ಎಸ್.ಗಂಗಾಧರಯ್ಯ

ಅದು ೧೯೮೭-೮೮ನೆಯ ಇಸವಿ. ನನ್ನ ಎಂ.ಎ. ಕೊನೆಯ ವರ್ಷದ ಪರೀಕ್ಷೆಗಳೆಲ್ಲಾ ಮುಗಿದಿದ್ದವು. ಗಂಗೋತ್ರಿಯ ಓಲ್ಡ್ ಬ್ಲಾಕ್ ಹಾಸ್ಟೆಲಿನಲ್ಲಿ ಕಡೆಯ ದಿನ. ಊರಿಗೆ ಹೊರಡಲೆಂದು ಲಗೇಜು ಪ್ಯಾಕ್ ಮಾಡಿಕೊಂಡು ಇನ್ನೇನು ರೂಮಿನಿಂದ ಆಚೆ ಬರಬೇಕು ಅಷ್ಟರಲ್ಲಿ ಅಲ್ಲಿಗೆ ಮೊಗಳ್ಳಿ ಬಂದ.

‘ಬಾರೋ ಟೀ ಕುಡಿದು ಹೋಗೀವಂತೆ’ ಅಂದ. ಟೀ ಕುಡಿಯಲೆಂದು ಹಾಸ್ಟೆಲಿನ ಹಿಂಬದಿಗೆ ಇದ್ದ ‘ಡೌನ್ಸ್’ಗೆ ಹೋದೆವು. ಟೀ ಕುಡಿಯುವಾಗ ಮೊಗಳ್ಳಿ, ‘ಲೋ ಗಂಗೀ ನಮ್ಮ ಗೆಳೆತನದ ನೆನಪಿಗಾಗಿ ನಿಂಗೆ ಏನಾದರೂ ಕೊಡಬೇಕು ಅನ್ನೋ ಆಸೆ, ಆದ್ರೆ ಏನ್ಮಾಡ್ಲಿ ಅಂಥಾದ್ದೂ ಏನೂ ಇಲ್ಲ,’ ಅನ್ನುತ್ತಾ ‘ಪಶ್ಚಿಮ ರಣರಂಗದಲ್ಲಿ ಎಲ್ಲವೂ ಶಾಂತ’ (All quiet on the western front)ಎಂಬ ಪುಸ್ತಕವನ್ನು ನನ್ನ ಕೈಗಿಟ್ಟ. ಅದು ಅವನಿಗೆ ಯಾರೋ ಕೊಟ್ಟ ಇಲ್ಲವೇ ಸೆಕೆಂಡ್‌ಹ್ಯಾಂಡ್ ಬುಕ್‌ಸ್ಟಾಲ್‌ನಲ್ಲಿ ಕೊಂಡುಕೊಂಡಿದ್ದ ಪುಸ್ತಕವಾಗಿತ್ತು. ಅದರಲ್ಲಿ ಯಾರದೋ ಹಸ್ತಾಕ್ಷರ ಕೂಡ ಇತ್ತು. ಅದರ ಕೆಳಗೆ ಮೊಗಳ್ಳಿ, ‘ಪ್ರೀತಿಯ ಗಂಗಿಗೆ’ ಅಂಥ ಮೋಡಿಯ ಅಕ್ಷರಗಳಲ್ಲಿ ಬರೆದು ಸಹಿ ಮಾಡಿದ್ದ. ಅವನ ನೆನಪಿನ ಅದು ಈಗಲೂ ನನ್ನ ಖಾಸಗಿ ಲೈಬ್ರರಿಯಲ್ಲಿ ಇದೆ.

