ಕೆ.ಬಿ.ರಮೇಶನಾಯಕ
ಮೈಸೂರಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಮೇಳದಲ್ಲಿ ೧,೩೪೬ ಮಂದಿಗೆ ನೌಕರಿ
ವಿದ್ಯಾರ್ಹತೆಗೆ ತಕ್ಕಂತೆ ದೊರೆಯದ ಕೆಲಸ
ಕೌಶಲಾಭಿವೃದ್ಧಿಯಿಂದ ತ್ರೈಮಾಸಿಕ ಮೇಳ
ವರ್ಷಕ್ಕೆ ನಾಲ್ಕು ಬಾರಿ ಉದ್ಯೋಗ ಮೇಳ
ಕೌಶಲ ತರಬೇತಿ ಕೇಂದ್ರಗಳಲ್ಲಿ ಸೂಕ್ತ ತರಬೇತಿ
ಮೈಸೂರು: ವರ್ಷದಿಂದ ವರ್ಷಕ್ಕೆ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದವರು, ತಾಂತ್ರಿಕ, ವೈದ್ಯಕೀಯ ಪದವಿ ಪಡೆದು ಹೊರ ಬರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದರೂ ಅದಕ್ಕೆ ತಕ್ಕಂತೆ ಉದ್ಯೋಗ ದೊರಕುತ್ತಿಲ್ಲ. ಅದರಲ್ಲೂ ತಾಂತ್ರಿಕೇತರ ಕೋರ್ಸುಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ ಇಲ್ಲದ್ದರಿಂದ ಉದ್ಯೋಗ ಸಿಗುವುದು ದುಸ್ತರವಾಗಿದೆ.
ಪದವೀಧರರು ಕೂಡ ಖಾಸಗಿ ಕಂಪೆನಿಗಳಲ್ಲಿ ಕೊಟ್ಟಷ್ಟು ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಸರ್ಕಾರ ಎಲ್ಲರಿಗೂ ಸರ್ಕಾರಿ ಹುದ್ದೆಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ, ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ನಿರುದ್ಯೋಗ ನಿವಾರಿಸುವ ಕೆಲಸ ಮಾಡುತ್ತಿದೆ.
ಹಲವಾರು ವರ್ಷಗಳಿಂದ ವರ್ಷಕ್ಕೆ ಒಂದು ಬಾರಿ ಉದ್ಯೋಗ ಮೇಳ ನಡೆಸುತ್ತಿದ್ದ ಸರ್ಕಾರ, ಈಗ ಮೂರು ತಿಂಗಳಿಗೊಂದರಂತೆ ವರ್ಷಕ್ಕೆ ನಾಲ್ಕು ಉದ್ಯೋಗ ಮೇಳಗಳನ್ನು ನಡೆಸುವ ಮೂಲಕ ಆಕಾಂಕ್ಷಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಸರ್ಕಾರದ ವತಿಯಿಂದ ಉದ್ಯೋಗ ಮೇಳಗಳು ನಡೆದಾಗ ಅಲ್ಲಿ ಸರ್ಕಾರಕ್ಕೆ ನೋಂದಾಯಿಸಿದ ಸಂಸ್ಥೆಗಳು, ಸಂಬಂಧಪಟ್ಟ ಬೇಡಿಕೆಗಳ ವಿವರಗಳನ್ನು ನೀಡಿ, ಒಪ್ಪಿಗೆ ಪಡೆದು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಯಾವುದೇ ಲೋಪವಾಗುವುದಿಲ್ಲ. ವೇತನ ಮತ್ತಿತರ ಸೌಲಭ್ಯಗಳು ಸರಿಯಾಗಿ ದೊರಕಲು ಸಹಕಾರಿಯಾಗುತ್ತದೆ.
ಹಲವು ವರ್ಷಗಳಿಂದಲೂ ಖಾಸಗಿ ಕಂಪೆನಿಗಳು ಅರ್ಜಿ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳುತ್ತಿದ್ದವು ಅಥವಾ ನೇರವಾಗಿ ತಮ್ಮ ಕಂಪೆನಿಗೆ ಹೊಂದುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದವು. ನಂತರ, ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆದರೂ ಅತಿ ಹೆಚ್ಚು ಪ್ರಬಂಧ, ಸಂಶೋಧನೆ ನಡೆಸಿದ ಅಭ್ಯರ್ಥಿಗಳಿಗೆ ಉತ್ತಮ ವೇತನ ನಿಗದಿಪಡಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದವು.
