ಸ್ಟ್ಯಾನ್ಲಿ, ನಿರ್ದೇಶಕರು, ಒಡನಾಡಿ ಸೇವಾಸಂಸ್ಥೆ
ಸರ್ಕಾರವು ಮಾನವ ಸ್ನೇಹಿ, ತಾಂತ್ರಿಕ ಪರ್ಯಾಯ ವ್ಯವಸ್ಥೆ ರೂಪಿಸಲಿ
ನಾಡಹಬ್ಬ ಮೈಸೂರು ದಸರಾ, ಜಿಲ್ಲಾವಾರು ದಸರಾ ಆಚರಣೆ ಸೇರಿದಂತೆ ಯಾವುದೇ ಸರ್ಕಾರಿ, ಖಾಸಗಿ ಸಂಭ್ರಮಾಚರಣೆಯಲ್ಲಿ ಜೀವಂತ ಆನೆಗಳ ಬಳಕೆಯನ್ನು ನಿಷೇಧಿಸಿ, ಮಾನವ ಸ್ನೇಹಿ ಮತ್ತು ತಾಂತ್ರಿಕ ಪರ್ಯಾಯ ವ್ಯವಸ್ಥೆಯನ್ನು ಕಂಡು ಕೊಳ್ಳಬೇಕಿದೆ.
ದಸರೆಗೆ ಆನೆಗಳನ್ನು ಕರೆದುಕೊಂಡು ಬಂದಷ್ಟಕ್ಕೆ ನಾವು ತುಂಬಾ ದೊಡ್ಡ ಸಡಗರ, ಸಮಾರಂಭ ಮಾಡಿದಂತಾಗಲ್ಲ. ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದೇವೆ, ಬದಲಾವಣೆಗಳಿಗೆ ಒಳಪಟ್ಟಿದ್ದೇವೆ. ಇಷ್ಟೆಲ್ಲಾ ಇದ್ದಾಗ್ಯೂ ನಾವು ಪ್ರಾಣಿಗಳನ್ನು ವಿಶ್ವಕ್ಕೆ ಕಾಣುವ ರೀತಿಯಲ್ಲಿ ದಂಡಿಸುತ್ತಿರುವಂತಹದ್ದು ನಮ್ಮ ದೇಶದ ಘನತೆಗೂ ಕುತ್ತು. ಅನಾಗರಿಕ ಸಮಾಜದಲ್ಲಿ ಭಾರತೀಯರು ಇದ್ದಾರೆ ಅಂತ ಅಂದುಕೊಳ್ಳಬಾರದಲ್ಲ. ದಸರಾ ಆಚರಣೆಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಿ, ಆ ಮೂಲಕ ಭಾರತೀಯರು ಸಂಭ್ರಮಾಚರಣೆಗೆ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಾತನಾಡುವಂತಾಗಬೇಕು.
ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳಿಗೂ ಕೂಡ ರಕ್ಷಣೆ, ಗೌರವ ಜೊತೆಗೆ ಜೀವಿಸುವ ಹಕ್ಕಿದೆ. ಆದರೆ ಮನುಷ್ಯರು ಇವೆಲ್ಲವನ್ನೂ ಮರೆತು ಬಿಡುತ್ತಾರೆ. ಧರ್ಮದ ಹೆಸರಲ್ಲಿ ಹಬ್ಬ, ಜಾತ್ರೆಗಳು ಬಂದಾಗ ಕಾನೂನನ್ನು ರೂಪಿಸಿದವರು, ಅದನ್ನು ಪಾಲಿಸಬೇಕಾದವರು, ಪೊಲೀಸರು ಕಾನೂನುಗಳನ್ನು ಗಾಳಿಗೆ ತೂರಿಬಿಡುವ ಕೆಲಸವನ್ನು ಮಾಡುವುದು ನಿಜಕ್ಕೂ ಯೋಚನೆ ಮಾಡಬೇಕಾದಂತಹ ಸಂಗತಿ.
