Andolana originals

ಆಲದ ಮರ ಹುಡುಕುತ್ತಾ ಮೊಮ್ಮಗಳೊಂದಿಗೆ

• ಎಚ್.ಜೆ.ಸರಸ್ವತಿ, ನಿವೃತ್ತ ಪ್ರಾಧ್ಯಾಪಕಿ

ಆವತ್ತು ಮೊಮ್ಮಗಳು ಸಿರಿಯೊಂದಿಗೆ ಮಾನಸ ಗಂಗೋತ್ರಿಯ ಆಲದ ಮರದ ಬುಡದಲ್ಲಿದ್ದೆ. ಅಜ್ಜಿ ಇಲ್ಲಿ ಆಲದ ಮರವನ್ನು ಯಾರು ಬೆಳೆಸಿದರು?’ ಎಂದು ಸಿರಿ ಪ್ರಶ್ನಿಸಿದಳು.

ನೂರಾರು ವರ್ಷಗಳ ಹಿಂದೆ ಹಕ್ಕಿ ಪಕ್ಷಿಗಳು ಆಲದ ಹಣ್ಣನ್ನು ತಂದು ಇಲ್ಲೆಲ್ಲೋ ಯಾವುದೋ ಮರದ ಮೇಲೆ ಬೀಳಿಸಿರಬೇಕು. ಆ ಬೀಜ ಮೊಳೆತು ಚಿಗುರಿ ಬೆಳೆದು ಬಿಳಿಲುಗಳನ್ನು ಕೆಳಗೆ ಬಿಟ್ಟು ಮೂಲ ಮರವನ್ನೇ ನಾಶಮಾಡಿವೆ. ಆಲದ ಮರ ನೂರಾರು ವರ್ಷ ಹೀಗೆ ಬಿಳಿಲುಗಳನ್ನು ಭೂಮಿಯ ಕಡೆಗೆ ಇಳಿಸಿಕೊಳ್ಳುತ್ತಾ ಬೆಳೆಯುತ್ತಲೇ ಇರುತ್ತದೆ. ಸಾವಿರಾರು ಪಕ್ಷಿಗಳು ಇಂಥ ಮರಗಳ ಮೇಲೆ ಗೂಡು ಕಟ್ಟಿಕೊಂಡು ವಾಸಮಾಡುತ್ತವೆ. ಆನೆಯಂಥ ದೊಡ್ಡ ಪ್ರಾಣಿಗಳೂ ಆಲದೆಲೆಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ ಎಂದೆ.

‘ಹಾಗಾದರೆ ಆಲದ ಮರವನ್ನು ಯಾರು ಬೆಳೆಸಕಾಗಲ್ವಾ?’ ಸಿರಿಯ ಮರು ಪ್ರಶ್ನೆ. ತಿಮ್ಮಕ್ಕನ ಕತೆ ಹೇಳಿದೆ. ಈ ತಿಮ್ಮಕ್ಕ ಮಹಾವೃಕ್ಷಗಳ ತಾಯಿ. ಅಲ್ಲಿ ಗೂಡು ಕಟ್ಟಿ ಬದುಕುವ ಲಕ್ಷಾಂತರ ಹಕ್ಕಿಗಳಿಗೆ ಅಜ್ಜಿ ಎಂದೆ. ‘ಬೇರೆ ಎಲ್ಲಿ ಇಂಥ ಆಲದ ಮರ ಇದೆ?” ಸಿರಿಯ ಮನಸ್ಸೆಲ್ಲ ಆಲದ ಸುತ್ತ ಗಿರಿಕಿ ಹೊಡೆಯತೊಡಗಿತು. ಕೊಲ್ಕತ್ತಾ ಜಗದೀಶ್ ಚಂದ್ರಬೋಸ್ ನ್ಯಾಷನಲ್ ಪಾರ್ಕಿನಲ್ಲಿರುವ ಕಿ.ಮೀ. ಗಳಷ್ಟು ವಿಸ್ತಾರವಾಗಿರುವ ಆಲದ ಮರದ ಕತೆ ಹೇಳುತ್ತಾ, ಬೆಂಗಳೂರಿನ ಸಮೀಪವಿರುವ ದೊಡ್ಡ ಆಲದಮರವನ್ನೂ ಪರಿಚಯಿಸಿದೆ. ಗಂಗೋತ್ರಿಯಿಂದ ಹೊರಟು ಕುಕ್ಕರಹಳ್ಳಿಯ ಕೆರೆಯ ಏರಿಯ ತುದಿಯಲ್ಲಿರುವ ಆಲದ ಮರವನ್ನು ನೋಡಿ, ಮೈಸೂರು ವಿಶ್ವವಿದ್ಯಾನಿಲಯದ ಕಚೇರಿ ಪಕ್ಕದಲ್ಲಿರುವ ಆಲದ ಮರದ ಕೆಳಗೂ ಹತ್ತು ನಿಮಿಷ ನಿಂತು ಬಂದೆವು. ವಾಪಸು ಬರುವಾಗ ಈಜುಕೊಳದ ಬಳಿ ಮತ್ತೊಂದು ಆಲದ ಮರ, ಮರದ ಕೆಳಗೆ ಕಾರನ್ನು ನಿಲ್ಲಿಸಿ ಸಿರಿಯನ್ನು ಬಿಳಿಲುಗಳನ್ನು ಹಿಡಿದು ಉಯ್ಯಾಲೆಯಾಡಿಸಿದೆ. ಸಂಕೋಚ ಬಿಟ್ಟು ನಾನೂ ಉಯ್ಯಾಲೆಯಾಡಿದೆ.

