ಎಸ್.ಸಿ. ದಿನೇಶ್ ಕುಮಾರ್, ಹಿರಿಯ ಪತ್ರಕರ್ತರು
ಕಾಕ್ರೋಚ್ ಜನತಾ ಪಾರ್ಟಿ ನಮ್ಮ ದೇಶದ ಯುವಜನರ ಹತಾಶೆ, ಸಿಟ್ಟು, ಆಕ್ರೋಶಕ್ಕೆ ಹಿಡಿದ ಕನ್ನಡಿ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಹುದ್ದೆ ಸ್ವೀಕರಿಸಿದಾಗಿನಿಂದಲೂ ವಿಚಾರಣೆಗಳ ಸಂದರ್ಭದಲ್ಲಿ ಅವರ ಕೆಲವು ಮೌಖಿಕ ಟಿಪ್ಪಣಿಗಳು ಹಲವು ರೀತಿಯಲ್ಲಿ ಸಂಚಲನಕ್ಕೆ ಕಾರಣವಾಗಿವೆ.
ಕೆಲವು ನ್ಯಾಯಾಧೀಶರ ಟಿಪ್ಪಣಿಗಳು ವಿವಾದ ಗಳಿಗೆ ಕಾರಣವಾಗಿದ್ದನ್ನು ನಾವು ಗಮನಿಸಿದ್ದೇವೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ಬೆಂಗಳೂರಿನ ಮುಸ್ಲಿಂ ಬಾಹುಳ್ಯದ ಬಡಾವಣೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹಲವು ಟಿಪ್ಪಣಿಗಳು ವ್ಯಾಪಕವಾಗಿ ಚರ್ಚೆಗೆ ಒಳಗಾಗಿವೆ. ಅವುಗಳಲ್ಲಿ ಮುಖ್ಯವಾಗಿದ್ದು ದೇಶದ ನಿರುದ್ಯೋಗಿ ಯುವಜನರನ್ನು ಕುರಿತ ಮಾತು. ಮೇ ೧೫ ರಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದಲ್ಲಿ ‘ಹಿರಿಯ ವಕೀಲರ ಡೆಸಿಗ್ನೇಷನ್’ ಕುರಿತ ವಿಚಾರಣೆ ಸಂದರ್ಭದಲ್ಲಿ ಅವರು ಹೇಳಿದ ಈ ಮಾತುಗಳು ದೇಶದ ಯುವಜನತೆಗೆ ಇಷ್ಟವಾಗಲಿಲ್ಲ.
ನಾಯಮೂರ್ತಿ ಹೇಳಿದ್ದೇನು?: “There are youngsters like cockroaches, who don’t get any employment and don’t have any place in the profession. Some of them become media, some of them become social media, some of them become RTI activists… and they start attacking everyone.(ಉದ್ಯೋಗ ಸಿಗದೆ, ವೃತ್ತಿಯಲ್ಲಿ ಸ್ಥಾನ ಪಡೆಯದೆ ಇರುವ ಕೆಲವು ಯುವಕರು ಜಿರಳೆಗಳಂತಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮದವರಾಗುತ್ತಾರೆ, ಕೆಲವರು ಸಾಮಾಜಿಕ ಜಾಲತಾಣ ಕಾರ್ಯಕರ್ತರಾಗುತ್ತಾರೆ, ಕೆಲವರು RTI ಕಾರ್ಯಕರ್ತರಾಗುತ್ತಾರೆ… ನಂತರ ಎಲ್ಲರ ಮೇಲೂ ದಾಳಿ ಆರಂಭಿಸುತ್ತಾರೆ). ಮುಖ್ಯನ್ಯಾಯಮೂರ್ತಿಗಳು ಅಲ್ಲಿಗೆ ನಿಲ್ಲಿಸದೆ, ಪ್ಯಾರಾಸೈಟ್ ಎಂಬ ಪದವನ್ನು ಬಳಸುತ್ತಾರೆ. ‘There are already parasites of
society who attack the system… (ವ್ಯವಸ್ಥೆಯ ಮೇಲೆ ದಾಳಿ ಮಾಡುವ ಸಮಾಜದ ಪರೋಪಜೀವಿಗಳು ಈಗಾಗಲೇ ಇದ್ದಾರೆ…) ಈ ಟಿಪ್ಪಣಿಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ನ್ಯಾಯಮೂರ್ತಿ ಸ್ಪಷ್ಟನೆ ನೀಡಿ, ‘ನನ್ನ ಮಾತುಗಳು ದೇಶದ ಯುವಜನರ ವಿರುದ್ಧ ಅಲ್ಲ; ನಕಲಿ ಪದವಿಗಳ ಮೂಲಕ ವೃತ್ತಿಗೆ ಬಂದವರ ವಿರುದ್ಧ’ ಎಂದರು.
