ಆಂದೋಲನ ಪುರವಣಿ

ಹಾಡು ಪಾಡು : ನದಿ ದಂಡೆಯ ಸಂಜೆ

ಸಂಜೆ ಆವರಿಸಿಕೊಳ್ಳತೊಡಗಿತ್ತು. ಸುಧೀರನ ಬೈಕು ಅವನಿಗೆ ತಿಳಿಯದಂತೆ ನಿಧಾನಕ್ಕೆ ಅಪ್ಪ ಕರೆದುಕೊಂಡು ಹೋಗುತ್ತಿದ್ದ ಆ ನದಿ ದಂಡೆಯ ಕಡೆಗೆ ಚಲಿಸತೊಡಗಿತು. ಅಪ್ಪ ಬಂದಾಗಲೆಲ್ಲ ಹಸಿರಾಗಿರುತ್ತಿದ್ದ ಗುಡ್ಡಗಳು ಇಂದು ಒಣಗಿ ನಿಂತಿದ್ದವು. ನದಿಯಲ್ಲಿ ಬೊಗಸೆಯಷ್ಟು ನೀರು ಬಿಟ್ಟು ಉಳಿದೆಲ್ಲವು ಬಿರುಕುಗೊಂಡಿತ್ತು. ಮುಳುಗುತ್ತಿದ್ದ ಸೂರ್ಯನೆದೆಯ ರಂಗು ಮಂಕಾಗಿತ್ತು.

-ಇಸ್ಮಾಯಿಲ್ ತಳಕಲ್

ತಡರಾತ್ರಿಯವರೆಗೆ ಓಟಿಟಿಯಲ್ಲಿ ಕಾಮಿಡಿಯೊಂದರ ಡಬ್ಬಿಂಗ್ ಮೂವಿಯೊಂದನ್ನು ನೋಡುತ್ತಾ, ತುಂಬಾ ಹೊತ್ತು ನೋಡಿದ ಮೇಲೂ ನಗುವೇ ಬರದಂತಾಗಿ ಅದರ ಬದಲು ಆಕಳಿಕೆಗಳು ಹೆಚ್ಚಾಗಿ ಮಧ್ಯೆ ಯಾವಾಗಲೋ ನಿದ್ದೆಗೆ ಜಾರಿದ್ದ ಸುಧೀರನಿಗೆ ಒಮ್ಮೆಲೇ ಕಿವಿ ಹರಿದು ಹೋಗುವಂತೆ ಮೊಬೈಲ್ ಒದರತೊಡಗಿದ್ದು ನಿದ್ರಾಭಂಗವಾಯಿತು. ಅಸಮಾಧಾನದಿಂದಲೇ ಅರೆತೆರೆದು ಮುಚ್ಚುತ್ತಿದ್ದ ಕಣ್ಣುಗಳಿಂದ ಮೊಬೈಲನ್ನು ಹುಡುಕಿದ. ಬೆಳಗಿನ ಸವಿನಿದ್ದೆಯ ತಾತ್ಕಾಲಿಕ ಸ್ವರ್ಗಕ್ಕೆ ಕೊಳ್ಳಿ ಇಟ್ಟವರಂತೆ ಈ ಮೊಬೈಲ್ ಮತ್ತೆ ಮತ್ತೆ ರಿಂಗಣಿಸುತ್ತಿದ್ದಕ್ಕೆ ವಿಪರೀತ ಸಿಟ್ಟು ನೆತ್ತಿಗೇರಿ ಕರೆ ಯಾರದ್ದೆಂದು ನೋಡಿದ. ಅದೆ, ನಿನ್ನೆ ರಾತ್ರಿ ಕರೆ ಮಾಡಿ ವಾರದ ಹಿಂದೆ ತನ್ನ ಮಗಳ ಬರ್ತ್‌ಡೇ ಪಾರ್ಟಿಯ ಫೋಟೋಗಳನ್ನು ಇನ್ನೂ ನೀಡಿಲ್ಲವೆಂದು ಗೋಗರೆದಿದ್ದ ಗಿರಾಕಿ. ಇವತ್ತು ಕೊಡುತ್ತೇನೆ ಎಂದಿದ್ದೇ ತಡ ಬೆಳಿಗ್ಗೆಯಿಂದ ಹನ್ನೊಂದು ಬಾರಿ ಕರೆ ಮಾಡಿದ್ದಾನೆ ಪುಣ್ಯಾತ್ಮ. ಅಂದು ಅವರ ಮಗಳಿಗಿಂತ ಅವರ ಹೆಂಡತಿೆುೀಂ ಬಲವಂತವಾಗಿ ವಿವಿಧ ಭಂಗಿಯಲ್ಲಿ ನಿಂತು ಚಿತ್ರ ವಿಚಿತ್ರ ನಗು ಹೊಮ್ಮಿಸುತ್ತಾ ಫೋಟೊ ತೆಗೆಸಿಕೊಂಡಿದ್ದು ಸುಧೀರನಿಗೆ ಇಲ್ಲದ ಕಿರಿಕಿರಿೆುಂನಿಸಿ ಕೊನೆಗೆ ಸಹನೆ ಕಳೆದುಕೊಂಡು ‘ಕ್ಯಾಸುವಲ್ ನಗು ನಗಿ ಮೇಡಂ, ಯಾಕೋ ಸ್ವಲ್ಪ ಓವರ್ ಆಗಿ ಕಾಣಿಸ್ತಿದೆ’ ಎಂದುಬಿಟ್ಟಿದ್ದ. ಬೂದು ಕುಂಬಳಕಾಯಿ ತರಹ ಮುಖ ಊದಿಸಿಕೊಂಡು ಹೊರಟು ಹೋಗಿದ್ದ ಆ ಯಮ್ಮ ಮತ್ತೆ ಫೋಟೊ ತೆಗೆಸಲು ಬರೆದೆ ಇದ್ದದ್ದು ಒಂಚೂರು ಸಮಾಧಾನ ನೀಡಿತ್ತಾದರೂ ಅಲ್ಲಿಂದ ಯಾವಾಗ ತೊಲಗುವೆನೋ ಎನಿಸಿತ್ತು. ಈಗ ಅವಳ ಗಂಡ ಪದೇ ಪದೇ ಫೋನ್ ಮಾಡಿದ್ದು ಅವನ ಹೆಂಡತಿಯ ನಗುವೆ ಕಣ್ಣ ಮುಂದೆ ಬಂದು ಮೂತಿಗೆ ಇರಿದಂತಾಯಿತು. ಒಲ್ಲದ ಮನಸ್ಸಿನಿಂದಲೇ ಕರೆ ಸ್ವೀಕರಿಸಿ ‘ಹಲೋ’ ಎಂದ. ಆ ವ್ಯಕ್ತಿ ಮಾತಿಗೆ ಮುಂಚೆ ನಕ್ಕು ‘‘ಫೋಟೋ ರೆಡಿಯಾದ್ವಾ ಸರ್, ನನ್ ಹೆಂಡ್ತಿಗೆ ಅವುಗಳನ್ನು ನೋಡೊ ಆಸೆ ಹೆಚ್ಚಾಗ್ತಾಯಿದೆ’’ ಎಂದು ನಗುತ್ತಲೇ ವಾಕ್ಯ ಮುಗಿಸಿದ. ಅವನ ನಗು ಅವನ ಹೆಂಡತಿಗಿಂತಲೂ ಘೋರ ಅನಿಸಿ ಫೋನ್ ಕರೆ ತುಂಡರಿಸಿದ. ಪ್ರಾಣವೇ ಹೋದಂತೆನಿಸಿತು. ಮೊಬೈಲನ್ನು ಸೈಲೆಂಟ್ ಮೋಡಿನಲ್ಲಿಟ್ಟು ಗಡಿಯಾರ ನೋಡಿದ ಬೆಳಿಗ್ಗೆ ಎಂಟು ಗಂಟೆ ಸರಿದು ಹೋಗಿತ್ತು.