ಪ್ರಾಣಹರಣಗಳಾದಾಗ ಅಥವಾ ಹಾನಿಗಳಾದಾಗ ಆನೆಗಳನ್ನು ನಿಯಂತ್ರಿಸಲು ದಂಡಿಸಲಾಗುತ್ತದೆ. ಇದಕ್ಕೆ ಯಾವ ರೀತಿಯ ಪರಿಹಾರವನ್ನು ಇವರು ಕೊಡುತ್ತಾರೆ? ಪರಿಹಾರ ಅಂದರೆ ಏನು? ಸತ್ತು ಹೋದವರಿಗೆ ಏನು ಕೊಡಲಿಕ್ಕೆ ಸಾಧ್ಯವಿರುತ್ತದೆ. ಮಾವುತರು ಸಾಯುತ್ತಾರೆ, ಅರ್ಚಕರು ಸಾಯುತ್ತಾರೆ, ಭಕ್ತರು ಸಾಯುತ್ತಾರೆ, ಜನ ಸಾಮಾನ್ಯರು ಸಾಯುತ್ತಾರೆ. ಇದಕ್ಕೆಲ್ಲ ಏನು ಪರಿಹಾರ? ನಾಡದೇವಿಯ ವಿಗ್ರಹ ಎಲ್ಲೋ ಬಿದ್ದು ಹೋಗುವುದು, ರಸ್ತೆ, ಮೋರಿ ಪಾಲಾಗುವುದು(ಶಿವಮೊಗ್ಗ ಘಟನೆ); ದೇವಾನುದೇವತೆಗಳನ್ನು ಎಲ್ಲೋ ಬಿಸಾಕುತ್ತೇವೆ. ಇದೆಲ್ಲ ನಮ್ಮ ಸಂಸ್ಕೃತಿಗೆ, ನಾವು ನಂಬುವಂತಹ ದೇವರುಗಳಿಗೆ, ನಾಡದೇವಿಗೆ ಮಾಡುವ ಅವಮಾನ ಅಲ್ಲವೆ? ನಮ್ಮ ಸಂಸ್ಕೃತಿಯನ್ನು ಉಳಿಸಲು ಸುಲಭ ಪರ್ಯಾಯ ಮಾರ್ಗಗಳಿವೆ.
ಮುಂದುವರಿದ, ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಈ ತರಹದ ಸಾಂಸ್ಕೃತಿಕ ಹಬ್ಬಗಳು ಅಥವಾ ಮೆರವಣಿಗೆಗಳನ್ನು ತಂತ್ರಜ್ಞಾನ, ಬೆಳಕು, ಬಣ್ಣ, ರೋಬೋಟ್ಗಳನ್ನು ಬಳಸಿಕೊಂಡು ಸುಂದರವಾಗಿ ಆಚರಿಸಲಾಗುತ್ತಿರುವುದನ್ನು ಕಾಣಬಹುದು. ತಂತ್ರಜ್ಞಾನ ಬಳಸಿಕೊಂಡು ದೊಡ್ಡ ದೊಡ್ಡ ಪ್ರಾಣಿಗಳನ್ನು, ಡೈನೋಸಾರ್ಗಳನ್ನೇ ಸೃಷ್ಟಿಸಿ ಆಕಾಶ ಭೂಮಿ ಒಂದು ಮಾಡಿ ನಿಲ್ಲಿಸುತ್ತಿದ್ದಾರೆ. ಅಂತಹದ್ದರಲ್ಲಿ ನಾವು ಇನ್ನೂ ಏಕೆ ಆನೆಗಳನ್ನು ಬಳಸುತ್ತಿದ್ದೇವೆ? ಇದು ಯೋಚಿಸಬೇಕಾದ ವಿಚಾರ ಅಲ್ಲವೆ? ಮಲ ಹೊರಲು ಇನ್ನೂ ಪೌರಕಾರ್ಮಿಕರನ್ನೇ ಬಳಸುತ್ತಿದ್ದೇವೆ ಎಂದು ಪ್ರಶ್ನೆ ಮಾಡಿಕೊಂಡಾಗ ಬಹುಶಃ ನಮ್ಮ ಮನಸ್ಸಿನಲ್ಲಿರುವ ಈ ದಬ್ಬಾಳಿಕೆಯ ಮನಸ್ಥಿತಿ ಇನ್ನೂ ಹೋಗಿಲ್ಲವಲ್ಲ ಎಂದು ಬೇಸರವಾಗುತ್ತೆ.
೨೦೨೬ರ ಶಿವಮೊಗ್ಗ ದಸರಾ ಆಚರಣೆಯ ಸಂದರ್ಭದಲ್ಲಿ ಅಂಬಾರಿ ಹೊತ್ತ ಆನೆಯು ಬೆದರಿ ಅಡ್ಡಾದಿಡ್ಡಿ ಓಡಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿರುವ ಹಾಗೂ ಕಳೆದ ವರ್ಷ ಮೈಸೂರು ಅರಮನೆ ಆವರಣದಲ್ಲಿ ಇದೇ ರೀತಿ ಆನೆ ನಿಯಂತ್ರಣ ತಪ್ಪಿದ ಘಟನೆ, ಆನೆಗಳಿಂದಾಗಿ ಘಟಿಸಿದ್ದ ಆತಂಕಕಾರಿ ಸನ್ನಿವೇಶಗಳು ಮುಂಬರುವ ಆಚರಣೆಗಳಲ್ಲಿ ಸರ್ಕಾರವು ಗಂಭೀರವಾಗಿ ಮರುಚಿಂತನೆ ನಡೆಸಬೇಕಾದ ಅನಿವಾರ್ಯತೆಯನ್ನು ತೋರಿಸುತ್ತವೆ. ಈ ಹಿನ್ನೆಲೆಯಲ್ಲಿ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಅಂಶಗಳ ಆಧಾರದ ಮೇಲೆ ಧ್ವನಿ ಇಲ್ಲದ ಜೀವಿಗಳ ಘನತೆಯ ಜೀವನಕ್ಕಾಗಿ ಸರ್ಕಾರಕ್ಕೆ ಒಂದು ಮನವಿಯನ್ನು ಸಲ್ಲಿಸುತ್ತಿದ್ದೇನೆ.
