ಸಾವಿರಾರು ವರ್ಷಗಳ ಹಿಂದೆ, ಮೂಲ ಮಾನವನ ಉಗಮ ಸ್ಥಾನವಾದ ಆಫ್ರಿಕಾವನ್ನು ಬಿಟ್ಟು ಆದಿಮಾನವರ ಕೆಲವು ಗುಂಪುಗಳು ಹೊಸ ದಿಗಂತವನ್ನು ಅರಸುತ್ತಾ ಹೊರಟಿರಬಹುದು. ಅವರುಗಳ ಸಂಖ್ಯೆ ಕಡಿಮೆ ಇದ್ದು , ಅವರ ಆಯುಧಗಳು ಮತ್ತು ಹತಾರುಗಳು ಅಂತಹ ಪರಿಣಾಮಕಾರಿಯಾಗಿಲ್ಲವಾದ್ದರಿಂದ ಹಾಗೂ ಅವರು ಎದುರಿಸುತ್ತಿದ್ದ ಪ್ರಾಣಿಗಳ ಹಲ್ಲುಗಳು ಮತ್ತು ಉಗುರುಗಳು ಹೆಚ್ಚು ಬಲಯುತವಾದ್ದರಿಂದ ಅವರು ಬದುಕಿದ್ದೆ ಹೆಚ್ಚು ಎನ್ನಬಹುದು.
ಕಾಲಾನಂತರದಲ್ಲಿ ಹೇಗೋ ಬದುಕುಳಿಯುವ ಕಲೆ ಸಿದ್ಧಿಸಿಕೊಂಡು ಬೆಂಕಿಯನ್ನು ಕಾಪಾಡಿಕೊಳ್ಳುವ ರಹಸ್ಯವನ್ನು ತಿಳಿದಿದ್ದ (ಅಗ್ನಿಯನ್ನು ಆರಂಭಿಸುವ ಬಗ್ಗೆ ತಿಳಿವಳಿಕೆ ಇರಲಿಲ್ಲ. ) ಆದಿಮಾನವರು, ತಂಗಲು ಮತ್ತು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಪ್ರಶಸ್ತ ಸ್ಥಳಗಳನ್ನು ಹುಡುಕಿದ್ದಾರೆ. ಕನಿಷ್ಠ ತಲೆಮೇಲೊಂದು ನೆರಳನ್ನು ಸೃಷ್ಟಿಸಿ ಕೊಳ್ಳುವ ಜ್ಞಾನ ಇರದ ಕಾರಣ ಅವರು ಗುಹೆಗಳಲ್ಲಿ ಅಥವಾ ಮರದ ಕೊಂಬೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಆಫ್ರಿಕಾವನ್ನು ಬಿಟ್ಟು ಹೊರಟ ಈ ಮನುಜರಿಗೆ ಮೊಟ್ಟಮೊದಲ ಮಾನವ ನಿರ್ಮಿತ ಬೆಂಕಿಯ ರಹಸ್ಯವಿನ್ನೂ ತಿಳಿದಿರಲಿಲ್ಲ.
ಸಾವಿರಾರು ವರ್ಷಗಳು ಕಳೆದಿರಬಹುದೇನೊ, ಅದೇನೆ ಇದ್ದರೂ ಮಾನವ ಇತಿಹಾಸದಲ್ಲೇ ಅತ್ಯಂತ ಮುಖ್ಯ ಮೈಲಿಗಲ್ಲಾದ ಬೆಂಕಿ ಅವನ ಜೀವನಕ್ರಮ ವನ್ನು ಬದಲಿಸಿ, ಕಗ್ಗತ್ತಲ ಚರಿತ್ರೆಯ ಮೇಲೆ ಬೆಳಕು ಚೆಲ್ಲಲು ಕಾರಣವಾಗಿದೆ. ಹಾಗಾಗಿ ಮಾನವ ಇತಿಹಾಸವೆ ಒಂದು ಕುತೂಹಲ ಮತ್ತು ಬಹಳ ವಿಸ್ತಾರವಾದ ವಿಷಯ.
