ಆರ್.ಎ.ಚೇತನರಾಮ್, ಮೈಸೂರು
ಗುರುಚರಣ ಸ್ಪರ್ಶದಲಿ, ಭಯಭಕ್ತಿ ಸೇವೆಯಲಿ ಇದೆ ವಿದ್ಯೆ ಸಂಪ್ರಾಪ್ತಿ, ವಿನಯ ಸಂಸ್ಕಾರ ;ಗುರು ಶಿಷ್ಯ ಸಂಬಂಧ ನದಿಕಡಲ ಅನುಬಂಧ ; ಗುರುದೇವನಭಯವರ – ಮುದ್ದುರಾಮ ಸರಿಯಾದ ಗುರು ಸಿಕ್ಕಿ ಬಿಟ್ಟರೆ ಬದುಕು ಧನ್ಯ. ಆದರೆ ಸಿಗಬೇಕಲ್ಲ. ಸಿಕ್ಕಿದರೂ ನನ್ನನ್ನು ಶಿಷ್ಯನನ್ನಾಗಿಸಿಕೊಳ್ಳಲು ಒಪ್ಪ ಬೇಕಲ್ಲ. ಒಪ್ಪಿದರೂ ಬಿಡದೆ ದ್ರೋಣರಂತೆ ಹಿಡಿದು ಕಲಿಸಿ ಬೆಳೆಸಬೇಕಲ್ಲ. ಗುರುಗಳು ಕಲಿಸಿದರೂ ನಿರಂತರ ಯಶಸ್ಸಿನ ಕೊನೆಯವರೆಗೆ ಅವರ ಜೊತೆ ನಾವು ಶಿಷ್ಯರು ಇರಬೇಕಲ್ಲ. ಇದ್ದು ಆಸಕ್ತಿಯಿಂದ ಶರಣಾಗಿ ಕಲಿಯಬೇಕಲ್ಲ. ಇಬ್ಬರಲ್ಲೂ ಸಮಸ್ಯೆ ಇರುವುದರಿಂದ ಇಂದಿನ ದಿನಮಾನಗಳಲ್ಲಿ ಮಹಾಗುರುಗಳೂ ಮಹಾಶಿಷ್ಯರೂ ಒಬ್ಬರಿಗೊಬ್ಬರು ಸಿಗದೇ ಅರೆಬರೆಯ ಜ್ಞಾನ ಕೌಶಲ ನಮ್ಮದಾಗಿದೆ.
ಎಲ್ಲರೂ ಒಂದು ದಿನದ ಪಂದ್ಯವಾಡುವವರೇ. ಜ್ಞಾನದಲ್ಲೂ ಇದೇ ಆಟ. ಇವರು ಇಲ್ಲವಾದರೆ ಅವರು, ಅವರೂ ಇಲ್ಲವಾದರೆ ಮತ್ತೊಬ್ಬ ಗುರು. ಹಣ ನೀಡಿದರೆ ಬೇರೆ ಬೇರೆ ಗುರುಗಳು ಸಿಗುತ್ತಾರೆನ್ನುವ ಸ್ಥಿತಿಗೆ ಬಂದಿರುವ ಈ ಪರಿಸ್ಥಿತಿಯಲ್ಲಿ ಗುರು-ಶಿಷ್ಯರ, ಕಲಿಯುವ ಕಲಿಸುವ ಜ್ಞಾನಿಗಳ; ತರಬೇತಿ ಪಡೆಯುವ, ತರಬೇತಿ ನೀಡುವ ವ್ಯಕ್ತಿಗಳ ಮಾನಸಿಕ ಸಿದ್ಧತೆ ಒಪ್ಪಿಗೆ ಆಸಕ್ತಿ ಹೊಂದಾಣಿಕೆ, ಇವು ಮುಖ್ಯ ಎಂಬ ಭಾವದಿಂದ ದೂರ ಹೋಗಿದ್ದೇವೆ. ಆ ಗುರುವಿಗೆ ಆ ಶಿಷ್ಯ, ಇಂತಹ ಕಲಿ ಯುವವನಿಗೆ ಅಂತಹ ಕಲಿಸುವವರು, ಬೆಸುಗೆ ಏರ್ಪಡಬೇಕು. ಕೆಲ ಮಕ್ಕಳನ್ನು ನೋಡಿ. ಆ ಶಿಕ್ಷಕರೆಂದರೆ ಇಷ್ಟ. ಕಲಿಕೆಯ ವೇಗವೂ ಜಾಸ್ತಿ. ಮುಂದಿನ ತರಗತಿಯಲ್ಲಿ ಬೇರೆ ಶಿಕ್ಷಕರಾದಾಗ ಸ್ವಲ್ಪ ದಿನವೇ ಮತ್ತೆ ಹೊಂದಿಕೊಳ್ಳಲು ಸಮಯ ಬೇಕು. ಅವರಿಂದ ಕಲಿಕೆ ಆರಂಭಿಸಲು ಅವರ ಕಣ್ಣಳತೆಯಲ್ಲಿ ಬೆಳೆಯುವುದಕ್ಕೆ ಯಾವುದೂ ಸರಿಸಾಟಿಯಿಲ್ಲ. ಬದುಕು ಬದಲಾಗುವುದಕ್ಕೆ ಉತ್ತಮ ಗುರುವಿಗಿಂತ ಇನ್ನೇನು ಬೇಕು.
