ಕಣ್ಣ ಮರೆಯಾದ ಅರಮನೆಯ ಸಾಕಮ್ಮ
ಯಾರಾದರೂ ಬದುಕಿರುವಾಗ ‘ಹೇ ಅದೇನು ಬಿಡು!’ ಅಂದುಕೊಂಡು ಗಮನಿಸದೆ ಇರುವ ಸಂಗತಿಗಳೆಲ್ಲ ಅವರು ಸತ್ತ ಮರುಕ್ಷಣದಿಂದ ಬಹಳ ಮುಖ್ಯ ಅನಿಸುತ್ತವೆ. ಅವರು ಬದುಕಿದ್ದಾಗ ಕಾಣದ ಅರ್ಥಗಳೆಲ್ಲ ಕಾಣುವುದಕ್ಕೆ ಶುರುವಾಗುತ್ತವೆ. ಮೊನ್ನೆ ಮೊನ್ನೆ ತೀರಿಕೊಂಡರಲ್ಲ ರಾಣಿ ಎರಡನೆಯ ಎಲಿಸಬೆತ್ತು ಆಕೆ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿರುತ್ತಾಳೆ ಅಂತ ನನಗೇ ಗೊತ್ತಿರಲಿಲ್ಲ.
ರಾಣಿ ಎಲಿಸಬೆತ್ ಸಾವಿನ ಸುದ್ದಿ ತಿಳಿದ ತಕ್ಷಣ ನೆನಪು ಬಂದದ್ದು ಬಿಳಿಯ ಗ್ಲೌಸು ಮೊಳಕೈಯವರೆಗೂ ಹಾಕಿಕೊಂಡು ಜನರತ್ತ ಬೀಸುತ್ತಿದ್ದ ಕೈ ಮಾತ್ರ. ಅದು ಉದ್ದ ಕಾಲುಚೀಲದ ಹಾಗಿದೆ ಅಂತ ನನ್ನ ಹುಡುಗು ಮನಸ್ಸಿಗೆ ಅನಿಸಿದ್ದು ಕಾರಣ ಇರಬಹುದು. ಇದು ಕಲ್ಪನೆೋಂ ನೆನಪಿನ ಆಟವೋ ಅಂತ ಹುಡುಕಿದರೆ ಕಂಡ ಸುಮಾರು ಫೋಟೋಗಳಲ್ಲಿ ಆಕೆ ಉದ್ದನೆ ಗ್ಲೌಸು ತೊಟ್ಟಿದ್ದು ಕಂಡೆ.
ಎಲಿಸಬೆತ್ತು ಬರುತಾಳಂತೆ ಅಂತ ನಮ್ಮಪ್ಪ, ನನ್ನನ್ನೂ ಅಮ್ಮನನ್ನೂ ಲಾಲ್ ಬಾಗಿನ ಗೇಟಿನ ಹತ್ತಿರ ಕರಕೊಂಡು ಹೋಗಿದ್ದು ನೆನಪಿತ್ತು. ಹುಡುಕಿದರೆ ಅದೂ ನಿಜ. ಎಲಿಸಬೆತ್ ೧೯೬೧ರಲ್ಲಿ ಬೆಂಗಳೂರಿಗೆ ಬಂದಿದ್ದು. ಜೊತೆಗೆ ಜಯಚಾಮರಾಜ ಒಡೆಯರ್ ಕೂಡ ಜೀಪಿನಲ್ಲಿ ಕೂತಿದ್ದ ಫೋಟೋ ಸಿಕ್ಕಿತು. ಭಲೇ ಅಂದುಕೊಂಡೆ. ಸತ್ತವರನ್ನು ನೆನೆಯುವುದು ಅಂದರೆ ಬದುಕಿರುವ ನಮ್ಮ ಆತ್ಮಕಥೆ ಬರಕೊಳ್ಳುವುದು ತಾನೇ!
ಮರೆತಿದ್ದು ಅಂದರೆ ಲಾಲ್‌ಬಾಗ್‌ನಲ್ಲಿ ಎಲಿಸಬೆತ್ ಒಂದು ಕ್ರಿಸ್‌ಮಸ್ ಗಿಡ ನೆಟ್ಟಿದ್ದ ಕಥೆ. ಗಾಜಿನ ಮನೆಯ ಮುಂದೆ ಒಂದು ಪಕ್ಕಕ್ಕೆ ವಾಲಿಕೊಂಡು ಸೊಟ್ಟಗೆ ಬೆಳೆದಿದ್ದ ಮರ ಎಷ್ಟೋ ಸಲ ನೋಡಿದ್ದೆ. ಗಮನಿಸಿರಲಿಲ್ಲ, ಗೊತ್ತಿರಲಿಲ್ಲ. ಮೊನ್ನೆ ಯಾವುದೋ ಪೇಪರಿನಲ್ಲಿ ಅದರ ಫೋಟೋ ಹಾಕಿ ಎಲಿಸಬೆತ್ ನೆಟ್ಟ ಮರಕ್ಕೆ ಅರವತ್ತೊಂದು ವರ್ಷ ಅಂತ ಬರೆದಿದ್ದರು.
ಎಲಿಸಬೆತ್ ತೀರಿಕೊಂಡಮೇಲೆ ಬೇಕಾದ ಬೇಡಾದ್ದನ್ನೆಲ್ಲ ಮನಸ್ಸಿನ ದಡಕ್ಕೆ ತಂದು ತಂದು ಬೀಸಾಕುತ್ತಿದೆ ಮಾಹಿತಿ ಸಮುದ್ರ. ಅವು ಹಾಗಿರಲಿ. ಅರಮನೆ ಎಂಬ ‘ಮನೆ’ಯ ಒಡತಿಯಾಗಿ ಯಾವುದೇ ರಾಣಿ ಎಷ್ಟು ಕಷ್ಟಪಡಬೇಕು ಅನ್ನುವುದು ಮನಸ್ಸಿಗೆ ಬರುತ್ತಿತ್ತು. ಕತೆಗಾರ ಮಿತ್ರರು ಎಲಿಸಬೆತ್ ರಾಣಿಯನ್ನು ‘ಆಕೆ ಅರಮನೆಯಲ್ಲಿದ್ದ ಸಾಕಮ್ಮ. ಒಡಲಾಳದ ಸಾಕಮ್ಮ ಮನೆ ಕಾಪಾಡಕ್ಕೆ ಕಷ್ಟಪಟ್ಟ ಥರ ಅವಳೂ ಪರದಾಡಿದಳು ಅಲ್ಲವಾ?’ ಅಂತ ಕೇಳಿದರು. ಹೌದಲ್ಲಾ ಅನ್ನಿಸಿತು. ಇಂಗ್ಲೆಂಡಿನಲ್ಲಿ ಹಿಂದೆ ಯಾವ ರಾಜನೂ ರಾಣಿಯೂ ಆಳದಷ್ಟು ಕಾಲ ಆಳಿದ ಎಲಿಸಬೆತ್ತಳ ಮಗ, ರಾಜಕುಮಾರನಿಗೆ ಈ ವಾರವೋ ಮುಂದಿನ ವಾರವೋ ಪಟ್ಟಾಭಿಷೇಕವಂತೆ. ರಾಜ ‘ಕುಮಾರ’ನಿಗೆ ಎಪ್ಪತ್ತು ತುಂಬಿದೆ. ಅಕಸ್ಮಾತ್ ಅವನಿಗೇನಾದರೂ ತೊಂದರೆಯಾದರೆ ಮಾಧ್ಯಮದವರಿಗೆ ಸಿಗದ ಹಾಗೆ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ತೀರಿಕೊಂಡ ಡಯಾನ ಮಕ್ಕಳು ರಾಜರೋ ರಾಣಿಯರೋ ಆಗಬಹುದೆನ್ನುವ ಊಹೆ ಕೂಡ ಕೆಲವರು ಮಾಡುತ್ತಿದ್ದಾರೆ. ನಾಲ್ಕು ಜನ ಮಕ್ಕಳು, ಎಂಟು ಜನ ಮೊಮ್ಮಕ್ಕಳು ಜೊತೆಗೆ ಹತ್ತಿರದ ಸಂಬಂಧದ ಇನ್ನೊಂದ ಷ್ಟು ಜನ. ಅಕಸ್ಮಾತ್ ಎಲಿಸಬೆತ್ ಇಂಗ್ಲೆಂಡಿನ, ಕಾಮನ್‌ವೆಲ್ತ್ ಒಕ್ಕೂಟದ ರಾಣಿ ಎಂಬ ಗೌರವ ಪದವಿ ಅಲಂಕರಿಸದೆ, ‘ನಿಜವಾಗಲೂ’ ಎಲ್ಲಾ ಅಧಿಕಾರವಿರುವ ರಾಣಿಯಾಗಿದ್ದಿದ್ದರೆ? ಸಿಂಹಾಸನವೇರಲು ಯಾವ ಮುಘಲ್ ರಾಜವಂಶಕ್ಕೂ ಕಡಿಮೆ ಇರದಷ್ಟು ಸಂಚು, ದ್ರೋಹ, ವಿದ್ರೋಹಗಳೆಲ್ಲ ನಡೆಯುತಿದ್ದವೇನೋ. ಕೋಟಿಗಟ್ಟಲೆ ಜನರ ಬಾಯಿಗೆ, ಕಣ್ಣಿಗೆ ಅಂಜುತ್ತ, ವೈಯಕ್ತಿಕ ಏಕಾಂತವನ್ನೇ ಅಸಾಧ್ಯವಾಗಿ ಮಾಡಿರುವ ಹಲವು ಮಾಧ್ಯಮಗಳ ನಡುವೆ ಸಭ್ಯವಾಗಿ ಕಾಣುತ್ತ ಮನೆಯನ್ನೂ ಸ್ಥಾನಗೌರವವನ್ನೂ ಕಾಪಾಡಿಕೊಳ್ಳುವುದು, ಸಾಕಮ್ಮಾ ಅನಿಸುತ್ತಲ್ಲವೇ. ಸಾಕಮ್ಮ ಬಡವರ ಮನೆಯಲ್ಲೇ ಇರಲಿ, ರಾಣಿಯಾಗೇ ಇರಲಿ ಸಾಕಮ್ಮನೇ.
ಇನ್ನೊಬ್ಬಳು ಎಲಿಸಬೆತ್ ಇದ್ದಳಲ್ಲ, ಹದಿನಾರನೆಯ ಶತಮಾನದಲ್ಲಿ ಅವಳಿಗೂ ಮೊನ್ನೆ ತೀರಿಕೊಂಡ ಎಲಿಸಬೆತ್‌ಗೂ ತುಂಬ ಹೋಲಿಕೆ ಇವೆ, ವ್ಯತ್ಯಾಸ ಇವೆ. ಆ ಎಲಿಸಬೆತ್ ಹೆಸರನ್ನೇ ಯುಗಕ್ಕೆ ಇಟ್ಟು ಎಲಿಸಬೆತ್ ಯುಗ ಅನ್ನುತ್ತಾರೆ. ಹೆಂಗಸರಿಗೆ ಆಸ್ತಿಯ ಹಕ್ಕೂ ಇಲ್ಲದೆ ಇದ್ದ, ಎರಡನೆಯ ದರ್ಜೆಯ ಪ್ರಜೆಗಳು ಎಂಬ ತಿರಸ್ಕಾರವಿದ್ದ ಕಾಲದಲ್ಲಿ ರಾಣಿಯಾಗಿ, ‘ನನ್ನ ಬದುಕಿನಲ್ಲಿ ಯಾವ ಗಂಡಸೂ ನನಗೆ ಬೇಡ’ ಎಂದು ಘೋಷಣೆ ಮಾಡಿ ಮದುವೆಯಾಗದೆ ಉಳಿದ ಆ ಎಲಿಸಬೆತ್ ಕಾಲವನ್ನು ಹೊನ್ನಿನ ಯುಗ ಅನ್ನುತ್ತಾರೆ. ಇಂಗ್ಲೆಂಡು ದುಡ್ಡು ಕಾಸಿನಲ್ಲಿ ಬಲಗೊಂಡದ್ದು, ರಾಜ್ಯ ವಿಸ್ತಾರವಾಗಿದ್ದು, ‘ರಾಷ್ಟ್ರೀಯತೆ’ಯ ಹೆಮ್ಮೆ ಬೆಳೆದದ್ದು, ತಿಳಿವಳಿಕೆಯ ದೃಷ್ಟಿಯಲ್ಲಿ ಕನ್ನಡದಲ್ಲಿ ಆದಂಥ ನವೋದಯ ಅಲ್ಲೂ ಆಗಿದ್ದು ಎಲ್ಲ ಅವಳ ಕಾಲದಲ್ಲಿ. ಅವಳ ಕಾಲದಲ್ಲಿ ಬದುಕಿದ್ದ ಶೇಕ್‌ಸ್ಪಿಯರ್ ನೇರವಾಗಿ ಯಾವತ್ತೂ ಎಲಿಸಬೆತ್‌ಳನ್ನು ನೋಡಿರಲಿಲ್ಲವಂತೆ. ಆದರೂ ಅವರಿಬ್ಬರ ಭೇಟಿ ಬಗ್ಗೆ ಬೇಕಾದಷ್ಟು ಕಥೆಗಳು, ಸೀರಿಯಲ್‌ಗಳು ಬಂದಿವೆ. ಅವನ ನಾಟಕದಲ್ಲಿ ದಿಟ್ಟ ಹೆಂಗಸರ ಪಾತ್ರಗಳು ಎಲಿಸಬೆತ್‌ಳ ಸ್ವಭಾವವನ್ನು ಸೂಚಿಸುತ್ತವೆ ಅನ್ನುವ ಮಾತಿದೆ. ಮಿಡ್ ಸಮರ್ ನೈಟ್ಸ್ ಡ್ರೀಮ್ ಥರ ನಾಟಕಗಳಲ್ಲಿ, ಸ್ಪೆನ್ಸರ್ ಬರೆದ ಫೇರೀ ಕ್ವೀನ್ (ಯಕ್ಷರ ರಾಣಿ) ಕವಿತೆಯಲ್ಲಿ, ಎಲಿಸಬೆತ್ ನೆರಳು ಇರಬಹುದು. ಅವಳು ಕೂಡ ಹತ್ತಾರು ಪದ್ಯ, ಒಂದಷ್ಟು ಅನುವಾದ, ಬೇಕಾದಷ್ಟು ಪತ್ರ ಬರೆದ ದಾಖಲೆಗಳಿವೆ. ಸೋದರಿಗೂ ಅವಳಿಗೂ ಆದ ಜಗಳದ ಕತೆ, ಅವಳು ದೇಶ ನಡೆಸಿದ ರೀತಿ ಇವನ್ನೆಲ್ಲ ನೋಡಿ ಕಬ್ಬಿಣ ಹೃದಯದವಳು ಅನ್ನುವ ಮೆಚ್ಚುಗೆ, ಟೀಕೆಗಳೂ ಇವೆ. ಕನ್ನಡಕ್ಕೆ ಅನುವಾದಗೊಂಡ ಸೊಕ್ಕಿನ ಮುದ್ದಿನ ಬೆಕ್ಕು ರಾಣಿಯ ಅರಮನೆಯಲ್ಲಿ ಮಂಚದ ಕೆಳಗೆ ಅಡಗಿ ಕೂತು ಇಲಿಯನ್ನು ಕಂಡು ಚಂಗನೆ ನೆಗೆದದ್ದು ಇದೆ. ಹಾಗೇ ಆ ಎಲಿಸಬೆತ್‌ಳ ಆಶ್ರಯದಲ್ಲಿ ಬೆಳೆದ ಸಾಹಿತ್ಯಕ್ಕೆ ಮರುಳಾಗಿ ‘ರೂಲ್ ಬ್ರಿಟಾನಿಯಾ’ ಎಂದು ಕನ್ನಡದ ಕವಿಗಳು ಕೋರಿಕೊಂಡದ್ದೂ ಇದೆ.
