ಕೀರ್ತಿ ಬೈಂದೂರು
ಇಳಿಬಿಟ್ಟ ಕೂದಲು, ಹೆಚ್ಚೆನಿಸಿದರೂ ಕಡಿಮೆಯಾಗದ ನಗು, ಸಮತೂಕದ ದನಿ, ಬೊಗಸೆ ಪ್ರೀತಿಗೆ ಸಾಗರದಷ್ಟು ವಾತ್ಸಲ್ಯವನ್ನು ಮೊಗೆದು ಕೊಡಲು ನಮ್ಮ ಇಂದಿರಾ ಮೇಡಂಗಲ್ಲದೆ ಇನ್ನಾರಿಗೆ ತಾನೆ ಸಾಧ್ಯ ಹೇಳಿ? ಅವರು ನನಗೆ ಸಿಕ್ಕಿದ್ದು, ‘ಆಂದೋಲನ’ ದಿನಪತ್ರಿಕೆಯ ಹಿರಿಯರ ಅಂಗಣ ಸಂದರ್ಶನದ ಸಲುವಾಗಿ. ಆವತ್ತು ಬೆಳಗಿನ ಹನ್ನೊಂದು ಗಂಟೆಯ ಹೊತ್ತು. ಬಿಸಿಲ ಬೇಗೆಯಲ್ಲಿ ಬೆವೆತುಹೋಗಿದ್ದೆ. ಬಂದವಳನ್ನು ಸ್ವಾಗತಿಸಿದ್ದು, ಅವರೇ ಕೈಯಾರೇ ಮಾಡಿದ್ದ ಸಿಹಿ ತಂಪಿನ ಪಾನಕ. ಎಳೆಯರನ್ನು ಅವರು ಆದರಿಸುವ ಬಗೆ ಅಂಥದ್ದು.
ವಹಿಸಿಕೊಂಡ ಕೆಲಸದ ಬಗ್ಗೆ ಅವರಿಗಿರುವ ಶಿಸ್ತು ನೋಡಿಯೇ ಬೆರಗಾಗಬೇಕು. ನನ್ನ ವಯಸ್ಸನ್ನು ಎರಡು ಸಲ ಕೂಡಿಸಿದರೂ ಅವರ ವಯಸ್ಸೇ ಹೆಚ್ಚು! ಹಾಗಿರುವಾಗ ಈ ಹುಡುಗಿ ಏನು ತಾನೆ ಕೇಳಿಯಾಳು? ಎಂದು ನಿರ್ಲಕ್ಷ್ಯ ತೋರಿದ್ದೇ ಇಲ್ಲ. ಯಾರೂ ಅಡ್ಡಿಪಡಿಸಕೂಡದೆಂದು ಮನೆಜನರಿಗೆ ಹೇಳಿ, ಮೊಬೈಲ್ ಹೊರಗಿಟ್ಟು ಕದ ಸರಿಸಿದರು. ‘ಹಾಂ, ಈಗ ಶುರು ಮಾಡೋಣ?’ ಎಂಥಾ ಮೆಲುದನಿಯ ಮಾತು! ನಾನು ಪ್ರಶ್ನೆ ಕೇಳುವುದಂತೆ, ಅದಕ್ಕವರು ಉತ್ತರಿಸುವುದಂತೆ. ಅದು ತೀರಾ ಔಪಚಾರಿಕ ವಾಗಿ ಇರಲೇ ಇಲ್ಲ. ಪಟ್ಟಿ ಮಾಡಿದ್ದ ಪ್ರಶ್ನೆಗಳನ್ನು ಕೇಳುವುದು ಬಿಟ್ಟು, ಇನ್ನೆಲ್ಲೊ ಗಿರಕಿ ಹೊಡೆಯುತ್ತಿದ್ದೆ.
