ಹಾಡು ಪಾಡು

ಕೆಚ್ಚೆದೆಯ ನೇಹಾ ಮತ್ತು ವಾತ್ಸಲ್ಯದ ಅಮ್ಮ

ಪಾತು

ಎಲ್ಲಾ ಭಿನ್ನಾಭಿಪ್ರಾಯಗಳಾಚೆಯೂ ಒಬ್ಬರ ಬದುಕಿನಲ್ಲಿ ಇನ್ನೊಬ್ಬರು ಆಸರೆಯಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಘಟನೆ ಹಲವು ಕಾಲ ಜನಮಾನಸದಲ್ಲಿ ನಿಲ್ಲುತ್ತದೆ

ಜಂತರ್ ಮಂತರ್‌ನ ಅಂಗಳ, ೨೩ನೇ ದಿವಸದ ಉಪವಾಸ, ದೇಹ ಕ್ಷೀಣವಾಗಿತ್ತು, ಆಯಾಸವಾಗುತ್ತಿತ್ತು. ಕುಳಿತಲ್ಲೇ ನಿದ್ದೆ ಹೋಗಿದ್ದರು ನೇಹಾ ಬೋರಾ. ಆ ನಿದ್ದೆಯಲ್ಲೇ ತಮ್ಮ ಕಾಲುಗಳನ್ನು ಯಾರೋ ಮಸಾಜ್ ಮಾಡುತ್ತಿರುವಂತೆ ಅನ್ನಿಸುತ್ತಿತ್ತು ನೇಹಾಗೆ. ಎದ್ದು ನೋಡಿದರೆ ಕಾಲ ಪಕ್ಕ ಇದ್ದದ್ದು ಅಮ್ಮ. ಮಗಳ ಸಿದ್ದಾಂತದ ಬಗ್ಗೆ ಒಲವಿಲ್ಲದ, ಮಗಳ ರಾಜಕೀಯ ನಡೆಯ ಬಗ್ಗೆ ಸಹಮತವಿಲ್ಲದ ಅಮ್ಮ. ತಾನು ಪ್ರತಿಭಟನೆಗೆಂದು ಹೊರಟು ನಿಂತಾಗ, ಹೋಗದಂತೆ ತಡೆದು ನಿಲ್ಲಿಸಿದ ಅಮ್ಮ. ಆ ದಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಮೀರಿ ದೂರದ ಬರೇಲಿಯಿಂದ ದೆಹಲಿಯ ಜಂತರ್ ಮಂತರ್‌ಗೆ ದೌಡಾಯಿಸಿದ್ದರು, ಆ ಕ್ಷಣ ಅವರ ಮಡಿಲಲ್ಲಿದುದು ದೇಶದ ರಾಜಕೀಯವಲ್ಲ, ದೇಶದ ಭವಿಷ್ಯವಲ್ಲ, ದೇಶದ ಹೋಪ್ ಅಲ್ಲ, ಕೇವಲ ಬಳಲಿದ ಮಗಳ ಶರೀರ.

ನೇಹಾ ಬೋರಾ ಎನ್ನುವ ಭರವಸೆಯ ಬೆಳಕ ಬಗ್ಗೆ ವಿವರಿಸಲು ಇದೊಂದು ದೃಶ್ಯ ಸಾಕು, ಅವರ ಇಡೀ ಕಥೆಯನ್ನು ಎದೆಯೊಳಗಿಳಿಸಿಕೊಳ್ಳಲು ಇದೊಂದು ಸಣ್ಣ ಘಟನೆ ಸಾಕು. ನೇಹಾ ಅವರ ಹುಟ್ಟು, ಬೆಳವಣಿಗೆ ಮತ್ತು ಅವರೀಗ ಆರಿಸಿಕೊಂಡಿರುವ ದಾರಿ, ಯಾವುದನ್ನೂ ಸರಳ ರೇಖೆಯಲ್ಲಿಟ್ಟು ನೋಡಲು ಸಾಧ್ಯವೇ ಇಲ್ಲ.

