ಹಾಡು ಪಾಡು

ಬೆಣ್ಣೆಯಂತೆ ಕರಗುತ್ತಿದ್ದ ಕಠಿಣ ಮನಸ್ಸಿನ ಕಾದಂಬರಿಕಾರ

“ಒಡನಾಡಿಯೊಂದಿಗೆ ಭೈರಪ್ಪನವರದ್ದು ಒಂದು ಆಪ್ತವಾದ ಸಂಬಂಧ. ೧೯೮೯ರಲ್ಲಿ ಶುರುವಾದ ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಅದು ಹೇಗೋ ಅವರ ಕಿವಿಗೆ ಬಿದ್ದಿತ್ತು. ಯಾರೋ ಹೇಳಿದ್ದರೆಂದು ನಮ್ಮನ್ನು ಕರೆಸಿಕೊಂಡಿದ್ದರು.

ಬಾಲ್ಯದಲ್ಲಿ ಅನಾಥರಾಗೇ ಬೆಳೆದಿದ್ದ ಕಾರಣಕ್ಕೆ, ಒಡನಾಡಿಯ ಕೆಲಸಗಳು ಅವರನ್ನು ಸೆಳೆದಿದ್ದವು. ತೀರಾ ಕಷ್ಟಕರವಾಗಿ ಕಳೆದಿದ್ದ ಅವರ ಬಾಲ್ಯದ ಅನುಭವಗಳು, ಒಡನಾಡಿ ಮಕ್ಕಳಿಗಿಂತ ಕಠೋರವೇ ಆಗಿದ್ದ ಕಾರಣ, ಯಾವುದೋ ಕೆಟ್ಟ ಪರಿಸ್ಥಿತಿಗಳಿಗೆ ಸಿಲುಕಿ, ನಮ್ಮಲ್ಲಿಗೆ ಬಂದಿದ್ದ ಮಕ್ಕಳೆಂದರೆ ಅವರಿಗೆ ಪ್ರೀತಿ ಮತ್ತು ಮಮಕಾರ. ಬಹಳ ಕಹಿಯಾದ ಬಾಲ್ಯವನುಂಡು ಬೆಳೆದವರು ಅವರು. ಸಾಂಕ್ರಾಮಿಕ ರೋಗವೊಂದು ಅವರ ತಂದೆಯವರನ್ನು ಬಿಟ್ಟು ಇಡೀ ಕುಟುಂಬನ್ನು ನುಂಗಿಹಾಕಿತ್ತು. ಬಹುತೇಕ ಇಡೀ ಊರೇ ಸರ್ವನಾಶವಾಗಿ, ಎಲ್ಲಿ ನೋಡಿದರೂ ಹೆಣಗಳು ಮತ್ತು ಅವುಗಳನ್ನು ಹೂಳಲೂ ಸರಿಯಾಗಿ ಯಾವ ವ್ಯವಸ್ಥೆಯೂ ಇರಲಿಲ್ಲ. ಹಾಗಾಗಿ ಅವರು ಆ ಊರನ್ನು ತೊರೆದು ಬಾಂಬೆ ಮತ್ತು ಅಕ್ಕ-ಪಕ್ಕದ ಊರುಗಳಲ್ಲಿ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರಂತೆ. ಇದ್ದೊಬ್ಬ ತಂದೆಯೂ ಒಳ್ಳೆಯವರಾಗಿರಲಿಲ್ಲವಂತೆ. ಒಮ್ಮೆ ಭೈರಪ್ಪನವರು ತಾವು ಬಾಲಕರಾಗಿದ್ದಾಗ ಬುತ್ತಿ ಕಟ್ಟಿಕೊಂಡು ರೈಲು ಪ್ರಯಾಣ ಮಾಡಲು, ರೈಲಿನಲ್ಲಿ ಕೂತ್ಕೊಂಡಿದ್ದರಂತೆ. ಆಗ ಅವರ ತಂದೆ ಬಂದವರೆ, ಮಗನ ಕೈಲಿದ್ದ ಬುತ್ತಿಯನ್ನೇ ಕಿತ್ತುಕೊಂಡು ಹೋಗಿದ್ದರಂತೆ. ಇದನ್ನು ಅವರೇ ನನ್ನೊಂದಿಗೆ ಹೇಳಿದ್ದರು. ಬಾಲ್ಯದಿಂದ ಸಾಕಷ್ಟು ವರ್ಷ ಹೋಟೆಲ್‌ಗಳಲ್ಲಿ ಮಾಣಿಯಾಗಿ, ಪಾತ್ರೆ ತೊಳೆದುಕೊಂಡು, ವಾರಾನ್ನ ತಿಂದುಕೊಂಡೇ ಬೆಳೆದಿದ್ದರಂತೆ. ಬಹುಶಃ ಅವರು ಆಗಿನ ಕಾಲಕ್ಕೆ ಪಟ್ಟ ಕಷ್ಟಗಳ ಸಣ್ಣ ಪರಿಚಯವೂ ಈಗಿನ ಮಕ್ಕಳಿಗೆ ಇರೋದಿಲ್ಲ ಎಂದು ಸಣ್ಣ ವಿಷಾದದ ನಗು ನಕ್ಕಿದ್ದರು” ಎಂದು ನೆನಪಿಸಿಕೊಂಡರು.

