ಹಾಡು ಪಾಡು

ಗೂಗಲ್ ಗುರುವಿನ ಮುಂದೆ ಕಾಲೇಜ್ ಗುರುವಿನ ಪಾಡು

ಕಾಲೇಜು ಮೇಷ್ಟರ ಕೆಲಸ ವಿರಾಮದ್ದು ಎಂಬ ಮಾತು ಈಗ ಜೀವ ಕಳೆದುಕೊಂಡಿದೆ. ‘ಮೈಯೆಲ್ಲಾ ಕೆಲಸ ಎನ್ನುತ್ತಾರಲ್ಲ ಅದನ್ನು ಸ್ವತಃ ಅರಿಯಬೇಕಾದರೆ, ನುರಿಯಬೇಕಾದರೆ ಒಮ್ಮೆ ಕಾಲೇಜು ಮೇಷ್ಟರಾಗಬೇಕು!

ಆನಂದ್ ಗೋಪಾಲ್

ಎ.ಎನ್.ಮೂರ್ತಿರಾಯರ ‘ಚಿತ್ರಗಳು-ಪತ್ರಗಳು’ ಓದುವಾಗ ನಾನು ಕಾಲೇಜು ವಿದ್ಯಾರ್ಥಿ. ಅಲ್ಲಿ ಬರುವ ಜೆ.ಸಿ.ರಾಲೋ, ಎ.ಆರ್.ವಾಡಿಯಾ, ಎಸ್.ರಾಧಾಕೃಷ್ಣನ್‌ರಂತಹ ಅಧ್ಯಾಪಕರು ನಮಗೂ ಇರಬಾರದಿತ್ತೆ ಎಂದು ಚಪಲವಾಗುತ್ತಿತ್ತು, ವಿ.ಸೀತಾರಾಮಯ್ಯನವರ ‘ಕಾಲೇಜ್ ದಿನಗಳು’ ಓದುವಾಗಂತೂ ಅದೇ ಆಸೆ ಮತ್ತೆ ಮರಳಿ, ಅಲ್ಲಿನ ಎಂ.ಎಚ್.ಕೃಷ್ಣ, ಕಾನಕಾನಹಳ್ಳಿ ವರದಾಚಾರ್ಯರಂತೆ ಕಾಲೇಜು ಅಧ್ಯಾಪಕನಾಗಬೇಕು ಎಂಬ ಆಸೆ ಮೊಳೆಯಿತು. ಇಲ್ಲಿನ ಅಧ್ಯಾಪಕರು ಅಧ್ಯಯನ-ಅಧ್ಯಾಪನವನ್ನು ಜೋಡಿಪದದಂತೆ ಜೊತೆಯಲ್ಲೆ ಇರುವಂತೆ ನೋಡಿಕೊಂಡವರು. ಹಾಗಾಗಿಯೋ ಏನೋ ಆಗಿನ ಅಧ್ಯಾಪಕರೆಲ್ಲರೂ ಸಾಹಿತಿ-ಸಂಶೋಧಕರಾಗಿ ದುಡಿಯಲು ಸಾಧ್ಯವಾಯಿತು. ಅಲ್ಲದೆ, ಅವರಿಗೆ ಇದರ ವಿನಾ ಬೇರೆ ತಂಟೆ-ತಾಪತ್ರಯಗಳೂ ಇರಲಿಲ್ಲ!

ಇವೆಲ್ಲಾ ನೂರು ವರ್ಷಗಳ ಹಿಂದಿನ ಮಾತು. ಈಗ ಕಾಲೇಜು ಅಧ್ಯಾಪಕನಾದವನು ಅಧ್ಯಯನ-ಅಧ್ಯಾಪನ ಮಾತ್ರ ಮಾಡುತ್ತೇನೆ ಎಂದು ಹಠಕ್ಕೆ ಬಿದ್ದರೆ ಅವನ ವೃತ್ತಿಯೇ ನಾಸ್ತಿಯಾಗಿ ಬಿಡುತ್ತದೆ. ಅಲ್ಲದೆ ಮಕ್ಕಳು ಈಗ ಮೇಷ್ಟರುಗಳನ್ನು ನಂಬಿಯೇ ಓದುತ್ತಾರೆಂದು ಹೇಳುವುದೂ ಕಷ್ಟ ಅವರಿಗೆ ಆಯ್ಕೆಗಳು ತುಂಬಾ ಇವೆ. ಕಾಲೇಜುಗಳ ವಾತಾವರಣ ಕೂಡ ಈಗ ಬದಲಾಗಿ ಹೋಗಿದೆ.