ಅವಳ ಹಾಗೆ ಎರಡನೆಯ ಎಲಿಸಬೆತ್ ಸಾಹಿತ್ಯ ಬರೆಯಲಿಲ್ಲ, ಇಪ್ಪತ್ತನೇ ಶತಮಾನದ ಕವಿಗಳಿಗೆ ಬೇರೆ ಥರದ ರಾಜಾಶ್ರಯ ಸಿಕ್ಕಿತು ಸರಿ. ಆದರೆ ನೋಡಿ, ಕನ್ನಡದಲ್ಲಿ ಎಲಿಸಬೆತ್ ರಾಣಿ ಕುರುಬರ ಲಕ್ಕನ ಜೊತೆ ಮುಖ್ಯಪಾತ್ರವಾಗಿ ಶ್ರೀಕೃಷ್ಣ ಆಲನಹಳ್ಳಿಯವರ ಕಥೆಯಲ್ಲಿ ಬಂದಳು. ಆಕೆ ಭಾರತಕ್ಕೆ ಬಂದಾಗ ಪಂಜಾಬ್‌ಗೆ ಹೋಗಿ ಜಲಿಯನ್‌ವಾಲಾ ಬಾಗ್‌ಗೆ ಭೇಟಿ ನೀಡಿದರೂ ಅಂಥ ಘಟನೆ ಆಗಬಾರದಿತ್ತು ಅಂದಳೇ ಹೊರತು ಇಂಗ್ಲೆಂಡು ಇಂಥ ಕಗ್ಗೊಲೆ ಮಾಡಿದ್ದು ತಪ್ಪು ಅನ್ನುವುದನ್ನು ಒಪ್ಪುವ ಮನಸ್ಸು ಬರಲೇ ಇಲ್ಲ ಎಂದು ಟೀಕೆಯೂ ಬಂದಿತ್ತು. ಗಾಂಧೀಜಿಯ ಸಮಾಧಿಗೆ ಭೇಟಿ ನೀಡಿ ಅಲ್ಲಿನ ಪುಸ್ತಕದಲ್ಲಿ ಗಾಂಧಿ ಬಗ್ಗೆ ನಾಲ್ಕು ಮಾತು ಬರೆದದ್ದು, ಅದೂ ಸಹಿ ಬಿಟ್ಟು ಸಾಮಾನ್ಯವಾಗಿ ಇನ್ನೇನೂ ಬರೆಯದ ರಾಣಿ ಬರೆದದ್ದು ದೊಡ್ಡ ಸುದ್ದಿಯೂ ಆಯಿತು. ಆಫ್ರಿಕದ ಜನರ ಬಗ್ಗೆ ಎಲಿಸಬೆತ್‌ಳ ವರ್ತನೆಗೂ ಟೀಕೆ ಇವೆ.
ಸುಮ್ಮನೆ ಒಮ್ಮೆ ಅಂತರ್ಜಾಲದಲ್ಲಿ ಭಾರತ ಮತ್ತು ಎಲಿಸಬೆತ್ ಅನ್ನುವುದನ್ನು ಹುಡುಕಿದರೆ ನೂರಾರು ಫೋಟೋ ಸಿಗುತ್ತವೆ. ಹತ್ತೆ ವತ್ತು ಆನೆಗಳ ಸಾಲಿನೊಡನೆ ಜಯಪುರದಲ್ಲಿ ಮೆರವಣಿಗೆ ಮಾಡಿದ್ದು, ಪವಿತ್ರ ಬನಾರಸ್‌ನಲ್ಲಿ ಕಾಶಿಯ ರಾಜನಿಗೆ ಮಾಡುತ್ತಿದ್ದ ಹಾಗೆ ಆನೆಯ ಮೇಲೆ ಅಂಬಾರಿಯಲ್ಲಿ ಕೂರಿಸಿ ಮೆರೆಸಿದ್ದು, ಇನ್ನು ಯಾವುದೋ ಊರಿನಲ್ಲಿ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿದ್ದು ಇಂಥವನ್ನು ನೋಡಿದರೆ ಎಲಿಸಬೆತ್ ಭಾರತದ ರಾಣಿ ಅನ್ನುವ ಭಾವನೆ ಮೂಡಿದರೂ ಆಶ್ಚರ್ಯವಿಲ್ಲ.
