ನಿಸ್ತೇಜಗೊಂಡ ಕಣ್ಣುಗಳು.. ಗಳಿಗೆಗೊಮ್ಮೆ, ಗಂಟೆಗೊಮ್ಮೆ ಉಮ್ಮಳಿಸಿ ಬರುವ ದುಃಖದಲ್ಲಿ ಹರಿಯುತ್ತಿದ್ದ ಕಣ್ಣೀರ ಕೋಡಿ… ನೋವ ಹೊರಗೆಡವಲು ಒಮ್ಮೆ ಅತ್ತುಬಿಡಲಿ ಎಂದರೆ ಕಣ್ಣೀರೇ ಹಿಂಗಿ ಹೋಗಿ ನಿತ್ರಾಣವಾಗಿದ್ದ ಕಣ್ಣುಗಳು ಹಲವು… ಆತಂಕದ ಕಣ್ಣುಗಳು ಕೆಲವು… ತಮ್ಮನ್ನು ಎದುರುಗೊಂಡವರು ತಮ್ಮನ್ನು ದುಃಖದ ಬಾವಿಗೆ ತಳ್ಳಲು ಬರುತ್ತಿದ್ದಾರೆಯೋ, ಸಮಾಧಾನಕರ ಸುದ್ದಿ ಹೊತ್ತು ತರುತ್ತಿದ್ದಾರೆಯೋ ಎಂಬ ಆತಂಕ… ತನಗಾಗಿ ಯಾರೂ ಇಲ್ಲವೆಂಬ ಒಂಟಿ ಭಾವ… ದುಗುಡದಲ್ಲಿ ಜೀವ ಕೈಯಲ್ಲಿ ಹಿಡಿದು ಕೂತವರ ಕೀರಲು ಸ್ವರ ಯಾತನೆಯ ಗಾಢತೆಗೆ ಸಾಕ್ಷಿಯಾಗಿತ್ತು…
ಹೀಗೆ ವಯನಾಡಿನ ಮೇಪ್ಪಾಡಿ ರಿಲೀಫ್ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ಕಣ್ಣುಗಳು ಅಸಂಖ್ಯಾತ ಕಥೆಗಳನ್ನು ಹೇಳುತ್ತಿದ್ದುವು. ಶಿಬಿರದಲ್ಲಿ ತಮ್ಮ ಹೆಸರನ್ನು ನೋಂದಾ ಯಿಸಿಕೊಳ್ಳಲು ಹಾತೊರೆಯುತ್ತಿರುವ ಜೀವಗಳು ಒಂದೆಡೆ ಯಾದರೆ, ತಮ್ಮವರ ಹೆಸರನ್ನು ಹೇಳುತ್ತಾ, ಭಾವಚಿತ್ರಗಳನ್ನು ಕಂಡಕಂಡವರಿಗೆ ತೋರಿಸುತ್ತಾ ಇವರು ಸಿಕ್ಕಿದರೆ, ಇವರ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿತೆ ಎಂದು ಮೇಲಿಂದ ಮೇಲೆ ಕೇಳುತ್ತಿದ್ದ ಸಂಬಂಧಿಕರು ಇನ್ನೊಂದೆಡೆ. ಹೆಣವಾಗಿ ಸಿಕ್ಕ ತಮ್ಮ ಪ್ರೀತಿಪಾತ್ರರ ಅಂತ್ಯಕ್ರಿಯೆ ನೆರವೇರಿಸಿ ದುಃಖದ ಮಡುವಿನಲ್ಲಿ ಮುಳುಗಿದ್ದ ವರು, ತಮ್ಮಗಾಗಿ ಇದ್ದ ಒಂದು ಸೂರನ್ನೂ ಕಳೆದುಕೊಂಡು ನಿರಾಶ್ರಿತರಾಗಿ ಶಿಬಿರದಲ್ಲಿ ದಿಕ್ಕೇ ತೋಚದಂತೆ ಕೂತಿದ್ದವರು ನೋಡುಗರಲ್ಲೂ ದುಃಖದ ಕೋಡಿ ಹರಿಸುತ್ತಿದ್ದರು.