ವಾಟ್ಸಾಪ್‌ನಲ್ಲಿ ಮಮತಾಳ ಮೆಸೇಜ್‌ಗಳನ್ನು ನೋಡುತ್ತಲೇ ಮನಸ್ಸು ಒಂಚೂರು ಉಲ್ಲಸಿತಗೊಂಡು ಅವಳ ಮೆಸೇಜ್‌ಗಳನ್ನು ಓದತೊಡಗಿದ. ‘ವಿಶ್ವ ನಗುವಿನ ದಿನದ ಶಭಾಶಯಗಳು’ ಅಂತ ಬರೆದು ತನ್ನದೇ ನಗುವಿನ ಸೆಲ್ಛಿೊಂಂದನ್ನು ಕಳುಹಿಸಿದ್ದಳು. ನಗುವಿಗೂ ಒಂದು ದಿನ ಇದೆ ಅಂತ ಅಂದೆ ಗೊತ್ತಾಗಿದ್ದು. ಈ ಎಲ್ಲಾ ನಗುಗಳ ಮಧ್ಯೆ ಮಮತಾಳ ನಗು ಒಂದಿಷ್ಟು ಮನಸ್ಸಿಗೆ ಹಿತ ಅನಿಸಿ ಬೆಳ್‌ಬೆಳಿಗ್ಗೆ ಬೇಸರಗೊಂಡಿದ್ದ ಸುಧೀರ ಈಗ ಸ್ವಲ್ಪ ಗೆಲುವಾದ.

‘‘ಏ ಕೋತಿ, ನಿನ್ ವಾಟ್ಸಾಪ್ ಡಿಪಿ ನೋಡು, ಗಡ್ಡ ಬಿಟ್ಕೊಂಡು, ತಲೆ ಕೆದ್ರುಕೊಂಡು ಒಳ್ಳೆ ಮಂಗ್ಯಾ ತರ ಕಾಣಾಕತ್ತಿ. ಇವತ್ ವರ್ಲ್ಡ್ ಸ್ಮ್ತ್ಯೈಲ್ ಡೇ ಕಣೊ, ಶೇವ್ ಮಾಡ್ಕೊಂಡು ಇವತ್ತಾದ್ರೂ ಒಂಚೂರು ನಗ್‌ನಗ್ತಾ ಸೆಲ್ಛಿ ತೆಕ್ಕೊಂಡು ಡಿಪಿಗೆ ಹಾಕಬಾರ್ದಾ?, ಸ್ಟುಪಿಡ್’’ ಎಂದು ಅವಳು ಬೈದಿದ್ದಕ್ಕೆ ಗಡ್ಡ ಕೆರ್ಕೊಂತಾನೆ ನಕ್ಕ. ‘ಈ ಹುಡ್ಗೀರು ಹಿಂಗ್ ಮುದ್ಮುದ್ದಾಗಿ ಬೈತಾ ಇದ್ರ ಜನ್ಮ ಪೂರ್ತಿ ಬೈಸಿಕೊಳ್ತಾನೆ ಇರಾಣ ಅನ್ಸ್‌ತೈತಿ. ಮುಂದಿನ ಮೂರು ಜನ್ಮಕ್ಕೂ ಹಿಂಗ ಬಯ್ತಾ ಇರು ತಾಯಿ’ ಎಂದು ಅವಳಿಗೊಂದೆರಡು ಮುತ್ತು ಕೊಡುವ ಇಮೋಜಿ ಕಳಿಸಿ ಮೇಲೆದ್ದ. ಅವಳು ಹೇಳಿದ್ಲು ಅಂತ ಪಾಪಸ್‌ಕಳ್ಳಿಯಂತಹ ಮುಖದ ಮೇಲೊಂದು ಬಲವಂತದ ನಗು ಮೂಡಿಸಿ ನಿದ್ದೆಗಣ್ಣಿನಲ್ಲಿಯೇ ಸೆಲ್ಛಿ ತೆಗೆಯಲು ಮುಖ ಸೊಟ್ಟಗೆ ಮಾಡಿ ಮೊಬೈಲ್ ಕ್ಲಿಕ್ಕಿಸಿದರೆ ತನ್ನದೇ ಸೆಲ್ಛಿ ತನಗೆೆುೀಂ ಇಷ್ಟವಾಗದ್ದರಿಂದ ಯಾಕೋ ಅದರ ಸಹವಾಸವೇ ಬೇಡವೆನಿಸಿತು. ಅದಕ್ಕೂ ತನಗೂ ಆಗಿ ಬರುವದಿಲ್ಲವೆಂದು ಮತ್ತೊಮ್ಮೆ ಸಾಬೀತಾಗಿ ಫೋಟೊ ಡಿಲಿಟ್ ಮಾಡಿಬಿಟ್ಟ. ಈ ಸೆಲ್ಛಿಗಾಗಿ ಒತ್ತಾಯಕ್ಕೆ ಹಲ್ಕಿರಿಯಬೇಕೆನ್ನುವುದು ಅವನ ಇತ್ತೀಚಿನ ಸೆಕೆಂಡ್ ಹ್ಯಾಂಡ್ ಸಂಶೋಧನೆ ಮತ್ತು ಪುರಾತನದ್ದೊಂದು ದೂರು.

ಆಗಾಗ ತನ್ನ ಕಂಪ್ಯೂಟರ್ ಪರದೆಗೊಂದು ಬೇರೆ ಬೇರೆ ವಾಲ್‌ಪೇಪರ್ ಇಡುವುದು ಸುಧೀರನಿಗೆ ರೂಢಿ. ಮಮತಾ ಇಂದು ವಿಶ್ವ ನಗುವಿನ ದಿನ ಎಂದು ಹೇಳಿದ್ದರಿಂದ ಯಾವುದಾದರೂ ಸಹಜ ನಗುವಿನ ಫೋಟೊ ಸಿಕ್ಕರೆ ಅದನ್ನೆ ಪರದೆಗೆ ಇಟ್ಟರಾಯಿತೆಂದು ಕಂಪ್ಯೂಟರ್‌ನಲ್ಲಿ ಹುಡುಕತೊಡಗಿದ. ಯಾವ ಯಾವೋ ಕಾರ್ಯಕ್ರಮಗಳಿಗೆ ಹೋಗಿ ಫೋಟೊ ತೆಗೆದು ಕಂಪ್ಯೂಟರ್‌ನಲ್ಲಿ ಸೇವ್ ಮಾಡಿದ್ದನ್ನೆ ಅರ್ಧ ಗಂಟೆ ಕುಳಿತು ಜಾಲಾಡಿದರೂ ಮನಸ್ಸಿಗೊಪ್ಪುವ ತೃಪ್ತ ನಗುವಿನ ಛಾಯೆಯಾಗಲಿ, ನಿಷ್ಕಲ್ಮಶದ ಮುಗುಳು ನಗೆಯ ಗೆರೆಯಾಗಲಿ ಯಾವ ಫೋಟೊದ ಮೂತಿಗಳಲ್ಲಿಯೂ ಮೂಡಿರಲಿಲ್ಲ. ಅಲ್ಲಿದ್ದ ಎಲ್ಲಾ ನಗುಗಳಿಗೂ ಕೃತಕ ಬಣ್ಣದ ಜಿಡ್ಡು ಅಂಟಿಕೊಂಡಂತಿತ್ತು. ಕೆಲವೊಂದು ಮುಖಗಳಲ್ಲಿದ್ದ ನಗು, ಗೋಡೆಗಳಲ್ಲಿ ಬಿಟ್ಟ ಬಿರುಕುಗಳಂತೆ ಕಂಡವು. ಮತ್ತೊಂದಿಷ್ಟು, ಎಲೆಯುದುರಿ ನಿಂತ ಜಾಲಿಮರದ ಮುಳ್ಳುಗಳಂತೆ.

