ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
‘ಎಮ್ಮೆ ಇನ್ವೆಸ್ಟಿಗೇಷನ್ ಟೀಮ್’ ಅಂತ ಅಡ್ಡ ಹೆಸರೂ ಬಂತು
ಪೊಲೀಸ್ ಇಲಾಖೆಯಲ್ಲಿ ತನಿಖಾಧಿಕಾರಿಯಾಗಿ ಹಲವಾರು ಕ್ಲಿಷ್ಟಕರ ಹಾಗೂ ಸವಾಲಿನ ಪ್ರಕರಣಗಳನ್ನು ಭೇದಿಸಿರುವ ನನಗೆ, ಹಳೆಯದಾಗಿ ನನೆಗುದಿಗೆ ಬಿದ್ದಿರುವ ‘ಲಾಂಗ್ ಪೆಂಡಿಂಗ್ ರಿಪೋರ್ಟ್’ (ಎಲ್ಪಿಆರ್) ಕಡತಗಳೆಂದರೆ ಮೊದಲಿನಿಂದಲೂ ಒಂದು ವಿಚಿತ್ರ ಆಕರ್ಷಣೆ. ಪತ್ತೇದಾರಿ ಕಾದಂಬರಿಯೊಂದರ ಪುಟಗಳನ್ನು ತಿರುವುತ್ತಾ, ಕ್ರೈಮ್ ಕಥೆಯೊಂದರ ನಿಗೂಢವಾದ ಕಂದರದ ಆಳಕ್ಕೆ ಇಳಿಯುತ್ತಾ ಹೋದಂತೆ ಈ ಕಡತಗಳು ರೋಚಕತೆಯನ್ನು ಹುಟ್ಟುಹಾಕುತ್ತವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಅವರು ಜಮೀನಿನ ಮೇಲೆ ಹೊರಬಂದು ಮುಂದಿನ ವಿಚಾರಣೆಗಳಿಗೆ ಹಾಜರಾಗದೆ ತಲೆಮರೆಸಿಕೊಂಡಾಗ ಅಂತಹ ಕಡತಗಳನ್ನು ಎಲ್ಪಿಆರ್ ಪಟ್ಟಿಗೆ ಸೇರಿಸಲಾಗುತ್ತದೆ. ನ್ಯಾಯಾಲಯ ಹಲವಾರು ಬಾರಿ ವಾರೆಂಟ್ ಹೊರಡಿಸಿದರೂ ಜಗ್ಗದೇ ನಿಗೂಢವಾಗಿ ಕಣ್ಮರೆಯಾಗುವ ಇವರು ‘ಬೇತಾಳ’ನಂತಹವರು. ಅಂತಹ ಬೇತಾಳದ ಬೆನ್ನುಬಿದ್ದ ವಿಕ್ರಮನಂತೆ ನಮ್ಮ ಕ್ರೈಂ ಪತ್ತೇದಾರಿ ಸಿಬ್ಬಂದಿಗಳು ಕಾರ್ಯಪ್ರವೃತ್ತರಾದರೆ, ಶಿಕಾರಿಯ ಹೆಜ್ಜೆ ಗುರುತಿನ ಜಾಡನ್ನು ಹಿಡಿದು ಹೊರಡುವ ಬೇಟೆಗಾರರಂತೆ ಇವರು ಆರೋಪಿಯ ಮನುಷ್ಯ ಸಹಜ ದೌರ್ಬಲ್ಯಗಳನ್ನೆಲ್ಲ ಗುರುತಿಸಿ ಸೆರೆಹಿಡಿಯುತ್ತಾರೆ. ಇಂತಹ ಎಲೆಮರೆಯ ಕಾಯಿಗಳ ಸಾಹಸಕ್ಕೆ ಹಿರಿಯ ಅಧಿಕಾರಿಯಾಗಿ ನಾವು ಎಷ್ಟೇ ಶಹಭಾಸಗಿರಿ ಕೊಟ್ಟರೂ, ಬಹುಮಾನ ನೀಡಿದರೂ ಅದು ಕಡಿಮೆಯೇ.
