ಹಾಡು ಪಾಡು

ಕರೆಂಟು ಕಾರಿನ ಛಾರ್ಜಿಂಗ್ ಫಜೀತಿಗಳು

ಪೂರ್ಣಿಮಾ ಭಟ್ಟ ಸಣ್ಣಕೇರಿ, ಲಂಡನ್

ಶೋರೂಮಿನಿಂದ ಹೊರ ಬೀಳಬೇಕಾದರೆ ಕಾರಿನ ಬ್ಯಾಟರಿ ನೂರು ಪ್ರತಿಶತ ಛಾರ್ಜ್ ಆಗಿರುವುದಾಗಿ ತೋರಿಸುತ್ತಿತ್ತು. ಎರಡು ತಾಸುಗಳಷ್ಟು ಡ್ರೈವ್ಮಾಡಿ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಯಾವುದೇ ಬೆಡಗು ಬಿನ್ನಾಣ ವಯ್ಯಾರಗಳನ್ನು ತೋರಿಸದ ಈ ಕರೆಂಟು ಕಾರು, ಗಜ ಗಾಂಭೀರ್ಯದಲ್ಲಿ ರಸ್ತೆಯ ಮೇಲೆ ಸವಾರಿ ಮಾಡುವುದನ್ನು ನೋಡಿ ಹೆಮ್ಮೆ ಪಡುವುದರಲ್ಲೇ ಮುಂದಿನ ಎರಡು ದಿನಗಳು ಕಳೆದುಹೋದವು. ವಾಹನ ಶುರುವಾದ ಶಬ್ದವೂ ಇಲ್ಲದ, ಆಕ್ಸಲರೇಟರಿನ ಮೇಲೆ ಬಲವಾಗಿ ಕಾಲಿಟ್ಟಮೇಲೂ ಸದ್ದು ಮಾಡದ ಈ ಕಾರಿನ ಡ್ಯಾಶ್‌ಬೋರ್ಡ್‌ನ್ನು ಪದೇ ಪದೇ ನೋಡಿ ವಾಹನ ಚಾಲನೆಯಲ್ಲಿದೆ ಅನ್ನುವುದನ್ನು ಖಚಿತಪಡಿಸಿಕೊಂಡು ಪೆಚ್ಚು ಮುಖ ಮಾಡುವುದು ಅಭ್ಯಾಸವಾಯಿತು.

ಅಂತೂ ನಾಲ್ಕನೆಯ ದಿನ ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದು ಕಾರು ನಿಲ್ಲಿಸುತ್ತಿದ್ದಂತೆ ಒಮ್ಮೆ ಎಷ್ಟು ಛಾರ್ಜು ಉಳಿದಿದೆ ಎಂದು ಅದರತ್ತ ಕಣ್ಣು ಹಾಯಿಸಿದೆ. ಹದಿನಾಲ್ಕು ಪರ್ಸೆಂಟ್ ಎಂದು ತೋರಿಸುತ್ತಿತ್ತು. ಅಂದರೆ ಉಳಿದ ಛಾರ್ಜಿನಲ್ಲಿ ಸುಮಾರು ಇಪ್ಪತ್ತು ಮೈಲಿಗಳಷ್ಟು ಹೋಗಬಹುದು. ಕಾರನ್ನು ಛಾರ್ಜ್ ಮಾಡಲು ಇದು ಸಕಾಲ ಎಂದುಕೊಂಡು ಡಿಕ್ಕಿಯಲ್ಲಿ ನಾಲ್ಕು ದಿನಗಳಿಂದ ಹಾಯಾಗಿ ಮೈಚಾಚಿ ಮಲಗಿದ್ದ ಛಾರ್ಜಿಂಗ್ ಕೇಬಲನ್ನು ಹೊರತೆಗೆದೆ. ಅದರ ಎರಡು ತುದಿಗಳಿಗೂ ಸುಮಾರಾಗಿ ಒಂದೇ ರೀತಿಯ ಕನೆಕ್ಟ್ ಪೋರ್ಟ್‌ಗಳು ಇದ್ದವು. ಒಂದು ಭಾಗವಂತೂ ಕಾರಿನ ಬಾನೆಟ್ ಮುಂಭಾಗದಲ್ಲಿ ಸರಿಯಾಗಿ ಕೂರುತ್ತಿತ್ತು. ಆದರೆ ಮತ್ತೊಂದು ತುದಿ, ಸಾಮಾನ್ಯ ಪ್ಲಗ್ಗಿನ ಸಾಕೆಟ್ಟಿಗೆ ಹೊಂದುವಂತೆ ಇರಲಿಲ್ಲ.

