Andolana originals

ನಾಳೆ ತರಕಾರಿ ಮಾರುಕಟ್ಟೆ ಲೋಕಾರ್ಪಣೆ

ಹೇಮಂತ್‌ಕುಮಾರ್

ತರಕಾರಿ ತರುವ ವಾಹನಗಳ ಸುಗಮ ಸಂಚಾರವೇ ದುರ್ಗಮ; ಸಂಪರ್ಕ ರಸ್ತೆ, ಪಾರ್ಕಿಂಗ್ ವ್ಯವಸ್ಥೆಗೆ ಕಾಯಕಲ್ಪ ಅತ್ಯಗತ್ಯ

ಮಂಡ್ಯ: ಮಂಡ್ಯ ನಗರದ ತರಕಾರಿ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳ್ಳಲಿದ್ದು, ಮಂಡ್ಯ ಸಂಸದರು, ಕೇಂದ್ರ ಬೃಹತ್ ಕೈಗಾರಿಕಾ ಸಚಿವರೂ ಆದ ಎಚ್. ಡಿ.ಕುಮಾರಸ್ವಾಮಿ ಅವರು ಅ.೧೬ ರಂದು ಉದ್ಘಾಟಿಸುವರು.

ಸುಮಾರು ೯ ಕೋಟಿ ರೂ. ವೆಚ್ಚದಲ್ಲಿ ಏಳು ತಿಂಗಳ ಅವಧಿಯಲ್ಲಿ ನಿರ್ಮಾಣಗೊಂಡಿರುವ ೧೧೭ ಮಳಿಗೆಗಳುಳ್ಳ ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಸಜ್ಜಾಗಿದ್ದು, ಈ ಭಾಗದ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂಬುದು ನಗರಸಭೆ ಅಧ್ಯಕ್ಷರ ಆಶಯ. ಆದರೆ, ೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ಹೊತ್ತು ತರುವ ವಾಹನಗಳಿಗೆ ಸೂಕ್ತ ಸಂಪರ್ಕ ರಸ್ತೆಯೇ ಇಲ್ಲದಂತಾಗಿದೆ.

ರಾಜ್ಯ, ಹೊರ ರಾಜ್ಯಗಳು ಹಾಗೂ ವಿವಿಧ ಕಡೆಗಳಿಂದ ತರಕಾರಿ, ಸೊಪ್ಪು, ಬಾಳೆ, ಹಣ್ಣುಗಳು, ಕಾಯಿ, ಹೂವು, ಈರುಳ್ಳಿ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ವಾಹನಗಳು ಆಗಮಿಸಬೇಕಾದರೆ ಮೂರು ಮಾರ್ಗಗಳಿವೆ. ಒಂದು ಮಹಾವೀರ ವೃತ್ತದಿಂದ ರೈಲ್ವೆ ಅಂಡರ್ ಪಾಸ್ ಮೂಲಕ, ಮತ್ತೊಂದು ಪೇಟೆ ಬೀದಿ ಮೂಲಕ, ಹಾಗೆಯೇ ನಂದಾ ವೃತ್ತ ಮೂಲಕ ಬ್ರಿಡ್ಜ್ ಇಳಿದು ಪೇಟೆ ಬೀದಿ ಬಳಸಿ ಮಾರುಕಟ್ಟೆ ತಲುಪಬೇಕಾಗುತ್ತದೆ. ವಾಸ್ತವದಲ್ಲಿ ಮಹಾವೀರ ವೃತ್ತದಿಂದ ಅಂಡರ್ ಪಾಸ್ನಲ್ಲಿ ತೆರಳಲು ಲಾರಿಗಳಿರಲಿ, ಬಾಳೆ ಹೊತ್ತು ತರುವ ಸಣ್ಣ ಟೆಂಪೋಗಳು ಕೂಡ ಸಂಚರಿಸಲು ಸಾಧ್ಯವಿಲ್ಲ.

ಮತ್ತೊಂದೆಡೆ ಪೇಟೆ ಬೀದಿ ಮೂಲಕ ಸೆಂಟ್ರಲ್ ಸ್ಟ್ರೀಟ್ ಹಾದು ತರಕಾರಿ ಮಾರುಕಟ್ಟೆಗೆ ಬರಲು ಲಾರಿಗಳು ತಿರುವು ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಪೇಟೆ ಬೀದಿಯಿಂದ ಸೆಂಟ್ರಲ್ ಸ್ಟ್ರೀಟ್‌ಗೆ ಲಾರಿಗಳು ತಿರುವು ಪಡೆಯಲು ಮುಂಜಾನೆ ವೇಳೆ ಸಂಚಾರ ದಟ್ಟಣೆ ಇಲ್ಲದ ಸಮಯ ವಾದರೆ ಗಲ್ಲಿಯಂತಹ ಈ ರಸ್ತೆಯಲ್ಲಿ ಹೇಗೋ ನುಸುಳಿ ಹೋಗಬಹುದು. ಬೆಳಿಗ್ಗೆ ಏಳೆಂಟು ಗಂಟೆಯಾದರೆ ಹರಸಾಹಸ ನಡೆಸಬೇಕಾಗುತ್ತದೆ.

