ಆಂದೋಲನ ಪುರವಣಿ

ಹಾಡುಪಾಡು : ರಾಗದ ಆಗಸದಲ್ಲಿ ತೊಂಬತ್ತರ ಗಾರುಡಿಗ

ರಾಜೀವ ತಾರಾನಾಥರ ಒಂಬತ್ತು ದಶಕಗಳ ಬದುಕು ಎಷ್ಟೊಂದು ಹೋರಾಟಗಳ, ಸಂಘರ್ಷಗಳ ಬದುಕಾಗಿದೆ? ಆದರೆ ಎಂದೂ ಎದೆಗುಂದದೆ, ಸಂಗೀತವನ್ನೇ ನೆಚ್ಚಿಕೊಂಡು, ಇಷ್ಟು ಎತ್ತರ ಏರುವುದಕ್ಕೆ ಸಾಧ್ಯವಾದ ಅವರ ಮನೋಬಲ, ಏಕಾಗ್ರತೆ, ಒಳಗೊಳಗೇ ಕಾಪಿಟ್ಟುಕೊಂಡ ಅದಮ್ಯ ಚೈತನ್ಯದ ಬಗ್ಗೆ ಅಚ್ಚರಿಯೆನ್ನಿಸುತ್ತದೆ, ಅಭಿಮಾನವೆನ್ನಿಸುತ್ತದೆ.  

ಸುಮಂಗಲಾ sumangalagm@gmail.com

ಸರೋದ್ ವಾಂತ್ರಿಕ ರಾಜೀವ್ ತಾರಾನಾಥರಿಗೆ ನಾಳೆ ಹುಟ್ಟುಹಬ್ಬ 

ನಾನು ಅದೃಷ್ಟಗಿದೃಷ್ಟವನ್ನು ಭಾರೀ ನೆಚ್ಚಿಕೊಳ್ಳದಿದ್ದರೂ ಬದುಕಿನಲ್ಲಿ ಏನಾದರೊಂದು ಪವಾಡ ನಡೆುಂಬಾರದೇ ಎಂದು ಆಗೀಗ ಅನ್ನಿಸುತ್ತಿತ್ತು. ಹತ್ತು ಹಲವು ಜಂಜಡಗಳ ನಡುವೆ ಕಳೆದುಹೋಗುವ ಬದುಕು ಅಂಥ ಯಾವ ಹಗಲುಗನಸುಗಳಿಗೂ ನೀ ಯೋಗ್ಯ ಇಲ್ಲೇಳು ಎಂದು ವಾಸ್ತವವನ್ನು ಕಣ್ಣಿಗೆ ಹಿಡಿಯುತ್ತಿತ್ತು. ಅದು ೨೦೦೯ರ ಜನವರಿ ಎನ್ನಿಸುತ್ತೆ? ಒಮ್ಮೆ ಕಡಿದಾಳು ಶಾಮಣ್ಣ ಫೋನ್ ಮಾಡಿದವರು ‘ನೀವು ರಾಜೀವ್ ತಾರಾನಾಥರ ಜೀವನ ಚರಿತ್ರೆ ಬರೆದುಕೊಳ್ಳಬೇಕು. ನೀವು ಬಂದು ಬರೆದುಕೊಳ್ಳೋದಾದ್ರೆ ಹೇಳ್ತೀನಿ ಅಂದಿದಾರೆ’’ ಎಂದಾಗ ನನಗೆ ನಂಬಲಿಕ್ಕಾಗಲಿಲ್ಲ. ಆವರೆಗೆ ನಾನು ಎರಡು ಸಲವಷ್ಟೆ ಅವರನ್ನು ಭೇಟಿ ವಾಡಿದ್ದೆ. ಸಂಗೀತದ ಗಂಧಗಾಳಿ ಇಲ್ಲದವಳು, ಇವರ ಸಂಗೀತ-ಸಾಹಿತ್ಯ ಸಾಧನೆಗಳ ಬಗ್ಗೆ ತಿಳಿವಳಿಕೆಯೂ ನನಗೆ ಇಲ್ಲವಾಗಿತ್ತು. ನನ್ನ ಮೊದಲನೇ ಕಥಾ ಸಂಕಲನ ‘ಜುಮುರು ಮಳೆ’ ಓದಿದ್ದ ಅವರಿಗೆ ನಾನು ಬರೆದುಕೊಳ್ಳಬಲ್ಲೆ ಅನ್ನಿಸಿತ್ತು. ಮತ್ತು ಅದೇ ಕ್ಷಣ ನನ್ನ ಬದುಕಿನಲ್ಲಿಯೂ ಒಂದು ಪವಾಡ ನಡೆದಿತ್ತು!

ಹಾಗೆ ಶುರುವಾಯಿತು ‘ಸರೋದ್ ಮಾಂತ್ರಿಕ’ರ ಜೊತೆಗೆ ಅಕ್ಷರ ಪಯಣ. ಅದನ್ನು ಬರೆಯಲು ಆರಂಭಿಸಿದ ಸಮಯದಲ್ಲಿ ಈ ಬಗೆಯ ಕೃತಿ ರಚನೆಗೆ ಇರಬೇಕಾದ ಪೂರ್ವಸಿದ್ಧತೆಗಳಾಗಲೀ, ಕೃತಿಯ ಸಂರಚನೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯಾಗಲೀ ಇಲ್ಲದೆ, ಅವರೇ ಎಲ್ಲ ಹೇಳುತ್ತಾರೆ, ಬರೆದುಕೊಳ್ಳುವುದಷ್ಟೆ ನನ್ನ ಕೆಲಸ ಎಂಬಂತೆ ಶುರು ಮಾಡಿದ್ದೆ. ಈಗ ಯೋಚಿಸಿದರೆ ನಾನು ತುಸುವಾದರೂ ಸಿದ್ಧತೆ ಮಾಡಿಕೊಳ್ಳಬೇಕಿತ್ತೇನೋ, ಆಗ ಕೃತಿ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತೇನೋ ಎನ್ನಿಸುತ್ತದೆ.

*****

ಹೆಮ್ಮರವೊಂದನ್ನು ದೂರದಿಂದ ಕಂಡಾಗಿನ ನೋಟಕ್ಕೂ, ಹತ್ತಿರ ಹೋದಂತೆ ದಕ್ಕುವ ನೋಟಕ್ಕೂ ಎಷ್ಟು ವ್ಯತ್ಯಾಸ! ಹಾಗೆಯೇ ಹೆಮ್ಮರವನ್ನು ಬೇರೆಬೇರೆ ಕಡೆ ನಿಂತು ನೋಡಿದಾಗ ಕಾಣುವ ಚಿತ್ರಗಳು, ವರ್ಣಛಾಯೆಗಳು ಬೇರೆಯೇ. ಪುಸ್ತಕ ಬರೆಯುವುದಕ್ಕೆಂದು ಆಗೀಗ ಪಂ. ರಾಜೀವರ ಮನೆಗೆ ಹೋಗಲು ಶುರುವಾಡಿದಾಗ ಇದು ಅಕ್ಷರಶಃ ಅನುಭವಕ್ಕೆ ಬಂದಿತು.

