Andolana originals

ತುಳುನಾಡಿನ ಯುಗಾದಿ ‘ಬಿಸು’ವಿಗಾಗಿ ಇನ್ನೂ ಇಪ್ಪತ್ತೆಂಟು ದಿನ

ಅಕ್ಷತಾರಾಜ್ ಪೆರ್ಲ, ಕನ್ನಡ, ತುಳು ಉಭಯ ಭಾಷಾ ಲೇಖಕಿ 

ಯುಗಾದಿ ಹಬ್ಬದ ಆಚರಣೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇದ್ದು, ಕರ್ನಾಟಕದ ಕರಾವಳಿ ಎನ್ನಿಸಿಕೊಂಡ ತುಳುನಾಡಿನಲ್ಲಿ ಯುಗಾದಿ ಆಚರಣೆ, ನಂಬಿಕೆ, ಸಂಪ್ರದಾಯ ಎಲ್ಲವೂ ತುಸು ಭಿನ್ನ. ಬೇಸಾಯವನ್ನು ಅವಲಂಬಿಸಿರುವ ತುಳುವನಾಡಿನಲ್ಲಿ ಆಚರಿಸಲ್ಪಡುವ ಬಹುತೇಕ ಹಬ್ಬಗಳಲ್ಲಿ ಪ್ರಕೃತಿ ಆರಾಧನೆ ಕಂಡುಬರುತ್ತದೆ. ‘ಕೆಡ್ಡಸ’ ಸಂಪ್ರದಾಯದಲ್ಲಿ ಭೂಮಿತಾಯಿ ರಜಸ್ವಲೆಯಾಗಿ ಫಲವತ್ತತೆಗೆ ಸಮರ್ಥಳಾಗುತ್ತಾಳೆ ಎಂಬ ನಂಬಿಕೆಯಿದ್ದು ಭೂಮಿಯನ್ನು ಆರಾಽಸುವ ರೀತಿ ಕಂಡುಬಂದರೆ ಯುಗಾದಿಯಲ್ಲಿ ಸೂರ್ಯನಿಗೆ ಎಂದರೆ ‘ಬಾನದೇವ’ನಿಗೆ ವಿಶೇಷ ಮಹತ್ವ. ಇದೇ ಕಾರಣಕ್ಕೆ ಚಾಂದ್ರಮಾನ ಯುಗಾದಿಗಿಂತ ಸೌರಮಾನ ಯುಗಾದಿ ‘ಬಿಸು ಪರ್ಬ’ವಾಗಿ ತುಳುವರಿಗೆ ದೊಡ್ಡ ಹಬ್ಬ.

ಚಾಂದ್ರಮಾನ ಯುಗಾದಿಗೆ ವಿಶೇಷ ಪ್ರಾಧಾನ್ಯತೆ ತುಳುನಾಡಿನಲ್ಲಿ ಕಂಡುಬರುವುದಿಲ್ಲ. ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವ ಸೌರಮಾನ ಯುಗಾದಿಯನ್ನು ‘ಬಿಸು ಪರ್ಬ’ ಅಥವಾ ವಿಷುಹಬ್ಬವಾಗಿ ಆಚರಿಸುತ್ತಾರೆ. ಕೇರಳದ ‘ವಿಷು ಯುಗಾದಿ’ಯೊಡನೆ ತುಳುನಾಡಿನ ಬಿಸುವಿಗೆ ಸಾಮ್ಯತೆ ಇದ್ದು ಆಚರಣೆಗಳಲ್ಲಿ ತುಸು ವ್ಯತ್ಯಾಸವಿದೆ. ಕೇರಳೀಯರಿಗೆ ‘ಕೊನ್ನೆ ಹೂವು’ ಸೌರಮಾನ ಯುಗಾದಿಗೆ ವಿಶೇಷವಾಗಿದ್ದರೆ, ತುಳುವರಿಗೆ ಸೌರಮಾನ ಯುಗಾದಿಯಂದು ಇಡುವ ‘ಬಿಸು ಕಣಿ’ಯೇ ವಿಶೇಷ.

