2024ನ್ನು ಮುಗಿಸಿ 2025ರ ಹೊಸ ವರ್ಷದ ಹೊಸ್ತಿಲೊಳಗೆ ಕಾಲಿಡಲು ದಿನಗಣನೆ ಶುರುವಾಗಿದೆ. ದಿನಗಳು ಉರುಳಿ ಹೊಸ ವರ್ಷ ಬಂದರೂ ರಾಜ್ಯ, ದೇಶದ ರಾಜಕಾರಣದಲ್ಲಿ ಮಾತ್ರ ಹಳೆಯ ವಿದ್ಯಮಾನಗಳು, ಬೆಳವಣಿಗೆಗಳನ್ನು ನೋಡಿಕೊಂಡೇ ಮುಂದಡಿ ಇಡುವುದು ಸಹಜವಾಗಿದೆ. 2023ರ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಚುನಾವಣೆ, ಪಕ್ಷಾಂತರಗಳು, ಮೈತ್ರಿ ರಾಜಕೀಯ, ಉಪ ಚುನಾವಣೆಯ ಫಲಿತಾಂಶ, ಬಣ ಬಡಿದಾಟ, ಬಂಡಾಯ… ಹೀಗೆ ಹಲವು ವಿದ್ಯಮಾನಗಳಿಗೆ ರಾಜ್ಯ ರಾಜಕಾರಣ ಸಾಕ್ಷಿಯಾಗಿದೆ.
ಮೂರನೇ ಬಾರಿಗೆ ಮೋದಿ
ದೇಶದಲ್ಲಿ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯಲು ವಿಫಲವಾ ದರೂ ಎನ್‌ಡಿಎ ಮೈತ್ರಿಕೂಟದ ಬೆಂಬಲದೊಂದಿಗೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಗದ್ದಿಗೆ ಅಲಂಕರಿ ಸಿದರು. 2019ಕ್ಕಿಂತ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿದ ಫಲವಾಗಿ ವಿಪಕ್ಷ ನಾಯಕ ಸ್ಥಾನವನ್ನು ರಾಹುಲ್ ಗಾಂಧಿ ಅಲಂಕರಿಸುವಂತಾಗಿದೆ.
ಮಹಾರಾಷ್ಟ್ರದಲ್ಲಿ ಕಮಲ, ಜಾರ್ಖಂಡ್‌ನಲ್ಲಿ ಹೇಮಂತ್
ನವೆಂಬರ್ ತಿಂಗಳಲ್ಲಿ ನಡೆದ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ ಬೆಂಬಲಿತ ಮೈತ್ರಿಕೂಟ ಹೀನಾಯ ಸೋಲು ಕಂಡಿತು. ಜಾರ್ಖಂಡ್ ರಾಜ್ಯದಲ್ಲಿ ಹೇಮಂತ್ ಸೊರೆನ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಮಹಾರಾಷ್ಟ್ರದಲ್ಲಿ ಬಿಜೆಪಿ, ಏಕ್ ನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ಬಣದ ಎನ್ ಸಿಪಿ ಬಹುಮತ ಪಡೆದುಕೊಂಡಿದ್ದಲ್ಲದೆ, ಬಿಜೆಪಿಯೇ 132 ಸ್ಥಾನಗಳನ್ನು ಗೆದ್ದು ಬೀಗಿದ್ದು ದೊಡ್ಡ ದಾಖಲೆಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ
ಮತದಾನ 370ನೇ ವಿಧಿಯನ್ನು ತೆಗೆದು ಹಾಕಿದ ಬಳಿಕ ಮೊದಲ ಬಾರಿಗೆ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ಜೆಕೆಎನ್ ಸಿಯ ಪಕ್ಷ ಸ್ಪಷ್ಟ ಬಹುಮತ ಪಡೆದು ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ಬಿಜೆಪಿ ನಡೆಸಿದ ಹೋರಾಟ ವಿಫಲವಾಗಿ ಜೆಕೆಎನ್ ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಹಿಡಿಯಿತು.
ಕೆ.ಎಸ್.ಈಶ್ವರಪ್ಪ ಬಂಡಾಯ, ಉಚ್ಚಾಟನೆ
ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ, ತಮ್ಮ ಮಗನಿಗೆ ಹಾವೇರಿ ಕ್ಷೇತ್ರದ ಲೋಕಸಮರದಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದರು. ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅಚ್ಚರಿಯ ಬೆಳವಣಿಗೆಯಾಗಿತ್ತು. ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಕಣಕ್ಕಿಳಿದ ಕೆ.ಎಸ್.ಈಶ್ವರಪ್ಪ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಬೇಕಾಯಿತು. ಬಂಡಾಯದ ಬಾವುಟ ಹಾರಿಸಿದ ಕಾರಣ ಈಶ್ವರಪ್ಪರನ್ನು ಬಿಜೆಪಿಯಿಂದ ಉಚ್ಛಾಟಿಸಲಾಯಿತು.
