.
ಹೆಬ್ಬಾತು ಎಂಬ ಹೆಸರಿಗೆ ತಕ್ಕಂತೆ ಇವು ದೊಡ್ಡ ಗಾತ್ರದವು. ತಮ್ಮ ದೊಡ್ಡ ರೆಕ್ಕೆಗಳನ್ನು ಬೀಸುತ್ತಾ, ಇವು ಹಾರುವುದು ಒಂದು ಸೊಗಸಾದರೆ, ಕೆರೆಯಲ್ಲಿ ಇವು ಒಟ್ಟಾಗಿ ತಮ್ಮ ಉದ್ದನೆಯ ಕುತ್ತಿಗೆಯನ್ನು ಚಾಚಿ ಒಂದಕ್ಕೊಂದು ಅಂಟಿ ಕೊಂಡಿವೆಯೇನೋ ಎಂಬಂತೆ ಓಡಾಡುವುದನ್ನು ನೋಡುವುದು ಮತ್ತೊಂದು ಸೊಗಸು. ಇನ್ನು ಅವು ಒಂಟಿಯಾಗೋ, ಒಟ್ಟಾಗೋ ಹಾರಿದರಂತೂ ಫೋಟೊಗ್ರಾಫರಿಗೆ ಹಬ್ಬ. ಬರಿಗಣ್ಣಿಗೂ.
ನೀವು ಪಟ್ಟೆಬಾತು, ಹೆಬ್ಬಾತು, ಬಾರ್ ಹೆಡೆಡ್ ಗೂಸ್ ಏನು ಟೈಪಿಸಿ ಸರ್ಚ್ ಕೊಟ್ಟರೂ ನಿಮಗೆ ಈ ಹಕ್ಕಿಗಳ ಬಗ್ಗೆ ಒಂದಷ್ಟು ಪುಟಗಳ ಮಾಹಿತಿಯನ್ನು ಗೂಗಲ್ ನೀಡಬಲ್ಲದು. ಆದರೆ ಈ ಯಾವ ಹೆಸರೂ ಗೊತ್ತಿರದೇ ಇದ್ದರೂ, ಅವು ಮಂಗೋಲಿಯಾದಿಂದಲೇ ಬರುತ್ತವೆ ಎಂಬ ಓದಿದ ಜಾಣರಿಂದ ಕಂಡುಹಿಡಿಯಲ್ಪಟ್ಟ ವಿಷಯ ತಿಳಿಯದಿದ್ದರೂ “ಪರ್ವತದ ಹಕ್ಕಿ” ಅಂತ ಅವುಗಳನ್ನು ಗುರುತಿಸುತ್ತಾ, ಗಮನಿಸುತ್ತಾ, ಯಾವ ಪಕ್ಷಿಪ್ರಿಯರಿಗೂ ಕಡಿಮೆ ಇಲ್ಲದಂತೆ ಅದನ್ನು ಟ್ರ್ಯಾಕ್ ಮಾಡುತ್ತಾ ಇರೋರು, ನಮ್ಮ ಶಿವಣ್ಣೋರು.
ಹದಿನಾರು ಕೆರೆ ಅಂತ ನಾವು ಕರೆದರೂ, ಈ ಕೆರೆ ವಾಸ್ತವಾಗಿ ಹದಿನಾರು ಮತ್ತು ಹದಿನಾರು ಮೋಳೆ ಗ್ರಾಮಗಳ ನಡುವೆ ಇದೆ. ಕೆರೆಯ ಈ ದಡ ಹದಿನಾರಲ್ಲಿದ್ದರೆ, ಆ ದಡವೇ ಹದಿನಾರು ಮೋಳೆ. ಹದಿನಾರಿನ ಜನ ಗದ್ದೆ- ಗರಜಿನ ಉಳ್ಳವರಾದರೆ, ಈ ಹದಿನಾರು ಮೋಳೆಯವರು ಹೆಚ್ಚಿನಂಶ ಕೃಷಿ ಕೂಲಿಕಾರ್ಮಿಕರು, ಮೀನುಗಾರರು. ಅದೇ ಊರಿನ ಮೀನುಗಾರಿಕೆಯ ಕಸುಬು ಮಾಡೋ ಶಿವಣ್ಣ ಅವರಿಗೆ “ಗೌಜಲಕ್ಕಿ ಶಿವಣ್ಣ” ಅನ್ನೋದು ಅಂಟಿಕೊಂಡ ಹೆಸರು.