ಒಡನಾಡಿಗೆ ಬಂದಾಗಲೆಲ್ಲ ತಮ್ಮ ಬಾಲ್ಯದ ಕಷ್ಟಕಾಲದ ಕತೆಗಳನ್ನು, ಇನ್ನೂ ಹತ್ತು ಹಲವು ಪ್ರೇರಣಾತ್ಮಕ ಕತೆಗಳನ್ನು ಮಕ್ಕಳಿಗೆ ಹೇಳುತ್ತಿದ್ದರು. ಇವತ್ತಿನಒಡನಾಡಿ ಸಂಸ್ಥೆ ಆಗಿದ್ದ ಸ್ಥಿತಿಯೇ ಬೇರೆ. ಇದು ೩೫-೩೬ ವರ್ಷಗಳ ಹಿಂದಿನ ಮಾತು. ಆಗ ನಮ್ಮದು ಯಾವ ದೊಡ್ಡ ಸಂಸ್ಥೆಯೂ ಅಲ್ಲವಾಗಿತ್ತು? ಬಾಡಿಗೆ ಜಾಗವೊಂದರಲ್ಲಿ ಒಡನಾಡಿಯ ಮಕ್ಕಳಿರುತ್ತಿದ್ದರು. ಆಗಲಿಂದಲೇ ಭೈರಪ್ಪನವರು ಒಡನಾಡಿಯನ್ನು ಅರಸಿಕೊಂಡು ಬರುತ್ತಿದ್ದರು.

ಸ್ವಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇಷ್ಟು ದೊಡ್ಡ ಕಾದಂಬರಿಕಾರರಾಗಿ ಅವರು ನಾವಿರುತ್ತಿದ್ದ ಜಾಗಕ್ಕೆ ತಾವಾಗಿಯೇ ಬರುತ್ತಿದ್ದದ್ದು ಅವರ ದೊಡ್ಡತನ. ಅಲ್ಲಿಗೆ ಬಂದು ನಮ್ಮ ಜೊತೆ, ಮಕ್ಕಳ ಜೊತೆಗೆ ನೆಲದ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು. ನಮ್ಮ ಅಗತ್ಯಗಳನ್ನ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುತ್ತಿದ್ದರು. ಈ ಮಕ್ಕಳಿಗೆ ನಾನೇನು ಮಾಡಬಹುದು ಅಂತ ತಿಳಿಸ್ರಪ್ಪ ಎಂದು ವಿನಮ್ರವಾಗಿ ಕೇಳುತ್ತಿದ್ದರು. ಅವತ್ತಿನ ದಿನಗಳಲ್ಲಿ ನಮಗೆ ಹಣಕಾಸಿನ ಸಹಾಯ ಮಾಡುತ್ತಿದ್ದ ಸಾಹಿತಿ ಅಂದರೆ ಅವರೊಬ್ಬರೇನೆ.

