ಕೆ.ಬಿ.ರಮೇಶನಾಯಕ
ಜನವರಿ ತಿಂಗಳ ಮಧ್ಯದಲ್ಲಿ ಚುನಾವಣೆ ನಿಗದಿಗೆ ಸಚಿವರ ನಿರ್ಧಾರ
ಮೈಸೂರು: ರಾಜ್ಯ ರಾಜಕಾರಣದಲ್ಲಿ ಎರಡನೇ ಶಕ್ತಿ ಕೇಂದ್ರ ಎಂದೇ ಗುರುತಿಸಿಕೊಂಡಿರುವ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿರುವ ಪ್ರಮುಖ ಮೂರು ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ಸದ್ದಿಲ್ಲದೆ ಲಾಬಿ ಶುರು ಮಾಡಿದ್ದಾರೆ.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳು ಸೇರಿದಂತೆ ರಾಜ್ಯದ ೩೧ ಜಿಲ್ಲೆಗಳ ಮೀಸಲಾತಿ ಪ್ರಕಟವಾಗಿರುವ ಪರಿಣಾಮವಾಗಿ ತಮಗೆ ಅನುಕೂಲಕರವಾಗಿರುವ ಕ್ಷೇತ್ರಗಳಲ್ಲಿ ಅವಕಾಶ ಮಾಡಿ ಕೊಡುವಂತೆ ಹಾಲಿ-ಮಾಜಿ ಶಾಸಕರ ಬೆನ್ನುಬಿದ್ದಿರುವ ಆಕಾಂಕ್ಷಿಗಳು ಮನವೊಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೀಗಾಗಿ, ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ಜೋರಾಗುವ ಜತೆಗೆ, ಟಿಕೆಟ್ ಪಡೆಯಲು ಹಲವು ಕಸರತ್ತು ನಡೆಯುವ ಸಾಧ್ಯತೆಯಿದೆ. ಐದು ವರ್ಷಗಳ ಹಿಂದೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿತ್ತಾದರೂ ಇದೀಗ ಅದಕ್ಕೆ ಕಾಲ ಕೂಡಿ ಬಂದಿರುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಜಿಪಂ, ತಾಪಂಗಳಿಗೆ ಕ್ಷೇತ್ರವಾರು ಮೀಸಲು ನಿಗದಿಪಡಿಸಿರುವುದರಿಂದ ಚುನಾವಣೆ ಖಚಿತವಾಗಿದೆ.
ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಐದು ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಪಂಚಾಯಿತಿ ಚುನಾವಣೆಗಳನ್ನು ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಗೊಂದಲ ಹಾಗೂ ಸುದೀರ್ಘ ಕಾನೂನು ಹೋರಾಟಗಳಿಂದಾಗಿ ಮುಂದೂಡುತ್ತಲೇ ಬರಲಾಗಿತ್ತು. ಬರೋಬ್ಬರಿ ಹತ್ತು ವರ್ಷಗಳ ಕಾಯುವಿಕೆಯ ಬಳಿಕ ಲೋಕಲ್ ಫೈಟ್‌ಗೆ ಅಖಾಡ ಸಿದ್ಧವಾಗುತ್ತಿರುವುದು ಎರಡನೇ ಹಂತದ ನಾಯಕರು ಹಾಗೂ ಮುಖಂಡರಲ್ಲಿ ಹೊಸ ಹುರುಪು ತಂದಿದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧೆಗೂ ಅವಕಾಶ ಸಿಗದೆ ಹಾಗೂ ಪಕ್ಷಕ್ಕಾಗಿ ದುಡಿದರೂ ಸರ್ಕಾರದ ನಿಗಮ-ಮಂಡಳಿಗಳ ನಾಮ ನಿರ್ದೇಶನವೂ ಇಲ್ಲದೆ ಬೇಸರದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದಿದ್ದ ಆಕಾಂಕ್ಷಿಗಳು ಅಖಾಡಕ್ಕೆ ಇಳಿಯಲು ಮಾನಸಿಕವಾಗಿ ಸಜ್ಜಾಗಿದ್ದಾರೆ. ಟಿಕೆಟ್ ಗಿಟ್ಟಿಸಲು ಹಾಲಿ-ಮಾಜಿಗಳ ಮೊರೆ ಟಿಕೆಟ್ ಆಕಾಂಕ್ಷಿಗಳು ಹಾಲಿ-ಮಾಜಿ ಶಾಸಕರ ಮೊರೆ ಹೋಗಿ, ತಮ್ಮನ್ನು ಪರಿಗಣಿಸುವಂತೆ ಬೇಡಿಕೆ ಇಟ್ಟಿದ್ದಾರೆ. ತಮಗೆ ಅಥವಾ ತಮ್ಮ ಬೆಂಬಲಿಗರಿಗೆ ಪೂರಕವಾಗಿ ಮೀಸಲು ಒಲಿದಿರುವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.