ಅವನ ಆರೋಗ್ಯ ತುಂಬಾ ಹದಗೆಟ್ಟಿದೆ ಅಂತ ಗೊತ್ತಾದ ಮೇಲೆ ಫೋನ್ ಮಾಡಿದೆ. ನನ್ನ ಕಾಲ್‌ಗಾಗೇ ಕಾಯುತ್ತಿದ್ದನೇನೋ ಎಂಬಂತೆ ಮೊದಲ ರಿಂಗಿಗೇ ಫೋನ್ ರಿಸೀವ್ ಮಾಡಿ, ‘ಗಂಗೀ ಹೆಂಗಿದೀಯೋ’ ಅಂದ. ಅದೇ ತಾಯ್ತನದ ದನಿ. ಆದರದು ತುಂಬಾ ಸೊರಗಿತ್ತು. ಎದೆ ಭಾರವಾಯ್ತು. ಒಂದು ಚಣ ಮಾತನಾಡಲಾಗಲಿಲ್ಲ. ‘ನಾನು ಹೆಂಗಿದೀನಿ ಅಂತ ಕೇಳಾಕೆ ಫೋನ್ ಮಾಡಿದ್ಯ?’ ಅಂತ ಅವನೇ ಅಂದ. ನಾನು ‘ಹೆಂಗಿದೀಯ ಮೊಗಳ್ಳಿ,’ ಅಂದೆ. ‘ಬಡ್ಡೀಮಗಂದು ಸಾವು ಇಲ್ಲೇ ಎಲ್ಲೋ ಕೂತು ಕಣ್ಣಾಮುಚ್ಚಾಲೆ ಆಡ್ತಾ ಐತೆ ಕಣೋ. ಬಾ ನಂಗೀಗ ನಿನ್ನ ಬಗ್ಗೆ ಯಾವ ಭಯಾನೂ ಇಲ್ಲ ಅಂದ್ರೂ ಬರವಲ್ದು. ತುಂಬಾ ಸತಾಯಿಸ್ತಾ ಐತೆ’ ಅಂದ. ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ‘ಸಾಕಾಗಿದೆ ಕಣೋ ಗಂಗೀ ಈ ನೋವು. ಆದಷ್ಟು ಬೇಗ ಇದ್ರಿಂದ ಮುಕ್ತಿ ಸಿಕ್ಕರೆ ಸಾಕು ಅಂತ ಕಾಯ್ತಾ ಇದೀನಿ. ತಡ್ಕಣಾಕೆ ಆಗ್ತಿಲ್ಲ, ವಾರಕ್ಕೆ ಮೂರು ಸಾರ್ತಿ ಡಯಾಲಿಸಿಸ್ ಮಾಡಿಸಿಕೋ ಬೇಕು.’ ಅಂದ. ಅವನು ಅದೇ ತಾನೇ ಡಯಾಲಿಸಿಸ್ ಮಾಡಿಸಿಕೊಂಡು ಬಂದಿದ್ದ.

ಒಂದೆರಡು ನಿಮಿಷ ಕಾಯಿಲೆಯ ಸುತ್ತ ನಡೆದ ಮಾತುಕತೆಯನ್ನ ಮೆಲ್ಲಗೆ ಅವನೇ ಬರವಣಿಗೆಯತ್ತ ವಾಲಿಸಿದ. ‘ಬರೆಯಾಕೆ ಕೂತ್ರೆ ಕೈ ನಡುಗ್ತಾವೆ. ಅಂತದ್ರಾಗೂ ಒಂದು ಕಥೇನಾ ಬರೆದಿದೀನಿ. ತುಂಬಾ ನಾಟಕೀಯವಾಗಿದೆ. ಅದನ್ನ ತುಂಬಾ ಒಳ್ಳೆಯ ನಾಟಕ ಮಾಡಬಹುದು. ಆದ್ರೆ ಏನು ಮಾಡೋದು ಅಷ್ಟು ಸಮಯ ನನಗಿಲ್ಲ’ ಅಂದವನೇ ಎರಡು ಪುಸ್ತಕಗಳನ್ನು ಪಬ್ಲಿಷ್ ಮಾಡಾಕೆ ರೆಡಿ ಮಾಡಿರುವುದಾಗಿಯೂ, ಅದರಲ್ಲಿ ಯಾವುದೋ ಒಂದನ್ನು ಪ್ರಕಾಶಕರಿಗೆ ಕೊಟ್ಟಿರುವುದಾಗಿಯೂ ಹೇಳಿದ. ‘ಇತ್ತೀಚೆಗೆ ಬರೆದ ಪದ್ಯಗಳನ್ನು ಸೇರಿಸಿ ಒಂದೆಡೆ ಇಟ್ಟಿದೀನಿ. ಆದ್ರೆ ಯಾರನ್ನ ಕೇಳಿದ್ರೂ ಅಂಥ ಆಸಕ್ತಿ ತೋರುಸ್ತಿಲ್ಲ’ ಅನ್ನುತ್ತಾ ಒಂಚೂರು ಗೆಲುವಿನ ಲಯಕ್ಕೆ ಮರಳಿದ. ದನಿಯಲ್ಲೂ ಕೊಂಚ ಬದಲಾವಣೆ ಆಯ್ತು. ಹತ್ತದಿನೈದು ನಿಮಿಷಗಳ ಕಾಲ ಅದೂ ಇದೂ ಮಾತಾಡಿದೆವು. ಕಡೆಗೆ ‘ಗಂಗೀ ಬಾರೋ ಹೊಸಪೇಟೆಗೆ. ಒಬ್ಬಟ್ಟು ಮಾಡುಸ್ತೀನಿ. ನಿಮ್ಮನೇಗೆ ಬಂದಾಗಲೆಲ್ಲಾ ಮೇಡಂ ಮಾಡಿ ಕೊಡ್ತಾರೆ’ ತುಂಬಾ ಆಪ್ತವಾಗಿ ಕರೆದ. ಆದರೆ ಅವನ ಕರೆಗೆ ಓಗೊಟ್ಟು ಆ ಕ್ಷಣಕ್ಕೆ ಹೋಗಬೇಕು ಅನಿಸಿದರೂ, ಅವನ ಲವಲವಿಕೆಯ ಇಂಥ ಮಾತುಗಳು ನನಗೆ ಅವನನ್ನು ನೋಡಲು ಹೋಗುವ ಮನಸ್ಸನ್ನು ಒಂದಷ್ಟು ದಿನ ಮುಂದ್ಹಾಕಿದವು. ನಾನು ಹೋಗಬೇಕು ಅಂದುಕೊಳ್ಳುತ್ತಿರುವಾಗಲೇ ಅವನ ಸಾವಿನ ಸುದ್ದಿಯೇ ನನ್ನತ್ತ ಬಂದುಬಿಡ್ತು.