ಟ್ರೈ-ಜಂಕ್ಷನ್ ಸವಾಲು ಮತ್ತು ೧೯೬೫ರ ಆ ರಾತ್ರಿ: ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ತ್ರಿವೇಣಿ ಸಂಗಮದಂತಿರುವ (ಟ್ರೈ-ಜಂಕ್ಷನ್) ಬೀದರ್ ಜಿ, ಐತಿಹಾಸಿಕವಾಗಿ ಭ್ರಾತೃತ್ವಕ್ಕೆ ಹೆಸರುವಾಸಿಯಾಗಿದ್ದರೂ ಪೊಲೀಸಿಂಗ್ ದೃಷ್ಟಿಯಿಂದ ಅತ್ಯಂತ ಸವಾಲಿನ ಜಿಲ್ಲೆ. ಪೊಲೀಸರಿಗೆ ತಮ್ಮ ಕಾರ್ಯವ್ಯಾಪ್ತಿಯ ಪರಿಮಿತಿ ಇದ್ದರೆ, ಅಪರಾಧಿಗಳಿಗೆ ಯಾವುದೇ ಗಡಿಯ ನಿಬಂಧನೆಗಳಿರುವುದಿಲ್ಲ. ಇಲ್ಲಿ ಅಪರಾಧವೆಸಗಿ ಪಕ್ಕದ ರಾಜ್ಯಗಳಿಗೆ ಪರಾರಿಯಾಗುವುದು ಸಾಮಾನ್ಯ. ನಾನು ಬೀದರ್ ಜಿಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಜಿಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಇಂತಹ ಸುಮಾರು ೨೦ ಪ್ರಕರಣಗಳಲ್ಲಿ ೧೨ ಪ್ರಕರಣಗಳನ್ನು ನಮ್ಮ ತಂಡ ಒಂದೇ ವರ್ಷದಲ್ಲಿ ಪತ್ತೆ ಮಾಡಿ ಮುಕ್ತಾಯಗೊಳಿಸಿತು. ಬೀದರ್ ಪೊಲೀಸ್ ಇತಿಹಾಸದ ಇದೊಂದು ದಾಖಲೆಯ ಪ್ರಯತ್ನವಾಗಿತ್ತು. ಈ ಪೈಕಿ ೧೯೬೫ರಲ್ಲಿ ನಡೆದ ಒಂದು ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಸಿಬಿಸಿ ಸುದ್ದಿಯಾದದ್ದು ಒಂದು ರೋಚಕ ಅಧ್ಯಾಯವೇ ಸರಿ.
ಈ ಕಥೆ ಆರಂಭವಾಗುವುದು ೧೯೬೫ರ ಏಪ್ರಿಲ್ ೨೫ರಂದು. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮೆಹಕರ್ ಗ್ರಾಮದ ರೈತ ಮುರಳೀಧರ್ ರಾವ್ ಕುಲಕರ್ಣಿ ಅವರ ಕೊಟ್ಟಿಗೆಯಿಂದ ರಾತ್ರೋರಾತ್ರಿ ಎರಡು ಎಮ್ಮೆಗಳು ಹಾಗೂ ಒಂದು ಕರು ಕಳ್ಳತನವಾಗುತ್ತವೆ. ಹಾಲು ಹೈನು ಮಾಡಿಕೊಂಡು ಬದುಕುತ್ತಿದ್ದ ಕೃಷಿ ಕುಟುಂಬಕ್ಕೆ ಇದು ದೊಡ್ಡ ಆಘಾತವೇ ಸರಿ. ಇಂದಿನ ಕಾಲದಲ್ಲಿ ಸೈಬರ್ ವಂಚಕರು ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಿಂದ ಹಣ ದೋಚಿದಾಗ ಒಂದು ಕುಟುಂಬಕ್ಕೆ ಆಗುವ ಆಘಾತಕ್ಕೆ ಅಂದಿನ ಆ ಜನುವಾರು ಕಳ್ಳತನ ಸಮಾನವಾಗಿತ್ತು. ಮುರಳೀಧರ್ ರಾವ್ ಅವರು ಹುಲಸೂರು ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ನಡೆಸಿದರು.
