ಡಾ.ರಘುಪತಿ, ಚಿನಾಕಳ್ಳಿ
ಅದು ೧೯೧೮ರ ಆಸುಪಾಸು. ಒಂದು ಕಡೆ ಖೇಡಾ ಸತ್ಯಾಗ್ರಹದ ಭರಾಟೆಯಲ್ಲಿ ದೇಶ ಮುಳುಗೇಳುತ್ತಿರುತ್ತದೆ.ಇನ್ನೊಂದೆಡೆ ರೌಲತ್ ಕಾಯ್ದೆಯ ಅಮಾನುಷ ಕ್ರಮಗಳನ್ನು ಪ್ರತಿರೋಧಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿರುತ್ತದೆ. ಆದರೆ ಗಾಂಧಿ ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಒಂದು ದೊಡ್ಡ ಚಳವಳಿಯ ಪೂರ್ವ ತಯಾರಿಗೆ ಪ್ರವಾಸದಲ್ಲಿರುತ್ತಾರೆ.
ಮಾತೆರಾನ್ ಎಂಬ ಹಳ್ಳಿಯಲ್ಲಿದ್ದಾಗ ಅಲ್ಲಿಯ ಗಡುಸು ನೀರಿನಿಂದ ಅವರಿಗೆ ಭೇದಿಯಾಗಿ ಮಲವಿಸರ್ಜನೆಯ ಜಾಗದಲ್ಲಿ ಉರಿ ಕಾಣಿಸಿ ಹಿಂಸೆ ಅನುಭವಿಸುತ್ತಿರುತ್ತಾರೆ. ಮೊದಲೇ ಮಲಬದ್ಧತೆಯಿಂದ ತೀವ್ರವಾಗಿ ನರಳುತ್ತಿದ್ದ ಗಾಂಧೀಜಿಗೆ ಅದು Fissure ಸ್ಥಿತಿಗೆ ಹೋಗಿದ್ದು ಆತಂಕ ಉಂಟು ಮಾಡುತ್ತದೆ. ಊಟ ಮಾಡುವುದೇ ಕಷ್ಟವಾಗುತ್ತದೆ. ಹಾಗಾಗಿ ಪೂರ್ವ ಯೋಜಿತ ವೇಳಾಪಟ್ಟಿಗಿಂತ ಮೊದಲೇ ಆ ಊರನ್ನು ಬಿಟ್ಟು ದೌಡಾಯಿಸುತ್ತಾರೆ. ಆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬರುವುದಿಲ್ಲ. ಆಗ ಅವರ ಸಹ ಹೋರಾಟಗಾರ ಶಂಕರ್ ಲಾಲ್ ಬಂಕರ್, ಆಧುನಿಕ ವೈದ್ಯ ಪದ್ಧತಿ ಪ್ರಾಕ್ಟೀಸ್ ಮಾಡುವ ಡಾಕ್ಟರ್ ದಲಾಲ್ ಅವರನ್ನು ಕರೆತರುತ್ತಾರೆ.
ಗಾಂಧಿ ದೇಹದ ಸ್ಥಿತಿಗತಿ ಪರೀಕ್ಷಿಸಿದ ಡಾ.ದಲಾಲ್ ಅಂತಿಮವಾಗಿ ಆಹಾರ ಕ್ರಮದ ಬಗ್ಗೆ ಸೂಚನೆಗಳನ್ನು ನೀಡುತ್ತಾ ಗಾಂಧಿ ಹಾಲನ್ನು ಕಡ್ಡಾಯವಾಗಿ ಸೇವಿಸಬೇಕು, ಇಲ್ಲದಿದ್ದರೆ ದೇಹದ ಆರೋಗ್ಯ ಸುಧಾರಣೆ ಕಷ್ಟ ಎನ್ನುತ್ತಾರೆ. ಆಗ ಗಾಂಽ ತಾನು ಹಾಲನ್ನು ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದನ್ನು ನೆನಪಿಸುತ್ತಾರೆ. ಹಸುವಿನ ಹಾಲು, ಹಿಂಸೆಯ ಸಂಕೇತ. ಹಾಗೆಯೇ ಎಮ್ಮೆ ಹಾಲು ಕೂಡ. ಮತ್ತೆ ಹಾಲು ಮನುಷ್ಯನಿಗೆ ಸಹಜ ಆಯ್ಕೆಯೂ ಅಲ್ಲ, ಅನಿವಾರ್ಯವೂ ಅಲ್ಲ ಎನ್ನುವ ಗಾಂಧಿಯ ಮನಸ್ಥಿತಿ ಮತ್ತು ಹಾಲಿನ ಸಿದ್ಧಾಂತ ಕೇಳಿ ಡಾಕ್ಟರ್ ದಲಾಲ್ ದಿಗ್ಮೂಢರಾಗುತ್ತಾರೆ. ಅಲ್ಲಿಗೆ ಬಂದ ಕಸ್ತೂರ ಬಾ ‘ಆಯ್ತು, ಮೇಕೆ ಹಾಲು ಯಾಕಾಗಬಾರದು?’ ಎಂದು ಅವರ ಚರ್ಚೆಗೆ ಮತ್ತೊಂದು ಆಯಾಮ ನೀಡುತ್ತಾರೆ.