ಹೀಗೆ ಅಕಾಲದಲ್ಲಿ ಕಣ್ಮರೆಯಾದ ಮೊಗಳ್ಳಿಯ ಮತ್ತು ನನ್ನ ಗೆಳೆತನ ಸುಮಾರು ನಲವತ್ತು ವರ್ಷಕ್ಕೂ ಮಿಕ್ಕಿದ್ದು. ಅದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುವಾಗಿನಿಂದ ಇದ್ದದ್ದು. ಹಾಗೆ ನೋಡಿದರೆ ಮೊಗಳ್ಳಿ ನನಗಿಂತ ಒಂದು ಕ್ಲಾಸ್ ಮುಂದು. ಮೊಗಳ್ಳಿಯ ಮೊದಲ ಪರಿಚಯ ಆದದ್ದು ಮಹಾರಾಜ ಹಾಸ್ಟೆಲ್‌ನ ರೂಮ್ ನಂಬರ್ ನೂರಾ ಒಂದರಲ್ಲಿ. ಅದು ಮತ್ತೊಬ್ಬ ಗೆಳೆಯ ಮೆಳೆಕಲ್ಲಳ್ಳಿ ಉದಯನ ರೂಮಾಗಿತ್ತು. ಎರಡನೆಯ ವರ್ಷದ ಬಿ.ಎ.ನಲ್ಲಿದ್ದಾಗ ರಶೀದ ಮತ್ತು ನಾನು ಸೇರಿಕೊಂಡು ‘ಅರಿವು’ ಅನ್ನುವ ಕೈ ಬರಹದ ಗೋಡೆ ಪತ್ರಿಕೆಯೊಂದನ್ನು ಮಾಡುತ್ತಿದ್ದೆವು. ಅದಕ್ಕೆ ಉದಯ ಕವಿತೆಗಳನ್ನು ಕೊಡುತ್ತಿದ್ದ. ಲೇಖನಗಳನ್ನು ಬರೆಯುತ್ತಿದ್ದ. ಆಗಾಗ ಮೊಗಳ್ಳಿ ಗೋಡೆ ಪತ್ರಿಕೆಯ ಬೋರ್ಡ್ ಮುಂದೆ ಕಣ್ಣಾಡಿಸುತ್ತಾ ನಿಂತಿರುತ್ತಿದ್ದ. ಒಮ್ಮೆ ಅಲ್ಲಿ ನಾನು ಎಸ್.ಎಲ್.ಭೈರಪ್ಪನವರ ‘ಗೃಹಭಂಗ’ದ ಬಗ್ಗೆ ಬರೆದಿದ್ದೆ. ಅದು ನಮಗೆ ಪಠ್ಯವಾಗಿತ್ತು. ಅದನ್ನು ಓದಿದ್ದ ಮೊಗಳ್ಳಿ ಮಾರನೆಯ ದಿನ ಅದರ ಬಗ್ಗೆ ಮಾತಾಡಿದ್ದ. ಅಲ್ಲಿಂದ ನಮ್ಮ ಗೆಳೆತನವೂ ಮೆಲ್ಲಗೆ ಕುದುರಿಕೊಂಡಿತ್ತು.

