ಡಾ.ಬಿ.ಡಿ. ಸತ್ಯನಾರಾಯಣ,
ಚರ್ಮ ಮತ್ತು ಲೈಂಗಿಕ ರೋಗಗಳ ತಜ್ಞರು, ಮೈಸೂರು
ಮನುಷ್ಯ ತನಗೆ ಬರುವ ಯಾವುದೇ ರೀತಿಯ ಕಾಯಿಲೆಗಳನ್ನು ಹಲವಾರು ಸಂದರ್ಭಗಳಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಾನೆ. ಆದರೆ ಏಡ್ಸ್ ವಿಚಾರದಲ್ಲಿ ಇದು ನಡೆಯುವುದಿಲ್ಲ. ಲೈಂಗಿಕ ಸಮಸ್ಯೆಯಾದ ಇದು ವ್ಯಕ್ತಿಯ ದೇಹವನ್ನು ಕೊರೆಯುವುದಕ್ಕಿಂತ ಹೆಚ್ಚಾಗಿ ಮನಸ್ಸನ್ನು ಕೊರೆಯುತ್ತದೆ. ಒಂದು ಲೆಕ್ಕದ ಪ್ರಕಾರ ಎಚ್‌ಐವಿ ಪೀಡಿತರು ರೋಗ ನಿರೋಧಕ ಶಕ್ತಿಯಿಂದ ಸಾತ್ತಿರುವುದಕ್ಕಿಂತ ಮಾನಸಿಕವಾಗಿ ಕುಗ್ಗಿ ಸತ್ತಿರುವುದೇ ಅಧಿಕ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಅರಿವು ಮೂಡಿಸುವ ಸಲುವಾಗಿ ೧೯೮೮ರ ಡಿಸೆಂಬರ್ ೧ರಿಂದ ವಿಶ್ವದಾದ್ಯಂತ ಏಡ್ಸ್ ದಿನ ಆಚರಿಸಿಕೊಂಡು ಬರಲಾಗುತ್ತಿದೆ.
ಅಕ್ವೈರ್ಡ್ ಇಮ್ಯುನೋ ಡಿಫಿಷಿಯನ್ಸಿ ಸಿಂಡೋಮ್ ಕಾಯಿಲೆಯ ಸಂಕ್ಷಿಪ್ತ ಹೆಸರೇ ಏಡ್ಸ್. ಈ ಕಾಯಿಲೆಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್‌ಗಳು ಕಾರಣ.
ರೋಗಾಣುಗಳು ಶರೀರವನ್ನು ಹೊಕ್ಕಿದ ನಂತರ ಪೂರ್ಣ ಪ್ರಮಾಣದಲ್ಲಿ ಸೋಂಕಿನ ಉಪದ್ರವ ಕಾಣಿಸಿಕೊಂಡಾಗ ಮಾತ್ರ ಎಚ್‌ಐವಿ ಸೋಂಕನ್ನು ಏಡ್ಸ್ ಎಂದು ಕರೆಯುತ್ತೇವೆ. ಇತ್ತೀಚಿನ ವರದಿಗಳ ಪ್ರಕಾರ ಸುಮಾರು ೨೪ ಲಕ್ಷದಷ್ಟು ಎಚ್‌ಐವಿ ಪೀಡಿತರು ನಮ್ಮ ದೇಶದಲ್ಲಿದ್ದಾರೆ.
ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ಕಾಯಿಲೆ ಹೆಚ್ಚಾಗಿ ಅಂಟುತ್ತದೆ. ಕಾಯಿಲೆಯ ಇರುವಿಕೆಯನ್ನು ಪರೀಕ್ಷಿಸಿದೇ ರಕ್ತವನ್ನು ಬೆರೆಯವರಿಗೆ ನೀಡುವುದು, ಸ್ಟರಿಲೈಜ್ ಮಾಡದೇ ಸೂಜಿ ಮತ್ತು ಸಿರಿಂಜ್‌ನಿಂದ ಇಂಜೆಕ್ಷನ್ ನೀಡುವುದರಿಂದಲೂ ಈ ಕಾಯಿಲೆ ಆರೋಗ್ಯವಂತರಿಗೆ ಅಂಟುತ್ತದೆ.
ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತ, ವೀರ್ಯ, ಕಣ್ಣೀರು, ಜೊಲ್ಲು, ಮೂತ್ರ, ಎದೆಹಾಲು ಮತ್ತು ಜನನೇಂದ್ರಿಯಗಳ ರಸದಲ್ಲಿ ಈ ವೈರಾಣುಗಳಿರುತ್ತವೆ. ಈ ವಸ್ತುಗಳ ಮೂಲಕ ಒಮ್ಮೆ ರೋಗಾಣುಗಳು ಆರೋಗ್ಯವಂತರ ದೇಹದೊಳಕ್ಕೆ ಸೇರಿದರೆ ಅವರಲ್ಲಿಯೂ ರೋಗ ಕಾಣಿಸಿಕೊಳ್ಳುತ್ತದೆ.
ರೋಗಾಣುಗಳು ವೃದ್ಧಿಸಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಇರುವ ಜೀವಕಣಗಳ ಮೇಲೆ ಆಕ್ರಮಣ ಮಾಡುತ್ತವೆ. ಆಗ ಸೋಂಕಿತ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕುಂದುತ್ತದೆ ಅಥವಾ ಸಂಪೂರ್ಣ ನಿಷ್ಕ್ರಿಯಗೊಳ್ಳುತ್ತದೆ. ಈ ವೇಳೆಯಲ್ಲಿ ಕಾಯಿಲೆಯ ಉಲ್ಬಣವಾಗುತ್ತದೆ.
೩ ಹಂತಗಳಲ್ಲಿ ವಿಂಗಡಣೆ
ಕಾಯಿಲೆಯ ಹಂತವನ್ನು ಪ್ರಮುಖವಾಗಿ ಮೂರು ಹಂತಗಳಲ್ಲಿ ವಿಂಗಡಣೆ ಮಾಡಬಹುದಾಗಿದೆ.
೧. ಪ್ಲೂ ಸಿಂಡ್ರೋಮ್
೨. ಎಸಿಮ್ಟಮ್ಯಾರಿಟೆಕ್ ಸ್ಟೇಜ್
೩. ಸಿಮ್ಟಮ್ಯಾಟಿಕ್ ಸ್ಟೇಜ್
ಪ್ಲೂ ಸಿಂಡ್ರೋಮ್: ಅಕ್ಯೂಟ್ ಇನ್ಫೆಕ್ಷನ್ ಅಥವಾ ಸೀರೋಕನ್ವರ್ಷನ್ ಸ್ಟೇಜ್ ಎಂದೂ ಇದನ್ನು ಕರೆಯುತ್ತಾರೆ. ಸಾಮಾನ್ಯವಾಗಿ ರೋಗಾಣುಗಳು ಶರೀರವನ್ನು ಸೇರಿದ ೮ರಿಂದ ೧೨ ದಿನಗಳ ಒಳಗೆ ಅಪರೂಪವಾಗಿ ೧೨ ವಾರಗಳ ಒಳಗೆ ಕಾಯಿಲೆಯ ಲಕ್ಷಣಗಳು ಗೋಚರಿಸುತ್ತವೆ. ಪ್ಲೂ ಜ್ವರಗಳಲ್ಲಿ ಕಾಣಿಸಿಕೊಳ್ಳುವಂತೆ ಜ್ವರ, ತಲೆನೋವು, ಮೈಕೈ ನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೇಳೆ ರಕ್ತ ಪರೀಕ್ಷೆ ಮಾಡಿಸುವುದರಿಂದ ರೋಗ ಪತ್ತೆ ಸಾಧ್ಯ.
ಎಸಿಮ್ಟಮ್ಯಾಟಿಕ್ ಸ್ಟೇಜ್
ಕ್ರಾನಿಕ್ ಇನ್ಫೆಕ್ಷನ್ ಸ್ಟೇಜ್ ಅಥವಾ ರೋಗ ಲಕ್ಷಣಗಳು ಇಲ್ಲದ ಕಾಲ ಎಂದು ಇದನ್ನು ಕರೆಯುತ್ತಾರೆ. ರೋಗಾಣುಗಳ ವಿರುದ್ಧ ದೇಹದಲ್ಲಿ ಇರುವ ಆಂಟಿಬಾಡಿಗಳು ಈ ಹಂತದಲ್ಲಿ ಹೋರಾಟ ನಡೆಸುತ್ತಿರುತ್ತವೆ. ಅಲ್ಲದೇ ಈ ಹಂತದಲ್ಲಿ ರೋಗಾಣುಗಳ ಪ್ರಮಾಣ ದೇಹದಲ್ಲಿ ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ಇದು ವ್ಯಕ್ತಿಯ ಆರೋಗ್ಯ, ರೋಗ ನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ.
