ಫಾತಿಮಾ ರಲಿಯಾ
೧೯೨೫ರ ಆಸುಪಾಸಿನಲ್ಲಿ ಹುಟ್ಟಿದ, ಆ ಹೊತ್ತಿಗೆ ಮೆಟ್ರಿಕ್ ಮುಗಿಸಿದ ನನ್ನಜ್ಜ ಅಹ್ಮದ್ ಸ್ವಾತಂತ್ರ್ಯ ಸಿಕ್ಕು, ಸಂವಿಧಾನ ಜಾರಿಯಾದ ನಂತರ ಮೇಷ್ಟ್ರಾಗಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡದ್ದು. ಯಾರೇನು ಹೇಳುತ್ತಾರೋ, ಯಾರೇನು ಅಂದುಕೊಳ್ಳುತ್ತಾರೋ, ತಾನುಡುವ ಬಟ್ಟೆಯಿಂದ, ತಾನು ತೊಟ್ಟುಕೊಳ್ಳುವ ಟೊಪ್ಪಿಯಿಂದ ಎಲ್ಲಿ ಗೇಲಿಗೊಳಗಾಗುತ್ತೋ ಎನ್ನುವ ಅಂಜಿಕೆಯಿಂದಲೇ ಶಾಲೆಗೆ ಹೋಗುತ್ತಿದ್ದ ನನಗೆ ಸಂವಿಧಾನ ಜಾರಿಗೆ ಬಂದ ಮೇಲೆ ಒಂದು ವಿಶಿಷ್ಟ ಬಲ ಬಂದಂತಾಗಿತ್ತು ಎನ್ನುತ್ತಿದ್ದರು ನನ್ನಜ್ಜ.
ಬಹುಶಃ ಸಂವಿಧಾನದ ಅತಿ ದೊಡ್ಡ ಗೆಲುವು ಈ ದೇಶದ ಅತಿ ಸಾಮಾನ್ಯನಿಗೂ ಇಂಥ ಬಲವನ್ನು ಒದಗಿಸಿದುದರಲ್ಲಿದೆ, ತಾನು ಶಕ್ತ ಎಂಬ ನಂಬಿಕೆ ಹುಟ್ಟಿಸಿರುವುದರಲ್ಲಿದೆ, ತನಗೂ ಇಲ್ಲಿ ಬದುಕುವ ಹಕ್ಕಿದೆ ಎಂಬ ಆತ್ಮವಿಶ್ವಾಸ ತುಂಬಿರುವುದರಲ್ಲಿದೆ. ಓದಿದ್ದ, ಶಿಕ್ಷಕರಾಗಿದ್ದ ನನ್ನಜ್ಜ ಅಮ್ಮನನ್ನು, ಚಿಕ್ಕಮ್ಮಂದಿರನ್ನು ಓದಿಸಿದರು. ಆ ಮೂಲಕ ನಂತರದ ತಲೆಮಾರಿಗೆ ಅರಿವಿನ ಬಾಗಿಲನ್ನು ತೆರೆದರು.
ತಾನು ಓದುವಾಗ ಇದ್ದ ಕಷ್ಟ, ಅಡೆತಡೆಗಳು ನನ್ನ ಮಕ್ಕಳು ಓದುವಾಗ ಇರಲಿಲ್ಲ, ಮೊಮ್ಮಕ್ಕಳು ಓದುವಾಗ ಇರಬಾರದು ಅನ್ನುತ್ತಿದ್ದರು. ಅಜ್ಜನ ಕಾಲಕ್ಕಿದ್ದ ಕಟ್ಟುಪಾಡು ಅಮ್ಮನ ಕಾಲದ ಹೊತ್ತಿಗೆ ಸಡಿಲವಾಗಿತ್ತು, ನನ್ನ ಕಾಲಕ್ಕೆ ತಲುಪುವಾಗ ಮತ್ತಷ್ಟು ಸಡಿಲವಾಗಿದೆ. ನನ್ನ ಮಗಳ ಕಾಲಕ್ಕೆ ಕಳಚಿ ಬಿದ್ದರೂ ಬೀಳಬಹುದು. ನನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವಲ್ಲಿ ಮತ್ತು ಒಬ್ಬ ವ್ಯಕ್ತಿಯಾಗಿ ಸಮಾಜದ ಮುಂದೆ ನಿಂತುಕೊಳ್ಳುವಲ್ಲಿ ಮೂರು ತಲೆಮಾರುಗಳಿಂದ ಬೀಸಿಕೊಂಡು ಬಂದಿರುವ ಶಿಕ್ಷಣದ ಗಾಳಿ ತುಂಬಾ ಮಹತ್ವವಾದದ್ದು. ಆ ಶಿಕ್ಷಣದ ಮೂಲ ಬೀಜವನ್ನು ಬಿತ್ತಿದ್ದು ಯಾವ ತಾರತಮ್ಯವೂ ಇಲ್ಲದೆ ಶಾಲೆಯ ಬಾಗಿಲನ್ನು ಎಲ್ಲರಿಗೂ ತೆರೆದ ಸಂವಿಧಾನ.
