Andolana originals

ಕೊಡಗಿನಲ್ಲಿ ಮೂತ್ರಪಿಂಡ ತಜ್ಞ ವೈದ್ಯರ ಕೊರತೆ

ಕಿಡ್ನಿ ಸಮಸ್ಯೆಗೆ ಹೊರಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಬಿಸುವ ಪರಿಸ್ಥಿತಿ;ತಜ್ಞ ವೈದ್ಯರ ನೇಮಕಕ್ಕೆ ಒತ್ತಾಯ

-ನವೀನ್ ಡಿಸೋಜ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎನ್ನುವ ಆಗ್ರಹದ ನಡುವೆ ಮೂತ್ರಪಿಂಡ ತಜ್ಞ ವೈದ್ಯರ ನೇಮಕವಾಗಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.

ಕೊಡಗು ಜಿಲ್ಲಾಸ್ಪತ್ರೆಯು ಮೆಡಿಕಲ್ ಕಾಲೇಜು ಬೋಧಕ ಆಸ್ಪತ್ರೆಯಾದ ಬಳಿಕ ಹಲವು ಸೇವೆಗಳು ಆರಂಭವಾಗಿವೆಯಾದರೂ ಮೂತ್ರ ಪಿಂಡ ಸಮಸ್ಯೆಗೆ ಇನ್ನೂ ಹೊರಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇರುವುದರಿಂದ ಜನತೆ ಸಮಸ್ಯೆ ಎದುರಿಸುವಂತಾಗಿದೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೂತ್ರಪಿಂಡ ತಜ್ಞ ವೈದ್ಯರ ತುರ್ತು ಅಗತ್ಯವಿದೆ. ಇವರ ನೇಮಕಾತಿಗೆ ಪ್ರಯತ್ನಗಳು ನಡೆಯುತ್ತಿದ್ದರೂ, ಇನ್ನೂ ಕೈಗೂಡಿಲ್ಲ.
ಕೋಯಿಮ್ಸ್‌ನಲ್ಲಿ ಹೃದ್ರೋಗ ಘಟಕ ಆರಂಭಕ್ಕೆ ಬಿರುಸಿನ ಪ್ರಯತ್ನಗಳು ನಡೆದಿದ್ದು, ಇದರ ಜೊತೆ ಮೂತ್ರ ಪಿಂಡ ಸಮಸ್ಯೆಗೂ ಚಿಕಿತ್ಸೆ ಸಿಗುವಂತಾಗಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಸದ್ಯ, ಜಿಲ್ಲೆಯಲ್ಲಿ 199 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ನಿಯಮಿತವಾಗಿ ಒಳಗಾಗುತ್ತಿದ್ದಾರೆ. ಇವರ ಪೈಕಿ 138 ಮಂದಿ ಪುರುಷರು, 61 ಮಂದಿ ಮಹಿಳೆಯರು ಇದ್ದಾರೆ. ಇವರಲ್ಲಿ ಕೆಲವರು ಪಕ್ಕದ ಜಿಲ್ಲೆಯ
ವರೂ ಇದ್ದಾರೆ. ಇನ್ನೂ 3 ಮಂದಿ ಡಯಾಲಿಸಿಸ್‌ಗಾಗಿ ಕಾಯುವವರ ಪಟ್ಟಿಯಲ್ಲಿದ್ದು, ಖಾಸಗಿ ಆಸ್ಪತ್ರೆ ಇಲ್ಲವೇ ಹೊರ ಜಿಲ್ಲೆಯ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆ ಪಡೆಯುತ್ತಿದ್ದಾರೆ.

ಈಗ ಜಿಲ್ಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆ, ಸೋಮವಾರಪೇಟೆ,ವಿರಾಜಪೇಟೆಯ ತಾಲ್ಲೂಕು ಆಸ್ಪತ್ರೆ ಹಾಗೂ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೇವೆ ಲಭ್ಯವಿದೆ. ಇಲ್ಲಿ ಒಟ್ಟು 29 ಡಯಾಲಿಸಿಸ್ ಯಂತ್ರಗಳಿವೆ. ದಿನಕ್ಕೆ 3 ಪಾಳಿಯಲ್ಲಿ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತಿದೆ.

ಟಿಲಿಮೆಡಿಸಿನ್ ಮೂಲಕ ತಜ್ಞ ವೈದ್ಯರ ಸಲಹೆಗಳನ್ನು ರೋಗಿಗಳಿಗೆ ಒದಗಿಸಲಾಗುತ್ತಿದೆ. ಆದರೂ, ಮೊದಲೇ ರೋಗವನ್ನು ಪತ್ತೆ ಹಚ್ಚಬೇಕಾದರೆ ಜಿಲ್ಲೆಗೆ ಒಬ್ಬರು ಮೂತ್ರಪಿಂಡ ತಜ್ಞ ವೈದ್ಯರ ಅಗತ್ಯ ಇದೆ.