‘ಮದುವೆಯಾದ ಮೇಲೆ ನಟನೆಯನ್ನು ಬಿಟ್ಟೆ’ ಇಂದಿರಾ ಮೇಡಂ ಹೀಗೆಂದಾಗ ಅವಾಕ್ಕಾಗಿಬಿಟ್ಟೆ. ‘ಶಿಕ್ಷಿತ ಹೆಣ್ಣು ತನ್ನ ಆಸಕ್ತಿಯನ್ನೂ ಉಳಿಸಿಕೊಂಡು ಹೋಗಬೇಕಿತ್ತಲ್ವಾ ಮೇಡಂ?’ ಎಂದೆ. ಅದಕ್ಕವರು ‘ಹೆಣ್ಣು, ತಾಯಿಯೂ ಆಗಬೇಕಲ್ಲಾ’ ಎಂದರು. ಮನಸ್ಸಿನೊಳಗೆ ಪ್ರಶ್ನೆಗಳ ಮಳೆಯೇ ಸುರಿಯುತ್ತಿದ್ದರೂ ಮೊದಲ ಭೇಟಿಯಲ್ಲೇ ಇಷ್ಟು ಅಧಿಕ ಪ್ರಸಂಗ ಮಾಡಬಾರದೆಂದು ಮೌನವಾದೆ. ಮೂವತ್ತೈದು ವರ್ಷಗಳವರೆಗೆ ರಂಗಕ್ಕೆ ಕಾಲಿಡಲಾಗದ ಸ್ಥಿತಿಯ ಬಗ್ಗೆ ಅವರು ಮಾತಾಡದೇ ಇದ್ದರೂ ಹೃದಯದಲ್ಲಿ ಅದೆಂಥ ಕೋಲಾಹಲವನ್ನು ಎಬ್ಬಿಸಿರಬಹುದೆಂದು ನಂತರ ತಿಳಿದೆ.
ಎರಡು ಗಂಟೆಗಳ ಭರ್ಜರಿ ಮಾತುಕತೆ ನಡೆಸಿದೆವು. ಅಲ್ಲವರ ನಗುವಿತ್ತು, ನೋವಿತ್ತು, ಕನಸುಗಳೂ ಅದಮ್ಯ ಜೀವನೋತ್ಸಾಹವೂ ಇತ್ತು. ಹೊರಡುವ ಮುನ್ನ ಒಯ್ಯಲೇಬೇಕೆಂದು ಬಾಕ್ಸ್ ತುಂಬಿದ ಚೀಲ ಕೊಟ್ಟರು. ಹಣ್ಣಿನ ರಸ ಸಾಲದೆಂದು ಚಕ್ಕುಲಿ ತಿಂದದ್ದೂ ಆಯಿತು. ಉಂಡು ಹೋಗುವುದಲ್ಲದೆ, ಕೊಂಡು ಬೇರೆಯಾ? ಮುಜುಗರದಿಂದ ನಾಚಿ, ಬೇಡ ಎಂದು ದೂರ ಸರಿಯು ತ್ತಿದ್ದೆ. ಒತ್ತಾಯದಿಂದ ಕೈತುಂಬಿಸಿ ಕಳಿಸಿದರು. ಸೂರು ಸೇರಿದ ಮೇಲೆ ತೆಗೆದುನೋಡಿದೆ. ಬೂದುಗುಂಬಳದ ಮಜ್ಜಿಗೆ ಹುಳಿ, ಬೆಂಡೆಕಾಯಿ ಪಲ್ಯದ ಘಮ ಮೂಗಿಗಡರುತ್ತಿತ್ತು.
ಈ ಭೇಟಿಯ ನಂತರ ಬಹಳಷ್ಟು ಬದಲಾವಣೆಗಳಾದವು. ಅಭಿಪ್ರಾಯ ಹೇಳಲೇಬೇಕೆಂಬ ತಾಕೀತಿನ ಮೇರೆಗೆ ಒಂದಷ್ಟು ಕಿರುಚಿತ್ರಗಳನ್ನು ಕಳುಹಿಸುವುದು ನಮ್ಮ ನಡುವೆ ಸಾಮಾನ್ಯವಾಯಿತು. ಶಿಕ್ಷಕಿ, ನಟಿ, ನಿರ್ಮಾಪಕಿಯಾದವರು ಹಮ್ಮುಬಿಮ್ಮುಗಳಿಲ್ಲದೆ ಮಾತಾಡುತ್ತಾರಲ್ಲಾ ಎಂದು ಬೆರಗಾಗಿದ್ದೆ. ಅವರ ಕುರಿತಾದ ಬರಹ ಪ್ರಕಟವಾದ ಮೇಲೆ ಸಂತೋಷದಿಂದ ಪ್ರತಿಕ್ರಿಯಿಸಿದ್ದರು. ಎಲ್ಲರ ಹೆಸರನ್ನೂ ನೆನಪಿಟ್ಟುಕೊಂಡು, ‘ಅವರು ಹಾಗಂದ್ರು, ಇವರೆಷ್ಟು ಖುಷಿಪಟ್ರು ಗೊತ್ತಾ!’ ಎಂದು ಮುಕ್ತವಾಗಿ ಹೇಳಿದ್ದನ್ನು ಮನಸ್ಸು ಮರೆಯುವುದಾದರೂ ಹೇಗೆ?