ಹುಡುಗರು ಹುಡುಗಿಯರನ್ನು ನೋಡಿ ಶಿಳ್ಳೆ ಹೊಡೆಯೋದು ನೋಡಿದೀರ. ಹಕ್ಕಿ ನೋಡಿ ಶಿಳ್ಳೆ ಹೊಡೆಯೋರ ನೋಡಿದೀರ? ಆ ಶಿಳ್ಳೆಗಾಗಿ ಆ ಹಕ್ಕಿಗಳು ತನ್ನ ಹಿಂದೆ ಬರುವಂಗೆ ಮಾಡಿಕೊಂಡವರ ನೋಡಿದೀರ? ಕೃಷ್ಣನ ಕೊಳಲ ಕರೆಗೆ ರಾಧಿಕೆಯರು ಬಂದಂತೆ, ಈ ಶಿವಣ್ಣೋರ ಶಿಳ್ಳೆಯೆಂಬ ಕರೆಗೆ ಗೌಜಲಕ್ಕಿಗಳು ಹಿಂಬಾಲಿಸುತ್ತವಂತೆ. ಅವನ್ನೆಲ್ಲ ಏನ್ಮಾಡ್ತೀರಿ? ಅಂದರೆ, ಸುಮ್ಮನೇ ಆಡಿಸೋದಂತೆ, ಅವಕ್ಕೆ ತಿನ್ನಲು ಕೊಡೋದಂತೆ, ಮತ್ತೆ ಕಾಡಿಗೆ ಬಿಡೋದಂತೆ. “ಅದೊಂಥರಾ ಸೋಕಿ ಕ ಬುಡಿ” ಅಂತಾರೆ. ಶಿವಣ್ಣೋರಿಗೆ ಈ ಗೌಜಲಕ್ಕಿ ಸಹವಾಸ ಎಷ್ಟೆಂದರೆ, ಎಷ್ಟು ದೂರದಲ್ಲಿ ಕಂಡರೂ ಆ ಗೌಜಲಕ್ಕಿ ಹೆಣ್ಣೋ ಗಂಡೋ ಅಂತ ಗುರುತಿಸಿ ಹೇಳಬಲ್ಲರು. ಈ ಶಿವಣ್ಣೋರು ಮತ್ತು ಅವರ ಊರಿನ ಕೆಲವರಿಗೆ ಮೀನು ಹಿಡಿಯುವುದೇ ಉದ್ಯೋಗವಾದರೂ ಪರ್ವತದ ಹಕ್ಕಿ ಅಲಿಯಾಸ್ ಪಟ್ಟೆಬಾತು ಗಳು ಬಂದು ಹೋಗೋ ಮೂರು ತಿಂಗಳು ನೀರಿಗೆ ಬಲೆ ಹಾಕದೇ ಸುಮ್ಮನಿರುತ್ತಾರೆ. ಅದ್ಯಾಕೆ ಅಂತ ಕೇಳಿದರೆ; ಪಾಪ ಬಂದವಲ್ಲ ಅಷ್ಟ್ ದೂರದಿಂದ? ತಿನ್ಕ ಉಣ್ಕ ಹೋಗ್ಲಿ ಬುಡಿ ಅಚ್ಕಟ್ಟಾಗಿ. ಅವಕ್ಯಾಕ್ ತೊಂದರೆ ಕೊಡದು? ಅಂತಾರೆ. ಅಷ್ಟೇ ಅಲ್ಲ, ಅಷ್ಟೂ ವರ್ಷಗಳಿಂದ ಅವುಗಳನ್ನು ನೋಡ್ತಾ ಗಮನಿಸ್ತಾ, ಈಗೀಗ ಪಟ್ಟೆಬಾತಿನ ಫೋಟೋಗಾಗಿ ಕೆರೆಗೆ ಬರೋರಿಗೆ ಅದರ ಬಗ್ಗೆ ಗೊತ್ತಿರೋದು ಹೇಳ್ತಾರೆ. “ನೋಡ್ಕಂಡು ಫೋಟಗೀಟ ತಕಂಡು ಓಗ್ಬೇಕು. ತೊಂದ್ರಿ ಗಿಂದ್ರಿ ಕೊಟ್ರ ಅವ್ರ ಮೇಲ್ ಕಂಪ್ಲೇಂಟ್ ಮಾಡಿ ಜೈಲಿಗ್ ಕಳಿಸಿಬಿಡ್ತೀವಿ” ಅಂತ ಆವಾಝ್ ಹಾಕಿದರು ಶಿವಣ್ಣ.