ಸಿಮ್ಟಮ್ಯಾಟಿಕ್ ಸ್ಟೇಜ್
ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಹಂತ ಇದು. ರೋಗಿಯ ದೇಹವ ವಿವಿಧ ಭಾಗಗಳಿಲ್ಲಿ ಹೆಚ್ಚಾಗಿ ಕುತ್ತಿಗೆ ಸುತ್ತ, ಮೊಳಸಂದು, ಕಂಕಳು, ತೊಡೆ ಮತ್ತು ಕಿಬ್ಬೊಟ್ಟೆಯ ನಡುವೆ ಲಿಂಫ್ ನೋಡ್ ಗ್ರಂಥಿಗಳು ಊದಿಕೊಳ್ಳುತ್ತವೆ. ಕಾಯಿಲೆ ಉಲ್ಬಣವಾಗುತ್ತಿದ್ದಂತೆ ಸುಸ್ತು, ಜ್ವರ, ಭೇದಿ, ನಿಶ್ಯಕ್ತಿ, ಹಸಿವು ಇಲ್ಲದೇ ಇರುವುದು, ಬಡಕಲಾಗುವುದು ಪ್ರಾರಂಭವಾಗುತ್ತದೆ. ಈ ಹಂತವನ್ನು ಏಡ್ಸ್ ಎಂದು ಗುರುತಿಸಲಾಗುತ್ತದೆ.
ಪ್ರಸ್ತುತ ಏಡ್ಸ್ ವೈರಸ್‌ಗೆ ಸರಿಯಾದ ಔಷಧ ಇಲ್ಲದಿರುವುದರಿಂದ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಈಗಿರುವ ಉತ್ತಮ ಮಾರ್ಗ. ಅಲ್ಲದೇ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು, ಸೂಕ್ತ ರೀತಿಯ ವೈದ್ಯಕೀಯ ಪರೀಕ್ಷೆ ಮಾಡಿಸುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಅಂಟದಂತೆ ತಡೆಗಟ್ಟಬಹುದು.
ಲೈಂಗಿಕ ವೃತ್ತಿಯಲ್ಲಿ ತೊಡಗಿರುವವರಲ್ಲಿ ಸೂಕ್ತ ರೀತಿಯ ಅರಿವು ಮೂಡಿಸುವುದು, ನಿರೋಧ್ ಬಳಕೆಗೆ ಪ್ರೋತ್ಸಾಹ, ರಕ್ತದಾನದ ವೇಳೆ ಎಚ್‌ಐವಿ ಪರೀಕ್ಷೆ ಮಾಡುವುದು, ಇಂಜೆಕ್ಷನ್ ತೆಗೆದುಕೊಳ್ಳುವಾಗ, ಶೇವಿಂಗ್ ಮಾಡಿಸುವಾಗ ಎಚ್ಚರ ವಹಿಸುವುದು, ರೋಗಿಯ ಆರೈಕೆಯಲ್ಲಿ ತೊಡಗಿರುವವರು ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ರೋಗದ ನಿಯಂತ್ರಣ ಸಾಧ್ಯವಾಗುತ್ತದೆ. ಅಲ್ಲದೇ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ವಿದ್ಯಾರ್ಥಿಗಳು, ಯುವ ಸಮುದಾಯದಲ್ಲಿ ಅರಿವು ಮೂಡಿಸುವ ಅಗತ್ಯ ಹೆಚ್ಚಿದೆ.
ಎಚ್‌ಐವಿಯನ್ನು ಪ್ರಾರಂಭದಲ್ಲಿಯೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಉತ್ತಮ ಜೀವನ ನಡೆಸಲು ಸಾಧ್ಯವಿದೆ. ಆಂಟಿರಿಟ್ರೋವೈರಲ್ ಎನ್ನುವ ಔಷಧವನ್ನು ತೆಗೆದುಕೊಂಡು ರೋಗಾಣುಗಳ ಶಕ್ತಿಯನ್ನು ಕಡಿಮೆ ಮಾಡಬಹುದು. ಪ್ರಾರಂಭದಲ್ಲಿಯೇ ಮುನ್ನೆಚ್ಚರಿಕೆ ತೆಗೆದುಕೊಂಡರೆ ರೋಗ ಉಲ್ಬಣವಾಗುವುದು ತಪ್ಪುತ್ತದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…