‘ಅಯಾನ್ ಶಾಂತಿ ಕುಟೀರ’ ನಾಟಕ ನಡೆಯುತ್ತಿದ್ದ ಸಂದರ್ಭ. ಅಷ್ಟು ಹೊತ್ತಿಗಾಗಲೇ ಅವರ ಬಳಗದ ಅನೇಕರು ಪರಿಚಿತರಾಗಿದ್ದರು. ಆ ಕುರಿತ ಬರಹಕ್ಕೆಂದು ಬಂದವಳಿಗೆ ಅಲ್ಲಿನ ವಾತಾವರಣವೇ ವಿಶೇಷವೆನಿಸಿತ್ತು. ‘ಎಲ್ಲರನ್ನೂ ಮಾತಾಡಿಸಿ, ಅಭಿಪ್ರಾಯ ಕೇಳು’ ಎಂಬ ಅವರ ಸಲಹೆಯಂತೆ ಕೂತು ಆಲಿಸುತ್ತಿದ್ದೆ. ‘ಮಕ್ಕಳ ಜೊತೆ ನಾವೇ ಬೆರೆತುಬಿಡ್ಬೇಕು. ಆಯ್ತಲ್ಲಾ ಸಮಸ್ಯೆ ಪರಿಹಾರ!’ ಎಂದು ನಗುತ್ತಿದ್ದರು. ವಯಸ್ಸಾಗುತ್ತಿದ್ದಂತೆ ಮನಸ್ಸೂ ಮಾಗುತ್ತದೆ ನೋಡಿ. ಕಿರುಚಿತ್ರಗಳ ಮೇಲೆ ಹಣ ಹಾಕಿ, ಬೇಕಾದಷ್ಟು ಲಾಭ ಗಳಿಸಲು ಸಾಧ್ಯವಿಲ್ಲ. ಹಾಗಿರುವಾಗ ಮಲಯಾಳಂನಲ್ಲಿ ಇಂದಿರಾ ಮೇಡಂ ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣ, ಅಭಿನಯದಲ್ಲಿ ಬಂದ ‘ಏಕಾಂತತೆ’ ಕಿರುಚಿತ್ರದ್ದೂ ಕೂಡ ಹಿರಿಯ ವಯಸ್ಸಿನವರ ತಲ್ಲಣಗಳನ್ನು ಸಾರುವ ಕಥೆಯೇ.
ದೃಶ್ಯವೊಂದರಲ್ಲಿ ಅಭಿನಯಿಸಿ, ಮೇಡಂ ವಿಶ್ರಾಂತಿಗೆಂದು ಕೂತಿದ್ದರಂತೆ. ಪಂಡಿತ್ ರಾಜೀವ್ ತಾರಾನಾಥರು ನುಡಿಸುತ್ತಿದ್ದ ರಾಗವೊಂದು ತಕ್ಷಣಕ್ಕೆ ನೆನಪಾಗಿ, ಈ ದೃಶ್ಯದ ಹಿನ್ನೆಲೆಯಲ್ಲಿ ಆ ರಾಗ ಬಂದರೆ ಸೂಕ್ತವೆನಿಸಿ, ಅದಕ್ಕಾಗಿ ಹುಡುಕಾಡಿದರು. ವಿಚಾರಿಸಿಯೂ ಸಿಗದಾಗ, ಕೊನೇ ಪ್ರಯತ್ನವೆಂದು ತಾರಾನಾಥರ ಶಿಷ್ಯ ಸಚಿನ್ ಹಂಪೆಯವರಲ್ಲಿ ಕೇಳಿದರು. ಮತ್ತೆ ಅವರು ಅದೇ ರಾಗವನ್ನು ಸರೋದ್‌ನಲ್ಲಿ ನುಡಿಸಿ, ಕಳಿಸಿಕೊಟ್ಟಿದ್ದನ್ನು ಮೇಡಂ ನೆನಪಿಸಿಕೊಂಡಿದ್ದರು.