ಹೇಳೀ ಕೇಳೀ ಇದು ಜಾತ್ರೆಗಳ ಸಮಯ. ಜಾತ್ರೆಯಲ್ಲಿ ಬೆಂಡು, ಬತ್ತಾಸುಗಳ ಜೊತೆ ಮೀನಿನ ವ್ಯಾಪಾರವೂ ಜೋರು. ಹಾಗಿದ್ದರೂ ಈ ಸಮಯದಲ್ಲಿ ಹದಿನಾರು ಮೋಳೆಯ ಯಾರೂ ಹದಿನಾರು ಕೆರೆಯಲ್ಲಿ ಮೀನು ಹಿಡಿಯಲ್ಲ. ಹದಿನಾರಿನ ಯುವಕರು ತಮ್ಮ ನೇಚರ್ ಕ್ಲಬ್ ಮೂಲಕ ಎಲ್ಲಿಂದಲೋ ಹಾರಿಕೊಂಡು ಬರೋ ಹಕ್ಕಿಗಳು ತಮ್ಮೂರ ಕೆರೆಯಲ್ಲಿ ಸ್ವಲ್ಪ ಕಾಲ ಇದ್ದು ಹೋಗೋ ಬಗ್ಗೆ ತಮ್ಮ ಪಕ್ಕದ ಗ್ರಾಮದ ಮೀನುಗಾರರಿಗೆ ತಿಳಿಸಿದ್ದಾರೆ. ಆಗಿಂದ ಅವರು ಮೀನು ಹಿಡಿಯುವುದು ಬಿಟ್ಟಿದ್ದಾರೆ. ಶಿವಣ್ಣೋರನ್ನ ಕೇಳಿದರೆ “ಮುಂಚೆ ಹಿಡಿತಿದ್ದೋ. ಈ ಪರ್ವತದ್ ಹಕ್ಕಿಗಳು ಆಗ ಸಾವ್ರಾರ್ ಬತ್ತಿದ್ದೋ. ಈಗಿನಂಗೆ ಫೋಟ ತಗಿಯಕೆ ಇಷ್ಟೊಂದ್ ಜನ ಬರ್ತಿರಲಿಲ್ಲ. ಈಗ ನಮ್ ಹದಿನಾರು ಯುವಕರು ಅದರ ಬಗ್ಗೆ ಯೋಳ್ಕೊಟ್ರು. ಅಲ್ಲಾ, ನೀವ್ ಏಚ್ನೆ ಮಾಡಿ. ಯಾವ್ದೋ ದೇಸದಿಂದ ನಮ್ಮೂರ್ ಕೆರೆ ಉಡಿಕಂಡ್ ಬರಬೇಕು ಅಂದ್ರೆ ನಮ್ಮೂರ್ ಎಷ್ಟ್ ಫೇಮಸ್ ಆಗಿರ್ಬೇಕು. ಏನೋ ಪಾಪ ಭತ್ತಗಿತ್ತ ತಿನ್ಕಂಡು ಮೂರ್ ತಿಂಗಳು ಇದ್ದೋಯ್ತವೆ. ಅವಕ್ಯಾಕ್ ತೊಂದ್ರೆ ಕೊಡದು ಅಂತ ಅವು ಬಂದು ಹೋಗಾಗಂಟ ನಾವ್ ಮೀನು ಹಿಡಿಯಲ್ಲ” ಅಂದರು. ಮನಸ್ಸು ತುಂಬಿ ಬಂತು. ಅವರಿಗೆ ವೈಜ್ಞಾನಿಕವಾಗಿ ಅವು ಯಾಕೆ ಈ ಕೆರೆಗೇ ಬರ್ತವೆ. ಅವುಗಳ ಜೀವನ ಶೈಲಿ ಏನು ಇತ್ಯಾದಿ ಯಾವುದೂ ಗೊತ್ತಿಲ್ಲ. ಆದರೆ ಪಟ್ಟೆಬಾತುಗಳು ಯಾವುದೋ ದೇಶದಿಂದ ಬರೋ ಅತಿಥಿಗಳು. ಅವು ಚೆಂದಾಗಿ ಉಂಡ್ಕಂಡ್ ತಿನ್ಕಂಡೋಗ್ಲಿ. ನಾವತ್ಲಾಗ್ ಎಲ್ಲಾರ ಬೇರೆ ಕಡೆ ಮೀನು ಹಿಡದ್ರಾಯ್ತು ಅಂತ ಯೋಚಿಸೋ ಈ ಹಳ್ಳಿಗರ ಔದಾರ್ಯಕ್ಕೆ ಏನು ಹೇಳಬೇಕು?