ಮೊದಲ ಸಲ ಅವರ ಮನೆಗೆ ಹೋದಾಗ, ಊಟಕ್ಕೆ ಕೂತಿದ್ದಾಗ ಅಡುಗೆುಂವಳಿಗೆ ತಮಿಳಿನಲ್ಲಿ ಏನೋ ಹೇಳಿದ್ದರು. ನನಗೆ ಮತ್ತು ನನ್ನ ಮಗನಿಗೆ ಮೊದಲು ಬಡಿಸು ಎಂದವಳಿಗೆ ಹೇಳಿರಬೇಕು ಎಂದು ಅವರ ಹಾವಭಾವದಿಂದ ಊಹಿಸಿದ ನಾನು ‘‘ನೀವು ಮನೇಲಿ ತಮಿಳು ಮಾತಾಡ್ತೀರ ಸರ್’’ ಎಂದು ಕೇಳಿದ್ದೆ. ನನ್ನ ಪೆದ್ದುತನದ ಪ್ರಶ್ನೆಗೆ ಅವರು ಅಷ್ಟೇ ತಣ್ಣಗೆ ‘‘ನಂಗೆ ಒಂಬತ್ತು ಭಾಷೆ ಬರುತ್ತೆ’’ ಎಂದಿದ್ದರು. ಯಾವ್ಯಾವುದು ಎಂದು ಕೇಳುವ ಧೈರ್ಯ ಮಾಡಲಿಲ್ಲ ಎನ್ನಿ! ಆಮೇಲೊಮ್ಮೆ ಮಾತಾಡುತ್ತ ಕೂತಿದ್ದಾಗ ನಡುವೆ ಯಾರೊಂದಿಗೋ ಫೋನಿನಲ್ಲಿ ಮಾತಾಡಿದರು. ಬಂಗಾಳಿ ಅದು ಎಂದು ಊಹಿಸಿದೆ. ಇನ್ನೊಮ್ಮೆ ಯಾರೊಂದಿಗೋ ಉರ್ದುವಿನಲ್ಲಿ ಎಷ್ಟು ಚೆನ್ನಾಗಿ ಮಾತನಾಡಿದರು ಎಂದರೆ ನನಗೆ ಅರ್ಥವಾಗದಿದ್ದರೂ ಆ ಗತ್ತು, ಗೈರತ್ತು ಎಲ್ಲವೂ ಶಾಯಿರಿಯಂತಿತ್ತು. ಇಂಗ್ಲಿಷ್, ಸಂಸ್ಕೃತ, ಉರ್ದು, ಕನ್ನಡ, ಕೊಂಕಣಿ, ತಮಿಳು, ಬಂಗಾಳಿ, ತೆಲುಗು, ಹಿಂದಿ… ನಾನು ಬೆರಳು ಎಣಿಸುತ್ತ ಒಂಬತ್ತಾಯಿತು, ಆದರೆ ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತದೆ ಎಂದಿದ್ದರಲ್ಲ ಆ ಇನ್ನೊಂದು ಭಾಷೆ… ಅದು ಮಲೆಯಾಳಂ ಅಥವಾ ಮರಾಠಿ ಎಂದು ತಲೆ ಕೆರೆದುಕೊಂಡೆ!

*****

ಪಂ. ರಾಜೀವರು ಮಾತನಾಡುವಾಗ (ಒಳ್ಳೆಯ ಲಹರಿಯಲ್ಲಿದ್ದರೆ!) ಅವರ ರೂಪಕ ಭಾಷೆ ಆ ಕ್ಷಣದ ಅವರ ಹಾವಭಾವದೊಡನೆ, ಮುಖಮುದ್ರೆಯೊಡನೆ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಯಾವುದೇ ಸಿದ್ಧತೆಗಳಿಲ್ಲದೆ ಸುಮ್ಮನೇ ಮಾತಾಡುತ್ತಲೇ ಥಟ್ಟನೆ ಏನೋ ಹೇಳುತ್ತಾರೆ. ಅದನ್ನು ಸೆರೆಹಿಡಿಯಲು ನಿಮ್ಮ ಮನಸ್ಸಿನ ಕ್ಯಾಮೆರಾ ಒಳಗಣ್ಣು ಸಿದ್ಧವಿರಬೇಕಷ್ಟೆ.

ನಮ್ಮ ಶಾಸ್ತ್ರೀಯ ಸಂಗೀತದ ಹಿನ್ನೆಲೆಯಿದ್ದರೆ ಬೇರೆ ದೇಶಗಳ ಸಂಗೀತ ನಮಗೆ ಬಂದೇಬಿಡುತ್ತದೆ ಎನ್ನುವುದಕ್ಕೆ ಆಗುವುದಿಲ್ಲ ಅಂತ ನನಗೊಮ್ಮೆ ವಿವರಿಸಿದ್ದರು.

‘‘ಸಂಗೀತ ತುಂಬಾ ಖಾಸಗಿಯಾಗಿದ್ದು. ನಮ್ಮ ಸಂಗೀತ ಗೊತ್ತಿದ್ದರೆ ಪಾಶ್ಚಿವಾತ್ಯ ಸಂಗೀತವೂ ಬರುತ್ತೆ ಎನ್ನೋ ಹಾಗಿಲ್ಲ. ಎರಡನ್ನೂ ಆಳವಾಗಿ ಅಧ್ಯಯನ ಮಾಡಬೇಕು. ಇಲ್ಲಿಯ ಒಂದು ಕೀಲಿಯಿಂದ ಅಲ್ಲಿಯ ಬೀಗ ತೆಗೆಯಕ್ಕೆ ಆಗಲ್ಲ. ಇಲ್ಲಿಯ ತ್ಯಾಗರಾಜ ಗೊತ್ತಿದ್ದರೆ ಅಲ್ಲಿಯ ಬಿಥೋವನ್ ಗೊತ್ತಾಗಲ್ಲ. ತ್ಯಾಗರಾಜ ಕೀಲಿಯಿಂದ ಬಿಥೋವನ್ ಬೀಗ ತೆಗೆಯೋದಕ್ಕೆ ಆಗೋದಿಲ್ಲ. ಅಲ್ಲಿಯ ಬೀಗ ತೆಗೆಯೊಕ್ಕೆ ಅಲ್ಲಿಯ ಸಂಗೀತವನ್ನು ಒಂದು ಶಿಸ್ತಾಗಿ ಅಧ್ಯಯನ ಮಾಡಬೇಕು.’’