೧. ಪ್ರಾಣಿಗಳ ಜೀವಿಸುವ ಹಕ್ಕಿಗೆ ಸಾಂವಿಧಾನಿಕ ಆಧಾರ: ಸಂವಿಧಾನದ ಅನುಚ್ಛೇದ ೨೧ರ ಆಧಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಚರ್ಚಿಸಲ್ಪಟ್ಟ ಜಲ್ಲಿಕಟ್ಟು (Animal Welfare Board of India V/s A.Nagaraja & Others (2014) 7 SSC 547) ಪ್ರಕರಣದಲ್ಲಿ ಸ್ಪಷ್ಟಪಡಿಸಿದಂತೆ, ಅನುಚ್ಛೇದ ೨೧ರಲ್ಲಿ ಪ್ರತಿಪಾದಿತ ‘ಜೀವಿಸುವ ಹಕ್ಕು’ ಕೇವಲ ಮಾನವರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ವಿಸ್ತರಿಸುತ್ತದೆ. ಪ್ರತಿ ಯೊಂದು ಪ್ರಾಣಿಗೂ ಘನತೆ, ಗೌರವ ಮತ್ತು ನೋವು ರಹಿತ ಜೀವನದ ಹಕ್ಕಿದೆ. ಹಾಗಾಗಿ ಆನೆಗಳನ್ನು ಗಂಟೆಗಟ್ಟಲೆ ಸರಪಳಿಯಲ್ಲಿ ಕಟ್ಟಿ, ಡೋಲು, ಬ್ಯಾಂಡ್, ಪಟಾಕಿ ಶಬ್ದದ ನಡುವೆ ನಿಲ್ಲಿಸುವುದು ಈ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅನುಚ್ಛೇದ 48A ರಲ್ಲಿ ರಾಜ್ಯವು ಪರಿಸರವನ್ನು ಸಂರಕ್ಷಿಸಲು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಪ್ರಯತ್ನಿಸಬೇಕು ಎಂಬ ನಿರ್ದೇಶನ ತತ್ವ ಇದರಲ್ಲಿ ಅಡಕವಾಗಿದೆ.
೨. ವನ್ಯಜೀವಿ ರಕ್ಷಣೆಗೆ ಕಾನೂನಾತ್ಮಕ ಆಧಾರ
ಅ) ವನ್ಯಜೀವಿ ಸಂರಕ್ಷಣಾ ಕಾಯಿದೆ, ೧೯೭೨: ಕಲಂ ೨(೩೬) ಮತ್ತು ೨(೩೭): ಕಲಂ ೯ ಮತ್ತು ಅನುಸೂಚಿ-೧ರ ಪ್ರಕಾರ ವನ್ಯಪ್ರಾಣಿಯಾದ ಭಾರತೀಯ ಆನೆಯು ಅತಿ ಹೆಚ್ಚು ಸಂರಕ್ಷಿತ ಪ್ರಾಣಿ. ಇದನ್ನು ಬೇಟೆಯಾಡುವುದು, ಸೆರೆಹಿಡಿಯುವುದು, ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧ. ಕಲಂ ೪೦, ೪೨ರ ಪ್ರಕಾರ ಸೆರೆಯಲ್ಲಿರುವ ಆನೆಯನ್ನು ಹೊಂದಲು ಮಾಲೀಕತ್ವ ಪ್ರಮಾಣ ಪತ್ರ ಮತ್ತು ಕಠಿಣ ನಿಯಮ ಪಾಲನೆ ಕಡ್ಡಾಯ.
ಆ) ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರತಿಬಂಧಕ ಕಾಯ್ದೆ, ೧೯೬೦: ಕಲಂ ೩ ಮತ್ತು ೧೧(1)(a)-(f) ರ ಪ್ರಕಾರ ಪ್ರಾಣಿಗೆ ಅನಗತ್ಯ ನೋವು, ಸಂಕಟ ಕೊಡುವುದು, ಅತಿಯಾಗಿ ದುಡಿಸಿಕೊಳ್ಳುವುದು ಮತ್ತು ಅಸಮರ್ಪಕವಾಗಿ ಬಂಧನದಲ್ಲಿಡುವುದು ಶಿಕ್ಷಾರ್ಹ ಅಪರಾಧ. ದಸರಾ ಮೆರವಣಿಗೆಯಲ್ಲಿ ೪-೫ ಗಂಟೆಗಳ ಕಾಲ ೭೫೦ ಕೆಜಿಗೂ ಹೆಚ್ಚು ತೂಕದ ಅಂಬಾರಿ ಹೊರಿಸುವುದು ಈ ಕಲಂನ ವ್ಯಾಪ್ತಿಗೆ ಬರುತ್ತದೆ.