ಕಾವ್ಯಮಯ ಮಹಜರು ಮತ್ತು ಕಣ್ಮರೆಯಾದ ಆರೋಪಿಗಳು: ಎರಡು ದಿನಗಳ ಬಳಿಕ ಮಹಾರಾಷ್ಟ್ರ ಗಡಿ ಭಾಗದ ಹಳ್ಳಿಯೊಂದರಲ್ಲಿ ರಾತ್ರಿ ಗಸ್ತಿನಲ್ಲಿದ್ದ ಗ್ರಾಮ ಭದ್ರತಾ ಸಿಬ್ಬಂದಿ ‘ಮಚಕುರಿಯ’ ಕೈಗೆ ಇಬ್ಬರು ಅಸಾಮಿಗಳು ಎಮ್ಮೆಗಳ ಹಿಂಡಿನೊಂದಿಗೆ ಸಿಕ್ಕಿಬೀಳುತ್ತಾರೆ. ಸಂಶಯಗೊಂಡ ಗ್ರಾಮಸ್ಥರು ವಿಚಾರಿಸಿದಾಗ ಕಳ್ಳರು ಮೂರು ಕಡೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಳ್ಳುತ್ತಾರೆ. ತಕ್ಷಣ ಕರ್ನಾಟಕ ಪೊಲೀಸರು ಹಾಗೂ ರೈತ ಮುರಳೀಧರ್ ರಾವ್ ಅಲ್ಲಿನ ಠಾಣೆಗೆ ತೆರಳಿ ಜನುವಾರುಗಳನ್ನು ಗುರುತಿಸಿ ವಶಕ್ಕೆ ಪಡೆದರು. ಅಂದಿನ ನಮ್ಮ ಪೊಲೀಸ್ ಸಿಬ್ಬಂದಿ ಬರೆದಿದ್ದ ಎಮ್ಮೆಯ ಅಮಾನತ್ (ಸೀಜರ್ ) ಮಹಜರು ಇಂದಿಗೂ ಓದಲು ಅತ್ಯಂತ ಕುತೂಹಲಕಾರಿಯಾಗಿತ್ತು. ಚಂದ್ರಾಕಾರದ ಕೋಡು, ಹಣೆ ಚಂದ್ರಿ, ಬಾಲ ಚಂದ್ರಿ, ಬಿಳಿ ಕಣ್ಣು, ಸೇರು ಹಾಲೇಮ್ಮಿ, ಸಪುರ ಮೈ… ಹೀಗೆ ಪ್ರತಿಯೊಂದು ಎಮ್ಮೆಯನ್ನೂ ಒಬ್ಬ ಕವಿ ಯಂತೆ ವರ್ಣಿಸಿ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾ ರಾಷ್ಟ್ರದ ಕಿಸನ್ (೩೦) ಮತ್ತು ವಿಠ್ಠಲ (೨೨) ಎಂಬವರನ್ನು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಯಿತು. ಆದರೆ, ಜಮೀನಿನ ಮೇಲೆ ಹೊರಬಂದ ಇಬ್ಬರೂ ಮತ್ತೆ ನ್ಯಾಯಾಲಯದ ವಿಚಾರಣೆ ಕಡೆ ಮುಖ ಮಾಡಲಿಲ್ಲ. ಮುಂದೆ ೨೦೦೬ರಲ್ಲಿ ಮೊದಲ ಆರೋಪಿ ಕಿಸನ್ ಮೃತಪಟ್ಟಿದ್ದರಿಂದ ಆತನ ಮರಣ ಪ್ರಮಾಣಪತ್ರ ಸಲ್ಲಿಸಿ ಪ್ರಕರಣ ಕೈಬಿಡಲಾಯಿತು. ಆದರೆ, ಎರಡನೇ ಆರೋಪಿ ವಿಠ್ಠಲನ ಸುಳಿವು ಮಾತ್ರ ೫೮ ವರ್ಷಗಳಾದರೂ ಸಿಗಲೇ ಇಲ್ಲ.
ಎಎಸ್ಐ ಚಂದ್ರು ಅವರ ಶೇರ್ಲೊಕ್ ಹೊಮ್ಸನಂತಹ ಪತ್ತೇದಾರಿಕೆ: ನಾನು ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಹಳೆಯ ಕಡತಗಳಿಗೆ ಜೀವ ತುಂಬಲು ಅನುಭವಿ ಸಿಬ್ಬಂದಿಯ ವಿಶೇಷ ತಂಡ ರಚಿಸಿದೆ. ಈ ಪ್ರಕರಣವನ್ನು ಭೇದಿಸುವ ಜವಾಬ್ದಾರಿಯನ್ನು ಮೆಹಕರ್ ಠಾಣೆಯ ಪಿಎಸ್ಐ ಶಿವ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಚಂದ್ರು ವಹಿಸಿಕೊಂಡರು. ಆರೋಪಿ ಬದುಕಿದ್ದರೆ ಆತನಿಗೆ ಸುಮಾರು ೮೦ ವರ್ಷ ವಯಸ್ಸಾಗಿರಬೇಕು. ಅಂತಹ ವೃದ್ಧನನ್ನು ಪತ್ತೆಹಚ್ಚುವುದು ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಷ್ಟೇ ಕಷ್ಟಕರವಾಗಿತ್ತು. ಆದರೂ ಛಲ ಬಿಡದ ಚಂದ್ರು, ಸುಮಾರು ಒಂದೂವರೆ ತಿಂಗಳ ಕಾಲ ಕರ್ನಾಟಕ-ಮಹಾರಾಷ್ಟ್ರ ಗಡಿಯುದ್ದಕ್ಕೂ ಅಲೆದಾಡಿದರು. ಆರೋಪಿಯ ಕುಟುಂಬದ ಹಿನ್ನೆಲೆ ಕೆದಕುತ್ತಾ ಹೋದಾಗ, ದೂರದ ವೃದ್ಧ ಸಂಬಂಧಿಯೊಬ್ಬರು ಇತ್ತೀಚೆಗೆ ಮದುವೆಯೊಂದರಲ್ಲಿ ವಿಠ್ಠಲನನ್ನು ನೋಡಿದ್ದಾಗಿ ಸುಳಿವು ನೀಡಿದರು. ಆ ಮದುವೆಯ ಫೋಟೋಗಳನ್ನು ತಡಕಾಡಿದ ಚಂದ್ರು, ವೃದ್ಧ ವಿಠ್ಠಲನ ಅಸ್ಪಷ್ಟ ಫೋಟೋವೊಂದನ್ನು ಪತ್ತೆಹಚ್ಚಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಗ್ರಾಮವೊಂದನ್ನು ತಲುಪಿದರು.