ವರ್ಷವರ್ಷ ಕಾಲೇಜುಗಳ ಸಂಖ್ಯೆ ಏರುತ್ತಿದೆ. ವಿದ್ಯಾರ್ಥಿಗಳ ದಾಖಲಾತಿಯ ಮೇಲೆ ವರ್ಕ್ಲೋಡ್ ನಿಂತಿರುತ್ತದೆ. ಸರ್ಕಾರಿ ಕಾಲೇಜುಗಳ ಖಾಯಂ ಅಧ್ಯಾಪಕರುಗಳಿಗೆ ಈ ತಲೆಬೇನೆ ಇಲ್ಲ. ಖಾಸಗಿ ಕಾಲೇಜುಗಳ ಅಧ್ಯಾಪಕರ ಪಾಡು ಸೇಲ್ಸ್ ಮೇನ್‌ಗಳ ಪಾಡಾಗಿದೆ.

ಅಡಿಷನ್‌ ಕಲಾಪ ತೀರಿದ ಮೇಲೆ ತರಗತಿಗೊಬ್ಬರನ್ನು ಮೆಂಟರ್ ಮಾಡಲಾಗುತ್ತದೆ. ಈ ಮೆಂಟ‌ ಮೇಷ್ಟರ ಕೆಲಸ ಬಹು ಆಯಾಮದ್ದು. ತನ್ನ ಕಕ್ಷೆಗೊಳಪಡುವ ಮಕ್ಕಳೆಲ್ಲರ ಜಾತಕ ತಿಳಿದುಕೊಂಡಿರಬೇಕು. ಮಸಲ ಅವರು ಕ್ಲಾಸಿಗೆ ಬಂದಿಲ್ಲವೆಂದರೆ, ಯಾಕೆ? ಎಂತು? ಎಂದು ಕಣಿ ಕೇಳಿ ಅವರಪನಿಗೋ, ಅಮ್ಮನಿಗೋ ಡಯಲ್ ಮಾಡಬೇಕು. ಹೀಗೊಮ್ಮೆ ಒಂದೇ ಹೆಸರಿನ ಇಬ್ಬರು ಹುಡುಗಿಯರಿದ್ದ ಕ್ಲಾಸಿಗೆ ಮೆಂಟರಾದ ಮೇಷ್ಟರು ಇವಳ
ಬದಲು ‘ಅವಳ’ ಅಪ್ಪನಿಗೆ ಫೋನ್ ಮಾಡಿ ದೂರು ಹೇಳಿದರು. ಮಾರನೇ ದಿನ ಪಾಠವನ್ನಷ್ಟೇ ‘ಅವಳು’ ಮೇಷ್ಟರ ಜೊತೆ ಜೋರು ಜಗಳಕ್ಕೆ ನೆಲ ಕೆರೆದು ನಿಂತಿದ್ದಳು. ಮಧ್ಯಾಹ್ನದ ತರಗತಿಗಳು ಯಾರಿಗೆ ತಾನೇ ಬೋರು ಹುಟ್ಟಿಸುವುದಿಲ್ಲ. ಇದಕ್ಕೂ ಅಧ್ಯಾಪಕ ಮೆಂಟರುಗಳೇ ತಲೆಕೊಡಬೇಕು. ಕಾಲೇಜಿನ ಫೀಲು, ಹತ್ತಿರದ ಪಾರ್ಕುಗಳಲ್ಲಿ ಆರಾಮವಾಗಿ ಕೂತಿರುವವರನ್ನು ಹುಡುಕಿಕೊಂಡು ಹೋಗಿ ಎಬ್ಬಿಸಿ ಕರೆತರಬೇಕು. ನಾವು ಬರಲಿ ಎಂದೇ ಕೆಲ ಮೊಂಡು ವಿದ್ಯಾರ್ಥಿಗಳು ಕಾಯುತ್ತಾ ಕೂತಿರುತ್ತಾರೆ.