ಕಸ್ತೂರ ಬಾ ಸಲಹೆ ಕೇಳಿ ಡಾಕ್ಟರ್ ದಲಾಲ್‌ಗೆ ಕತ್ತಲಲ್ಲಿ ಮಿಂಚು ಹೊಳೆದಂತಾಗುತ್ತದೆ. ಮೇಕೆಯ ಹಾಲು ಕುಡಿಯಲು ಆರಂಭಿಸಿದರೆ ಚಿಕಿತ್ಸೆ ಪ್ರಾರಂಭಿಸುವುದಾಗಿ ದಲಾಲ್ ಒತ್ತಾಯ ಮಾಡುತ್ತಾರೆ. ಗಾಂಧಿಗೆ ಸತ್ಯ ಮತ್ತು ಅಹಿಂಸೆ ಜೋಡೆತ್ತುಗಳು. ಅವುಗಳಲ್ಲಿ ಒಂದನ್ನೊಂದು ಬಿಟ್ಟು ಗಾಂಧಿಯ ಹೋರಾಟದ ಬಾಳ ಬಂಡಿ ಮುನ್ನುಗ್ಗುವುದಿಲ್ಲ. ಆಣೆ, ಪ್ರಮಾಣ, ವಚನ ನೀಡಿರುವುದು ಸತ್ಯ. ಅದರ ಹಿಂದಿರುವ ನಿಲುವು ಕೂಡ ಸಮರ್ಥನೀಯ. ಆದರೆ ತಾನು ಕೈಗೊಂಡಿರುವ ಭಾರತ ಬಿಡುಗಡೆಯ ಹೋರಾಟದ ಹಿನ್ನೆಲೆಯಲ್ಲಿ ಹಾಲಿನ ಬಗೆಗಿನ ಪ್ರತಿಜ್ಞೆ ಬಗ್ಗೆ ಚಿಂತಿಸತೊಡಗಿದರು. ಅವರು ಪ್ರಮಾಣ ಮಾಡುವಾಗ ಅವರ ಮನಸ್ಸಿನಲ್ಲಿ ಹಸು, ಎಮ್ಮೆ ಇದ್ದವೇ ಹೊರತು ಆಡು, ಕುರಿ ಇರಲಿಲ್ಲ. ಹಾಗಾಗಿ ಆಡಿನ ಹಾಲು ಕುಡಿಯುವುದು ಆಣೆಯ ನಿರಾಕರಣೆಯಲ್ಲ. ಆದರೆ ಪ್ರತಿಜ್ಞೆಯ ಸ್ಪಿರಿಟ್ ಮಾತ್ರ ಹಾಲಿನ ಸೇವನೆಗೆ ವಿರುದ್ಧವಾದದ್ದು. ಸತ್ಯ ಯಾವಾಗಲೂ ಪದ ಮತ್ತು ಅಂತಃಸತ್ವ ಎರಡರಲ್ಲೂ ಮನೆ ಮಾಡಿರುತ್ತದೆ. ಹೀಗೆ ಯೋಚಿಸುತ್ತಿದ್ದ ಗಾಂಧಿಯ ದೇಹದ ಸ್ಥಿತಿ ಗಂಭೀರವಾಗುತ್ತಾ ಸಾವು ಬದುಕಿನ ಹೋರಾಟಕ್ಕೆ ಬಂದು ನಿಂತಿತು. ಅವರನ್ನು ಕೈಬೀಸಿ ಕರೆಯುತ್ತಿರುವ ಸ್ವಾತಂತ್ರ್ಯ ಸಂಗ್ರಾಮ ಕೊನೆಗೂ ಒಂದು ನಿಲುವಿಗೆ ಬರುವಂತೆ ಒತ್ತಾಯಿಸಿತು. ಹಾಲಿನ ಸೇವನೆ ವಿರುದ್ಧದ ಪ್ರತಿಜ್ಞೆಯನ್ನು ಮುರಿದು ತನ್ನನ್ನು ದೊಡ್ಡ ಉದ್ದೇಶಕ್ಕೆ ತೆತ್ತುಕೊಳ್ಳಲು ಅಂತಿಮವಾಗಿ ನಿರ್ಣಯಿಸಿದರು.
ನಂತರ ಆಡು ಮತ್ತು ಆಡಿನ ಹಾಲು ಗಾಂಧಿಯ ಬದುಕಿನ ಭಾಗವಾಗಿಯೇ ಆಗಿ ಹೋಯಿತು. ಅಲ್ಲಿಂದಾಚೆಗೆ ಗಾಂಧಿ ಎಲ್ಲಿಗೆ ಹೋದರೂ ಮೇಕೆಯನ್ನು ಅವರ ಜೊತೆಯಲ್ಲಿ ಒಯ್ಯುತ್ತಿರುತ್ತಾರೆ. ಆಡಿನ ಲಂಡನ್ ಪಯಣ ೧೯೩೧ರಲ್ಲಿ ಎರಡನೇ ದುಂಡು ಮೇಜಿನ ಪರಿಷತ್ ಲಂಡನ್‌ನಲ್ಲಿ ಆಯೋಜಿಸಲಾಗಿರುತ್ತದೆ. ಈಗಾಗಲೇ ಮೊದಲ ಸುತ್ತಿನ ಸಭೆಗೆ ಗಾಂಧಿ ಗೈರಾಗಿರುತ್ತಾರೆ. ಗಾಂಧಿಗೆ ಹೋಗಬೇಕಾದ ಅನಿವಾರ್ಯದ ಜೊತೆ ಹಡಗಿನ ದೀರ್ಘ ಪ್ರಯಾಣದಲ್ಲಿ ಕಾಪಾಡಿಕೊಳ್ಳಬೇಕಾದ ಆರೋಗ್ಯದ ಕಾಳಜಿಯೂ ಮುಖ್ಯವಾಗಿರುತ್ತದೆ. ಗಾಂಧಿ ತಂಡ ಎಸ್‌ಎಸ್ ರಾಜಪುಠಾಣ ಎಂಬ ಹಡಗಿನಲ್ಲಿ ಬೊಂಬಾಯಿಯಿಂದ ಲಂಡನಿಗೆ ದೀರ್ಘ ಪ್ರವಾಸ ಕೈಗೊಳ್ಳುತ್ತದೆ.
ಆ ಹಡಗಿನ ಕೆಳ ಅಂತಸ್ತಿನಲ್ಲಿ ಮೇಕೆಗೆ ವಸತಿ ವ್ಯವಸ್ಥೆ ಆಗಿರುತ್ತದೆ. ಅಶಾಂತ ಸಮುದ್ರದ ಕುಲುಕಾಟಕ್ಕೆ ಮೇಕೆ ಒಗ್ಗುತ್ತದೆ. ಒಂದು ಸಾರಿ ಅನಾರೋಗ್ಯಕ್ಕೀಡಾದರೂ ಬಿಸಿಲನಾಡಿನಿಂದ ಚಳಿ ಸೀಮೆಗೆ ಸಲೀಸಾಗಿ ಸಾಗುತ್ತದೆ. ಈಜಿಪ್ಟಿನಲ್ಲಿ ಗಾಂಧಿಯ ಬೆಂಬಲಿಗರು ಮೇಕೆಯ ಹಾಲಿನ ಕೊಡಪಾನಗಳೊಂದಿಗೆ ಸ್ವಾಗತಿಸುತ್ತಾರೆ. ಪ್ಯಾರಿಸ್‌ನಲ್ಲಿ ಪೊಲೀಸರೊಂದಿಗೆ ಉಂಟಾದ ಗೊಂದಲದಲ್ಲಿ ಮೇಕೆ ಪ್ಲಾಟ್ ಫಾರ್ಮ್‌ನಲ್ಲಿ ಇಳಿಯಲು ಅವಕಾಶ ಕೊಡುವುದಿಲ್ಲ. ಹಾಗಾಗಿ ಆ ದಿನ ಗಾಂಧಿಗೆ ಮೇಕೆಯ ಹಾಲು ತಪ್ಪುತ್ತದೆ ಎಂದು ಆಡಿನ ಮೇಲ್ವಿಚಾರಕಿಯಾಗಿ ಪರಿವರ್ತನೆಗೊಂಡ ಮೀರಾ ಬೆನ್ ತಮ್ಮ ನೆನಪಿನ ಪುಸ್ತಕ ‘ಸ್ಪಿರಿಟ್ ಆಫ್ ಪಿಲ್ ಗ್ರಿಮೇಜ್’ನಲ್ಲಿ ದಾಖಲಿಸಿದ್ದಾರೆ.