ಮೂರು ಕ್ಷೇತ್ರ ಕಾಂಗ್ರೆಸ್ ಪಾಲಿಗೆ!
ಉಪ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಮೂರೂ ಕ್ಷೇತ್ರಗಳನ್ನು ‘ಕೈ’ ವಶ ಮಾಡಿಕೊಂಡಿತು. ಬಿಜೆಪಿ-ಜಾ.ದಳ ಸೋಲುವ ಮೂಲಕ ಮುಖಭಂಗ ಅನುಭವಿಸಿದವು. ವಿಶೇಷವಾಗಿ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ಉಪಸಮರದಲ್ಲಿ ಕೊನೆಯ ಕ್ಷಣದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡು ಸಿ.ಪಿ.ಯೋಗೇಶ್ವರ್ ಗೆಲುವಿನ ನಗೆ ಬೀರಿದರು. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಕಂಡರು.
ಮೈತ್ರಿಯ ಫಲ ಯಶಸ್ಸು
ಬಿಜೆಪಿ-ಜಾ.ದಳ ಮೈತ್ರಿ ರಾಜಕೀಯ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಬಿಜೆಪಿ-ಜಾ.ದಳದ ಮೈತ್ರಿ ರಾಜ್ಯ ರಾಜಕೀಯದ ದೊಡ್ಡ ವಿದ್ಯಮಾನ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜಾ.ದಳ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದವು. ಆ ಮೂಲಕ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಿದವು. 2019ರ ಚುನಾವಣೆಯಲ್ಲಿ ಜಾ.ದಳ-ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತು. ದೀರ್ಘಕಾಲದ ಮೈತ್ರಿಯ ಉದ್ದೇಶದೊಂದಿಗೆ ಜಾ.ದಳ ಹಾಗೂ ಬಿಜೆಪಿ ರಾಜ್ಯದಲ್ಲಿ ದೋಸ್ತಿ ಮಾಡಿಕೊಂಡಿದೆ. ಈ ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜಾ.ದಳದ ದೋಸ್ತಿಗೆ ಉತ್ತಮ ಫಲಿತಾಂಶ ನೀಡಿತು. ಗ್ಯಾರಂಟಿಗಳ ಜನಪ್ರಿಯತೆ ಮಧ್ಯೆ ಆಡಳಿತಾರೂಢ ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಒಂದಂಕಿಗೆ ಕಟ್ಟಿಹಾಕುವಲ್ಲಿ ಮೈತ್ರಿ ಯಶಸ್ಸನ್ನು ಕಂಡಿತು.
ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ; ಸುಧಾರಣೆಯಾದ ಕಾಂಗ್ರೆಸ್
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಆಡಳಿತಾರೂಢ ಕಾಂಗ್ರೆಸ್, ವರ್ಷದ ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತು. ಬಿಜೆಪಿ 17 ಕ್ಷೇತ್ರಗಳಲ್ಲಿ ಗೆದ್ದರೆ ಜಾದಳವು 2, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆಲುವು ಕಂಡಿತು. ಕಳೆದ 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ತನ್ನ ಗೆಲುವಿನ ಸಂಖ್ಯೆ ಹೆಚ್ಚಿಸಿಕೊಂಡಿದೆ. ಆದರೆ, ವಿಧಾನಸಭೆ ಚುನಾವಣೆಯ ಯಶಸ್ಸನ್ನು ಪುನಾರಾವರ್ತಿಸಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ವಿಶೇಷವಾಗಿ ಗಮನಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕುತೂಹಲ ಕೆರಳಿಸಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸೋಲುವ ಮೂಲಕ ಅಚ್ಚರಿಯ ಫಲಿತಾಂಶ ಹೊರಬಂದಿತ್ತು. ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಡಿ.ಕೆ. ಸುರೇಶ್ ಅವರನ್ನು ಸೋಲಿಸಿ ಕಾಂಗ್ರೆಸ್‌ಗೆ ದೊಡ್ಡ ಶಾಕ್ ಕೊಟ್ಟರು. ಮತ್ತೊಂದು ಹೈ ಪ್ರೊಫೈಲ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾದರು.
ಎಚ್‌ಡಿಕೆ ವಿರುದ್ಧ ಡಿಕೆಶಿ ಕೈ ಮೇಲು
ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆಶಿಯ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ ಡಿ.ಕೆ. ಬ್ರದರ್ಸ್ ತಂತ್ರಗಾರಿಕೆ ಫಲ ನೀಡಿತು. ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಸೆಳೆದು ಟಿಕೆಟ್ ನೀಡಿ ಚನ್ನಪಟ್ಟಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಖಾಡ ಶಿಗ್ಗಾಂವಿ ಉಪಸಮರದಲ್ಲಿ ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಅಚ್ಚರಿ ಮೂಡಿಸಿತು. ಸಂಡೂರಿನಲ್ಲೂ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ಅವರು ಗೆಲುವು ಸಾಧಿಸುವ ಮೂಲಕ ಮೂರೂ ಕ್ಷೇತ್ರಗಳ ಉಪಸಮರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿತು.
