Andolana originals

ಸಿದ್ದರಾಮಯ್ಯ ನಾಯಕತ್ವಕ್ಕೆ ಬಲ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಸಮರದಲ್ಲಿ ಕೈ ಜಯಭೇರಿ

ಆರ್.ಟಿ.ವಿಠ್ಠಲಮೂರ್ತಿ

ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನಾಯಕತ್ವ ಅಜೇಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸಮರ್ಥ್ ಶಾಮನೂರು ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಗೆಲುವು ಗಳಿಸಿದ ಉಮೇಶ್ ಮೇಟಿಯವರು ಆರಂಭದಿಂದಲೇ ಸ್ವಪಕ್ಷೀಯರಿಂದ ತೀವ್ರ ವಿರೋಧಕ್ಕೆ ಗುರಿಯಾಗಿದ್ದರು. ಈ ಪೈಕಿ ಸಮರ್ಥ್ ಶಾಮನೂರು ಅವರು ಪಕ್ಷದ ಭದ್ರ ಮತ ಬ್ಯಾಂಕ್ ಅನ್ನಿಸಿಕೊಂಡ ಮುಸ್ಲಿಮರ ವಿರೋಧವನ್ನು ಎದುರಿಸಿದ್ದರು.

ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ತಮಗೇ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದ ಮುಸ್ಲಿಮರು ಕಾಂಗ್ರೆಸ್ ಪಕ್ಷದ ಟಿಕೆಟ್ ತಮ್ಮ ಕೈ ತಪ್ಪಿ ಸಮರ್ಥ್ ಅವರ ಪಾಲಾದಾಗ ಬಂಡಾಯವೆದ್ದಿದ್ದರು. ಈ ಪೈಕಿ ಸಾದಿಕ್ ಪೈಲ್ವಾನ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲುಳಿದಾಗ ಅಪಾಯದ ಮುನ್ಸೂಚನೆಯನ್ನು ಗ್ರಹಿಸಿದ ಸಿಎಂ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಸಾದಿಕ್ ಪೈಲ್ವಾನ್ ಅವರು ತಟಸ್ಥರಾಗುವಂತೆ ನೋಡಿಕೊಂಡು ಆರಂಭಿಕ ಆಘಾತಕ್ಕೆ ಬ್ರೇಕ್ ಹಾಕಿದ್ದರು.

ಹೀಗಾಗಿ ಮುಸ್ಲಿಂ ಮತದಾರರ ಬಂಡಾಯ ದೊಡ್ಡ ಮಟ್ಟದಲ್ಲಿ ವರ್ಕ್‌ಔಟ್ ಆಗದೆ ಕಾಂಗ್ರೆಸ್ ಕ್ಷ ಮೇಜರ್ ಷೇರು ಪಡೆಯುವಲ್ಲಿ ಸಫಲವಾಯಿತು. ಇದೇ ಕಾಲಕ್ಕೆ ಕ್ಷೇತ್ರದ ಲಿಂಗಾಯತ ಮತದಾರರು ಸಂಪೂರ್ಣವಾಗಿ ಕೈ ಹಿಡಿದ ಪರಿಣಾಮವಾಗಿ ಮುಸ್ಲಿಮರ ಕ್ರೋಧಾಗ್ನಿಯ ನಡುವೆಯೂ ಸಮರ್ಥ್ ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದಿ.ಹೆಚ್.ವೈ.ಮೇಟಿ ಅವರ ಕುಟುಂಬದ ಆಂತರಿಕ ಕಚ್ಚಾಟ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರಿಗೆ ಸವಾಲಾಗಿತ್ತಲ್ಲದೆ, ಸ್ವಪಕ್ಷದ ಕೆಲ ನಾಯಕರ ಒಳಪಿತೂರಿಯೂ ಅತಂಕಕ್ಕೆ ಕಾರಣವಾಗಿತ್ತು.

ಆದರೆ ಇದರ ಸುಳಿವಿದ್ದ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಹಲ ದಿನಗಳ ಕಾಲ ಬೀಡು ಬಿಟ್ಟಿದ್ದಲ್ಲದೆ ಕಾಂಗ್ರೆಸ್‌ಗೆ ಅಪಾಯಕಾರಿ ಆಗಬಹುದಾಗಿದ್ದ ಸನ್ನಿವೇಶವನ್ನು ತಪ್ಪಿಸಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲುವಂತೆ ನೋಡಿಕೊಂಡರು.