ಲಂಡನ್ನಿನಲ್ಲಿ ಮೇಕೆಯೊಂದಿಗಿನ ಗಾಂಧಿ ಟೀಮ್‌ಗೆ ರಾಜೋಚಿತ ಸ್ವಾಗತ ದೊರೆಯುತ್ತದೆ. ಇಂದು ನಾವು ಎಲ್ಲೆಡೆಯೂ ಕಾಣುತ್ತಿರುವ ಗಾಂಧಿಯೊಂದಿಗಿನ ಆಡಿನ ಫೋಟೋವೇ ಅಂದು ಜಾಗತಿಕ ಪತ್ರಿಕೆಗಳ ಮುಖಪುಟ ಅಲಂಕರಿಸಿತ್ತು. ಭಾರತದಲ್ಲಿ ಶಾರದಾ ಎಂಬ ಮೇಕೆಗೆ ಗಾಂಧಿಯೊಂದಿಗೆ ಕಾಶ್ಮೀರಕ್ಕೂ ಹೋಗಿಬರುವಅವಕಾಶ ಒದಗಿಬಂದಿತ್ತು. ಆಗಿನ ಯುವಕ ಮುಂದೆ ಸಾಹಿತ್ಯ ಸಂವೇದನೆಯ ರಾಜಕಾರಣ ಮಾಡಿದ ಕರಣ್ ಸಿಂಗ್ ಆ ಮೇಕೆಗೆ ಕಾಡಿನ ತುಳಸಿಯನ್ನು ತರಿಸಿ ವಿಶೇಷ ಮೇವಾಗಿ ಕೊಡಿಸುತ್ತಾರೆ. ಹೀಗೆ ಗಾಂಧಿಯ ಆಡಿನ ಬಗ್ಗೆ ಹಲವು ದಾಖಲೆಗಳಿವೆ. ಅವುಗಳಲ್ಲಿ ಗಾಂಧಿ ಪ್ರವಾಸದಲ್ಲಿ ಮೇಕೆಗೆ ಬೇಕಾದ ವ್ಯವಸ್ಥೆ ಬಗ್ಗೆ ವೈಸರಾಯ್ ಆದ ಸರ್ ಸ್ಟಾಫೋರ್ಡ್ ಕ್ರಿಪ್ಸ್‌ನೊಂದಿಗೆ ನಡೆಸಿದ ಪತ್ರ ವ್ಯವಹಾರಗಳು ಮುಖ್ಯವಾಗಿವೆ.
ಕ್ವಿಟ್ ಇಂಡಿಯಾ ಚಳವಳಿ ನಂತರ ಗಾಂಧಿ ಯರವಾಡ ಜೈಲಿನಲ್ಲಿದ್ದಾಗ ಮೀರಾ ಬೆನ್ ಅವರ ಕಾಳಜಿ ಜೈಲುಗಳಲ್ಲಿದ್ದ ಆಡುಗಳ ಕುರಿತಾಗಿರುತ್ತಿತ್ತು. ಇತಿಹಾಸ ಪ್ರಸಿದ್ಧ ಗಾಂಧಿ- ಇರ್ವಿನ್ ಮಾತುಕತೆ ಇಂದಿನ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿತ್ತು.ಸುದೀರ್ಘವಾದ ಮಾತುಕತೆಗಳ ನಡುವೆಯೂ ಮೇಕೆ ಹಾಲಿನ ಚಂಬುಗಳೊಂದಿಗೆ ಅಲ್ಲಿಗೆ ಹೋಗಿ ಖರ್ಜೂರಗಳ ಮೇಲೆ ಹಾಲನ್ನು ಸುರಿದುಕೊಡುವುದನ್ನು ತಪ್ಪಿಸುತ್ತಿರಲಿಲ್ಲ ಮೀರಾ ಬೆನ್. ಬ್ರಿಟಿಷ್ ಸಾಮ್ರಾಜ್ಯದ ಹಲವು ಪಾಶ್ಚಿಮಾತ್ಯ ಅಭಿವೃದ್ಧಿ ಮಾದರಿಗಳ ವಿರುದ್ಧ ಅಹಿಂಸೆ ಸತ್ಯಗಳ ಹೊಸ ಹತಾರಗಳೊಂದಿಗೆ ಸೆಣಸಿದ ಗಾಂಧಿಗೆ ಶಕ್ತಿ ನೀಡಿದ ಮೇಕೆಯ ಮಹತ್ವ ಇಂದು ನಮಗೆ ಕಾಣುತ್ತಿಲ್ಲವೇಕೆ? ಗಾಂಧಿಯನ್ನು ಬದುಕಿಸಿ ಬೆಳಗಿಸಿದ ಆಡು ಮೇಕೆಗಳು ಚರಿತ್ರೆಯಲ್ಲಿ ಮತ್ತು ಪ್ರಸ್ತುತ ಭಾರತದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಯಾಕೆ? ಕೇವಲ ರಾಜಕೀಯ ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದು ಗಾಂಧಿಗೆ ಮುಖ್ಯವಾಗಿರಲಿಲ್ಲ. ಪಶ್ಚಿಮದ ಅಭಿವೃದ್ಧಿ ಮಾದರಿಗಳಿಗೆ ಪರ್ಯಾಯವಾಗಿ ಚರಕ, ಖಾದಿ, ಉಪ್ಪು ಬಳಸಿದ ಗಾಂಧಿಗೆ ಅವುಗಳಂತೆ ಮೇಕೆ ಸಹ ಮುಖ್ಯವಾಗಿತ್ತು. ಇಂದಿಗೂ ದಲಿತ ಮತ್ತು ಮುಸ್ಲಿಂಕೇರಿಗಳಲ್ಲಿ ಕಾಣುವ ಏಕೈಕ ಸಾಕುಪ್ರಾಣಿ ಮೇಕೆ. ಈ ದೇಶದ ಬಹುತೇಕ ತಳಸಮುದಾಯಗಳಿಗೆ ಭೂಹೀನರಿಗೆ ಗ್ರಾಮೀಣ ಕಸುಬುಗಳು ವಿಶೇಷವಾಗಿ ಪಶುಪಾಲನೆ ಗ್ರಾಮೀಣ ಆರ್ಥಿಕತೆಯನ್ನು ಪೊರೆಯುವ ಸಾಧನವಾಗಿದೆ ಎಂಬುದನ್ನು ಬಲ್ಲವರಾಗಿದ್ದರು ಗಾಂಧಿ. ಅದರ ಸಂಕೇತವಾಗಿಯೇ ಮೇಕೆಯನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಇನ್ನೂ ಆಳವಾಗಿ ನೋಡುವುದಾದರೆ ಗ್ರಾಮೀಣ ಭಾರತದಲ್ಲಿ ಬಹುಸಂಖ್ಯಾತ ರೈತರ ಸಂಕೇತ ನೇಗಿಲು. ಆದರೆ ಗ್ರಾಮೀಣ ಲೋಕದಲ್ಲಿ ಭೂಹೀನ ಕುಶಲ ಕಸುಬಗಳಾಧಾರಿತ ಸಮುದಾಯಗಳ ಅಸ್ಮಿತೆ ಕಾಪಾಡಲು ನೇಗಿಲ ಬದಲಾಗಿ ಚರಕ ಹಿಡಿದರು ಗಾಂಧಿ.
ಈ ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿದರೆ ಗಾಂಧಿಯ ಜೀವನಶೈಲಿಯಂತೆಯೇ ಇದೆಯಲ್ಲವೆ. ಪಶುಪಾಲಕ ಸಮುದಾಯಗಳ ಸುಸ್ಥಿರ ಅಭಿವೃದ್ಧಿ ಮಾದರಿಗಳಲ್ಲಿ ಗಾಂಧಿತನವಿದೆ.
” ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ, ಮೇಕೆ”
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…
ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…
ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…