ನೇಹಾ ಬೆಳೆದದ್ದು ಸೇನಾ ಕುಟುಂಬದಲ್ಲಿ. ತಂದೆಯ ಉದ್ಯೋಗದ ಕಾರಣ ಬಾಲ್ಯದಲ್ಲಿ ಊರಿಂದೂರಿಗೆ ವರ್ಗಾವಣೆಯಾಗು ತ್ತಿದ್ದರಿಂದ ಬಾಲ್ಯ ಒಂದು ಊರಿನಲ್ಲಿ ನೆಲೆನಿಲ್ಲಲಿಲ್ಲ. ಉತ್ತರಾಖಂಡದ ಖತೀಮಾದಲ್ಲಿ ಅವರು ಹುಟ್ಟಿದ್ದು, ಅವರ ಬಾಲ್ಯದ ನೆನಪುಗಳೊಂದಿಗೆ ಬೆಸೆದುಕೊಂಡಿರುವುದೂ ಬಹುತೇಕ ಇದೇ ಊರು. ಅವರ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಗೃಹಿಣಿ. ಕುಟುಂಬ ಬಿಜೆಪಿ ಬೆಂಬಲಿಸುವ ಕುಟುಂಬವೆಂದು ಸ್ವತಃ ನೇಹಾ ಮಾಧ್ಯಮ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ರಾಜಕೀಯ ವಿಚಾರಗಳಲ್ಲಿ ತಮ್ಮ ಮತ್ತು ಕುಟುಂಬದವರ ನಿಲುವುಗಳು ಭಿನ್ನವಾಗಿವೆ ಎಂಬುದನ್ನೂ ಅವರು ಮುಚ್ಚಿಟ್ಟಿಲ್ಲ. ಏಕೆಂದರೆ ಅವರ ರಾಜಕೀಯ ಆಸಕ್ತಿಯನ್ನು ಬದಲಾಯಿಸಿದ್ದು, ಪರಿಪಕ್ವ ಗೊಳಿಸಿದ್ದು ಓದು ಮತ್ತು ರಂಗಭೂಮಿ.

ಅವರ ಬಾಲ್ಯದ ಬಹುಭಾಗವು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಳೆಯಿತು; ಅಲ್ಲಿ ಅವರು ‘ದೆಹಲಿ ಪಬ್ಲಿಕ್ ಸ್ಕೂಲ್ ’ನಲ್ಲಿ ವಿದ್ಯಾಭ್ಯಾಸ ಮಾಡಿದರು. ತಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದ ಆ ದಿನಗಳಲ್ಲಿಯೇ ಅವರಿಗೆ ಕಲೆ, ಸಾರ್ವಜನಿಕ ಭಾಷಣ ಹಾಗೂ ನ್ಯಾಯ ಮತ್ತು ಸಮಾನತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತೀವ್ರ ಆಸಕ್ತಿ ಮೂಡಿತು.

ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ದಿನಗಳಲ್ಲಿ ನೇಹಾ ರಂಗಭೂಮಿಯತ್ತ ಆಕರ್ಷಿತರಾದರು. ಸಾಮಾಜಿಕ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದ ರಂಗಭೂಮಿ ತಂಡದೊಂದಿಗೆ ಅವರು ತೊಡಗಿಸಿಕೊಂಡರು. ಬೀದಿ ನಾಟಕಗಳಲ್ಲಿ ತೊಡಗಿಸಿಕೊಂಡಂತೆ ಅವರಿಗೆ ಜನಜೀವನದ ನಿಜದ ಕಷ್ಟಗಳು ಅರ್ಥವಾಗಲು ಪ್ರಾರಂಭವಾದವು. ನಾಟಕದಲ್ಲಿ ಒಂದು ಪಾತ್ರವನ್ನು ನಿರ್ವಹಿಸುವುದಕ್ಕೂ ಆ ಪಾತ್ರದ ಹಿಂದಿನ ಸಾಮಾಜಿಕ ಆಯಾಮವನ್ನು ಗುರುತಿಸುವುದಕ್ಕೂ ನಡುವೆ ವ್ಯತ್ಯಾಸವಿದೆ. ಅದನ್ನು ಗುರುತಿಸಬೇಕೆಂದರೆ ಸಣ್ಣದೊಂದು ಜೀವ ಪ್ರಜ್ಞೆ, ಸೂಕ್ಷ್ಮತೆ ಬೇಕು. ನೇಹಾಗೆ ಅದಿತ್ತು. ಹಾಗಾಗಿ ಅವರ ಆಸಕ್ತಿ ರಂಗ ಚಟುವಟಿಕೆಗಳನ್ನೂ ಮೀರಿ ಜನರ ನಿಜದ ಬದುಕಿನತ್ತ ಹೊರಳಿಕೊಂಡಿತು. ಸಮಾಜದಲ್ಲಿ ನಡೆಯುವ ಸಂಗತಿಗಳನ್ನು ಹಾಗೆಯೇ ಒಪ್ಪಿಕೊಳ್ಳುವುದಕ್ಕಿಂತ ಅವುಗಳ ಹಿನ್ನೆಲೆಯನ್ನು ಹುಡುಕುವ ಅಭ್ಯಾಸ ಬೆಳೆಯಿತು. ಬೆಂಗಾಲ್‌ನಲ್ಲಿ ಕಳೆದ ಸಮಯದಲ್ಲಿ ಚಾರು ಮಜುಂದಾರ್, ಪಾಬ್ಲೊ ನೆರುದಾ ಮತ್ತು ಅರುಂಧತಿ ರಾಯ್‌ಅವರ ಬರಹಗಳನ್ನು ಓದಿರುವುದಾಗಿ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಬರಹಗಾರರ ವಿಚಾರಧಾರೆಗಳು ವಿಭಿನ್ನವಾದರೂ, ಅವರ ಕೃತಿಗಳು ಅಧಿಕಾರ, ಅಸಮಾನತೆ, ಪ್ರತಿರೋಧ ಮತ್ತು ಮನುಷ್ಯನ ಸ್ವಾತಂತ್ರ್ಯದಂತಹ ಪ್ರಶ್ನೆಗಳನ್ನು ಎತ್ತುತ್ತವೆ. ಇದೂ ನೇಹಾ ಅವರ ಬದುಕಿನ ಮೇಲೆ ಪ್ರಭಾವ ಬೀರಿದವು.

ನೇಹಾ ಬೋರಾ ಅವರ ಸಾಮಾಜಿಕ ಚಟುವಟಿಕೆಗಳ ಪಯಣ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿದ್ದ ದಿನಗಳಲ್ಲಿ ನಿಧಾನವಾಗಿ ಆರಂಭವಾಗಿತ್ತು. ಆರಂಭದಲ್ಲೇ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಬದಲು, ಸಹಪಾಠಿಗಳು ಆಯೋಜಿಸುತ್ತಿದ್ದ ಸಭೆಗಳಲ್ಲಿ ಭಾಗವಹಿಸುವುದು, ಲೇಖನಗಳನ್ನು ಬರೆಯುವುದು ಮತ್ತು ಸಣ್ಣ ಸಭೆಗಳಲ್ಲಿ ತನ್ನ ವಿಚಾರಗಳನ್ನು ಹಂಚಿಕೊಳ್ಳುವುದರ ಮೂಲಕ ಅವರು ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿ ಕೊಳ್ಳತೊಡಗಿದರು. ಶಿಕ್ಷಣದ ಖಾಸಗೀಕರಣ, ಗುಂಪು ಹಲ್ಲೆಯ ಘಟನೆಗಳು ಮತ್ತು ಸಾಮಾಜಿಕ ನ್ಯಾಯದಂತಹ ಪ್ರಶ್ನೆಗಳು ಅವರ ಆರಂಭಿಕ ಆಸಕ್ತಿಯ ವಿಷಯಗಳಾಗಿದ್ದವು.

