Andolana originals

ಶಿಥಿಲಗೊಂಡ ಸರ್ಕಾರಿ ಶಾಲಾ ಕಟ್ಟಡ: ಜೀವಕ್ಕೆ ಕಂಟಕ

ಗೋಡೆ ಕುಸಿತ , ಮಕ್ಕಳ ಆಟದ ಮೈದಾನದಲ್ಲೇ ಅಪಾಯದ ಭೀತಿ

ಹಲಗೂರು: ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಸಮೀಪದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪಾಲಿಗೆ ಅಪಾಯಕಾರಿಯಾಗಿವೆ.

ಶಾಲೆಯ ಆವರಣದಲ್ಲಿರುವ ಐದಾರು ಹಳೆಯ ಕಟ್ಟಡಗಳು ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಹಾಳಾಗಿವೆ. ಕೆಲವು ಕಟ್ಟಡಗಳ ಗೋಡೆಗಳು ಈಗಾಗಲೇ ಕುಸಿದು ಬಿದ್ದಿದ್ದು, ಉಳಿದ ಕಟ್ಟಡಗಳೂ ಯಾವುದೇ ಕ್ಷಣದಲ್ಲಿ ನೆಲಕ್ಕುರುಳುವ ಭೀತಿಯಿದೆ. ಹೀಗಿದ್ದರೂ ಕಟ್ಟಡಗಳನ್ನು ತೆರವುಗೊಳಿಸಲು ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಡರಾತ್ರಿ ಗೋಡ ಕುಸಿತ; ತಪ್ಪಿದ ಅನಾಹುತ: ಶಾಲೆಯ ಮುಖ್ಯ ರಸ್ತೆಯ ಬದಿಯಲ್ಲಿರುವ ಹಳೆಯ ಕಟ್ಟಡವೊಂದರ ಗೋಡೆಯ ಭಾಗ ರಾತ್ರಿ ಕುಸಿದು ಬಿದ್ದಿದೆ. ರಾತ್ರಿ ವೇಳೆ ಸಂಭವಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ, ಇದೇ ಘಟನೆ ಹಗಲಿನಲ್ಲಿ ಸಂಭವಿಸಿದ್ದರೆ ಶಾಲಾ ಮಕ್ಕಳು, ಆಟೋ ಚಾಲಕರು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಶಾಲೆಯ ಪಕ್ಕದಲ್ಲೇ ಆಟೋ ನಿಲ್ದಾಣ ಮತ್ತು ಸಂಚಾರಿ ಮೊಬೈಲ್ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸದಾ ಜನಸಂದಣಿ ಇರುತ್ತದೆ. ಮತ್ತೊಂದೆಡೆ, ಶಾಲಾ ಮಕ್ಕಳು ಪ್ರತಿನಿತ್ಯ ಶಿಥಿಲಗೊಂಡ ಕಟ್ಟಡಗಳ ಪಕ್ಕದಲ್ಲಿರುವ ಮೈದಾನದಲ್ಲೇ ಆಟವಾಡುತ್ತಿದ್ದಾರೆ. ಹೀಗಾಗಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಅನೈತಿಕ ಚಟುವಟಿಕೆಗಳಿಗೆ ಆಶ್ರಯತಾಣ: ಶಾಲೆಯ ಹಳೆಯ ಕಟ್ಟಡಗಳು ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಕೆಲವರು ಕಟ್ಟಡಗಳ ಒಳಗೆ ಮದ್ಯಪಾನ ಮಾಡುವುದರ ಜತೆಗೆ ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಿದ್ದಾರೆ. ಅಲ್ಲದ ಈ ಪ್ರದೇಶದಲ್ಲಿ ಈ ಹಿಂದೆ ಎರಡು ಕೊಲೆ ಪ್ರಕರಣಗಳು ನಡೆದಿರುವುದರ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲಾ ಆವರಣದಲ್ಲೇ ಕೊಳಚೆ ನೀರು: ಇದರ ಜತೆಗೆ ಸಾರ್ವಜನಿಕ ಶೌಚಾಲಯದಿಂದ ಹೊರಬರುವ ಕೊಳಚೆ ನೀರನ್ನು ಶಾಲಾ ಆವರಣಕ್ಕೆ ಹರಿಸಲಾಗುತ್ತಿದ್ದು, ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಶಾಲಾ ಮಕ್ಕಳು ಆಟವಾಡುವ ಇದೇ ಆವರಣದ ಪಕ್ಕದಲ್ಲೇ ಶಿಶು ವಿಹಾರ ಕೇಂದ್ರವೂ ಕಾರ್ಯನಿರ್ವಹಿಸುತ್ತಿದೆ. ಕೊಳಚೆ ನೀರು ನಿಂತು ನೈರ್ಮಲ್ಯ ಹದಗೆಟ್ಟಿರುವುದರಿಂದ ಪುಟಾಣಿ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.

ಒಂದು ಕಟ್ಟಡದ ಗೋಡೆ ಈಗಾಗಲೇ ಕುಸಿದು ಬಿದ್ದಿದ್ದರೂ ಉಳಿದ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಅಪಾಯಕಾರಿ ಕಟ್ಟಡಗಳನ್ನು ತೆರವುಗೊಳಿಸುವ ಜತೆಗೆ ಶಾಲಾ ಆವರಣಕ್ಕೆ ಹರಿದು ಬರುತ್ತಿರುವ ಕೊಳಚೆ ನೀರನ್ನು ತಡೆಗಟ್ಟಬೇಕು. ಶಾಲಾ ಮಕ್ಕಳ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ತಕ್ಷಣ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

” ಬಾಲಕಿಯರ ಸರ್ಕಾರಿ ಶಾಲೆಯ ಹಳೆಯ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದ್ದು, ಕೂಡಲೇ ಅವುಗಳನ್ನು ನೆಲಸಮಗೊಳಿಸುವ ಮೂಲಕ ಮುಂದೆ ಯಾವುದೇ ಅನಾಹುತ ಸಂಭವಿಸದಂತೆ ತಾಲ್ಲೂಕು ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು.”

