ಹಾಡು ಪಾಡು

ಹರಿವ ನೀರಲ್ಲಿ ಎಲ್ಲವೂ ಬದಲಾಗಿದೆ…..

ಮೈಸೂರಿನಲ್ಲಿ ನನ್ನ ವಿಶ್ವವಿದ್ಯಾನಿಲಯದ ದಿನಗಳು ವರ್ಣಿಸುವ ಹಾಗಿಲ್ಲ. ಅನುದಿನದ ರೂಢಿ ಹೇಗೆ ನೋಡುತ್ತೇನೋ ಹಾಗೆ. ಹೊಸತು ಕಡಿಮೆ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕ ಕಾರ್ಯಕ್ರಮ. ಅದು ಬಿಟ್ಟರೆ ಏಕಾಗ್ರತೆಗೆ ಭಂಗ ಬರುವ ಯಾವ ಸಂಗತಿಯನ್ನು ನಾನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಪುಸ್ತಕದ ಜಗತ್ತಿನೊಳಗಿನ ಜಗತ್ತು, ನನ್ನದಲ್ಲದ್ದು ಮತ್ತು ನನ್ನದು.

ಕಳೆದ ಹನ್ನೆರಡು ವರ್ಷಗಳಿಂದ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಎರಡು ದಿನ ನಾನು ಕೊಡಗಿನ ವಿರಾಜಪೇಟೆಯ ಬೇತ್ರಿಯ ಹೆಮ್ಮಾಡಿಗೆ ಪ್ರಯಾಣ. ಅದು ಕೆಂಪು ಬಸ್ ಅಥವಾ ನನ್ನದೇ ಕಾರಿನಲ್ಲಿ. ವಯಸ್ಸಾದ ಅಮ್ಮನ ಕಾಯುವ ಕಣ್ಣುಗಳು ನನ್ನ ಕಂಡಾಗ ತಣಿಯುತ್ತವೆ. ಅಮ್ಮನ ಮನೆಗೆ ವಾರಾಂತ್ಯಕ್ಕೆ ಹೋಗುವುದೇ ನನ್ನ ಬದುಕಿನ ನಿಜವಾದ ಸಂಭ್ರಮ. ನಡುವಯಸ್ಸಿನ ನಾನು ಕೊನೆವಯಸ್ಸಿನ ಅಮ್ಮ ಪರಸ್ಪರ ನಿಮಿತ್ತಗಳಾಗಿ ಸಮವಾಗಿರುವೆವು.

ಅಮ್ಮನ ಇಂದ್ರಿಯಗಳು ಚುರುಕು ಕಳೆದುಕೊಂಡರೂ ನಾನು ಎದುರಿದ್ದಾಗ ಎಲ್ಲವೂ ಕಕ್ಕುಲಾತಿಯಿಂದ ಜಾಗೃತಗೊಂಡು ಕ್ಷೇಮ ವಿಚಾರಿಸುತ್ತವೆ. ಅಮ್ಮ ಅವಳು ನೀಡುವ ಅನ್ನವೇ ನನ್ನ ರಕ್ತ. ಸಪ್ತಧಾತು. ವಯಸ್ಸಾದ ಅಮ್ಮ ನಡುವಯಸ್ಸಿನ ಮಗಳ ನಡುವಿರುವ ಸಂಬಂಧ ಸಂಧಿಯು ಒಂದೇ ಆಸ್ಥೆಯಲ್ಲಿ ಭಾವ ಅಭಾವ. ಎರಡು ಇರುವಂಥದ್ದು. ಬದುಕಲ್ಲಿ ಬೆಳಕು ಬೇಕೆಂದರೆ ದೀಪ ಹಚ್ಚಬೇಕು. ಮುಸ್ಸಂಜೆಗೆ ನಾನು ಹಚ್ಚಿದ ದೀಪವೇ ಒಬ್ಬರನ್ನು ಮತ್ತೊಬ್ಬರು ಹಿಡಿದುಕೊಳ್ಳುವ ಸಂಕ್ರಾಂತಿ. ಮುಸ್ಸಂಜೆಯ ಮೋದದಲ್ಲಿ ಕಾಣುವ ಹೊಮ್ಮಿಂಚಿನ ತುಣುಕು. ಇಬ್ಬರ ಒಂಟಿತನದ ತೇವವೆಲ್ಲ ಒಣಗುತ್ತದೆ.