ಮಾರ್ಗದರ್ಶನ ಮಾಡಲು ಸಾಕಷ್ಟು ಜನರಿದ್ದರು. ಆದರೆ ಮಕ್ಕಳ ಇಂಥ ಸಂಸ್ಥೆ ನಡೆಸಲು ಹಣಕಾಸು ಬಹಳ ಮುಖ್ಯ. ಆ ಸಂದರ್ಭದಲ್ಲಿ ನಮಗೆ ಬಹಳ ದೊಡ್ಡ ರೀತಿಯಲ್ಲಿ ಹಣಕಾಸಿನ ಸಹಾಯ ಮಾಡಿದ್ದರು. ಬಹಳ ಉದಾರ ಮನಸ್ಸಿನವರು ಅವರು. ಸಣ್ಣಪುಟ್ಟದ್ದಲ್ಲ ಅವರು ಕೊಟ್ಟ ಕೊಡುಗೆ. ನನಗೆ ನೆನಪಿರುವ ಹಾಗೆ ೩೫ ವರ್ಷಗಳ ಹಿಂದೆ, ೨೫ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು. ಕೊಡುವಾಗಲೂ ಅಷ್ಟೇ, ಹಿಂದೆಮುಂದೆ ನೋಡಿದವರಲ್ಲ. ವೈಯಕ್ತಿಕವಾಗಿ ಅವರ ನಮ್ಮ ಸಿದ್ಧಾಂತಗಳು ಬೇರೆ ಬೇರೆಯೇ ಆದರೂ ಅದ್ಯಾವತ್ತೂ ನಮ್ಮ ನಡುವೆ ಅಡ  ಬಂದಿಲ್ಲ. ನಾವು ಆಯ್ದುಕೊಂಡ ಹಾದಿಯ ಕಾರಣಕ್ಕೆ ಅವರು ನಮಗೆ ಕೆಲವೊಮ್ಮೆ ಬೈದದ್ದೂ ಇದೆ. ಆದರೂ ನಮ್ಮ ಹೋರಾಟದ ದಾರಿ ಬೇರೆಯೇ ಇತ್ತಾದರೂ, ನಮ್ಮನ್ನು ಬಹಳ ಪ್ರೀತಿ ಮಾಡುತ್ತಿದ್ದರು. ನಮಗೆ ಮತ್ತು ಪರಶುರಾಮ್‌ಗೆ ಅವರ ಮನೆಗೆ ಯಾವ ಹೊತ್ತಿನಲ್ಲಾದರೂ ಹೋಗುವ ಅವಕಾಶವಿತ್ತು. ಅದು ನಮ್ಮ ಹೆಮ್ಮೆ.

ತಪಸ್ವಿಯಂತೆ ಸದಾ ಕಾಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಿದ್ದ ಅವರನ್ನು ಯಾರಾದರೂ ಹುಡುಕಿಕೊಂಡು ಹೋದರೆ, ಅವರು ಬ್ಯುಸಿ ಇದ್ದಾರೆಂದು ಅವರ ಮಡದಿ ಹೇಳಿಕಳಿಸುತ್ತಿದ್ದರು. ಅವರು ಕೋಣೆಯಲ್ಲಿ ಬರೆಯಲು ಕುಳಿತರೆಂದರೆ, ಯಾವುದೇ ಕಾರಣಕ್ಕೂ ಹೊರಗೆ ಬರುತ್ತಿರಲಿಲ್ಲ. ಊಟವನ್ನು ಅವರ ಕೋಣೆಗೆ ಅವರ ಮಡದಿ ಕೊಡುತ್ತಿದ್ದರು. ಆದರೆ ನಾನೂ ಮತ್ತು ಪರಶು ಬಂದಿದ್ದೇವೆಂದರೆ ಸ್ವತಃ ತಾವೇ ಬಂದು ನಮ್ಮನ್ನು ವಿಚಾರಿಸಿಕೊಳ್ಳುತ್ತಿದ್ದರು. ಈಥರ ವ್ಯಕ್ತಿತ್ವವನ್ನು ನಾನು ಜಿ. ಎಚ್.ನಾಯಕರಲ್ಲಿ ಕಂಡಿದ್ದೇನೆ. ಈ ಇಬ್ಬರೂ ತದ್ವಿರುದ್ಧ ಸ್ವಭಾವದರಾದರೂ ಅನ್‌ಕಂಡೀಷನಲ್ ಆಗಿ ನಮ್ಮನ್ನು ಪ್ರೀತಿ ಮಾಡಿದವರು. ಭೈರಪ್ಪನವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡೇ ಬಹಳ ಜನ ನಮ್ಮಲ್ಲಿಗೆ ಬರುತ್ತಿದ್ದರು.