ಇನ್ನು, ನೂರಾರು ಧರ್ಮ, ನೂರಾರು ಜಾತಿ, ನೂರಾರು ಸಮುದಾಯಗಳು, ಭಾಷೆಗಳು, ಸಂಸ್ಕ ತಿಗಳು… ಹೀಗೆ ಒಂದು ಖಂಡವಾಗಬಹುದಾದಷ್ಟು ವೈವಿಧ್ಯತೆ ಇರುವ ಈ ಭರತ ಭೂಮಿ ಒಂದು ದೇಶವಾಗಿಯೇ ಇನ್ನೂ ಉಳಿದಿದೆ ಮತ್ತು ದೇಶವಾಸಿಗಳಿಗೆ ಸುಭದ್ರ, ಕಂಫರ್ಟ್‌ನ ಭಾವ ನೀಡುತ್ತದೆ ಅಂತಾದರೆ ಅದಕ್ಕೆ ಸಂವಿಧಾನವೇ ಮುಖ್ಯ ಕಾರಣ. ಮೊದಲು, ದೇಶ ವಿಭಜನೆ, ಸ್ವಾತಂತ್ರ್ಯಾನಂತರ ಗಾಂಧಿ ಹತ್ಯೆ, ತುರ್ತು ಪರಿಸ್ಥಿತಿಯ ಹೇರಿಕೆ, ಬಾಬರಿ ಮಸೀದಿ ಧ್ವಂಸ, ಗೋಧ್ರಾ ಮತ್ತು ಗೋಧ್ರೋತ್ತರ ಘಟನೆಗಳು, ಯುದ್ಧಗಳು, ನಿತ್ಯ ಸುದ್ದಿಯಾಗುತ್ತಿರುವ ಜಾತಿ ಮತ್ತು ಕೋಮುಗಲಭೆಗಳು… ಹೀಗೆ ಈ ದೇಶದ ಮೇಲೆ ಮಾಗದ ಗಾಯಗಳಾದರೂ ಪರಸ್ಪರರ ಮೇಲಿನ ನಂಬಿಕೆ, ವಿಶ್ವಾಸ, ವ್ಯಕ್ತಿಗತ ಪ್ರೀತಿ, ಅಕ್ಕರೆಗಳು ಇನ್ನೂ ಉಳಿದುಕೊಂಡಿರುವುದೂ ಕೂಡ ಸಂವಿಧಾನದಿಂದಲೇ.
ಮೇಲ್ನೋಟಕ್ಕೆ ಇವೆಲ್ಲವೂ ಕೂಡ ವೈಯಕ್ತಿಕ ಏಳಿಗೆ ಮತ್ತು ಬದುಕಿಗೆ ಸಂಬಂಧಿಸಿದ್ದಲ್ಲ ಅನ್ನಿಸಿದರೂ ಬಹುಸಂಸ್ಕ ತಿಯ ಜೊತೆಗೆ ಬೆರೆತು, ಸಹನೀಯ ಬದುಕನ್ನು ಬದುಕಲು ಈ ಭದ್ರತಾ ಭಾವ ಬೇಕೇ ಬೇಕು. ಒಂದು ಅರಾಜಕತೆ ತುಂಬಿದ, ಅನಿಶ್ಚಿತ ರಾಜಕೀಯ ಸ್ಥಿತಿಗಳಿರುವ, ಯಾವಾಗ ಏನಾಗುತ್ತೋ ಎನ್ನುವ ಆತಂಕದಲ್ಲೇ ಬದುಕಬೇಕಾದ ರಾಜಕೀಯ ಪರಿಸ್ಥಿತಿಗಳಿರುವ ದೇಶದಲ್ಲಿ ಒಬ್ಬ ಮನುಷ್ಯ ನೆಮ್ಮದಿಯಾಗಿ ಬದುಕಲು ಸಾಧ್ಯವೇ ಇಲ್ಲ.
ಇಲ್ಲಿ ಏನೇ ಆದರೂ ಅಂತಿಮವಾಗಿ ಸಂವಿಧಾನ ನಮ್ಮ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸದೊಂದಿಗೇ ನಾವು ಬದುಕುತ್ತೇವೆ. ಮನುಷ್ಯ ಮನುಷ್ಯರ ನಡುವಿನ ನಂಬಿಕೆಯ ಬೇರು ಅಲುಗಾಡುವಂತಹ, ಎಲ್ಲವನ್ನೂ ಧರ್ಮ, ಜಾತಿಗಳ ಅಳತೆಗೋಲಿಂದಲೇ ಅಳೆದು ತಕ್ಕಡಿ ತೂಗಿಸುವ ಘಟನೆಗಳು ಅಲ್ಲಲ್ಲಿ ನಡೆದರೂ ಇಲ್ಲಿ ಇನ್ನೂ ಸೌಹಾರ್ದತೆಯ ಬೇರುಗಳು ಗಟ್ಟಿಯಾಗಿಯೇ ಇವೆ ಅಂದರೆ ನಮ್ಮೆಲ್ಲರನ್ನೂ ಪೊರೆಯುವ ಅಮ್ಮನಂತಹ ಸಂವಿಧಾನ ಯಾರಿಗೂ ಯಾವತ್ತಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ನಂಬಿಕೆಯಿಂದ.
(ಲೇಖಕಿ ಹೊಸ ತಲೆಮಾರಿನ ಕನ್ನಡ ಕಥೆಗಾರ್ತಿ)
” ಮತ್ತೆ ಮತ್ತೆ ಮಾಗದ ಗಾಯಗಳಾಗುತ್ತಿದ್ದರೂ ಪರಸ್ಪರರ ಮೇಲಿನ ನಂಬಿಕೆ, ವಿಶ್ವಾಸ, ವ್ಯಕ್ತಿಗತ ಪ್ರೀತಿ, ಅಕ್ಕರೆಗಳು ಇನ್ನೂ ಉಳಿದುಕೊಂಡಿರುವುದು ಈ ಗಣರಾಜ್ಯದ ಸಂವಿಧಾನದಿಂದಲೇ.”
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…
ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…
ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…
ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…
ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…