ಸುಧೀರನಿಗೆ ಅಪ್ಪ ನೆನಪಾದ. ಚಿಕ್ಕಂದಿನಲ್ಲಿ ಅವನನ್ನು ನೋಡಿದಾಗಲೆಲ್ಲ ನಗು ಅಂದರೆ ಖುಷಿ ಅಂದುಕೊಂಡಿದ್ದ. ಅವನು ಆಗಾಗ ತಂದು ಕೊಡುತ್ತಿದ್ದ ಬಾಂಬೆ ಮಿಠಾಯಿ ಅಂದುಕೊಂಡಿದ್ದ. ಆದರೆ ನಗು ಎಂದರೆ ‘ಮತ್ತೇನೋ’ ಅಂತ ಅರ್ಥವಾಗುವ ಹೊತ್ತಿಗೆ ಬಹಳ ವರ್ಷಗಳು ಉರುಳಿ ಹೋಗಿದ್ದವು. ತನ್ನ ಕೈಯಲ್ಲಿ ಪೆನ್ನು ಇದ್ದಾಗ ಗೋಡೆಯ ಮೇಲೋ, ಫೋಟೋದ ಹಿಂಭಾಗಕ್ಕೋ ಆಗಾಗ ನಗುವಿಗೆ ಬಣ್ಣಗಳೆಷ್ಟು? ಮುಖಗಳೆಷ್ಟು? ಎಂದು ಗೀಚುವುದು ಒಂಥರ ಗೀಳಾಗಿತ್ತು. ಅಲ್ಲಿ ಮೂಡುತ್ತಿದ್ದ ಪ್ರಶ್ನಾರ್ಥಕ ಚಿಹ್ನೆಯೇ ದೊಡ್ಡದು. ಶುದ್ಧ ನಗುವನ್ನು ಸೋಸುವ ಜರಡಿ ಯಾವ ಮಾರ್ಕೆಟ್‌ನಲ್ಲಿ ಸಿಗಬಹುದು? ಯಾವ ಬಲೆಯಲ್ಲಿ ಸಹಜ ನಗು ಸಿಕ್ಕಿಕೊಳ್ಳಬಹುದು? ಮನಸೊಳಗೆಯೇ ಕೊರೆದುಕೊಂಡ ಇಂತಹ ಪ್ರಶ್ನೆಗಳು ಬಹಳಷ್ಟಿದ್ದವು. ಕಂಪ್ಯೂಟರ್‌ಗೆ ಹೊಸ ವಾಲ್‌ಪೇಪರ್ ಇಡುವ ವಿಚಾರ ಮೊದಲ ಬಾರಿಗೆ ವಿಫಲವಾಯಿತು. ಮುಂಜಾನೆಯ ಬಿಸಿಲು ಚುರುಕುಗೊಳ್ಳುತ್ತಿದ್ದರೂ ಇವನು ಜಡವಾಗಿಯೇ ಇದ್ದ. ಇಂದು ಫೋಟೊ ಸ್ಟುಡಿಯೋಗೆ ಹೋಗಲು ಮನಸ್ಸಾಗದೆ ಕ್ಯಾಮೆರಾವನ್ನು ಕೊರಳಿಗ್ಹಾಕಿಕೊಂಡು ಬೈಕ್ ಹತ್ತಿ ಹೊರ ನಡೆದೆ. ನನ್ನ ಕಂಪ್ಯೂಟರ್‌ನ ವಾಲ್‌ಗೆ ಒಂದು ಸಹಜ ನಗು ಬೇಕಾಗಿತ್ತು.

ರಾತ್ರಿಯ ಹೈವೇಗಳಲ್ಲಿ ವಾಹನಗಳ ಹೆಡ್‌ಲೈಟು ಕಣ್ಣುಗಳಿಗೆ ಫಕ್ಕನೆ ಕುಕ್ಕುವಂತೆ, ಬೈಕ್ ಹತ್ತಿ ಹೊರಟ ಅವನ ಕಣ್ಣುಗಳ ಮುಂದೆ ಅಪ್ಪನ ನಗುವಿನ ಮುಖ ಬೇಡವೆಂದರೂ ಪಳ್ ಎಂದು ಸುಳಿದು ಮರೆಯಾಗತೊಡಗಿತು. ಟ್ಯೂಬ್‌ಲೈಟ್ ಆರಿ ಆರಿ ಹತ್ತುವ ಹಾಗೆ ಅವನ ನಗು ಕಣ್ಮುಂದೆ ಸುಳಿದಾಡತೊಡಗಿತು. ಸ್ಮ್ತ್ಯೈಲ್ ಪ್ಲೀಸ್ ಎನ್ನುತ್ತಲೇ ಆಗಿನ ರೀಲು ಸುತ್ತುವ ಕ್ಯಾಮೆರಾಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ಅಪ್ಪ ಬೇರೆಯವರ ಕಣ್ಣೊಳಗೆ ತನ್ನ ನೋವನ್ನು ಸೆರೆಯಾಗುವುದಕ್ಕೆ ಬಿಟ್ಟವನೇ ಅಲ್ಲ. ಸ್ವಂತ ಮಗನಿಗೂ ಅರ್ಥವಾಗದಂತೆ ದಪ್ಪ ನಗುವಿನ ತೇಪೆ ಹಾಕಿಬಿಡುವಷ್ಟು ಜಾಣ. ಕ್ಯಾಮೆರಾ ಕಾರುತ್ತಿದ್ದ ಫ್ಲ್ತ್ಯ್ಯಾಶ್‌ಲೈಟಿನ ಮರೆಯಲ್ಲಿ ಅದನ್ನೆಲ್ಲ ಅದುಮಿಟ್ಟುಕೊಂಡಿದ್ದು ಸ್ವತಃ ತುಕ್ಕು ಹಿಡಿದ ಅವನ ಕ್ಯಾಮೆರಾಕ್ಕಷ್ಟೆ ಗೊತ್ತಿತ್ತು.