ನಾನು ಮಹಾರಾಜ ಹಾಸ್ಟೆಲ್‌ಗೆ ಅಪ್ಲೈ ಮಾಡಿರಲಿಲ್ಲವಾದ್ದರಿಂದ ತೊಣಚಿಕೊಪ್ಪಲಿನ ಪುಟ್ಟಯ್ಯನಹುಂಡಿಯಲ್ಲಿ ಒಂದು ರೂಮು ಮಾಡಿಕೊಂಡಿದ್ದೆ. ಆಗಾಗ ನನಗೂ ಪದ್ಯ ಬರೆಯುವ ಉಮೇದು ಉಕ್ಕಿ ಗೀಚುತ್ತಿದ್ದೆ. ಅದನ್ನು ಓದುವ ಸಲುವಾಗಿ ನಾನು ಮಹಾರಾಜ ಹಾಸ್ಟೆಲ್‌ನ ಉದಯನ ರೂಮಿಗೆ ಹೋಗುತ್ತಿದ್ದೆ. ಅಲ್ಲಿರುತ್ತಿದ್ದ ಮೊಗಳ್ಳಿ, ನನ್ನ ಮತ್ತು ಉದಯನ ನಡುವಿನ ಮಾತುಕತೆಗೆ ಕೇವಲ ಕಿವಿಯಾಗಿರುತ್ತಿದ್ದ. ಆ ಹೊತ್ತಿಗಾಗಲೇ ರಶೀದನ ತುಂಬಾ ಒಳ್ಳೆಯ ಕಥೆಗಳಲ್ಲಿ ಒಂದಾದ ‘ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತು’ ಕಥೆ ತುಷಾರದಲ್ಲಿ ಪ್ರಕಟವಾಗಿತ್ತು. ಆ ದಿನಗಳಲ್ಲಿ ಸಾಕೇತ್ ರಾಜನ್ ನನ್ನ ತೊಣಚಿಕೊಪ್ಪಲಿನ ರೂಮಿಗೆ ಆಗಾಗ ಬರುತ್ತಿದ್ದನಲ್ಲದೆ, ಕೆಲವೊಮ್ಮೆ ಮೂರು ನಾಲ್ಕು ದಿನ ಅಲ್ಲಿಯೇ ಉಳಿಯುತ್ತಿದ್ದ. ಆ ವೇಳೆಗೆ ಸಾಕೇತನ ಗೆಳೆತನದಲ್ಲಿದ್ದ ಮೊಗಳ್ಳಿ, ಆಗಾಗ ಅವನ ಸೈಕಲ್ ಮೇಲೆ ಕುಳಿತು ರೂಮಿಗೆ ಬರುತ್ತಿದ್ದ. ರೂಮಿಗೆ ಬಂದಾಗಲೆಲ್ಲಾ ಹುರುಳಿಕಾಳನ್ನು ಒಂದು ಹದಕ್ಕೆ ಹುರಿದು ಅದನ್ನು ತೆಂಗಿನಕಾಯಿ ಚೂರಿನೊಂದಿಗೆ ತಿನ್ನುವುದೆಂದರೆ ಸಾಕೇತ್‌ಗೆ ಬಲು ಇಷ್ಟ. ಆ ಹುರುಳಿ ಹಾಗೂ ಕಾಯಿ ಚೂರುಗಳ ರುಚಿಯೊಂದಿಗೆ ಸಾಕೇತನ ಮಾತುಗಳಿಗೆ ಮುಗ್ಧವಾಗಿ ಕಿವಿಗೊಡುತ್ತಿದ್ದ. ಆ ವೇಳೆಗೆ ‘ಅಂತೂ ಕ್ರಾಂತಿ ಆಗಲೇಬೇಕು’ ಅನ್ನುವ ಉಮೇದಿನಲ್ಲಿದ್ದ ನಮ್ಮ ಗುಂಪಿಗೆ ಆಗಾಗ ಬಂದು ಸೇರುತ್ತಿದ್ದ ಮೊಗಳ್ಳಿ, ಸಾಕೇತ್ ಹಾಗೂ ರಾಮಲಿಂಗಂ ಜತೆ ಸುತ್ತುತ್ತಾ ಹಾಗೂ ಗೆಳೆಯ ಕೆ. ಎಸ್.ಕೇಶವಪ್ರಸಾದ್‌ನ ಮುಂದಾಳತ್ವದಲ್ಲಿ ಗಂಗೋತ್ರಿಯ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ‘ರೈತ ವಿದ್ಯಾರ್ಥಿ ಒಕ್ಕೂಟ’ದ ಸಭೆಗಳಿಗೂ ಹಾಜರಾಗುತ್ತಿದ್ದ. ವಿಶ್ವ ಕನ್ನಡ ಸಮ್ಮೇಳನವನ್ನು ಪ್ರತಿಭಟಿಸಿ ಕೆ.ರಾಮದಾಸ್ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ನಮ್ಮನ್ನೆಲ್ಲ ಬಂಧಿಸಿ ಐದು ದಿನಗಳ ಮಟ್ಟಿಗೆ ಮೈಸೂರಿನ ಸೆಂಟ್ರಲ್ ಜೈಲ್‌ಗೆ ಅಟ್ಟಿದ್ದರು. ಆ ಸಂದರ್ಭವನ್ನು ಮಿಸ್ ಮಾಡಿಕೊಂಡದ್ದರ ಬಗ್ಗೆ ಮೊಗಳ್ಳಿ ಆಗಾಗ ಹೇಳುತ್ತಿದ್ದ.

