Andolana originals

ಮಾನವ-ಪ್ರಾಣಿ ಸಂಘರ್ಷಕ್ಕೆ ಹುಲಿಗಳು ಬಲಿಯಾಗುತ್ತಿವೆಯೇ?

ಪ್ರಸಾದ್ ಲಕ್ಕೂರು

ಮೀಣ್ಯಂ ವಲಯಾರಣ್ಯದಲ್ಲಿ ೫ ಹುಲಿಗಳ ಸಾವು ನಿದರ್ಶನ; ಸಂರಕ್ಷಿತಾರಣ್ಯಗಳಲ್ಲಿ ಜನರ ಮೇಲೆಯೂ ದಾಳಿ

ಚಾಮರಾಜನಗರ: ಹುಲಿಗಳಿರುವ ನಾಡು ಎಂದೇ ಹೆಸರುವಾಸಿ ಆಗುತ್ತಿರುವ ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಹುಲಿಗಳು ಬಲಿಯಾಗುತ್ತಿವೆಯೇ ? ಇಂತಹದ್ದೊಂದು ಪ್ರಶ್ನೆ ಕೇಳಿ ಬರುತ್ತಿದೆ.

ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಶಾಖೆಯ ಮಹದೇಶ್ವರ ದೇವಸ್ಥಾನ ಅರಣ್ಯ ಪ್ರದೇಶ ದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಐದು ಹುಲಿಗಳು ಒಂದೇ ದಿನ ಮೃತಪಟ್ಟಿರುವ ಘಟನೆ ಇದೇ ಮೊದಲಾಗಿದೆ. ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದು, ಇದಕ್ಕೆ ಪುಷ್ಟಿ ನೀಡುತ್ತದೆ.

ಮೀಣ್ಯಂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ೩ ದಿನಗಳ ಹಿಂದೆ ಹುಲಿ ದಾಳಿಗೆ ಹಸುವೊಂದು ಮೃತಪಟ್ಟಿತ್ತು. ಮತ್ತೆ ಮಾಂಸ ತಿನ್ನಲು ಹುಲಿ ಬರಬಹುದು ಎಂದು ಶಂಕಿಸಿ ಜಾನುವಾರುಗಳ ಮಾಲೀಕರು ವಿಷಪ್ರಾಶನ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ವಿಷಪ್ರಾಶನ ನಿಜವೆಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿಧಾಮದೊಳಗೆ ಹಾಗೂ ಅಂಚಿನಲ್ಲಿ ಅನೇಕ ಗ್ರಾಮಗಳಿದ್ದು ದೇಶಿ ಜಾನುವಾರುಗಳನ್ನು ಸಾಕುತ್ತಾರೆ. ಅವುಗಳನ್ನು ಮೇಯಲು ಅರಣ್ಯದೊಳಗೆ ಬಿಡುವುದು ಸಾಮಾನ್ಯ. ಕೆಲವು ಸಲ ಕಾಡಿನೊಳಗೆ ಹೋದ ಹಸು, ಕರುಗಳು ವಾಪಸ್ ಬಾರದೆ ಹುಲಿ, ಚಿರತೆಗೆ ಆಹಾರವಾದ ಘಟನೆಗಳು ನಡೆದಿವೆ. ಆದರೆ, ಬೆಳಕಿಗೆ ಬರುತ್ತಿಲ್ಲ. ಹುಲಿಯ ದಾಳಿಯಿಂದ ಬೆಚ್ಚಿದ ಜನರು ಸಾವಿಗೀಡಾದ ಹಸುಗಳ ಮೇಲೆ ಕ್ರಿಮಿನಾಶಕ ಸುರಿಯುತ್ತಾರೆ. ಆಗ ಹುಲಿ ಅಥವಾ ಚಿರತೆ ತಾನು ಸಾಯಿಸಿದ ಪ್ರಾಣಿಗಳನ್ನು ತಿಂದು ಸಾವನ್ನಪ್ಪಿದ ಘಟನೆಗಳು ನಡೆದಿವೆ.

ಜಿಲ್ಲೆಯಲ್ಲಿ ಸುಪ್ರಸಿದ್ಧ ಬಂಡೀಪುರ ಮತ್ತು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯಗಳಿವೆ. ಅಲ್ಲದೆ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯ ಜೀವಿಧಾಮಗಳಿವೆ. ಇವುಗಳು ಸಂರಕ್ಷಿತ ಪ್ರದೇಶಗಳಾದ್ದರಿಂದ ಆನೆಗಳು, ಚಿರತೆಗಳು, ಹುಲಿಗಳು, ಕಾಡೆಮ್ಮೆಗಳು, ಸೀಳುನಾಯಿಗಳು, ಜಿಂಕೆಗಳು, ಹಂದಿಗಳು, ಕೋತಿಗಳು ಸೇರಿದಂತೆ ಇತರೆ ಹಲವು ಪ್ರಾಣಿಗಳ ಸಂಖ್ಯೆ ವೃದ್ಧಿಸಿದೆ.