ತುಳವರಿಗೆ ಬಿಸು ಅಥವಾ ಸೌರಮಾನ ಯುಗಾದಿ ಕೊನೆಯ ಹಬ್ಬವಾಗಿದ್ದು ಅಷ್ಟಮಿಯನ್ನು ಮೊದಲ ಹಬ್ಬವಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ‘ಬಿಸು ಭೀಮೆ ಕೊಂಡು ಕಂತ್ಯೆಂಡ, ಅಟ್ಟೆಮಿಗ್ ಕಿಸ್ನೆ ಉದಿತ್ ಬರ್ಪೆರ್’ ಎಂದರೆ ‘ವಿಷುವನ್ನು ಭೀಮ ಕೊಟ್ಟು ಹೋದರೆ, ಅಷ್ಟಮಿಗೆ ಕೃಷ್ಣ ಹುಟ್ಟಿ ಬರುತ್ತಾನೆ’ ಎಂಬ ಮಾತು ಚಾಲ್ತಿಯಲ್ಲಿದೆ. ಆದ್ದರಿಂದ ವಾರ್ಷಿಕಾವರ್ತನದ ಕೊನೆಯ ಹಬ್ಬವಾಗಿ ಸೌರಮಾನ ಯುಗಾದಿ ಪರಿಗಣಿಸಲ್ಪಡುತ್ತದೆ. ಬೇಸಾಯಗಾರರ ಕೊಯ್ಲು ಮುಗಿದು ಫಸಲು ಮನೆಯಂಗಳದಲ್ಲಿ ಹೊನ್ನಾದ ಕಾಲ.

‘ಬುಳೆ ಕಾಣಿಕೆ’ ಅಥವಾ ಬೆಳೆ ಕಾಣಿಕೆ ತುಳುನಾಡು ಜಮೀನ್ದಾರಿ ಪದ್ಧತಿಯನ್ನು ಹೊಂದಿದ್ದಂತಹ ಪ್ರದೇಶ. ಗೇಣಿ ಒಕ್ಕಲು ಇಲ್ಲಿ ರೂಢಿಯಲ್ಲಿದ್ದುದರಿಂದ ಗೇಣಿದಾರರು ವರ್ಷಕ್ಕೊಮ್ಮೆ ಜಮೀನ್ದಾರನಿಗೆ ತನ್ನ ಜಮೀನಿನಲ್ಲಿ ಬೆಳೆದ ಬೆಳೆಯ ಒಂದಂಶವನ್ನು ಕೊಡುವುದು ಪದ್ಧತಿಯಾಗಿತ್ತು. ಹೀಗೆ ಲಾಭದ ಒಂದಂಶವಾದ ಬೆಳೆಯನ್ನು ಸೌರಮಾನ ಯುಗಾದಿಯ ದಿನ ತನ್ನ ದೇವನಾದ ಭೂಮಿಯ ಒಡೆಯನಿಗೆ ಕೊಡುವ ಕ್ರಮವಿತ್ತು. ಇದನ್ನು ’ಬುಳೆ ಕಾಣಿಕೆ’ (ಬೆಳೆ ಕಾಣಿಕೆ) ಎಂದು ಕರೆಯಲಾಗುತ್ತಿತ್ತು. ಜಮೀನ್ದಾರಿ ಪದ್ಧತಿ ಮರೆಯಾದ ಕಾಲಘಟ್ಟದಲ್ಲಿ ‘ಬುಳೆ ಕಾಣಿಕೆ’ ಸಂಪ್ರದಾಯ ಇರದಿದ್ದರೂ ‘ಬಿಸು ಕಣಿ’ ಚಾಲ್ತಿಯಲ್ಲಿದೆ. ತಂತಮ್ಮ ಮನೆಗಳಲ್ಲಿ ತಾವು ಬೆಳೆದ ಹಣ್ಣು, ತರಕಾರಿಗಳನ್ನಿಟ್ಟು ಆರಾಧಿಸುವುದು ಸಂಪ್ರದಾಯ.