ಕಾಲೇಜು ಮಾನ್ಯತೆ ಉಳಿಸಿಕೊಳ್ಳಬೇಕಾದರೆ ಉನ್ನತ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳು ಆಗಿಂದಾಗ್ಗೆ ಸೂಚಿಸುವ, ಆದೇಶಿಸುವ ಉಪಕ್ರಮಗಳನ್ನು ಅಮಲಿಗೆ ತರಬೇಕು. ಮಹಿಳಾ ದೌರ್ಜನ್ಯ ನಿರ್ಮೂಲನ ಘಟಕ, ಆ್ಯಂಟಿ ರಾಗಿಂಗ್ ಘಟಕ, ಎನ್‌.ಎಸ್.ಎಸ್., ಎನ್.ಸಿ.ಸಿ., ಯುವ ರೆಡ್‌ ಕ್ರಾಸ್, ಕ್ರೀಡೆ, ವಿದ್ಯಾರ್ಥಿ ವೇದಿಕೆ, ಸಾಹಿತ್ಯಕ ಘಟಕಗಳಂತಹ ಸಮಿತಿಗಳನ್ನು ರಚಿಸಬೇಕು. ಅಧ್ಯಾಪಕರು ಈ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರುಗಳಾಗಿ ‘ಸಕ್ರಿಯ’ರಾಗಿ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಹಿಡಿದುಕೊಂಡು ಬಂದು ಮಕ್ಕಳಿಗೆ ಕೊರೆಸಬೇಕು. ಅಧ್ಯಾಪಕರು, ಈ ಸಂದರ್ಭದಲ್ಲಿ ಮಕ್ಕಳು ಕಮಕ್-ಕಿಮಕ್ ಎನ್ನದ ಹಾಗೆ, ಎದ್ದು ತಪ್ಪಿಸಿ ಕೊಂಡು ಹೋಗದ ಹಾಗೆ ನಾಕಾಬಂದಿ ಹಾಕಿ, ಸರ್ಪಗಾವಲು ಕಾಯಬೇಕು.

ವಿಚಿತ್ರ ಎನಿಸಿದರೂ ಸತ್ಯಕ್ಕೆ ಹತ್ತಿರವಿರುವ ಒಂದು ಸಂಗತಿಯಿದೆ. ಸಾಮಾನ್ಯವಾಗಿ ಆರ್ಟ್ಸ್‌ಗೆ ಹಳ್ಳಿಗರು, ಹಿಂದುಳಿದ ವರ್ಗದವರು, ದಲಿತರು ಸೇರಿಕೊಳ್ಳುತ್ತಾರೆ. ಸೈನ್ಸ್ ವರ್ಗ ಹಾಗೂ ಜಾತಿ ಎರಡರಲ್ಲೂ ಮಧ್ಯಮ ಹಾಗೂ ಮೇಲ್ವಾತಿಯವರ ಪಾಲೇ ಹೆಚ್ಚು. ಇನ್ನು, ಕಾಮರ್ಸ್ ಈ ಎರಡರ ಸಂಕರ!

ಸೈನ್ಸ್ ಕಾಲೇಜೊಂದರಲ್ಲಿ ಪಾಠ ಮಾಡುತ್ತಿದ್ದ ಭಾಷಾ ಅಧ್ಯಾಪಕರು ಆ ವರ್ಷ ತೇಜಸ್ವಿಯವರ ‘ಕರ್ನಾಟಕ ಸಂಸ್ಕೃತಿ’ ಲೇಖನ ಬೋಧಿಸಬೇಕಾಯಿತು. ಪುರೋಹಿತಶಾಹಿ ಬಗೆಗೆ ಅಲ್ಲಿ ಖಾರವಾದ ವಿಮರ್ಶೆಯಿತ್ತು. ಅಧ್ಯಾಪಕರು ಪಾಠವನ್ನಷ್ಟೆ ಮಾಡಿದರು.