ಮೇ ತಿಂಗಳ ಕೊನೆಯ ದಿನ, ರಜೆ ಮುಗಿದು ಸಿರಿ ಬೆಂಗಳೂರಿಗೆ ಹೋಗಲೇಬೇಕು. ಮೈಸೂರು ಹೊರವಲಯವನ್ನು ದಾಟುವ ತನಕ ನನ್ನ ತೊಡೆಯ ಮೇಲೆ ಮಲಗಿದ್ದ ಸಿರಿ ದಿಗ್ಗನೆದ್ದು ಕುಳಿತು ‘ಅಜ್ಜಿ ಇಲ್ಲಿಂದ ಬೆಂಗಳೂರು ತಲುಪುವ ತನಕ ಎಷ್ಟು ಆಲದ ಮರ ಸಿಗುತ್ತವೆಂದು ಲೆಕ್ಕ ಹಾಕೋಣ’ ಎಂದು ಕಿಟಕಿಗೆ ಕಣ್ಣಾದಳು. ಕೆಂಗೇರಿಯವರೆಗೆ ನಮ್ಮ ಲೆಕ್ಕಕ್ಕೆ ಸಿಕ್ಕಿದ್ದು ಕೇವಲ ಎಂಟು ಮರ, ಸಿರಿಯ ಪುಟ್ಟ ತಲೆ ಆತಂಕಕ್ಕೆ ಒಳಗಾಯಿತು. ಮೈಸೂರಿನಲ್ಲಿ ಅಷ್ಟೊಂದು ಮರ ನೋಡಿದ್ವಿ. ಇದ್ಯಾಕೆ ಹೀಗೆ? ಸಿರಿ ಗಾಬರಿಯಾದಳು. ಹೊಲ, ಗದ್ದೆ, ತೋಟಗಳಿ ಗಾಗಿ, ಮನೆಕಟ್ಟಲು ರಸ್ತೆ ಮಾಡಲು, ಶಾಲೆ, ಕಾಲೇಜು, ಕಚೇರಿ, ಆಸ್ಪತ್ರೆ ಕಟ್ಟಲು ಜಾಗಬೇಕಲ್ಲಾ ಅದಕ್ಕೆ ಮರ ಕತ್ತರಿಸಿದ್ದಾರೆ ಎಂದೆ.