‘ತ್ಯಾಗರಾಜ ಕೀಲಿ – ಬೀಥೋವನ್ ಬೀಗ’… ಆಹಾ!
ಅವರಿಗೆ ತಮ್ಮ ಗುರು ಉಸ್ತಾದ್ ಅಲಿ ಅಕ್ಬರ್ ಖಾನರೆಂದರೆ ‘ಗೌರಿಶಂಕರ ಪರ್ವತ’. ‘‘ನನ್ನ ಗುರುಗಳು ಮುತ್ತು ವಾಣಿಕ್ಯದಂಥ ವಸ್ತುಗಳನ್ನು ನನಗೆ ಕೊಡಲಿಲ್ಲ. ಅವರು ಕೆಲವು ಬೀಜಗಳನ್ನು ನನಗೆ ಕೊಟ್ಟರು. ಅವು ನನ್ನ ಕೈಗಳಲ್ಲಿ ಮೊಳಕೆಯೊಡೆಯಿತು’’ ಎಂದು ರಾಜೀವರು ಹೇಳುತ್ತ ಅಂಗೈ ತೋರುತ್ತಿದ್ದರೆ ಆ ಬೀಜಗಳು ಹಾಗೆ ಅವರ ಕೈುಂಲ್ಲಿ ಮೊಳಕೆಯೊಡೆದು, ರಾಗಾಲಾಪದ ಸಸಿಯಾಗಿ ಇನ್ನೂ ಬೆಳೆಯುತ್ತಲೇ ಇದೆಯೇನೋ ಅನ್ನಿಸುತ್ತದೆ.
ಇನ್ನೊಮ್ಮೆ ಗುರುಗಳನ್ನು ಗರುಡನಿಗೆ ಹೋಲಿಸಿದ್ದರು. ‘‘ಆಕಾಶದಲ್ಲಿ ಗರುಡ ಒಂದೇ ಮೇಲೆ ಹಾರ್ತಾ ಇರುತ್ತದೆ. ಅದಕ್ಕೆ ತಾನು ಎಲ್ಲರಿಗಿಂತ ಮೇಲೆ ಹಾರ್ತೀನಿ ಅಂತಿಲ್ಲ ಅಥವಾ ಹಾಗೆ ಹಾರಬೇಕೆಂಬ ಸ್ಪರ್ಧೆಯೂ ಇಲ್ಲ. ಎಲ್ಲ ಹಕ್ಕಿಗಳಿಗಿಂತ ಮೇಲೆ ಹಾರೋದು ಅದರ ಸಹಜ ಗುಣ. ಹಾಗೆ ನಮ್ಮ ಗುರುಗಳು ಆಕಾಶದಲ್ಲಿ ಮೇಲೆ ಹಾರಾಡೋ ಗರುಡ. ಇಲ್ಲಿ ಕೆಳಗೆ ಗರುಡನ ನೆರಳಿದೆ’’ ಎನ್ನುತ್ತ ಮೇಲೆ ಮುಖ ಮಾಡಿ ಹೇಳುತ್ತ, ವಾಕ್ಯದ ಕಡೆಯಲ್ಲಿ ಕುಳಿತಿದ್ದ ತಮ್ಮತ್ತ ಬೆರಳು ಮಾಡಿದ್ದರು.

‘ಅರ್ಬನ್ ನಕ್ಸಲೈಟ್ಸ್’ ಕುರಿತು ಲೇಖನವನ್ನು ಬರೆದುಕೊಳ್ಳುತ್ತಿರುವಾಗ ‘ಫ್ಯಾಸಿಸ್ಟ್ ಶಕ್ತಿಗಳು ದೇಶವನ್ನು ಆವರಿಸಿದೆಯಲ್ಲ… ನಮ್ಮಲ್ಲಿ ಮನಷ್ಯತ್ವವೇ ಇಲ್ಲ’ ಎಂದು ವಿಷಾದದಿಂದ ಹೇಳುತ್ತಿದ್ದವರು ತಟ್ಟನೆ ಮುಂದುವರಿಸಿ, ‘ಆಚಾರವಿಲ್ಲ, ಅತ್ಯಾಚಾರ ಉಳಿದಿದೆ’ ಎಂದು ಹರಿತವಾಗಿ ಹೇಳಿದ್ದರು.

ಮತ್ತೆ ಏನಾದರೊಂದು ವಿಷಯವನ್ನು ವಿವರಿಸುತ್ತಿರುವಾಗ, ಅವರು ಕೊಡುವ ಹೋಲಿಕೆಗಳು ತುಂಬಾ ಸರಳವೇನೋ ಹೌದು, ಆದರೆ ನಾವೆಂದೂ ಆ ರೀತಿಯಾಗಿ ಆಲೋಚನೆ ಮಾಡಿರಲೇ ಇಲ್ಲವಲ್ಲ ಎನ್ನುವಷ್ಟು ಹೊಸದಾಗಿರುತ್ತವೆ. ಹಾಗೆಯೇ ಸಂಸ್ಕೃತದ ಶ್ಲೋಕಗಳನ್ನೋ, ಉಪಮೆಗಳನ್ನೋ ಇಂತಹ ವಿವರಣೆಗಳಿಗೆ ಅವರು ಅರ್ಥಪೂರ್ಣವಾಗಿ ಬಳಸಿಕೊಂಡು ಹೇಳುವ ರೀತಿಯೂ ತಾಜಾ ಎನ್ನಿಸುತ್ತದೆ. ಕಳೆದ ಭಾನುವಾರ ಅವರನ್ನು ಕಂಡುಬರಲು ಹೋದಾಗ ಸಾಹಿತ್ಯಗೀಹಿತ್ಯ ಎಲ್ಲ ಬಿಟ್ಟುಬಿಟ್ಟಿದ್ದೀನಿ ಈಗ ಎಂದವರು ತುಸು ತಡೆದು ಹೇಳಿದರು:

‘‘ಮೊದಲು ಬಹಳ ಮಾತಾಡತಿದ್ದೆ. ಈಗ ಬಿಟ್ಟುಬಿಟ್ಟಿದ್ದೀನಿ. ಔತ್ತಮ್ಯ ಬೇಕು. ಯಾಕಪ್ಪಾ ಅಂದ್ರೆ ಅದ್ರಲ್ಲಿ ನಂಗೆ ರುಚಿ ಇದೆ. ನಮ್ಮಪ್ಪ, ಅಮ್ಮ ಹಾಗೆ ಇದ್ದರು. ಆಮೇಲೆ ನಮ್ಮ ಗುರುಗಳು ಹಾಗೆ ಇದ್ದರು. ಒಮ್ಮೆ ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದ ಮೇಲೆ ನಿಮಗೆ ಬೇರೆ ಕಡೆಯ ದೋಸೆ ರುಚಿಸೋದಿಲ್ಲ. ಯಾಕೆಂದರೆ ಅದು ಹಾಗಿರುತ್ತೆ. ಸುಮ್ಮನೇ ವಿದ್ಯಾರ್ಥಿ ಭವನಕ್ಕೆ ಹೋಗಿ ದನದ ಹಂಗೆ ತಿಂದು ಬರೋದಲ್ಲ. ಅದರ ಬೆಲೆಯೇನು, ಅದರ ರುಚಿಯೇನು, ಅದನ್ನು ಅನುಭವಿಸುತ್ತ ತಿನ್ನಬೇಕು. ಅದಕ್ಕೇ ರಸಿಕ, ರಸಿಯಾ ಅಂತಾರೆ. ನಾವೇನು ಕಲ್ಚರ್ ಎನ್ನುತ್ತೀವಲ್ಲ, ಅದಿಲ್ಲದಿದ್ದರೆ ಏನು ಮಾಡೋದು? ವೇದದಾಗೆ ಏಕಂ ಸತ್ ವಿಪ್ರಾ, ಬಹುಧಾ ವದಂತಿ ಅಂತ ಇದೆ. ಏಕಂ ಸತ್… ಇರೋದೊಂದೇ ಸತ್ಯ. ಅದನ್ನು ಹಿಂಗೂ ವ್ಯಂಗ್ಯವಾಗಿ ಹೇಳಬಹುದು… ಇರೋದೊಂದೇ ವಿದ್ಯಾರ್ಥಿ ಭವನ’’ ಎನ್ನುತ್ತಲೇ ನಕ್ಕರು.

