ನೀರು ಸಾಹೇಬರೆಂದೇ ಪರಿಚಿತರಾದ ಅಬ್ದುಲ್ ನಜೀರ್‌ಸಾಬ್, ಕರ್ನಾಟಕದ ಉದ್ದಗಲಕ್ಕೂ ಬೋರ್ ವೆಲ್ ಕೊರೆಸುತ್ತಾ ಜಲಯಜ್ಞ ಮಾಡುತ್ತಿದ್ದ ಹೊತ್ತಿನಲ್ಲಿ, ಬೋರ್ ವೆಲ್‌ಗಳಿಂದ ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತ ಸಂಶೋಧನಾ ಬರಹಕ್ಕೆ ಮಾರ್ಗದರ್ಶನ ನೀಡುವಲ್ಲಿ ಪ್ರೊ. ವಿ. ಕೆ. ನಟರಾಜ್ ಅವರು ಮಗ್ನರಾಗಿದ್ದರು.
ಕ್ರಿಯೆಯೊಂದರ ನಾವೀನ್ಯತೆಯ ಹೊಳಪನ್ನು ಲೋಕನಿಬ್ಬೆರಗಾಗಿ ನೋಡುತ್ತಾ ನಿಂತಿರುವಾಗ, ಕಲಿಕೆಯ ಹಪಹಪಿಕೆಯಿರುವ ವ್ಯಕ್ತಿ ಮಾತ್ರ ಅದರ ಒಟ್ಟಾರೆ ಪರಿಣಾಮದ ಅಧ್ಯಯನದಲ್ಲಿ ಮಗ್ನನಾಗಿರಲು ಸಾಧ್ಯ. ಹೀಗೆ ಸದಾ ಕಾಲ ಕಲಿಯುವುದರ ಜೊತೆಗೆ ಕಲಿಸುವ ಬೌದ್ಧಿಕ ಚಟುವಟಿಕೆಯಲ್ಲಿ ಲೀನವಾಗಿರುತ್ತಿದ್ದ ನಟರಾಜ್ ಅವರು, ಈ ತಿಂಗಳ ೯ರಂದು ಪ್ರಕೃತಿಯಲ್ಲಿ ಪೂರ್ಣ ಲೀನವಾದರು.
ಇವರು ಮೈಸೂರಿನಲ್ಲಿ ನೆಲೆ ನಿಂತು ವಿಶ್ವ ಮಟ್ಟದಲ್ಲಿ ಅತ್ಯುತ್ತಮ ಅಭಿವೃದ್ಧಿ ಅಧ್ಯಯನದ ವಿದ್ವಾಂಸರೆಂದು ಹೆಸರು ಗಳಿಸಿದವರು. ತಮ್ಮ ವಿದ್ವತ್‌ಪೂರ್ಣ ಭಾಷಣಗಳಿಂದಾಗಿ ಹೆಚ್ಚು ಬೇಡಿಕೆಯಲ್ಲಿದ್ದ ಇವರು, ಸ್ವತಃ ಬರೆದದ್ದಕ್ಕಿಂತ, ಇತರರ ವಿದ್ವತ್‌ಪೂರ್ಣ ಬರಹಗಳಿಗೆ ಪ್ರೇರಕರಾಗಿದ್ದೇ ಹೆಚ್ಚು. ಸ್ಪಷ್ಟವಾದ ಚಿಂತನೆಗಳನ್ನು ತಮ್ಮ ನಿಖರವಾದ ಮಾತುಗಳ ಮೂಲಕ ಕೇಳುಗರನ್ನು ತಲುಪುವುದು ಇವರ ವಿಶೇಷವಾಗಿತ್ತು. ೧೯೩೯ರಲ್ಲಿ ಜನಿಸಿದ್ದ ಇವರು ಕರ್ನಾಟಕದಲ್ಲಿ ನಡೆದ ಅನೇಕ ಕ್ರಾಂತಿಕಾರಿ ಸಾಮಾಜಿಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದರು.
ದೇವರಾಜ ಅರಸು ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದ ಇವರು, ಅವರ ಎಲ್ಲಾ ಸಾಮಾಜಿಕ ನ್ಯಾಯಪರವಾದ ಯೋಜನೆಗಳನ್ನು ತಮ್ಮ ತೀಕ್ಷ್ಣ ಸಂಶೋಧನೆಯ ಗ್ರಹಿಕೆಗೆ ಒಡ್ಡಿ ನೋಡಿದ್ದರು. ಮುಂದೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ಕಾನೂನುಗಳಿಗೆ ಬೆಂಬಲವಾಗಿದ್ದೇ ಅಲ್ಲದೆ, ಅವುಗಳ ಒಟ್ಟಾರೆ ಪರಿಣಾಮಗಳ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳ ಮೂಲಕ ನಿರಂತರ ಅಧ್ಯಯನದಲ್ಲಿ ತೊಡಗಿಕೊಂಡಿದ್ದರು.