ಯುಗಾದಿ ದಿನ ‘ಬಿಸು ಕಣಿ’ ದರ್ಶನ ಕೃಷಿಕ ತಾನು ಬೆಳೆದ ಹೊಸ ಬೆಳೆಯನ್ನು ಕೊಯ್ದು ಸೌರಮಾನ ಯುಗಾದಿಯ ಮುನ್ನಾದಿನ ಸಾಯಂಕಾಲ ದೇವರ ಮನೆಯಲ್ಲಿ ಜೋಡಿಸಿಡುವುದು ವಿಶೇಷ. ಹೀಗೆ ಜೋಡಿಸುವುದಕ್ಕೂ ಅದರದ್ದೇ ಆದ ನಿಯಮವಿದ್ದು ಮನೆಯ ಯಜಮಾನನ ಸೂಚನೆಯನ್ನು ಪಾಲಿಸಲಾಗುತ್ತದೆ. ಮಣೆಯ ಮೇಲೆ ತುದಿ ಬಾಳೆ ಎಲೆಯಲ್ಲಿ ತಾನು ಬೆಳೆದ ಹಣ್ಣು, ತರಕಾರಿಗಳ ಜೊತೆಗೆ ಸೇರು ಅಕ್ಕಿ, ಹಿಂಗಾರ,  ವೀಳ್ಯದೆಲೆ, ಅಡಕೆ, ತೆಂಗಿನಕಾಯಿ, ಧೋತಿ, ಹಣ ಇತ್ಯಾದಿಗಳನ್ನು ಜೋಡಿಸಿಟ್ಟು ಮಧ್ಯ ಭಾಗದಲ್ಲಿ ಕನ್ನಡಿ ಇಡುತ್ತಾರೆ. ಹೀಗೆ ಇಡುವ ಕಣಿಯಲ್ಲಿ ಗೇರುಹಣ್ಣು, ಹಲಸಿನ ಹಣ್ಣಿನ ಪಾರುಪತ್ಯ ಬಲು ಜೋರು. ಇದನ್ನೇ ಬಿಸು ಕಣಿ ಎನ್ನುವುದು. ಸೌರಮಾನ ಯುಗಾದಿ ದಿನ ಬೆಳಿಗ್ಗೆ ಮನೆಯ ಯಜಮಾನ ಮಿಂದು ಹೊಸ ಬಟ್ಟೆ ಧರಿಸಿ ಕಣಿ ಮುಂದೆ ದೀಪ ಬೆಳಗಿ ಕಣಿಯಲ್ಲಿಟ್ಟ ಕನ್ನಡಿಯಲ್ಲಿ ಮುಖ ನೋಡುತ್ತಾನೆ. ನಂತರ ಮನೆಮಕ್ಕಳೆಲ್ಲ ಕಣಿ ಕನ್ನಡಿ ನೋಡಿ ಕಣಿಗೆ ನಮಸ್ಕರಿಸಿ, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವುದನ್ನು ‘ಕಣಿ ನೋಡುವುದು’ ಎನ್ನುತ್ತಾರೆ. ಈ ಕಣಿ ಮೂಲಕ ರೈತ ದೇವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾನೆ. ಕಣಿಗೆ ಇಟ್ಟ ತರಕಾರಿ, ಹಣ್ಣು ಇತ್ಯಾದಿಗಳ ಸ್ವಲ್ಪ ಭಾಗವನ್ನು ತೆಗೆದು ಅಡುಗೆಗೆ ಉಪಯೋಗಿಸಿ ಪ್ರಸಾದವೆಂದು ಸ್ವೀಕರಿಸಲಾಗುತ್ತದೆ. ಎಳೆಯ ಗೋಡಂಬಿ ಹಾಕಿದ ಪಾಯಸ ಇರದ ತುಳುನಾಡಿನ ಮನೆ ಯುಗಾದಿ ದಿನ ಇರಲಿಕ್ಕಿಲ್ಲ! ತುಳುವರ ಪ್ರಕಾರ ಬಿಸು ಕಳೆಯಿತೆಂದರೆ ಮಳೆಗಾಲ ಆರಂಭವಾಯಿತು ಎಂದರ್ಥ. ನಂತರದ್ದೆಲ್ಲ ಮಳೆಗಾಲದ ಸಿದ್ಧತೆಗಳೇ. ಬಿಸುವಿನ ದಿನ ’ಕೈ ಬಿತ್ತು ಹಾಕುವುದು’ ಎಂಬ ಸಂಪ್ರದಾಯವಿದ್ದು ಕೃಷಿ ಬೆಳೆಗಳ ಬೀಜ ಬಿತ್ತನೆಗೆ ಆ ದಿನ ಸಕಾಲವೆಂದು ನಂಬಿಕೆ. ಶುಭಕಾರ್ಯಗಳಿಗೆ ಬಿಸುವಿನ ದಿನ ಶುಭದಿನ. ಮುಹೂರ್ತ ನೋಡುವ ಕ್ರಮವೂ ಇಲ್ಲ. ಒಂದಾದರೂ ತರಕಾರಿ ಗಿಡವನ್ನು ಬಿಸುವಿನಂದು ನೆಡಲೇಬೇಕು ಎಂಬುದು ವಾಡಿಕೆ. ಹೀಗೆ ತುಳುವರಿಗೆ ಸೌರಮಾನ ಯುಗಾದಿ ‘ಬಿಸು ಪರ್ಬ’ವಾಗಿ ಆಚರಿಸಲ್ಪಡುವ ದೊಡ್ಡ ಹಬ್ಬ.

ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಮನುಷ್ಯನೂ ಬದಲಾಗಿದ್ದಾನೆ. ಕೃಷಿಭೂಮಿಗಳು ಸೈಟು, ಅಪಾರ್ಟುಮೆಂಟುಗಳಾಗಿ ಬದಲಾಗಿರುವಾಗ ತಮ್ಮ ಭೂಮಿಯ ಫಸಲಿನ ಕಣಿ ಎಲ್ಲಿರಲು ಸಾಧ್ಯ? ಇದೇ ಕಾರಣಕ್ಕೆ ಇಂದು ಹೆಚ್ಚಿನ ಮನೆಗಳಲ್ಲಿ ‘ಕಣಿ ಸಂಸ್ಕ ತಿ’ ಮರೆಯಾದರೂ ತುಳುನಾಡಿನ ದೇವಸ್ಥಾನಗಳಲ್ಲಿ ಬಿಸುವಿನ ದಿನ ಕಣಿಯ ಸೊಬಗು ನೋಡಲು ಸಿಗುತ್ತದೆ. ಚಾಂದ್ರಮಾನ ಅಥವಾ ಸೌರಮಾನ, ಯುಗಾದಿ ಯಾವುದೇ ಆಗಿರಲಿ, ಹೊಸತನ್ನು ಸ್ವಾಗತಿಸುವುದು ಎಲ್ಲ ದೇಶ, ಕಾಲದ ಮೂಲ ಆಶಯ. ನಿನ್ನೆಯ ಹಳತಿನ ತಳಪಾಯದಲ್ಲಿ ನಾಳಿನ ಹೊಸತಿನ ನಿರೀಕ್ಷೆ ಒಟ್ಟಂದದಲ್ಲಿ ಯುಗಾದಿ ಎಂಬ ಹಬ್ಬದ ಸೊಗಡು.

ಆಂದೋಲನ ಡೆಸ್ಕ್

Recent Posts

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

2 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

2 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

2 hours ago

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ ೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ…

2 hours ago

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

11 hours ago