ಅವರ ನಿಲುವುಗಳೇನೇ ಇರಲಿ. ಒಬ್ಬ ಅಪ್ಪಟ ಮನುಷ್ಯನಾಗಿ ನಾನವರನ್ನು ಹತ್ತಿರದಿಂದ ಕಂಡಿದ್ದೇನೆ. ಮಕ್ಕಳನ್ನ ಅಕ್ಕರೆಯಿಂದ ಪ್ರೀತಿ ಮಾಡುವಂಥ, ಅವರ ಏಳ್ಗೆಯನ್ನು ಬಯಸುವಂಥ ಆ ಹಿರಿತನದ ಕಾರಣ, ಇನ್ನುಳಿದವರಿಗಿಂತ ನನ್ನ ಕಣ್ಣಲ್ಲಿ ಅವರು ವಿಶೇಷವಾಗಿ ಕಾಣುತ್ತಿದ್ದರು. ಅತ್ಯಂತ ಅಗ್ರ ಶ್ರೇಣಿಯಲ್ಲಿರುವಂಥ ಕಾದಂಬರಿಕಾರ, ಸಾಹಿತಿ, ತಳಮಟ್ಟದಲ್ಲಿರುವಂಥ ಮಕ್ಕಳ ಜೊತೆ, ನೆಲದಲ್ಲಿ ಕುಳಿತು ಅವರೊಟ್ಟಿಗೆ ಆತ್ಮೀಯವಾಗಿ ಮಾತನಾಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಂಥ ಸರಳತೆ ಅವರಲ್ಲಿತ್ತು. ಅವರದ್ದು ಮೇಲೆ ಮೇಲೆ ಹಾರಾಡುವಂಥ ವ್ಯಕ್ತಿತ್ವವಲ್ಲ. ನಮಗೆಲ್ಲ ಗೊತ್ತಿರುವಂತೆ ಅವರಕೃತಿಗಳ ವಿಷಯ ತುಂಬಾ ಜಟಿಲವೆನ್ನಿಸುವಂತೆ ಇದ್ದವು, ಅವುಗಳ ಬೆಲೆಯೂ ಅಷ್ಟೇ ದುಬಾರಿ. ಆದರೆ ವ್ಯಕ್ತಿತ್ವದಲ್ಲಿ ನಡವಳಿಕೆಯಲ್ಲಿ ನೆಲಕ್ಕೆ ಹತ್ತಿರದ ಮನುಷ್ಯನಾಗಿದ್ದರು. ಅದೇ ಮನೆ, ಅದೇ ರಸ್ತೆ, ಅದೇ ವಾಕಿಂಗು ಮತ್ತೆ ಅವರ ಬರವಣಿಗೆ. ಯಾವುದೇ ರೀತಿಯಲ್ಲಿ ನಾವು ಅವರಿಗೆ ಸರಿಸಾಟಿಯಲ್ಲ.