ಇ) ಕೇಂದ್ರ ಸರ್ಕಾರದ ಮಾರ್ಗಸೂಚಿಗಳು: ಆನೆ ಯೋಜನೆ ಮತ್ತು ಪರಿಸರ, ಅರಣ್ಯ ಮತ್ತು ಹವಾವಾನ ಬದಲಾವಣೆ ಸಚಿವಾಲಯವು ಹೊರಡಿಸಿರುವ Captive Elephant (Transfer of Transport) Rules ೨೦೨೪ರ ಪ್ರಕಾರ-ಆನೆಗಳ ವರ್ಗಾವಣೆಗೆ ಕಠಿಣ ನಿಯಮವಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು (ಅUಆಐ) ಆನೆಗಳನ್ನು ಮೆರವಣಿಗೆಗಳಲ್ಲಿ ಬಳಸುವ ಬಗ್ಗೆ ನಿರಂತರವಾಗಿ ವಿರೋಧ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ) ಅನುಚ್ಛೇದ ೫೧ಅ (g )-(h): ಅರಣ್ಯ, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಎಲ್ಲ ಜೀವಿಗಳ ಬಗ್ಗೆ ದಯೆ ತೋರುವುದು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ತಂತ್ರಜ್ಞಾನ ಲಭ್ಯವಿದ್ದಾಗಲೂ ಆನೆಯನ್ನು ಬಳಸುವುದು ಅನುಚ್ಛೇದ ೫೧A (g ) – (h): ವಿಧಿಯ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾದುದಾಗಿದೆ.
೩. ಕಾನೂನು ಉಲ್ಲಂಘನೆ
ಅ) ಶಬ್ದಮಾಲಿನ್ಯ (ನಿಯಂತ್ರಣ) ನಿಯಮಗಳು, ೨೦೦೦: ಸುಪ್ರೀಂಕೋರ್ಟ್ (Church of God (Full Gospel) in india V/s
K.K.R.Majestic Colony(2000) ತೀರ್ಪಿನಲ್ಲಿ ೪೫-೫೫ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದೆ. ದಸರಾದಲ್ಲಿ ಸಿಡಿಯುವ ಕುಶಾಲು ತೋಪುಗಳ ಸದ್ದು ೧೩೦-೧೪೦ ಡೆಸಿಬಲ್ ದಾಟುತ್ತದೆ. ಇದು ಕಾನೂನು ಬಾಹಿರ.
ಆ) ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರತಿಬಂಧಕ ಕಾಯ್ದೆ, ೧೯೬೦-ಕಲಂ ೧೧(೧)(a) ಪ್ರಕಾರ ದೊಡ್ಡ ಶಬ್ಧದ ಮೂಲಕ ಪ್ರಾಣಿಗೆ ಭಯ, ನೋವು, ಸಂಕಟ ಉಂಟುವಾಡುವುದು ಸ್ಪಷ್ಟ ಕ್ರೌರ್ಯವೇ ಆಗಿದೆ.
ಇ) ವನ್ಯಜೀವಿ ಸಂರಕ್ಷಣಾ ಕಾಯ್ದೆ, ೧೯೭೨-ಕಲಂ ೩೮ರ ಪ್ರಕಾರ ಹುಲಿ ಸಂರಕ್ಷಿತ ಪ್ರದೇಶಗಳಂತೆ ಆನೆ ಕಾರಿಡಾರ್ಗಳಲ್ಲೂ ಶಬ್ದಮಾಲಿನ್ಯ ನಿಷಿದ್ಧ. ನಾಡಹಬ್ಬದ ಹೆಸರಿನಲ್ಲಿ ನಗರದ ಮಧ್ಯೆ ಈ ರೀತಿ ಶಬ್ದ ಮಾಡುವುದು ಆನೆಗಳ ಮೂಲಭೂತ ನಡವಳಿಕೆಗೆ ವಿರುದ್ಧವಾದುದಾಗಿದೆ. ಆದ್ದರಿಂದ, ಆಚರಣೆಗಳಲ್ಲಿ ಜೀವಂತ ಆನೆಗಳಿರುವವರೆಗೂ ಯಾವುದೇ ಕಾರಣಕ್ಕೂ ಫಿರಂಗಿ-ಕುಶಾಲುತೋಪು-ಬಂದೂಕು ಸಿಡಿತವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಒಂದು ವೇಳೆ ವಿಧ್ಯುಕ್ತ ಗೌರವ ಸಲ್ಲಿಸಲೇಬೇಕಾದರೆ, ಅದು ರೋಬೋಟಿಕ್ ಆನೆಗಳ ಬಳಕೆಯ ನಂತರ, ಧ್ವನಿವರ್ಧಕದಲ್ಲಿ ಮುದ್ರಿತ ಶಬ್ದ ಅಥವಾ ಲೇಸರ್ ಲೈಟ್ ಶೋ ಆಗಿರಲೆಂದು ಆಗ್ರಹಿಸುತ್ತೇನೆ.