ಇನ್ನೊಮ್ಮೆ ನಾನು ಲೇಖನವೊಂದಕ್ಕೆ ಅವರನ್ನು ಮಾತನಾಡಿಸುತ್ತಿದ್ದಾಗ, ‘‘ಒಂದು ನಾಡಿಗೆ ‘ಒಟ್ಟುಮೆ’ ಅಂತ ಏನಿರುತ್ತೆ? ಆ ಒಟ್ಟುಮೆಯನ್ನು ಉಳಿಸಿಕೊಳ್ಳೋದು ಮುಖ್ಯ’’ ಎಂದರು. ಅದೊಂಥರಾ ಫೋನ್-ಇನ್ ಸಂದರ್ಶನವಾಗಿತ್ತು. ಅಂತಹ ಸಂದರ್ಭಗಳಲ್ಲಿ ನಾನು ಮಾತುಕಥೆಯನ್ನು ರೆಕಾರ್ಡ್ ಮಾಡಿಕೊಳ್ಳುವುದುಂಟು. ರೆಕಾರ್ಡ್ ಹಾಕಿ, ನಾಲ್ಕಾರು ಸಲ ಹಾಕಿ ಕೇಳಿದೆ, ನಿಧಾನ ಮಾಡಿ ಕೇಳಿದೆ, ಎಷ್ಟೇ ಪ್ರಯತ್ನಿಸಿದರೂ ಅವರು ಹೇಳಿದ್ದು ‘‘ಒಟ್ಟುಮೆ’’ ಎಂದೇ ಕೇಳಿಸುತ್ತಿತ್ತು. ಎಲ್ಲ ಕಡೆ ಹುಡುಕಿದರೂ ಆ ಪದದ ಅರ್ಥ ಸಿಗಲಿಲ್ಲ. ಆಮೇಲೆ ಅದು ತಮಿಳಿನ ‘ಒಟ್ರುಮೈ’’ ಪದ, ಅಂದರೆ ಒಗ್ಗಟ್ಟು ಎಂದು ತಿಳಿಯಿತು. ದಿನಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾದ ನಂತರ, ಆ ಪುರವಣಿಯ ಸಂಪಾದಕರಿಗೆ ಇದನ್ನು ಹೇಳಿದೆ. ತಮಿಳಿನ ಒಟ್ರುಮೈ ಪದಕ್ಕೆ ನಾವು ಕನ್ನಡದಲ್ಲಿ ಒಟ್ಟುಮೆ ಅಂತಲೇ ಇಟ್ಟುಕೊಳ್ಳೋಣ, ಒಂದು ಹೊಸ ಪದ ಟಂಕಿಸಿದಂತಾಯಿತು ಎಂದು ಇಬ್ಬರೂ ನಕ್ಕೆವು. ಅಲ್ಲವೇ ಮತ್ತೆ… ಒಟ್ಟುಮೆ ಎಂಬ ಪದ ಅಚ್ಚಕನ್ನಡದ್ದೇ ಅನ್ನಿಸಿ, ಎಷ್ಟು ಅರ್ಥಪೂರ್ಣವೂ ಅನ್ನಿಸುತ್ತದೆ!

ಸಂಗೀತ ಕಲಿಕೆಗೆ, ರಿಯಾಜ್ ಮಾಡುವುದಕ್ಕೆ ಹೇಗೆ ಕೇಳ್ಮೆಯ ಸಂಸ್ಕಾರ ಬೇಕು, ಆ ರುಚಿ ಗೊತ್ತಿರಬೇಕು ಎನ್ನುವುದನ್ನು ವಿವರಿಸುತ್ತಿದ್ದವರು ‘‘ಈ ಕಹಿ ಏನಿದೆಯಲ್ಲ, ಅದಕ್ಕೊಂದು ಸಾಮಾಜಿಕ ಆಸ್ಪೆಕ್ಟ್ ಇದೆ’’ ಎಂದರು. ನನಗೆ ಅಚ್ಚರಿಯೆನ್ನಿಸಿತು.