ರಾಮೇಶ್ವರಿ ವರ್ಮಾ ಮೇಡಂ ಮನೆಯಲ್ಲಿ ಇಂದಿರಾ ಮೇಡಂ ನಾಟಕ ಅಭ್ಯಾಸ ಮಾಡುತ್ತಿದ್ದರು. ಕಮಲಾದಾಸ್ ಅವರ ಬದುಕನ್ನು ಆಧರಿಸಿದ ನಾಟಕವದು. ಡಾ.ಶ್ರೀಪಾದ ಭಟ್ ಅವರ ನಿರ್ದೇಶನದಲ್ಲೇ ಮಾಡಬೇಕೆಂಬುದು ಅವರ ಇಂಗಿತವಾಗಿತ್ತು. ಶ್ರೀಪಾದ ಭಟ್ ಅವರು ಕಲಿಕೆಯ ದಿನಗಳನ್ನು ನೆನೆದು ಹೇಳುತ್ತಾರೆ, ’ಇಂದಿರಾ ಅವರಲ್ಲಿ ನಾ ಕಂಡದ್ದು ಮಗುವಿನಂಥ ಹಠ. ಹಾಗೇ ಅವರಲ್ಲಿ ಮಗು ಸಹಜವಾದ ವಿಸ್ಮಯಗಳಿದ್ದವು. ಕಮಲಾದಾಸ್ ಅವರ ಬಗ್ಗೆ ನಾಟಕ ಮಾಡಬೇಕೆಂದಾಗ ಇಂದಿರಾ ಅವರಿಗೆ ಅವರ ಊರಿನವರು ಎಂಬುದು ಒಂದು ಕಾರಣವಾದರೆ, ಕಮಲಾ ದಾಸ್ ಅವರ ಗುಣ ಹೋಲಿಕೆಗಳೂ ನನ್ನವೂ ಎಂದು ತಿಳಿದಿದ್ದರು. ದೈಹಿಕವಾದ ಸಮಸ್ಯೆಗಳಿದ್ದ ಕಾರಣಕ್ಕಾಗಿ ಒಂದಷ್ಟು ಬದಲಾವಣೆಯನ್ನು ರಂಗದಲ್ಲಿ ಮಾಡಿಕೊಳ್ಳಬೇಕಾಯಿತು. ಸಂಭಾಷಣೆಯನ್ನು ಅಧಿಕಗೊಳಿಸಿ, ಓಡಾಟವನ್ನು ನಿರ್ದಿಷ್ಟಗೊಳಿಸುವುದು ಅನಿವಾರ್ಯವಾಯಿತು. ಹಾಗಾಗಿ ಚಿಕ್ಕ ಸ್ಪೇಸಿನಲ್ಲಿ ನಾಟಕ ಕಟ್ಟಿದೆ. ರಂಗಶಂಕರದಲ್ಲಿ ನಾಟಕ ನೋಡಿದ ಡಾ.ವಿಜಯಮ್ಮ ಅವರು, ‘ನಿಮಗೆ ಅಪಾರ ಸಾಮರ್ಥ್ಯ ಇದೆ. ನಿರ್ದೇಶಕರು ನಿಮ್ಮ ಸಾಮರ್ಥ್ಯವನ್ನು ಸೀಮಿತಗೊಳಿಸಿದ್ದಾರೆ. ಮುಂದೆ, ನಿರ್ದೇಶಕರು ಇದನ್ನರಿತು ನಿಮಗೆ ದೊಡ್ಡ ಸ್ಪೇಸ್ ನೀಡುವಂತಾಗಲಿ’ ಹೀಗೆಂದು ಮೆಸೇಜ್ ಕಳಿಸಿದ್ದರಂತೆ.