ಈ ಮೊದಲೂ ನ್ಯಾಯಮೂರ್ತಿ ವಿವಾದದ ಮಾತು: ಇದಕ್ಕೂ ಮುನ್ನ ಫೆಬ್ರವರಿ ೨೬ರಂದು ಎನ್‌ಸಿಇಆರ್‌ಟಿ ಪಠ್ಯವೊಂದರಲ್ಲಿ ‘ನ್ಯಾಯಾಂಗ ಭ್ರಷ್ಟಾಚಾರ’ದ ಕುರಿತು ಅಧ್ಯಾಯವೊಂದನ್ನು ಸೇರಿಸಲಾಗಿರುವುದರ ಕುರಿತು ಮುಖ್ಯ ನ್ಯಾಯಮೂರ್ತಿಗಳು ಕಿಡಿಕಿಡಿಯಾಗಿದ್ದರು. ‘They fired the gun and the judiciary is bleeding.'(ಅವರು ಗುಂಡು ಹಾರಿಸಿದ್ದಾರೆ; ನ್ಯಾಯಾಂಗ ಈಗ ರಕ್ತ ಸ್ರಾವ ಅನುಭವಿಸುತ್ತಿದೆ). ನ್ಯಾಯಾಂಗದ ವಿರುದ್ಧ ಸಂಚು ನಡೆಯುತ್ತಿದೆ ಎಂಬ ಅರ್ಥದಲ್ಲಿ ಕೋರ್ಟ್ ಈ ಹೇಳಿಕೆ ನೀಡಿತ್ತು. ಇದೂ ಸಹ ಹಲವರಿಗೆ ಇಷ್ಟವಾಗಿರಲಿಲ್ಲ. ಪರಿಸರ ಕಾರ್ಯಕರ್ತರು ಹಾಗೂ Sಐ ಕಾರ್ಯಕರ್ತರ ಕುರಿತು ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮಾಡಿದ ಮೌಖಿಕ ಟಿಪ್ಪಣಿಗಳೂ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಕಾರಣವಾದವು.
‘Show us even a single project in this country where these alleged environmental activists have said that we welcome this project'(ಈ ದೇಶದಲ್ಲಿ ಪರಿಸರ ಕಾರ್ಯಕರ್ತರು ‘ಈ ಯೋಜನೆಯನ್ನು ನಾವು ಸ್ವಾಗತಿ ಸುತ್ತೇವೆ’ ಎಂದಿರುವ ಒಂದೇ ಒಂದು ಯೋಜನೆಯನ್ನು ನಮಗೆ ತೋರಿಸಿ). ‘ಪರಿಸರ ಹೋರಾಟಗಳು ಮೂಲಸೌಕರ್ಯ ಮತ್ತು ಆರ್ಥಿಕ ಯೋಜನೆ ಗಳನ್ನು ತಡೆಯುವ ಸಾಧನ ವಾಗುತ್ತಿವೆಯೇ?’ ಎಂಬ ಪ್ರಶ್ನೆಯನ್ನು ಪೀಠ ಎತ್ತಿತ್ತು. ಗುಜರಾತ್‌ನ ಪಿಪಾವವ್ ಬಂದರು ವಿಸ್ತರಣೆ ಯೋಜನೆಗೆ ನೀಡಿದ್ದ ಪರಿಸರ ಅನುಮತಿ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಮೇ ೧೧ರಂದು ಈ ಟಿಪ್ಪಣಿ ಮಾಡಲಾಯಿತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಪಿಪಾವವ್ ಎಂಬ ಖಾಸಗಿ ಬಂದರಿನಿಂದಾಗಿ ಸಮುದ್ರ ಪರಿಸರ, ಮೀನುಗಾರರ ಜೀವನೋಪಾಯ ಮತ್ತು ಕರಾವಳಿ ಪರಿಸರದ ಮೇಲೆ ಪರಿಣಾಮ ಬೀಳಬಹುದು ಎಂದು ಪರಿಸರ ಹೋರಾಟಗಾರರು ಆಕ್ಷೇಪಿಸಿದ್ದರು.
ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯಿಂದ ಪರಿಸರ ಹೋರಾಟಗಾರರು ‘ಅಭಿವೃದ್ಧಿ ವಿರೋಧಿಗಳು’ ಎಂಬ ರೀತಿಯ ಅಭಿಪ್ರಾಯ ನ್ಯಾಯಾಂಗದಿಂದ ವ್ಯಕ್ತವಾಗಿದೆ ಎಂದು ಹಲವರು ಟೀಕಿಸಿದರು. ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳು, ಕಾನೂನು ತಜ್ಞರು ಮತ್ತು ಪರಿಸರ ಹೋರಾಟಗಾರರು ಬಹಿರಂಗ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯ ನ್ಯಾಯಮೂರ್ತಿಗಳ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ, ವಕೀಲರ ವಲಯದಲ್ಲಿ, ನಾಗರಿಕ ಹಕ್ಕು ಕಾರ್ಯಕರ್ತರ ನಡುವೆ ಹಾಗೂ ವಿರೋಧ ಪಕ್ಷಗಳ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾದವು.
ಡಿಜಿಟಲ್ ಆಂದೋಲನ ಹುಟ್ಟಿಕೊಂಡಿದ್ದು ಹೇಗೆ?: ಇದೆಲ್ಲದರ ನಡುವೆ ಅವರು ನಿರುದ್ಯೋಗಿ ಯುವಜನರ ಕುರಿತು ನೀಡಿದ ಹೇಳಿಕೆ ದೇಶಾದ್ಯಂತ ದೊಡ್ಡ ಸಂಚಲನಕ್ಕೆ ಕಾರಣವಾಯಿತು. ಅದು ಅನಿರೀಕ್ಷಿತ ಪ್ರಮಾಣದಲ್ಲಿ ಯುವಜನತೆಯನ್ನು ಸೆಳೆಯಿತು. ಈ ಹೇಳಿಕೆ ಹೊರಬಂದ ದಿನವೇ ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಒಂದು ವಿಡಂಬನಾತ್ಮಕ ರಾಜಕೀಯ ಪಕ್ಷವೇ ಹುಟ್ಟಿಕೊಂಡಿತು. ಮೇಲ್ನೋಟಕ್ಕೆ ಅದು ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯಿಂದ ಅಸಮಾಧಾನಗೊಂಡವರು ಕಟ್ಟಿದ ಡಿಜಿಟಲ್ ಆಂದೋಲನ ಎನಿಸಿದರೂ, ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಬಾಧಿಸುತ್ತಿರುವ ಸಮಸ್ಯೆಗಳು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ದೊಡ್ಡ ಧ್ವನಿಯಾಗಿ ಗಮನ ಸೆಳೆಯಿತು. ನಿರುದ್ಯೋಗ, ಭ್ರಷ್ಟಾಚಾರ, ಪರೀಕ್ಷಾ ಅಕ್ರಮಗಳೂ ಸೇರಿದಂತೆ ಹಲವು ವಿಷಯಗಳಲ್ಲಿ ಸಿಡಿಮಿಡಿಯಾಗಿದ್ದ ಯುವಜನತೆ ಈ ಡಿಜಿಟಲ್ ಆಂದೋಲನದಲ್ಲಿ ಪಾಲ್ಗೊಂಡಿತು.