ಸುಧೀರ ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಪ್ರತಿ ದಿನ ತನ್ನ ಲೂನಾದಲ್ಲಿ ಅಪ್ಪ ಶಾಲೆಯ ತನಕ ಬಿಟ್ಟು ತನ್ನ ಸ್ಟುಡಿೋಂಗೆ ಹೋಗುವಾಗ, ಅವನ ಹಣೆಗೊಂದು ಮುತ್ತು ನೀಡಿ, ಎಳೆ ಕೈಗಳಿಂದ ತಾನು ಟಾಟಾ ಮಾಡಿದರೆ ತುಂಬಾ ಸೋತೋಷಗೊಳ್ಳುತ್ತಿದ್ದ ಅಪ್ಪ ಕ್ಯಾಮೆರಾದಂತೆ ನಕ್ಕುಬಿಡುತ್ತಿದ್ದ. ಹಾಗೆ ನಗುತ್ತಿದ್ದ ಅವನ ಭಾವಚಿತ್ರವನ್ನು ಸೆರೆಹಿಡಿಯುತ್ತಿದ್ದ ಸುಧೀರನ ಕಣ್ಣುಗಳು ಅದನ್ನು ಹಾಗೆೆುಂ ಎದೆಗೆ ಇಳಿಸಿಕೊಳ್ಳುತ್ತಿದ್ದವು. ಎಷ್ಟೊಂದು ಮುದ್ದಾಗಿ ನಗುತ್ತಾನೆ ಅಪ್ಪ. ನಗು ಎನ್ನುವದು ಬಹುಶಃ ಇವನ ತುಟಿಗಳಿಂದಲೇ ಹುಟ್ಟಿರಬೇಕೆನಿಸಿ ಅಪ್ಪನನ್ನು ತಬ್ಬಿಕೊಳ್ಳುತ್ತಿದ್ದ. ಶಾಲೆ ಬಿಟ್ಟ ನಂತರ ಲೂನಾದಲ್ಲಿ ಕೂರಿಸಿಕೊಂಡು ಊರ ಹೊರಗಿನ ಗುಡ್ಡದ ಇಳಿಜಾರಿನಲ್ಲಿ ಹರಿಯುತ್ತಿದ್ದ ನದಿ ದಂಡೆಗೆ ಬಹಳಷ್ಟು ಬಾರಿ ಕರೆದುಕೊಂಡು ಹೋದರೆ ಈ ಜಗತ್ತೆ ಮರೆತುಬಿಡುವಷ್ಟು ಆನಂದ. ತಪಸ್ಸಿಗೆ ಕುಳಿತಂತಿದ್ದ ಗಂಭೀರ ಗುಡ್ಡಗಳು, ಅವುಗಳಿಗೆ ತಪೋಭಂಗ ಮಾಡುವಂತೆ ಬಳುಕುತ್ತಿದ್ದ ನದಿ, ಸಂಜೆಗೆ ನಶೆೆುೀಂರಿಸಿಕೊಳ್ಳುತ್ತಿದ್ದ ಗಾಳಿ, ಕೆನ್ನೆ ಕೆಂಪಾಗಾಗಿಸಿಕೊಂಡ ಸೂರ್ಯ ಎಲ್ಲವನ್ನೂ ನೋಡುತ್ತ ಹುಚ್ಚನ ಥರ ಕುಣಿಯುತ್ತಿದ್ದ. ಅಪ್ಪನಿಗಂತೂ ಅವೆಲ್ಲ ತುಂಬಾ ಇಷ್ಟವಾಗಿ ಪ್ರತಿದಿನವೂ ಅಲ್ಲಿ ಬರುವುದು ರೂಢಿಯಾಗಿಸಿಕೊಂಡಿದ್ದ. ತನ್ನನ್ನು ದಂಡೆಗೆ ಆಡಲುಬಿಟ್ಟು ಅಪ್ಪ ಅವೆಲ್ಲವುಗಳಿಗೆ ಎದುರಾಗಿ ಕ್ಯಾಮೆರಾದ ನೆತ್ತಿ ಒತ್ತುತ್ತಿದ್ದ. ಸುಧೀರ ಆಟವಾಡುತ್ತ ಅಪ್ಪ ಎಂದು ಕೂಗಿದಾಗ ಗುಡ್ಡ, ನದಿ, ಗಾಳಿ, ಸೂರ್ಯ ಅಪ್ಪನನ್ನೇ ಪ್ರತಿಧ್ವನಿಸುತ್ತಿದ್ದವು. ಸ್ವಲ್ಪ ಕತ್ತಲಾಗುತ್ತಲೇ ದೊಡ್ಡ ಕಲ್ಲಿನ ಬಂಡೆೊಂಂದರ ಮೇಲೆ ಕೂತು ಮಗ ಆಡುವುದನ್ನೆ ಗಮನಿಸುತ್ತಾ ಮಬ್ಬುಗತ್ತಲೆೊಂಳಗೆ ಬೆರೆತ ಅವನ ಅಸ್ಪಷ್ಟ ಮುಖದಲ್ಲಿ ನಗುವೊಂದೇ ಬೆಳಗುವುದು ಕಾಣುತ್ತಿತ್ತು. ಅವನ ನಗು ಕಂಡು ಅಪ್ಪ ಎಷ್ಟೊಂದು ಖುಷಿಯಾಗಿದ್ದಾನೆ ಎಂದು ನದಿಯ ನೀರಿನಲ್ಲಿ ಜಿಗಿದಾಡತೊಡಗುತ್ತಿದ್ದ. ಅವನ ಮುಖಕ್ಕೆ ಇಂತಹ ಸಾವಿರ ನಗುವಿನ ಬಳ್ಳಿ ಸುತ್ತಿಕೊಂಡಿರಲಿ ಎಂದು ದಂಡೆಯ ಮೇಲೆ ನಿಂತು ಆಕಾಶ ನೋಡುತ್ತಿದ್ದ. ಒಂದೊಂದಾಗೆ ಮೂಡುತ್ತಿದ್ದ ಎಳೆ ಚುಕ್ಕಿಗಳು ಪಳ್ಳೆಂದು ಮಿನುಗಿ ಅವನ್ನೊಟ್ಟಿಗೆ ಖುಷಿಯಲ್ಲಿ ಭಾಗಿಯಾಗುತ್ತಿದ್ದವು. ಅವನು ಪ್ರತಿ ಬಾರಿಯೂ ಕುಳಿತುಕೊಳ್ಳುತ್ತಿದ್ದ ಆ ಕಲ್ಲಿನ ಬಂಡೆ, ಬೆಚ್ಚಗೆ ಆವರಿಸಿಕೊಳ್ಳುತ್ತಿದ್ದ ನದಿ ದಂಡೆಯ ಆ ಸಂಜೆ ಎರಡೂ ಅಪ್ಪನಿಗೆ ಪ್ರೀತಿ. ಮಗನನ್ನು ಅಲ್ಲಿ ಕರೆದುಕೊಂಡು ಹೋದಾಗಲೆಲ್ಲ ಅಪ್ಪ ಬಂಡೆ ಮೇಲೆ ಕುಳಿತು ಸಂಜೆಗೆ ಮುಖವೊಡ್ಡುತ್ತಿದ್ದ. ಆಟವಾಡುತ್ತಾ ನಾನು ಅವನ ಕಡೆ ನೋಡಿದರೆ ಚುಕ್ಕಿ ಮಿನುಗಿದಂತೆ ಮುಗುಳು ನಗುತಿದ್ದ.

ಒಂದು ದಿನ ಕ್ಲಾಸ್ ರೂಮಿನೊಳಗೆ ಕಾಲಿರಿಸಿದ್ದೇ ತಡ ಅಂದು ಅಪ್ಪನಿಗೆ ಮುತ್ತೂ ಕೊಡದೆ ಟಾಟಾನೂ ಮಾಡದೆ ಮರೆತು ಬಂದುಬಿಟ್ಟಿದ್ದೇನೆಂದು ನೆನಪಾಗಿ ತಕ್ಷಣ ಮರಳಿ ಸುಧೀರ ಬಂದು ನೋಡಿದರೆ ಶಾಲೆಯ ಬಯಲಿನಲ್ಲಿ ಅಪ್ಪ ಕಾಣಲಿಲ್ಲ. ಎಂದೂ ಇಲ್ಲದೇ ಅಂದು ಮಾತ್ರ ಅಪ್ಪನ ಲೂನಾ ಕಪ್ಪನೆಯ ದಟ್ಟ ಹೊಗೆ ಬಿಟ್ಟು ಹೋಗಿದ್ದರ ಕುರುಹು ಮಾತ್ರ ಕಾಣುತ್ತಿತ್ತು. ಅವತ್ತು ಏನಾಗಿತ್ತು ನನಗೆ? ಎಂದೂ ಇರದ ಮರೆವು ಅಂದೆ ಏಕೆ ಬಂದಿತ್ತು? ಒಂದು ದಿನವೂ ತಪ್ಪಿಸಿದವನಲ್ಲ. ನಾ ಮರೆತು ಹಾಗೆಯೇ ಬರುವಾಗ ಅಪ್ಪನಾದ್ರೂ ಕೂಗಿ ಮಗನೆ ಏನೋ ಮರೆತಿದ್ದೀಯಾ ಎಂದರೂ ಸಾಕಿತ್ತು. ಅವನೂ ನೆನಪಿಸಲಿಲ್ಲ. ನಾನು ಮರಳಿ ಬರುವಷ್ಟೂ ಪುರುಸೊತ್ತು ಅವನಿಗಿರಲಿಲ್ಲ ಎಂದು ಅದೆಷ್ಟು ಬಾರಿ ಯೋಚಿಸುತ್ತಾನೋ ಇವನು. ಅವನು ಬರುವ ಮುಂಚೆಯೇ ಅವನಪ್ಪ ಹೋಗಿಬಿಟ್ಟಿದ್ದ. ಅವನು ಮರುದಿನವೂ ಟಾಟಾ ಮಾಡಲಿಲ್ಲ. ಎರಡು ದಿನದ ನಂತರವೂ ಮುತ್ತು ಕೊಡಲಿಲ್ಲ. ವಾರ, ತಿಂಗಳು, ವರ್ಷ ಅಷ್ಟೆ ಏಕೆ ಇಲ್ಲಿಯವರೆಗೂ ಸಾಧ್ಯವಾಗಲಿಲ್ಲ. ಮುಂದೆಯೂ ಕೂಡ. ಹೌದು, ಅಪ್ಪ ಹೋಗಿಬಿಟ್ಟಿದ್ದ. ಅಮ್ಮನಾದ್ರೂ ಹೇಳಬಹುದಿತ್ತು ‘‘ಸುಧಿ, ನಿಮ್ಮಪ್ಪಗ ಎದೆಯಾಗ ಎನೋ ಚುಚ್ಚಿದಂಗ ಆಗತೈತಂತ’’ ಅಂತ. ತನಗೆ ಗೊತ್ತಿದ್ದರೂ ಅವಳೂ ಹೇಳಲಿಲ್ಲ. ಅಪ್ಪನ ಜೊತೆ ಇದ್ದು ಇದ್ದು ಅವಳಿಗೂ ನೂರು ಸಂಕಟಗಳಿದ್ದರೂ ಅದನ್ನು ತೋರಗೊಡದ ನಗುವ ಕಾಯಿಲೆ ಬಂದಿರಬೇಕು. ನುಂಗಿಕೊಂಡಿದ್ದಳು. ಅಪ್ಪನ ಹೃದಯ ಮೂರೂ ಹೊತ್ತೂ ನನ್ನನ್ನೇ ಬಡಿದುಕೊಳ್ಳುತ್ತಿತ್ತಲ್ವಾ? ಅಂದು ಜೋರಾಗಿ ಬಡಿದುಕೊಂಡಿರಬೇಕು.