‘‘ಸಂಸ್ಕಾರ ಅನ್ನೋದು ಹಿಂಗೆ ಉಪಯೋಗಕ್ಕೆ ಬರುತ್ತೆ. ಈಗ ಇಲ್ಲಿಯ ಅಡುಗೆಯನ್ನು ನಾನೂ ತಿಂತೀನಿ, ಅಮೆರಿಕದವನೂ ತಿಂತಾನೆ. ನನಗೆ ರುಚಿ ಗೊತ್ತಾಗುತ್ತೆ, ಅವನಿಗೆ ಅಷ್ಟು ಗೊತ್ತಾಗೋದಿಲ್ಲ. ಯಾಕಂದ್ರೆ ನನಗೆ ಬೇರೆ ಬೇರೆ ಕಡೆಗೆ ತಿಂದು, ರುಚಿ ನೋಡಿ ಗೊತ್ತಿರುತ್ತೆ. ಈ ಕಹಿ ಏನಿದೆಯಲ್ಲ, ಅದಕ್ಕೊಂದು ಸಾಮಾಜಿಕ ಆಸ್ಪೆಕ್ಟ್ ಇದೆ. ಮಗು ಒಂದೇ ಇದ್ದಾಗ ಏನೂ ಗೊತ್ತಿರಲ್ಲ. ಬೆಳೀತಾ ಬೆಳೀತಾ ಎಲ್ಲೊ ಒಂದು ಗೊಜ್ಜು, ವ್ಹಿಸ್ಕಿ, ಸಿಗರೇಟು ಇಂಥವು ಗೊತ್ತಾಗುತ್ತೆ. ಸಿಹಿ ಅನ್ನೋದು ಮೊದಲೇ ತಾಯಿ ಹಾಲಿನ ಜೊತೆಗೆ ಬಂದುಬಿಡುತ್ತೆ. ಹಾಗಲಕಾಯಿ ಬರೋದಿಲ್ಲ. ಅದಕ್ಕೊಂದು ಸಾಮಾಜಿಕ ಆಸ್ಪೆಕ್ಟ್ ಇದೆ. ನಾವೇನು ಒಪ್ಪುತ್ತೀವಿ, ಏನು ಒಪ್ಪೋದಿಲ್ಲ, ಇವೆರಡರ ಮೇಲೆ ಅವಲಂಬಿತವಾಗಿದೆ ಅದನ್ನು, ಆ ಕಲೆಯನ್ನು ಹ್ಯಾಗೆ ಬೆಳೆಸ್ತೀವಿ ಅನ್ನೋದು. ಒಪ್ಪದ್ದು, ಒಪ್ಪದೇ ಇರೋದು, ಇದರ ಕಾಂಬಿನೇಶನ್ನೇ ಕಲೆ. ಒಪ್ಪದೇ ಇರೋದನ್ನು ಅಲ್ಲಿ ಇಲ್ಲಿ ತಿದ್ದುತೀವಿ. ಅದಕ್ಕೇ ಹಾಗಲಕಾಯಿ ತಿನ್ನುತ್ತೀವಿ. ಬರೇ ಹಾಗಲಕಾಯಿ ತಿನ್ನೋದಕ್ಕೆ ಅಗೋದಿಲ್ಲ. ಅದ್ರ ಒಂದು ಉಪ್ಪಿನಕಾಯಿಯಾದ್ರೂ ಮಾಡಿ ತಿಂತೀವಿ. ಒಪ್ಪದ್ದನ್ನೂ ನಾನು ಮುಟ್ಟಬಲ್ಲೆ ಎನ್ನೋ ಒಂಥರದ ಧೈರ್ಯ. ಇನ್ನು ಕೆಲವರು ಬೇವಿನ ಸೊಪ್ಪನ್ನೇ ತಿಂದುಬಿಡುತ್ತಾರೆ, ಅದು ದಡ್ಡ ಧೈರ್ಯ’’

******

ಪಂ. ರಾಜೀವರ ಸಿಟ್ಟೂ ಕೂಡ ಅವರ ಸರೋದ್ ವಾದನದಷ್ಟೆ ಮನ್ನಣೆ ಪಡೆದಿದೆ ಎಂಬುದು ನನಗೆ ಖಾತ್ರಿಯಾಗಿದ್ದು ಇದೇ ಪತ್ರಿಕೆಗಾಗಿ ‘‘ಪಂಡಿತ್ ರಾಜೀವ ತಾರಾನಾಥರಿಗೆ ಸಿಟ್ಟು ಯಾಕೆ ಬರುತ್ತದೆ’’ ಎಂಬುದನ್ನೇ ಇಟ್ಟುಕೊಂಡು ಒಂದು ಲೇಖನ ಮಾಡಿಕೊಡಿ ಎಂದು ಸಂಪಾದಕ ಬಳಗದಿಂದ ನನಗೆ ಹಕ್ಕೊತ್ತಾಯ ಬಂದಾಗ! ಅದಾಗಲೇ ಅವರ ಬಗ್ಗೆ ಹತ್ತಕ್ಕೂ ಹೆಚ್ಚು ಲೇಖನ ಬರೆದಿದ್ದ ನನಗೆ ‘ ‘ಇದೊಂದು ವಿಷಯ ಬಾಕಿ ಉಳಿದಿತ್ತು’ ಎಂಬಂತೆ ಆ ಬೇಡಿಕೆಯಿತ್ತು! ಅವರ ಸಿಟ್ಟು ಎಂದರೆ ಅದು ಬರಿಯ ‘‘ಆಂಗ್ರೀ ಯಂಗ್ ಮ್ಯಾನ್‌’’ ಚಹರೆಯದ್ದಲ್ಲ. ಅವರ ಒಳಗೆ ಬೆಂಕಿಯುಂಡೆ ಸಿಡಿಯಲು ಸಿದ್ಧವಾಗಿ ಕೂತಿರುವುದಕ್ಕೆ ಸಕಾರಣಗಳು ಇವೆ ಎಂದು ನನಗೆ ಹಲವು ವರ್ಷಗಳಿಂದ ಅನ್ನಿಸಿದ್ದು ಇನ್ನಷ್ಟು ಮನದಟ್ಟಾಗಿದ್ದು ಅವರ ಕೆಲವು ಆಪ್ತರೊಂದಿಗೆ ಮಾತನಾಡಿದಾಗ.

ರಾಜೀವರು ಚಿಕ್ಕಂದಿನಿಂದಲೂ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಪರಿಪೂರ್ಣತೆ ಬಯಸುವವರು, ಶೀಘ್ರಗ್ರಾಹಿಗಳು. ಅವರ ಗುರುಗಳು ಒಮ್ಮೆ ಹೇಳಿದ್ದನ್ನು ಅಥವಾ ಸರೋದಿನಲ್ಲಿ ನುಡಿಸಿ ತೋರಿಸಿದ್ದನ್ನು ಹಾಗೆ ಛಕ್ಕನೆ ಹಿಡಿದುಕೊಂಡು, ಅದರಂತೆಯೇ ನುಡಿಸಲು ಪ್ರಯತ್ನಿಸಿ, ಅದು ತಮ್ಮ ಬೆರಳಿಗೆ ಬರುವವರೆಗೂ ರಿಯಾಜ್ ಮಾಡುವವರು. ಒಂದು ಕಾರ್ಯಕ್ರಮವಿದೆ ಎಂದಾದರೆ, ಕಛೇರಿಯಲ್ಲಿ ಏನು ನುಡಿಸಬೇಕೆಂದು ಮನಸ್ಸಲ್ಲಿಯೇ ಸಿದ್ಧತೆ, ಮತ್ತೆ ಕೆಲವೊಮ್ಮೆ ಅದಕ್ಕೂ ರಿಯಾಜ್ ಮಾಡುವವರು. ಇಷ್ಟೆಲ್ಲ ಮಾಡಿಕೊಂಡು ವೇದಿಕೆಯ ಮೇಲೆ ಹೋದಾಗ, ಪ್ರೇಕ್ಷಕರು ಏನೋ ಗದ್ದಲ ಮಾಡಿದರೆ, ಮೈಕ್ ಸರಿಯಾಗಿಲ್ಲ ಎಂದಾದರೆ, ಅವರ ಏಕಾಗ್ರತೆಗೆ ಭಂಗವಾದರೆ ಸಿಟ್ಟು ಬರುವುದು ಸಹಜವಲ್ಲವೇ? ಸಮಯಕ್ಕೆ ತುಂಬ ಬೆಲೆ ಕೊಡುವ ಅವರಿಗೆ ಯಾರಾದರೂ ಹೇಳಿದ ಸಮಯಕ್ಕೆ ಬರದಿದ್ದರೆ ಸಿಟ್ಟು ಬರುತ್ತದೆ. ಯಾವುದೇ ಕೆಲಸ ಅರೆಬರೆಯಾದರೆ, ನಿರೀಕ್ಷಿತವಾದ ಗುಣಮಟ್ಟವಿಲ್ಲದಿದ್ದರೆ ಅಸಹನೆ ಎನ್ನಿಸುತ್ತದೆ. ಯಾರಾದರೂ ಸುಖಾಸುಮ್ಮನೆ, ತಿರುಳಿಲ್ಲದೇ ಮಾತನಾಡಿದರೆ, ವಿತಂಡವಾದ ಹೂಡಿದರೆ ಅವರಿಗೆ ಕಿರಿಕಿರಿಯಾಗುತ್ತದೆ.
ಬಾಲ್ಯದಲ್ಲಿ ದೊಡ್ಡತನ, ಉದಾರತೆ, ಔತ್ತಮ್ಯದ ಮಾದರಿಗಳನ್ನು ಕಾಣುತ್ತ, ಅವುಗಳನ್ನು ತಮ್ಮೊಳಗೂ ಮೈಗೂಡಿಸಿಕೊಂಡಿರುವ ರಾಜೀವರಿಗೆ ದಲಿತರು, ಮುಸ್ಲಿಮರು, ಕ್ರ್ತ್ಯೈಸ್ತರ ಮೇಲೆ ದಿನದಿನಕ್ಕೂ ದೌರ್ಜನ್ಯ, ಕ್ರೌರ್ಯ ಹೆಚ್ಚುತ್ತಿರುವುದನ್ನು ಕಂಡಾಗ ಮುಖ ಕೆಂಪಾಗುತ್ತದೆ, ಮಾತು ಸಿಡಿಲಾಗುತ್ತದೆ. ಪ್ರಗತಿಪರ, ವೈಚಾರಿಕ ದೃಷ್ಟಿಕೋನದ, ಆಧುನಿಕ ಮನೋಭಾವದ ತಂದೆ-ತಾಯಿಯರ ಮಡಿಲಲ್ಲಿ ಬೆಳೆದ ರಾಜೀವರಿಗೆ ಇನ್ನೂ ಆಳದಲ್ಲಿ ಬೇರೂರಿರುವ ಜಾತಿಪದ್ಧತಿ, ಅಸವಾನತೆ, ತರತಮ್ಯ ಭಾವ ಕಂಡಾಗ ಕೋಪ ಉಕ್ಕುತ್ತದೆ.