ಹುಲಿ ಸೇರಿದಂತೆ ಇತರೆ ಪ್ರಾಣಿಗಳ ಆವಾಸ ಸ್ಥಾನಕ್ಕೆ ಮಾನವನ ಹಸ್ತಕ್ಷೇಪ ಆರಂಭವಾದ್ದರಿಂದಲೇ ಮಾನವ ಮತ್ತು ಪ್ರಾಣಿ ಸಂಘರ್ಷ ಆಗಾಗ್ಗೆ ನಡೆಯುತ್ತಿದೆ. ಆದ್ದರಿಂದಲೇ ಕಡಿಮೆ ಸಂಖ್ಯೆಯಲ್ಲಿರುವ ಹುಲಿ, ಚಿರತೆ, ಆನೆಯಂತಹ ಪ್ರಾಣಿಗಳ ಜೀವ ಹರಣವಾಗುತ್ತಿದೆ ಎಂಬ ಮಾತುಗಳು ಪರಿಸರ ತಜ್ಞರಿಂದ ಆಗಾಗ ಕೇಳಿಬರುತ್ತಿವೆ.

ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದ ದೊಡ್ಡ ಪ್ರಾಣಿಗಳ ಕಳ್ಳಬೇಟೆಗೆ ಕಡಿವಾಣ ಬಿದ್ದಿದೆ. ಆದರೆ, ಅರಣ್ಯದಂಚಿನ ಮತ್ತು ಒಳಗಿನ ಜನವಸತಿ ಪ್ರದೇಶಗಳಲ್ಲಿರುವ ನಿವಾಸಿಗಳ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಹುಲಿ ಮತ್ತು ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡಿ ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ದಾಳಿಗೆ ಮುಂದಾಗುತ್ತವೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ತಕ್ಷಣ ಕಾರ್ಯಪ್ರವೃತ್ತರಾಗಿ ಇವುಗಳನ್ನು ಹಿಡಿದು ಅರಣ್ಯದೊಳಗೆ ಬಿಟ್ಟರೆ ಸಮಸ್ಯೆ ಇರುವುದಿಲ್ಲ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ವಿಷ ಪ್ರಾಶನದಂತಹ ಘಟನೆಗಳು ನಡೆದು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತವೆ.

ಜಿಲ್ಲೆಯಲ್ಲಿ ಹೆಚ್ಚು ಹುಲಿಗಳಿವೆ: ರಾಜ್ಯದಲ್ಲಿ ಅಧಿಕ ಹುಲಿಗಳಿರುವುದೇ ಜಿಲ್ಲೆಯಲ್ಲಿ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂದಾಜು ೧೯೧, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ೪೪, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ೫, ಕಾವೇರಿ ವನ್ಯಜೀವಿ ಧಾಮದಲ್ಲಿ ೧೦ ಹುಲಿಗಳಿವೆ. ಇಷ್ಟಿದ್ದರೂ ಆಗೊಮ್ಮೆ ಹೀಗೊಮ್ಮೆ ಹುಲಿ-ಮಾನವ ಸಂಘರ್ಷ ನಡೆಯುತ್ತದೆ.

ಪಾರ್ವತಾಂಬ ಬೆಟ್ಟದಲ್ಲೂ ಹುಲಿ ಸಾವು: ೩ ವರ್ಷಗಳ ಹಿಂದೆ ಗುಂಡ್ಲುಪೇಟೆ ತಾಲ್ಲೂಕಿನ ಪಾರ್ವತಾಂಬ ಬೆಟ್ಟದಲ್ಲಿ ಹುಲಿಯೊಂದು ಮೃತಪಟ್ಟಿತ್ತು. ಅದು ಸಹ ವಿಷ ಪ್ರಾಶನದಿಂದಲೇ ಸಾವಿಗೀಡಾಗಿತ್ತು ಎಂಬುದನ್ನು ಅರಣ್ಯ ಇಲಾಖೆ ಖಚಿತಪಡಿಸಿತ್ತು. ಚಾಮರಾಜನಗರ ತಾಲ್ಲೂಕಿನ ತಮ್ಮಡಹಳ್ಳಿ ಬಳಿಯೂ ಚಿರತೆಯೊಂದು ಮೃತಪಟ್ಟು ವಿಷಪ್ರಾಶನದಿಂದ ಸತ್ತಿದೆ ಎಂಬ ಮಾತು ಕೇಳಿಬಂದಿತ್ತು.

ಹುಲಿ ದಾಳಿಯಿಂದ ಹಲವರು ಸಾವು: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಬೇಡಗುಳಿ ಪ್ರದೇಶ ರಾಮಯ್ಯನಪೋಡಿನ ರಂಗಮ್ಮ ಜೂ.೧೦ ರಂದು ಹುಲಿ ದಾಳಿಗೆ ಬಲಿಯಾದರು. ಹಿಂದಿನ ದಿನ ಇದೇ ಹಾಡಿಯ ರವಿ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿತ್ತು.

ಜೂ.೧೯ರಂದು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ದೇಶಿಪುರ ಕಾಲೋನಿ ಬಳಿ ಗ್ರಾಮದ ಪುಟ್ಟಮ್ಮ, ಆಡಿನ ಕಣಿವೆಯಲ್ಲೂ ಒಬ್ಬ ವ್ಯಕ್ತಿ ಹುಲಿ ದಾಳಿಗೆ ಬಲಿಯಾದರು. ಕೆಲವು ವರ್ಷಗಳ ಹಿಂದೆ ಪ್ರತ್ಯೇಕ ಪ್ರಕರಣಗಳಲ್ಲಿ ಮದ್ದೂರು, ಚೌಡಳ್ಳಿಯಲ್ಲಿ ಇಬ್ಬರು ರೈತರು ಹುಲಿ ದಾಳಿಗೆ ಸತ್ತಿದ್ದರು. ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ, ಅಣ್ಣೂರು ಕೇರಿ, ಸೋಮಹಳ್ಳಿ ಸಮೀಪ, ಚಾಮರಾಜನಗರ ತಾಲ್ಲೂಕಿನ ಕಾಳನಹುಂಡಿ ಬಳಿ ಹುಲಿಗಳು ಕಾಣಿಸಿಕೊಂಡಿದ್ದವು. ವಯಸ್ಸಾದ ಹುಲಿ ಬೇಟೆಯಾಡಲು ಸಾಮರ್ಥ್ಯ ಕಳೆದುಕೊಂಡರೆ ಅರಣ್ಯದ ಅಂಚಿನತ್ತ ಬಂದು ಜಾನು ವಾರು ಮತ್ತು ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ

“ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷದಿಂದ ಹುಲಿ, ಚಿರತೆ, ಆನೆಗಳು ಸಾವನ್ನಪ್ಪುತ್ತಿರುತ್ತವೆ. ಇದನ್ನು ತಡೆಯಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಣಿಗಳ ಸಂರಕ್ಷಣೆಗೆ ಬಗ್ಗೆ ಅರಿವು  ಮೂಡಿಸಬೇಕು. ಪ್ರಾಣಿಗಳ ರಕ್ಷಣೆ ಎಂಬುದು ಅರಣ್ಯಾಧಿಕಾರಿ, ಸಿಬ್ಬಂದಿಗಳ ಕೆಲಸವಷ್ಟೇ ಅಲ್ಲ. ಪ್ರತಿಯೊಬ್ಬ ನಾಗರಿಕರ ಪಾತ್ರವೂ ಅಗತ್ಯ.”

-ಜಿ.ಮಲ್ಲೇಶಪ್ಪ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ.

ಆಂದೋಲನ ಡೆಸ್ಕ್

Recent Posts

ಗೋವಾ ಅವಘಡ : ಭಾರತದಿಂದ ಪರಾರಿಯಾದ ಲುತ್ರಾ ಸೋದರರು ಥಾಯ್ಲೆಂಡ್‌ನಲ್ಲಿ ವಶಕ್ಕೆ

ಪಣಜಿ : ಗೋವಾ ಬೆಂಕಿ ಅವಘಡ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್…

5 mins ago

ಡೀಮ್ಡ್‌ ಅರಣ್ಯ ಪ್ರದೇಶ ಗುರುತಿಸುವಿಕೆಗೆ ಸಮಿತಿ ರಚನೆ : ಈಶ್ವರ ಖಂಡ್ರೆ

ಬೆಳಗಾವಿ : ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ…

37 mins ago

ಕೆಪಿಟಿಸಿಎಲ್ : 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ

ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ…

40 mins ago

ಕ್ರೀಡಾ ನೇಮಕಾತಿ ಮೀಸಲಾತಿ ಅನುಷ್ಠಾನ : ಸಿಎಂ ಘೋಷಣೆ

ಬೆಳಗಾವಿ : ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ…

46 mins ago

ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ : ಆರ್ಥಿಕ ಇಲಾಖೆಯ ಅನುಮತಿ ಪಡೆದು ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

51 mins ago

ಹೊಸದಿಲ್ಲಿ : ಭಾರತೀಯ ಜಲಪ್ರದೇಶಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಬೋಟ್ ಒಂದನ್ನು ಇಂದು ಕೋಸ್ಟ್ ಗಾರ್ಡ್ ವಶಪಡಿಸಿಕೊಂಡಿದ್ದು ಹಡಗಿನಲ್ಲಿದ್ದ ೧೧ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಭಾರತೀಯ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು…

55 mins ago