ಅಮ್ಮನೂ ಹಾಗೆಯೇ. ನಗುವಿನ ಬಣ್ಣವನ್ನು ಅಪ್ಪನ ಮೂತಿಯಿಂದ ಬಳಿದುಕೊಂಡು ತನ್ನ ಒಣ ತುಟಿಗಳಿಗೆ ಮೆತ್ತಿಕೊಂಡವಳು. ಆ ಬಣ್ಣಕ್ಕೆ ಎಷ್ಟೊಂದು ಶಕ್ತಿ ಇತ್ತೆಂದರೆ ಕ್ಯಾಮೆರಾದ ಫ್ಲ್ತ್ಯ್ಯಾಶ್‌ಲೈಟು ಪಳಕ್ಕನೆ ಬೆಳಕು ಕಕ್ಕಿ ಮರೆಯಾಗಿ ಹೋಗುವಂತೆ ಹೊರಟು ಹೋದ ಅಪ್ಪನ ನೆನಪನ್ನು ಮರೆಸುವಷ್ಟು. ಅವಳು ಎಂದೂ ಅಪ್ಪನ ನೆನೆದು ಕಣ್ಣು ತೋಯಿಸಿಕೊಂಡವಳಲ್ಲ. ತನಗೆ ಅಪ್ಪನಿಲ್ಲ ಎನ್ನುವ ಕೊರಗು ಕಾಡಲೂ ಬಿಟ್ಟವಳಲ್ಲ. ಅವಳೂ ಅಪ್ಪನಂತೆ ನಗುವನ್ನು ಬಿಟ್ಟು ತುಟಿಯಾಚೆ ಬೇರೆನೂ ಹೊರ ಚೆಲ್ಲಲಿಲ್ಲ. ಸುಧೀರ ಅರ್ಧ ಕಾಲೇಜು ಮುಗಿಸುವ ಹೊತ್ತಿಗೆ ಉರಿಯುತ್ತಿದ್ದ ಅಮ್ಮನ ನಗುವಿಗೆ ಮೊದಲ ಬಾರಿೆುಂಂಬಂತೆ ತೈಲ ಖಾಲಿಯಾಗಿತ್ತು. ಆಗತಾನೆ ಪೇಟಿಂಗ್ ಮಾಡಿದ ಗೋಡೆಗೆ ಮಳೆ ಹನಿಬಿದ್ದು ಅದು ಮೇಲಿಂದ ಕೆಳಗಿನವರೆಗೆ ಇಳಿದಾಗ ಉಂಟಾಗುವ ಕಲೆಯಂತೆ ಅಮ್ಮನ ಮುಖದ ನಗುವಿನ ಬಣ್ಣ ಕರಗಿ ಹೋಯಿತು. ಅವಳೆದೆಯಲ್ಲಿ ಒಳಗೊಳಗೆ ಕೊರಗುತ್ತಿದ್ದ ಇನ್ನೊಬ್ಬ ಅಮ್ಮ ಇದ್ದಳೆಂದು ಸರ್ಕಾರಿ ಆಸ್ಪತ್ರೆಯ ಜನರಲ್ ವಾರ್ಡಿನ ಬೆಡ್ಡು ಹೇಳಿಕೊಟ್ಟಿತು. ಅವಳು ಗಂಡನಿಲ್ಲ ಎನ್ನುವ ಖಾಲಿತನವನ್ನು ಒಳಗೆ ತುಂಬಿಕೊಂಡು ಮುಖದ ತುಂಬಾ ತನ್ನನ್ನೆ ಹೊದ್ದು ಬದುಕಿದವಳು. ಒಳಗಿದ್ದ ಅಪ್ಪ ಅಮ್ಮನನ್ನು ಬಿಡಲಿಲ್ಲ. ಒಂದು ದಿನ ಹೊರಗೂ ಆವರಿಸಿಕೊಂಡ.

ಎದೆ ತುಂಬೆಲ್ಲ ನೋವಿನ ರೀಲು ಸುತ್ತಿಟ್ಟುಕೊಂಡು ಅಪ್ಪ ಅದೇಗೆ ನಗುತ್ತಿದ್ದ? ಯಾಕೆ ನಗುತ್ತಿದ್ದ? ಎಂದು ಹತಾಶೆಗೊಳ್ಳುತ್ತಿದ್ದ ಸುಧೀರ. ತನ್ನೊಳಗಿನ ನೋವನ್ನು ನದಿಯಂತೆ ಹರಿಯಲು ಬಿಟ್ಟಿದ್ದರೆ ಅದು ಕಡಲ ಧ್ಯಾನಿಸಿ ಇಲ್ಲವಾಗುತ್ತಿತ್ತೇನೋ. ಆದರೆ ಮಾಡಿದ್ದೇನು? ಅದಕ್ಕೊಂದು ಫ್ರೇಮು ಹಾಕಿ ಎದೆಗೆ ನೇತು ಹಾಕಿಕೊಂಡು ಹಿರೋ ಆಗಲು ನೋಡಿದ. ಇಲ್ಲವಾದ. ಅಪ್ಪ, ನೀ ನನಗೆ ಅಪ್ಪನಾಗಿದ್ದರಷ್ಟೆ ಸಾಕಿತ್ತು ಎನಿಸಿ ಮುಖ ಹುದುಗಿಸಿಕೊಂಡು ಅತ್ತಿದ್ದಕ್ಕೆ ಲೆಕ್ಕವಿರಲಿಲ್ಲ.