ಈ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಂತೆ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA)ಯೊಳಗೆ ಅವರ ಗುರುತಿಸುವಿಕೆ ಹೆಚ್ಚಾಯಿತು. ನಾಯಕತ್ವ ವೆಂದರೆ ಮೇಲಿನಿಂದ ಸೂಚನೆಗಳನ್ನು ನೀಡುವುದಲ್ಲ, ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಿ ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದೆಂಬ ನಂಬಿಕೆ ಅವರಿಗಿತ್ತು.

ವಿಶೇಷವಾಗಿ, ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಪ್ರವೇಶಿಸುತ್ತಿದ್ದ ವಿದ್ಯಾರ್ಥಿಗಳು ಕೇವಲ ಹಿರಿಯರ ಸೂಚನೆಗಳನ್ನು ಪಾಲಿಸುವವರಾಗಿ ಉಳಿಯದೆ, ಸಂಘಟನೆಯ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಪ್ರೋತ್ಸಾಹಿಸುತ್ತಿದ್ದರು. ವಿದ್ಯಾರ್ಥಿಗಳ ನಡುವೆ ಬೆಳೆದ ಈ ಸಹ ಭಾಗಿತ್ವದ ವಿಧಾನವು, ಅವರ ಸಹಪಾಠಿಗಳ ವಿಶ್ವಾಸಗಳಿಸಲು ನೆರವಾಯಿತು.

೨೦೨೬ರಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳು ನೇಹಾ ಅವರನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚು ಪರಿಚಿತ ಮುಖವನ್ನಾಗಿ ಮಾಡಿದವು. ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳ ಕುರಿತು ವಿದ್ಯಾರ್ಥಿಗಳಲ್ಲಿ ವ್ಯಕ್ತವಾಗಿದ್ದ ಅಸಮಾಧಾನ ಈ ಹೋರಾಟದ ಪ್ರಮುಖ ವಿಷಯವಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವರ್ಷಗಟ್ಟಲೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವಿಶ್ವಾಸಾರ್ಹತೆ ಕೇವಲ ಆಡಳಿತಾತ್ಮಕ ವಿಚಾರ ಮಾತ್ರವಾಗಿರುವುದಿಲ್ಲ, ಅದು ಅವರ ಸಮಯ, ಹಣ, ಕುಟುಂಬದ ನಿರೀಕ್ಷೆ ಮತ್ತು ಭವಿಷ್ಯದ ಪ್ರಶ್ನೆಯೂ ಆಗಿರುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ನೇಹಾ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಹೋರಾಟದಲ್ಲಿ ಅಭಿಜಿತ್ ದೀಪ್ಕೆ, ಸೋನಂ ವಾಂಗ್‌ಚುಕ್ ಮತ್ತು ಇತರ ವಿದ್ಯಾರ್ಥಿ ಕಾರ್ಯಕರ್ತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಿದರು. ೨೩  ದಿನಗಳ ಕಾಲ ಮುಂದುವರಿದ ಈ ಉಪವಾಸವು ಶಿಕ್ಷಣ ವ್ಯವಸ್ಥೆಯ ಹೊಣೆಗಾರಿಕೆ, ಪರೀಕ್ಷೆಗಳ ವಿಶ್ವಾಸಾರ್ಹತೆ ಮತ್ತು ವಿದ್ಯಾರ್ಥಿಗಳ ಬೇಡಿಕೆಗಳ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದಂತೆಯೇ ನೇಹಾ ಅವರ ಬದುಕು, ಕುಟುಂಬ, ಅದರೊಳಗಿನ ಭಿನ್ನಾಭಿಪ್ರಾಯದ ನಡುವೆಯೂ ಬೆಸೆದುಕೊಂಡಿರುವ ಆಪ್ತತೆಯನ್ನು ದೇಶದ ಮುಂದಿಟ್ಟಿತು.