ಮಾರನೆಯ ದಿನ ಪ್ರಿನ್ಸಿಪಾಲರು ಅಧ್ಯಾಪಕರನ್ನು ಕರೆಸಿ, “ನೀವು ಲಾಂಗ್ರೇಜ್ ಟೀಚರ್ಸು ಪಾಠ ಬಿಟ್ಟು ಏನೇನೋ ಮಾಡ್ತೀರಿ ಅಲ್ವಾ!”-ಎಂದು ಕೇಳಿದರಂತೆ. ಕಕಮಕರಾದ ಅಧ್ಯಾಪಕರು ಏನೇನೋ ಹೇಳಲು ಹೋಗಿ, ಕೊನೆಗೆ ಏನೂ ಹೇಳಲಾಗದೆ ಪೆಕರನಂತೆ ನಿಂತುಬಿಟ್ಟರು.

ಕೊನೆಗೊಮ್ಮೆ ಪ್ರಿನ್ಸಿ, ಅವರಿಗೆ ಈ ರೀತಿ ಕಿವಿಮಾತು ಹೇಳಿದರು: “ಮೇಷ್ಟರು ಎಂದರೆ ಪುಸ್ತಕದಲ್ಲಿ ಇರುವುದನ್ನೆ ಮಾಡುವುದಲ್ಲ!”

ಕಾಲೇಜಿನ ಎನ್.ಎಸ್.ಎಸ್. ಘಟಕ ವರ್ಷಕ್ಕೊಮ್ಮೆ ಹಳ್ಳಿಯೊಂದರಲ್ಲಿ ಕ್ಯಾಂಪು ಹೂಡಬೇಕಷ್ಟೇ. ಏಳು ದಿನಗಳ ಈ ಕ್ಯಾಂಪು ಕಾದಂಬರಿಗಾಗುವಷ್ಟು ಅನುಭವ ಕಲಿಸುತ್ತದೆ.

ಒಂದು ಸಾರಿ ಹಳ್ಳಿಯೊಂದರ ಮಠದಲ್ಲಿ ಆಶ್ರಯ ಪಡೆದು ಕ್ಯಾಂಪು ಹೂಡಲಾಯಿತು. ಅಲ್ಲಿ ಎರಡು ಪಂಗಡಗಳು ಶಕ್ತಿಶಾಲಿಗಳಾಗಿದ್ದವು. ಸಂಜೆಯ ಕಾರ್ಯಕ್ರಮಕ್ಕೆ ‘ಈ’ ಪಂಗಡದವರನ್ನು ಕರೆಸಿದರೆ ‘ಆ’ ಪಂಗಡದವರು ಗರಂ ಆಗುತ್ತಿದ್ದರು. ‘ಆ’ ಪಂಗಡದವರಿಗೆ ಮಣೆಹಾಕಿದರೆ ‘ಈ’ ಪಂಗಡದವರು ಮುನಿಸು ತೋರುತ್ತಿದ್ದರು. ‘ಆ’, ‘ಈ’ ಇಬ್ಬರನ್ನೂ ಒಂದೇ ವೇದಿಕೆಗೆ ತರಲು ಯತ್ನಿಸಿ ಯತ್ನಿಸಿ ಸಾಕಾಗಿ ಹೋಯಿತು. ಎನ್.ಎಸ್.ಎಸ್. ಆಫೀಸರನನ್ನು ಊರಿನವರು ನೇರವಾಗಿಯೆ ಕೇಳಿ, ಜಾತಿ ತಿಳಿದುಕೊಳ್ಳುತ್ತಿದ್ದರು. ‘ನಮ್ಮವನು’ ಅಂತ ಅನಿಸಿದರೆ ಸ್ನಾನ, ಊಟಕ್ಕೆ ಮನೆಗೇ ಕರೆಯುತ್ತಿದ್ದರು.

ಇನ್ನೊಂದು ಕ್ಯಾಂಪಿನಲ್ಲಿ ಸ್ನಾನಕ್ಕೆ ಚೊಕ್ಕ ವ್ಯವಸ್ಥೆ ಇರಲಿಲ್ಲ, ಊರಿನ ಯಜಮಾನರು, ಆಫೀಸರ್ ಆಗಿದ್ದ ನನಗೇ ಹೇಳಿದರು: ‘ನಮ್ಮವರ ಮಕ್ಕಳನ್ನು ಮಾತ್ರ ನಮ್ಮ ಮನೆಗೆ ಸ್ನಾನಕ್ಕೆ ಕಳಿಸಿ!” ‘ಧರ್ಮಸಂಕಟ’ ಶಬ್ದದ ಅರ್ಥ ನಿಜವಾಗಿಯೂ ನನಗೆ ಅಂದೇ ಅರ್ಥವಾದದ್ದು!

ಕಾಲೇಜು ಮೇಷ್ಟರುಗಳಿಗೆ ಇನ್ನೊಂದು ಮಹತ್ವದ ಕೆಲಸ ವಹಿಸಿರುತ್ತಾರೆ. ಅಪ್ಪಿತಪ್ಪಿಯೂ ಹುಡುಗ-ಹುಡುಗಿಯರು ಲವು ಮಾಡದ ಹಾಗೆ ನಜರಿಟ್ಟು ನೋಡಿಕೊಳ್ಳಬೇಕು. ಅದಕ್ಕೆ ಆಸ್ಪದ ಈಯುವಂಥ ಯಾವ
ಕಾರ್ಯಕ್ರಮಗಳನ್ನೂ ಮಾಡುವಂತಿಲ್ಲ! ಪ್ರವಾಸಗಳಿಗೆ ಕತ್ತರಿಹಾಕಿ ಇಂಡಸ್ಟ್ರಿಯಲ್ ವಿಜಿಟ್ ಹಾಗೂ ಫೀಲ್ಡ್ ವಿಜಿಟ್‌ಗಳನ್ನು ಮಾತ್ರ ನಮ್ಮ ಕಣ್ಣಾವಲಿನಲ್ಲಿ ಕರೆದೊಯ್ದು ಜತನದಿಂದ ವಾಪಸ್ ಕರೆತರಬೇಕು.

ರಾಜಪ್ಪ ದಳವಾಯಿ ನಮಗೆ ಪಾಠ ಮಾಡುವಾಗ ತಮಾಷೆಗೆ ರೇಗಿಸುತ್ತಾ ಹೇಳುತ್ತಿದ್ದರು: “ನೀವೆಲ್ಲಾ ಯಾಕೆ ಒಬ್ಬೊಬ್ಬರೆ ಓಡಾಡ್ತೀರಾ?” -ಅಂತ. ಮಮತಾ ಸಾಗರ ಮೇಡಂ, ಹುಡುಗ-ಹುಡುಗಿಯರು ಪ್ರತ್ಯೇಕವಾಗಿ ಕೂರುತ್ತಿದ್ದನ್ನು ಸುತರಾಂ ಒಪ್ಪುತ್ತಿರಲಿಲ್ಲ. ಇಂತಹ ಸಂಗತಿಗಳನ್ನು ಆಕಸ್ಮಿಕವಾಗಿಯೋ, ನಿದರ್ಶನಕ್ಕಾಗಿಯೋ ಕ್ಲಾಸಿನಲ್ಲಿ ಒಮ್ಮೊಮ್ಮೆ ಹೇಳಿಬಿಡುತ್ತಿದ್ದೆ. ಅನಂತರ ನಾನೇ ಖುದ್ದು ಮಕ್ಕಳ ಕೈಗೆ ದೊಣ್ಣೆ ಕೊಟ್ಟೆನಲ್ಲ ಎಂದು ನೆನಪಾಗುತ್ತಿತ್ತು.

