ಪಿ.ಜೆ.ರಾಘವೇಂದ್ರ, ನ್ಯಾಯವಾದಿ
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರು ನೀಡಿದ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದೊಂದು ಮಾನಹಾನಿ ಪ್ರಕರಣ! ಇಂತಹ ಪ್ರಕರಣಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರ ಪೊಲೀಸರಿಗಿಲ್ಲ. ನಟೇಶ್ ಅಥವಾ ಶಾಲಿನಿ ರಜನೀಶ್ ಅವರ ವಿರುದ್ಧ ಕೃಷ್ಣ ಅವರು ಯಾವುದೇ ರೀತಿಯ ಅಪಪ್ರಚಾರ ಅಥವಾ ಸುಳ್ಳು ಆರೋಪ ಮಾಡಿ ಇದರಿಂದ ನಟೇಶ್ ಅಥವಾ ಶಾಲಿನಿ ರಜನೀಶ್ ಅವರಿಗೆ ಮಾನಹಾನಿ ಆಗಿದ್ದರೆ ಇಂತಹ ಅವಹೇಳನಕಾರಿ ಅಪಪ್ರಚಾರ ಮಾಡಿದ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಮಾನಹಾನಿ ಪ್ರಕರಣಗಳಲ್ಲಿ ಪೊಲೀಸರು ಮೂಗು ತೂರಿಸುವಂತಿಲ್ಲ.
ಯಾವುದೇ ವ್ಯಕ್ತಿ ಬೇರೆಯವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದರೆ ಅಥವಾ ಮಾನಹಾನಿಯಾಗುವಂತಹ ವಿಷಯವನ್ನು ಪ್ರಕಟಿಸಿದರೆ ಅಥವಾ ಅವಹೇಳನವಾಗುವಂತೆ ಅಭಿಪ್ರಾಯ ವ್ಯಕ್ತಪಡಿಸಿದರೆ ಅದು ಭಾರತೀಯ ನ್ಯಾಯ ಸಂಹಿತೆ, ೨೦೨೩ ಸೆಕ್ಷನ್ ೩೫೬(೧) ರ ಪ್ರಕಾರ ಶಿಕ್ಷಾರ್ಹ ಅಪರಾಧ. ಇದು ಜಾಮೀನು ನೀಡಬಹುದಾದ (ಬೇಲಬಲ್) ಅಪರಾಧ ಹಾಗೂ ಅಸಂಜ್ಞೇಯ (ನಾನ್ ಕಾಗ್ನಿಸೆಬಲ್) ಅಪರಾಧ. ಹಾಗಾಗಿ ಆರೋಪಿಗಳನ್ನು ಬಂಧಿಸುವುದಾಗಲೀ, ಠಾಣೆಗೆ ಎಳೆದೊಯ್ಯುವುದಾಗಲೀ, ಜೈಲಿಗಟ್ಟುವುದಾಗಲೀ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.ಯಾವುದೇ ವ್ಯಕ್ತಿ ಬೇರೆಯವರಿಗೆ ಅಪಮಾನವಾಗುವಂತಹ ರೀತಿಯಲ್ಲಿ ಅವಹೇಳನ ಮಾಡಿದರೆ ಅದರಿಂದ ನೊಂದವರು ನಷ್ಟ ಪರಿಹಾರ ನೀಡುವಂತೆ ಕೋರಿ ಸಿವಿಲ್ ದಾವೆ (ಮಾನನಷ್ಟ ಮೊಕದ್ದಮೆ)ಯನ್ನೂ ಹೂಡಬಹುದು. ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಆರೋಪಿತನ ವಿರುದ್ಧ ಖಾಸಗಿ ದೂರನ್ನೂ ಸಲ್ಲಿಸಬಹುದು. ಯಾರಿಗೆ ಮಾನಹಾನಿ ಉಂಟಾಗಿದೆಯೋ ಅವರೇ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ದೂರು ಸಲ್ಲಿಸಬೇಕಾಗುತ್ತದೆ.