ಬಹಳ ಹಿಂದೆ ಈ ಊರಿನವರಿಗೆ ಜನವರಿ, ಫೆಬ್ರವರಿ ಗೊತ್ತಿಲ್ಲದಾಗಲೂ ಈ ಹಕ್ಕಿಗಳು ಬಂದವೆಂದರೆ ಕುಯ್ಲಿನ ಸಮಯ ಬಂತು. ತಮಗೆ ಗದ್ದೆ ಕೆಲಸಗಳು ಸಿಕ್ತವೆ ಎಂಬ ಸೂಚನೆಯಂತೆ. ‘ಪರ್ವತದ ಹಕ್ಕಿಗಳು’ ಅಂತ ಕರೆಯಲು ಅವು ಹಿಮಾಲಯ ದಾಟಿ ಹಾರಿಕೊಂಡು ಬರೋದು ಒಂದು ಕಾರಣವಾದರೆ, ಅವು ಒಟ್ಟಿಗೇ ಹಾರುವಾಗ ಇಂಗ್ಲಿಷಿನ ವಿ ಆಕಾರದಲ್ಲಿ ಹಾರುವುದೂ ಕಾರಣವಿರಬಹುದು ಅನ್ನುತ್ತಾರೆ ಕೆಲವರು.
ಹದಿನಾರಿನ ಯುವಕರನ್ನು ಶಿವಣ್ಣೋರ ಬಗ್ಗೆ ಕೇಳಿದರೆ “ಅಯ್ಯೋ ಅಕ್ಕ, ನಾವೇನ್ ಅವರಿಗೇಳ್ಕೊಡದು? ಅವರೇ ಎಷ್ಟೋ ವಿಷ್ಯ ನಮಗ್ ಏಳ್ಕೊಟ್ರು” ಅಂದರು. ಶಿವಣ್ಣೋರು ಹುಟ್ಟಿದಾಗಿಂದ ಆ ಕೆರೆಯ ದಂಡೇಲೇ ಇರ್ತಾ, ಈ ಕ್ಲಬ್ಬಿನ ಹುಡುಗರಿಗಿಂತ ಎಷ್ಟೋ ಮುಂಚಿನಿಂದ ಹಕ್ಕಿಗಳನ್ನು ತಮ್ಮದೇ ಜನಪದ ಕಣ್ಣು ಕಿವಿಗಳಿಂದ ಗಮನಿಸಿದ್ದಾರೆ. ಅವರಿಗೆ ಆ ಹಕ್ಕಿಗಳ ಇಡೀ ದಿನದ ಟೈಂ ಟೇಬಲ್ ಗೊತ್ತು. “ಅವು ಬೆಳಿಗ್ಗೆ ೬ ಗಂಟೆಗೆ ಗದ್ದೆ ಕಡೆ ಮೇಯಕೋಗ್ತವೆ. ೯ ಗಂಟೆಗೆ ಬರ್ತವೆ. ಈ ಕೆರೆಲಿರ್ತವೆ. ತಿರಗಾ ಸಂಜೆ ನಾಕು ನಾಕೂವರೆಗೋಯ್ತವೆ. ಮೇಯ್ಕಂಡ್ ಬತ್ತವೆ. ನಾವು ಹಿಂದೆ ಅವು ಮೇಯಕೋದ್ ಟೈಮಲ್ಲಿ ಮೀನಿಡೀತಿದ್ದೋ. ಈಗ ಅದ್ನೂ ಬುಟ್ಬುಟ್ಟೋ” ಅಂತಾರೆ.