ಅದನ್ನು ನನಗೆ ಕಳಿಸಿ, ‘ಮೇಲೆ ಹೋದ ಮೇಲೆ ದೊಡ್ಡ ಸ್ಟೇಜ್ ಸಿಗುತ್ತೆ ಸರ್. ಆಗ ಮೇಲಿರುವ ಡೈರೆಕ್ಟರ್ ನನ್ನ ಡೈರೆಕ್ಟ್ ಮಾಡ್ತಾನೆ’ ಎಂದು ತಮಾಷೆ ಮಾಡಿಕೊಂಡೇ ನಕ್ಕಿದ್ದರು. ಸ್ವ-ಮರುಕ ಪಡದ, ಸ್ವಾಭಿಮುಖಿ ನೋಟದಿಂದ ತನ್ನೇ ತಾನು ತಮಾಷೆ ಮಾಡಿಕೊಳ್ಳುವ ಮಗು ಮನಸ್ಸು ಅವರದು. ಅವರ ನಿಷ್ಕಲ್ಮಶ ನಗು ನೆನೆದಾಗೆಲ್ಲ ನನಗೆ ಶುದ್ಧ ಜೇನು ತುಪ್ಪವೇ ಎನಿಸುವುದು. ಈ ನಾಟಕದ ನಡುವಲ್ಲಿ ‘ನಂಗೆ ಎರಡು ಸಲ ಹಾರ್ಟ್ ಅಟ್ಯಾಕ್ ಆಗಿದೆ. ಆದ್ರೂ ಬದುಕಿದ್ದೀನಿ. ಯಾಕಂದ್ರೆ ನಾನು ಬಹಳಷ್ಟು ಜನರನ್ನು ಪ್ರೀತಿಸಿದ್ದೀನಿ. ಹಾಗಾಗಿ ನನ್ನಲ್ಲಿ ತುಂಬಾ ಹಾರ್ಟ್‌ಗಳಿವೆ’ ಎನ್ನುತ್ತಾ ಕಮಲಾ ದಾಸ್ ಮನಸ್ಸು ಬಿಚ್ಚಿ ನಗುವ ದೃಶ್ಯವಿದೆ. ಕಾಲ ತಂದೊಡ್ಡಿದ ವೈರುಧ್ಯ ನೋಡಿ!
ಮೈಸೂರಿನಲ್ಲಿ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಿದೆ. ಅಲ್ಲಿನ ಕಾರ್ಯಕ್ರಮಗಳಿಗೆ ಅವರು ಮುಖ್ಯ ಅತಿಥಿಗಳಾಗಿರುತ್ತಿದ್ದರೆ, ನನ್ನದು ನಿರೂಪಣೆಯ ಜವಾಬ್ದಾರಿ. ನೋಡಿದವರು, ‘ಅದೇನು ಇಂದಿರಾ ಇರುವ ಕಾರ್ಯಕ್ರಮಕ್ಕೆಲ್ಲ ನೀವೊಬ್ಬರೇ ನಿರೂಪಕರಾ?’ ಎಂದೂ ಕೇಳಿದ್ದಿದೆ. ಆಗೆಲ್ಲ ನಕ್ಕು ಇಂದಿರಾ ಅವರಲ್ಲಿ, ‘ಹೀಗೆಲ್ಲ ಹೇಳ್ತಾರೆ ನೋಡಿ ಮೇಡಂ’ ಎನ್ನುತ್ತಿದ್ದೆ. ‘ಅಂತೂ ನಮ್ಮನ್ನು ನೋಡ್ತಿದ್ದಾರಲ್ಲಾ, ಸಾಕು ಬಿಡು. ಚೆನ್ನಾಗಿ ಕಾಣಸ್ತಿದ್ದೀನಿ ಅಲ್ವೇನೆ?’ ಎಂದು ಸೀರೆಯ ನೆರಿಗೆಯನ್ನು ಸರಿಪಡಿಸಿಕೊಳ್ಳುತ್ತಾ ಕೇಳಿದ್ದೆಲ್ಲ ಈಗ ನೆನಪು! ಹಾಂ, ಆವತ್ತಲ್ಲಿ ಪಪೆಟ್ ಶೋ ಕಾರ್ಯಕ್ರಮವಿತ್ತು. ಮೇಡಂ ಅದರ ಉದ್ಘಾಟನೆಗೆಂದು ಬಂದಿದ್ದರು. ಉದ್ಘಾಟನೆ ವಿನೂತನವಾಗಿರಬೇಕೆಂದು ಭಯಂಕರ ಚರ್ಚೆಯಾಗುತ್ತಿತ್ತು.