ಮಹಾಮಾಂತ್ರಿಕರಾದ ತರಬೇತುದಾರರು ಸಿಕ್ಕಿಬಿಟ್ಟರೆ ಯಶಸ್ಸಿನ ಸಾಕ್ಷಾತ್ಕಾರವಾದಂತೆ. ಹುಡುಕಬೇಕು. ಶಿಷ್ಯರೇ ಹುಡುಕಾಟ ನಡೆಸುತ್ತಿರಬೇಕು. ಅತ್ಯುತ್ತಮರಾದ ವರು ಇರುತ್ತಾರೆ. ಆ ಗುರುಗಳೂ ಒಳಗಿಂ ದೊಳಗೇ ಉತ್ತಮ ಶಿಷ್ಯರಿಗಾಗಿ ಚಡಪಡಿಸುತ್ತಿರುತ್ತಾರೆ. ಆದರೆ ಅವರು ದೈಹಿಕವಾಗಿ ಈ ಕೆಲಸ ಮಾಡುವುದಿಲ್ಲ. ಕಾಯುತ್ತಿರುತ್ತಾರೆ. ಅಯಸ್ಕಾಂತ ಕಬ್ಬಿಣವನ್ನು ಸೆಳೆಯುವಂತೆ ಉತ್ತಮ ಶಿಷ್ಯ ಅವರ ಬಳಿ ಬಂದೊಡನೆ ಸೆಳೆದು ತಮ್ಮ ತೆಕ್ಕೆಗೆ ತೆಗೆದುಕೊಂಡು ಬಿಡುತ್ತಾರೆ. ರಾಮಕೃಷ್ಣ ಪರಮಹಂಸರು ವಿವೇಕಾನಂದರಿಗೆ ಹೇಳುತ್ತಾರೆ: ‘ನೀನು ಬರುತ್ತೀಯೆಂದು ನಾನು ಕಾಯುತ್ತಿದ್ದೆ. ನಿನ್ನ ಬರುವಿಗಾಗಿ ನಾನು ಉತ್ಸಾಹದಿಂದ, ಅತೀವ ನಂಬಿಕೆಯಿಂದ ಕಾಯುತ್ತಿದ್ದೆ. ನನಗೆ ಗೊತ್ತಿತ್ತು ನೀನು ಬಂದೇ ಬರುತ್ತೀಯೆ ಎಂದು’. ವಿವೇಕಾನಂದರೂ ಅತೀವ ಆನಂದದಿಂದ ನಾನೂ ನಿಮ್ಮ ಬಳಿ ಬರಲು ಒದ್ದಾಡು ತ್ತಿದ್ದೆ. ನಾನು ಧನ್ಯ. ತಾವು ಪ್ರೀತಿಯಿಂದ ನನ್ನನ್ನು ಸೆಳೆದು ಒಪ್ಪಿಕೊಂಡಿರಿ’ ಎಂದರು.
