ಅನ್ನದಾತರ ಅಂಗಳ

ಉತ್ತಮ ಇಳುವರಿಗೆ ಪ್ರತಿಯೊಂದು ಸಸಿಯೂ ಮುಖ್ಯ

ಎನ್.ಕೆಶವಮೂರ್ತಿ
ನಾನು ಶಿರಸಿಯ ಸಮೀಪದ ಒಂದು ಅಡಕೆ ತೋಟಕ್ಕೆ ಹೋಗಿದ್ದೆ. ಆ ತೋಟವನ್ನು ಆ ರೈತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು. ಅಲ್ಲಿ ಅಡಕೆ ಮರಗಳು ಸೈನಿಕರಂತೆ ಶಿಸ್ತಾಗಿ ಸಾಲಿನಲ್ಲಿ ನಿಂತಿದ್ದವು. ಆರೋಗ್ಯಕರವಾದ ಅಡಕೆ ಫಲ ನಳನಳಿಸುತ್ತಿತ್ತು. ಅದು ಫಸಲಿನ ಕಾಲ. ಪ್ರತಿಯೊಂದು ಅಡಕೆ ಮರದಲ್ಲಿಯೂ ಐದರಿಂದ ಆರು ಗೊನೆ ತೂಗಾಡುತ್ತಿದ್ದವು. ಉತ್ತಮ ಇಳುವರಿ ಬರುವ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅದ್ಯಾವುದೂ ನನ್ನ ಗಮನ ಸೆಳೆಯಲಿಲ್ಲ. ನನ್ನ ಗಮನ ಎಲ್ಲ ಅಡಕೆ ಮರಗಳಿಗೆ ಕಟ್ಟಿರುವ ಬಣ್ಣದ ದಾರಗಳ ಮೇಲೆ ಹೋಯಿತು.

ಆ ಅಡಕೆ ತೋಟದಲ್ಲಿ ಮರಗಳಿಗೆ ಕೆಂಪು, ಬಿಳಿ, ಹಸಿರು, ಹಳದಿ, ನೀಲಿ ದಾರಗಳನ್ನು ಕಟ್ಟಲಾಗಿತ್ತು. ನಾನು ಕುತೂಹಲದಿಂದ ಆ ರೈತರನ್ನು ‘ಏನಿದು ದಾರ? ’ ಎಂದು ಕೇಳಿದೆ. ಅವರು ‘ಏಕೆ ನಿಮಗೆ ಅರ್ಥ ಆಗಲಿಲ್ಲವೆ? ’ ಎಂದರು. ‘ಅರ್ಥವಾಗದಿದ್ದಕ್ಕೆ ಅಲ್ಲವೇ ನಾನು ಕೇಳಿದ್ದು’ ಎಂದೆ. ‘ನೋಡಿ ದಾರದ ಬಣ್ಣ ಹಾಗೂ ಫಸಲನ್ನು ಗಮನಿಸಿ. ಹಸಿರು ದಾರವಿರುವ ಮರಗಳಲ್ಲಿ ಆರು ಗೊನೆ ಇವೆ. ನೀಲಿ ದಾರದ ಮರಗಳಲ್ಲಿ ಐದು ಗೊನೆಗಳಿವೆ. ಕೆಂಪು ದಾರ ಕಟ್ಟಿರುವ ಮರಗಳಲ್ಲಿ ಕಡಿಮೆ ಗೊನೆ ಇದ್ದಾವೆ, ಇದೇ ದಾರದ ಮಹಿಮೆ’ ಅಂದರು. ನಾನು ‘ದಾರ ಕಟ್ಟಿದರೆ ಇಳುವರಿ ಜಾಸ್ತಿ ಆಗುತ್ತದೆಯೆ’ ಎಂದೆ. ‘ಇಲ್ಲ, ಯಾವ ಮರ ಎಷ್ಟು ಇಳುವರಿ ಕೊಡುತ್ತಿದೆ ಎಂದು ಆ ದಾರಗಳ ಮೂಲಕ ತಿಳಿಯುತ್ತದೆ. ಆಗ ಅದರ ನಿರ್ವಹಣೆ ಮಾಡಲು ಸುಲಭವಾಗುತ್ತದೆ. ಕಡಿಮೆ ಫಸಲಿನ ಮರಗಳಿಗೆ ಹೆಚ್ಚು ಆರೈಕೆ ಮಾಡುತ್ತೇವೆ.