ನಾನಿಲ್ಲಿ ಹೇಳಹೊರಟಿರುವುದು ಅಗ್ನಿ ಭೂಮಿ ಎಂದೇ ಕರೆಸಿಕೊಳ್ಳುವ ಅಜ಼ರ್‌ಬೈಜಾನಿನ ಗೊಬುಸ್ತಾನ್ ಎಂಬ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಬರಿ ಬಂಡೆಗಳಿಂದ ತುಂಬಿದ ಬೆಟ್ಟದ ಮೇಲೆ ಆದಿಮಾನವರು ನೆಲೆಸಿದ್ದಾಗ, ಮನೆಯೆಂಬ ಕಲ್ಪನೆಯೂ ಇರದ ಇವರು ಬೇಟೆಯಾಡುವುದು ಅಥವಾ ಸಂಗ್ರಹಿಸಿದ ಹಣ್ಣುಗಳು, ಗಿಡ, ಗೆಡ್ಡೆಗಳಿಂದ ಜೀವನ ನಡೆಸುತ್ತಿದ್ದ ಕಾಲದಲ್ಲಿ ಅವರ ಸಾಮಾಜಿಕ ಜೀವನದ ಚಿತ್ರಣಗಳನ್ನು ಕಲ್ಲು ಬಂಡೆಗಳ ಮೇಲೆ ಕೆತ್ತಿದ್ದಾರೆ.
ಪೆಟ್ರೊಗ್ಲಿ-ಗಳೆಂದು ಕರೆಸಿಕೊಳ್ಳುವ ಈ ಬಂಡೆಗಳ ಮೇಲೆ ಕೊರೆದಿರುವ ಚಿತ್ರಗಳು ನಿಜಕ್ಕೂ ಅತ್ಯದ್ಭುತ ಮತ್ತು ಮಾನವ ಇತಿಹಾಸ ಪುಟಗಳಲ್ಲಿ ಅತ್ಯಂತ ಕಲಾತ್ಮಕ ಕೆತ್ತನೆಗಳು. ಅಜ಼ರ್ ಬೈಜಾನಿನ ರಾಜಧಾನಿ ಬಾಕು ಕ್ಯಾಸ್ಪಿಯನ್ ಕಡಲ ತೀರದಲ್ಲಿದೆ. ಕ್ಯಾಸ್ಪಿಯನ್ ಸಮುದ್ರ ಅಥವಾ ಕ್ಯಾಸ್ಪಿಯನ್ ಸರೋವರವೆಂದು ಕರೆಸಿಕೊಳ್ಳುವ ಈ ಒಳನಾಡಿನ ಸಮುದ್ರವನ್ನು ಸುತ್ತುವರಿದ ರಾಷ್ಟ್ರಗಳೆಂದರೆ ಪೂರ್ವದಲ್ಲಿ ಟುರ್ಕಮೆನಿಸ್ತಾನ್, ದಕ್ಷಿಣ ಮತ್ತು ಪಶ್ಚಿಮದಲ್ಲಿ ಅಜ಼ರ್ ಬೈಜಾನ್ ಹಾಗೂ ಇರಾನ್ ದೇಶಗಳು ಮತ್ತು ಉತ್ತರದಲ್ಲಿ ಕಜಕಸ್ಥಾನ್ ಹಾಗೂ ರಷ್ಯಾ ದೇಶದ ಭೂ ಭಾಗವಿದೆ.