ಅಕಸ್ಮಾತ್ ಮಾನಹಾನಿಗೊಳಗಾದವರು ಅಪ್ರಾಪ್ತ ವಯಸ್ಕರಾಗಿದ್ದರೆ, ಮಾನಸಿಕ ಅಸ್ವಸ್ಥರಾಗಿದ್ದರೆ, ದಡ್ಡರಾಗಿದ್ದರೆ ಅಥವಾ ಮಹಿಳೆಯಾಗಿದ್ದು ಆಕೆಯು ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ವಯ ದೂರು ನೀಡಲಾಗದಿದ್ದರೆ ಅಂತಹವರ ಪರವಾಗಿ ಅವರ ಪೋಷಕರು ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ವಿರುದ್ಧ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಬಹುದು.
ದೂರು ದಾಖಲಿಸಿಕೊಳ್ಳುವ ನ್ಯಾಯಾಲಯವು ದೂರುದಾರ ಮತ್ತು ಸಾಕ್ಷಿದಾರರ ಹೇಳಿಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗುವಂತೆ ಆಪಾದಿತರಿಗೆ ಸಮನ್ಸ್ ನೀಡುತ್ತದೆ. ನಂತರ ಆಪಾದಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ವಿಚಾರಣೆ ನಡೆಸುತ್ತದೆ.
ಆರೋಪಿಯು ಪ್ರಧಾನಿಯ ವಿರುದ್ಧವಾಗಲೀ, ರಾಷ್ಟ್ರಪತಿಯ ವಿರುದ್ಧವಾಗಲೀ, ಉಪ ರಾಷ್ಟ್ರಪತಿಯ ವಿರುದ್ಧವಾಗಲೀ, ರಾಜ್ಯಪಾಲರ ವಿರುದ್ಧವಾಗಲೀ, ಯಾವುದೇ ಸರ್ಕಾರ ಅಥವಾ ಯಾವುದೇ ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧವಾಗಲೀ ಮಾನಹಾನಿಯಾಗುವಂತಹ ಹೇಳಿಕೆ ನೀಡಿದರೆ ಅಥವಾ ಪ್ರಕಟಣೆ ನೀಡಿದರೆ ಅಥವಾ ಅಭಿಪ್ರಾಯ ವ್ಯಕ್ತಪಡಿಸಿದರೆ ಅಂತಹವರ ಪರವಾಗಿ ಸರ್ಕಾರಿ ಅಭಿಯೋಜಕರೇ ಆಪಾದಿತರ ವಿರುದ್ಧ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲುಸಬಹುದು. ಆದರೆ ದೂರು ನೀಡುವ ಮುನ್ನ ಸರ್ಕಾರದ ಪೂರ್ವಾನುಮತಿ ಅವಶ್ಯ
ಮಾನಹಾನಿ ಪ್ರಕರಣದ ಶಿಕ್ಷೆ: ಮಾನಹಾನಿ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ, ೨೦೨೩ ಸೆಕ್ಷನ್ ೩೫೬(೨) ರ ಪ್ರಕಾರ ಎರಡು ವರ್ಷಗಳವರೆಗಿನ ಸಾಧಾರಣ ಸೆರೆವಾಸ ಅಥವಾ ದಂಡ ಅಥವಾ ದಂಡ ಮತ್ತು ಸೆರೆವಾಸ ಇವೆರಡನ್ನೂ ವಿಧಿಸಬಹುದು. ಜೊತೆಗೆ ಸಮುದಾಯ ಸೇವೆಯ ದಂಡವನ್ನೂ ವಿಽಸಬಹುದು.