ಅಂದಹಾಗೆ ಆ ಲೇಖನ ಪ್ರಕಟವಾದಾಗ ನನಗೇ ಒಳಗೊಳಗೇ ಟುಕುಟುಕು? ನಿಜಕ್ಕೂ ಸಿಟ್ಟಾದರೆ ಎಂದು. ಸದ್ಯ? ಲೇಖನ ಪ್ರಕಟವಾದ ದಿನ ಅವರಾಗಿಯೇ ಫೋನ್ ಮಾಡಿ, ‘‘ಏನ್ರೀ? ಯಾಕೆ ಸಿಟ್ಟು ಬರುತ್ತದೆ ಅಂತ ಲೇಖನವನ್ನೇ ಬರಿದಿದೀರಿ? ಆಯ್ಯೋ? ಅಡ್ಡಿಲ್ಲ? ಚೆನ್ನಾಗಿದೆ’’ ಎಂದು ನಕ್ಕಿದ್ದರು!

******

ಪಂ. ರಾಜೀವರೆಂದರೆ ಶುದ್ಧಾಂತಃಕರಣದ, ಒಳಗೊಳಗೇ ಮಿಡಿಯುವ ಕಾಳಜಿ. ತಮ್ಮೊಡನೆ ತಬಲಾ ನುಡಿಸುವ ಸಾಥಿದಾರರು, ಸಹಕಲಾವಿದರ ಕುರಿತು ಇನ್ನಿಲ್ಲದ ಬೆಚ್ಚನೆಯ ಆಪ್ತ ಕಕ್ಕುಲಾತಿ. ಯಾರಿಗೋ ಆರೋಗ್ಯ ಸರಿಯಿಲ್ಲ ಅಥವಾ ಇನ್ನೇನೋ ತೊಂದರೆಗೆ ತಟ್ಟನೆ ಸಹಾಯಕ್ಕೆ ಚಾಚುವ ಕೈಗಳು ಅವು. ನನಗಿನ್ನೂ ನೆನಪಿದೆ, ಉಸ್ತಾದ್ ಫಾಯಜ್ ಖಾನರಿಗೆ ಅಪಘಾತವಾಗಿ, ಅವರ ಪತ್ನಿ ನಿಧನರಾದ ಸಮಯದಲ್ಲಿ ಅಮೆರಿಕದಲ್ಲಿ ಕಛೇರಿ ಪ್ರವಾಸದಲ್ಲಿದ್ದ ರಾಜೀವರಿಂದ ನನಗೆ ಫೋನ್. ನೀವೂ ಸಹಾಯ ಮಾಡಿ, ಜೊತೆಗೆ ಬೇರೆಯವರಿಗೂ ಹೇಳಿ ಎಂದರು. ಮತ್ತೆ ನಾಲ್ಕಾರು ದಿನಗಳ ನಂತರ ಕರೆ ಮಾಡಿ ಏನಾಯಿತು ಎಂದು ವಿಚಾರಿಸಿದರು. ನಾನು ನನ್ನ ಮತ್ತು ನನ್ನ ಸ್ನೇಹಿತರ ಕಡೆಯಿಂದ ಮಾಡಿದ ಸಹಾಯದ ಬಗ್ಗೆ ಹೇಳಿದಾಗ, ‘‘ಭೇಷಾಯಿತು. ಒಬ್ಬರಿಗೊಬ್ಬರು ಈಗ ಆಗದಿದ್ದರೆ ಇನ್ಯಾವಾಗ?’’ ಎಂದವರು ಫೋನಿಟ್ಟರು.