ಹಾಗಂತ ಅಧಿಕ ಇಳುವರಿ ನೀಡದ ಗಿಡಗಳನ್ನು ಕಡೆಗಣಿಸುವುದಿಲ್ಲ. ಮೂರು ವರ್ಷಗಳಾದರೂ ಕಡಿಮೆ ಫಸಲು ನೀಡುವ ಮರಗಳನ್ನು ಅದರ ತಳಿ ಗುಣ ಸರಿಯಲ್ಲ ಎಂದು ನಿರ್ಧರಿಸಿ ನಿರ್ದಾಕ್ಷಿಣ್ಯವಾಗಿ ಅಂತಹ ಮರಗಳನ್ನು ಕತ್ತರಿಸುತ್ತೇವೆ. ಅದೇ ಜಾಗದಲ್ಲಿ ಹೆಚ್ಚು ಫಸಲು ನೀಡುವ ಮರದ ಗೋಟಿನಿಂದ ತಯಾರಿಸಿದ ಸಸಿ ನಾಟಿ ಮಾಡುತ್ತೇವೆ. ಆಗ ಪ್ರತಿಯೊಂದು ಗಿಡದಿಂದಲೂ ಹೆಚ್ಚಿನ ಫಸಲು ಬರುತ್ತದೆ. ಎಕರೆವಾರು ಇಳುವರಿ ಹೆಚ್ಚಾಗುತ್ತದೆ. ಶ್ರಮಕ್ಕೆ ತಕ್ಕ ಫಲವೂ ಸಿಗುತ್ತದೆ’ ಎಂದರು. ಆ ಕ್ಷಣ ನನಗೆ ಯಾರೋ ತಳಿ ವಿಜ್ಞಾನಿಯ ಜತೆ ಮಾತನಾಡುತ್ತಿದ್ದೇನೆ ಅನಿಸಿತು.

ನಾನು ಅವರ ತೋಟವನ್ನು ಮತ್ತೊಂದು ಕೋನದಿಂದ ನೋಡತೊಡಗಿದೆ. ನೂರಕ್ಕೆ ಒಂದೆರಡು ಗಿಡಗಳು ಮಾತ್ರ ಕೆಂಪು ದಾರ ಹೊಂದಿದ್ದವು. ಹೆಚ್ಚಿನವು ಹಸಿರು, ನೀಲಿ ದಾರಗಳನ್ನೇ ಹೊಂದಿದ್ದವು. ಆದರೂ ಕುತೂಹಲ ಹೆಚ್ಚಾಗಿ ನಾನು ‘ಮೂರು ವರ್ಷಗಳ ನಿರ್ವಹಣೆಯಲ್ಲಿ ಅದರ ತಳಿ ಗುಣವನ್ನು ಹೇಗೆ ನಿರ್ಧರಿಸುತ್ತೀರ? ಕೀಟಬಾಧೆ, ರೋಗ ತಗುಲಬಹುದಲ್ಲವೇ? ’ ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟೆ. ಅವರ ಉತ್ತರ ತೀರಾ ಗಂಭೀರವಾಗಿತ್ತು. ‘ಸಾರ್, ಪ್ರಯೋಗ ಮಾಡುತ್ತಾ ಕೂರುವುದಕ್ಕೆ ನಮ್ಮದು ಸರ್ಕಾರದ ಸಂಶೋಧನಾಲಯದ ತೋಟವಲ್ಲ. ನಾನು ರೈತ. ಇದರಲ್ಲಿಯೇ ನನ್ನ ಜೀವನದ ನಿರ್ವಹಣೆ ಆಗಬೇಕು. ಅದಕ್ಕೆ ಹಣ ಬೇಕು.