ವಯನಾಡಿನ ಜನರ ಬದುಕು ನುಂಗಿದ ನೆಲದಲ್ಲಿ ಆಂದೋಲನ ಒಂದು ದಿನ
‘ಆಂದೋಲನ’ ತಂಡ ಶಿಬಿರದ ಒಳಭಾಗಕ್ಕೆ ಪ್ರವೇಶಿಸುತ್ತಿದ್ದಂತೆಯೇ ದುಃಖಭರಿತ ಕಣ್ಣುಗಳು ಇವರೇನಾದರೂ ಇದುವರೆಗೂ ಸುಳಿವೇ ಸಿಗದಿರುವ ತಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿರುವ, ಜೀವಂತವಾಗಿರುವ ಸಂದೇಶವನ್ನೇನಾದರೂ ಹೊತ್ತು ತಂದಿದ್ದಾರೆಯೇ ಎಂದು ನಿರೀಕ್ಷೆಯ ಕಣ್ಣಿನಿಂದ ನೋಡುತ್ತಿದ್ದರು. ಒಬ್ಬಿಬ್ಬರು ತಂಡದತ್ತ ದೌಡಾಯಿಸಿ ಅವರ ನಿರೀಕ್ಷೆ ಹುಸಿಯಾದಾಗ ಮತ್ತೆ ದುಃಖದಮಡುವಿಗೆ ಜಾರಿದರು.
ತಮಗಾಗಿ ಇದ್ದ ಒಂದು ಸೂರನ್ನೂ ಕಳೆದುಕೊಂಡು ನಿರಾಶ್ರಿತರಾಗಿ ಶಿಬಿರದಲ್ಲಿ ದಿಕ್ಕೇ ತೋಚದಂತೆ ಕೂತಿದ್ದವರು ನೋಡುಗರಲ್ಲೂ ದುಃಖದ ಕೋಡಿ ಹರಿಸುತ್ತಿದ್ದರು.
ವಯನಾಡು ಭೂ ಕುಸಿತದಿಂದ ಬದುಕುಳಿದವರಿಗೆ ಆಶ್ರಯ ನೀಡಲು ಈಗ ಮೇಪ್ಪಾಡಿ ಜಿಲ್ಲೆಯಾದ್ಯಂತ ವಿವಿಧ ಶಿಬಿರಗಳನ್ನು ಸ್ಥಾಪಿಸಿ ನಿರಾಶ್ರಿತರನ್ನು ಸ್ಥಳಾಂತರಿಸಲಾಗಿದೆ. ಶಾಲಾ ಕಟ್ಟಡಗಳನ್ನೇ ಪ್ರವಾಹ ಪೀಡಿತ ಜನರಿಗೆ ಪರಿಹಾರ ಶಿಬಿರವಾಗಿ ಪರಿವರ್ತಿಸಿ ಅವರಿಗೆ ಆಶ್ರಯ ಕಲ್ಪಿಸಲಾಗಿದೆ. ಸುಮಾರು ೩,೨೦೦ ಜನರಿರುವ ಇಡೀ ಗ್ರಾಮವು ಕೊಚ್ಚಿಹೋಗಿದ್ದು, ಬದುಕುಳಿದವರು ೮ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಶಾಲೆಯೊಂದರಲ್ಲಿ ಸ್ಥಾಪಿಸಿರುವ ಅಂತಹ ಒಂದು ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿರುವ ಸರೋಜಿನಿ ಆರು ತಿಂಗಳ ಬಾಣಂತಿ. ಎರಡು ದಿನಗಳಿಂದ ಶಿಬಿರದಲ್ಲಿ ತಂಗಿರುವ ಆಕೆಗೆ ಇಲ್ಲಿ ತನ್ನವರು ಯಾರು ಇಲ್ಲವೆಂಬ ಆತಂಕ, ಅಪರಿಚಿತ ಸ್ಥಳದಲ್ಲಿ ದಿನ ದೂಡುವುದು ಹೇಗೆ ಎಂಬ ಭಾವ ಕಾಡುತ್ತಿದೆ. ಶಿಬಿರದಲ್ಲಿ ಮೂಲ ಸೌಲಭ್ಯ ಸಮರ್ಪಕವಾಗಿದ್ದರೂ, ತನ್ನ ಆರು ತಿಂಗಳ ಮಗುವಿಗೆ ಹಾಲುಣಿಸಲು ಏಕಾಂತ ಸ್ಥಳವನ್ನು ಹುಡುಕುತ್ತಾ ಕಿಕ್ಕಿರಿದ ಶಿಬಿರದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ಇದನ್ನು ಅರಿತಂತೆ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಇತರೆ ಮಹಿಳೆಯರು ಆಕೆಯನ್ನು ಸುತ್ತುವರಿದರು. ಆಗ ನಿರಾಳ ಭಾವದಿಂದ ಸರೋಜಿನಿ ತನ್ನ ಮಗಳಿಗೆ ಹಾಲುಣಿಸಿದರು. ಇದು ಸರೋಜಿನಿ ಒಬ್ಬರ ಕಥೆಯಲ್ಲ ,ಇಂತಹ ನೂರಾರು ತಾಯಂದಿರ ಭಿನ್ನ ಕಥೆಗಳು, ಅವರೊಳಗಿನ ವ್ಯಥೆಗಳು ಶಿಬಿರದಲ್ಲಿ ಚಾಚಿಕೊಂಡಿವೆ.