ತೈಲ ಸಂಪದ್ಭರಿತ ದೇಶವಾದ ಅಜ಼ರ್ ಬೈಜಾನಿನ ರಾಜಧಾನಿ ಬಾಕುವಿನ ಸುತ್ತಮುತ್ತಲೂ ಏತ ನೀರಾವರಿಯ ಬಾವಿಗಳಂತೆ ಮೊಗೆಯುತ್ತಿದ್ದ ತೈಲವನ್ನು ರಿಗ್ಗಿಂಗ್ ಯಂತ್ರಗಳು ಎಡಬಿಡದೆ ತೈಲವನ್ನು ಭೂಗರ್ಭದಿಂದ ಕೊಳವೆಗಳ ಮೂಲಕ ಸಂಗ್ರಹಾಗಾರ ಸೇರಿಸುತ್ತಿದ್ದವು. ಇದನ್ನು ನೋಡಿದಾಗ ನನಗನ್ನಿಸಿದ್ದು ಇವರು ನೀರಿಗೆಂದು ಬಾವಿ ತೋಡಿದರೆ ತೈಲ ಉಕ್ಕುವುದೇನೋ ಎಂದು. ಬಾಕುವಿನಿಂದ ದಕ್ಷಿಣಕ್ಕೆ ೬೦ ಕಿ. ಮೀ. ದೂರದಲ್ಲಿ ಅಬ್‌ಶೆರಾನ್ ಎಂಬ ಪರ್ಯಾಯ ದ್ವೀಪದ ಭಾಗದಲ್ಲಿ ಗೊಬುಸ್ತಾನ್ ನ್ಯಾಷನಲ್ ಹಿಸ್ಟಾರಿಕಲ್ ಮತ್ತು ಆರ್ಟಿಸ್ಟಿಕ್ ರಿಸರ್ವ್ ಇದೆ.
ಇಲ್ಲಿರುವ ಬಂಡೆಗಳ ಬೆಟ್ಟದಲ್ಲಿ ಕೆತ್ತಿರುವ ಚಿತ್ರಗಳು ಪ್ರಪಂಚದ ಯಾವ ಬಂಡೆ ಚಿತ್ರಗಳು ಹೇಳಲಾರದಷ್ಟು ಮಾನವ ಇತಿಹಾಸವನ್ನು ವಿವರಿಸುತ್ತವೆ. ಹಾಗಾಗಿ ಇದನ್ನು ೨೦೦೭ರಲ್ಲಿ ಯುನೆಸ್ಕೊ ಸಂಸ್ಥೆಯು ಗೊಬುಸ್ತಾನ್ ಪ್ರದೇಶವನ್ನು ಪ್ರಪಂಚದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಿ ರಕ್ಷಿಸಲ್ಪಟ್ಟಿದೆ, ೪೦೦೦ ಹೆಕ್ಟೇರಿನಷ್ಟು ವಿಸ್ತಾರವಿರುವ ಈ ಪ್ರದೇಶದಲ್ಲಿ ಪುರಾತತ್ವ ಶಾಸ್ತ್ರಜ್ಞರು ಸುಮಾರು ೬,೦೦೦ದಷ್ಟು ಬಂಡೆ ಚಿತ್ರಗಳನ್ನು, ಸಮಾಽಗಳನ್ನು, ಆದಿಮಾನವರು ನೆಲೆಸಿದ್ದ ಸ್ಥಳಗಳು, ವಾಸಿಸುತ್ತಿದ್ದ ಗುಹೆಗಳನ್ನು ಗುರುತಿಸಿದ್ದಾರೆ. ಈ ಚಿತ್ರಗಳಲ್ಲಿ ಆದಿಮಾನವರು ಬೇಟೆಯಾಡುತ್ತಿದ್ದ, ಆಯುಧಗಳನ್ನು ಉಪಯೋಗಿಸಿ ಹೊಡೆದಾಡುತ್ತಿದ್ದ, ವ್ಯವಸಾಯದ, ಮೀನು ಹಿಡಿಯುತ್ತಿರುವ ಚಿತ್ರಗಳು ಹಾಗೂ ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು, ಹಾವುಗಳು, ಮೀನುಗಳು, ಕ್ರಿಮಿಕೀಟಗಳು ಮತ್ತು ದೋಣಿಗಳು ಹೀಗೆ ಹತ್ತು ಹಲವು ಚಿನ್ಹೆಗಳಿವೆ. ಈ ಕೆತ್ತನೆಗಳು ಅತ್ಯಂತ ಕಲಾತ್ಮಕವಾಗಿದ್ದು ಗೊಬುಸ್ತಾನ ಒಂದು ಹೊರಾಂಗಣ ವಸ್ತು ಸಂಗ್ರಹಾಲಯವೆಂದೇ ಕರೆಯಬಹುದು.