ಇಂದಿರಾ ಮೇಡಂ ಕೈಗೆ ಕಾಗೆಯ ಪಪೆಟ್ ಗ್ಲೌಸ್ ಹಾಕಿಯೇಬಿಟ್ಟರು. ಇತ್ತ ಮೇಡಂ ಕೈಗೆ ಪಪೆಟ್ ಗ್ಲೌಸ್ ಹಾಕಿ, ಕೈಯಾಡಿಸುತ್ತಿದ್ದರು. ಅತ್ತ ಹೆಗ್ಗೋಡು ಪ್ರಸನ್ನ ಅವರು, ‘ಹಾಗೆ ಮಾಡಿ.. ಹೀಗೆ ಹೇಳಿ. ಸ್ವಲ್ಪ ಬೆರಳಾಡಿಸಿ’ ಎಂದು ಸಲಹೆ ಕೊಡುವುದರಲ್ಲಿ ನಿರತರಾಗಿದ್ದರು. ಕೂತು, ಚಂದ ನೋಡುತ್ತಿದ್ದ ನಾನು ನಕ್ಕಿದ್ದೇ ನಕ್ಕಿದ್ದು. ಬೆಕ್ಕಿಗೆ ಆಟವಂತೆ, ಇಲಿಗೇ ಗೊತ್ತದರ ಪ್ರಾಣ ಸಂಕಟ ಎಂಬಂತಿದ್ದರೂ ವೇದಿಕೆಯಲ್ಲಿ ತದ್ವಿರುದ್ಧವಾಗಿ ಬೆರಳಾಡಿಸಿ, ಕಾಗೆಯಿಂದ ಕನ್ನಡವನ್ನು ಹೊರಡಿಸಿಯೇ ಬಿಟ್ಟರಲ್ಲಾ!
” ಶುಕ್ರವಾರ ಮಧ್ಯಾಹ್ನ ಸುದ್ದಿ ಸಿಕ್ಕಿ, ವಾಟ್ಸಾಪ್ ತೆರೆದೆ. ಇಂದಿರಾ ಮೇಡಂ ಜೊತೆಗಿನ ಚಾಟ್ ನೋಡಿದೆ. ಅವರು ಕಳಿಸಿದ್ದ ‘ಮುದುಕಿಯರಿಗಿದು ಕಾಲವಲ್ಲ’ ಕವಿತೆಗೆ ನಾನು ಪ್ರತಿಕ್ರಿಯಿಸಿರಲಿಲ್ಲ. ಪ್ರತಿಕ್ರಿಯಿಸಿದ್ದರೆ ಮಾತು ಅಂದೇ ಮುಗಿಯುತ್ತಿತ್ತು. ಹಾಗಾಗಿ ನಮ್ಮ ನಡುವಿನ ಮಾತುಗಳಿನ್ನೂ ಬಾಕಿ ಇವೆ”
ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…
ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಯ ವಿವಾಹ ವಿಚ್ಛೇದನಕ್ಕೆ ರಾಜ್ಯ ಹೈಕೋರ್ಟ್ ಸಮ್ಮತಿ ನೀಡಿರುವುದು ಮಾಧ್ಯಮಗಳ…
ಮೈಸೂರಿನ ಶಾರದಾದೇವಿ ನಗರದಲ್ಲಿ ಹೊಸ ಬಸ್ ನಿಲ್ದಾಣವನ್ನು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಬಸ್…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಆರಂಭವಾಗಿ ನೂರು ವರ್ಷ ತುಂಬಿದ ಸ್ಮರಣಾರ್ಥವಾಗಿ ಸಂಘದ ಉದ್ದೇಶ…
ಅಕ್ಷತಾ ‘ಹವ್ಯಾಸ ಮನುಷ್ಯನ ಕನಸುಗಳಿಗೆ ಗರಿ ಮೂಡಿಸುತ್ತದೆ. ಕನಸು ಕಾಣುವ ವ್ಯಕ್ತಿಗೆ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ’ ಇದು ಬೆಂಗಳೂರಿನಲ್ಲಿ ನೆಲೆಸಿರುವ…
ಸಿರಿ ಮೈಸೂರು ಆ ದಿನ ನಾನು ಸಾಮಾನ್ಯವಾಗಿ ಹೋಗದಂತಹ ಒಂದು ಅಪರೂಪದ ಸ್ಥಳಕ್ಕೆ ಹೋಗಿದ್ದೆ. ಮೈಸೂರಿನಿಂದ ಐದಾರು ಗಂಟೆಗಳ ಪ್ರಯಾಣದ…