ಬೇತ್ರಿಯ ಅಮ್ಮನ ಮನೆ ಅಕ್ಷರಶಃ ವಾನಪ್ರಸ್ತದ ತಾಣ ಕಾಫಿ ತೋಟದ ಮಧ್ಯದ ಮನೆ. ಅದು ಹತ್ತಿರದ ಗುಡ್ಡಕ್ಕೆ, ತೋಟಕ್ಕೆ, ಹೊಲಕ್ಕೆ, ಹೊಳೆಗೆ, ಮುಗಿಲಿಗೆ ಎಲ್ಲೆಂದರಲ್ಲಿ ಹೀಗೆ ಜೋಡಿಸಿದರೆ ಹಾಗೆ ಹೊಂದಿಕೊಳ್ಳುತ್ತದೆ. ಚಿತ್ರವನ್ನು ಬರೆಯುವವರ ಚಿತ್ತದಲ್ಲಿ ಮೊದಲು ಹೇಗೆ ಆಕಾರವು ಮೂಡುವುದೋ ಹಾಗೆ ಎಲ್ಲವೂ ಕಚ್ಛಾ. ಗಾಳಿ, ಬೆಳಕು, ನೀರು, ಆಕಾಶ, ಅಗ್ನಿ. ಸೂಕ್ಷ್ಮಕ್ಕೆ ಸೂಕ್ಷ್ಮವಾಗಿರುವ ಸಂಕಲ್ಪ. ಅಚ್ಚ ಹಸಿರಿನ ಹಸಿ ಉಸಿರಿನ ನಿದ್ದೆಯ ಗರ್ಭದಿಂದ ಎದ್ದವಳಿಗೆ ಕನಸು ಬಾರದು. ಕನಸ್ಸೆ ಸುತ್ತಲ್ಲ ಸಾಕ್ಷಾತ್ಕಾರವಾಗಿ ನನ್ನ ಮನಸ್ಸು ಚಿಕ್ಕ ಮಗು ಯಕ್ಷನನ್ನು ಕಂಡಂತೆ ಬೆರಗಾಗುತ್ತದೆ. ನಾನು ಮತ್ತು ಅಮ್ಮನ ಮನೆ ಕಾಫಿತೋಟ, ಗದ್ದೆ, ಹೊಳೆ ತೋಟದ ನಡುವಿನ ರಸ್ತೆ ನನ್ನೊಳಗೆ.