ಫೋನಿನಲ್ಲಿರುವ ಕೋ ಪೈಲಟ್‌ಗೆ ಈ ಕೇಬಲ್ ತೊಂದರೆಯನ್ನು ಸಾದ್ಯಂತ ವಿವರಿಸಿದಾಗ, ಕಾರಿ ನೊಂದಿಗೆ ಬಂದಿರುವ ಛಾರ್ಜರ್ ಅನ್ನು ಮನೆಯಲ್ಲಿನ ಸಾಮಾನ್ಯ ಸಾಕೆಟ್ಟಿಗೆ ಹಾಕಲು ಸಾಧ್ಯವಿಲ್ಲ ಎಂಬು ದಾಗಿಯೂ, ಹೋಮ್ ಛಾರ್ಜಿಂಗ್ ಕೇಬಲ್ ಮತ್ತು ಕನೆಕ್ಟರ್‌ಗಳು ಬೇರೆ ರೀತಿಯಾಗಿರುವುದಾಗಿಯೂ, ಅದು ಇದ್ದರೆ ಮಾತ್ರ ಮನೆಯಲ್ಲಿಯೇ ಕಾರ್ ಛಾರ್ಜ್ ಮಾಡಲು ಸಾಧ್ಯ ಎಂಬುದಾಗಿಯೂ ತಿಳಿದುಬಂತು. ಅಷ್ಟಕ್ಕೇ ಸುಮ್ಮನಾಗದ ಕೋ ಪೈಲಟ್, ಹತ್ತಿರದಲ್ಲಿರುವ ಇಲೆಕ್ಟ್ರಿಕಲ್ ವಾಹನ ಛಾರ್ಜಿಂಗ್ ಸ್ಥಳ ಎಲ್ಲಿದೆ ಎಂಬುದನ್ನೂ ತೋರಿಸಿತು. ಬೇರೇನೂ ದಾರಿಗಾಣದೆ ಅಲ್ಲಿಗೆ ಹೋದೆ.

ಆ ಛಾರ್ಜರ್ ಪಾಯಿಂಟಿನಲ್ಲಿ ಎಲ್ಲವನ್ನೂ ವಿಶದವಾಗಿ ವಿವರಿಸಿದ್ದರಿಂದ, ಅಲ್ಲಿಯೇ ಕೇಬಲ್ ಕೂಡ ಇದ್ದುದ್ದರಿಂದ ಏನೇನೂ ತೊಂದರೆಯಾಗದೇ ಕಾರನ್ನು ಛಾರ್ಜ್ ಮಾಡಲು ಇಟ್ಟೆ. ಚಾರ್ಜ್ ಆಗುತ್ತಿರುವ ಸಮಯದಲ್ಲಿ ಕಾರಿನಲ್ಲಿಯೇ ಕೂತು ಯಾವತ್ತೂ ಮಾಡಲು ಪ್ರಯತ್ನಿಸದ ಹೊಸರುಚಿಗಳ ರೀಲ್ ಚಚ್ಚಿದೆ. ಪೆಟ್ರೋಲ್ ಕಾರಾಗಿದ್ದರೆ ಮೂರು ನಿಮಿಷಗಳಲ್ಲಿ ಟ್ಯಾಂಕ್ ಭರ್ತಿ ಮಾಡಬಹುದಾಗಿತ್ತು. ಅಂದಮೇಲೆ ಈ ಕಾರಿಗೆ ಮೂವತ್ತು ನಿಮಿಷ ಸಾಕು ಎಂದುಕೊಂಡು, ಅರ್ಧಗಂಟೆಯ ನಂತರ ಕಾರಿ ನಿಂದ ಕೇಬಲ್ ಡಿಟ್ಯಾಚ್ ಮಾಡಿ ಮೊಬೈಲಿನ appನಲ್ಲಿ End ಬಟನ್ ಒತ್ತಿದೆ. £00.00 Transaction ಎನ್ನುವ ಮೆಸೇಜು ಮೊಬೈಲಿನ ಪರದೆಯ ಮೇಲೆ ಮಿನುಗಿ ಮಾಯವಾಯಿತು.ಇದೇನು…