೪. ಸರ್ಕಾರವೇ ಕಾನೂನು ಮೀರುವಂತಾಗಿದೆ: ಸರ್ಕಾರವೇ ತಾನು ಜಾರಿಗೆ ತಂದಿರುವ ಕಾಯ್ದೆಗಳನ್ನು ಮೀರಿ, ಸಾರ್ವಜನಿಕ ಹಬ್ಬದಲ್ಲಿ ಆನೆಗಳನ್ನು ಬಳಸಿದಾಗ, ಆನೆ ಬೆದರಿದಾಗ ಅದನ್ನು ‘ಮದಗಜ’ ಎಂದು ಕರೆಯುವುದು ಸರಿಯಲ್ಲ. ಅದು ಸಹಜ ಆತ್ಮರಕ್ಷಣೆ, ಇದರಿಂದ ಮಾನವ-ವನ್ಯಜೀವಿ ಸಂಘರ್ಷ ಇನ್ನಷ್ಟು ಹೆಚ್ಚಾಗುತ್ತಿದೆ.
೫. ಗುಂಡು-ಕುಶಾಲುತೋಪುಗಳ ಸಿಡಿತದಿಂದ ಉಂಟಾಗುವ ಶಬ್ದಮಾಲಿನ್ಯ ಮತ್ತು ಕ್ರೌರ್ಯ: ದಸರಾ ಜಂಬೂ ಸವಾರಿ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ನಡೆಸಲಾಗುವ ಫಿರಂಗಿ ಸಿಡಿತ, ೨೧ ಸುತ್ತು ಕುಶಾಲುತೋಪುಗಳ ಸಿಡಿತ ಮತ್ತು ಬಂದೂಕುಗಳ ಗುಂಡಿನ ಸಹಿಸಲಸಾಧ್ಯವಾದ ಸದ್ದು ಆನೆಗಳ ಪಾಲಿಗೆ ಅತ್ಯಂತ ಅಪಾಯ ಕಾರಿಯಾದದ್ದು. ಇಂತಹ ಪರಿಸ್ಥಿತಿಗಳಲ್ಲಿ ವನ್ಯಜೀವಿಗಳು ಯಾವ ರೀತಿ ಪ್ರತಿ ಕ್ರಿಯಿಸುತ್ತವೆ ಎಂಬುದನ್ನು ನಾವು ಇದುವರೆಗೂ ವೈಜ್ಞಾನಿಕವಾಗಿ ಅರಿತಿಲ್ಲ. ವೈಜ್ಞಾನಿಕ ಸತ್ಯವೇನೆಂದರೆ ಆನೆಯ ಶ್ರವಣ ಶಕ್ತಿ ಮನುಷ್ಯನಿಗಿಂತ ಹಲವು ಪಟ್ಟು ಸೂಕ್ಷ್ಮ, ಮನುಷ್ಯನಿಗೆ ೦-೨೦ kHz ಕೇಳಿಸಿದರೆ, ಆನೆಗೆ Infra sound (14&24 Hz) ವರೆಗೂ ಕೇಳಿಸುತ್ತದೆ. ೧೨೦ ಡೆಸಿಬಲ್ಗೂ ಹೆಚ್ಚು ಶಬ್ದದ ಫಿರಂಗಿ ಸಿಡಿತದಿಂದ ಆನೆಗಳಿಗೆ ತೀವ್ರ Acoustic Trauma ತಾತ್ಕಾಲಿಕ ಕಿವುಡುತನ, ಹೃದಾಯಾಘಾತ ಮತ್ತು Panic Attack ಉಂಟಾಗುತ್ತದೆ. ಭಯಗೊಂಡಾಗ ಅದು ಓಡುವುದು ಸಹಜ ಕ್ರಿಯೆಯೇ ಹೊರತು, ಅದು ಆನೆಯ ಪುಂಡತನವಲ್ಲ. ಆದರೆ ಎಲ್ಲವನ್ನೂ ಅರಿತಂತಿರುವ ನಾವುಗಳು ಮಾತ್ರ ಅವುಗಳನ್ನು ತಪ್ಪಿತಸ್ಥರಂತೆ ನೋಡಿ ಶಿಕ್ಷಿಸಲು ಪ್ರಯತ್ನಿಸುತ್ತೇವೆ.