ವ್ಯಕ್ತಿ ಸಂಬಂಧಗಳು ನೀಡುವ ಉದ್ದೇಶಪೂರ್ವಕ ನೋವು, ಚಿಂತೆ, ನಂಜು, ಖಿನ್ನತೆ ಎಲ್ಲಾ ಧೂಳಿಗೆ ಸಮ. ಸುತ್ತಲ ಹಸಿರೊಳಗೆ ನಾನು ಹೂವು ತುಂಬಿದ ಮರ. ಬಿಳಿಯ ಹೂವುಗಳಿಂದ ತುಂಬಿದ ಬಳ್ಳಿಗಳಂತೆ ಅಮ್ಮನ ತಲೆ ಬೆಳ್ಳಗಾಗಿದೆ. ನಾನು ಬಣ್ಣ ಹಾಕಿದ ಕಾರಣಕ್ಕೆ ಅಮ್ಮನಿಗಿಂತ ಭಿನ್ನ. ಅದನ್ನು ಕಾಣುವ ಅಮ್ಮನ ಮುಖದಲ್ಲಿ ಹೂವಿನ ಮುಗುಳ್ನಗೆ. ಇಲ್ಲಿ ನಾನು ಬಿಡಿಯಲ್ಲ. ಬದುಕಿನ ಹಲವಾರು ವಿಸಂಗತಿಗಳ ಹಿಂದೆಯೂ ಒಂದು ಘಟನೆ, ಒಂದು ಕಾರಣ, ಹಿನ್ನೆಲೆ ಪರ-ವಿರೋಧದ ಮಾತಿಗಿಂತ ಹೆಚ್ಚಾಗಿ ಕಳೆದ-ಇಂದಿನ ದಿನಗಳ ಸಮೇತ ಇಡಿಯಾಗಿ ನಿಂತು ಜಡಿಮಳೆಗೆ ಹಸಿಯಾದ ಮಣ್ಣಿಗೆ ಊರಿದ ಪಾದ. ಏಕಾಂತಕ್ಕೆ ದಕ್ಕಿದ ಏಕಾಗ್ರತೆ. ನಾನು ಉದರ ನಿಮಿತ್ತ ಮಂಗಳೂರಿನಿಂದ ಮೈಸೂರಿಗೆ ಉದ್ಯೋಗದ ಕಾರಣಕ್ಕಾಗಿ ಬಂದು ಮಗನೊಂದಿಗೆ ಮನೆ ಮಾಡಿದಾಗ, ಸ್ನೇಹಿತರಿಗೆ ಸುಲಭಕ್ಕೆ ಸಿಗುವ ಕಾರುಣ್ಯದ ವ್ಯಕ್ತಿಯೇ ಆಗಿದ್ದೆ. ಪರಿಚಯದ ಬಳಗ ದೊಡ್ಡದು. ಸ್ನೇಹಿತರು ಬೆರಳೆಣಿಕೆ. ಭೇಟಿ ಅಪರೂಪಕ್ಕೆ.

ವ್ಯಕ್ತಿ ಸಂಬಂಧಗಳಲ್ಲಿ ಅಪಾತ್ರರು ನೀಡುವ ಅಘಾತ ದೊಡ್ಡದು. ಅವರೊಂದಿಗೆ ಕಳೆದದ್ದು ಪಿಸುದನಿಯ ಹಗುರ ಅನುಭವಗಳಲ್ಲ. ಅದಾಗಿಯೇ ಎದೆಯೊಳಗೆ ಇಳಿಸಲಾಗದೆ ಪೇರಿಸಿದ ಹೊರೆ. ನನ್ನಿಂದ ಸಮಯ, ಹಣ, ಕಾಳಜಿ ಉಂಡು-ತಿಂದು ಅಧಿಕಾರ ಸ್ಥಾಪಿಸಿ ಕಾರಣವೇ ಇಲ್ಲದೇ ಏನು ಘಟಿಸದಂತೆ ಎದ್ದುಹೋಗುವ ವ್ಯಕ್ತಿಗಳು ಕಲಿಸುವ ಪಾಠ ದೊಡ್ಡದು. ಇದಕ್ಕೆಲ್ಲ ನಾನೇ ಆಗಬೇಕೆ? ಮನೆಯ ಮುಂದೆ ಮೂರು ಗಾವುದ ದೂರದಲ್ಲಿ ಹರಿವ ಕಾವೇರಿ ನದಿಯ ಪುಟ ಬಂಡೆಯ ಮೇಲೆ ಮೈಯಾರಿಸಿ ಕೂತು ಹರಿವ ನೀರಿನ ಬಿರುಜಳ ನೋಡುತ್ತೇನೆ. ತೀವ್ರವಾದದ್ದು ಜೀವಕ್ಕೆ ಆತ್ಮಕ್ಕೆ ಅಂಟಿಕೊಂಡಿದೆ ಅನಿಸುತ್ತದೆ. ಏಕಾಗ್ರವಾಗ ಬೇಕಾದದ್ದು ಯಾವುದರಲ್ಲಿ? ನೋವಿನಲ್ಲಿಯೇ? ನೋವಿನ ವಿವರಣೆಯಲ್ಲಿಯೇ? ವಿಚಾರ ಮಾಡು ಎನ್ನುತ್ತದೆ ಮನಸ್ಸು.