ಗಂಡ ಬದುಕುಳಿದ ಸಮಾಧಾನ. . .
ಮೂಲತಃ ಚಾಮರಾಜನಗರ ಜಿಲ್ಲೆಯ ಗಾಳಿಪುರದವರಾದ ೬೫ ವರ್ಷದ ರತ್ನಮ್ಮ ಎಂಬ ಮಹಿಳೆಯನ್ನು ಭೇಟಿಯಾದೆವು. ಭೂ ಕುಸಿತದಲ್ಲಿ ತನ್ನ ಮನೆಯನ್ನು ಕಳೆದುಕೊಂಡರೂ ತಾನು ಹಾಗೂ ತನ್ನ ಗಂಡ ಬದುಕುಳಿದ ಸಮಾಧಾನ ಆಕೆಗೆ. ‘ಮಧ್ಯರಾತ್ರಿ ಇದ್ದಕ್ಕಿದ್ದಂತೆ ಭಯಾನಕವಾದ ಸದ್ದು ಗಾಢ ನಿದ್ರೆಯಲ್ಲಿದ್ದ ನಮ್ಮನ್ನು ಗಾಬರಿಯಿಂದ ಎದ್ದೇಳುವಂತೆ ಮಾಡಿತು. ತಕ್ಷಣ ಕತ್ತಲೆಯಲ್ಲಿಯೇ ಹೊರಬಂದು ನೋಡಿದೆವು. ಮೇಲಿಂದ ಗುಡ್ಡ ಗುಡ್ಡವೇ ಕುಸಿಯುತ್ತಿರುವುದನ್ನೂ ಕಂಡು ನಾವು ಉಟ್ಟ ಬಟ್ಟೆಯಲ್ಲೇ ಮನೆಯಿಂದ ಓಡಿ ಸುರಕ್ಷಿತ ಸ್ಥಳಕ್ಕೆ ಬಂದೆವು’ ಎಂದು ಮಂಗಳವಾರದ ಕರಾಳ ರಾತ್ರಿಯನ್ನು ನಮ್ಮ ಮುಂದೆ ಬಿಚ್ಚಿಟ್ಟರು.
ಇನ್ನೊಬ್ಬ ಸಂತ್ರಸ್ತೆ ಮಾತನಾಡುತ್ತಾ, ರಕ್ಷಣಾ ತಂಡಗಳು ತಲುಪಲು ಸಾಧ್ಯವಾಗುವ ಪ್ರದೇಶಕ್ಕೆ ಬರಲು ತನ್ನ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಐದು ಗಂಟೆಗಳ ಕಾಲ ಈಜಿ ಬಂದೆವು ಎಂದು ತಿಳಿಸಿದರು. ಇವು ಶಿಬಿರದಲ್ಲಿ ನಾವು ಕಂಡುಕೊಂಡ ಕೆಲವು ಕಥೆಗಳು. ಹೀಗೆ ಒಂದು ಶಿಬಿರವು ಅನೇಕ ನೋವಿನ ಕಥೆಗಳಿಗೆ ಸಾಕ್ಷಿಯಾಗಿದೆ. ಆದರೆ ಆ ನೊಂದ ಮನಸ್ಸುಗಳಿಗೆ ಧೈರ್ಯ ತುಂಬುವ ಹೃದಯವಂತರು ಹೆಗಲು ನೀಡುತ್ತಿರುವುದು ಮಾನವೀಯತೆಗೆ ಸಾಕ್ಷಿಯಾಗಿದೆ.
ಮೈಸೂರು: ರಾಜ್ಯದಲ್ಲಿ ಮೈಸೂರು ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇಂದು ತನಿಖೆಯ ಭಾಗವಾಗಿ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು…
ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನೇ ಓದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿಯಿದೆ ಎಂದು ಲೋಕಸಭೆ ವಿರೋಧ ಪಕ್ಷದ…
ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಉದ್ಬೂರು ಹಾಡಿ ಹಾಗೂ ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಅವರಿಂದು ಭೇಟಿ ನೀಡಿ, ಆದಿವಾಸಿಗಳ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ…
ಬೆಂಗಳೂರು: ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ವೋಲ್ವೋ ಬಸ್…
ಮುಂಬೈ: ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವಲ್ಲಿ ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ…