Andolana originals

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ತಡ ರಾತ್ರಿ ಗುಂಡಿನ ದಾಳಿಯಲ್ಲಿ ೩ ಮಂದಿ ಬೇಟೆಗಾರರು ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣದಲ್ಲಿ ಅರಣ್ಯ ಇಲಾಖೆಯವರ ನಡೆ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಉತ್ತರ ಹೇಳಬೇಕಾಗಿದೆ.

ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ಮೂವರೂ ರೈತರು ಎನ್ನಲಾಗಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಗುಂಡೇಟಿನಿಂದ ಮೃತಪಟ್ಟಿರುವ ಮೂವರು ವನ್ಯಜೀವಿಗಳ ಬೇಟೆಗೆ ಹೋಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದರಿಂದ ಅರಣ್ಯಾಧಿಕಾರಿಗಳು ಆ ಸ್ಥಳಕ್ಕೆ ತೆರಳಿದ್ದಾರೆ. ಅತ್ತಕಡೆಯಿಂದ ಇವರ ಮೇಲೆ ಗುಂಡಿನ ದಾಳಿ ನಡೆದಿದೆ. ಪ್ರತಿಯಾಗಿ ಅರಣ್ಯಾಧಿಕಾರಿಗಳು ನಡೆಸಿದ ದಾಳಿಯಲ್ಲಿ ಮೂವರೂ ಸಾವಿಗೀಡಾಗಿದ್ದಾರೆ ಎಂಬುದು ಅರಣ್ಯ ಇಲಾಖೆ ವಾದ. ಅಲ್ಲದೆ, ಮೃತರ ಬಳಿ ಕೋವಿ, ಪ್ರಾಣಿಯೊಂದರ ಮಾಂಸ ಸಿಕ್ಕಿದೆ ಎನ್ನಲಾಗಿದೆ.

ವಾಸ್ತವ ಏನೇ ಇರಲಿ. ಆದರೆ, ಪ್ರಕರಣದ ತನಿಖೆ, ಆರೋಪಿಗಳ ವಿಚಾರಣೆ… ಯಾವುದೂ ಇಲ್ಲದೆ, ಏಕಾಏಕಿ ಕಾನೂನು ಕೈಗೆತ್ತಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಅಲ್ಲ. ದೇಶದ ಸಂವಿಧಾನ ಯಾವುದೇ ಅಪರಾಧ ಪ್ರಕರಣವಾಗಲಿ ನಿರಪರಾಧಿಗೆ ಶಿಕ್ಷೆಯಾಗಬಾರದು. ಹಾಗಾಗಿಯೇ ಪ್ರತಿಯೊಂದು ಅಂಶವನ್ನೂ ಕೂಲಂಕಷವಾಗಿ ತನಿಖೆ ನಡೆಸಿ, ಬಳಿಕ ನ್ಯಾಯಾಲಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮವಹಿಸಬೇಕು ಎನ್ನುತ್ತದೆ. ಹಾಗಾದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಉಳಿಯುತ್ತದೆ; ಬೆಳೆಯುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡು, ವನ್ಯಜೀವಿಗಳ ಸಂರಕ್ಷಣೆಯೇ ಪ್ರಧಾನ ಕರ್ತವ್ಯ ಎಂಬುದು ನಿಜವಾದರೂ, ಅರಣ್ಯದಿಂದ ಹೊರಹಾಕಲ್ಪಟ್ಟವರು, ಕಾಡಂಚಿನಲ್ಲಿ ಇರುವ ಜನರ ರಕ್ಷಣೆಯ ಜವಾಬ್ದಾರಿಯೂ ಇರುತ್ತದೆ. ತಾವು ಹುಟ್ಟಿ, ಬೆಳೆದ ಪ್ರದೇಶದೊಳಗೆ ಪ್ರವೇಶ ಪಡೆಯಲು, ಸರ್ಕಾರಿ ಅಧಿಕಾರಿಗಳ ಅನುಮತಿ ಬೇಡಬೇಕಾದ ಸ್ಥಿತಿಯಲ್ಲಿರುವವರನ್ನು ಮಾನ ವೀಯತೆಯಿಂದ ನೋಡಬೇಕಾದ ಹೊಣೆಯೂ ಅರಣ್ಯಾಧಿಕಾರಿಗಳದ್ದಾಗಿರುತ್ತದೆ. ಇದನ್ನು ಸರ್ಕಾರ ಅಧಿಕೃತವಾಗಿ ಹೇಳದಿದ್ದರೂ, ಅಽಕಾರಿಗಳೇ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ.

ಈ ಪ್ರಕರಣ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ಸರ್ಕಾರ ಹೇಳಿದೆ. ಆದರೆ, ಸಂತ್ರಸ್ತ ಕುಟುಂಬಗಳು, ಸಂಘ- ಸಂಸ್ಥೆಗಳು ಇದನ್ನು ವಿರೋಧಿಸುತ್ತಿವೆ. ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ, ಗುಂಡೇಟಿನಿಂದ ಮೃತಪಟ್ಟವರ ದೇಹಗಳನ್ನು ಯಾವುದೇ ಸುಳಿವು ನೀಡದೆ ಕೊಳ್ಳೇಗಾಲ ಆಸ್ಪತ್ರೆಗೆ ಅರಣ್ಯಾಧಿಕಾರಿಗಳು ಸಾಗಿಸಿರುವುದು ಅನುಮಾನಗಳಿಗೆ ರೆಕ್ಕೆಪುಕ್ಕೆ ಕಟ್ಟಿದೆ. ಪಶುಸಂಗೋಪನೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರೇ ಪ್ರಕರಣದ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡದೆ ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂತಹ ಶೂಟೌಟ್ ಪ್ರಕರಣ ನಡೆದರೆ ಜಿಲ್ಲಾಧಿಕಾರಿಗಳು, ಎಸ್‌ಪಿ ಅವರ ಗಮನಕ್ಕೆ ತರಬೇಕು. ಇದ್ಯಾವುದನ್ನೂ ಮಾಡದ ಅರಣ್ಯಾಧಿಕಾರಿಗಳ ನಡೆ ಕುರಿತು ಸ್ಥಳೀಯರಿಗೆ ಸಹಜವಾಗಿ ಸಂಶಯ ಮೂಡಿದೆ.

ಈ ಪ್ರಕರಣದಲ್ಲಿ ಮೃತಪಟ್ಟವರು ನಿಜವಾಗಿಯೂ ಬೇಟೆಗೆ ಹೋಗಿದ್ದರೋ ಅಥವಾ ಅರಣ್ಯಾಧಿಕಾರಿಗಳು ತಪ್ಪಾಗಿ ಗ್ರಹಿಸಿ ಅವರತ್ತ ಗುಂಡು ಹಾರಿಸಿದ್ದಾರೋ ಎಂಬುದು ಪ್ರಾಮಾಣಿಕ ಮತ್ತು ಪಾರದರ್ಶಕ ತನಿಖೆಯಿಂದ ಹೊರಬರಬೇಕು. ಸಂತ್ರಸ್ತ ಕುಟುಂಬದವರ ಆಗ್ರಹದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವ ಸಂಬಂಧ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಒಂದು ವೇಳೆ ತನಿಖೆಯಲ್ಲಿ ಮೃತರು ನಿರಪರಾಧಿಗಳು ಎಂದು ಸಾಬೀತಾದರೆ, ಅರಣ್ಯಾಧಿಕಾರಿಗಳಿಗೆ ಶಿಕ್ಷೆಯಾಗುತ್ತದೆ. ಆದರೆ, ಹತರಾದವರು ಮತ್ತೆ ಬರುವುದಿಲ್ಲ. ಅವರ ಕುಟುಂಬಗಳ ಮುಂದೆ ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ತಲೆತಗ್ಗಿಸಬೇಕಾಗುತ್ತದೆ. ಇದಲ್ಲದೆ, ಸ್ಥಳೀಯರು ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಾಡಿನೊಳಗೆ ಪ್ರವೇಶಿಸಬೇಕಾದರೆ ಇರುವ ನಿಯಮಗಳನ್ನು ಅನುಸರಿಸಬೇಕು. ಉದಾಸೀನ ತೋರಿದರೆ, ಸರಿಪಡಿಸಲಾಗದ ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಇದೇ ರೀತಿಯಲ್ಲಿ ಅರಣ್ಯ ಇಲಾಖೆ ಅಽಕಾರಿಗಳೂ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯ. ಅಲ್ಲದೆ, ಈ ಪ್ರಕರಣವನ್ನು ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳು ರಾಜಕೀಯಕ್ಕೆ ಬಳಸಬಾರದು. ಇದು ಮತ್ತೊಂದು ರೀತಿಯಲ್ಲಿ ಸಂತ್ರಸ್ತ ಕುಟುಂಬಗಳ ಮೇಲೆ ದಾಳಿ ಮಾಡಿದಂತಾಗುತ್ತದೆ. ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾಗಿರುವವರಿಗೆ ನ್ಯಾಯ ಒದಗಿಸಲು ಬದ್ಧತೆ ತೋರಿಸಬೇಕು.

” ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡು, ವನ್ಯಜೀವಿಗಳ ಸಂರಕ್ಷಣೆಯೇ ಪ್ರಧಾನ ಕರ್ತವ್ಯ ಎಂಬುದು ನಿಜವಾದರೂ, ಅರಣ್ಯದಿಂದ ಹೊರಹಾಕಲ್ಪಟ್ಟವರು, ಕಾಡಂಚಿನಲ್ಲಿ ಇರುವ ಜನರ ರಕ್ಷಣೆಯ ಜವಾಬ್ದಾರಿಯೂ ಇರುತ್ತದೆ. ತಾವು ಹುಟ್ಟಿ, ಬೆಳೆದ ಪ್ರದೇಶದೊಳಗೆ ಪ್ರವೇಶ ಪಡೆಯಲು, ಸರ್ಕಾರಿ ಅಧಿಕಾರಿಗಳ ಅನುಮತಿ ಬೇಡ ಬೇಕಾದ ಸ್ಥಿತಿಯಲ್ಲಿರುವವರನ್ನು ಮಾನವೀಯತೆಯಿಂದ ನೋಡಬೇಕಾದ ಹೊಣೆಯೂ ಅರಣ್ಯಾಧಿಕಾರಿಗಳದ್ದಾಗಿರುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

11 mins ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

17 mins ago

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ ೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ…

22 mins ago

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

9 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

11 hours ago