ಪ್ಯಾಂಟ್ ಜೇಬಿನಲ್ಲಿದ್ದ ಫೋನ್ ವೈಬ್ರೇಟ್ ಮಾಡಿದಾಗಲೇ ತಾನು ಬೈಕ್ ಓಡಿಸುತ್ತಿದ್ದೇನೆಂದು ಅನಿಸಿ ಬ್ರೇಕ್ ಒತ್ತಿದ. ವಾಹನಗಳು ಸರ್‌ಭರ್ ಅಂತಾ ತಮಗರಿವಿಲ್ಲದಂತೆ ಓಡಾಡುತ್ತಾ ರಸ್ತೆಯನ್ನು ತಿಂದು ಹಾಕುತ್ತಿದ್ದವು. ಮೊಬೈಲ್ ತೆರೆದು ನೋಡಿದಾಗ ಮಮತಾ ಕರೆ ಮಾಡುತ್ತಿದ್ದಳು. ರಿಸೀವ್ ಮಾಡಿದ್ದೆ ತಡ, ‘‘ಏಯ್ ಕೋತಿ, ಎಲ್ಲಿ ಅದಿ? ಸ್ಟುಡಿಯೋ ಕಡೇನೂ ಇಲ್ಲ, ಫೋನೂ ಎತ್ತಾಕತ್ತಿಲ್ಲ? ನಾ ಅದೀನಿ ಅನ್ನೋ ಖಬರಾದ್ರೂ ಐತಿಲ್ಲ?’’ ಬೈಯತೊಡಗಿದಳು. ಸುಧೀರ ಏನೂ ಮಾತಾಡಲಿಲ್ಲ. ಅವಳು ಇನ್ನೇನೋ ಬೈಯಬೇಕೆನ್ನುವಷ್ಟರಲ್ಲಿ ಅವನ ಮೌನ ಅರ್ಥವಾಗಿತ್ತು. ‘‘ಸುಧಿ, ಎವ್ರಿಥಿಂಗ್ ವಿಲ್ ಬಿ ಫೈನ್. ಕಮಾನ್ ಯಾ.. ವಿಲ್ ಸಿ ಯೂ ಸೂನ್’’ ಎಂದು ಅದೇನೋ ಇಂಗ್ಲೀಷಿನಲ್ಲಿ ವಟಗುಟ್ಟಿ ಕರೆ ತುಂಡರಿಸಿದಳು. ಸುಧೀರ ದೀರ್ಘವಾಗಿ ಉಸಿರೆಳೆದುಕೊಂಡ. ದಾರಿ ಮಧ್ಯದಲ್ಲಿ ಪುಟ್ಟ ಬೆಂಕಿಪೊಟ್ಟಣದಂತಹ ಚಹಾದ ಡಬ್ಬಿಯಂಗಡಿ ಕಂಡಿದ್ದರಿಂದ ಬೈಕ್ ಸೈಡಿಗಚ್ಚಿ ಅತ್ತ ನಡೆದ. ಒಂದು ಕೈಯಲ್ಲಿ ಚಹಾ ಮತ್ತೊಂದರಲ್ಲಿ ಸಿಗರೇಟ್ ಹಿಡಿದು ಅಪ್ಪನ ನೆನಪನ್ನು ಗುಟಕೇರಿಸಿ ಹೊಗೆ ಮೂಲಕ ಗಾಳಿಯಲ್ಲಿ ತೇಲಿಬಿಡತೊಡಗಿದ. ಅದು ನನ್ನ ಮರೆವಾಗಿತ್ತೋ ಇಲ್ಲಾ ಅಪ್ಪ ಹೋಗುವ ಮುನ್ಸೂಚನೆಯಾಗಿತ್ತೋ? ಸುಧೀರ ಬಹಳ ಹೊತ್ತು ಅಲ್ಲಿ ನಿಂತೆಯಿದ್ದ. ಚಹಾ ತಣ್ಣಗಾಗುತ್ತಾ ಸಿಗರೇಟ್ ಉರಿಯುತ್ತಾ ಹೋಯಿತು. ಪುಟ್ಟ ಡಬ್ಬಿಯಂತಿದ್ದ ಆ ಚಹಾದಂಗಡಿಯಲ್ಲಿ ತಲೆ ಮತ್ತು ಗಡ್ಡ ಬೆಳ್ಳಗಾಗಿ, ದಪ್ಪನೆಯ ಕನ್ನಡಕ ಹಾಕಿಕೊಂಡ ಮುದುಕ ತನ್ನನ್ನೇ ದಿಟ್ಟಿಸುತ್ತಿದ್ದದ್ದು ಅರಿವಿಗೆ ಬಂತು. ಮಾಸಿದ ಅವನ ಮುಖದ ಮೇಲೆ ಜೀವನೋತ್ಸಾಹದ ಎಷ್ಟೊಂದು ಗೆರೆಗಳು ಇಳಿಬಿದ್ದಿದ್ದವು. ಅಂಗಡಿಯ ಪಕ್ಕ ಪಾತ್ರೆಯೊಂದರಲ್ಲಿ ಚಹಾದ ಕಪ್ಪುಗಳನ್ನೂ ಒಂದಿಷ್ಟು ಪ್ಲೇಟುಗಳನ್ನೂ ಹಾಕಿಕೊಂಡು ಮುದುಕಿೊಂಬ್ಬಳು ತೊಳೆಯುತ್ತಿದ್ದದ್ದು ಕಣ್ಣಿಗೆ ಬಿತ್ತು. ಬಹುಶಃ ಮುದಕನ ಹೆಂಡತಿಯಿರಬೇಕು. ಸುಧೀರ ತನ್ನ ಕ್ಯಾಮೆರಾ ಕಣ್ಣಿಗೊತ್ತಿಕೊಂಡು ‘‘ಅಜ್ಜಿ’’ ಎಂದ. ಅವಳು ಇವನ ಕ್ಯಾಮೆರಾ ನೋಡಿ ನಾಚಿಕೊಂಡಂತೆ ನಕ್ಕಳು. ಪಕ್ಕನೆ ಬೆಳಕು ಅವಳ ಮುಖಕ್ಕೆ ಮುತ್ತಿಕ್ಕಿ ಹೋಯಿತು. ನೂರರ ನೋಟೊಂದನ್ನು ತೆಗೆದು ಅಂಗಡಿಯಲ್ಲಿ ಕುಳಿತ ಮುದುಕನಿಗೆ ಕೊಟ್ಟಾಗ, ಚಿಲ್ಲರೆ ಹುಡುಕಾಡಿ ಕೊಡಲು ನೋಡಿದ. ಇವನು ಬೇಡವೆಂದು ಸನ್ನೆ ಮಾಡಿದಾಗ ಅಲ್ಲೊಂದು ಇಲ್ಲೊಂದು ಹಲ್ಲು ಉದುರಿದ ಬಾಯಿಯಲ್ಲಿ ಮುದುಕ ನಗುಮೂಡಿಸಿಕೊಂಡಾಗ ಸುಧೀರ ಅವನೆಡೆಗೂ ಕ್ಯಾಮೆರಾದ ಬಟನ್ ಒತ್ತಿದ. ಕ್ಯಾಮೆರಾದ ಫ್ಲ್ತ್ಯ್ಯಾಶ್‌ಲೈಟು ಅವನ ಮುಖಕ್ಕೆ ಬೀಳುವುದರ ಜೊತೆಗೆ ಅವನ ಹಿಂದೆ ನೇತು ಹಾಕಿದ್ದ ಫೋಟೊವೊಂದನ್ನು ತೋರಿಸಿತು. ಮೀಸೆ ಮೂಡದ ಹುಡುಗ ಹಾರ ಹಾಕಿಕೊಂಡು ಥೇಟ್ ಫೋಸು ಕೊಟ್ಟವರಂತೆ ಫೋಟೊದಲ್ಲಿ ನಗುತ್ತಿದ್ದ. ಅದನ್ನು ನೋಡುತ್ತಿದ್ದಂತೆ ಎದೆ ಒಂದು ಕ್ಷಣ ಕಂಪಿಸಿತು. ಮಗನನ್ನು ಕಳೆದುಕೊಂಡ ನೋವಿದ್ದರೂ ಮುದಿಜೀವಗಳ ಮುಖದಲ್ಲಿಯೂ ನಗು? ಹೃದಯ ಅಸಹನೀಯತೆಯಲ್ಲಿ ತೊಳಲಾಡತೊಡಗಿತು. ಫೋಟೊ ತೆಗೆಯುವಾಗ ಅವರಿಬ್ಬರೂ ನಕ್ಕ ನಗುವನ್ನು ಪರೀಕ್ಷಿಸಲು ಕ್ಯಾಮೆರಾ ನೋಡಿದ. ಯಾಕೋ ಅಪ್ಪ ಇಣುಕಿದಂತಾಯಿತು. ಅಪ್ಪನೂ ಹೀಗೆ ನಕ್ಕಿದ್ದನಲ್ಲವೇ? ಒಳಗಿನ ನೋವನ್ನು ನಗುವಿನ ಲೇಪನ ಹಾಕಿ ಬಚ್ಚಿಡುವ ಕೃತಕತೆಯಾದರೂ ಯಾಕೆ? ಮನಸ್ಸಿಗೆ ತುಂಬಾ ಖೇದವಾಗಿ ಬೈಕ್ ಸ್ಟಾರ್ಟ್ ಮಾಡಿದ.

