ಫಾತಿಮಾ ರಲಿಯಾ
ಉಪವಾಸ ಎನ್ನುವ ಕಾನ್ಸೆಪ್ಟ್ ಅರ್ಥ ಆಗಿ ನಾವು ಉಪವಾಸ ಮಾಡಲು ಆರಂಭಿಸಿದಾಗ ರಂಜಾನ್ ತಿಂಗಳು ಗ್ರೆಗೋರಿಯನ್ ಕ್ಯಾಲೆಂಡರ್‌ನ ಅಕ್ಟೋಬರ್ -ಡಿಸೆಂಬರ್ ಒಳಗೆ ಬರುತ್ತಿತ್ತು. ಚಳಿಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸಹರಿ ಉಣ್ಣುವುದೇ ಒಂದು ವಿಹಂಗಮ ಸಾಹಸ. ಆಗೆಲ್ಲಾ ನಮಗೆ ಸಹರಿ ಎನ್ನುವ ಹೆಸರು ಗೊತ್ತೇ ಇರಲಿಲ್ಲ, ನಾವು ನಮ್ಮ ನಕ್ಕ್‌ನಿಕ್ಕ್/ ಮಲಾಮೆ ಭಾಷೆಯಲ್ಲಿ ‘ಅತ್ತಾಳ’ ಎನ್ನುತ್ತಿದ್ದೆವು.
ಉರ್ದು ಮತ್ತು ಅರೇಬಿಕ್ ಭಾಷೆಯ ಪ್ರಭಾವ ನಮ್ಮ ದೈನಂದಿನ ಜೀವನದ ಮೇಲೆ ಬೀರುವವರೆಗೂ ನಾವು ಇಫ್ತಾರ್ ಎನ್ನುವ ಪದವನ್ನೂ ಕೇಳಿರಲಿಲ್ಲ. ನಮಗೆ ಆಗ ಅದು ನೋಂಬು ತೊರಕ್‌ನೆ ಅಥವಾ ನೋಂಬು ತೊರಕ್‌ಡೆ (ಉಪವಾಸ ತೊರೆಯುವುದು). ನೆಲದಲ್ಲಿ ಸುಪ್ರ ಹಾಸಿ ಒಂದು ಬಟ್ಟಲಿನಲ್ಲಿ ಎಲ್ಲರಿಗೂ ಒಂದೊಂದು ಹೋಳು ಖರ್ಜೂರ, ಒಂದು ಸಣ್ಣ ಬಟ್ಟಲಿನಲ್ಲಿ ಗೋಧಿ ಅಥವಾ ರಾಗಿಯ ಮಣ್ಣಿ (ಹಾಲುಬಾಯಿ), ತೆಂಗಿನಕಾಯಿಯ ಹಾಲು ಹಿಂಡಿ ಮಾಡಿದ ಗಂಜಿ, ಒಂದು ಲೋಟ ಬಿಸಿ ನೀರು… ಇಷ್ಟಿದ್ದರೆ ಇಫ್ತಾರ್ ಸಂಪನ್ನವಾಗಿಬಿಡುತ್ತಿತ್ತು.
ದೊಡ್ಡವರೆಲ್ಲಾ ಸಣ್ಣಗೆ ಹೊಟ್ಟೆ ತುಂಬಿಸಿ ನಮಾಜಿನ ಚಾಪೆ ಬಿಡಿಸಿದರೆ, ಆಗಿನ್ನೂ ಉಪವಾಸ ಮಾಡಲು ಶುರು ಮಾಡಿದ್ದ ನಮಗೆ ಒಂದು ಉಪವಾಸ ಪೂರ್ತಿಯಾದ ಸಾರ್ಥಕ್ಯದ ಭಾವ. ಆ ನಂತರ ಇಶಾ ನಮಾಜು, ತರಾವೀಹ್ ಆದ ನಂತರ ಮೀನು ಸಾರು ನಾಷ್ಟ, ಸಹರಿಗೆ ಕುಚ್ಚಲಕ್ಕಿ ಗಂಜಿ ಜೊತೆಗೆ ಯಾವುದಾರೊಂದು ತರಕಾರಿ ಪಲ್ಯ. ಎಣ್ಣೆಯಲ್ಲಿ ಕರಿದದ್ದು, ಹುರಿದದ್ದು, ಚಿಲ್ಲ್‌ಡ್ ಜ್ಯೂಸ್, ಇಡೀ ಚಿಕನ್, ಕೂಲ್‌ಡ್ರಿಂಕ್ಸ್, ಮಯನೈಸ್, ಪುಡ್ಡಿಂಗ್… ಮುಂತಾದವುಗಳಿಗೆಲ್ಲಾ ನೋಂಬು ತೊರೆಯುವ ಟೇಬಲ್‌ಗೆ ಬರೋದಿಕ್ಕೆ ಅನುಮತಿಯೇ ಇರಲಿಲ್ಲ. ಈಗ ಭಾಷೆಯೂ ಬದಲಾಗಿದೆ, ಅದರೊಂದಿಗೆ ಆಹಾರದ ಪರಿಭಾಷೆಯೂ ಬದಲಾಗಿದೆ. ಒಂದು ತಿಂಗಳ ಉಪವಾಸ ಮುಗಿಯುತ್ತಿದ್ದಂತೆ ಮೈ ಮನಸ್ಸು ಎರಡೂ ಕಲ್ಮಷ ಕಳೆದು ಶುದ್ಧವಾಗುತ್ತಿದ್ದರೆ ಈಗ ಬೇಡದ ರೋಗಗಳು ಅಂಟಿಕೊಳ್ಳುತ್ತಿವೆ.
ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದ ಕಡು ಬೇಸಿಗೆಯಲ್ಲಿ ರಂಜಾನ್ ಉಪವಾಸ ಬರುತ್ತಿದೆ. ನಮ್ಮ ಕರಾವಳಿಯಂತೂ ಈ ಹೊತ್ತಿಗೆ ಕಾದ ಹಂಚಿನಂತಾಗುತ್ತಿದೆ. ಸಹರಿಗೆ ಕುಡಿದ ನೀರು ಎಷ್ಟಕ್ಕೂ ಸಾಕಾಗದೆ ಬೆಳಿಗ್ಗೆ ಹತ್ತರ ಹೊತ್ತಿಗೇ ಗಂಟಲು ಒಣಗಿದಂತಾಗುತ್ತಿದೆ, ನಡುವೆ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುವ ನಮ್ಮ ಆರೋಗ್ಯ ಕ್ರಮ… ನಿಜಕ್ಕೂ ರಂಜಾನ್ ಇರಬೇಕಾದದ್ದು ಹೀಗಲ್ಲವೇ ಅಲ್ಲ. ಉಪವಾಸ, ನಮಾಜು, ಕುರ್‌ಆನ್ ಪಾರಾಯಣ, ಆರಾಧನೆ, ದಾನ, ಪಶ್ಚಾತ್ತಾಪ, ಪ್ರಾಯಶ್ಚಿತ್ತ, ಕೆಡುಕಿಂದ ದೂರ ಇರೋದು, ಒಳಿತನ್ನೇ ಬಯಸೋದು… ಹೀಗಿರಬೇಕಾದದ್ದಕ್ಕೇ ಆಡಂಬರದ ಇಫ್ತಾರ್, ವಿಡಿಯೋ ಮೇಕಿಂಗ್‌ನ ಬಣ್ಣ ಹಚ್ಚಿ ಅದನ್ನೊಂದು ಒಣ ಪ್ರತಿಷ್ಠೆಯನ್ನಾಗಿ ಮಾಡಿಕೊಂಡದ್ದು ನಾವೇ.
ಈ ಇಫ್ತಾರಿನ ಅನಗತ್ಯ ಅಡುಗೆ ಹೊಣೆಯೂ ಬೀಳುವುದು ಹೆಣ್ಣಿನ ಹೆಗಲ ಮೇಲೆ. ಪಡಲಾರದ ಪಾಡು ಪಟ್ಟು ಆಕೆ ಎಲ್ಲವನ್ನೂ ಮಾಡಿ, ಬಡಿಸಿ, ನಿರ್ವಹಿಸಿ, ಉಪ್ಪು ಕಮ್ಮಿ, ಖಾರ ಜಾಸ್ತಿ ಎನ್ನುವ ಕಿರಿಕಿರಿಗಳಿಗೂ ಕಿವಿಯಾಗಿ, ದಣಿದು ಮಾಡಿದ್ದೊಂದನ್ನೂ ಬಾಯಿಗಿಡಲಾಗದೆ ಸುಮ್ಮನೆ ನಮಾಜು, ಖುರ್‌ಆನ್, ನಿದ್ದೆ ಎಂದು ನೆಮ್ಮದಿಯನ್ನು ಅರಸಿ ಹೋಗುತ್ತಾಳೆ. ಹಗಲಿಡೀ ಇದ್ದ ಉಪವಾಸ, ದುಡಿತದ ದಣಿವು, ಯಾವುದನ್ನೂ ಬೇಕು ಅನ್ನದ ಹೊಟ್ಟೆ ಎಲ್ಲಾ ಸೇರಿ ರಂಜಾನ್ ಮುಗಿಯುವ ಹೊತ್ತಿಗೆ ಆಕೆ ಹಣ್ಣುಗಾಯಿ ನೀರುಗಾಯಿ ಆಗುತ್ತಾಳೆ. ಈ ನಡುವೆ ಉದ್ಯೋಗ, ಹವ್ಯಾಸ, ಮನೆಗೆಲಸ, ಮಕ್ಕಳ ಶಾಲೆ, ಎಕ್ಸಾಂ, ನಿಭಾಯಿಸಲೇಬೇಕಾದ ಕೆಲ ಸಂಬಂಧಗಳು ಅಂತ ನೂರಾರು ಕಡೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹೊಸಕಾಲದ ಹೆಣ್ಣುಮಕ್ಕಳು ತಮಗೆ ಅಂತ ‘ಮಿ ಟೈಮ್’ ಎತ್ತಿಡಲಾಗುತ್ತಿಲ್ಲವಲ್ಲಾ ಎನ್ನುವ ತೊಳಲಾಟಕ್ಕೆ ಬಿದ್ದು ಮಾನಸಿಕವಾಗಿ ಮತ್ತಷ್ಟು ಬಳಲುತ್ತಿದ್ದಾರೆ.