ಪ್ರತಿಭಟನೆಯ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಬಿತ್ತರಗೊಳ್ಳುವ ಚಿತ್ರ, ಘೋಷಣೆ, ವಿಡಿಯೋಗಳದ್ದು ಒಂದು ಮುಖವಾದರೆ, ದೈಹಿಕ ನೋವು, ಮತ್ತೆ ಸಾಮಾನ್ಯ ಬದುಕಿಗೆ ಮರಳುವಲ್ಲಿ ಎದುರಿಸುವ ಕಷ್ಟಗಳದು ಇನ್ನೊಂದು ಮುಖವಿರುತ್ತದೆ. ಅಲ್ಲಿ ಜರ್ಜರಿತ ದೇಹ, ಮನೆಯವರ ಆತಂಕ, ಸಾಮಾನ್ಯ ಬದುಕಿನ ಮೇಲೆ ಬೀಳುವ ಒತ್ತಡ ಎಲ್ಲವೂ ಇರುತ್ತದೆ. ನೇಹಾರ ಅಮ್ಮ ಬರೇಲಿಯಿಂದ ಜಂತರ್‌ಮಂತರ್‌ಗೆ ಓಡಿ ಬಂದದ್ದು, ಮಗಳನ್ನು ಮಡಿಲಿಗೆಳೆದುಕೊಂಡದ್ದು ಆ ಇನ್ನೊಂದು ಮುಖದ ಕೆಲ ಅಪೂರ್ವ ಕ್ಷಣಗಳಲ್ಲಿ ಒಂದು. ಮರುದಿನ ಪ್ರತಿಭಟನೆ ಮುಂದುವರಿದಿತ್ತು. ನೇಹಾ ಅವರ ಅಮ್ಮನ ಕಣ್ಣುಮುಂದೆಯೇ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆಯಿತು. ಗಾಯಗೊಂಡ ವಿದ್ಯಾರ್ಥಿಗಳು ಪ್ರತಿಭಟನಾ ಸ್ಥಳಕ್ಕೆ ಮತ್ತೆ ಮರಳುವುದನ್ನು ಅಮ್ಮ ಕಣ್ಣಾರೆ ಕಂಡರು. ಆ ಅನುಭವದ ನಂತರ ತಾಯಿಯ ದೃಷ್ಟಿಕೋನದಲ್ಲಿ ಬದಲಾವಣೆ ಕಂಡುಬಂದಿತು ಎಂದು ಸ್ವತಃ ನೇಹಾ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ನಂತರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದಾಗ, ತಾಯಿ ನೇಹಾ ಅವರಿಗೆ ಕರೆ ಮಾಡಿ ಅವರ ಸಹಚರರಿಗೆ ಅಭಿನಂದನೆ ತಿಳಿಸುವಂತೆ ಹೇಳಿದ್ದರು ಎಂಬ ಸಂಗತಿಯನ್ನೂ ನೇಹಾ ಹಂಚಿಕೊಂಡಿದ್ದಾರೆ. ಹಾಗಂತ ಅವರ ಅಮ್ಮನ, ಅಪ್ಪನ, ಕುಟುಂಬದ ರಾಜಕೀಯ ನಿಲುವು ಬದಲಾಯಿತೇ?