ಯಾವ ಊರಿನ ರಾಣಿ, ಯಾವ ಸಾಮ್ರಾಜ್ಯದ ರಾಜನಾದರೂ ಅಂಥ ವ್ಯತ್ಯಾಸವೇನೂ ಇರಲಾರದು. ಅದನ್ನು ಕನ್ನಡದ ಮೊದಲ ಕವಿ ಪಂಪ ಬಹಳ ಅದ್ಭುತವಾಗಿ ಹೇಳಿದ್ದಾನೆ. ಜನರು ತಂಟೆ ತಕರಾರು ಮಾಡದ ಹಾಗೆ ನೋಡಿ ಕೊಳ್ಳಲು ದಂಡಾಧಿಕಾರಿಗಳನ್ನು ನೇಮಕ ಮಾಡಿದ, ಸ್ವಂತದ ಗಂಡುಮಕ್ಕಳಿಗೆ ಏನೇನು ಇಷ್ಟವೋ ಅದನ್ನೆಲ್ಲ ಕೊಟ್ಟ, ಗೆಳೆಯರಿಗೆ, ಆಪ್ತರಿಗೆ ಸಂತೋಷವಾಗುವ ಹಾಗೆ ನಡೆದುಕೊಂಡ ‘ರಾಜ್ಯಾಧಿಕಾರದ ಫಲವು ಇಷ್ಟೇ ಅಲ್ಲವೇ!’ ಎಂದು ಕವಿ ಕೇಳುತ್ತಾನೆ. ಮೊದಲ ತೀರ್ಥಂಕರ ರಾಜನಾದಾಗಲೂ ಅಷ್ಟೇ ಈಜಿಪ್ಟಿನ ಫಾರೋಗಳೂ ಅಷ್ಟೇ, ಪ್ರಜಾಪ್ರಭುತ್ವದ ಪ್ರಧಾನಿಗಳೂ ಅಷ್ಟೇ. ಜನರನ್ನು ನಿಯಂತ್ರಿಸುವ ದಂಡಾಧಿಕಾರ, ತಮ್ಮವರಿಗೆ ಬೇಕು ಬೇಕಾದ್ದನ್ನು ಕೊಡುವ ಅಧಿಕಾರ ರಾಜ್ಯ ಆಳುವುದರಿಂದಾಗುವ ಉಪೋಂಗ ಇಷ್ಟೇ ಅಲ್ಲವೇ!
ಜ್ಞಾನಪೀಠಿಗಳೊಬ್ಬರು ಒಂದು ಸಲ ಹೇಳಿದ್ದರು: ರಾಜ ಇದ್ದಾಗ ಮೌಲ್ಯ ಅನ್ನುವುದಿರುತ್ತದೆ, ಪ್ರಜಾಪ್ರಭುತ್ವದಲ್ಲಿ ಮೌಲ್ಯ ಇರುವುದಕ್ಕೆ ಸಾಧ್ಯವಿಲ್ಲ ಅಂದಿದ್ದರು. ನಿಜವಾಗಿ ಪ್ರಜಾಪ್ರಭುತ್ವ ಇದ್ದರೆ ಅದೇ ಒಂದು ಮೌಲ್ಯ. ಅದರ ಬದಲಾಗಿ ಒಬ್ಬೊಬ್ಬ ಪ್ರತಿನಿಧಿಯೂ, ಎಂಪಿಯಿಂದ ಹಿಡಿದು ಮುನಿಸಿಪಲ್ ಕೌನ್ಸಿಲರ್‌ವರೆಗೆ ಎಲ್ಲ ಪ್ರತಿನಿಧಿಗಳೂ ತಾವೇ ಸಾರ್ವಭೌಮರಾಗಿ ಆಡುವುದು ಕಂಡಾಗ ಒಬ್ಬ ರಾಜನ ವಿರುದ್ಧ ಹೋರಾಡುವುದು ಸುಲಭ, ನಮ್ಮೊಳಗೇ ಅವಿತಿರುವ ನಮ್ಮ ಪ್ರತಿನಿಧಿಗಳ ರೂಪದಲ್ಲಿ ಹೊರಗೆ ಕಾಣಿಸಿಕೊಳ್ಳುವ ಪ್ರಜಾಪ್ರಭುಗಳ ವಿರುದ್ಧ ಹೋರಾಡುವುದು ಕಷ್ಟ ಅನಿಸಿಬಿಡುತ್ತದೆ.