ಕ್ರಮಬದ್ಧ ಶಿಸ್ತುಬದ್ಧ ವ್ಯವಸ್ಥಿತ ತರಬೇತಿಗೆ ಪರ್ಯಾಯಗಳಿಲ್ಲ. ತರಬೇತಿ ನೀಡಲಾಗದ ವ್ಯಕ್ತಿಯೂ ಇರುವುದಿಲ್ಲ. ಅಂತಹಕೆಲಸವೇ ಉತ್ತಮ ಗುರುವಿನದು. ತರಬೇತುದಾರನ ಕೈಚಳಕ ಗುಣಮಟ್ಟ ಅವಲಂಬಿಸಿರುತ್ತದೆ. ಆಟಗಳಲ್ಲಿ ನೋಡಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನಿಸಿ. ಜ್ಞಾನ- ಕೌಶಲಗಳ ಸಾಧಕರನ್ನು ನೋಡಿ. ಎಲ್ಲರ ಮಾತೊಂದೇ. ಉತ್ತಮ ಗುರು, ತರಬೇತುದಾರರು ನನಗೆ ದೊರೆತರು.
ಗುರುವಿನಿಂದ ಶಿಷ್ಯನು ಗುರು ಮೀರಿಸುವವನಾಗಿ ಬಿಡುತ್ತಾನೆ: ಒಂದು ಸೀಮೆಸುಣ್ಣ ಮತ್ತು ಸವಾಲುಗಳನ್ನೆದುರಿಸುವ ಛಲ ಸರಿಯಾಗಿ ಹದವಾಗಿ ಸೇರಿ ಬಿಟ್ಟರೆ ಒಬ್ಬಗುರು ನಿಮ್ಮ ಜೀವನವನ್ನೇ ಬದಲಿಸಬಹುದು. ಹತ್ತು ನಿಮಿಷ ಉತ್ತಮ ತರಬೇತುದಾರರೊಬ್ಬರು ಮಗುವಿನ ಬಳಿ ನಿಂತುಬಿಟ್ಟರೆ, ಗೀಚುವ ಕೈಬರಹವೂ ಸುಂದರವಾಗಬಲ್ಲದು. ತರಬೇತುದಾರ ಸುಮ್ಮನೆ ಮಾತನಾಡುವವರನ್ನು ಅದ್ಭುತ ಭಾಷಣಕಾರರನ್ನಾಗಿಸಬಹುದು. ಹದಿನೈದು ದಿನಗಳ ತರಬೇತಿ ಫಲ ಅತ್ಯುತ್ತಮ ವಾಹನ ಚಾಲನೆ. ತಿಂಗಳ ತರಬೇತಿಯ ಗುಣ ವಾಹನ ರಿಪೇರಿಯ ಸಾಮರ್ಥ್ಯ. ಸರಿಯಾದ ತರಬೇತುದಾರ ನಮ್ಮ ದೌರ್ಬಲ್ಯ ಮಿತಿಗಳಿಂದ ನಮ್ಮನ್ನು ಹೊರಗೆ ತಂದು ಬಿಡುತ್ತಾನೆ. ಅಸಮರ್ಥತೆಯಿಂದ ಸಮರ್ಥತೆಯತ್ತ ನಮ್ಮನ್ನು ಕರೆದೊಯ್ಯುತ್ತಾನೆ. ಅಂತಹ ತರಬೇತಿ, ಶಿಕ್ಷಣ, ಕಲಿಕೆಯಿಂದ ನಮ್ಮ ಸಾಮರ್ಥ್ಯ ಹೆಚ್ಚಾಗಿ ಬದುಕಿನ ಆನಂದ ನೆಮ್ಮದಿ ಜಾಸ್ತಿಯಾಗುತ್ತದೆ.