ಗೊಬುಸ್ತಾನವನ್ನು ಕುರಿತ ಸಂಶೋಧನೆಗಳಿಲ್ಲದಿದ್ದರೆ ಮಾನವನ ಇತಿಹಾಸವನ್ನು ಊಹಿಸಲೂ ಅಸಾಧ್ಯವೆಂದೇ ಹೇಳಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಷ್ಟರಮಟ್ಟಿಗೆ ಗೊಬುಸ್ತಾನ್‌ನಲ್ಲಿನ ಸಂಶೋಧನೆಗಳು ಕಾಕಸಸ್, ಮೆಸಪೊಟೇಮಿಯ ಹಾಗೂ ಏಷ್ಯಾ ಮೈನರ್‌ನ ಮಧ್ಯಯುಗದ ಜನರ ಜೀವನ ಚಿತ್ರಣಗಳನ್ನು ಕಟ್ಟಿಕೊಡುತ್ತದೆ. ಸುಣ್ಣದಕಲ್ಲಿನ ಪ್ರಭೇದಕ್ಕೆ ಸೇರಿದ ಗೊಬುಸ್ತಾನಿನ ಈ ಬಂಡೆಗಳು ಸುಮಾರು ೮,೦೦,೦೦೦ ವರ್ಷಗಳ ಹಿಂದೆ ಟೆತಿಸ್ ಮಹಾಸಾಗರ ಕುಗ್ಗುವಾಗ ಮೇಲೆದ್ದು ಬಂಡೆಗಳ ಸಮುದ್ರವನ್ನು ಸೃಷ್ಟಿಸಿದ ಈ ಕಲ್ಲುಬಂಡೆಗಳು ಗಾಳಿ ಮಳೆ ಮತ್ತು ಶಾಖದಿಂದ ರಕ್ಷಣೆ ಕೊಟ್ಟಿರುವುದರಿಂದ ಮರಗಿಡಗಳು, ಪೊದೆಗಳು ಹುಲ್ಲುಗಳಿಂದ ಸಮೃದ್ಧಿಯಾಗಿದೆ ಹೀಗಾಗಿ ಸಸ್ಯಾಹಾರಿ ಪ್ರಾಣಿಗಳು ಹಾಗೂ ಮಾಂಸಾಹಾರಿ ಪ್ರಾಣಿಗಳು ಇಲ್ಲಿ ಆಶ್ರಯವನ್ನು ಪಡೆದಿವೆ. ಸತತವಾಗಿ ಆಹಾರದ ಅನ್ವೇಷಣೆಯಲ್ಲಿ ತೊಡಗಿದ ಆ ಕಾಲದ ಮಾನವರಿಗೆ ಇದು ಅತ್ಯಂತ ವಿಪುಲ ಅವಕಾಶಗಳಿಂದ ತುಂಬಿದ ಪ್ರದೇಶದಂತೆ ಕಂಡುಬಂದರೂ ಬೇಟೆಗಾರ ಪ್ರಾಣಿಗಳಿಂದ ತುಂಬಿದ ಈ ಸ್ಥಳ ಅತ್ಯಂತ ಸವಾಲಿನ ಪ್ರದೇಶವಾಗಿದೆ.