ಹಾಸ್ಯ, ಕಟು ವ್ಯಂಗ್ಯದ ಆಂದೋಲನ: ಈ ಚಳವಳಿಯ ಮೂಲ ಸೂರ್ತಿ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಲಯದ ವಿಚಾರಣೆ ವೇಳೆ ಬಳಸಿದ youngsters like cockroaches”ಎಂಬ ಪದ ಪ್ರಯೋಗ. ಆ ಹೇಳಿಕೆಯನ್ನು ಹಲವಾರು ಯುವಕರು ತಮಗಾದ ಅಪಮಾನವೆಂದೇ ಭಾವಿಸಿದರು. ಹೀಗಾಗಿ ಮುಖ್ಯ ನ್ಯಾಯಮೂರ್ತಿಗಳು ಹೇಳಿದ ಆ ಜಿರಳೆಗಳು ನಾವೇ ಎಂದು ಕಟು ವ್ಯಂಗ್ಯದೊಂದಿಗೆ ಘೋಷಿಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್, ರೀಲ್ಸ್, ಪೋಸ್ಟರ್‌ಗಳು ಹರಡಲಾರಂಭಿಸಿದವು. ‘ಪದವಿಗಳು ಇದ್ದರೂ ಕೆಲಸ ಇಲ್ಲ’, ‘ಪರೀಕ್ಷೆಗಳು ನಡೆಯುತ್ತವೆ. ಆದರೆ ಪೇಪರ್ ಲೀಕ್ ಆಗುತ್ತದೆ’, ‘ಯುವಕರ ಸಮಸ್ಯೆಗಳನ್ನು ಯಾರೂ ಕೇಳುತ್ತಿಲ್ಲ’ ಎಂಬ ಅಸಮಾಧಾನ ಈ ಡಿಜಿಟಲ್ ಆಂದೋಲನದ ಮೂಲಕ ವ್ಯಕ್ತವಾಯಿತು.
ಮೀಮ್-ಆಧಾರಿತ ರಾಜಕೀಯ ವಿಡಂಬನಾತ್ಮಕ ಚಳವಳಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನನ್ನು ‘ಮೀಮ್-ಆಧಾರಿತ ರಾಜಕೀಯ ವಿಡಂಬನಾತ್ಮಕ ಚಳವಳಿ’ ಎಂದು ಪರಿಚಯಿಸಿಕೊಂಡಿತು. ಸಾಂಪ್ರದಾಯಿಕ ರಾಜಕೀಯ ಭಾಷೆಯ ಬದಲು ಹಾಸ್ಯ, ವ್ಯಂಗ್ಯ, ಇಂಟರ್ನೆಟ್ ಸಂಸ್ಕ ತಿ (meme culture) ಬಳಸುವುದು ಇದರ ಮುಖ್ಯ ಶೈಲಿ. ಕಾಕ್ರೋಚ್ ಪದವನ್ನು ಆಯ್ಕೆ ಮಾಡಿದ್ದಕ್ಕೆ ಸಂಕೇತಾತ್ಮಕ ಅರ್ಥವನ್ನೂ ನೀಡಲಾಯಿತು. ಜಿರಳೆ ಯಾವ ಪರಿಸ್ಥಿತಿಯಲ್ಲೂ ಬದುಕುಳಿಯುವ ಜೀವಿ. ನಿರುದ್ಯೋಗ, ದುಬಾರಿ ಶಿಕ್ಷಣ, ಪರೀಕ್ಷಾ ಅಕ್ರಮ, ಸರ್ಕಾರಿ ಉದ್ಯೋಗಗಳ ನೇಮಕಾತಿ ವಿಳಂಬ, ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಸೆನ್ಸಾರ್ ಮಾಡುವ ಹುನ್ನಾರ, ರಾಜಕೀಯ ನಿರ್ಲಕ್ಷ್ಯಗಳ ನಡುವೆಯೂ ಯುವಕರು ಜಿರಳೆಗಳಂತೆ ಬದುಕುಳಿಯಲು ಹೋರಾಡುತ್ತಿದ್ದಾರೆ ಎಂಬ ಸಂದೇಶ ಹರಡಲಾಯಿತು.