ಸಂಜೆ ಆವರಿಸಿಕೊಳ್ಳತೊಡಗಿತ್ತು. ಸುಧೀರನ ಬೈಕು ಅವನಿಗೆ ತಿಳಿಯದಂತೆ ನಿಧಾನಕ್ಕೆ ಅಪ್ಪ ಕರೆದುಕೊಂಡು ಹೋಗುತ್ತಿದ್ದ ಆ ನದಿ ದಂಡೆಯ ಕಡೆಗೆ ಚಲಿಸತೊಡಗಿತು. ಅಪ್ಪ ಬಂದಾಗಲೆಲ್ಲ ಹಸಿರಾಗಿರುತ್ತಿದ್ದ ಗುಡ್ಡಗಳು ಇಂದು ಒಣಗಿ ನಿಂತಿದ್ದವು. ನದಿಯಲ್ಲಿ ಬೊಗಸೆಯಷ್ಟು ನೀರು ಬಿಟ್ಟು ಉಳಿದೆಲ್ಲವು ಬಿರುಕುಗೊಂಡಿತ್ತು. ಮುಳುಗುತ್ತಿದ್ದ ಸೂರ್ಯನೆದೆಯ ರಂಗು ಮಂಕಾಗಿತ್ತು. ಆ ಇಳಿಜಾರಿನ ಮೂಲೆಯಲ್ಲೊಬ್ಬ ಕಲಾವಿದ ಹುಡುಗಿಯೊಬ್ಬಳ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದದ್ದು ಕಾಣಿಸಿ ಕುತೂಹಲಗೊಂಡು ಅತ್ತ ನಡೆದ. ಅದರಲ್ಲಿಯ ಹುಡುಗಿ ಸುಂದರವಾಗಿ ನಗುತ್ತಿದ್ದದ್ದು ಸುಧೀರನನ್ನು ಆಕರ್ಷಿಸಿ ಅದರ ಫೋಟೊ ತೆಗೆದು ತನ್ನ ಕಂಪ್ಯೂಟರಿನ ವಾಲ್‌ಗೆ ಇಟ್ಟರಾಯಿತೆಂದುಕೊಂಡರೆ ಹತ್ತಿರ ಹೋಗಿ ನೋಡಿದಾಗಲೇ ತಿಳಿದದ್ದು, ಪೇಂಟಿಂಗ್‌ನ ಆ ಹುಡುಗಿಯ ಕಣ್ಣುಗಳಲ್ಲಿ ಎಂತಹದೋ ನೋವು ಮಡುವುಗಟ್ಟಿದ್ದು ಇವನಿಗೆ ಕಂಡಿತು. ಅವಳ ತುಟಿಗಳು ಬಲವಂತಕ್ಕೆ ನಗುತ್ತಿರುವಂತಹ ಚಿತ್ರವದು. ಆ ಕಲಾವಿದನ ಕಣ್ಣುಗಳನ್ನೇ ಸುಧೀರ ಗಮನಿಸಿದ. ಇಲ್ಲ ಅದು ಪೇಂಟಿಂಗ್ ಹುಡುಗಿಯ ತಪ್ಪಲ್ಲ. ಕಲಾವಿದನ ಕಣ್ಣಲ್ಲೆ ದುಃಖ ಬಣ್ಣ ಹೊಡೆಸಿಕೊಂಡಿದೆ. ಬಹುಶಃ ಅವನ ನೋವು ಅವನಿಗರಿವಿಲ್ಲದಂತೆ ಕುಂಚದ ಮೂಲಕ ಪೇಂಟಿಂಗ್ ಹುಡುಗಿಯ ಕಣ್ಣು ಮತ್ತು ತುಟಿಗೆ ಮೆತ್ತಿಕೊಂಡಿರಬೇಕು. ಆದರೂ ಅವಳು ನಗುತ್ತಿದ್ದಾಳೆ, ಕಲಾವಿದನಂತೆ.