ಹೀಗೊಮ್ಮೆ ಹೇಳಿ, ಮಕ್ಕಳೆಲ್ಲಾ ಖುಷಿಯಿಂದ ಕೇಕೆಹಾಕಿ, ಅದು ಮೇಲಿನವರಿಗೆ ತಲುಪಿ, ಅವರು ನನ್ನನ್ನು ಕರೆಸಿ, ಸಮಜಾಯಿಷಿ ಕೇಳಿದರು. ”ಮೇಷ್ಟರು ಯಾವತ್ತೂ ಸ್ವಂತ ವಿಷಯಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳಬಾರದು. ಪಾಠ ಎಷ್ಟೋ ಅಷ್ಟು! ಅವರು ಫೀ ತುಂಬುತ್ತಾರೆ, ನಾವು ಪಾಠ ಮಾಡ್ತಾ ಇದ್ದೀವಿ-ಇಷ್ಟು ವ್ಯವಹಾರ ಸಾಕು”-ಎಂದು ಕಿವಿಹಿಂಡಿದರು. ಇಂಥವರಿಗೆ ಗುರು-ಶಿಷ್ಯರ ಸಂಬಂಧದ ಸೊಗಸಿನ ಬಗ್ಗೆ ಏನು ಹೇಳಲು ಬಂದೀತು! ಟಿ.ಎಸ್‌.ವೆಂಕಣಯ್ಯ, ತ.ಸು.ಶಾಮರಾಯ, ಡಿ.ಎಲ್. ನರಸಿಂಹಾಚಾರ್, ಎಂ.ಹಿರಿಯಣ್ಣನಂತಹವರ ಹೆಸರುಗಳನ್ನಾದರೂ ಈ ಜನ ಕೇಳಿಬಲ್ಲರೇ!

ಕೊರೊನಾ ಮುನ್ನ ಕ್ಲಾಸುಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಕಂಡರೆ ಜಪ್ತಿಮಾಡಲು ಮೇಷ್ಟರುಗಳಿಗೆ ಸೂಚಿಸಲಾಗಿತ್ತು. ಹೀಗೆ ಜಪ್ತಿಗೊಂಡ ಮೇಲೆ ಅವನನ್ನು/ಅವಳನ್ನು ಅಲೆಅಲೆಸಿ, ಅಳಿಸಿ, ಅರ್ಧಗಂಟೆ ಕೊರೆದು ಹಿಂತಿರುಗಿಸಬೇಕೆಂಬ ಅನುಬಂಧವೂ ಇದೆ.

ಈ ಸಿಟ್ಟಿಗೋ ಏನೋ ವಿದ್ಯಾರ್ಥಿಗಳು, ನಾವು ಪಾಠ ಮಾಡುವಾಗ ಹೇಗೋ ನಮ್ಮ ಫೋಟೋಗಳನ್ನು (ಬೇರೆ ಬೇರೆ ಭಾವಭಂಗಿಗಳ) ತೆಗೆದು, ಅದಕ್ಕೆ ಚಿತ್ರ-ವಿಚಿತ್ರ ಹಾಡುಗಳನ್ನು ಸಂಯೋಜಿಸಿ ಟ್ರೋಲ್‌ಮಾಡಿ ಸಿಕ್ಕಸಿಕ್ಕಲ್ಲಿ ಹಂಚಿಬಿಡುತ್ತಿದ್ದರು.