ಮನಸ್ಸೇ ಸೆರೆಮನೆಯಾದ ಆತಂಕದಲಿ, ಹರಿವ ನೀರಲ್ಲಿ ಒಡೆದ ಕನ್ನಡಿಯ ಚೂರುಗಳನ್ನು ಕಂಡು ಬೆಚ್ಚುತ್ತೇನೆ. ತಪ್ಪುಗಳ ಲೆಕ್ಕ ನನ್ನ ಭಾಗದಲ್ಲಿ ದೊಡ್ಡದಾಗಿ ಕಾಣುತ್ತದೆ. ಕಾರಣ ನಾನು ಅಂಥ ಅಪಾತ್ರರನ್ನು ಮರಳಿ ನನ್ನ ಬದುಕಿಗೆ ಪ್ರವೇಶಿಸಲು ಬಿಡಲಿಲ್ಲವಲ್ಲ! ಹರಿಯುತ್ತಲೇ ಕಾವೇರಿ ಕಲಿಸಿದ್ದು ಭ್ರಮೆಯ ಗುಳ್ಳೆಗಳನ್ನು ಹೇಗೆ ಒಡೆಯಬೇಕೆಂದು. ವಿವರಣೆಗಳಲ್ಲಿ ಕಳೆದು ಹೋಗದೆ ಆಗಿ ಅನುಭವಿಸಲು, ಕದಡಿದ್ದು ತಿಳಿಯಾಗಲು, ಸಂಬಂಧಗಳು ನೀಡುವ ಆಘಾತವನ್ನು ಸಹಿಸಲು, ನೀರು ಹರಿಯುವಂತೆ ಎಲ್ಲವೂ ಬದಲಾಗುತ್ತದೆ. ನನ್ನೊಳಗೆ ಪರರ ಪರವಾಗಿ ಪುಟ್ಟ ಮಗುವಂತೆ ನಂಬುವ ಸುಳ್ಳುಗಳು ಸ್ತಬ್ಧವಾಗುತ್ತವೆ.

ಅಮ್ಮನ ಮನೆಯ ಜಾಲರಿ ಹೊದಿಸಿದ ಕಿಟಕಿಯ ಕೊನೆಗೆ ಗುಬ್ಬಚ್ಚಿಗಳೆರಡು ಪುಟ್ಟಗೂಡು ಕಟ್ಟುತ್ತಿವೆ. ಕೆಲಸ ಆರಂಭಿಸಿ ನಾಲ್ಕಾರು ದಿನಗಳು ಕಳೆದಿವೆ ಎಂದಳು ಅಮ್ಮ. ಒಣ ಹುಲ್ಲು ಕಡ್ಡಿ, ಜೊಂಡು, ತರಗೆಲೆ ಎಲ್ಲಿಂದ ಸಿಕ್ಕಿತೋ ಹತ್ತಿಯ ಚೂರು! ಮೆತ್ತಗಿನ ಗೂಡು! ಪ್ರಕೃತಿ ಗುಬ್ಬಚ್ಚಿಯಾಗಿ ಆಟವಾಡುತ್ತಿದೆ. ಕಟ್ಟುವಿಕೆಗೆ ಸಹಸ್ರ ಸಹಸ್ರ ರೂಪ.