ಕರ್ನಾಟಕವು ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯ ಆರಂಭಿಕ \ಪ್ರಯೋಗಶೀಲತೆಗೆ ತಮ್ಮ ವಿದ್ವತ್‌ಪೂರ್ಣ ಬರಹಗಳ ಮೂಲಕ ಶಕ್ತಿಯನ್ನು ಒದಗಿದ್ದವರು. ಮುಂದೆ ಇದೇ ಪಂಚಾಯತ್ ರಾಜ್ ವ್ಯವಸ್ಥೆ ಅನೇಕ ಕಾನೂನುಗಳ ಮೂಲಕ ತನ್ನ ಮೂಲ ಬಲವನ್ನು ಕಳೆದುಕೊಂಡಾಗ, ಅದರ ಒಟ್ಟಾರೆ ಪರಿಣಾಮದ ಕುರಿತು ಅಧ್ಯಯನವನ್ನು ಎಂದಿನಂತೆ ತಮ್ಮ ವಿದ್ಯಾರ್ಥಿಗಳ ತಂಡದೊಂದಿಗೆ ನಿರ್ಲಿಪ್ತವಾಗಿ ಮುಂದುವರಿಸಿದ ಅಭಿವೃದ್ಧಿ ಅಧ್ಯಯನದ ಸಂತರು ಹೌದು. ಆಧುನಿಕತೆಯ ಭಾಗವಾಗಿ ರೂಪುಗೊಳ್ಳುವ ಅಭಿವೃದ್ಧಿಯ ಅಧ್ಯಯನಕ್ಕೆ ಬೇಕಾಗುವ ಸಂತನ ಗುಣ ಶ್ರೀಯುತರಲ್ಲಿ ಸಹಜವಾಗಿ ಇದ್ದ ಕಾರಣದಿಂದಲೋ ಏನೋ ಕರ್ನಾಟಕದಲ್ಲಿ ಜರುಗಿದ ಎಲ್ಲಾ ಸಮಾಜಿಕ ಚಳವಳಿಯನ್ನು ಹತ್ತಿರದಿಂದ ಬಲ್ಲ ತಜ್ಞರಾಗಿ ಉಳಿದರೇ ಹೊರತು, ಚಳವಳಿಯ ಭಾಗವಾಗುವ ಭಾವನಾತ್ಮಕ ಹಾದಿಯಲ್ಲಿ ಹೆಜ್ಜೆ ಹಾಕಲಿಲ್ಲ.
ಹೀಗೆ ಇದ್ದೂ ಇಲ್ಲದಿರುವ ಅವರ ಶೈಕ್ಷಣಿಕ ಪ್ರಜ್ಞೆ ಅವರನ್ನು ಕರ್ನಾಟಕದ ಅಭಿವೃದ್ಧಿ ಪರ ಮತ್ತು ವಿರೋಧ ಚಳವಳಿಗಳ ವಿದ್ವಾಂಸರಾಗಿ ರೂಪಿಸಿತ್ತು. ರೈತರ ಸಮಸ್ಯೆಗಳ ಕುರಿತು ಆಳವಾದ ಜ್ಞಾನವನ್ನು ಹೊಂದಿದ್ದ ಇವರು, ರೈತರ ಸಮಸ್ಯೆಯನ್ನು ಏಕಮುಖವಾಗಿ ನೋಡದೆ ಅದರ ಸಂಕೀರ್ಣತೆಯನ್ನು ಅರಿಯಲು ಸತತವಾಗಿ ತೊಡಗಿಸಿಕೊಂಡವರಾಗಿದ್ದರು. ಮದ್ರಾಸ್ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುವಾಗ, ತಮಿಳುನಾಡು ಮತ್ತು ಕರ್ನಾಟಕದ ರೈತರ ನಡುವೆ ವಿಶ್ವಾಸ ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಈ ಯತ್ನವು ಅಭಿವೃದ್ಧಿ ಅಧ್ಯಯನ ವಿಜ್ಞಾನದ ಉಪಯುಕ್ತತತೆಯ ಕುರಿತು ಅವರಿಗಿದ್ದ ಸ್ಪಷ್ಟತೆಯ ಕುರುಹಾಗಿದೆ.
ಸಾಹಿತ್ಯದ ಕುರಿತು ತೀವ್ರ ಆಸಕ್ತಿಯನ್ನು ಹೊಂದಿದ್ದ ಇವರು, ಪಂಡಿತ್ ರಾಜೀವ್ ತಾರಾನಾಥ್ ಮುಂತಾದವರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿದ್ದರು. ತಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಸದಾ ಆಸಕ್ತಿ ಹೊಂದಿರುತ್ತಿದ್ದ ನಟರಾಜ್ ಅವರನ್ನು ಕರ್ನಾಟಕದ ಆಡಳಿತ ಲೋಕ ಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಯಿತು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಪಿಸುಮಾತು. ಅಭಿವೃದ್ಧಿ ಎನ್ನುವುದನ್ನು ಕರ್ನಾಟಕ ಮತ್ತು ಕನ್ನಡದ ಅಸ್ಮಿತೆಯೊಳಗಿಟ್ಟು ಪೂರ್ಣವಾಗಿ ಅಧ್ಯಯನ ನಡೆಸಿದವರು ಪ್ರೊ. ವಿ. ಕೆ. ನಟರಾಜ್ ಅವರು. (ಪ್ರೊ. ಎಂ. ಎನ್. ಪಾಣಿನಿ ದೇಶದ ಹೆಸರಾಂತ ಸಮಾಜ ವಿಜ್ಞಾನ ತಜ್ಞರು) (ಸಂಗ್ರಹಾನುವಾದ: ಸದಾನಂದ ಆರ್)
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದ್ದು,…
ನವದೆಹಲಿ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…