ಒಮ್ಮೆ ಹೀಗಾಯಿತು: ಒಬ್ಬ ವಿದ್ಯಾರ್ಥಿ ಅಧ್ಯಾಪಕಿಯ ಫೋಟೋ ತೆಗೆಯುತ್ತಿದ್ದುದು ಆಕೆಯ ಕಣ್ಣಿಗೆ ಬಿದ್ದುಬಿಟ್ಟಿತು. ಫೋನ್ ಜಪ್ತಿಯಾಯಿತು. ಫೋಟೊ ಡಿಲೀಟ್ ಮಾಡಿಸಲು ಅವನಿಂದ ಲಾಕ್ ಓಪನ್ ಮಾಡಿಸಿ ನೋಡಿದರೆ, ಮೇಡಂಗೆ ತಲೆಸುತ್ತು ಬರುವುದೊಂದು ಬಾಕಿ! ಆಕೆಯ ಬಗೆಬಗೆಯ ಭಾವ ಸುರಿಸುವ ಫೋಟೋಗಳು ಅಲ್ಲಿದ್ದವು. ಇದು ಗಂಭೀರ ವಿಷಯ ಎನಿಸಿತು. ಆದರೆ, ಇದರ ಮುಕ್ತಾಯ ಮಾತ್ರ ಸರಳವಾಗಿ ಮುಗಿಯಿತು: ಹುಡುಗ ಹೇಳಿದ: “ನಾನು ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ!”

ಮುಂದಿನದನ್ನು ಯಾರೂ ಊಹಿಸಬಹುದು!

ಕೊರೊನಾ ಕಾಲದ ಇನ್ನೊಂದು ಕಿಸ್ತು ಮತ್ತೂ ಮೋಜಿನದು ಹಾಗೂ ಪೇಚಿನದು. ಈ ಅವಧಿಯಲ್ಲಿ ಎಲ್ಲೆಲ್ಲೂ ಲಾಕ್‌ಡೌನ್ ಇದ್ದುದು ಸರಿಯಷ್ಟೇ. ಕ್ಲಾಸುಗಳ ಕತೆಯೇನು? ಶಿಕ್ಷಣ ಇಲಾಖೆ ಆನ್‌ಲೈನ್ ಕ್ಲಾಸುಗಳನ್ನು ತೆಗೆದುಕೊಳುವಂತೆ ಆದೇಶಿಸಿತ್ತು.

ಯಾರಲ್ಲಿ ಮೊಬೈಲ್ ಬಳಕೆ ಸಲ್ಲದು ಎಂದು ಆಗ್ರಹಿಸುತ್ತಿದ್ದೆವೋ ಅವರಲ್ಲಿಯೇ ದಮ್ಮಯ್ಯ ಗುಡ್ಡೆಹಾಕಿ ಮೊಬೈಲ್ ಬಳಸುವಂತೆ ಬೇಡಬೇಕಾಯಿತು. ತರಗತಿಗಳ ರೆಕಾರ್ಡ್‌ ತೋರಿಸದಿದ್ದರೆ ಸಂಬಳಕ್ಕೆ ತತ್ವಾರವಾಗುತ್ತಿತ್ತು.

ಈ ಹುಡುಗರು ಬೇಕೆಂದೇ ಕ್ಲಾಸು ತಪ್ಪಿಸಿ ತೋಟ, ಅಂಗಡಿ, ದೊಡ್ಡಿ ಇಲ್ಲೆಲ್ಲಾ ಇದ್ದುಕೊಂಡು ಪಾಠ ಕೇಳುವಂತೆ ನಟಿಸುತ್ತಿದ್ದರು. ಒಬ್ಬನಂತೂ ನೆಟ್‌ವರ್ಕ್ ಸಿಗುತ್ತಿಲ್ಲ ಎಂದು ಮರಹತ್ತಿ ಮಂಗಗಳ ಜೊತೆ ರೆಂಬೆ ಹಂಚಿಕೊಂಡು ಪಾಠ ಕೇಳುತ್ತಿದ್ದ. ಈ ಸಂದರ್ಭದ ಟ್ರೋಲುಗಳು ಈಗಲೂ ಜನಪ್ರಿಯವೆ!