ಡಿಗ್ರಿ ಪಾಸಾಗಿ ಗಂಗೋತ್ರಿಯ ಇಂಗ್ಲಿಷ್ ಡಿಪಾರ್ಟ್‌ಮೆಂಟಿನಲ್ಲಿ ನನಗೆ ಸೀಟು ಸಿಕ್ಕಿದಾಗ ಮೊಗಳ್ಳಿ ಅದೇ ಬ್ಲಾಕ್‌ನಲ್ಲಿದ್ದ ಅರ್ಥಶಾಸ್ತ್ರ ವಿಭಾಗದ ಕೊನೆಯ ವರ್ಷದಲ್ಲಿದ್ದ. ಕೆಲವೊಮ್ಮೆ ಮೊಗಳ್ಳಿ ಏಕಾಂಗಿಯಾಗಿ, ಅಂತರ್ಮುಖಿಯಾಗಿ, ಸದಾ ತಳಮಳದ ಭಾವವನ್ನು ಹೊತ್ತು ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ತಿರುಗಾಡುತ್ತಿದ್ದ. ಆ ಹೊತ್ತಿಗೆ ಮೊಗಳ್ಳಿ ಕವಿತೆಯ ತಾಲೀಮು ಮಾಡುತ್ತಿದ್ದ. ಸಿಕ್ಕಾಗಲೆಲ್ಲಾ ಭಯ ಹುಟ್ಟಿಸುತ್ತಿದ್ದ. ಕೆಲವೊಮ್ಮೆ ಟೀ ಮತ್ತು ಮಸಾಲೆ ವಡೆಗಾಗಿ ಯಾರನ್ನಾದರೂ ಸ್ಪಾನ್ಸರ್ ಹುಡುಕಿಕೊಳ್ಳುತ್ತಿದ್ದೆವು. ಒಮ್ಮೆ ಇದಕ್ಕೊಬ್ಬರು ಗ್ರ್ಯಾಂಡ್ ಸ್ಪಾನ್ಸರ್ ಸಿಕ್ಕಿದ್ದರು. ಅದು ಆಲನಹಳ್ಳಿ ಕೃಷ್ಣ. ಮೊಗಳ್ಳಿ ತುಂಬಾ ಸಂಕೋಚದಿಂದ ಆಲನಹಳ್ಳಿಯವರಿಗೆ ಪದ್ಯವನ್ನು ಓದಿದ್ದ. ಅದು ‘ಬಿಟ್ಟು ಬಿಡಿ ನನ್ನ…’. ಆಲನಹಳ್ಳಿ ಪದ್ಯವನ್ನು ಕೇಳಿಸಿಕೊಂಡು ‘ಹೇಯ್ ಬರೀತೀಯ ನೀನು. ನಿಂಗೆ ಬರೆಯೋ ಶಕ್ತಿ ಇದೆ ಬರಿ’ ಅಂದಿದ್ದರು. ಗೆಳೆಯ ಕೆ.ಎಸ್. ಕೇಶವಪ್ರಸಾದ್ ಕೀಟಲೆಯ ದನಿಯಲ್ಲಿ ‘ಹೇಯ್ ನೋಡಮ್ಮ ಮೊಗಳ್ಳಿ, ಅದೇ ಕಣಮ್ಮಾ ನಾನು ಹೇಳಾದು ನಿಂಗೆ, ‘ಬಿಟ್ಟು ಬಿಡಿ ನನ್ನ’ ಅಂತ ಮೊಗಳ್ಳಿಗೆ ರೇಗಿಸುತ್ತಿದ್ದ. ನಾನು ಗಂಗೋತ್ರಿ ಬಿಡುವ ಹೊತ್ತಿಗೆ ಮೊಗಳ್ಳಿಯ ಕವಿತೆಯಾಗಲಿ, ಕಥೆಯಾಗಲಿ ಪ್ರಕಟವಾಗಿರಲಿಲ್ಲ.