ಎರಡು ಕೋಟಿ ಇಪ್ಪತ್ತೆಂಟು ಲಕ್ಷ ಫಾಲೋವರ‍್ಸ್: ಕಾಕ್ರೋಚ್ ಜನತಾ ಪಾರ್ಟಿಯ ಡಿಜಿಟಲ್ ಜನಪ್ರಿಯತೆ ತುಂಬಾ ವೇಗವಾಗಿ ಹೆಚ್ಚಾಯಿತು. ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಂ ಮತ್ತು ಎಕ್ಸ್‌ನಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಗಳಿಸಿತು. ಈ ಲೇಖನ ಬರೆಯುವ ಹೊತ್ತಿನಲ್ಲಿ ಸಿಜೆಪಿಯ ಇನ್‌ಸ್ಟಾಗ್ರಾಂ ಅನುಯಾಯಿಗಳ ಸಂಖ್ಯೆ ೨೨.೮ ಮಿಲಿಯನ್(ಎರಡು ಕೋಟಿ ಇಪ್ಪತ್ತೆಂಟು ಲಕ್ಷ!). ಅದೂ ಕೂಡ ಕೇವಲ ಒಂದು ವಾರದಲ್ಲಿ. ಈ ಚಳವಳಿಯನ್ನು ಆರಂಭಿಸಿದ ಅಭಿಜಿತ್ ದೀಪ್ಕೆ ಎಂಬ ಮಹಾರಾಷ್ಟ್ರದ ಯುವಕ, ಇದು ಪೂರ್ವಯೋಜಿತ ರಾಜಕೀಯ ಪಕ್ಷವಲ್ಲ. ‘ಒಂದು ವ್ಯಂಗ್ಯಾತ್ಮಕ ಪ್ರತಿಕ್ರಿಯೆ’ಯಾಗಿ ಆರಂಭವಾಗಿ ನಂತರ ದೊಡ್ಡ ಡಿಜಿಟಲ್ ಚಳವಳಿಯಾಗಿದೆ. ಯುವಕರ ಹಲವು ವರ್ಷಗಳ ನಿರಾಶೆ ಈ ಚಳವಳಿಗೆ ಸಿಕ್ಕ ಬೆಂಬಲಕ್ಕೆ ಕಾರಣ ಎಂದು ಹೇಳಿದ್ದಾರೆ.
ಚಳವಳಿ ಹತ್ತಿಕುವ ವಿಫಲ ಯತ್ನ: ಈ ಡಿಜಿಟಲ್ ಚಳವಳಿ ವ್ಯಾಪಕವಾಗಿ ಬೆಳೆಯುತ್ತಿದ್ದಂತೆ, ಸರ್ಕಾರದ ಕಡೆಯಿಂದ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನಗಳು ಆರಂಭವಾದವು. ಸರ್ಕಾರದ ಪರವಾದ ಪ್ರಾಪಗಂಡ ತಂಡಗಳು ಮೈಕೊಡವಿ ನಿಂತವು. ಎಂದಿನಂತೆ ಅಭಿಜಿತ್ ದೀಪ್ಕೆ ಮತ್ತು ಸಹವರ್ತಿಗಳನ್ನು ದೇಶವಿರೋಽಗಳು, ನಗರ ನಕ್ಸಲರು, ವಿದೇಶಿ ಏಜೆಂಟರು, ಭಯೋತ್ಪಾದ ಕರು ಇತ್ಯಾದಿಯಾಗಿ ನಿಂದಿಸಲಾಯಿತು. ಆಳುವ ಸರ್ಕಾರದ ಪರವಾದ ಸೋಷಿಯಲ್ ಮೀಡಿಯಾ ತಂಡಗಳು, ಐಟಿ ಸೆಲ್ಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸಿದವು. ಕಾಕ್ರೋಚ್ ಜನತಾ ಪಕ್ಷಕ್ಕೆ ಸಿಕ್ಕ ಅನುಯಾಯಿಗಳಲ್ಲಿ ಬಹುತೇಕರು ಪಾಕಿಸ್ತಾನಿಗಳು ಎಂದು ಕಪೋಲ ಕಲ್ಪಿತ ಸುಳ್ಳುಗಳನ್ನು ಹರಡಲಾಯಿತು.
