ಎಚ್.ಎಸ್.ದಿನೇಶ್‌ಕುಮಾರ್
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಬರೆ
ಮೈಸೂರು: ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯಿಂದಾಗಿ ಭತ್ತದ ಬೆಳೆಗೆ ಹೊಡೆತ ಬಿದ್ದಿದ್ದು, ಪರಿಣಾಮ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ-ಮಧ್ಯಮ ವರ್ಗದ ಜನರು ಅಕ್ಕಿ ಬೆಲೆಯ ದಿಢೀರ್ ಏರಿಕೆಯಿಂದ ಕಂಗಾಲಾಗುವಂತಾಗಿದೆ.
ಅಕ್ಕಿ ಬೆಲೆ ಏರಿಕೆಯ ಪರಿಣಾಮ ಗ್ರಾಹಕರು ಹೊಟೇಲ್ ತಿಂಡಿ-ತಿನಿಸುಗಳ ಬೆಲೆ ಹೆಚ್ಚಳದ ಬಿಸಿ ಎದುರಿಸಬೇಕಾಗಲಿದೆ. ದೈನಂದಿನ ಜೀವನದ ಅಗತ್ಯಆಹಾರ ಪದಾರ್ಥಗಳಲ್ಲಿ ಅಕ್ಕಿ ಇಲ್ಲದೇ ದಿನ ನಿತ್ಯದ ಆಹಾರ ತಯಾರಿಕೆ ಕಷ್ಟಸಾಧ್ಯ ಎಂಬಂತಾಗಿದೆ. ಒಂದು ತಿಂಗಳ ಹಿಂದೆ ೬೦-೭೦ ರೂ. ಆಸುಪಾಸಿನಲ್ಲಿದ್ದ ಪ್ರತಿ ಕೆಜಿ ಅಕ್ಕಿಯ ಬೆಲೆ ಇದೀಗ ದಿಢೀರ್ ಏರಿಕೆ ಕಂಡುಬಂದಿದೆ.
ಇದರಿಂದಾಗಿ ಗೃಹಿಣಿಯರು, ಆಹಾರ ತಯಾರಿಕೆ ಉದ್ದಿಮೆಗಳು, ಹೋಟೆಲ್ ಮಾಲೀ ಕರು, ಫುಟ್‌ಪಾತ್ ವ್ಯಾಪಾರಿಗಳು, ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ನಿತ್ಯ ಹತ್ತಾರು ಕೆಜಿ ಅಕ್ಕಿ ಬಳಸುವ ಹೋಟೆಲ್ ಮಾಲೀಕರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಬುಲೆಟ್, ಎಂ. ಆರ್. ಗೋಲ್ಡ್, ಗೌರಿ ಸಣ್ಣ, ಪಾಲಿಷ್ ರಹಿತ ಅಕ್ಕಿ, ಸೋನಾ ಮಸೂರಿ ಹಾಗೂ ಇನ್ನಿತರ ಕಂಪೆನಿಗಳ ಅಕ್ಕಿ ಮಾರಾಟವಾಗುತ್ತಿವೆ. ಬೆಲೆ ಕೂಡ ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ವ್ಯತ್ಯಾಸಗಳಿವೆ. ಕಳೆದ ಒಂದು ತಿಂಗಳ ಹಿಂದೆ ೭೦ ರೂ.ಗೆ ಮಾರಾಟವಾಗುತ್ತಿದ್ದ ಬುಲೆಟ್, ಕೋಲಂ ಅಕ್ಕಿ ಇದೀಗ ೯೦ ರೂ. ದಾಟಿದೆ. ೬೫ ರೂ. ಕೆಜಿಗೆ ಮಾರಾಟವಾಗುತ್ತಿದ್ದ ಸೋನಾ ಮಸೂರಿ ಇದೀಗ ೮೦ ರೂ.ದಾಟಿದೆ. ಉಳಿದಂತೆ ವಿವಿಧ ಕಂಪೆನಿಗಳ ಅಕ್ಕಿ ದರಗಳು ಹೆಚ್ಚಳ ಕಂಡಿವೆ.