ಗಂಗೋತ್ರಿ ಬಿಟ್ಟು ಊರ ಕಡೆಗೆ ಬಂದು ಅಲ್ಲಿ ಯಾವುದೋ ಒಂದು ಕಾಲೇಜಿನಲ್ಲಿ ಕೆಲಸ ಸಿಕ್ಕ ಒಂದಷ್ಟು ವರ್ಷ ನಮ್ಮ ನಡುವೆ ಸಂಪರ್ಕ ಇರಲಿಲ್ಲ. ಆ ನಡುವಿನಲ್ಲಿ ಮೊಗಳ್ಳಿ ‘ಬುಗುರಿ’, ‘ಬತ್ತ’ ಮುಂತಾದ ಕಥೆಗಳನ್ನು ಬರೆದು ಅತ್ಯಂತ ಹೊಸತನದ ಕಥನಕಾರನಾಗಿ ರೂಪುಗೊಂಡಿದ್ದ. ಅವನ ಕಥೆಗಳೊಳಗಿನ ದಮನಿತ ಲೋಕ, ದುಃಖದ ಕಡಲು, ಅವನ ಚಂದದ ಭಾಷೆ ಹಾಗೂ ನಿರೂಪಣೆಗಳು ಕನ್ನಡ ಕಥಾ ಪರಂಪರೆಗೆ ದೇವನೂರರ ನಂತರ ಹೊಸ ಲೋಕವನ್ನು ದಕ್ಕಿಸಿಕೊಟ್ಟಿದ್ದವು. ಈ ವೇಳೆಗೆ ಜಾನಪದ ಎಂ.ಎ. ಪದವಿಯಯನ್ನು ಚಿನ್ನದ ಪದಕದೊಂದಿಗೆ ಪಡೆದುಕೊಂಡಿದ್ದ ಮೊಗಳ್ಳಿ ಊರಿನತ್ತ ಮುಖ ಮಾಡಿದ್ದ. ಅಕ್ಕನ ಮಗಳನ್ನು ಮದುವೆ ಮಾಡಿಕೊಂಡು ನಿರುದ್ಯೋಗದ ಅನಾಹುತಕಾರಿ ಪರಿಣಾಮದಿಂದ ಸೋತುಹೋಗಿದ್ದ. ಅಂಥ ಹೊತ್ತಲ್ಲಿ ಒಂದು ದಿನ ನನ್ನ ಕಾಲೇಜಿನಲ್ಲಿ ಖಾಲಿ ಇದ್ದ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕುವಂತೆ ಹೇಳಲು ಆಗ ಅವನಿದ್ದ ಮಂಡ್ಯಕ್ಕೆ ಹೋಗಿದ್ದೆ. ಅವತ್ತು ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇಡೀ ಮಂಡ್ಯ ಸಂತಸದ ಅಲೆಯಲ್ಲಿ ತೇಲುತ್ತಿತ್ತು. ನಾವೂ ಗೆಳೆಯನೊಬ್ಬನ ಮನೆಯ ಮಹಡಿಯಲ್ಲಿ ಕೂತು ಬಿಯರ್ ಕುಡಿಯುವ ಮೂಲಕ ಅದನ್ನು ಸಂಭ್ರಮಿಸಿದ್ದೆವು. ಮಾರನೆಯ ದಿನ ಅರ್ಜಿಯ ಜೊತೆಗೆ ಅವನ ಎಲ್ಲಾ ಸರ್ಟಿಫಿಕೇಟ್‌ಗಳನ್ನು ನನ್ನೊಂದಿಗೆ ಕಳಿಸಿದ್ದ. ಸಂದರ್ಶನ ಇದ್ದ ದಿನ ಕಾಲಕ್ಕೆ ಸರಿಯಾಗಿ ಬಾರದ್ದರಿಂದ ಅದು ತಪ್ಪಿಹೋಯ್ತು. ಅವನು ಮತ್ತೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹೋಗುವವರೆಗೂ ಅವನ ಅಷ್ಟೂ ದಾಖಲೆಗಳು ನನ್ನೊಂದಿಗೇ ಇದ್ದವು.