ಸಿರಿ ಒಂದು ಕ್ಷಣ ಮೌನವಾದಳು. ಅಜ್ಜಿ ಒಂದು ಐಡಿಯಾ’ ಎಂದಳು (ಕಾರ್ಟೂನ್ ನೋಡುವ ಮಕ್ಕಳ ಮಾತು ಪ್ರಾರಂಭವಾಗುವುದೇ ‘ಒಂದು ಐಡಿಯಾ’ದಿಂದ) ಒಂದು ಆಲದ ಮರ ಬೆಂಗಳೂರಿನ ಮಧ್ಯದಲ್ಲಿ ಹುಟ್ಟಬೇಕು. ಅದು ಒಂದೇ ವರ್ಷದಲ್ಲಿ ಇಲ್ಲಿರುವ ಎಲ್ಲ ಕಟ್ಟಡಗಳನ್ನು ಬೀಳಿಸಿ ಇಡೀ ಬೆಂಗಳೂರು ಒಂದು ಆಲದ ಮರವಾಗಬೇಕು’ ಎಂದು ಕಣ್ಣರಳಿಸುತ್ತ ಕಾರಿನ ಸೀಟಿನಿಂದ ಕೆಳಗೆ ನೆಗೆದು ಕಲ್ಪನಾ ಲೋಕದಲ್ಲಿ ವಿಹರಿಸಿದಳು.

ಸಿರಿಗೆ ತನ್ನ ಮನೆಯೆದುರು ಆಲದ ಮರವಿರುವುದಕ್ಕೆ ಸಂತಸವಾಗಿತ್ತು. ‘ಅಜ್ಜಿ’ ಎನ್ನುತ್ತಾ ನನ್ನ ಕೊರಳಿಗೆ ಎರಡೂ ಕೈಗಳನ್ನು ಬಳಸುತ್ತ ಕೆನ್ನೆಗೆ ಕೆನ್ನೆಯೊತ್ತಿ ನೀವು ಪ್ರಾಮಿಸ್ ಮಾಡಬೇಕು ಏನೆಂದರೆ ಕೊಲ್ಕತ್ತಾಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ಅಲ್ಲಿರುವ ಆಲದ ಮರ ತೋರಿಸಬೇಕು. ನನಗೆ ಒಂದು ಆಲದ ಮರ ಬೆಳೆಸಕ್ಕೆ ಜಾಗ ಕೊಡಿಸಬೇಕು. ಆಮೇಲೆ, ಆಮೇಲೆ ನಾವು ಮೈಸೂರಿನಲ್ಲಿ ನೋಡಿದ್ದೀವಲ್ಲಾ ‘ಆಲದ ಮರಗಳು’ ಅವುಗಳನ್ನು
ಕತ್ತರಿಸದಂತೆ ನೋಡಿಕೋಬೇಕು ಪ್ರಾಮಿಸ್ ಮಾಡ್ತೀರಲ್ಲಾ ಎಂದು ಕೈಮೇಲೆ ಕೈ ಹಾಕಿ ಕೇಳಿದಳು. ಮೊದಲೆರಡನ್ನು ಹೇಗೋ ನೆರವೇರಿಸಬಹುದು, ಮೂರನೆಯದು!

ಕಡೆಯದಾಗಿ ಒಂದು ಮಾತು. ಈ ಸಹಸ್ರಮಾನದ ಮಿಲೇನಿಯಲ್ಸ್ ನಮಗಿಂತ ಮುಂದೆ ಹೋಗಿದ್ದಾರೆ ಎಂಬುದು ಒಂದು ಭ್ರಮೆ. ಅವರು ಮುಂದಿರುವಂತೆ ಕಾಣಿಸುತ್ತಿರುವುದು ಅವರಿಗೆ ಎಟುಕುತ್ತಿರುವ ತಂತ್ರಜ್ಞಾನ ಮತ್ತು ಕೌಶಲಗಳಿಂದ ಮಾತ್ರ. ಕೌಶಲಗಳಿದ್ದರೂ ಚಿಂತೆಯಿಲ್ಲ, ತಾಂತ್ರಿಕತೆಗೆ ಕೊಂಚ ಕಡಿವಾಣ ಬೇಕೆನಿಸುತ್ತದೆ. ನನಗೆ… ಶ್ರಮವಿಲ್ಲದೆ ಪಡೆಯುವ ಏನೇ ಆದರೂ ಅಪಾಯಕಾರಿ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

2 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

2 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

2 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

2 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

2 hours ago