ಮಳೆ ಕೊರತೆ ಕಾರಣ: ಪ್ರತೀ ಬಾರಿ ಸಕಾಲದಲ್ಲಿ ಮಳೆಯಾಗುತ್ತಿದ್ದ ಕಾರಣ ಗದ್ದೆ ಬಯಲಿನಲ್ಲಿ ಮಾತ್ರವಲ್ಲದೆ ಕೆರೆ ಕಟ್ಟೆಗಳ ಕೆಳಭಾಗದಲ್ಲಿ ಕೂಡ ಭತ್ತವನ್ನು ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ಸಕಾಲಕ್ಕೆ ಮಳೆಯಾಗದ ಕಾರಣ ಭತ್ತ ಬೆಳೆಯುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹೀಗಾಗಿ ಅಕ್ಕಿ ಬೆಲೆ ಏರಲು ಕಾರಣ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಕ್ಕಿಯ ಬೆಲೆಗಳು ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಇದರಿಂದ ಹೋಟೆಲ್‌ನ ಆಹಾರ ಪದಾರ್ಥಗಳ ಬೆಲೆಗಳನ್ನು ಏರಿಕೆ ಮಾಡುವ ಚಿಂತನೆಯಲ್ಲಿ ಕೆಲ ಹೋಟೆಲ್ ಮಾಲೀಕರು ಇದ್ದಾರೆ.
ಇದರ ಜೊತೆಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಅಡುಗೆ ಎಣ್ಣೆ, ದಿನಸಿ ಪದಾರ್ಥಗಳ ಬೆಲೆ ಕೂಡ ಏರಿಕೆ ಕಂಡಿವೆ. ಇದು ಹೋಟೆಲ್ ಉದ್ಯಮಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ತಿಂಡಿ ತಿನಿಸುಗಳ ಬೆಲೆ ಏರಿಕೆ ಅನಿವಾರ್ಯ ಎಂದು ಹೋಟೆಲ್ ಉದ್ಯಮಿಗಳು ಹೇಳುತ್ತಾರೆ.
ಪಡಿತರ ಅಕ್ಕಿಗೆ ಬೇಡಿಕೆ: ಅಕ್ಕಿಯ ಬೆಲೆಗಳು ಏರಿಕೆ ಕಂಡ ಹಿನ್ನೆಲೆಯಲ್ಲಿ ಇದೀಗ ಸಣ್ಣಪುಟ್ಟ ಹೋಟೆಲ್(ಕೆಲ ದೊಡ್ಡ ಹೋಟೆಲ್‌ಗಳು)ಗಳ ಮಾಲೀಕರು ಇದೀಗ ಪಡಿತರ ಅಕ್ಕಿ ಮೇಲೆ ಕಣ್ಣು ಹಾಕಿದ್ದಾರೆ.
ಮಧ್ಯಮ ವರ್ಗ ಹಾಗೂ ಹಿಂದುಳಿದವರ್ಗದವರು ವಾಸಿಸುತ್ತಿರುವ ಬಡಾವಣೆಗಳನ್ನು ಗುರಿಯಾಗಿಟ್ಟುಕೊಂಡು ಆಟೋಗಳ ಮೂಲಕ ತೆರಳಿ ಪಡಿತರ ಅಕ್ಕಿ ಕೆಜಿಗೆ ೨೫ ರೂ. ನಿಂದ ೩೦ ರೂ. ನೀಡಿ ಖರೀದಿಸುತ್ತಿದ್ದಾರೆ.