ಲಂಕೇಶ್ ತಮ್ಮ ‘ಪತ್ರಿಕೆ ಪ್ರಕಾಶನ’ದಿಂದ ‘ಬುಗುರಿ’ ಕಥಾ ಸಂಕಲನವನ್ನು ಪ್ರಕಟಿಸುತ್ತಲೇ ಬರಹಗಾರನಾಗಿ ಮೊಗಳ್ಳಿ ತನ್ನತನವನ್ನು ಕಂಡುಕೊಂಡಿದ್ದ. ಅದು ಸಹಜವಾಗಿ ಮೊಗಳ್ಳಿ ಒಂಥರದ ಅಮಲಿಗೆ ಒಳಗಾಗುವಂತೆ ಮಾಡಿತು. ಅದೇ ಗುಂಗಿನಲ್ಲಿ ಲಂಕೇಶ್ ಪತ್ರಿಕೆಗೆ ಬರೆದ ಪುಸ್ತಕ ವಿಮರ್ಶೆಗಳು ಕೆಲವರ ಹುಬ್ಬೇರಿಸುವಂತೆ ಮಾಡಿತು. ಅದು ಒಂದಷ್ಟು ಖಾಯಂ ವಿರೋಧಿಗಳ ಸೃಷ್ಟಿಗೂ ಕಾರಣವಾಯ್ತು. ನಂತರ ‘ಅಗ್ನಿ ಪತ್ರಿಕೆ’ಯಲ್ಲಿ ಪ್ರಕಟವಾದ ‘ತಕರಾರು’ನಿಂದಾಗಿ ಆ ಗುಂಪು ಮತ್ತಷ್ಟು ದೊಡ್ಡದಾಯ್ತು. ಅಷ್ಟೇ ಅಲ್ಲ, ಅದು ಅವನನ್ನು ಜೀವನವಿಡೀ ಬೆನ್ನಟ್ಟಿತು. ಅವನ ಸಾಹಿತ್ಯವನ್ನು ಉಪೇಕ್ಷೆಗೆ ತಳ್ಳುವಂತೆ ಮಾಡಿತು. ಈ ನಿಟ್ಟಿನಲ್ಲಿ ಕೇವಲ ಮೊಗಳ್ಳಿಯ ‘ಬುಗುರಿ’ ಮತ್ತಿತರ ಸೃಜನಶೀಲ ಕೃತಿಗಳ ಬಗ್ಗೆ ಮಾತನಾಡುತ್ತಾ ಅವನೊಳಗಿದ್ದ ಅಪಾರ ಜಾನಪದ ಪ್ರತಿಭೆಯನ್ನು, ಹೊಸ ಬಗೆಯ ವಿಮರ್ಶಾ ಮಾನದಂಡವನ್ನು ಮಂಕು ಮಾಡಿತು. ಅದು ಮೊಗಳ್ಳಿಯನ್ನು ಹಠಕ್ಕೆ ಬಿದ್ದವನಂತೆ ಕೆಲವು ಕಳಪೆ ಕೃತಿಗಳನ್ನು ಪ್ರಕಟಿಸುವಂತೆ ಮಾಡಿತು. ಜೊತೆಗೆ ಅವನ ಸಾಹಿತ್ಯೇತರ ವರ್ತನೆಗಳನ್ನೂ, ಉಡಾಫೆಯ ಮಾತುಗಳನ್ನೂ ಮುನ್ನೆಲೆಗೆ ತಂದು ಅವನನ್ನು ಕೇಡಿಯಂತೆ ಬಿಂಬಿಸತೊಡಗಿತು. ಅದು ಪರೋಕ್ಷವಾಗಿ ಮೊಗಳ್ಳಿಯ ‘ನಾನೆಂಬುದು ಕಿಂಚಿತ್ತು’ ಆತ್ಮಕಥನದೊಳಗಿನ bಜಿoಠ್ಠ್ಟಿಚಿಛಿb eಜ್ಝಿbeಟಟb ಅವನ ಪ್ರಾಯ ಹಾಗೂ ಇಳಿ ವಯಸ್ಸನ್ನೂ ಎಟಕಿಸಿಕೊಳ್ಳಲು ಕಾರಣವಾಯ್ತು.