ಈ ನಡುವೆ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಯಿತು. ವೆಬ್‌ಸೈಟ್ ಬಂದ್ ಮಾಡಲಾಯಿತು. ಅದರ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡುವ ಯತ್ನಗಳು ನಡೆದವು. ಅಭಿಜಿತ್ ದೀಪ್ಕೆಗೆ ಕೊಲೆ ಬೆದರಿಕೆ ಒಡ್ಡಲಾಯಿತು, ಅವರ ಕುಟುಂಬ ಸದಸ್ಯರ ಮೇಲೆ ದಾಳಿ ನಡೆಸುವ ಭೀತಿ ಹುಟ್ಟಿಸಲಾಯಿತು. ಕಾಕ್ರೋಚ್ ಪಕ್ಷದ ವಿರುದ್ಧ ಪ್ರೊಪಗಂಡ: ಆದರೆ ಇದ್ಯಾವುದೂ ಈ ಅಭಿಯಾನವನ್ನು ತುಳಿಯುವಲ್ಲಿ ಯಶಸ್ಸು ಕಾಣಲಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಅನುಯಾಯಿಗಳ ಸಂಖ್ಯೆಗಿಂತ ಹೆಚ್ಚಿನ ಅನುಯಾಯಿಗಳು ಸಿಜೆಪಿಗೆ ದೊರೆತಿದ್ದು ಈ ಪಕ್ಷಗಳ ಕಣ್ಣು ಕೆಂಪಾಗಲು ಕಾರಣವಾಯಿತು. ಸಾವಿರಾರು ಮೀಮ್‌ಗಳು, ಎಐ ವಿಡಿಯೋಗಳು ಸೃಷ್ಟಿಯಾದವು. ನೋಡನೋಡುತ್ತಿದ್ದಂತೆ ಕಾಕ್ರೋಚ್ ಜನತಾ ಪಾರ್ಟಿ ಎಲ್ಲ ರಾಜ್ಯಗಳ ಘಟಕಗಳೂ ಆರಂಭವಾದವು. ಕೆಲವು ಸರ್ಕಾರಿ ಕೃಪಾಪೋಷಿತ ಮಾಧ್ಯಮಗಳು ‘ವಿದೇಶಿ ಬೋಟ್ ಆಕ್ಟಿವಿಟಿ’ ಮೂಲಕ ಕೋಟಿಗಟ್ಟಲೆ ಅನುಯಾಯಿಗಳನ್ನು ಪಡೆಯಲಾಗಿದೆ ಎಂದು ಹೇಳಿದವು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ಸ್ಕ್ರಾಲ್ ಮಾಡಿದರೂ ಕಾಕ್ರೋಚ್‌ಗಳು ಕಾಣಿಸಿಕೊಂಡವು. ಇದು ಕಾಕ್ರೋಚ್ ಪಕ್ಷದ ವಿರುದ್ಧ ಹುಟ್ಟಿಕೊಂಡ ಪ್ರೊಪಗಂಡ ಸುದ್ದಿಗಳು ಎಷ್ಟು ಸುಳ್ಳು ಎಂಬುದನ್ನು ಬಯಲು ಮಾಡಿದವು.
ಕಾಕ್ರೋಚ್ ಪಾರ್ಟಿಯ ಉದ್ದೇಶವೇನು?: ಕಾಕ್ರೋಚ್ ಪಾರ್ಟಿ ಸ್ಥಾಪಕ ಅಭಿಜಿತ್ ಸ್ಪಷ್ಟವಾಗಿ ತಮ್ಮದು ಚುನಾವಣಾ ರಾಜಕಾರಣ ಮಾಡುವ ಪಕ್ಷ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಗಂಭೀರವಾದ ರಾಜಕೀಯ ಪಕ್ಷ ವಾಗಿ ರೂಪಾಂತರಗೊಳ್ಳ ಬೇಕು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಅಭಿಜಿತ್‌ಗೆ ಈ ಉದ್ದೇಶ ಇದ್ದಂತಿಲ್ಲ. ಯುವಕರ ಧ್ವನಿ ಕೇಳು ವಂತೆ ಮಾಡು ವುದು ಅವರ ಮುಖ್ಯ ಉದ್ದೇಶವಾಗಿರುವಂತಿದೆ. ನೀಟ್ ಪೇಪರ್ ಲೀಕ್ ಮತ್ತು ನೀಟ್ ಹಗರಣಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಎಂಬ ಆನ್‌ಲೈನ್ ಸಹಿ ಸಂಗ್ರಹ ಆಂದೋಲನವನ್ನು ಅವರು ಆರಂಭಿಸಿದರು. ೫,೮೦,೦೦೦ ಮಂದಿ ವಿದ್ಯಾರ್ಥಿ ಗಳು ಇದಕ್ಕೆ ಸ್ಪಂದಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದರು.
ಕಾಕ್ರೋಚ್ ಜನತಾ ಪಾರ್ಟಿ ಹೊಸ ರಾಜಕೀಯ ಪಕ್ಷವಾಗಿ ಬದಲಾಗಿ ಏನೋ ಸಂಚಲನ ಮೂಡಿಸುತ್ತದೆ ಎಂಬ ನಿರೀಕ್ಷೆ ಅದರ ಸ್ಥಾಪಕರು, ಅನುಯಾಯಿಗಳಿಗೆ ಇಲ್ಲ. ಆದರೆ ಹಾಳಾಗಿರುವ ವ್ಯವಸ್ಥೆಯ ವಿರುದ್ಧ ದೇಶದ ಯುವಜನರ ಆಕ್ರೋಶವನ್ನು ದಾಖಲಿಸಲು ಅದು ಒಂದು ವೇದಿಕೆಯನ್ನು ಕಲ್ಪಿಸಿದೆ. ಜೆನ್ ಜೀ ಗಳೆಂದು ಕರೆಯಲಾಗುವ ಹೊಸ ತಲೆಮಾರಿನ ಯುವಕ ಯುವತಿಯರು ಮೀಮ್‌ಗಳ ಮೂಲಕ, ಹೊಸ ಇಂಟರ್‌ನೆಟ್ ಭಾಷೆಯ ಮೂಲಕ ಮಾತಾಡತೊಡಗಿದ್ದಾರೆ.
ಈ ಜೆನ್ ಜೀಗಳ ಭಾಷೆ ರಾಜಕೀಯ ಪಕ್ಷಗಳಿಗೆ ಹೊಸತು. ಅವರಿಗೆ ಇದೆಲ್ಲವೂ ಒಂದು ರಾಜಕೀಯ ಸಂಚಾಗಿಯೇ ಕಾಣುತ್ತಿರಬಹುದು. ಆದರೆ ಯುವಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೃಜನಶೀಲ ಮಾಧ್ಯಮವನ್ನು ಕಂಡುಕೊಳ್ಳುತ್ತಿದ್ದಾರೆ. ಹಿಂದೆಯೂ ಕೂಡ ಯುವಕರು ತಮ್ಮ ತಮ್ಮ ಕಾಲದಲ್ಲಿ ತಮ್ಮ ಅಭಿವ್ಯಕ್ತಿಗಾಗಿ ಕಾವ್ಯ, ಸಿನಿಮಾ, ಬೀದಿನಾಟಕ ಇತ್ಯಾದಿ ಭಿನ್ನ ದಾರಿಗಳನ್ನು ಹುಡುಕಿಕೊಂಡಿದ್ದರು. ಆದರೆಈಗಿನ ಜನರೇಷನ್ ಮೀಮ್ ಕಲ್ಚರ್ ಮೂಲಕ ಆಡುತ್ತಿರುವ ಮಾತುಗಳನ್ನು, ವ್ಯಂಗ್ಯದ ಭಾಷೆಯನ್ನು ಅರಗಿಸಿಕೊಳ್ಳಲು ಈಗಿನ ರಾಜಕಾರಣಿಗಳಿಗೆ ಸಾಧ್ಯವಾಗುತ್ತಿಲ್ಲ. ತಮ್ಮನ್ನು ಜಿರಳೆಗಳೆಂದು ಘೋಷಿಸಿಕೊಂಡುನಡೆಸುತ್ತಿರುವ ಅಭಿಯಾನದ ಹೊಡೆತ ಎಷ್ಟು ಜೋರಾಗಿದೆಯೆಂದರೆ ಭಾರತದಲ್ಲೂ ನೇಪಾಳ, ಬಾಂಗ್ಲಾದೇಶ ಮಾದರಿಯಲ್ಲಿ ಕ್ಷಿಪ್ರಕ್ರಾಂತಿಗಳು ನಡೆಯಬಹುದಾ ಎಂದು ರಾಜಕಾರಣಿಗಳು ನಡುಗುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ದೇಶದ ಭದ್ರತೆಗೆ ಧಕ್ಕೆ ಎಂಬ ಕಾರಣ ಒಡ್ಡಿ ಕಾಕ್ರೋಚ್ ಜನತಾ ಪಾರ್ಟಿಯ ಸೋಷಿಯಲ್ ಮೀಡಿಯಾ ಬಂದ್ ಮಾಡಿಸಲಾಗುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ನಮ್ಮ ದೇಶದ ಯುವಜನರ ಹತಾಶೆ, ಸಿಟ್ಟು, ಆಕ್ರೋಶಕ್ಕೆ ಕನ್ನಡಿ ಹಿಡಿದಿದೆ. ಆಳುವವರು ಎಚ್ಚೆತ್ತುಕೊಳ್ಳದಿದ್ದರೆ, ದುರಾಡಳಿತವನ್ನು ನಿಲ್ಲಿಸದೇ ಹೋದರೆ ಅದಕ್ಕೆ ಅವರು ಬೆಲೆ ತೆರಲೇಬೇಕಾಗುತ್ತದೆ ಎಂಬ ಸಂದೇಶವನ್ನೂ ಅದು ನೀಡುತ್ತಿದೆ.