” ನಮ್ಮದು ಫುಟ್‌ಪಾತ್ ಹೊಟೇಲ್ ಆದರೂ ಜನರಿಗೆ ಗುಣಮಟ್ಟದ ಹಾಗೂ ಶುಚಿಯಾದ ಆಹಾರವನ್ನು ನೀಡುತ್ತಿದ್ದೇವೆ. ಇದೀಗ ಅಕ್ಕಿ, ಎಣ್ಣೆ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ನಮಗೆ ವ್ಯಾಪಾರ ಮಾಡುವುದು ಕಷ್ಟ ಎಂಬಂತಾಗಿದೆ. ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ. ಇಲ್ಲದಿದ್ದಲ್ಲಿ ಬೆಲೆ ಏರಿಕೆ ಅನಿವಾರ್ಯ. ಇದರಿಂದ ಜನರು ತೊಂದರೆ ಅನುಭವಿಸಬೇಕಾಗುತ್ತದೆ.”
-ಸತೀಶ್, ತಳ್ಳುಗಾಡಿ ಹೊಟೇಲ್ ಮಾಲೀಕ
” ಕಳೆದ ಒಂದು ತಿಂಗಳ ಅವಧಿಯಲ್ಲಿ ಅಕ್ಕಿ ಬೆಲೆ ಕೆಜಿಗೆ ೨೦ ರೂ. ಹೆಚ್ಚಳವಾಗಿದೆ. ಅಡುಗೆ ಎಣ್ಣೆ ಬೆಲೆಗಳು ಇಳಿಕೆಯಾಗುತ್ತಿಲ್ಲ. ದಿನಸಿ ಪದಾರ್ಥಗಳ ಬೆಲೆ ಕೂಡ ಏರಿಕೆ ಕಂಡಿವೆ. ಇದರಿಂದ ಹೋಟೆಲ್ ನಡೆಸುವವರು ಸಂಕಷ್ಟದಲ್ಲಿ ಇದ್ದಾರೆ. ಕೆಲ ಹೋಟೆಲ್‌ಗಳು ಮುಚ್ಚುವ ಹಂತದಲ್ಲಿವೆ. ಬೆಲೆ ಏರಿಕೆ ಅನಿವಾರ್ಯ.”
-ಸಿ.ನಾರಾಯಣಗೌಡ, ಅಧ್ಯಕ್ಷರು, ಹೋಟೆಲ್ ಮಾಲೀಕರ ಸಂಘ
ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ಜಗಳ ಸಾಮಾನ್ಯ. ನಾನು ಇಲ್ಲಿ ಇಬ್ಬರು…
ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ…
ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ…
ಮಾನ್ಯರೆ , ಕುವೆಂಪುನಗರ ಬಡಾವಣೆ ಆರಂಭವಾದ ದಿನಗಳಿಂದಲೂ ಇಲ್ಲಿ (ಮನೆನ ಸಂಖ್ಯೆ ೨೨೨೨, ನಾಲ್ಕನೆಯ ಕ್ರಾಸ್, ಗಂಗೂಬಾಯಿ ಹಾನಗಲ್ ರಸ್ತೆ…
ಜಿ.ಪಿ.ಬಸವರಾಜು ಖುಷಿಯೋ, ಸಂಕಟವೊ ಒಡಲೊಳಗಿಟ್ಟುಕೊಳ್ಳುತ್ತಾರೆ ಜನಸಾಮಾನ್ಯರು ಹತ್ತು ದಿನಗಳ ಕಾಲ ಕುಣಿದು ಕುಣಿದು ದಣಿದ ಮೈಸೂರು ದಸರಾ ಕಾಲ್ತೆಗೆದಿದೆ. ಹೋಗುವಾಗ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಹರಿದ್ವಾರಕ್ಕೆ ಹೋಗಿ ತಲೆಯ ಕೂದಲು ತೆಗೆಸಿಕೊಂಡರು! ನೋಯ್ಡಾದ ೫೨ ವರ್ಷ ಪ್ರಾಯದ ಅಲಕಾನಂದಾ ದಾಸ್‌ಗುಪ್ತಾ ಒಬ್ಬ…