ಈಗೀಗ ಧರ್ಮಗುರುಗಳು, ಮಸೀದಿಯ ಇಮಾಮರುಗಳು ಮತ ಪ್ರಭಾಷಣದಲ್ಲಿ, ಶುಕ್ರವಾರದ ಜುಮ್ಮಾ ನಮಾಜಿನ ನಂತರದ ಭಾಷಣದಲ್ಲಿ ಇಫ್ತಾರಿನ ಹೆಸರಿನಲ್ಲಿ ಮನೆಯ ಹೆಣ್ಣುಮಕ್ಕಳನ್ನು ಬಳಲಿಸಬೇಡಿ ಎಂದು ನೇರವಾಗಿಯೇ ಹೇಳುತ್ತಿದ್ದಾರೆ. ಆದರೆ ಉಳಿದೆಲ್ಲಾ ವಿಚಾರಗಳಲ್ಲಿ ಉಸ್ತಾದರ ಮಾತುಗಳನ್ನು ಶಿರಸಾವಹಿಸಿ ಪಾಲಿಸುವ ಗಂಡಸರದು ಈ ವಿಚಾರದಲ್ಲಿ ಜಾಣ ಕಿವುಡು, ಜಾಣ ಕುರುಡು. ಊರವರ ಮುಂದೆ ತಮ್ಮ ಮನೆಯಲ್ಲಿ ಎಷ್ಟು ಗಡದ್ದಾಗಿ ಇಫ್ತಾರ್ ಪಾರ್ಟಿ ಇತ್ತು, ಎಷ್ಟು ಐಟಂಸ್ ಟೇಬಲ್ ಮೇಲೆ ಇತ್ತು ಗೊತ್ತಾ ಎಂದು ಮೆರೆಯುವ ಪ್ರತಿಷ್ಠೆಗಿಂತ ಉಸ್ತಾದರುಗಳ ಈ ಬುದ್ಧಿಮಾತುಗಳಿಗೆ ಮೌಲ್ಯ ಕಲ್ಪಿಸಲಾದರೂ ಹೇಗೆ ಸಾಧ್ಯ? ಈ ಬಾರಿ ಈದ್-ಉಲ್-ಫಿತರ್ ಮತ್ತು ಯುಗಾದಿ ಒಂದು ದಿನದ ಅಂತರದಲ್ಲಿ ಬರುತ್ತಿದೆ. ಯುಗಾದಿಯ ಮರು ದಿನ ಈದ್. ಎರಡು ಧರ್ಮಗಳ ಹಬ್ಬಗಳು ಹೊತೆ ಜೊತೆಗೆ ಬರುವುದು ಹೊಸದೂ ಅಲ್ಲ, ಅಸಹಜವೂ ಅಲ್ಲ. ಆದರೆ ಈಗಿನ ಮನಸ್ಥಿತಿಗಳು ಮತ್ತು ಪರಿಸ್ಥಿತಿಗಳು ಹೀಗೆ ಎರಡು ಹಬ್ಬಗಳು ಒಟ್ಟೊಟ್ಟಿಗೆ ಬರುವುದು ಎಂಥಾ ಎಕ್ಸ್ತ್ಯೈಟಿಂಗ್ ಅಲ್ವಾ ಅಂತ ಅನ್ನಿಸುವಂತೆ ಮಾಡಿದೆ.
ಮನುಷ್ಯ ಸ್ಪಷ್ಟವಾಗಿ ಎರಡು ಭಾಗ ಮಾಡಿ ಎಳೆದ ಗೆರೆಯನ್ನು ಪ್ರಕೃತಿ ಅಳಿಸಿ ಅವನನ್ನು ಮನುಷ್ಯನಾಗಿ ಉಳಿಸಲಿ ಮತ್ತು ನಮ್ಮ ಉಪವಾಸ ಯಾರೊಬ್ಬರ ಹಸಿವಿನ ಅಣಕವಾಗದಿರಲಿ, ಅಷ್ಟೇ.
” ಎರಡು ಧರ್ಮಗಳ ಹಬ್ಬಗಳು ಜೊತೆ ಜೊತೆಗೆ ಬರುವುದು ಹೊಸದೂ ಅಲ್ಲ, ಅಸಹಜವೂ ಅಲ್ಲ. ಆದರೆ ಈಗಿನ ಮನಸ್ಥಿತಿಗಳು ಹೀಗೆ ಎರಡು ಹಬ್ಬಗಳು ಒಟ್ಟೊಟ್ಟಿಗೆ ಬರುವುದು ಒಂಥರಾ ವಿಶೇಷ ಅನಿಸುವಂತೆ ಮಾಡಿವೆ”
ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…
೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…
ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…
ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…