ಸಾಹಿತ್ಯದ ಸಾಂಸ್ಕ ತಿಕ ರಾಜಕಾರಣದ ಆಳ-ಅಗಲಗಳ ಅರಿವಿಲ್ಲದ ಅಥವಾ ಅದರ ಸಹವಾಸ ಬೇಡವೆಂದರೂ ಈ ಸಾಂಸ್ಕ ತಿಕ ರಾಜಕಾರಣ ಮೊಗಳ್ಳಿಯನ್ನು ಒಬ್ಬಂಟಿ ಮಾಡುತ್ತಾ ಹೋಯ್ತು. ಅಪ್ರಾಮಾಣಿಕರು, ಅನರ್ಹರು, ವಶೀಲಿ ಮಾಡುವವರು ಸ್ಥಾನ ಗಿಟ್ಟಿಸಿಕೊಳ್ಳಲು ಏನೆಲ್ಲ ಮಾಡಲು ಬಲ್ಲವರು ಕಣ್ಣೆದುರೇ ಅನೇಕ ಸ್ಥಾನಮಾನ, ಪ್ರಶಸ್ತಿಗಳನ್ನು ಪಡೆಯುತ್ತಾ ವಿಜೃಂಭಿಸತೊಡಗಿದ್ದೂ ಮೊಗಳ್ಳಿಯನ್ನು ಮತ್ತಷ್ಟು ಹತಾಶೆಗೆ ತಳ್ಳಿತು. ಮೊಗಳ್ಳಿ ಅದನ್ನು ತೃಣಕ್ಕೆ ಸಮನಾಗಿ ಕಾಣಬೇಕಿತ್ತು. ಅದು ಸಾಂಸ್ಕ  ತಿಕ ಲೋಕದ ಎಲ್ಲಾ ಅಂಗಗಳಿಗೂ ತಗುಲಿಕೊಂಡಿರುವ ರೋಗ ಎಂಬುದು ಅವನಿಗೆ ಗೊತ್ತಾಗಬೇಕಿತ್ತು. ಅದನ್ನು ಪ್ರಜ್ಞಾಪೂರ್ವಕವಾಗಿ ಮೀರುವ ಛಾತಿ ಬೆಳಸಿಕೊಳ್ಳಬೇಕಿತ್ತು. ಅದವನಿಗೆ ಸಾಧ್ಯವೂ ಇತ್ತು. ಪ್ರಿಯ ಮೊಗಳ್ಳಿ, ಆ ಮೂಲಕ ನೀನು ಇನ್ನೂ ನಮ್ಮೊಡನಿರಬೇಕಿತು

” ಸಾಹಿತ್ಯದ ಸಾಂಸ್ಕ ತಿಕ ರಾಜಕಾರಣದ ಆಳ-ಅಗಲಗಳ ಅರಿವಿಲ್ಲದ ಅಥವಾ ಅದರ ಸಹವಾಸ ಬೇಡವೆಂದರೂ ಈ ಸಾಂಸ್ಕ ತಿಕ ರಾಜಕಾರಣ ಮೊಗಳ್ಳಿಯನ್ನು ಒಬ್ಬಂಟಿ ಮಾಡುತ್ತಾ ಹೋಯ್ತು. ಅಪ್ರಾಮಾಣಿಕರು, ಅನರ್ಹರು, ವಶೀಲಿ ಮಾಡುವವರು ಸ್ಥಾನ ಗಿಟ್ಟಿಸಿಕೊಳ್ಳಲು ಏನೆಲ್ಲ ಮಾಡಲು ಬಲ್ಲವರು ಕಣ್ಣೆದುರೇ ಅನೇಕ ಸ್ಥಾನಮಾನ, ಪ್ರಶಸ್ತಿಗಳನ್ನು ಪಡೆಯುತ್ತಾ ವಿಜೃಂಭಿಸತೊಡಗಿದ್ದೂ ಮೊಗಳ್ಳಿಯನ್ನು ಮತ್ತಷ್ಟು ಹತಾಶೆಗೆ ತಳ್ಳಿತು”

ಆಂದೋಲನ ಡೆಸ್ಕ್

Recent Posts

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

8 mins ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

34 mins ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

56 mins ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

2 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

2 hours ago

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಬೆಚ್ಚನೆಯ ಉಡುಪು ಒದಗಿಸಿ

ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…

2 hours ago