ರಾಜ್ಯ ಸರ್ಕಾರವು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಮೂರು ತಿಂಗಳಿಗೊಂದು ಉದ್ಯೋಗ ಮೇಳ ನಡೆಸುತ್ತಿದೆ. ಇದಲ್ಲದೆ, ಪ್ರತಿಯೊಂದು ಜಿಲ್ಲೆಯಲ್ಲೂ ಉದ್ಯೋಗ ಮೇಳ ನಡೆಸಲು ಮುಂದಾಗಿದ್ದು, ಲಕ್ಷಾಂತರ ಪದವೀಧರರಲ್ಲಿ ಉದ್ಯೋಗದ ಭರವಸೆ ಮೂಡಿಸಿದೆ. ಖಾಸಗಿ ಉದ್ಯೋಗ ಮೇಳದಲ್ಲಿ ನಡೆಯುವ ಸಂದರ್ಶನದಲ್ಲಿ ಖಾಯಮಾತಿ ಅನಿಶ್ಚಿತವಾಗಿದ್ದರೆ, ಸರ್ಕಾರಿ ಪ್ರಾಯೋಜಿತ ಮೇಳವಾದರೆ ಶೇ.೫೦ರಿಂದ೭೦ರಷ್ಟು ಮಂದಿಗೆ ಉದ್ಯೋಗ ಖಾತರಿ ಇರುತ್ತದೆ. ೧೦೦ ಪದವೀಧರರಲ್ಲಿ ಶೇ.೫೦ ಮಂದಿಗೆ ಕೌಶಲ ಇರುವುದಿಲ್ಲ. ಆದ್ದರಿಂದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ.
ಯುವ ನಿಧಿ ಯೋಜನೆಯಡಿ ಈಗಾಗಲೇ ನೋಂದಣಿಯಾಗಿದ್ದ ಮೈಸೂರು ವಿಭಾಗದ ೪೩,೫೭೭ ಫಲಾನುಭವಿಗಳೂ ಸೇರಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಮೊದಲಾದ ಜಿಲ್ಲೆಗಳಿಂದ ಮೇಳಕ್ಕೆ ೪೫,೦೦೦ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಆ ಪೈಕಿ ೧೫ ಸಾವಿರ ಅಭ್ಯರ್ಥಿಗಳು ಪೂರ್ಣ ಪ್ರಮಾಣದ ದಾಖಲೆಗಳ ಸಮೇತ ನೋಂದಣಿ ಮಾಡಿಕೊಂಡು, ಸಂದರ್ಶನಕ್ಕೆ ಹಾಜರಾಗಿದ್ದರು. ಅದರಲ್ಲಿ, ಹಲವು ಕಂಪೆನಿಗಳು ಒಟ್ಟು ೧,೩೪೬ ಅರ್ಹರನ್ನು ನೇಮಕ ಮಾಡಿಕೊಂಡಿದ್ದರೆ, ೩,೩೦೩ ಮಂದಿಯ ಹೆಸರನ್ನು ವಿವಿಧ ಕಂಪೆನಿಗಳವರು ಆಯ್ಕೆ ಮಾಡಿಕೊಳ್ಳಲು ಗುರುತಿಸಿಕೊಂಡಿದ್ದರು.
ವೆಬ್‌ಸೈಟ್‌ನಲ್ಲಿ ನೋಂದಣಿ: ಜಿಲ್ಲಾ ಕೇಂದ್ರದಲ್ಲಿ ನಡೆಸುವ ಉದ್ಯೋಗ ಮೇಳದಲ್ಲಿ ಆನ್‌ಲೈನ್ ಮತ್ತು ನೇರವಾಗಿ ಅರ್ಜಿ ಆಹ್ವಾನಿಸಲಾಗುತ್ತದೆ. ಉದ್ಯೋಗ ಪೋರ್ಟಲ್‌ಗಳನ್ನು ನಿರ್ವಹಿಸುತ್ತಿರುವುದರಿಂದ ಅರ್ಹ ಅಭ್ಯರ್ಥಿಗಳು www.kaushalkar.com ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಉದ್ಯೋಗ ದೊರೆಯಲಿದೆ. ಮೇಳವನ್ನು ಸರ್ಕಾರವೇ ನಡೆಸುವಾಗ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ನೇರವಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಅಥವಾ ವೆಬ್‌ಸೈಟ್ ಮೂಲಕವೂ ನೋಂದಣಿ ಮಾಡಿಸಿಕೊಳ್ಳಬಹುದು.
” ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಉದ್ಯೋಗ ಮೇಳ ನಡೆಸಿದರೆ ಇಲಾಖೆ ವತಿಯಿಂದ ತೆರೆಯುವ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಸರ್ಕಾರದಿಂದ ನಡೆಯುವ ಮೇಳದಲ್ಲಿ ನೌಕರರಿಗೆ ಗ್ಯಾರಂಟಿ ಇರುತ್ತದೆ. ಮೇಳ ನಡೆಯುವಾಗ ಎಲ್ಲ ಇಲಾಖೆಗಳೂ ಒಳಗೊಳ್ಳುತ್ತವೆ. ಖಾಸಗಿ ಕ್ಯಾಂಪಸ್‌ನಲ್ಲಿ ನಡೆಯುವ ಸಂದರ್ಶನ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.”
ಕೆ.ನಾರಾಯಣಮೂರ್ತಿ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ, ಮೈಸೂರು
” ಸರ್ಕಾರಿ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳತ್ತ ಒಲವು ತೋರುವ ಕಾರಣ ಎಂಎಸ್ ಎಂಇ ಕ್ಷೇತ್ರದ ಕಡೆಗೆ ಉದ್ಯೋಗಕ್ಕೆ ಬರುವುದಿಲ್ಲ. ಮೈಸೂರು ಸೇರಿದಂತೆ ರಾಜ್ಯಾದ್ಯಂತ ಮೂರು ಸಾವಿರ ಅಪ್ರೆಂಟಿಸ್‌ಗಳು ಬೇಕಾಗಿದ್ದರೂ ಅರ್ಹರು ಲಭ್ಯವಾಗುತ್ತಿಲ್ಲ. ಐಟಿಐ, ಡಿಪ್ಲೊಮಾ ಪದವಿ ಪಡೆದವರು ಹೊರಗೆ ಬಂದ ಮೇಲೆ ಎಲ್ಲಿ ಹೋಗುತ್ತಾರೆಂಬುದು ತಿಳಿಯುತ್ತಿಲ್ಲ. ನಾವು ಸದಾ ಹೆಲ್ಪರ್ ಸೇರಿದಂತೆ ಇನ್ನಿತರ ಹುದ್ದೆಗಳಿಗೆ ಬೇಕಾಗಿದ್ದಾರೆ ಅಂತ ಬೋರ್ಡ್ ಹಾಕಬೇಕಿದೆ.”
ಸತೀಶ್, ಸಿಇಒ, ಎಂಟೆಲ್ ಕ್ಯಾಡ್ ಇಂಜಿನಿಯರಿಂಗ್
” ರಾಜ್ಯ ಸರ್ಕಾರದ ವತಿಯಿಂದ ಉದ್ಯೋಗ ಮೇಳ ನಡೆಸುವ ಮುನ್ನ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಂಡು ನಡೆಸಿದರೆ ಅನುಕೂಲವಾಗಲಿದೆ. ಯಾವ ಕಾರ್ಖಾನೆಗಳಲ್ಲಿ ಎಷ್ಟು ಉದ್ಯೋಗಗಳು ಖಾಲಿ ಇವೆ ಎಂಬುದನ್ನು ತಿಳಿಸಬೇಕು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರನ್ನೇ ಅಧ್ಯಕ್ಷರನ್ನಾಗಿ ಮಾಡಿ ತಯಾರಾಗಬೇಕು. ನಂತರ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಅಂತಿಮಗೊಳಿಸಿದ ಮೇಲೆ ನಿಗದಿಪಡಿಸಿದರೆ ಅನುಕೂಲ.”
ಎಚ್.ರಾಮಕೃಷ್ಣೇಗೌಡ, ಗೌರವಾಧ್ಯಕ್ಷ, ಕಡಕೊಳ – ಅಡಕನಹಳ್ಳಿ ತಾಂಡ್ಯ ಕೈಗಾರಿಕಾ ಪ್ರದೇಶ
ಸಂದರ್ಶನಕ್ಕೆ ಹಾಜರಾಗಲು ಹಿಂದೇಟು?:
ಕೆಲವೊಮ್ಮೆ ಸಂದರ್ಶನದಲ್ಲಿ ನೇಮಕಾತಿ ಮಾಡಿಕೊಂಡರೂ ನೇಮಕಾತಿ ಪತ್ರ ಕೊಡುವಾಗ ವೇತನ ಮತ್ತಿತರ ಸೌಲಭ್ಯಗಳನ್ನು ನಿಗದಿಪಡಿಸುವಾಗ ಷರತ್ತು ವಿಽಸುವುದು ಕಂಡುಬಂದಿದೆ. ಹಾಗಾಗಿ ಅನೇಕ ಮಂದಿ ಮೇಳದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಾರೆ ಎಂಬ ಮಾತುಗಳೂ ಇವೆ.
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…