ಇನ್ನೊಮ್ಮೆ ಅವರು ಅಮೆರಿಕ ಪ್ರವಾಸದಲ್ಲಿದ್ದಾಗ ಆತಂಕದಿಂದ ಫೋನ್ ಮಾಡಿದರು. ಬಾಲ್ಯದ ಗೆಳೆಯ ಡಿ.ಬಿ. ಹರೀಂದ್ರರು ಹೇಗಿದ್ದಾರೆ ಅಂತ ಯೋಚನೆಯಾಗಿತ್ತು ಅವರಿಗೆ. ‘ನಾನು ಇಲ್ಲಿಂದ ಫೋನ್ ಮಾಡಿದರೆ ಅವರಿಂದ ಉತ್ತರ ಬರುತ್ತಿಲ್ಲ, ನೀವೊಮ್ಮೆ ಮಾಡಿ ತಿಳಿದುಕೊಂಡು ನನಗೆ ಹೇಳಿ, ನಾಳೆ ಇದೇ ವೇಳೆಗೆ ಫೋನ್ ಮಾಡುತ್ತೇನೆ’ ಎಂದರು. ನಾನು ನಾಲ್ಕಾರು ಸಲ ಹರೀಂದ್ರರ ಮನೆಗೆ ಫೋನಾಯಿಸಿದೆ. ಫೋನ್ ರಿಂಗ್ ಆಯಿತೇ ವಿನಃ ಅವರಿಂದ ಉತ್ತರವಿಲ್ಲ. ಅದು ಮೊಬೈಲ್ ಇನ್ನೂ ಅಷ್ಟು ಚಾಲ್ತಿ ಇಲ್ಲದಿದ್ದ ದಿನಗಳು. ಹರೀಂದ್ರರು ಇವರಿಗಿಂತ ಸುಮಾರು ಎಂಟು ವರ್ಷಕ್ಕೆ ದೊಡ್ಡವರು, ಆರೋಗ್ಯ ಸರಿಯಿಲ್ಲವೋ ಏನೋ ಎಂದು ನನಗೂ ಆತಂಕ. ಅಲ್ಲದೇ ರಾಜೀವಜಿಯವರು ಮರುದಿನ ಫೋನ್ ಮಾಡಿದರೆ ಏನು ಹೇಳುವುದಪ್ಪ ಎಂಬ ಚಿಂತೆ ಕೂಡ. ಹೀಗಾಗಿ ಖುದ್ದು ವಿಚಾರಿಸೋಣವೆಂದು ಮರುದಿನ ಆಫೀಸಿಗೆ ಹೋಗುವ ಮೊದಲು ಅವರ ಮನೆಗೆ ಹೋದೆ. ಹರೀಂದ್ರರು ಸ್ವಸ್ಥ ಮಲಗಿದ್ದರು. ಫೋನ್ ಡೆಡ್ ಆಗಿದೆ ಎಂದು ಅವರ ಪತ್ನಿ ನಸುನಕ್ಕರು. ಮರುದಿನ ಹೇಳಿದ ಸಮಯಕ್ಕೆ ಗಂಟೆ ಹೊಡೆದಂತೆ ರಾಜೀವಜಿಯವರ ಫೋನ್. ಹರೀಂದ್ರರು ಆರೋಗ್ಯವಾಗಿದ್ದಾರೆ ಎಂಬುದನ್ನು ಕೇಳುತ್ತಿದ್ದಂತೆ, ‘ಹೌದಾ’ ಎಂದು ಒಂದು ನಿರಾಳತೆಯ ನಗು ನಕ್ಕರು.

*****

‘‘ದಿನಾ ಎರಡು ಮೂರು ಗಂಟೆ ಪ್ರಾಕ್ಟೀಸ್ ಮಾಡತೀನಿ. ಹಂಗೆ ಮಾಡಿದೆ ಅಂದ್ರೆ ನಾ ಆರಾಮಿದ್ದೀನಿ ಅಂತಲೇ ಲೆಕ್ಕ’’ ಎನ್ನುವ ರಾಜೀವಜಿಯರಿಗೆ ರಿಯಾಜ್ ಎಂದರೆ ಇಬಾದತ್? ರಿಯಾಜ್ ಎಂದರೆ ಪೂಜೆ. ರಿಯಾಜ್ ಎಂದರೆ ಖಾಸಗಿಯಾದ ಅಭ್ಯಾಸ. ಸರೋದ್ ಕಲಿಯಲು ಆರಂಭಿಸಿದ ದಿನಗಳಲ್ಲಿ ದಿನಕ್ಕೆ ಹತ್ತು-ಹನ್ನೆರಡು ಕೆಲವೊಮ್ಮೆ ಹದಿನಾರು ಗಂಟೆಗಳ ಅಭ್ಯಾಸವನ್ನು ಮಾಡುತ್ತಿದ್ದರು. ‘ಸರೋದ್ ನನ್ನದೇ ಕೈಗಳ ವಿಸ್ತ್ತ್ಯೃತ ಭಾಗವೇನೋ ಅನ್ನಿಸುವಷ್ಟರ ಮಟ್ಟಿಗೆ ಅಭ್ಯಾಸ ಮಾಡುತ್ತಿದ್ದೆ. ಆದರೆ ಆಗ ಕೆಲವೊಮ್ಮೆ ಮನಸ್ಸನ್ನು ಅದರಲ್ಲೇ ನೆಡುವುದು ಕಷ್ಟ ಆಗುತ್ತಿತ್ತು. ನನ್ನ ಪರಿಸ್ಥಿತಿಯೂ ಸರಿಯಾಗಿರಲಿಲ್ಲ. ಕೈಯಲ್ಲಿ ದುಡ್ಡಿಲ್ಲ, ಬಡತನ, ಹಸಿವೆ. ಕೆಲವೊಮ್ಮೆ ನುಡಿಸ್ತಾ ಹಾಗೆ ನಿದ್ದೆ ಬಂದುಬಿಡೋದು. ಇವಾಗ ಆ ಬಡತನವಿಲ್ಲ… ಆದರೆ ವಯಸ್ಸಾಗಿಬಿಟ್ಟಿದೆ! ಈಗ ನಾನು ಸುಮ್ಮನೆ ಇಲ್ಲಿಂದ ಅಲ್ಲೀವರೆಗೆ ಅಂತ ಮಾಡಲ್ಲ, ಸಿಲೆಕ್ಟಿವ್ ಆಗಿ ರಿಯಾಜ್ ಮಾಡ್ತೀನಿ. ಯಾವುದರ ಮೇಲೆ ಹೆಚ್ಚು ಜೋರು ಕೊಡಬೇಕು, ಯಾವುದನ್ನು ನವಿರಾಗಿಸಬೇಕು, ಸಾಂಗೀತಿಕ ಕಲ್ಪನೆಯನ್ನು ಹ್ಯಾಗೆ ಬೆಳೆಸಬೇಕು, ಯಾವ ದಿಕ್ಕಿನಲ್ಲಿ ಹೋಗಬೇಕು, ಅದನ್ನು ನೋಡೋದು. ಹೆಚ್ಚೆಚ್ಚು ಜಾಗೃತಿಯಿಂದ ಗಮನಿಸೋದು’ ಎಂದೊಮ್ಮೆ ವಿವರಿಸಿದ್ದರು.

ಹಾಗೆ ನೋಡಿದರೆ ಅವರ ರಿಯಾಜ್ ಮತ್ತು ಗುರುಸ್ಮರಣೆ ಬೆಸೆದುಕೊಂಡಿರುತ್ತದೆ. ಗುರುಗಳು ಕಲಿಸಿದ್ದು ಎಂದು ನೆನಪಿಸಿಕೊಳ್ಳುತ್ತ, ಅದನ್ನೊಮ್ಮೆ ಮೆಲ್ಲಗೆ ಗುಣುಗುಣಿಸುತ್ತ, ಅವೇ ಸ್ವರಗಳನ್ನು ಕೊರಳಿನಿಂದ ಬೆರಳಿಗೆ ಇಳಿಸುತ್ತ, ಸರಿಯೆನ್ನಿಸಲಿಲ್ಲ ಎಂದರೆ ಮತ್ತಷ್ಟು ಎಚ್ಚರಿಕೆಯಿಂದ ಅದನ್ನು ಉಜ್ಜುತ್ತ, ಸರಿಯಾಗಿ ಬಂದಿದೆ ಎಂದು ಮನಸ್ಸಿಗೆ ಅನ್ನಿಸುವವರೆಗೂ ರಿಯಾಜ್ ನಡೆಯುತ್ತದೆ.