ಅಪ್ಪ ಆಗ ಕುಳಿತುಕೊಳ್ಳುತ್ತಿದ್ದ ಆ ದೊಡ್ಡ ಬಂಡೆ ಕಾಣಿಸಿತು. ಅದು ಇನ್ನೂ ಹಾಗೆ ಇದ್ದರೂ ಮೊದಲಿನಂತೆ ಇರಲಿಲ್ಲ. ಬಿಸಿಲಿಗೆ ಮೈೊಂಣಗಿಸಿಕೊಂಡಿತ್ತು. ತುಂಬಾ ಹೊತ್ತು ಅದನ್ನೆ ನೋಡುತ್ತಾ ನಿಂತ. ನೋಡು ನೋಡತ್ತಿದ್ದಂತೆ ಅದರ ಮೇಲೆ ಯಾರೋ ಒಬ್ಬ ವ್ಯಕ್ತಿ ಬಂದು ಕುಳಿತುಕೊಳ್ಳತೊಡಗಿದ್ದು ಮಬ್ಬುಗತ್ತಲಿನಲ್ಲಿ ಗೋಚರಿಸಿತು. ಅಸ್ಪಷ್ಟವಾಗಿ ಯಾರೆಂದು ಗೊತ್ತಾಗಲಿಲ್ಲ. ದಿಟ್ಟಿಸಿದ. ಅರೆ, ಅಪ್ಪ. ಒಮ್ಮೆಲೇ ಅವನ ಮೈ ಕಂಪಿಸಿತು. ಅಪ್ಪ ಅದೆಲ್ಲಿಂದ ಬಂದು ಕುಳಿತುಕೊಂಡ? ಆಶ್ಚರ್ಯ. ನದಿ ದಂಡೆಯ ಕಡೆಗೆ ಕಣ್ಣು ಹಾಯಿಸಿದರೆ ಅಲ್ಲಿ ತಾನೆ ಚಿಕ್ಕ ಮಗುವಾಗಿ ಓಡಾಡುತ್ತಿದ್ದಾನೆ. ಬೊಗಸೆಯಷ್ಟಿದ್ದ ನೀರು ಈಗ ಪ್ರವಾಹದ ರೀತಿಯಲ್ಲಿ ನದಿ ತುಂಬಾ ತುಂಬಿಕೊಂಡಿದೆ. ಅದರಲ್ಲಿ ಸುಧೀರ ಜಿಗಿದಾಡುತ್ತಿದ್ದಾನೆ, ಕುಣಿದಾಡುತ್ತಿದ್ದಾನೆ. ಬಂಡೆಗಲ್ಲಿನ ಮೇಲೆ ಕುಳಿತ ಅಪ್ಪ ಮಗನನ್ನು ನೋಡಿ ನಗತೊಡಗಿದ. ಇವನೇನು ಇನ್ನು ನಗುತ್ತಿರುವುದು? ನಗುವುದನ್ನು ಅಪ್ಪ ಇನ್ನೂ ಬಿಟ್ಟಿಲ್ಲವೆ? ತಕ್ಷಣ ಅವನ ಆ ನಗುವನ್ನು ಸೆರೆ ಹಿಡಿಯಲು ಕ್ಯಾಮೆರಾ ತೆಗೆದು ಅಪ್ಪನ ಫೋಟೊ ಕ್ಲಿಕ್ಕಿಸಿದ. ಅವನಿಗೆ ತಿಳಿಯದೆ ಅವನ ಕೈಯಿಂದ ಕ್ಯಾಮೆರಾ ಜಾರಿ ಕೆಳಗೆ ಬಿತ್ತು. ಅವನ ಕೈ ನಡುಗತೊಡಗಿತು. ಭಯವಾಗತೊಡಗಿತು. ಕ್ಯಾಮೆರಾದ ಫ್ಲ್ತ್ಯ್ಯಾಶ್‌ಲೈಟು ಅಪ್ಪನ ಮುಖದ ಮೇಲಿನ ನಗುವಿನ ಜೊತೆ ಕಣ್ಣೀರನ್ನೂ ತೋರಿಸಿದಾಗ ಅವನು ಸಂಪೂರ್ಣ ಕುಸಿದು ಕುಳಿತ. ಆಗ ಅಪ್ಪ ಹೀಗೆೆುೀಂ ಬಂಡೆಯ ಮೇಲೆ ಕುಳಿತು ನಗುತ್ತಿದ್ದನಲ್ಲ? ಅವನು ಕತ್ತಲಲ್ಲಿ ಕುಳಿತು ನಕ್ಕಂತೆ ನಟಿಸಿ ಅಳುತ್ತಿದ್ದನೆ? ಅತ್ತಿದ್ದು ಒಂದು ದಿನವೂ ಕಾಣಲೇ ಇಲ್ಲ? ಆದರೆ ಆಗಿನ ಸಂಜೆಗಳ ತಿಳಿ ಕತ್ತಲಲ್ಲಿ ಅವನ ಮುಖದಲ್ಲಿ ನಗು ಬಿಟ್ಟು ಬೇರೆನೂ ಕಂಡಿರಲಿಲ್ಲ. ಅಳು ತಿಳಿ ಕತ್ತಲಲ್ಲಿ ಕಾಣಲಿಲ್ಲವೋ ಅಥವಾ ನಾನೇ ಗ್ರಹಿಸಲಿಲ್ಲವೋ? ಎಂದೆನಿಸಿ ಸುಧೀರನಿಗೆ ದುಃಖವಾಯಿತು, ಅಳತೊಡಗಿದ. ಹೃದಯ ತುಂಬಾ ನೋವಿದ್ದರೂ ನಕ್ಕು ನನಗೇಕೆ ಮೋಸ ಮಾಡಿದೆ ಎಂದು ಅವನನ್ನೇ ಕೇಳಲು ಅಪ್ಪನೆಡೆಗೆ ನಿಧಾನಕ್ಕೆ ನಡೆದ. ಆದರೆ ಅವನ ಸಮೀಪಕ್ಕೆ ಹೋದಂತೆ ಅಪ್ಪನ ಮೂರ್ತಿ ಕರಗುತ್ತಾ ಹೋಯಿತು. ಅರೆ ಅಪ್ಪ ಎಲ್ಲಿ ಹೋದ? ಅವನನ್ನು ಕೇಳಬೇಕಿತ್ತು. ಹೀಗೆ ದಿನವೂ ತನ್ನನ್ನು ಸಂಜೆ ನದಿ ದಂಡೆಗೆ ಕರೆದುಕೊಂಡು ಬರುವ ಉದ್ದೇಶ, ಬಂಡೆಗಲ್ಲಿನ ಮೇಲೆ ಕುಳಿತು ನನ್ನ ಮುಂದೆ ನಗುವ ನಾಟಕವಾಡಿ ಕತ್ತಲಲ್ಲಿ ಯಾರಿಗೂ ಕಾಣುವುದಿಲ್ಲವೆಂದು ಅಳುವುದೇ ಆಗಿತ್ತೇ? ಈಗಷ್ಟೆ ತೆಗೆದ ಅಪ್ಪನ ಫೋಟೊ ನೋಡಲು ಕ್ಯಾಮೆರಾ ತಡಕಾಡಿದ. ಇಲ್ಲ ಫೋಟೊದಲ್ಲಿ ಆ ದೊಡ್ಡ ಬಂಡೆಗಲ್ಲೊಂದೆ ಸೆರೆಯಾಗಿತ್ತು. ಅವನಿರಲಿಲ್ಲ. ಆ ಬಂಡೆ ಹತ್ತಿರ ಹೋಗಿ ಅವನು ಕುಳಿತುಕೊಳ್ಳುತ್ತಿದ್ದ ಭಾಗದ ಮೇಲೆ ಕೈಯಾಡಿಸಿದ. ಅಲ್ಲೊಂದಿಷ್ಟು ಕಣ್ಣ ಹನಿಯ ಹಳೆಯ ಕಲೆಗಳು ಮುತ್ತಿನಂತೆ ಹೆಪ್ಪುಗಟ್ಟಿದ್ದವು. ಈಗ ತಾನೆ ಯಾರೋ ಕುಳಿತು ಎದ್ದು ಹೋದವರಂತೆ ಬಂಡೆ ಬಿಸಿಯಾಗಿತ್ತು.

ಅಪ್ಪ ಸುಧೀರನನ್ನು ಕೂಗಿದಂಗಾತು. ನದಿಯ ಕಡೆಗೆ ನೋಡಿದರೆ ಅಲ್ಲಿ ಅಪ್ಪ ಎರಡೂ ಕೈಗಳಗಲಿಸಿ ನಗುತ್ತ ನಿಂತಿದ್ದಾನೆ. ಕೈಬೀಸಿ ಕರೆಯುತ್ತಿದ್ದಾನೆ. ಸುಧೀರ ಚಿಕ್ಕ ಮಗುವಾಗಿ ಅವನಡೆಗೆ ಓಡಿದಂತೆ ಅವನೂ ನದಿೊಂಳಗೆ ಓಡುತ್ತಲೇ ಇದ್ದಾನೆ, ಅದೇ ನಗುವ ಹೊತ್ತು. ಸುಧೀರನಿಗೆ ಅಪ್ಪ ನಗುತ್ತಿದ್ದ ಆ ನಗುವಿಗೆ ಉತ್ತರಬೇಕಿತ್ತು. ಕೇಳಲೇಬೇಕೆಂದು ಅವನನ್ನು ಹಿಂಬಾಲಿಸುತ್ತಲೇ ಹೋಗುತ್ತಿರುವಾಗ ಯಾರೋ ಕೈಹಿಡಿದು ಎಳೆದಂತಾಗಿ ತಿರುಗಿ ನೋಡಿದ. ಮಮತಾ ನಿಂತಿದ್ದಳು. ‘‘ಸುಧಿ, ಈ ಹೊತ್ನಲ್ಲಿ ಒಬ್ನೆ ಎಲ್ಲೋ ಹೋಗ್ತಿದ್ದಿಯಾ? ಬಾ ಮನೆಗೆ ಹೋಗೋಣ’’ ಕರೆಯತೊಡಗಿದ್ದಳು. ಸುಧೀರನಿಗೆ ಮಾತು ಹೊರಡದೆ ಎತ್ತ ಹೋಗಬೇಕೆಂದು ತಿಳಿಯದಾಯಿತು. ಅವಳು ಕೈ ಹಿಡಿದು ಎಳೆಯುತ್ತಲೇ ಇದ್ದಳು. ಅತ್ತ ಅಪ್ಪ ಕೈಗಳಗಲಿಸಿ ಕರೆಯುತ್ತಿದ್ದಾನೆ. ಏನು ಮಾಡುವುದು? ಅಪ್ಪನ ತುಟಿಗಳು ಮಾತ್ರ ಇನ್ನೂ ಅಗಲವಾಗುತ್ತಲೇ ಇದ್ದವು. ಅವುಗಳ ತುದಿಗೆ ಯಾರೋ ದಾರ ಕಟ್ಟಿ ಎಳೆದಂತೆ.

(ಇಸ್ಮಾಯಿಲ್ ತಳಕಲ್ ಈ ಸಲದ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ವಿಜೇತರು)

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

5 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

6 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

6 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

6 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

6 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

7 hours ago