೧) ಹಾಳಾಗಿರುವ ವ್ಯವಸ್ಥೆಯ ವಿರುದ್ಧ ದೇಶದ ಯುವಜನರ ಆಕ್ರೋಶ ದಾಖಲಿಸಲು ವೇದಿಕೆ ಕಲ್ಪಿಸಿದ ಕಾಕ್ರೋಚ್ ಪಾರ್ಟಿ
೨) ಮೀಮ್‌ಗಳ ಮೂಲಕ, ಹೊಸ ಇಂಟರ್‌ನೆಟ್ ಭಾಷೆಯ ಮೂಲಕ ಮಾತಾಡತೊಡಗಿದ ಹೊಸ ತಲೆಮಾರಿನ ಯುವಕ ಯುವತಿಯರು
೩) ಆಳುವವರು ದುರಾಡಳಿತವನ್ನು ನಿಲ್ಲಿಸದೇ ಹೋದರೆ ಅದಕ್ಕೆ ಬೆಲೆ ತೆರಲೇಬೇಕಾಗುತ್ತದೆ ಎಂಬ ಸಂದೇಶ ರವಾನೆ
೪) ವ್ಯಂಗ್ಯದ ಭಾಷೆಯನ್ನು ಅರಗಿಸಿಕೊಳ್ಳಲಾಗದೆ ರಾಜಕಾರಣಿಗಳ ಒದ್ದಾಟ
೫) ನೇಪಾಳ, ಬಾಂಗ್ಲಾದೇಶ ಮಾದರಿಯಲ್ಲಿ ಭಾರತದಲ್ಲೂ ಕ್ಷಿಪ್ರಕ್ರಾಂತಿ ನಡೆಯಬಹುದಾ ಎಂದು ರಾಜಕಾರಣಿಗಳಿಗೆ ನಡುಕ
ಎಸ್.ಎಸ್.ಭಟ್ ನಂಜನಗೂಡು: ಅಧಿಕಾರಿಗಳ ನೋಟಿಸ್‌ಗೂ ಕ್ಯಾರೆ ಎನ್ನದ ಶ್ರೀಕಂಠೇಶ್ವರ ದೇವಾಲಯದ ಸಿಬ್ಬಂದಿ ನಂಜನಗೂಡು: ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದ ಕಪಿಲಾ…
ಬ್ಯೂಟಿ ಪಾರ್ಲರ್‌ಗಳನ್ನು ತೆರೆದು ಅದರಿಂದ ಬದುಕು ನಡೆಸಲು ತರಬೇತಿ ೨೦೧೪ರಲ್ಲಿ ದೆಹಲಿಯ ಅಂಶು ರಜಪೂತ್ ೧೫ ವರ್ಷದವಳಾಗಿದ್ದಾಗ ಎಂದಿನಂತೆ ತನ್ನ…
ಚಿರಂಜೀವಿ ಸಿ. ಹುಲ್ಲಹಳ್ಳಿ ಬೆಳೆಗಾರ ಕಂಗಾಲು; ನಷ್ಟಕ್ಕೆ ಪರಿಹಾರ ಕಲ್ಪಿಸಲು ರೈತರ ಒತ್ತಾಯ ಮೈಸೂರು: ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ…
ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ (ಟಾಟಾ ಏಸ್) ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು,…
ಹಾಸನ: ಮಗನನ್ನು ಶಾಲೆಗೆ ಸೇರಿಸಲಯ ಪತ್ರಕ್ಕಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ಅತಿಬೇಗ ಮತ್ತು ನಿರ್ಲಕ್ಷ್ಯದಿಂದ ಪಲ್ಟಿಯಾದ ಪರಿಣಾಮ ಅಮ್ಮ…