ಬಹಳಷ್ಟು ಮಂದಿಗೆ ಕಾಯಿಲೆ ಪತ್ತೆ ಮಾಡುವಲ್ಲಿಯೇ ವಿಳಂಬವಾಗುತ್ತಿರುವುದು ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡಿದೆ. ಇಲ್ಲಿಯೇ ತಜ್ಞ ವೈದ್ಯರಿದ್ದರೆ ಕಾಯಿಲೆ ಪತ್ತೆ, ತಪಾಸಣೆ, ಚಿಕಿತ್ಸೆ ಪಡೆಯುವುದು ಸುಲಭ ವಾಗುತ್ತದೆ. ಡಯಾಲಿಸಿಸ್ ಯಂತ್ರಗಳನ್ನು ಸಿಎಸ್‌ಆರ್ ನಿಧಿಯಿಂದ ಪಡೆಯಲು ಅವಕಾಶ ವಿದ್ದು, ಸಂಘ, ಸಂಸ್ಥೆಗಳು, ಸರ್ಕಾರೇತರ ಸಂಸ್ಥೆ ಗಳು ಡಯಾಲಿಸಿಸ್ ಯಂತ್ರವನ್ನು ನೀಡಬಹುದಾಗಿದೆ  ಎಂದು ವೈದ್ಯರು ಹೇಳುತ್ತಾರೆ.

ಅನಿಯಂತ್ರಿತವಾದ ಮಧುಮೇಹ, ರಕ್ತದೊತ್ತಡ, ಅತಿಯಾದ ಮದ್ಯಪಾನ, ಧೂಮಪಾನ, ಮಾದಕವಸ್ತುಗಳ ಸೇವನೆ
ಮೂತ್ರಪಿಂಡ ವೈಫಲ್ಯಕ್ಕೆ ಕಾರಣಗಳಾಗಿವೆ. ಹಾಗಾಗಿ, ಮಧುಮೇಹ, ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಮಾದಕವಸ್ತುಗಳ ಸೇವನೆಯಿಂದ ದೂರ ಇರುವುದರಿಂದ ಕೇವಲ ಮೂತ್ರಪಿಂಡ ವೈಫಲ್ಯ ಮಾತ್ರವಲ್ಲ, ಇತರ ಅನೇಕ ಕಾಯಿಲೆಗಳಿಂದಲೂ ಪಾರಾಗಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ವೈದ್ಯರ ಸಲಹೆ ಪಡೆಯದೆ ಔಷಧಿ ಸೇವಿಸಬೇಡಿ

ಮುಖ್ಯವಾಗಿ, ಯಾವುದೇ ಅನಾರೋಗ್ಯದ ಲಕ್ಷಣ ಕಂಡು ಬಂದರೂ ನೇರವಾಗಿ ಔಷಧ ಅಂಗಡಿಗೆ ತೆರಳಿ ಅವರ ಸಲಹೆಯ ಮೇರೆಗೆ ಔಷಧ ಸೇವಿಸುವುದು ಅಪಾಯಕಾರಿ. ಅದರಲ್ಲೂ, ನೋವು ನಿವಾರಕಗಳ ಅತಿಯಾದ ಸೇವನೆಯೂ ಮೂತ್ರಪಿಂಡಗಳಿಗೆ ಹಾನಿ ಉಂಟುಮಾಡುತ್ತದೆ. ಹಾಗಾಗಿ, ಯಾವುದೇ ವಿಧವಾದ ಅನಾರೋಗ್ಯ ಉಂಟಾದರೂ ಸಂಬಂಧಿಸಿದ ವೈದ್ಯರ ಸಲಹೆ ಪಡೆಯಲೇಬೇಕು ಎಂದು ಜಿಲ್ಲಾ ಸರ್ವೇಕ್ಷಣಾಕಾರಿ ಡಾ.ಶ್ರೀನಿವಾಸ್ ಸಲಹೆ ನೀಡುತ್ತಾರೆ.

ಕೊಡಗು ಜಿಲ್ಲೆಯಲ್ಲಿ199  ಮಂದಿಗೆ ಡಯಾಲಿಸಿಸ್  ಸೇವೆ ನೀಡಲಾಗುತ್ತಿದೆ. ಮೂತ್ರಪಿಂಡಗಳಿಗೆ ಹಾನಿಯಾಗುವಂತಹ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ಪಡೆಯುವುದು ಅಪಾಯಕಾರಿ. ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ಸಮಸ್ಯೆಗಳಿಂದ
ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ.

-ಡಾ.ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಕಾರಿ.

ಸದ್ಯ ಟೆಲಿಮೆಡಿಸಿನ್ ಮೂಲಕ ಡಯಾಲಿಸಿಸ್ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ. ಮೂತ್ರಪಿಂಡ ತಜ್ಞ ವೈದ್ಯರ ನೇಮಕಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ವೈದ್ಯರ ನೇಮಕವಾದಲ್ಲಿ ಸಮಸ್ಯೆ ಬಗೆಹರಿಯಲಿದೆ.

-ಡಾ.ಎ.ಜೆ.ಲೋಕೇಶ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…

4 hours ago

ಓದುಗರ ಪತ್ರ: ಪರೀಕ್ಷೆ ವೇಳೆ ಆರೋಗ್ಯ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಿ

ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…

4 hours ago

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

4 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…

4 hours ago

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…

4 hours ago

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…

4 hours ago