ಸ್ನೇಹಮಯಿ ಕೃಷ್ಣ ಬಂಧನ ಕಾನೂನು ಬಾಹಿರ:
ಇದೇ ಸ್ನೇಹಮಯಿ ಕೃಷ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಹಾಗೂ ಭಾವಮೈದುನನ ವಿರುದ್ಧ ಎಷ್ಟೇ ಗಂಭೀರ ಆರೋಪ ಮಾಡಿದ್ದರೂ ಕೂಡ ಮುಖ್ಯಮಂತ್ರಿ ಗಳಾಗಲೀ ಅವರ ಕುಟುಂಬದವರಾಗಲೀ ಪೊಲೀಸರಿಗೆ ದೂರು ನೀಡಲಿಲ್ಲ. ಏಕೆಂದರೆ ಅವರಿಗೆ ಗೊತ್ತಿತ್ತು, ಮಾನಹಾನಿ ಪ್ರಕರಣ ನ್ಯಾಯಾಲಯದಲ್ಲಿ ದಾಖಲಿಸಬೇಕಾಗುತ್ತದೆ ಎಂದು. ಐಪಿಎಸ್ ಅಧಿಕಾರಿ ರೂಪಾ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವಹೇಳನಕಾರಿ ಹೇಳಿಕೆ ನೀಡಿದುದರಿಂದ ರೂಪಾ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆಯೇ ಹೊರತು ಪೊಲೀಸ್ ಠಾಣೆಯ ಮೆಟ್ಟಿಲೇರಲಿಲ್ಲ. ಮಾನಹಾನಿ ಪ್ರಕರಣದ ಕಾನೂನು ಪ್ರಕ್ರಿಯೆ ಹೀಗಿರುವಾಗ ವಾರಂಟ್ ಇಲ್ಲದೆ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣರನ್ನು ಬಂಧಿಸಿ ವಶಕ್ಕೆ ಪಡೆದಿದ್ದೇ ಕಾನೂನುಬಾಹಿರ!
ನಟೇಶ್ ದೂರಿನಲ್ಲಿ ಏನಿತ್ತು?:
ನನ್ನ ಫೋಟೊ ಬಳಸಿಕೊಂಡು ನಕಲಿ ಆಡಿಯೊ ಹಾಗೂ ದಾಖಲೆ ಸೃಷ್ಟಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಕರ್ನಾಟಕ ಆಡಳಿತ ಸೇವೆಯ (ಕೆಎಎಸ್) ಹಿರಿಯ ಅಧಿಕಾರಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಡಿ ಬಿ ನಟೇಶ್ ದೂರು ಸಲ್ಲಿಸಿದ್ದರು. ಫೆಬ್ರವರಿ ೧೮ರಂದು ಬೆಂಗಳೂರು ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಸ್ನೇಹಮಯಿ ಕೃಷ್ಣ ಅವರು ನಟೇಶ್ ಅವರ ಫೋಟೋಗಳನ್ನು ಬಳಸಿಕೊಂಡು ನಕಲಿ ದಾಖಲೆಗಳು ಮತ್ತು ಆಡಿಯೋ ಕ್ಲಿಪ್ ಅನ್ನು ರಚಿಸಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿ, ಅಽಕಾರಿಯನ್ನು ಗುರಿಯಾಗಿಸಿಕೊಂಡು ಮಾನಹಾನಿಕರ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ಹಿನ್ನೆಲೆ:
ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಬಡ್ತಿ ಪಡೆಯುವುದಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲಂಚ ನೀಡಿದ್ದಾರೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಈ ಸಂಬಂಧ ನಟೇಶ್ ದೂರು ನೀಡಿದ್ದರು. ತನ್ನದಲ್ಲದ ಧ್ವನಿಯನ್ನು ಮೈಸೂರಿನಲ್ಲಿ ನಕಲಿ ಆಡಿಯೋ ಸೃಷ್ಟಿಸಿ ಜಾಲತಾಣದಲ್ಲಿ ಹರಿಯಬಿಟ್ಟು ಅಪಪ್ರಚಾರ ಮಾಡಿದ್ದಾರೆಂದು ಆರೋಪಿಸಿ ಸಿಸಿಬಿಗೆ ದೂರು ನೀಡಿದ್ದರು. ಈ ಸಂಬಂಧ ಐಟಿ ಆಕ್ಟ್ ಸೆಕ್ಷನ್ ಬಿಎನ್ ಎಸ್ ೩೩೫, ೩೩೬, ೩೪೦ ಮತ್ತು ೬೬ಡಿ, ೬೬ಸಿ ಅಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಸಿಸಿಬಿ ಪತ್ರಿಕಾ ಪ್ರಕಟಣೆ:
ಸ್ನೇಹಮಯಿ ಕೃಷ್ಣ ಬಂಧನದ ಬಗ್ಗೆ ಸಿಸಿಬಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಲಾಗಿತ್ತು ಎಂದು ತಿಳಿಸಿದೆ. ದೂರುದಾರರಾದ ಕೆಎಎಸ್ ಹಿರಿಯ ಅಧಿಕಾರಿ ಹಾಗೂ ಈ ಹಿಂದೆ ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಅವರು ನೀಡಿದ ದೂರಿನ ಮೇರೆಗೆ, ಮೈಸೂರು ನಿವಾಸಿ ಸ್ನೇಹಮಯಿ ಕೃಷ್ಣ ಎಂಬವರು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ದೂರುದಾರರ ಫೋಟೋ ಹಾಗೂ ನಕಲಿ ದಾಖಲೆಗಳನ್ನು ಹಾಗೂ ಧ್ವನಿ ಕ್ಲಿಪ್ ಅನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿ ದೂರುದಾರರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿರುವ ಕುರಿತು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಿನಾಂಕ ೧೮.೦೨.೨೦೨೬ ರಂದು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ತನಿಖೆ ವೇಳೆ ತನಿಖಾಽಕಾರಿಗಳು ದೂರುದಾರರಿಂದ ಹಾಗೂ ಸಾಮಾಜಿಕ ಜಾಲತಾಣದಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಧ್ವನಿ ಕ್ಲಿಪ್ ಕುರಿತು ತನಿಖೆ ನಡೆಸಿದ್ದಾರೆ. ಮಾನ್ಯ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಆರೋಪಿಯ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ. ಇದಲ್ಲದೆ, ಈ ಪ್ರಕರಣದ ಆರೋಪಿ ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಿ ಆರೋಪಿಯನ್ನು ಠಾಣೆಗೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿತ್ತು ಎಂದು ಸಿಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಬೆಂಗಳೂರು: ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ…
ಹಾಸನ: ರಸ್ತೆಯಲ್ಲಿ ಹಂಪ್ಸ್ ಕಾಣದೇ ದುರಂತ ಸಂಭವಿಸಿದ್ದು, ಸ್ಕೂಟರ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ…
ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಅರಮನೆ ನಗರಿ ಮೈಸೂರಿನ ಸೌಂದರ್ಯವನ್ನು ಹದಗೆಡಿಸುವಂತಹ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳ ಹಾವಳಿ ತಡೆಗಟ್ಟಲು ರೂಪಿಸಿರುವ…
ಸಿದ್ದರಾಮಯ್ಯರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಆಪತ್ತು ಎಂಬ ಆತಂಕ ಇಂತಹದೊಂದು ಪ್ರಶ್ನೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳೆಯಗಳಲ್ಲಿ…
ಅವಳಿ ತಾಲ್ಲೂಕುಗಳ ಹಲವೆಡೆ ಅವಾಂತರ; ಕಾವಲು ಹೊಸೂರು ಗ್ರಾಮದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲು ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…
ಎಸ್.ಎಸ್.ಭಟ್ ನಂಜನಗೂಡು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪೂರಕವಾಗಿ ೧೯೨೪ರಲ್ಲೇ ಆರಂಭವಾದ ಈ ಪ್ರೌಢಶಾಲೆ ಪ್ರಸ್ತುತ ಉದುರಿಬೀಳುವ ಹಂತದ ಗೋಡೆ ಹಾಗೂ ಮಳೆ…