ಇನ್ನು ಜೆಸಿ ವೃತ್ತದಿಂದ ಡಿಸಿಸಿ ಬ್ಯಾಂಕ್ ರೈಲ್ವೆ ಅಂಡರ್ ಪಾಸ್ ಹಾಗೂ ಹೊಳಲು ವೃತ್ತಬಳಸಿ ಸಿಹಿ ನೀರು ಕೊಳ ಸುತ್ತಿಕೊಂಡು ಡಿಸಿಸಿ ಬ್ಯಾಂಕ್ ಬ್ರಿಡ್ಜ್ ಮೂಲಕ ತರಕಾರಿ ಮಾರುಕಟ್ಟೆಗೆ ತಲುಪಲು ಟೆಂಪೋಗಳಿಗೂ ಇಕ್ಕಟ್ಟಿನ ದಾರಿ. ಹೀಗಿರುವಾಗ ಹೊಸ ಮಾರುಕಟ್ಟೆಗೆ ಸರಕು ತರುವ ಮಾರ್ಗವಾದರೂ ಯಾವುದು ಎಂಬುದು ಈಗ ಜನಸಾಮಾನ್ಯರ ಪ್ರಶ್ನೆಯಾಗಿದೆ. ಇನ್ನು ಸೆಂಟ್ರಲ್ ಸ್ಟ್ರೀಟ್ ಹಾಗೂ ತರಕಾರಿ ಮಾರುಕಟ್ಟೆ ಮುಂಭಾಗದ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಇಲ್ಲಿ ಜನಸಾಮಾನ್ಯರೇ ಸಂಚರಿಸಲು ಪರದಾಡುವಂತಹ ಸ್ಥಿತಿ ಇದೆ. ಇನ್ನು ವಾಹನಗಳು ಇಲ್ಲಿ ಸಂಚರಿಸಲು ಸಾಧ್ಯವೇ? ಬೆಳಿಗ್ಗೆ ೯ ಗಂಟೆಗೆ ಪೇಟೆ ಬೀದಿಯಲ್ಲಿ ಸೈಕಲ್ ಓಡಿಸಲು ಕೂಡ ಸಾಧ್ಯವಿಲ್ಲದ ಸಂಚಾರ ದಟ್ಟಣೆ ಇರುವಾಗ, ಮಾರುಕಟ್ಟೆಗೆ ಸರಕುಗಳನ್ನು ತರುವ ಮಾತು ವಿಚಿತ್ರವೆನಿಸುತ್ತದೆ.

ವಾಹನಗಳ ಪಾರ್ಕಿಂಗ್ ಕಥೆ ಏನು?: ಮಾರುಕಟ್ಟೆಗೆ ತರಕಾರಿ, ಹೂವು, ಹಣ್ಣು ಖರೀದಿಸಲು ಬರುವ ಸಾರ್ವಜನಿಕರಿಗೆದ್ವಿಚಕ್ರ ವಾಹನಗಳು, ಆಟೋ, ಕಾರುಗಳನ್ನು ಪಾರ್ಕಿಂಗ್ ಮಾಡಲು ಯಾವುದೇ ಸ್ಥಳಾವಕಾಶ ಇಲ್ಲಿಲ್ಲ. ಹಬ್ಬ ಹರಿದಿನಗಳು ಬಂತೆಂದರೆ ಕೇಳುವುದೇ ಬೇಡ. ರಜಾ ದಿನಗಳಲ್ಲೇ ಪೇಟೆ ಬೀದಿಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇರುತ್ತದೆ. ಇನ್ನು ಯುಗಾದಿ, ಪಿತೃ ಪಕ್ಷ, ವರಮಹಾಲಕ್ಷ್ಮಿ, ಸಂಕ್ರಾಂತಿ ಹೀಗೆ ಬರುವ ಹಬ್ಬ ಹರಿದಿನಗಳಲ್ಲಿ ಪೇಟೆ ಬೀದಿ ಒಳಗೆ ಕಾಲಿಡಲೂ ಸಾಧ್ಯವಿಲ್ಲದ ಸ್ಥಿತಿ ಕಂಡುಬರುತ್ತದೆ. ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲದೆ, ಮೂಲ ಸಂಪರ್ಕ ರಸ್ತೆಯೂ ಇಲ್ಲದೆ ಮಾರುಕಟ್ಟೆ ಮತ್ತೊಮ್ಮೆ ಅವ್ಯವಸ್ಥೆಯ ಆಗರವಾಗಲಿದೆ ಎಂಬ ಕಳವಳ ನಾಗರಿಕರದು.