ಹಣ ಬರುವುದು ಇಳುವರಿ ಹೆಚ್ಚಾದಾಗ ಮಾತ್ರ. ಹಾಗಾಗಿ, ನನ್ನ ಸೀಮಿತ ಅನುಭವದಲ್ಲಿ ನನಗೆ ಸತ್ಯ ಅನಿಸಿದ್ದನ್ನು ಮಾಡುತ್ತೇನೆ. ಒಂದು ಮರ ಕತ್ತರಿಸಿದರೆ ಇಳುವರಿ ಕಡಿಮೆ ಆಗುತ್ತದೋ ಇಲ್ಲವೋ ಅಂತ ನೀವು ಕೇಳಬಹುದು. ಇಂಥ ಮರವನ್ನು ಕತ್ತರಿಸಬೇಕು ಎಂದು ಮೊದಲೇ ನಿರ್ಧಾರವಾಗಿರುವುದರಿಂದ ಅದರ ಪಕ್ಕದಲ್ಲಿ ಮತ್ತೊಂದು ಸಸಿ ಕೂರಿಸುವ ಕಲೆ ನಮಗೆ ಕರಗತವಾಗಿದೆ. ಆ ಮರ ಕಡಿಯುವ ಹೊತ್ತಿಗೆ ಈ ಮರದ ಇಳುವರಿ ಆರಂಭವಾಗಿರುತ್ತದೆ. ಒಟ್ಟು ಇಳುವರಿಗೆ ಮೋಸವಾಗುವುದಿಲ್ಲ’ ಎಂದರು. ಅವರ ಚಿಂತನೆ ಸರಿ ಇದೆ ಅನಿಸಿತು.

ಯಾವಾಗಲೂ ಒಂದು ಎಕರೆ ಜಾಗದಲ್ಲಿ ಎಷ್ಟು ಗಿಡಗಳು ಇವೆ ಅನ್ನುವುದು ಮುಖ್ಯವಾಗುವುದಿಲ್ಲ. ಪ್ರತಿ ಗಿಡ ಎಷ್ಟು ಇಳುವರಿ ಕೊಡುತ್ತದೆ ಅನ್ನುವುದು ಮುಖ್ಯ. ಹೇಗೆ ಪ್ರತಿಯೊಬ್ಬ ಸೈನಿಕನ ಸಾಮರ್ಥ್ಯ ಆ ಸೈನ್ಯ ಬಲಿಷ್ಠವಾಗಲು ಸಹಕಾರಿಯಾಗುತ್ತದೆಯೋ ಹಾಗೆಯೇ ಪ್ರತಿಯೊಂದು ಗಿಡವೂ ಜಮೀನಿನ ಇಳುವರಿಗೆ ಮುಖ್ಯವಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜಗಕೆ ಮಾದರಿ!

ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…

2 hours ago

ಓದುಗರ ಪತ್ರ: ವಿವೇಕಾನಂದ ಪ್ರತಿಮೆ ಅನಾವರಣಗೊಳಿಸಿ

ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…

2 hours ago

ಓದುಗರ ಪತ್ರ: ಮಲ್ಲಯ್ಯನ ಬೆಟ್ಟ ಅಭಿವೃದ್ಧಿಗೊಳಿಸಿ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…

2 hours ago

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…

2 hours ago

ಓದುಗರ ಪತ್ರ: ರಥೋತ್ಸವ: ಮುನ್ನೆಚ್ಚರಿಕೆ ಅಗತ್ಯ

ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ…

2 hours ago

ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಸಂಕಷ್ಟ

ಲಕ್ಷ್ಮಿಕಾಂತ್ ಕೊಮಾರಪ್ಪ ಹೂವು ಅರಳುತ್ತಿರುವುದರಿಂದ ಕಾಫಿ ಕೊಯ್ಲಿಗೆ ಅಡ್ಡಿ; ಹೆಚ್ಚುವರಿ ಕಾರ್ಮಿಕ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ ಸೋಮವಾರಪೇಟೆ: ತಾಲ್ಲೂಕಿನ ಗ್ರಾಮೀಣ,…

2 hours ago