ಕಾಲೇಜು ಮೇಷ್ಟರಾದ ಕರ್ಮಕ್ಕೆ ಕೆಲವು ಕಲ್ಯಾಣ ಕಾರ್ಯಗಳನ್ನು ಮಾಡಬೇಕಾಗುತ್ತದೆ. ನಾಲ್ಕು ವರ್ಷಕ್ಕೊಮ್ಮೆ ಡೆಲ್ಲಿಯಿಂದ ಇಳಿಯುವ ನ್ಯಾಕ್ ಸಮಿತಿಯಿಂದ ಮೇಲ್ಮಟ್ಟದ ದರ್ಜೆ ಸಂಪಾದಿಸಲು ಮೇಷ್ಟರುಗಳು ಕೆಲವು ಸರ್ಕಸ್ಸುಗಳನ್ನು ಮಾಡಬೇಕಾಗುತ್ತದೆ. ಆಗಿಲ್ಲದ ಕಾರ್ಯಕ್ರಮಗಳು ಆದ ಹಾಗೆ, ಸರ್ಟಿಫಿಕೇಟ್ ಕೋರ್ಸುಗಳು ನಡೆದ ಹಾಗೆ, ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ನೌಕರಿ ಪಡೆದ ಹಾಗೆ, ಈ ಹಾಗೆ-ಹೀಗೆಗಳ ಹತ್ತಾರು ಯೋಜನೆಗಳನ್ನು ರಾತ್ರೋರಾತ್ರಿ ಸೃಷ್ಟಿಸಬೇಕಾಗುತ್ತದೆ. ಬಡಪಾಯಿ ಕಾಲೇಜು ಮೇಷ್ಟರುಗಳೇ ಇವುಗಳ ಅಧ್ವರ್ಯುಗಳು.

ಗುರು ಹಿಂದೆಲ್ಲಾ ವಿದ್ಯಾರ್ಥಿಗಳಿಗೆ ಗುರುತ್ವಕೇಂದ್ರವಾಗಿದ್ದ. ಆಗವರಿಗೆ ಮುಂದೆ ಗುರಿಯಿತ್ತು; ಅದು ನಿಶ್ಚಲವೂ ಆಗಿತ್ತು. ಈಗ ಗೂಗಲ್ ಗುರು’ ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿದ್ದಾನೆ. ಅಧ್ಯಯನ-ಅಧ್ಯಾಪನಗಳಲ್ಲಿ ತೊಡಗಿಸಿಕೊಳ್ಳಬೇಕಾದ ಮೇಷ್ಟರುಗಳು ಪತ್ಯೇತರ ಪರದಾಟಗಳಲ್ಲಿ ಸಿಕ್ಕಿಬಿದ್ದಿದ್ದಾರೆ.
anandgopal222@gmail.com

andolana

Recent Posts

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

8 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

9 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

14 hours ago

ಸೆಟ್ಟೇರಿತು ರಮೇಶ್ ಅರವಿಂದ್, ಗಣೇಶ್ ಹೊಸ ಸಿನಿಮಾ …

ರಮೇಶ್‍ ಅರವಿಂದ್ ಮತ್ತು ಗಣೇಶ್‍ ಒಟ್ಟಿಗೆ ನಟಿಸುತ್ತಾರೆ ಎಂಬುದು ಕಳೆದ ವರ್ಷದ ಸುದ್ದಿ. ‘ಇನ್‍ಸ್ಪೆಕ್ಟರ್‍ ವಿಕ್ರಂ’, ‘ಮಾನ್ಸೂನ್‍ ರಾಗ’, ‘ರಂಗನಾಯಕ’…

15 hours ago

ಮಡಿಕೇರಿ: ಪೊನ್ನಂಪೇಟೆಯಲ್ಲಿ ವೈಭವ ಪೂರಿತ ಗಣೇಶ ಹಬ್ಬ

ಸಂಪೂರ್ಣ ಹೂವಿನಿಂದ ಶೃಂಗಾರಗೊಂಡ ಬಸವೇಶ್ವರ ದೇವಾಲಯ..... ಮಡಿಕೇರಿ: ಪೊನ್ನಂಪೇಟೆಯಲ್ಲಿ ಇಂದು(ಸೆ.7) ಬೆಳಿಗ್ಗೆ ಗಣೇಶನನ್ನು ಪುರದ ಬಸವೇಶ್ವರ ದೇವಸ್ಥಾನಕ್ಕೆ ಗೌರಿ ಕೆರೆಯಿಂದ…

15 hours ago