ಈ ಮನವಿಯನ್ನು ಕೇವಲ ಆಗ್ರಹ ಪತ್ರವನ್ನಾಗಿ ನೋಡದೆ, ನಮ್ಮ ಸಂವಿಧಾನ ಆಶಿಸಿದ ‘ಸಹಬಾಳ್ವೆ’ ಮತ್ತು ನಾಡಹಬ್ಬದ ನಿಜವಾದ ಘನತೆಯನ್ನು ಎತ್ತಿಹಿಡಿಯುವ ಅವಕಾಶವಾಗಿ ಪರಿಗಣಿಸಬೇಕಾಗಿ ಕಳಕಳಿಯಿಂದ ವಿನಂತಿಸಿರುವ ಲೇಖಕರು, ಪ್ರತಿಯೊಂದು ಜೀವಿಯನ್ನೂ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಾಽಶರು, ಕರ್ನಾಟಕ ಸರ್ಕಾರದ ಅಷ್ಟೂ ಇಲಾಖೆಗಳಿಗೆ ಈ ಆಗ್ರಹ ಪತ್ರವನ್ನು ರವಾನಿಸಿದ್ದಾರೆ.
ಹಬ್ಬಗಳು, ಧರ್ಮಗಳ ಹೆಸರಲ್ಲಿ ಪ್ರಾಣಿಗಳ ಮೇಲೆ ಸವಾರಿ: ವನ್ಯಪ್ರಾಣಿಗಳ ಹೊರೆಯನ್ನು ನಿಷೇಧಿಸಬೇಕು ಎಂಬ ವಿಚಾರ ನನ್ನ ಮನಸ್ಸಿಗೆ ಬಂದದ್ದು ಇತ್ತೀಚಿನ ಪ್ರಜಾಸತ್ತಾತ್ಮಕ ಮೌಲ್ಯದ ಬಗೆಗಿನ ಸಂವಿಧಾನ ಮತ್ತು ಕಾನೂನುಗಳನ್ನು ಅಧ್ಯಯನ ಮಾಡಿ ಅದರಂತೆ ಬದುಕುತ್ತಿರುವ ನಮ್ಮಂತಹ ವ್ಯಕ್ತಿಗಳಿಗೆ ಒಂದಿಷ್ಟು ನಿವೇದನೆ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಗೌರವಿಸುವಂತಿರಬೇಕಾಗುತ್ತದೆ. ಅದೂ ಬದ್ಧತೆ ಮತ್ತು ಬಾಧ್ಯತೆಗಳನ್ನು ಕ್ರೋಢೀಕರಿಸಿ. ಆನೆಗಳನ್ನು ಬಳಕೆ ಮಾಡಿದಾಗಲೆಲ್ಲ ನನಗೆ ನಮ್ಮ ಪ್ರಪಂಚದಲ್ಲಿ ಕರಿಯರ ಮುಖಗಳು ಮುಂದೆ ಬಂದು ನಿಲ್ಲುತ್ತವೆ. ಆನೆಗಳನ್ನು ಬಳಸಿದ ರೀತಿಯಲ್ಲೇ ಇತಿಹಾಸದಲ್ಲಿ ಎಲ್ಲೆಡೆಯೂ ಕರಿಯರನ್ನು ಸಾಮ್ರಾಜ್ಯಶಾಹಿಗಳು ಬಳಸಿ, ದೌರ್ಜನ್ಯವೆಸಗಿದ್ದನ್ನು ನಾವು ಇತಿಹಾಸದಲ್ಲಿ ಕಾಣಬಹುದಾಗಿದೆ.
ಆಫ್ರಿಕಾದ ಕರಿಯರನ್ನು ಹಿಡಿದು, ಸಾಗಾಣಿಕೆ ಮಾಡಿ, ಪಳಗಿಸಿ ಪಾಶ್ಚಾತ್ಯದ ವಿವಿಧೆಡೆ ಅವರನ್ನು ಗುಲಾಮರನ್ನಾಗಿ ದೂಡಿಸಿದ್ದನ್ನು ನಾವು ಓದಿದ್ದೇವೆ. ಅದೇ ರೀತಿ ನಮ್ಮ ದೇಶದಲ್ಲೂ ಕೂಡ ಕೆಳವರ್ಗದ ಜನರನ್ನು ಗುಲಾಮರಾಗಿ ಬಳಸಿಕೊಳ್ಳುತ್ತಿರುವುದನ್ನು ಕಂಡಿದ್ದೇವೆ. ಅದೇ ರೀತಿ ಸ್ವಾತಂತ್ರ್ಯಪೂರ್ವದಲ್ಲಿ ನಾವೆಲ್ಲರೂ ಕೂಡ ಬ್ರಿಟಿಷರ ಗುಲಾಮರಾಗಿಯೇ ಇದ್ದೆವು ಎಂಬುದನ್ನು ಮರೆಯುವಂತಿಲ್ಲ. ಸ್ವಾತಂತ್ರ್ಯಾನಂತರ ನಾವು ನಮ್ಮ ಪರಿಸರದಲ್ಲಿ, ಸಮಾಜದಲ್ಲಿ ಬಲಹೀನರಾಗಿರುವ ಮತ್ತು