ಫ್ರೀ ಆಗಿ ಕಾರು ಛಾರ್ಜಾಗಿ ಹೋಯಿತಾ ಎಂಬ ಸಂಭ್ರಮದಲ್ಲಿ ಇಗ್ನಿಷನ್ ಶುರು ಮಾಡಿದರೆ, ಈಗ ಕಾರಿನಲ್ಲಿ ಬರೀ ಹತ್ತು ಪರ್ಸೆಂಟ್ ಛಾರ್ಜ್ ಇದೆ ಹಾಗೂ ಸುಮಾರು ಹದಿನೈದು ಮೈಲಿ ಹೋಗಬಹುದು ಎಂದು ತೋರಿಸುತ್ತಿದೆ! ಅಲ್ಲಿಗೆ ಕಾರ್ ಛಾರ್ಜ್ ಆಗಿಯೇ ಇಲ್ಲವೆಂದು ಗೊತ್ತಾಯಿತು. ಅಲ್ಲಿಯೇ ನಮೂದಿಸಿದ್ದ ಕಸ್ಟಮರ್ ಕೇರ್ ನಂಬರಿಗೆ ಫೋನಾಯಿಸಿದರೆ – ಆ ಪಾಯಿಂಟ್ ಹಾಳಾಗಿದೆ, ಇನ್ನು ಮೂರು ದಿನಗಳ ನಂತರ ಅದರ ರಿಪೇರಿ ನಿಗದಿಯಾಗಲಿದೆ ಎಂಬ ವಿಷಯವನ್ನು ಸ್ವರದಲ್ಲಿ ಯಾವ ಏರಿಳಿತವೂ ಇಲ್ಲದೇ ತಿಳಿಸಿದರು ಫೋನಿನ ಆಚೆ ಬದಿಯಾಕೆ. ತಕ್ಷಣ ನೆನಪಿಗೆ ಬಂದದ್ದು ಪಕ್ಕದೂರಿನಲ್ಲಿ ಇರುವ ಪೆಟ್ರೋಲ್ ಬಂಕ್. ಆ ಬಂಕಿನ ಇನ್ನೊಂದು ತುದಿಯಲ್ಲಿ ಇಕ್ಟ್ರಿಕ್ ಕಾರುಗಳು ಛಾರ್ಜ್ ಆಗುತ್ತ ನಿಂತದ್ದನ್ನು ನೋಡಿದ್ದೆ. ತಡಮಾಡದೇ ಅಲ್ಲಿಗೆ ಕಾರು ಓಡಿಸಿದೆ. ವಾಹನ ನಿಲ್ಲಿಸಿ ಛಾರ್ಜಿಂಗ್ ಯುನಿಟ್ಟಿನಿಂದ ಕೇಬಲ್ ಎತ್ತಲು ಪ್ರಯತ್ನಿಸಿದರೆ ಕೈಗೆ ಬರುತ್ತಲೇ ಇಲ್ಲ. ಬಲ ಪ್ರಯೋಗದಿಂದಲೂ ಪ್ರಯೋಜನವಾಗಲಿಲ್ಲ. ಪಕ್ಕದ ಲೇನಿನಲ್ಲಿ ಕಾರಿಗೆ ಪೆಟ್ರೋಲ್ ತುಂಬಿಸುತ್ತಿದ್ದ ಯುವತಿ ದೀಸ್ ಛಾರ್ಜಿಂಗ್ ಪಾಯಿಂಟ್ಸ್ ವಿಲ್ ಗೆಟ್ ಲಾಕ್ಡ್ ಆಫ್ಟರ್ ಏಟ್ ಒ ಕ್ಲಾಕ್’ ಎಂದಳು. ಪೆಟ್ರೋಲ್ ಕಾರಿನ ಒಡತಿಗೆ ಒಂದು ಅಸೂಯೆಭರಿತ ಧನ್ಯವಾದ ಎಸೆದು ಗಡಿಯಾರ ನೋಡಿದೆ. ಎಂಟೂಹತ್ತು ತೋರಿಸುತ್ತಿತ್ತು.