ಅವುಗಳ ಜೊತೆ ಘರ್ಷಣೆಯಲ್ಲಿ ತನ್ನ ಆಽಪತ್ಯ ಸ್ಥಾಪಿಸಿ, ನೆಲೆಸಿದ್ದ. ಈ ಕಾಲದಲ್ಲಿ ಅಬ್‌ಶೆರಾನ್ ಭಾಗದಲ್ಲಿದ್ದ ಪ್ರಾಣಿಗಳು ಹೇಗಿತ್ತೆಂಬುದು ಬಂಡೆಗಳ ಮೇಲೆ ಚಿತ್ರಣವಾಗಿದೆ. ವಿಜ್ಞಾನಿಗಳು ಸುಮಾರು ೨೨ ಪ್ರಾಣಿಗಳು ಮೀನು, ಸರೀಸೃಪಗಳು ಹಾಗೂ ಹಕ್ಕಿಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಬೇಜೂರ್ ಆಡುಗಳು, ಕಾಡೆಮ್ಮೆ, ಕುದುರೆ, ಜಿಂಕೆ, ಕಾಡು ಹಂದಿ, ಕುರಿ, ಸಿಂಹ, ಚಿರತೆ, ಹುಲಿ, ಚೀತಾ, ನರಿ, ತೋಳ, ಕರಡಿ, ಹೈನಾ, ನಾಯಿ ಬೆಕ್ಕುಗಳು ಇವೆ. ಚಿಕ್ಕ ಪ್ರಾಣಿಗಳಲ್ಲಿ ಮೊಲಗಳು ಮಾತ್ರ ಇದೆ. ಹಕ್ಕಿಗಳಲ್ಲಿ ಫಾಲ್ಕನ್, ಗೂಸ್ ಹಾಗೂ ಹಾಕ್ ಜಾತಿಯನ್ನು ಗುರುತಿಸಿದ್ದಾರೆ.
ಹಲವು ಬಗೆಯ ಹಾವುಗಳ ಚಿತ್ರಗಳಿವೆ. (ಗುರುತಿಸಲಸಾಧ್ಯ) ಕೆಲವು ಬಗೆಯ ಮೀನುಗಳು… ಹೀಗೆ ಅವರ ಜೀವನಕ್ಕೆ ಸಂಬಂಽಸಿದ ಆಸಕ್ತಿ ಹುಟ್ಟಿಸಿರುವ ಪ್ರಭೇದಗಳನ್ನು ಚಿತ್ರಿಸಿದ್ದಾರೆ. ದೋಣಿಗಳು, ಸಮೂಹ ನೃತ್ಯ ಇವೆಲ್ಲವೂ ಅಂದಿನ ಜೀವನ ಕ್ರಮವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಮಾನವನ ಇತಿಹಾಸ ತಿಳಿಸುವ ಈ ಗೊಬುಸ್ತಾನ್ ಅಲ್ಲದೆ ಅಜ಼ರ್ ಬೈಜಾನಿನ ಅನೇಕ ಆಸಕ್ತಿದಾಯಕ ಪ್ರದೇಶಗಳಲ್ಲಿ ಯನಾರ್‌ದಾಗ್ ಅಥವಾ ಬರ್ನಿಂಗ್ ಮೌಂಟೇನ್, ಅತೆಷ್‌ಗಾಹ್ ಮತ್ತು ಕೆಸರನ್ನು ಉಕ್ಕಿಸುವ ಜ್ವಾಲಾಮುಖಿಗಳು ಸೇರಿವೆ. ತೈಲ ಮತ್ತು ಅನಿಲಗಳ ಆಗರವಾದ ಅಜ಼ರ್ ಬೈಜಾನ್ ಕಾಲಾನು ಕಾಲದಿಂದ ಬೆಂಕಿಯ ಭೂಮಿ ಎಂದೇ ಹೆಸರುವಾಸಿ.