ಧ್ವನಿ ಇಲ್ಲದ ವ್ಯಕ್ತಿಗಳನ್ನು ಮತ್ತು ವನ್ಯಜೀವಿಗಳನ್ನು ಗುಲಾಮರಾಗಿ ಮಾಡಿ ಅವರನ್ನು ಬೇರೆ ಬೇರೆ ರೀತಿಯಲ್ಲಿ ಶೋಷಿಸುತ್ತಾ, ದಬ್ಬಾಳಿಕೆ ಮಾಡಿ ಹಬ್ಬಗಳು, ಧರ್ಮಗಳ ಹೆಸರಿನಲ್ಲಿ ಅವರ ಮೇಲೆ ಸವಾರಿ ಮಾಡುತ್ತಲೇ ಬರುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಮೋಟಾರು ವಾಹನ ಸೌಕರ್ಯ ಸಾಗಾಣಿಕೆಗೆ ಇಲ್ಲದಿದ್ದುದರಿಂದ ರಾಜರು ಅನಿವಾರ್ಯವಾಗಿ ಪ್ರಾಣಿಗಳನ್ನು ಅವಲಂಬಿಸಿದ್ದರು, ಅದು ಒಪ್ಪಿಕೊಳ್ಳುವ ಮಾತು. ಆದರೆ ಇಂದು ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ. ಎಲ್ಲ ರೀತಿಯ ಆವಿಷ್ಕಾರಗಳು ನಡೆದಿವೆ. ಹಾಗಾಗಿ ಜೀವನವನ್ನು ಸುಲಭಮಾಡಿಕೊಳ್ಳಬಹುದಾಗಿದೆ.
ಎಲ್ಲ ಇದ್ದೂ ವಿಚಾರಗಳು ತಿಳಿದಿದ್ದರೂ ನಾವು ಆನೆ, ಕುದುರೆಗಳನ್ನು ಇಂದಿಗೂ ಬಳಸುತ್ತಿರುವುದು ಅಧಿಕಾರಶಾಹಿಯ, ಸಾಮ್ರಾಜ್ಯಶಾಹಿಯ ದ್ಯೋತಕವಾಗಿ ಕಾಣುತ್ತಿದೆ. ರಾಜ,ಮಹಾರಾಜರು ಕೂಡ ಸಂಸ್ಥಾನಗಳನ್ನು ಭಾರತೀಯ ಒಕ್ಕೂಟಕ್ಕೆ ಅರ್ಪಿಸಿ ಜನಸಾಮಾನ್ಯರಂತೆ ಬದುಕುತ್ತಿರುವಾಗ ಜನಸಾಮಾನ್ಯರ ಸೇವೆಗಾಗಿ ಆಯ್ಕೆಯಾದ ವ್ಯಕ್ತಿಗಳು ಮಾತ್ರ ರಾಜ- ಮಹಾರಾಜರಂತೆ ಬದುಕಲು ಹಪಹಪಿಸುತ್ತಿರುವುದು ಅಸಹ್ಯಕರ, ಅಧಿಕಾರ ಮದತನದಂತೆ ಕಾಣುತ್ತಿದೆ. ಸಂವಿಧಾನದಲ್ಲಿ ಇವುಗಳಿಗೆ ಯಾವುದೇ ರೀತಿಯ ಅವಕಾಶಗಳು ಇರುವುದಿಲ್ಲ. ಏಷ್ಯಾದ ದಶದಿಕ್ಕುಗಳಲ್ಲಿ ವನ್ಯಜೀವಿಗಳನ್ನು ಕರೆತಂದು ದಂಡಿಸಿ, ಪಳಗಿಸಿ ಬಳಸುತ್ತಿರುವ ಕಡೆಗಳಲ್ಲೆಲ್ಲ ಈ ಪ್ರಾಣಿಗಳಿಂದ ಮನುಷ್ಯನಿಗೆ ಸಂಕಷ್ಟ ಎದುರಾಗುತ್ತಿರುವುದು ಮತ್ತು ಹಾನಿಗೊಳಗಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಸರ್ಕಾರಕ್ಕೆ ಆಗ್ರಹಪೂರ್ವಕ ಮನವಿ:
೧ ತಕ್ಷಣದಿಂದ ಜಾರಿಗೆ ಬರುವಂತೆ ನಾಡಹಬ್ಬ ಮೈಸೂರು ದಸರಾ ಮತ್ತು ಎಲ್ಲ ಜಿಲ್ಲಾವಾರು ದಸರಾ ಉತ್ಸವಗಳು, ಜಾತ್ರೆ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಜೀವಂತ ಆನೆಗಳ ಬಳಕೆಯನ್ನು ನಿಷೇಧಿಸಬೇಕು.