” ಇದು ಮಿನಿ ಮಾರುಕಟ್ಟೆ, ಎಪಿಎಂಸಿ ಆವರಣದಲ್ಲಿ ಸಗಟು ಮಾರುಕಟ್ಟೆಯಿದೆ. ಆದ್ದರಿಂದ ದೊಡ್ಡ ದೊಡ್ಡ ಲಾರಿಗಳು ಅಲ್ಲಿಗೆ ಹೋಗುತ್ತವೆ. ಇಲ್ಲಿಗೆ ಆಟೋ, ಮಿನಿ ಟೆಂಪೋಗಳಷ್ಟೇ ಬರಲಿವೆ. ಆದ್ದರಿಂದ ವಾಹನಗಳು ಬರಲು ಯಾವುದೇ ಅಡ್ಡಿಯಾಗದು. ನನ್ನ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನ ಮಾರುಕಟ್ಟೆ ಉದ್ಘಾಟನೆ ಮಾಡಿಸುವ ಆಶಯ ನನ್ನದು. ಬಳಿಕ ಅಧಿಕಾರಿಗಳಿಗೆ ಉಳಿದ ಕೆಲಸಗಳನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಬರಲಿದೆ. ಅಲ್ಲದೆ, ಬಾಕಿ ಉಳಿದಿರುವ ಕಾಮಗಾರಿ ಕೈಗೊಳ್ಳಲು ಅನುದಾನವೂ ಅಲ್ಲೆ ಇದೆ. ಅದರಲ್ಲೇ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ಚಾಲನೆ ಸಿಗಲಿದೆ.”

-ಎಂ.ವಿ.ಪ್ರಕಾಶ್(ನಾಗೇಶ್), ಅಧ್ಯಕ್ಷರು, ನಗರಸಭೆ, ಮಂಡ್ಯ

” ಮಾರುಕಟ್ಟೆಯನ್ನು ನಿರ್ಮಿಸಿದ್ದಾರೆ. ಆದರೆ ಮೂಲ ಸೌಲಭ್ಯಗಳಾಗಿ ಸಂಪರ್ಕ ರಸ್ತೆ ಮತ್ತು ಗ್ರಾಹಕರಿಗೆ ಅತ್ಯಗತ್ಯವಾಗಿ ಬೇಕಾದಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೆ ಜನ ಇಲ್ಲಿಗೇಕೆ ಬರುತ್ತಾರೆ? ಇದರ ಬದಲು ಎಪಿಎಂಸಿ ಯಾರ್ಡ್‌ನತ್ತ ಮುಖ ಮಾಡುವುದೇ ಹೆಚ್ಚು. ಆದ್ದರಿಂದ ಮುನಿಸಿಪಲ್ ಹೈಸ್ಕೂಲ್ ಮುಂಭಾಗದಿಂದ ಮಾರುಕಟ್ಟೆ ಆವರಣಕ್ಕೆ ಫ್ಲೈ ಓವರ್ ರೂಪದಲ್ಲಿ ಸಂಪರ್ಕ ಕಲ್ಪಿಸಿದರೆ ಗ್ರಾಹಕರಿಗೆ ಕೆಳಗಡೆ ಪಾರ್ಕಿಂಗ್ ಮಾಡಿ ಮಾರುಕಟ್ಟೆಗೆ ಖರೀದಿಗೆ ಹೋಗಲು ಸಾಧ್ಯವಿದೆ. ಇದಕ್ಕಾಗಿ ಮುನ್ಸಿಪಲ್ ಹೈಸ್ಕೂಲ್ ಮುಂಭಾಗದ ಪಾರ್ಕ್‌ನಲ್ಲಿ ಅವಕಾಶ ಮಾಡಿಕೊಡಬಹುದಾಗಿದೆ.”

-ಎಂ.ಎಲ್.ತುಳಸಿಧರ್, ಸಾಮಾಜಿಕ ಕಾರ್ಯಕರ್ತರು, ಮಂಡ್ಯ

ಆಂದೋಲನ ಡೆಸ್ಕ್

Recent Posts

ನಿಲ್ಲದ ಚಿನ್ನದ ನಾಗಾಲೋಟ : 1.61ಲಕ್ಷ ರೂ.ತಲುಪಿದ ಬಂಗಾರ

1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…

8 hours ago

ಯುವಕನ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…

8 hours ago

ಪಾದಯಾತ್ರೆ ವೇಳೆ ಚಿರತೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ : ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…

10 hours ago

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣ : ಜಿ.ಟಿ.ದಿನೇಶ್‌ಗೆ ಹೈಕೋರ್ಟ್ ಶಾಕ್

ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…

10 hours ago

ಸಮೀಕ್ಷೆ | ಫೆ.10ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ

ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…

10 hours ago

ಅಕ್ರಮ ರೆಸಾರ್ಟ್‌ ವಿರುದ್ದದ ಅನಿರ್ದಿಷ್ಟ ಪ್ರತಿಭಟನೆ ಅಂತ್ಯ

ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…

10 hours ago