ಬಾಕುವಿನಿಂದ ೨೫ ಕಿ. ಮೀ. ದೂರದಲ್ಲಿ ಯನಾರ್‌ದಾಗ್‌ನ ಸಣ್ಣ ಗುಡ್ಡವೊಂದರಿಂದ ಅನಿಲ ಒಸರುವ ಜಾಗಕ್ಕೆ ೬೦ ವರ್ಷಗಳ ಹಿಂದೆ ಕುರುಬನೊಬ್ಬ ಅಚಾನಕ್ಕಾಗಿ ಬೆಂಕಿ ತಗುಲಿಸಿದ್ದರಿಂದ ಅಂದು ಹತ್ತಿದ ಬೆಂಕಿ ಇಂದಿನವರೆವಿಗೂ ಅವಿರತವಾಗಿ ಉರಿಯುತ್ತಿದೆ ಎಂಬ ಪ್ರತೀತಿ. ಕೆಸರುಗುಳುವ ಮಡ್‌ವಾಲ್ಕೆನೊಗಳು ಗೊಬುಸ್ತಾನ್ ನ್ಯಾಷನಲ್ ಪಾರ್ಕ್‌ನಲ್ಲಿವೆ. ಅಲ್ಲಿಗೆ ಕರೆದೊಯ್ಯಲು ಹತ್ತಿರದಲ್ಲಿರುವ ಹಳ್ಳಿಯೊಂದರಲ್ಲಿ ರಷ್ಯನ್ ನಿರ್ಮಿತ ಲಾಡಾ ಕಾರುಗಳಲ್ಲಿ ಕರೆದೊಯ್ಯುತ್ತಾರೆ. ನೋಡಿದರೆ ಲಡಕಾಸಿ ಕಾರುಗಳಂತಿದ್ದರೂ ಪ್ರಯಾಣ ಮಾತ್ರ ಬೇರೆಯದೇ ಅನುಭವ ಕೊಡುತ್ತದೆ. ಮಡ್ ವಾಲ್ಕೆನೊಗಳೆಂಬ ಕೆಸರುಗುಳುವ ಗುಡ್ಡಗಳನ್ನು ತಲುಪಲು ೫ ಕಿ. ಮೀ. ನಷ್ಟು ವಿಶಾಲವಾದ ಕೆಸರು ಮೈದಾನವನ್ನು ದಾಟಿಸುವಾಗ ಇವರು ಓಡಿಸುವ ರೀತಿಯಿಂದ ಹೃದಯ ಬಾಯಿಗೆ ಬಂದು ಕುಳಿತಿರುತ್ತದೆ.
ಭಾರತದವರೆಂದು ನಮ್ಮನ್ನು ಖುಷಿಪಡಿಸಲು ಕಾರಿನ ಸ್ಟೀರಿಯೊಗಳಲ್ಲಿ ಹಾಕುವ ಹಿಂದಿ ಹಾಡುಗಳ ನಡುವೆ ನಮ್ಮ ಕಾರಿನ ಅಜ಼ರ್ ಬೈಜಾನ್ ಡ್ರ್ತ್ಯೈವರ್‌ಗೆ ಒಂದೇ ಒಂದು ಇಂಗ್ಲಿಷ್ ಪದಗೊತ್ತಿತ್ತು. ಟಿಪ್ಸ್ ಕೊಡಿ ಎಂದು. ಕೆಸರುಗುಳುವ ಈ ಜ್ವಾಲಾಮುಖಿಗಳಿಂದ ಕೆಲವೊಮ್ಮೆ ಸ್ಛೋಟಗಳುಂಟಾಗಿ, ಆಗ ಒಸರುವ ನೈಸರ್ಗಿಕ ಅನಿಲಕ್ಕೆ ಬೆಂಕಿ ಹತ್ತಿಕೊಳ್ಳುವ ಪ್ರಕ್ರಿಯೆಯು ಆಗಾಗ ಘಟಿಸುತ್ತವೆ. ಇನ್ನೊಂದು ನನಗೆ ಬಹಳ ಕುತೂಹಲ ಮೂಡಿಸಿದ ಪ್ರದೇಶ ವೆಂದರೆ ಅತೆಹ್‌ಗಾಹ ದೇವಸ್ಥಾನ. ಬೆಂಕಿಯನ್ನು ಆರಾಽಸುವ ಜ಼ೊರಾಷ್ಟ್ರಿ ಯನ್‌ರ ಪವಿತ್ರ ಸ್ಥಳ ಬಾಕುವಿನಿಂದ ೩೦ ಕಿಮೀ. ದೂರದಲ್ಲಿರುವ ಸುರಾ ಖಾನಿ ಎಂಬ ಹಳ್ಳಿಯಲ್ಲಿ ಈ ದೇವಸ್ಥಾನವಿದೆ.