ಇನ್ನೂ ಕೆಲವು ಕಡೆಗಳಲ್ಲಿ ಹಲವು ವರ್ಷಗಳಿಂದ ನಿರ್ದಿಷ್ಟ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಆಕಾಂಕ್ಷಿಗಳಿಗೆ ಮೀಸಲಾತಿ ಬದಲಾವಣೆ ನಿರಾಶೆ ಮೂಡಿಸಿದ್ದರೆ, ಜಾತಿ ಸಮೀಕರಣ, ಕ್ಷೇತ್ರದಲ್ಲಿನ ವೈಯಕ್ತಿಕ ಪ್ರಭಾವ ಹಾಗೂ ಪಕ್ಷನಿಷ್ಠೆಯನ್ನು ಮುಂದಿಟ್ಟುಕೊಂಡು ಟಿಕೆಟ್‌ಗಾಗಿ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಲ್ಲಿ ಜಾ.ದಳದ ಶಾಸಕರಿದ್ದರೆ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ, ನಂಜನಗೂಡು, ತಿ.ನರಸೀಪುರ, ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಜಾ.ದಳದಿಂದ ಅಂತರ ಕಾಯ್ದುಕೊಂಡಿರುವುದರಿಂದ ಚುನಾವಣೆ ವೇಳೆ ಯಾವ ನಿಲುವು ತಳೆಯುತ್ತಾರೆ ಎಂಬುದು ರಹಸ್ಯವಾಗಿದೆ. ತಮ್ಮ ಬೆಂಬಲಿಗರನ್ನು ಪಕ್ಷೇತರವಾಗಿ ಕಣಕ್ಕಿಳಿಸಬೇಕು ಅಥವಾ ಜಾ.ದಳದಿಂದ ಬಿ.-ರಂ ಕೊಡಿಸಬೇಕು. ಆದರೆ, ಅವರು ತಟಸ್ಥವಾಗಿ ಉಳಿದಿರುವುದರಿಂದ ಯಾವ ರೀತಿಯ ಹೆಜ್ಜೆ ಇಡುತ್ತಾರೆ ಎನ್ನುವುದು ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳ ಟಿಕೆಟ್ ಹಂಚಿಕೆಯನ್ನು ಆಯಾಯ ಶಾಸಕರ ನಿರ್ಧಾರಕ್ಕೆ ಬಿಟ್ಟರೆ, ಕೆ.ಆರ್.ನಗರ, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮಾಜಿ ಶಾಸಕರ ನಿರ್ಧಾರ ವಾಗಿದೆ. ಉಳಿದಂತೆ ಬಿಜೆಪಿ ಪ್ರಬಲವಾಗಿರುವ ನಂಜನಗೂಡು ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್, ವರುಣ ಕ್ಷೇತ್ರ ದಲ್ಲಿ ಪಕ್ಷದ ನಾಯಕರೇ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ಬರಲಿದೆ.
ಕಾಂಗ್ರೆಸ್‌ನಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಕೂಡ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದು, ವಿಶೇಷವಾಗಿ ನಂಜನಗೂಡು, ತಿ.ನರಸೀಪುರ, ಎಚ್.ಡಿ.ಕೋಟೆ, ವರುಣ ಕ್ಷೇತ್ರದ ಆಕಾಂಕ್ಷಿಗಳು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿಯಾಗಿ ಚರ್ಚಿಸುತ್ತಿದ್ದಾರೆ.
ಮೂರು ಪಕ್ಷಗಳ ಅಧ್ಯಕ್ಷರು ಹೊಸಬರು: ಸದ್ಯ ಚುನಾವಣೆ ದಿನಾಂಕಕ್ಕಾಗಿ ಎದುರು ನೋಡುತ್ತಿರುವ ಮೂರು ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರು ಹೊಸಬರಾಗಿದ್ದು, ಮೊದಲ ಚುನಾವಣೆಯಲ್ಲಿ ಅಗ್ನಿಪರೀಕ್ಷೆ ಎದುರಿಸಬೇಕಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಜಾ.ದಳ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್ ಪಕ್ಷದ ಹೊಣೆ ಹೊತ್ತಿದ್ದು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕಾಗಿದೆ. ಮುಂದೆ ಜಾ.ದಳ-ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿರುವ ಕಾರಣ ಸೀಟು ಹಂಚಿಕೆ,ಅಭ್ಯರ್ಥಿ ಆಯ್ಕೆ ತಲೆನೋವಾಗುವ ಸಾಧ್ಯತೆಗಳಿವೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾಗಲಿದೆ.
ಭಲೇ ಬೆಳಗಾವಿ! ಭಲೆ ಭಲೇ ಬೆಳಗಾವಿ! ಹರಿದು ಬಂದಿದೆ ಜನಸಾಗರ ನಿನ್ನಲ್ಲಿಗೆ ಕನ್ನಡಮ್ಮನ ತೇರು ಎಳೆಯಲು! ನಾಡು-ನುಡಿ ಪ್ರೇಮದ ಪ್ರತೀಕವಿದು…
ಅಕ್ಟೋಬರ್ ತಿಂಗಳ ಆರಂಭದಲ್ಲಿ ಆರ್‌ಬಿಐ ರೆಪೊ ದರವನ್ನು ಶೇ .೫.೨೫ ರಿಂದ ಶೇ ೫.೫೦ ಕ್ಕೆ ಏರಿಸಿತು. ಕೂಡಲೇ ಬ್ಯಾಂಕ್…
ನವೆಂಬರ್ ಒಂದರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗಳನ್ನು ಹೆಚ್ಚು ಮಾಡಿ, ಇದರಲ್ಲಿ ಏಳು ರೂಪಾಯಿಗಳನ್ನು…
ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಗರದ ಹೊರಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರು ಪ್ರತಿನಿತ್ಯ ಕಾಲೇಜಿಗೆ ತೆರಳಲು…
ಪ್ರೊ. ಎಂ. ಕೃಷ್ಣೇಗೌಡ, ಮೈಸೂರು ಘನ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನವೆಂಬರ್ ಒಂದನೇ ತಾರೀಕು ಕನ್ನಡ ಧ್ವಜವನ್ನು ಮಾತ್ರವಲ್ಲದೆ…
ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಸಸ್ಯಶಾಸ್ತ್ರದಲ್ಲಿ ಗಿಡ, ಮರ ಮತ್ತು ಹೂಗಳ ಹೆಸರುಗಳು ಬಹಳ ಆಸಕ್ತಿದಾಯಕವಾಗಿರುತ್ತವೆ. ಆನೇಕ…