‘ಗುರು ಯಾರು, ಏನು ಎನ್ನುವುದು; ಆತ ಏನನ್ನು ಬೋಽಸುತ್ತಾನೆ’ ಎನ್ನುವುದಕ್ಕಿಂತ ಮುಖ್ಯವೆನಿಸುತ್ತದೆ. ಸಾವಿರ ದಿನಗಳ ಅಧ್ಯಯನಕ್ಕಿಂತ, ಒಂದು ದಿನ ಗುರುವಿನೊಡನೆ ವಾಸ, ಶ್ರೇಷ್ಠವಾದದ್ದು. ಬದಲಾದ ಕಾಲದಲ್ಲಿ ಬದಲಾವಣೆಗೆ ತಕ್ಕ ಹಾಗೆ ಗುರುವೂ ಬದಲಾದ ಕಲಿಕಾ ತಂತ್ರಗಳನ್ನು ಬಳಸಿ ನವ ಗುರುವಾಗಬೇಕು. ಕೊಡ ಬಾಗಿದರೆ ನೀರು ತುಂಬುತ್ತದೆ. ಮಕ್ಕಳ ಹಂತಕ್ಕೆ ಗುರು ಬಾಗಬೇಕು. ಎಲ್ಲೆಲ್ಲಿ ಜ್ಞಾನ ಇದೆಯೋ ಅಲ್ಲಲ್ಲಿ ಬಾಗಿ ತೆಗೆದುಕೊಳ್ಳಬೇಕು. ಏನು ಎನ್ನುವ ಜ್ಞಾನ ; ಏಕೆ ಎನ್ನುವ ವಿಜ್ಞಾನ ; ಎಲ್ಲಿ ಯಾವಾಗ ಎನ್ನುವ ತಂತ್ರಜ್ಞಾನ ಮತ್ತು ಹೇಗೆ ಎನ್ನುವ ಸುಜ್ಞಾನ : ನಾಲ್ಕೂ ಜ್ಞಾನ ವಿಸ್ತಾರಗಳನ್ನು ಗುರು ಕಲಿಸಬೇಕು. ನಗುವುದನ್ನು, ಜೀವನ ಸಂಭ್ರಮಗೊಳಿಸುವುದನ್ನು, ಸರಳತೆಯ ಅರಿವನ್ನು, ಕಾರುಣ್ಯದ ಬೆಳಕನ್ನು ಗುರು ತಿಳಿಸಬೇಕು. ಸರ್ವಜನಾಂಗದ ಶಾಂತಿಯ ತೋಟದ ದೇವಮಾಲಿ ‘ಗುರು.’ ಮಹಾ ದೀಪ್ತಿಧಾರಿ. ಧರೆಗೆ ದೊಡ್ಡವರವರು. ಗುರುವರನೆ ಭಾಗ್ಯನಿಧಿ.
ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ಎರಡನೇ ರಾಷ್ಟ್ರಪತಿಯಾಗಿ ಮೇ ೧೩, ೧೯೬೨ ರಿಂದ ಮೇ ೧೩, ೧೯೬೭ ರವರೆಗೆ ಅಧಿಕಾರದಲ್ಲಿದ್ದರು. ಸೆಪ್ಟೆಂಬರ್ ೫, ೧೮೮೮ ರಂದು ಆಂಧ್ರಪ್ರದೇಶದ ಒಂದು ಸಣ್ಣ ಪಟ್ಟಣದಲ್ಲಿ ಜನಿಸಿದ ರಾಧಾಕೃಷ್ಣನ್ ಒಬ್ಬ ವಿಶಿಷ್ಟ ವಿದ್ವಾಂಸ, ತತ್ವಜನಿ ಮತ್ತು ರಾಜಕಾರಣಿಯಾಗಿದ್ದರು. ಭಾರತದ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ಅವರ ಪ್ರಭಾವ ಗಾಢವಾಗಿದೆ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರ ಹುಟ್ಟಿದ ದಿನ (ಸೆ.೫)ವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು…
ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ…
ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು…
ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಶಿಕ್ಷಕರು,…
ಮೈಸೂರು: ಶಿಕ್ಷಕರ ಒಗ್ಗಟ್ಟಿನ ಬಲ ಹಾಗೂ ಸಕಾರಾತ್ಮಕ ಚಿಂತನೆಗಳಿಂದ, ಖಾಸಗಿ ಶಾಲೆಗಳಿಗೂ ಸಡ್ಡು ಹೊಡೆದಿರುವ ನಗರದ ಸರ್ಕಾರಿ ಶಾಲೆಯೊಂದು ಹೆಮ್ಮೆಯಿಂದ…
ಚಿರಂಜೀವಿ ಸಿ ಹುಲ್ಲಹಳ್ಳಿ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಸಮಾನತೆಯ ಸಂದೇಶ ಸಾರಿದ ಬಾಲಕಿ ಮೈಸೂರು: ‘ಮನುಷ್ಯ ಜಾತಿ ತಾನೊಂದೇವಲಂ’ ಎಂಬ…