ಈಗಾಗಲೇ ಮನೆಯಿಂದ ಸುಮಾರು ಎಂಟು ಮೈಲಿ ದೂರದಲ್ಲಿದ್ದೆ. ನಿಮಿಷೊಪ್ಪತ್ತಿನಲ್ಲಿ ಕಾರಿಗೆ ಕರೆಂಟ್ ಪೂರೈಸುವ ಪರಿಯನ್ನು ಬಗೆಹರಿಸದಿದ್ದರೆ ಛಾರ್ಜಿಲ್ಲದ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಮನೆಗೆ ಮರಳುವ ಪರಿಸ್ಥಿತಿ. ಕೊನೆಯ ಪ್ರಯತ್ನವೆಂಬಂತೆ ಮ್ಯಾಪಿನಲ್ಲಿ ಹುಡುಕಿದರೆ, ನಾನು ನಿಂತ ಜಾಗದಿಂದ ಎರಡು ಮೈಲಿ ದೂರದಲ್ಲಿ ಇನ್ನೊಂದು ಛಾರ್ಜಿಂಗ್ ಸ್ಟೇಷನ್ ಕಂಡಿತು. ಒಂದು ಸೂಪರ್ ಛಾರ್ಜರ್ ಯೂನಿಟ್ ಹಾಗೂ ಎರಡು ನಾರ್ಮಲ್ ಯೂನಿಟ್‌ಗಳು ೨೪/೭ ತೆರೆದಿರುತ್ತವೆ ಎಂದು ಗೂಗಲ್ ಹೇಳಿದಾಗ ನಂಬದೇ ಇರಲಾಗಲಿಲ್ಲ. ಸರಿ, ಅಲ್ಲಿಗೆ ಸವಾರಿ ಹೊರಟೆ. ಸಂಜೆಯಾಗುತ್ತಿದ್ದಂತೆ ಶುರುವಾದ ಗಾಳಿ ಮಳೆಗೆ ಮೈ ಕೊರೆಯುತ್ತಿದ್ದರೂ ಕಾರಿನ ಹೀಟರ್ ಹಾಕಲಿಲ್ಲ – ಬ್ಯಾಟರಿಯ ಛಾರ್ಜ್ ಪೂರ್ತಿ ಹೀಟರಿಗೇ ವ್ಯಯಿಸಿದರೆ ಕಾರು ದಾರಿಯಲ್ಲೇ ನಿಂತೀತೆಂಬ ಭಯ. ಯಾವುದೇ ಮದುವೆ ಮುಂಜಿಗೆ ಹೋದರೂ ತನ್ನ ಬ್ಯಾಟರಿ ಬೈಕನ್ನು ಎಲ್ಲಿ ಛಾರ್ಜಿಗೆ ಹಾಕಲಿ ಎಂಬ ಗೊಂದಲದಲ್ಲಿ ಪ್ಲಗ್ ಪಾಯಿಂಟ್ ಹುಡುಕುವ ಗೆಳತಿಯ ಅಪ್ಪ ಮತ್ತೆ ಮತ್ತೆ ನೆನಪಾದರು. ಅಲ್ಲಿ ತಲುಪಿದಾಗ, ಜಗತ್ತಿನ ಕರೆಂಟು ಕಾರುಗಳಿಗೆಲ್ಲ ಛಾರ್ಜ್ ಚುಚ್ಚಿಸಿಕೊಳ್ಳಲು ಇದೇ ಮುಹೂರ್ತವೇನೋ ಎಂಬಂತೆ ಮೂರೂ ಯುನಿಟ್ಟುಗಳಲ್ಲಿಯೂ ಒಂದೊಂದು ಕಾರು ಮೈ ಆನಿಸಿಕೊಂಡು ನಿಂತಿವೆ!