ಆದರೂ ನಮ್ಮನ್ನು ಅವರು ಪ್ರೀತಿಸುತ್ತಿದ್ದ ರೀತಿಯೇ ನಮಗೆ ಹೆಮ್ಮೆ… ರಾಮಕೃಷ್ಣನಗರದಲ್ಲಿದ್ದಾಗ ಬಹಳ ಸಲ ಭೇಟಿ ಕೊಟ್ಟಿದ್ದರು ನಮ್ಮ ಸಂಸ್ಥೆಗೆ. ನಂತರ ಹೂಟಗಳ್ಳಿಯಲ್ಲಿ ನಮ್ಮ ಸಂಸ್ಥೆಗೆ ಪರ್ಮನೆಂಟ್ಅನ್ನುವ ಜಾಗ ಸಿಕ್ಕಿತು. ಅದು ಅವರ ಮನೆಯಿಂದ ಬಹಳವೇ ದೂರವಿತ್ತು. ಆದರೂ ಅಲ್ಲಿಂದ ಮಕ್ಕಳನ್ನು ಮಾತನಾಡಿಸಲು ಬರುತ್ತಿದ್ದರು. “ಈ ಜಾಗ ನನಗೆ ದೂರ ಆಗ್ತದೆ ಕಣ್ರಪ್ಪಾ? ಆದ್ರೆ ಈ ಜಾಗ ನನ್ನನ್ನ ಸೆಳೀ ತದೆ” ಎನ್ನುತ್ತಲೇ ಬರುತ್ತಿದ್ದರು. ಈ ಕೆಲಸ ಗಳಿಗೆಲ್ಲ ಅವರ ಪತ್ನಿಯವರೂ ಸಾಥ್ ಕೊಡುತ್ತಿದ್ದರು. ನಾವು ಕಂಡಂಥ ಭೈರಪ್ಪನವರು ಬೇರೆಯೇ. ಅವರ ಸೈದ್ಧಾಂತಿಕ ವಿಚಾರಗಳೇನೇ ಇರಲಿ, ಅವರೊಳಗಿನ ಅಪ್ಪಟ ಮನುಷ್ಯನನನ್ನು ನಾವು ಮರೆಯಬಾರದು.

ಅಷ್ಟೇ ಅಲ್ಲ. ಅವರು ಒಳ್ಳೆಯ ಪತಿಯಾಗಿಯೂ ಇದ್ದರು. ನನಗೆ ಗೊತ್ತಿರುವಂತೆ ಬಹಳಷ್ಟು ಹೋರಾಟಗಾರರು ಒಳ್ಳೆಯ ಗಂಡನಾಗಿರುವುದಿಲ್ಲ. ಒಳ್ಳೆಯ ತಂದೆಯೂ ಆಗಿರಲ್ಲ. ಆದರೆ ಇವರಿಗೆ ಒಳ್ಳೆಯ ಸಾಂಸಾರಿಕ ಮೌಲ್ಯಗಳಿದ್ದವು. ಅದನ್ನ ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಹೊರಗಡೆ ಎಷ್ಟೇ ಕಠೋರವಾಗಿ ಕಂಡರೂ, ಅವರ ಮನಸ್ಸು ಹೇಗೆ ಬೆಣ್ಣೆಯಂಥದ್ದು ಎಂಬುದನ್ನ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರೊ ಳಗಿನ ಮೃದು ಮನುಷ್ಯ ಈ ಮಕ್ಕಳ ವಿಚಾರದಲ್ಲಿ, ಅವರು ತೋರಿಸಿರುವ ದಾರಿ ಗಳು, ಹಂಚಿಕೊಂಡ ಅನುಭವಗಳು ಮರೆಯಲಾರದಂಥವು?”

” ಕಡು ನಿಷ್ಠುರಿ ಮತ್ತು ಕಟ್ಟಾ ಬಲಪಂಥೀಯ ಎಂದೇ ಟೀಕೆಗೊಳಗಾಗುತ್ತಿದ್ದ ತೀರಿಹೋದ ಖ್ಯಾತ ಬರಹಗಾರ ಎಸ್.ಎಲ್.ಭೈರಪ್ಪ ಮೈಸೂರಿನ ಒಡನಾಡಿ ಸಂಸ್ಥೆಯೊಂದಿಗೆ, ಅಲ್ಲಿನ ಮಕ್ಕಳೊಂದಿಗೆ ಹೇಗೆ ಮಗುವಿನ ಹಾಗೆ ಬೆರೆಯುತ್ತಿದ್ದರು ಎಂಬುದನ್ನು, ಒಡನಾಡಿ ಸಂಸ್ಥೆಯ ಕೆ.ವಿ.ಸ್ಟ್ಯಾನ್ಲಿ ಇಲ್ಲಿ ವಿವರಿಸಿದ್ದಾರೆ”

(ನಿರೂಪಣೆ: ರೂಪಶ್ರೀ ಕಲ್ಲಿಗನೂರ್) 

ಆಂದೋಲನ ಡೆಸ್ಕ್

Recent Posts

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

57 mins ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

2 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

2 hours ago

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…

3 hours ago

ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು: ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌…

3 hours ago

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…

3 hours ago