ಅವರ ಕಣ್ಣು ಎಷ್ಟು ಸೂಕ್ಷ್ಮ ಅಂದರೆ, ಮಂಗೋಲಿಯಾ ದೇಶದ ಒಂದು ಸಂಸ್ಥೆ ಕೆಲ ವರ್ಷಗಳ ಹಿಂದೆ ಈ ಬಾರ್ ಹೆಡೆಡ್ ಗೂಸ್‌ಗಳನ್ನು ಟ್ರ್ಯಾಕ್ ಮಾಡಲು ಒಂದು ಹಕ್ಕಿಗೆ ಟ್ಯಾಗ್ ಕಟ್ಟಿತ್ತು. ಈ ಶಿವಣ್ಣೋರಿಗೆ ಸಾವಿರಾರು ಹಕ್ಕಿಗಳ ಆ ಗುಂಪಿನಲ್ಲಿ ಇದೇನೋ ಬೇರೆ ಥರ ಇದ್ಯಲ್ಲಾ ಅನಿಸ್ತು. ಅವರು ಅದನ್ನು ಹದಿನಾರಿನ ಹುಡುಗರಿಗೆ ಹೇಳಿದರು. ಆಗ ಅದರ ಮೇಲೆ ಈ- ೯೯ ಎಂದು ಬರೆದದ್ದನ್ನು ಎಲ್ಲರೂ ಗಮನಿಸಿದರು. ನಿಮಗೆಂಗ್ ಗೊತ್ತಾಯ್ತು? ಅಂದರೆ “ಏ ನೀರಗ್ ಮುಳಗೀ ಮುಳಗೀ ಏಳ್ತಾವಲ್ಲಾ? ಆಗ ನೆರಳಲ್ಲಿ ಗೊತ್ತಾಯ್ತು” ಅಂತಾರೆ. ಅದು ಈಗ್ಗೆ ೫ ವರ್ಷಗಳಿಂದ ಬಂದಿಲ್ಲ ನೋಡಿ ಅಂತ ಕರಾರುವಾಕ್ಕಾಗಿ ಹೇಳ್ತಾರೆ. ಅವು ಭಾರೀ ಸೂಕ್ಷ್ಮದ ಹಕ್ಕಿಗಳು. ಎಷ್ಟೆಂದರೆ ಅವುಗಳ ಕಡೆ ಕೈ ತೋರಿಸ್ಕಂಡು ಅವುಗಳ ಬಗ್ಗೆ ಮಾತಾಡಿದ್ರೆ ಗೊತ್ತಾಗುತ್ತೆ ಅವಕ್ಕೆ ಅಂತಾರೆ.