ಈ ಎಲ್ಲದರಷ್ಟೇ ಮುಖ್ಯವಾಗಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಅದು ಸಿಎಂ ಸಿದ್ದರಾಮಯ್ಯ ಅವರ ಬಲವನ್ನು ಕುಗ್ಗಿಸಿದಂತಾಗುತ್ತದಲ್ಲದೆ, ಸಿದ್ಧರಾಮಯ್ಯ ಅವರ ವರ್ಚಸ್ಸು ಕುಸಿದಿದೆ ಎಂದು ಹೈಕಮಾಂಡ್‌ಗೆ ಸಂದೇಶ ರವಾನಿಸುವುದು ಕಾಂಗ್ರೆಸ್ ಪಾಳೆಯದ ಕೆಲವು ನಾಯಕರ ಕನಸಾಗಿತ್ತು. ಆದರೆ ಇಂತಹ ಎಲ್ಲ ಸವಾಲುಗಳನ್ನು ಚಾಣಾಕ್ಷತೆಯಿಂದ ಎದುರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವ ಅಜೇಯ ಎಂಬುದನ್ನು ಸಾಬೀತುಪಡಿಸಿದರು. ಇದೇ ರೀತಿ ಸರ್ಕಾರದ ಉತ್ತರಾರ್ಧ ಭಾಗದಲ್ಲಿ ಜನ ವಿರೋಧಿ ಅಲೆ ಏಳುವುದು ಸಹಜವಾದರೂ ಅಂತಹ ಅಲೆಗಳು ಮೇಲೇಳದಂತೆ ಸಿದ್ದರಾಮಯ್ಯ ಅವರು ನೋಡಿಕೊಂಡರು. ಅಂದ ಹಾಗೆ ಉಭಯ ಕ್ಷೇತ್ರಗಳ ಗೆಲುವಿನಲ್ಲಿ ಅವರವರ ಶ್ರಮ ಒಂದು ಮಟ್ಟಿಗೆ ಕೆಲಸ ಮಾಡಿದ್ದರೂ ಅಂತಿಮವಾಗಿ ಗೆಲುವಿನ ಮೂಲ ಶ್ರೇಯಸ್ಸು ಸಿಎಂ ಸಿದ್ದರಾಮಯ್ಯ ಅವರಿಗೆ ದಕ್ಕಬೇಕು. ಇನ್ನು ಉಪಚುನಾವಣೆಗಳಲ್ಲಿ ಪಕ್ಷದ ಇಬ್ಬರು ಅಭ್ಯರ್ಥಿಗಳ ಗೆಲುವು ಸಿಎಂ ಸಿದ್ಧರಾಮಯ್ಯ ಅವರ ಶಕ್ತಿಯನ್ನು ದಿಲ್ಲಿ ಲೆವೆಲ್ಲಿನಲ್ಲಿ ಹೆಚ್ಚಿಸಿದೆ.

ಅರ್ಥಾತ್, ನಾಯಕತ್ವ ಬದಲಾವಣೆ ಮಾಡಿ, ತಮಗೆ ಪಟ್ಟ ಕೊಡಿ ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ಹಾಕಿರುವ ಪಟ್ಟು ಉಪಚುನಾವಣೆಗಳ ಗೆಲುವಿನಿಂದ ದುರ್ಬಲವಾಗಿದೆ. ಹೀಗಾಗಿ ರಾಜ್ಯಕ್ಕೆ ಸಿದ್ದರಾಮಯ್ಯ ಅವರ ನಾಯಕತ್ವ ಎಷ್ಟು ಅನಿವಾರ್ಯ ಎಂಬುದು ರಾಹುಲ್ ಗಾಂಧಿ ಅವರಿಗೆ ಮತ್ತಷ್ಟು ಮನದಟ್ಟಾಗಲಿದೆಯಲ್ಲದೆ, ಈ ಕುರಿತ ಪ್ರಸ್ತಾಪವನ್ನು ಇನ್ನಷ್ಟು ಕಾಲ ಮುಂದೆ ತಳ್ಳುವ ಸಾಧ್ಯತೆ ಜಾಸ್ತಿ.

ಇನ್ನು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿರುವುದರಿಂದ ಇನ್ನು ಹಲವು ದಿನಗಳ ಕಾಲ ಅಲ್ಲಿನ ರಾಜಕಾರಣದಲ್ಲಿ ಗಮನ ನೆಡಲಿರುವ ಹೈಕಮಾಂಡ್ ವರಿಷ್ಠರು ಸದ್ಯಕ್ಕೆ ದಿಲ್ಲಿಗೆ ಬರದಂತೆ ರಾಜ್ಯದ ನಾಯಕರಿಗೆ ಸೂಚಿಸುವ ಸಾಧ್ಯತೆ ಅಧಿಕ.

ಉಪಚುನಾವಣೆಗಳ ಗೆಲುವು ಸಿಎಂ ಸಿದ್ದರಾಮಯ್ಯ ಅವರು ಅಜೇಯ ಎಂಬುದನ್ನು ಸಾಬೀತುಪಡಿಸಿದೆಯಾದರೂ ಕಾಂಗ್ರೆಸ್ ಪಕ್ಷದ ಪಾಲಿಗೆ ಎಚ್ಚರಿಕೆಯ ಕರೆಘಂಟೆಯೂ ಆಗಿದೆ. ಕಾರಣ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಗಳಿಸಿದೆಯಾದರೂ ಗೆಲುವಿನ ಅಂತರ ೫,೭೦೮ ಮತಗಳು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೨೭,೦೦೦ ಮತಗಳ ಅಂತರದಿಂದ ಜಯಗಳಿಸಿತ್ತು. ಈ ಅಂತರ ಈಗ ಬಹುತೇಕ ಕಡಿಮೆಯಾಗಿದೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರಿಂದ ವಿಜಯಮಾಲೆ ಕಾಂಗ್ರೆಸ್ಸಿಗೆ ಒಲಿಯಿತು. ಆದರೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿ ನಿಲ್ಲದೆ ಹೋದರೆ ಪ್ರಬಲ ಕುರುಬ ಸಮುದಾಯ ಬಿಜೆಪಿ ಮತ್ತು ಜಾ.ದಳಕ್ಕೆ ವಲಸೆ ಹೋಗುವ ಸಾಧ್ಯತೆ ಜಾಸ್ತಿ. ಹೀಗಾಗಿ ಉಪಚುನಾವಣೆಯ ಗೆಲುವು ಕಾಂಗ್ರೆಸ್ಸಿಗೆ ಸಮಾಧಾನ ತಂದರೂ ಭವಿಷ್ಯದಲ್ಲಿ ಅದಕ್ಕೆ ಅಪಾಯ ಸುತ್ತಿಕೊಳ್ಳುವ ಸಾಧ್ಯತೆ ಹೆಚ್ಚು.

 

 

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

8 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

8 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

10 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

12 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

15 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

15 hours ago