ಊಹೂಂ, ಅದು ಪ್ರಶ್ನೆಯೇ ಅಲ್ಲ. ಜಂತರ್ ಮಂತರ್‌ನಲ್ಲಿ ಅಮ್ಮ ಮಗಳನ್ನು ಮಡಿಲಿಗೆಳೆದುಕೊಂಡು ಲಾಲಿಸಿದ್ದು ಅದರ ಸಾಕ್ಷಿಯೂ ಅಲ್ಲ, ಆದರೆ ಎಲ್ಲಾ ಆಯಾಮಗಳಾಚೆಯೂ, ಭಿನ್ನಾಭಿ ಪ್ರಾಯಗಳಾಚೆಯೂ ಒಬ್ಬರ ಬದುಕಿನಲ್ಲಿ ಇನ್ನೊಬ್ಬರು ಆಸರೆಯಾಗಬಹುದು, ಉಳಿದುಕೊಳ್ಳ ಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಘಟನೆ ಹಲವು ಕಾಲ ಜನಮಾನಸದಲ್ಲಿ ನಿಲ್ಲುತ್ತದೆ.

ಆಂದೋಲನ ಡೆಸ್ಕ್

Recent Posts

ಜೆನ್ ಝೀ ಶಕ್ತಿಗೆ ಹೆದರಿದ ಕೇಂದ್ರದ ಎನ್‌ಡಿಎ ಸರ್ಕಾರ

ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಜನರು ಮತ್ತು ಯುವಕರು ದಿಕ್ಕೆಟ್ಟ ಆಡಳಿತದ ವಿರುದ್ಧ ಸಿಡಿದು ಬೀದಿಗಿಳಿದಿದ್ದಾರೆ…

2 mins ago

ಮತ್ತೆ ಹುಯ್ಯುತ್ತಿರುವ ಪ್ರತಿಭಟನೆಯ ಸುರಿಮಳೆ

ಕೆ.ನೀಲಾ ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು.…

40 mins ago

ಪೆಟ್ರೋಲ್ ಬಂಕ್‌ನಲ್ಲಿ ನಿರ್ಮಾಣವಾದ ಮಿನಿ ಕೆರೆ!

ಮಂಜು ಕೋಟೆ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವ್ಯವಸ್ಥೆ ಎಂದು ಸಾರ್ವಜನಿಕರ ಆಕ್ರೋಶ  ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬರ…

1 hour ago

ಜಿಪಂ, ತಾಪಂ ಕರಡು ಮೀಸಲಾತಿ ಪ್ರಕಟ; ಗರಿಗೆದರಿದ ರಾಜಕೀಯ

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ಚುನಾವಣಾ ಕಾವು ತೀವ್ರ ಕೆ.ಆರ್.ನಗರ: ರಾಜ್ಯ ಸರ್ಕಾರವು ಜಿಪಂ, ತಾಪಂ ಕ್ಷೇತ್ರಗಳ…

1 hour ago

ಈ ಬಾರಿ ಅಂಬಾರಿ ಹೊರುವ ಸಾರಥಿ ಯಾರು.?

ಚಿರಂಜೀವಿ ಸಿ.ಹುಲ್ಲಹಳ್ಳಿ ಮಹೇಂದ್ರ ಆನೆ ಹೊರಬಿದ್ದ ಬಳಿಕ ಸ್ಪರ್ಧೆ ಜೋರು: ಪ್ರಶಾಂತ್‌, ಧನಂಜಯ, ಸುಗ್ರೀವ, ಏಕಲವ್ಯ ನಡುವೆ ಪೈಪೋಟಿ ಭಾನುವಾರ…

1 hour ago

ಇಂದಿನಿಂದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭ

ನವೀನ್ ಡಿಸೋಜ ಮಡಿಕೇರಿ ದಸರಾಕ್ಕೆ ಕರಗಗಳೇ ಮುನ್ನುಡಿ ವಿಜಯದಶಮಿವರೆಗೆ ಮನೆಮನೆಗೆ ತೆರಳಿ ಆಶೀರ್ವಚನ ನೀಡುವ ಪರಂಪರೆ ಮಡಿಕೇರಿ: ಐತಿಹಾಸಿಕ ಮಡಿಕೇರಿ…

2 hours ago