ನನ್ನನ್ನು ನಾನು ನಂಬುವಂತೆ ಒತ್ತಾಯಿಸುತ್ತದೆ. ಬದುಕು ಬದುಕೆಂದರೆ ನೋವು ವಿವರಿಸುವ ಪಾಠ. ಎಲ್ಲವನ್ನೂ ತೊರೆದು ಹರಿಯುವುದು ಕಾವೇರಿಯ ಬದುಕು. ಹರಿಯುತ್ತಲೇ ಇರುವುದು. ಖಾಲಿ ಭರವಸೆಗಳನ್ನು ತುಂಬಿ ಉಪಯೋಗಿಸಿಕೊಳ್ಳದಂತೆ ಬಿರುಬೀಸಾಗಿ ಹರಿಯುವುದು. ಹಿಂದಿರುಗಿ ನೋಡದೆ ಯಾರು ನಿರ್ಧರಿಸಲು ಸಾಧ್ಯವಾಗದಂತೆ. ಮನುಷ್ಯರು ಸುಳಿಯದ ಸವೆದ ದಾರಿಗಳಲ್ಲಿ ನನಗೆ ನಾನು ಕಂಡಿದ್ದೇನೆ. ಹರಿವ ಹೊಳೆಗೆ ಅದ್ದಿದ ಕಾಲುಗಳು ಒಣಗಲು ಕಾಯದೆ ನಡೆಯುವುದು. ಸಂಬಂಧಗಳ ಸತ್ಯಗಳನ್ನು ಅರಿತು ನಡೆಯುವುದು. ಬೆಂಕಿಯ ಪರೀಕ್ಷೆಯಲ್ಲಿ ಬೇಯದೆ ನಡೆವ ಅನುಭವದ ನಡೆ. ಯಾರೊಂದಿಗೂ ಏನನ್ನು ನುಡಿಯಲು ಉಳಿಯದ ನಡೆ. ನನ್ನ ಮೇಲಿನ ಹಿಡಿತವನ್ನು ಯಾರೂ ಸಾಧಿಸದ ನಡೆ.

ನನ್ನ ಅನುಭವವನ್ನು ಅನ್ಯರು ವಿವರಿಸಲಾಗದ ನಡೆ ನುಗ್ಗಿನಡೆ. ಒಣಗದೆ ಒದ್ದೆ ಕಾಲುಗಳಲ್ಲಿ ಕಡಲ ದಡದ ಅಲೆಗಳ ಅಬ್ಬರದ ಕುಣಿತ ನೆನೆಯುತ್ತೇನೆ. ದಡದಲ್ಲಿ ದಣಿಯದ ಅಲೆಗಳ ಅನವರತ ಆಟದ ಅರಿವು ಕಡಲಿಗಿದೆಯೇ? ಆಗ ಸುತ್ತೆಲ್ಲ ಆವರಿಸುವ ಪ್ರಕೃತಿ ಪ್ರತಿಕ್ರಿಯಿಸುತ್ತದೆ. ಹೊಸ ಜನರು. ಹೊಸ ಬದುಕು. ಅದಕ್ಕೆ ನಾನು ಅದೃಷ್ಟವಂತಳಾಗಬೇಕಿಲ್ಲ. ಹೊಸ ಬಾಗಿಲು ಹೊಸ ಆಯಾಮ. ಬರ ಮಾಡಿಕೊಳ್ಳುತ್ತೇನೆ. ಎತ್ತರಕ್ಕೆ ನಿಂತು ನನ್ನೊಳಗೆ.
‘ಈಶ್ವರಂ ಪ್ರಕೃತೇಃ ಪರಂ’ (ಶಿವನು ಸದಾ ಪ್ರಕೃತಿಯ ಪರವಾಗಿರುವನು).

-ಕವಿತಾ ರೈ (kavitha.anwaya@gmail.com)

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…

2 mins ago

ಓದುಗರ ಪತ್ರ: ಶಾಂತಿ, ಸೌಹಾರ್ದ ಸಭೆಗಳು ಹೆಚ್ಚು ಹೆಚ್ಚು ನಡೆಯಲಿ

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…

4 mins ago

ಓದುಗರ ಪತ್ರ: ಶ್ರೇಷ್ಠ ಕಾರ್ಮಿಕ ಧುರೀಣ ಅನಂತ ಸುಬ್ಬರಾವ್

ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…

5 mins ago

ಬಾಪೂಜಿ ನೆನಪಲ್ಲಿ; ಖಾದಿ ಕೇಂದ್ರದ ಅಂಗಳದಲ್ಲಿ…

ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ  ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…

8 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಚುನಾವಣೆ, ಚಿತ್ರನಗರಿ, ಒಟಿಟಿ ವರ್ತಮಾನ

ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…

14 mins ago

ಚಳಿ ಇರುವಾಗಲೇ ದಿನಕ್ಕೊಂದು ‘ಅಗ್ನಿ ಕರೆ’

ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…

20 mins ago