ಅತೇಶಗಾಹ ಎಂದರೆ ಅಗ್ನಿದೇಗುಲ. ಪುರಾತನ ಕಾಲದಲ್ಲಿ ಅಬ್ ಶೆರಾನ್‌ನ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಂಕಿಯುಗುಳುವ ಸುರಾಖಾನಿ ಎಂಬ ಜಾಗದಲ್ಲಿ ಅಗ್ನಿ ಆರಾಧಕರಾದ ಜ಼ೊರಾಷ್ಟ್ರಿಯನ್ನರು ೩ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಕಟ್ಟಿ ದರೆಂದು ಪ್ರಾಕೃತಿ ಶಾಸ್ತ್ರಜ್ಞರ ಅಭಿಮತ. ನಂತರ ಅವ್ಯಾಹತವಾಗಿ ನಡೆದ ತೈಲ ನಿಕ್ಷೇಪಗಳ ಹೊರತೆಗೆಯುವಿಕೆಯಿಂದಲೋ ಅಥವಾ ಭೂಮಿ ಯೊಳಗಿನ ಫಲಕಗಳ ಸ್ಥಾನ ಪಲ್ಲಟಗಳಿಂದಲೂ ಅನಿಲ ಹೊರ ಬರುವುದು ನಿಂತು ಬೆಂಕಿ ನಂದಿಹೋಗಿದೆ. ಈಗ ಕೃತಕವಾಗಿ ಅನಿಲ ಪೂರೈಸಿ ಅಗ್ನಿ ಬೆಳಗುವಂತೆ ನೋಡಿಕೊಳ್ಳಲಾಗಿದೆ. ೧೭ನೇ ಶತಮಾನದಲ್ಲಿ ಬಾಕುವಿನಲ್ಲಿ ನೆಲೆಸಿದ್ದ ಹಿಂದೂ ಧರ್ಮೀಯರು ಹಾಗೂ ಸಿಖ್ ಧರ್ಮೀಯರಿಂದ ಈ ದೇವಸ್ಥಾನ ಪುನರುತ್ಥಾನಗೊಂಡಿದೆ. ದೇವಸ್ಥಾನ ಸುತ್ತಲು ಸಣ್ಣ ಕೋಣೆಗಳುಳ್ಳ ಕಟ್ಟಡವನ್ನು ಕಟ್ಟಿದ್ದು ವಿವಿಧ ಧರ್ಮೀಯರಿಂದ ಪ್ರಾರ್ಥನಾ ಸ್ಥಳವಾಗಿ ಉಪಯೋಗಿಸಲಾಗುತ್ತಿತ್ತು ಎಂಬ ಖಚಿತ ಕುರುಹುಗಳಿವೆ.
ಹೀಗೆ ಅಜ಼ರ್ ಬೈಜಾನ್ ಕ್ಯಾಸ್ಪಿಯನ್ ಕಡಲ ತೀರದಲ್ಲಿರುವ ಒಂದು ಮಹತ್ವದ ದೇಶ. ವೀಕ್ಷಿಸಲು ಮತ್ತು ಮಾನವ ಇತಿಹಾಸವನ್ನು ಅಭ್ಯಸಿಸಲು ಯೋಗ್ಯವಾದ ಪ್ರದೇಶ, ಬಾಕುವಿನಿಂದ ಅಂದು ಸಂಜೆ ವಿಮಾನದಲ್ಲಿ ಮೇಲೇರುವಾಗ ಕಂಡ ಕ್ಯಾಸ್ಪಿಯನ್ ಕಡಲಿನ ದಡದಗುಂಟದ ಆಕಾರ ಮುಂಬೈನ ಕ್ವೀನ್ಸ್ ನೆಕ್‌ಲೇಸ್ ಎಂದು ಕರೆಸಿಕೊಳ್ಳುವ ಮೆರೀನ್ ಡೈವ್‌ನ್ನು ನೆನಪಿಸುತ್ತಿತ್ತು. ಸಂಜೆಯಾದ್ದರಿಂದ ಸೂರ್ಯನ ಹೊನ್ನ ಕಿರಣಗಳು ನೀರಿನಲ್ಲಿ ಕ್ವೀನ್ಸ್ ನೆಕ್‌ಲೇಸ್‌ನಲ್ಲಿರುವ ವಜ್ರಗಳಂತೆ ಪ್ರತಿಫಲಿಸುತ್ತಿದ್ದವು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…