ಬಣ ರಾಜಕೀಯದ ಮೇಲಾಟ
ಬಣ ರಾಜಕೀಯ ಬಿಜೆಪಿ, ಕಾಂಗ್ರೆಸ್ ಹಾಗೂ ಜಾ.ದಳಲ್ಲಿ ಬಣ ರಾಜಕೀಯದ ಮೇಲಾಟ ಕಂಡುಬಂತು. ಬಿಜೆಪಿಯಲ್ಲಿ ವಿಜಯೇಂದ್ರ ಟೀಂ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಮಧ್ಯೆ ಬಹಿರಂಗ ವಾಕ್ಸಮರ ನಡೆಯಿತು. ಕುಟುಂಬ ರಾಜಕಾರಣದ ವಿರುದ್ಧ ಸೆಟೆದು ನಿಂತ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದರು. ಯತ್ನಾಳ್ ಬಂಡಾಯದ ಟೀಂಗೆ ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಹರೀಶ್, ಅರವಿಂದ ಲಿಂಬಾವಳಿ ಸೇರಿಕೊಂಡರು. ಇತ್ತ ವಿಜಯೇಂದ್ರ ಪರ ಮಾಜಿ ಶಾಸಕ ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ.ಪಾಟೀಲ್ ಸೇರಿದಂತೆ ಕೆಲ ಮುಖಂಡರು ಬೆಂಬಲವಾಗಿ ನಿಂತರು.
ಪಕ್ಷಾಂತರ ರಾಜಕೀಯ
2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಸಿಟ್ಟಿನಲ್ಲಿ ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್, 2024ರಲ್ಲಿ ಮತ್ತೆ ಮಾತೃಪಕ್ಷ ಬಿಜೆಪಿಗೆ ಮರಳಿ, ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಗೆದ್ದರು. ಇತ್ತ ತುಮಕೂರು ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದರಿಂದ ಮುದ್ದಹನುಮೇಗೌಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆದರೆ, ಚುನಾವಣೆಯಲ್ಲಿ ಕ್ಷೇತ್ರದ ಜನರು ಮುದ್ದಹನುಮೇಗೌಡ ಅವರ ಹಿಡಿಯಲಿಲ್ಲ. ಕೊಪ್ಪಳದ ಮಾಜಿ ಸಂಸದ ಕರಡಿ ಸಂಗಣ್ಣಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣ ಕಾಂಗ್ರೆಸ್ ಸೇರಿದ್ದರು. ಅದೇ ರೀತಿ ಜಯಪ್ರಕಾಶ್ ಹೆಗ್ಡೆ ಟಿಕೆಟ್ ಸಿಗದೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.
ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನ
ವಿಶ್ವದ ದೊಡ್ಡಣ್ಣ ಎಂದೇ ಕರೆಯಿಸಿಕೊಳ್ಳುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರು. ನವೆಂಬರ್ ತಿಂಗಳಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಾರ್ಟಿಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಪರಾಭವಗೊಳಿಸಿ ಅಧಿಕಾರಕ್ಕೇರಿದರು.
ದಳಪತಿ ವರ್ಸಸ್ ಜಿಟಿಡಿ
ಇತ್ತ ಜಾ.ದಳದ ಪಕ್ಷದಲ್ಲೂ ಬಣ ರಾಜಕೀಯ ಜೋರಾಗಿಯೇ ಸದ್ದಾಯಿತು. ಹಿರಿಯ ನಾಯಕ ಜಿ.ಟಿ.ದೇವೇಗೌಡರು ಬಹಿರಂಗವಾಗಿ ಪಕ್ಷದ ನಾಯಕತ್ವದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಪಕದ ಪ್ರಮುಖ ತೀರ್ಮಾನಗಳಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಸಿದ್ದು-ಡಿಕೆಶಿ ಬಣಗಳ ಮುಸುಕಿನ ಗುದ್ದಾಟ
ಕಾಂಗ್ರೆಸ್‌ನಲ್ಲೂ ಬಣ ರಾಜಕೀಯದ ಮುಸುಕಿನ ಗುದ್ದಾಟ ಜೋರಾಗೇ ಸದ್ದು ಮಾಡಿತು. ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಮುಸುಕಿನ ಗುದ್ದಾಟ ಮುನ್ನೆಲೆಗೆ ಬಂತು. ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ ತಂಡಗಳು ಪ್ರತ್ಯೇಕ ಸಭೆಗಳನ್ನು ನಡೆಸಿ ಕಾಂಗ್ರೆಸ್ ಗುಂಪುಗಾರಿಕೆ ಸುದ್ದಿಯಾಯಿತು. ಹೈಕಮಾಂಡ್ ತಪರಾಕಿ ಬಳಿಕ ಬಣಗಳು ಮೌನಕ್ಕೆ ಶರಣಾದವು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…