“ಮೀನು ಹಿಡಿಯೋ ಕೆಲ್ಸ ಇಲ್ಲದಿದ್ರೂ ಒಟ್ನಲ್ಲಿ ಬೆಳಗೇ ಸಂಜೆ ಯಾವಾಗಾದ್ರೂ ಒಂದ್ ರೌಂಡ್ ಕೆರೆ ಬಳಸ್ಕಂಡ್ ಬಂದ್ರೇ ಸಮಾಧಾನ. ಒಂದೊಂದ್ಸಲಾ ಈ ಹಕ್ಕಿಗಳ ಸದ್ಗೆ ಹಟ್ಟೀಲಿ ನಿದ್ದೆ ಬರದೇ ಇಲ್ಲೇ ಕೆರೆ ಏರಿ ಮೇಲೇ ಮಲಗೇ ಬಿಡ್ತೀನಿ” ಅಂದ್ರು. “ಅಲ್ಲಾ ಸೋಮೀ, ಹಕ್ಕಿ ಸೌಂಡು ಹಟ್ಟೀಗಿಂತ ಕೆರೆ ಏರೀಲೇ ಹೆಚ್ಚಲ್ವ? ಇಲ್ಲೆಂಗ್ ನಿದ್ದೆ ಬತ್ತದ್ ನಿಮ್ಗೆ?” ಅಂದರೆ ಶಿವಣ್ಣೋರು ತಾನು ಕಂಡುಹಿಡಿದ ಭಾರೀ ರಹಸ್ಯವೊಂದನ್ನು ಹೇಳಿದರು. ಸಾಮಾನ್ಯವಾಗಿ ರಾತ್ರಿ ವೇಳೆ ಸುಮ್ಮನಿರೋ ಹಕ್ಕಿಗಳು, ಒಂದೇ ಸಲಕ್ಕೆ ಭರ್ರೆಂದು ಹಾರ್ತವೆ. ಕೂಗ್ತವೆ. ಆಗ ನನಗೆ ಅನುಮಾನ ಬತ್ತದೆ. ಅವು ಹಾಗೆ ಕೂಗಬೇಕಾರೆ ಯಾರೋ ಮನುಷ್ಯರು ರಾತ್ರಿ ಕೆರೆಗೆ ಇಳಿದಿರ್ತಾರೆ. ಏರಿ ಮೇಲಿನ ಟಿಟ್ಟಿಬವೂ ಇವಕ್ಕೆ ಅಪಾಯವಾದಾಗ ಕೂಗತ್ತಂತೆ ಅವರ ಪ್ರಕಾರ. ಆಗ ಶಿವಣ್ಣೋರು ಯಾರೋ ಆ ಹೊತ್ತಲ್ಲಿ ಮೀನು ಹಿಡಿಯೋ ಕಳ್ಳರೋ, ಅಂಡು ತೊಳಕೊಳ್ಳೋಕೆ ಗ್ರಾಮಸ್ಥರೋ ಒಟ್ನಲ್ಲಿ ಮನುಷ್ಯರು ನೀರಿಗಿಳಿದಿದ್ದಾರೆ ಅಂತ ಅರ್ಥೈಸಿಕೊಂಡು ಎದ್ದು ಬರ್ತಾರಂತೆ. ಶಿವಣ್ಣೋರು ತಮ್ಮ ಮಿತಿಯಲ್ಲಿ ಆ ಹಕ್ಕಿಗಳನ್ನು ಕಾಣುತ್ತಾ ಬಂದಿದ್ದಾರೆ. ಅವರು ತಿಳಕೊಂಡದ್ದಕ್ಕಿಂತ ಹೆಚ್ಚಿನ ತಿಳಿವು ಅಕ್ಷರಸ್ಥರಿಗೆ ಇರಬಹುದು. ಆದರೆ ಮನುಷ್ಯನಿಗೆ ಮೆದುಳಿದ್ದರೆ ಸಾಕೇ? ದೊಡ್ಡ ದೊಡ್ಡ ಕಾರುಗಳಲ್ಲಿ ಬರೋ ಜನ ಹದಿನಾರು ಸುತ್ತ ಮುತ್ತ ಬಂದೂಕುಗಳ ಸಮೇತ ಬಂದು ಹಕ್ಕಿಗಳನ್ನು ಹೊಡೆದು ತುಂಬಿಕೊಂಡು ಹೋಗಿದ್ದಾರೆ. ತಡೆಯಲು ಹೋದವರಿಗೆ, ದೂರುಗಳಿಗೆ ತಲೆಕೆಡಿಸಿಕೊಳ್ಳದಷ್ಟು ಪ್ರಭಾವಿಗಳು. ಇನ್ನು ಹದಿನಾರು ಗ್ರಾಮಪಂಚಾಯಿತಿಯ ಆಡಳಿತವೂ ತಮ್ಮ ಊರಿನ ಈ ಅದ್ಭುತವನ್ನು ಉಳಿಸಿಕೊಳ್ಳುವಲ್ಲಿ ಯಾವ ಪರಿಣಾಮಕಾರಿ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಆಡಳಿತ ಪಕ್ಷದ ಪ್ರಭಾವಿ ಸಚಿವರ ಸ್ವಗ್ರಾಮ ಇದು. ಅವರು ಬಿಡುಗಡೆ ಮಾಡಿದ ಹಣದಿಂದ ಕೆರೆದಂಡೆಯ ಮೇಲೆ ಪಾರ್ಕು ನಿರ್ಮಿಸಲಾಗಿದೆ. ಆದರೆ ಘನತ್ಯಾಜ್ಯ ಘಟಕ ಸರಿಯಾಗಿ ಕಾರ್ಯನಿರ್ವಹಿಸದೇ, ಊರಲ್ಲಿ ನಡೆಯುವ ಶುಭಾಶುಭ ಕಾರ್ಯಗಳ ತ್ಯಾಜ್ಯಗಳನ್ನೆಲ್ಲ ಕೆರೆಗೆ ಸುರಿಯುತ್ತಿರುವು ದರಿಂದ ಕೆರೆ ಕಲುಷಿತವಾಗುತ್ತಿದೆ. ಕೆರೆಯ ಅಸ್ವಚ್ಛತೆ ಹೆಚ್ಚಾದದ್ದು, ಅತ್ತ ಗದ್ದೆಗಳಿಗೆ ನೀರು ಬಿಡಲು ಆದ ವಿಳಂಬದಿಂದ ರೈತರು ಭತ್ತದ ಬದಲು ಬೇರೆ ಕಾಳು ಚೆಲ್ಲಿದ್ದು… ಈ ಎಲ್ಲ ಕಾರಣಗಳಿಂದ ಈ ವರ್ಷ ಬಂದ ಪಟ್ಟೆಬಾತುಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ.
ಹದಿನಾರಿನ ಯುವಕರು ತಮ್ಮೂರ ಕೆರೆಯನ್ನೂ ಅಲ್ಲಿನ ಜೀವ ಪ್ರಭೇದವನ್ನೂ ಉಳಿಸುವಲ್ಲಿ ತೋರುತ್ತಿರುವ ಉತ್ಸಾಹ ಮೆಚ್ಚುವಂತಹದ್ದು. ಫೋಟೊಗ್ರಾಫರುಗಳಿಗೆ ಸಹಾಯವನ್ನೂ ಮಾಡುತ್ತಾ, ಹಕ್ಕಿಗಳನ್ನು ಫೋಟೊಗಾಗಿ ಕಲ್ಲು ಎಸೆದು ಹಾರಿಸುವವರಿಗೆ ಬೈಯುತ್ತಾ, ಹಳೆ ತಲೆಮಾರಿನ ಶಿವಣ್ಣನಂತಹವರನ್ನು ಒಳಗೊಳ್ಳುತ್ತಾ, ನಾಳಿನ ಮಕ್ಕಳಿಗಾಗಿ ತಮ್ಮೂರಿನ ಜೀವ ವೈವಿಧ್ಯದ ಕಾರ್ಯಾಗಾರ ಮಾಡುತ್ತಾ ತಮ್ಮ ಶಕ್ತಿಮೀರಿ ಊರಕೆರೆ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಎಲ್ಲರೂ ಮನಸ್ಸು ಮಾಡಬೇಕಲ್ಲ?
ಕಳೆದ ವರ್ಷ ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ‘ಲೆಸ್ಸರ್ ವೈಟ್ ಫ್ರಂಟಡ್ ಗೂಸ್ ಮತ್ತು ‘ಗ್ರೇಟರ್ ವೈಟ್ ಫ್ರಂಟೆಡ್ ಗೂಸ್’ ಎಂಬ ಹಕ್ಕಿಗಳು ಹದಿನಾರು ಕೆರೆಯಲ್ಲಿ ಕಾಣಿಸಿಕೊಂಡವು. ಅದನ್ನು ಮೊದಲು ಗಮನಿಸಿದವರೂ ಶಿವಣ್ಣನೇ. ಮೈಸೂರಿನ ಪಕ್ಷಿತಜ್ಞರ ಒಡನಾಟ ಇರುವ ಹುಡುಗರು ಅದರ ಹೆಸರನ್ನು ನಂತರ ಕಂಡುಕೊಂಡರು.