? ನಾಗರಾಜು, ಅಧ್ಯಕ್ಷರು, ದಿ.ಶಂಕರ್ ನಾಗ್ ಆಟೋ ಚಾಲಕರ ಸಂಘ

” ಕಳೆದ ಎರಡು ದಿನಗಳ ಹಿಂದೆ ಆಟೋ ನಿಲ್ದಾಣದ ಸಮೀಪವೇ ಕಟ್ಟಡದ ಗೋಡೆಯ ಒಂದು ಭಾಗ ಕುಸಿದು ಬಿದ್ದಿದೆ. ಬಹುತೇಕ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡು ಕುಸಿಯುವ ಹಂತದಲ್ಲಿವೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕೂಡಲೇ ಇತ್ತ ಗಮನಹರಿಸಿ ಅನಾಹುತ ಸಂಭವಿಸುವ ಮುನ್ನ ಕಟ್ಟಡಗಳನ್ನು ತೆರವುಗೊಳಿಸಬೇಕು.”

ಶಿವರಾಜು, ಅಧ್ಯಕ್ಷರು, ಭೀಮಸೇನೆ ಮಳವಳ್ಳಿ ತಾಲ್ಲೂಕು

” ಶಾಲೆಯ ಶಿಥಿಲಗೊಂಡ ಕಟ್ಟಡಗಳ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆಯಿಂದ ಪರಿಶೀಲಿಸಿ, ಅಗತ್ಯ ಪ್ರಮಾಣಪತ್ರ ಪಡೆಯುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ವರದಿ ಹಾಗೂ ಪ್ರಮಾಣಪತ್ರದ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ಕೆಲವೇ ದಿನಗಳಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಲು ಕ್ರಮ ವಹಿಸಲಾಗುವುದು.”

ವಿ.ಇ.ಉಮಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಳವಳ್ಳಿ

 

 

ಆಂದೋಲನ ಡೆಸ್ಕ್

Recent Posts

ಜಿಪಂ, ತಾಪಂ ಚುನಾವಣೆ: ಟಿಕೆಟ್‌ಗಾಗಿ ಲಾಬಿ

ಕೆ.ಬಿ.ರಮೇಶನಾಯಕ ಜನವರಿ ತಿಂಗಳ ಮಧ್ಯದಲ್ಲಿ ಚುನಾವಣೆ ನಿಗದಿಗೆ ಸಚಿವರ ನಿರ್ಧಾರ ಮೈಸೂರು: ರಾಜ್ಯ ರಾಜಕಾರಣದಲ್ಲಿ ಎರಡನೇ ಶಕ್ತಿ ಕೇಂದ್ರ ಎಂದೇ…

1 min ago

ಸದಸ್ಯರ ಸಂಖ್ಯೆ ನಿಗದಿಗೆ ಮಾನದಂಡ ಯಾವುದು?

ಕೃಷ್ಣ ಸಿದ್ದಾಪುರ ಸಿದ್ದಾಪುರ, ಮಾಲ್ದಾರೆ ಗ್ರಾಮ ಪಂಚಾಯಿತಿ ಮತದಾರರ ಸಂಖ್ಯೆಗೆ ಅನುಗುಣವಾಗಿ ಇರದ ಮತದಾರರ ಸಂಖ್ಯೆ  ಸಿದ್ದಾಪುರ: ಸಿದ್ದಾಪುರ ಹಾಗೂ…

13 mins ago

ನಿರ್ಮಿಸಿದ ಒಂದೂವರೆ ತಿಂಗಳಲ್ಲೇ ಡೆಕ್ ಕಿತ್ತು ಹಾಕಿದರು!

ಎಸ್.ಎಸ್.ಭಟ್ ಆಗಸ್ಟ್‌ನಲ್ಲಿ ಡೆಕ್ ಮೇಲೆ ಸಂಚಾರಕ್ಕೆ ಅನುವು, ಅಕ್ಟೋಬರ್‌ನಲ್ಲಿ ಅದೇ ಡೆಕ್ ಕಿತ್ತು ಸಂಚಾರಕ್ಕೆ ನಿರ್ಬಂಧ  ನಂಜನಗೂಡು: ಹೊಸದಾಗಿ ನಿರ್ಮಿಸಿ…

25 mins ago

ಹಿರಿಯೂರಿನಲ್ಲಿ ₹2,328 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ | ‘ನುಡಿದಂತೆ ನಡೆಯುತ್ತೇನೆ’ ಎಂದ ಡಿಕೆಶಿ

ಚಿತ್ರದುರ್ಗ:  ‘ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ. ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.…

18 hours ago

ಪರಿಷತ್ ಚುನಾವಣೆ ಸೋಲು | ‘ನನ್ನನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು’ ಎಂದ ಕೆ.ಎನ್. ರಾಜಣ್ಣ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಸೋಲಿಗೆ ನೈತಿಕ ಹೊಣೆ ಹೊತ್ತು, ತಮ್ಮನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ಶಾಸಕ…

19 hours ago