****

ರಾಜೀವಜಿಯವರು ಮೊದಲು ಸರೋದ್ ಕಲಿಯುವುದಕ್ಕಾಗಿ, ನಂತರ ಪುನಃ ಸರೋದ್ ಲೋಕಕ್ಕೆ ಮರಳಲಿಕ್ಕಾಗಿ; ವೃತ್ತಿ ಭದ್ರತೆಯಿದ್ದ, ಆರಾಮದಾಯಕ ಬದುಕು ನಡೆಸಬಹುದಾಗಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದು ಎರಡು ಸಲ ಎನ್ನುವುದು ಕುತೂಹಲದ ಸಂಗತಿ. ರಾಜೀವರು ಮೊತ್ತಮೊದಲ ಕೆಲಸಕ್ಕೆ ಸೇರಿದ್ದು ೧೯೫೫ರ ಜುಲೈ ಒಂದರಂದು. ಅದೇ ವರ್ಷ ಅಕ್ಟೋಬರಿನಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರನ್ನು ಸಂಪರ್ಕಿಸಿ, ಅವರಲ್ಲಿಗೆ ಹೋಗಿ, ಸರೋದ್ ಕಲಿಯುವ ಬಯಕೆಯನ್ನು ವ್ಯಕ್ತಪಡಿಸಿ ಎಂಟು ದಿನವಿದ್ದು ಮರಳಿದ್ದರು. ಸರೋದ್ ಕಲಿಯಲೇಬೇಕೆಂಬ ಉತ್ಕಟ ಆಸೆ, ಛಲದಿಂದ ೧೯೫೫ರ ಡಿಸೆಂಬರಿನಲ್ಲಿ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ಕೊಟ್ಟು, ಎಲ್ಲವನ್ನೂ ಬಿಟ್ಟು ಕಲ್ಕತ್ತೆಗೆ ನಡೆದಾಗ ಅವರಿಗೆ ೨೩ ವರ್ಷ.

ಐದು ವರ್ಷ ಸರೋದ್ ಕಲಿತು, ಎಂಎ ಮಾಡಲೆಂದು ೧೯೬೦ರಲ್ಲಿ ಮೈಸೂರಿಗೆ ಬಂದವರು ಪಿಎಚ್.ಡಿ ಯನ್ನೂ ಮಾಡಿದರು. ಧಾರವಾಡ, ಮೈಸೂರು, ತಿರುಚ್ಚಿ, ಹೀಗೆ ವಿವಿಧ ಊರುಗಳ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕ ವೃತ್ತಿಯನ್ನು ಮಾಡಿ, ಕೊನೆಗೆ ಹೈದರಾಬಾದಿನ ‘ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆಂಡ್ ಫಾರಿನ್ ಲಾಂಗ್ವೇಜ್‌ಸ್’ (ಸಿಐಇಎಫ್‌ಎಲ್)ನಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ೧೯೮೧-೧೯೮೨ರಲ್ಲಿ ಹೈದರಾಬಾದ್‌ನಿಂದ ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಿನಿವಾ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಸರೋದ್ ಜೊತೆಗಿತ್ತು ನಿಜ, ಆದರೆ ವೃತ್ತಿ ಒತ್ತಡಗಳ ನಡುವೆ ಅಷ್ಟು ಗಮನ ಕೊಡಲಂತೂ ಆಗುತ್ತಿರಲಿಲ್ಲ. ೧೯೮೨ ರಲ್ಲೊಮ್ಮೆ ಹೈದರಾಬಾದಿಗೆ ಬಂದಿದ್ದ ರವಿಶಂಕರರು ‘ಇಲ್ಲಿ ಇಂಗ್ಲಿಷಿನ ಸೌಭಾಗ್ಯ ಕಾಯುವುದು ನಿನ್ನ ಕೆಲಸವೇನು’ ಎಂದು ಚೆನ್ನಾಗಿ ಗದರಿದ್ದರು. ಮತ್ತೊಮ್ಮೆ ಕೂಗಿ ಕರೆಯಿತು ಸರೋದ್ ನಾದ. ಹೈದರಾಬಾದ್ ಕೆಲಸಕ್ಕೆ ಮತ್ತು ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ರಾಜೀನಾಮೆ ಕೊಟ್ಟರು. ಎಲ್ಲವನ್ನೂ ತೊರೆದು ಸರೋದ್ ಹಿಡಿದು ಬೆಂಗಳೂರಿಗೆ ಮರಳಿದರು.

ಹಾಗೆ ಎರಡನೆಯ ಬಾರಿಗೆ ಒಳ್ಳೆಯ ಕೆಲಸವನ್ನು ತ್ಯಜಿಸಿ, ಸರೋದ್ ತಂತಿಗಳನ್ನೇ ನೆಚ್ಚಿಕೊಂಡು ಹೊರಟಾಗ ಅವರಿಗೆ ಸರಿಯಾಗಿ ೫೦ ವರ್ಷವಾಗಿತ್ತು. ಮೊದಲನೆಯ ಸಲ ಇರುವುದೆಲ್ಲವ ಬಿಟ್ಟು ಹೊರಟಾಗ ಯೌವ್ವನದ ಹುಮ್ಮಸ್ಸಿತ್ತು, ಅನೂಹ್ಯವಾಗಿದ್ದನ್ನು ಕೈಗೂಡಿಸಿಕೊಳ್ಳುವ ಅದಮ್ಯ ಚೇತನವಿತ್ತು. ಎರಡನೆಯ ಸಲ ಯೌವನದ ಹುಮ್ಮಸ್ಸು ತುಸುಮಟ್ಟಿಗೆ ಕರಗಿತ್ತು, ಆದರೆ ಮನೋಬಲ ಮೊದಲಿಗಿಂತ ಅಧಿಕವಿತ್ತು.

andolana

Recent Posts

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 mins ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

44 mins ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

58 mins ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

1 hour ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

1 hour ago

ಮಂದಿರ-ಮಸೀದಿಗಳ ಹೊಸ ವಿವಾದ: ಮೋಹನ್ ಭಾಗವತ್‌ ಕಳವಳ

ಪುಣೆ: ದೇಶದಲ್ಲಿ ಹೊಸದಾಗಿ ಮಂದಿರ-ಮಸೀದಿಗಳ ವಿವಾದಗಳನ್ನು ಹುಟ್ಟುಹಾಕುತ್ತಿರುವುದಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ…

1 hour ago