೨ ತಾಂತ್ರಿಕವಾಗಿ ಪರ್ಯಾಯ ಚಿಂತನೆ ಮಾಡುವುದರೊಂದಿಗೆ ಕೇರಳಂನ ತ್ರಿಶ್ಶೂರ್ನ ಕೆಲವು ದೇವಸ್ಥಾನಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿರುವಂತೆ, ಅಂಬಾರಿ ಹೊರಲು ಬ್ಯಾಟರಿ ಚಾಲಿತ, ರೋಬೋಟಿಕ್ ಆನೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮೀಸಲಿಡಬೇಕು. ಇದು ಸಂಸ್ಕೃತಿಯನ್ನೂ ಉಳಿಸುತ್ತದೆ, ಸುರಕ್ಷತೆಯನ್ನೂ ಖಾತರಿಪಡಿಸುತ್ತದೆ.
೩ ಆನೆಗಳ ಪಾತ್ರವನ್ನು ಮಿತಿಗೊಳಿಸುವ ಅಗತ್ಯವಿದ್ದು, ಅರಣ್ಯ ಇಲಾಖೆಯಲ್ಲಿರುವ ಸಾಕಾನೆಗಳನ್ನು ಕೇವಲ ಕಾಡಂಚಿನ ಗ್ರಾಮಗಳಲ್ಲಿ ಬೆಳೆ ರಕ್ಷಣೆ, ಮಾನವ-ಆನೆ ಸಂಘರ್ಷ ತಡೆ, ಗಾಯಗೊಂಡ ಆನೆಗಳ ಚಿಕಿತ್ಸೆ ಮತ್ತು ಅವುಗಳನ್ನು ಕಾಡಿಗೆ ಮರು ಪರಿಚಯಿಸುವ (Rewilding) ಕಾರ್ಯಕ್ಕೆ ಮಾತ್ರ ಬಳಸಬೇಕು.
೪ ಎಲ್ಲ ಸಾಕಾನೆಗಳಿಗೂ ಘನತೆಯ ಜೀವನ ಖಾತ್ರಿಗೊಳಿಸಬೇಕು. ರಾಜ್ಯದಲ್ಲಿರುವ ಎಲ್ಲ ಖಾಸಗಿ ಮತ್ತು ಧಾರ್ಮಿಕ ಸಂಸ್ಥೆಗಳ ವಶದಲ್ಲಿರುವ ಆನೆಗಳ ಲೆಕ್ಕಪರಿಶೋಧನೆ ನಡೆಸಿ, ಅವುಗಳನ್ನು ವೈಜ್ಞಾನಿಕ ಪುನರ್ವಸತಿ ಕೇಂದ್ರಗಳಲ್ಲಿ (Elephant Care & Rehabilitation Centres)) ಇರಿಸಿ, ಸರಪಳಿ ಮುಕ್ತ ಘನತೆಯ ಜೀವನ ನೀಡಬೇಕು.
ಖಾಸಗಿ ಕಂಪೆನಿಗಳು ಕನ್ನಡಿಗರನು ಕಡೆಗಣಿಸಿದರೆ ಸೂಕ್ತಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಸಿದ್ದಾರೆ ಸಿಎಂ ಕನ್ನಡಿಗರ ಹಕ್ಕು ಅವಕಾಶ ಕಾಯುವುದಾಗಿಯೂ ಘೋಷಿಸಿದ್ದಾರೆ! ಹೆಮ್ಮೆ…
ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯಗೊಂಡ ಈ ವರ್ಷದ ದಸರಾ ಮಹೋತ್ಸವದ ಬಗ್ಗೆ ನಾನಾ ರೀತಿಯ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ದಲಿತ…
ಕಂಚುಗಾರನ ಕೊಪ್ಪಲು, ಕೆಂಪೇಗೌಡನ ಕೊಪ್ಪಲು, ಕಾಳೇಗೌಡನ ಕೊಪ್ಪಲು, ಕೆಂಚೇಗೌಡನ ಕೊಪ್ಪಲು, ಕೊಮ್ಮೇಗೌಡನ ಕೊಪ್ಪಲು ಹಾಗೂ ಕನ್ನೇಗೌಡನ ಕೊಪ್ಪಲು ಮುಂತಾದ ಪ್ರದೇಶಗಳನ್ನು…
ನಾಡಹಬ್ಬ ದಸರಾವನ್ನು ಗೌರವ ಮತ್ತು ವೈಭವಕ್ಕೆ ತಕ್ಕಂತೆ ಆಚರಿಸಲು ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗುವ ರೀತಿ ಸಹಕಾರ ನೀಡಲು ಪ್ರಯತ್ನಿಸುತ್ತಿದ್ದರೂ…
ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತ್ತೀಚೆಗೆ ನನ್ನ ಉದ್ಯಮಿ ಸ್ನೇಹಿತರೊಬ್ಬರು ಕಾರ್ಪೊರೇಟ್ ಸಾಮಾಜಿಕ…