ಅದಕ್ಕೇ ಇರಬೇಕು ಎಲ್ಲ ದೇಶಗಳಲ್ಲೂ ರಾಜ್ಯದ ಅಧಿಕಾರ ತೊರೆದ ರಾಜ, ರಾಜಕುಮಾರರೂ ಪೀಠ ತ್ಯಾಗ ಮಾಡಿದ ಸನ್ಯಾಸಿಗಳೂ ಬಹಳ ಮನಸೆಳೆಯುತ್ತಾರೆ. ಅಥವಾ ರಾಜನೋ ಸನ್ಯಾಸಿೋಂ ಆಗಿದ್ದರೆ ಪ್ರೀತಿ, ಪ್ರಣಯಕ್ಕಾಗಿ ಜೀವ ಕಳೆದುಕೊಂಡವರು ಸಾಹಿತ್ಯದಲ್ಲೂ ಜನರ ಮನಸ್ಸಿನಲ್ಲೂ ಭದ್ರವಾಗಿ ಕೂತುಬಿಡುತ್ತಾರೆ. ಇಷ್ಟವಿರದ ಪಾರ್ಟು ಹಾಕುವುದಿಲ್ಲ, ಇಷ್ಟದ ಹಾಗೆ ಬದುಕುತ್ತೇನೆ ಅನ್ನುವ ಅವರ ಧೈರ್ಯ ಮೆಚ್ಚುಗೆಯಾಗುತ್ತದೆ.
ಇತ್ತೀಚೆಗೆ ತೀರಿಕೊಂಡ ಎರಡನೆಯ ಎಲಿಸಬೆತ್‌ಳ ದೊಡ್ಡಪ್ಪ ರಾಜ ಎಡ್ವರ್ಡ್ ತಾನು ಮೆಚ್ಚಿದ ಅಮೆರಿಕದ ವಿಧವೆಯನ್ನು ಮದುವೆಯಾಗ ಬೇಕೆಂದು ೧೯೩೬ರಲ್ಲಿ ಸಿಂಹಾಸನ ತ್ಯಾಗ ಮಾಡಿದ. ಆ ಕಾರಣಕ್ಕೆ ಎಲಿಸಬೆತ್‌ಳ ಅಪ್ಪ ಸಿಂಹಾಸನವೇರಿ ಅವನ ನಂತರ ಅವಳೇ ರಾಣಿಯಾದಳು. ಘನತೆಯನ್ನು, ಗೌರವವನ್ನು ಕಾಪಾಡಿಕೊಂಡು ಬೇರೆ ಯಾವ ಅರಸನಿಗಿಂತ ಹೆಚ್ಚಾಗಿ ಜಗತ್ತೆಲ್ಲ ಸುತ್ತಿ, ಹದಿನೈದು ಪ್ರಧಾನಮಂತ್ರಿಗಳ ಕಾಲದಲ್ಲಿ ರಾಣಿತನ ನಡೆಸಿ, ಇಂಗ್ಲೆಂಡಿನ ರಾಜ, ರಾಣಿ ಆದಾಯ ತೆರಿಗೆ ಕಟ್ಟಬೇಕಾಗಿರದಿದ್ದರೂ ತಪ್ಪದೆ ತೆರಿಗೆ ಕಟ್ಟಿ- ಎಲಿಸಬೆತ್ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದಳು. ಪಾರ್ಟು ಒಲ್ಲೆ ಅನ್ನುವವರ ಹಾಗೆ ಪಾರ್ಟು ಹೇಗಿರುತ್ತದೋ ಹಾಗೆ ಅಚ್ಚುಕಟ್ಟಾಗಿ ನಟಿಸುವವರು ಕೂಡ ಮೆಚ್ಚುಗೆ ಪಡೆಯುತ್ತಾರಲ್ಲವೇ! ಎಲಿಸಬೆತ್ ರೆಜಿನಾ ಅನ್ನುವುದು ಈ ಎಲಿಸಬೆತ್‌ಳ ಪೂರ್ತಿ ಹೆಸರು. ರೆಜಿನಾ ಅನ್ನುವ ಲ್ಯಾಟಿನ್ ಪದದ ಅರ್ಥ ‘ರಾಜ್ಯವನ್ನು ಆಳುವವಳು, ರಾಣಿ,’ ಅಂತಲೇ. ಜಗತ್ತಿನಲ್ಲಿರುವ ಪ್ರತಿ ಹತ್ತು ಜನರಲ್ಲಿ ಒಂಬತ್ತು ಜನಕ್ಕೆ ಇಂಗ್ಲೆಂಡಿನ ಸಿಂಹಾಸನವೆಂದರೆ ಎರಡನೆಯ ಎಲಿಸಬೆತ್ ಮಾತ್ರ ಅನ್ನುವ ಅಂಕಿಅಂಶವೂ ಬಂದಿತ್ತು. ರಾಣಿ ಅನ್ನುವ ಹೆಸರೂ ಅನ್ವರ್ಥ ವಿವರಣೆಯೂ ಆಗಿದ್ದವಳು ಎಲಿಸಬೆತ್.
ಆದರೆ ನನಗೆ ದಾಸ್ತೋವ್ಸ್ಕಿಯ ಅಪರಾಧ ಮತ್ತು ಶಿಕ್ಷೆಯಲ್ಲಿ ಬರುವ ಲಿಜಾವೆಟಾ ಮುದುಕಿ, ಏನೂ ತಪ್ಪು ಮಾಡದೆ ವ್ಯರ್ಥವಾಗಿ ಕೊಲೆಯಾದ ಬಡಕಲು ಪಾಪದ ಮುದುಕಿ ನೆನಪಾಗುತ್ತಾಳೆ. ಲಿಸಾವೆಟಾ ಅನ್ನುವುದು ಎಲಿಸಬೆತ್ ಎಂಬ ಹೆಸರಿನ ಇನ್ನೊಂದು ರೂಪ. ನನ್ನ ಜೊತೆ ಇಂಗ್ಲಿಷ್ ಪಾಠ ಮಾಡಿದ ಎಲಿಸಬೆತ್ ನೆನಪಾಗುತ್ತಾರೆ. ಆಕೆಯೂ ನೀರಿನಲ್ಲಿ ಮುಳುಗಿ ತೀರಿಕೊಂಡ ಮಕ್ಕಳ ನೆನಪಿನಲ್ಲಿ ಸದಾ ದುಃಖದಲ್ಲಿರುತ್ತಿದ್ದ ವೃದ್ಧೆ. ರಾಣಿ ಎಲಿಸಬೆತ್ ಅಂದರೆ ಕಾಲುಚೀಲದಂಥ ಗ್ಲೌಸು ತೊಟ್ಟ ಕೈ ಮಾತ್ರ. ನಿಜವಾದ ರಾಜ್ಯವೊಂದರ ರಾಣಿ ಗೊತ್ತಿರುವುದಕ್ಕೆ ನಾನೇನೂ ರಾಜನಲ್ಲವಲ್ಲಾ! ಬದುಕಿನ ನಾಟಕದ ದೊಡ್ಡ ಪಾತ್ರಗಳು ಕಣ್ಮರೆಯಾದಾಗ ಒಂದು ಛೆ, ಒಂದಷ್ಟು ಕುತೂಹಲದ ಮಾತು, ಒಂದಷ್ಟು ವಿರೋಧ, ಒಂದಷ್ಟು ಸಮರ್ಥನೆ, ಆಮೇಲೆ ಮತ್ತೆ ದಿನ ನಿತ್ಯದ ಬದುಕಿನ ದಂದುಗ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…