ಒಂದೇ ಸಮನೆ ಇಳಿಮುಖವಾಗುತ್ತಿದ್ದ ಬ್ಯಾಟರಿ ಪವರಿನಿಂದಾಗಿ ನನ್ನೊಳಗಿನ ಅರಿಷಡ್ವರ್ಗಗಳು ಸೋತು ಹೋಗಿದ್ದ ರಿಂದ, ಛಾರ್ಜಿಗೆ ನಿಂತ ಕಾರು ಹೊರಡುವವರೆಗೆ ಶಾಂತ ರೀತಿಯಿಂದ ಕಾದೆ. ಸೂಪರ್ ಛಾರ್ಜರಿನ ದಯೆಯಿಂದಾಗಿ ಕೇವಲ ಇಪ್ಪತ್ತೇ ನಿಮಿಷದಲ್ಲಿ ಐವತ್ತು ಪರ್ಸೆಂಟ್ ಛಾರ್ಜ್ ಆದ ಕಾರನ್ನು ಕಂಡು, ನನ್ನ ನಗೆಯುಡುಗಿದ ಮೊಗದಲ್ಲಿ ಮತ್ತೆ ಮಂದಹಾಸ. ನಂತರ ನಡೆದದ್ದೆಲ್ಲ ಹೂವಿನ ಹಾಸಿನ ಮೇಲೆಯೇ. ಮಾರನೆ ದಿನವೆ ಪಟ್ಟುಹಿಡಿದು ತರಿಸಿಕೊಂಡ ಹೋಮ್ ಛಾರ್ಜಿಂಗ್ ಕೇಬಲ್ ಬಂದ ಮೇಲೆ ಕಾರಿಗೆ ಅರೆಹೊಟ್ಟೆ ಆಹಾರ ಹಾಕಿದ್ದೇ ಇಲ್ಲ. ರಾತ್ರಿ ಕೇಬಲನ್ನು ಜೋಡಿಸಿಟ್ಟು ಮಲಗಿದರೆ ಬೆಳಿಗ್ಗೆ ಏಳುವಾಗ ಕಾರಿನ ಬ್ಯಾಟರಿ ಹೊಟ್ಟೆ ಭರ್ತಿಯಾಗಿರುತ್ತದೆ. ಅಮೆರಿಕ-ಇಸ್ರೇಲ್-ಇರಾನಿನ ಯುದ್ಧಗಳ ಗುಂಗು, ಪೆಟ್ರೋಲಿನ ಹಂಗು ಯಾವುದೂ ತನಗಿಲ್ಲ ಎಂಬಂತೆ ಕಾರು ಬೀಗುತ್ತ ನಿಂತಿರುತ್ತದೆ.

(ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ)

” ‘ಕಲಿಕೆ ಎಂಬುದು ಕೊನೆ ದಿನದವರೆಗೂ’ ಎಂದು ಅಜ್ಜಿ ಆಗೀಗ ಹೇಳಿದರೆ ಉಡಾಫೆಯಲ್ಲಿ ನಗುತ್ತಿದ್ದೆ. ಕರೆಂಟು ಕಾರ್ ಛಾರ್ಜ್ ಮಾಡುವುದನ್ನು ಕಲಿಯಲು ಇಷ್ಟೆಲ್ಲ ಮೈಪರಚಿಕೊಂಡ ನನ್ನನ್ನು ನೋಡಿ ಅಜ್ಜಿ ಮೇಲಿನಿಂದಲೇ ನಗುತ್ತಿರಬಹುದು”

 

 

ಆಂದೋಲನ ಡೆಸ್ಕ್

Recent Posts

ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆ ದರೋಡೆ; ಆರೋಪಿ ಬಂಧನ

ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…

2 hours ago

ಮಹದೇಶ್ವರ ಬೆಟ್ಟ : ವಿವಿಧ ಸೇವೆಗಳಿಂದ 1.16 ಕೋಟಿ ಸಂಗ್ರಹ

ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ ಜಾತ್ರಾ…

3 hours ago

ಹೊರ್ಮುಜ್‌ ಜಲಸಂಧಿ ಶತ್ರುಗಳಿಗೆ ಮಾತ್ರ ಮುಚ್ಚಿದೆ : ಇರಾನ್

ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…

3 hours ago

ಹುಣಸೂರು | ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆ

ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…

4 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ; ಪ್ರತಿಭಟನೆ

ಮೈಸೂರು : ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕುಕ್ಕರಹಳ್ಳಿ…

4 hours ago

2 ಸಾವಿರ ಬೋಧಕ ಹುದ್ದೆಗಳಿಗೆ ನೇಮಕಾತಿ : ಉನ್ನತ ಶಿಕ್ಷಣ ಸಚಿವ ಸುಧಾಕರ್‌

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಯಲ್ಲಿ ಖಾಲಿ ಇರುವ…

4 hours ago