“ಈ ಪರ್ವತದ್ ಹಕ್ಕಿಗಳೂ ಅಷ್ಟೇ. ಮುಂಚೆ ಒಂದೋ ಎರಡೋ ಬಂದು ನೋಡ್ಕಂಡ್ ಓಯ್ತವೆ. ಆಮೇಲೆ ಉಳ್ದವ್ನೆಲ್ಲಾ ಕರ್ಕಂಡ್ ಬತ್ತವೆ” ಅನ್ನೋ ಶಿವಣ್ಣೋರು, ಈ ಅತಿಥಿ ಹಕ್ಕಿಗಳಿಗೆ ಹಾಡು ಕಟ್ಟಿ ಹಾಡುತ್ತಾರೆ. ಈಗ ಬಂದ ಎರಡು ವಿಶಿಷ್ಟ ಹಕ್ಕಿಗಳು ಈ ಸಲ ನೋಡ್ಕಂಡೋಗಿವೆ. ಮುಂದಿನ ವರ್ಷ ಬಳಗಾನೆಲ್ಲ ಕರ್ಕಂಡು ಬರ್ತಾವೆ ಅನ್ಕೊಂಡಿದಾರೆ. ಅವು ಬರುವವೋ “ಏ ಬ್ಯಾಡ ಕಣ್ರಯ್ಯಾ.
ಅಲ್ಲಿ ನೀರೂ ಗಲೀಜು. ಆಹಾರವೂ ಸಿಗಲ್ಲ. ಸುತ್ತಮುತ್ತ ಫ್ಯಾಕ್ಟರಿಗಳು ಬೇರೆ ಸುರು ಆಯ್ತಾವೆ. ಅದರ ಹೊಗೆ ಬೇರೆ. ಬ್ಯಾರೆ ಕಡೆ ಹೋಗಣ” ಅಂತಾವೋ ಗೊತ್ತಿಲ್ಲ. ಅಭಿವೃದ್ಧಿ ಅಂದರೆ ಫ್ಯಾಕ್ಟರಿಯ ಹೊಗೆ ಹೆಚ್ಚಾಗುವುದೋ? ಊರಿಗೆ ಬರೋ ಹಕ್ಕಿಗಳ ಸಂಖ್ಯೆ ಹೆಚ್ಚಾಗುವುದೋ? ಹಿಂದೆ ಇಲ್ಲೊಂದು ಕೆರೆ ಇತ್ತು. ಅಲ್ಲಿಗೆ ಪರ್ವತದ ಹಕ್ಕಿಗಳು ಬರುತ್ತಿದ್ದವು ಎಂದು ಮಾತಾಡುವಂಥ ದಿನಗಳು ಬಾರದಿರಲಿ. ಅನಕ್ಷರಸ್ಥ ಶಿವಣ್ಣೋರ ಕಾಳಜಿ, ಹೊಟ್ಟೆಪಾಡಿಗೆ ಮೀನು ಹಿಡಿಯೋ ಜನರ ಔದಾರ್ಯ ಬುದ್ಧಿ ಕಲಿತವರಿಗೂ ಕೊಂಚ ಬರಲಿ.
” ಹದಿನಾರು ಮೋಳೆ ಗ್ರಾಮದ ಶಿವಣ್ಣೋರಿಗೂ ಹದಿನಾರು ಕೆರೆಗೆ ಬರೋ ಪಟ್ಟೆ ತಲೆಯ ಹೆಬ್ಬಾತುಗಳಿಗೂ ಎರಡು ದಶಕಗಳ ಸಂಬಂಧ. ಇವರ ವೃತ್ತಿ ಮೀನು ಹಿಡಿಯುವುದಾದರೂ ಇವರೊಂಥರಾ ಹಕ್ಕಿ ಮನುಷ್ಯ.”
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…