ಕಾನೂನು ಮತ್ತು ಮಾನವೀಯತೆಯ ಸಂಗಮ: ಮುಂಜನೆ ೧೧ ಗಂಟೆಯ ಸುಮಾರಿಗೆ ಆ ಗ್ರಾಮದ ಮನೆ ಮನೆ ರಾಮಾಯಣದ ಮಾಹಿತಿ ವಿನಿಮಯ ಕೇಂದ್ರವಾದ ಚಹ ಹೋಟೆಲ್ ಒಂದರಲ್ಲಿ ಕುಳಿತ ಎಎಸ್ಐ ಚಂದ್ರು, ಸ್ಥಳೀಯರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ ಹಳೆಯ ಕಡತವೊಂದಕ್ಕೆ ಸಹಿ ಬೇಕೆಂದು ವಿಠ್ಠಲನ ಬಗ್ಗೆ ವಿಚಾರಿಸಿದರು. ಗ್ರಾಮದ ದಳಪತಿಯ ಸಹಾಯದಿಂದ ೮೦ ವರ್ಷದ ವೃದ್ಧನೊಬ್ಬನನ್ನು ಚಂದ್ರು ಮುಂದೆ ತಂದು ನಿಲ್ಲಿಸಲಾಯಿತು. ಸರಿಯಾಗಿ ನಿಲ್ಲಲೂ ಶಕ್ತಿಯಿಲ್ಲದ ಆ ವೃದ್ಧನ ಬಳಿ ಕುಳಿತ ಚಂದ್ರುರವರು, ಕಿಸನ್ನ ಗೆಳೆಯ ನೀನೇ ಅಲ್ಲವೇ? ಎಂದು ಕೇಳಿದಾಗ, ತನ್ನ ಇತಿಹಾಸವನ್ನು ಅರಿತು ಬಂದಿರುವ ಅಧಿಕಾರಿಯ ಮುಂದೆ ವಿಠ್ಠಲ ನಿರುತ್ತರನಾದ. ಅದ್ಯಾವುದೋ ಕಾಲದಲ್ಲಿ ಬುದ್ಧಿಯಿಲ್ಲದೆ ಮಾಡಿದ ತಪ್ಪು ಸ್ವಾಮಿ, ಈಗ್ಯಾಕೆ ಆ ಹಳೆ ಮಾತು? ಎಂದು ಕಣ್ಣೀರಾದ. ಮಕ್ಕಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ, ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿ ಬದುಕುತ್ತಿದ್ದ ಆ ವೃದ್ಧನ ದಯನೀಯ ಸ್ಥಿತಿ ಕಂಡು ಪೊಲೀಸರಿಗೂ ಮರುಕ ಹುಟ್ಟಿತು. ಕಳೆದ ೫೦ ವರ್ಷಗಳಿಂದ ಆತ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಸಜ್ಜನನಂತೆ ಬದುಕಿದ್ದನ್ನು ಗ್ರಾಮಸ್ಥರೂ ದೃಢಪಡಿಸಿದರು.
ಒಂದೆಡೆ ನ್ಯಾಯಾಲಯದ ಆದೇಶ ಪಾಲಿಸುವ ಕರ್ತವ್ಯ, ಇನ್ನೊಂದೆಡೆ ವೃದ್ಧನ ಅಸಹಾಯಕತೆ-ಇಂತಹ ನೈತಿಕ ಸಂದಿಗ್ಧತೆಯ ನಡುವೆಯೂ ಪೊಲೀಸರು ಮಾನವೀಯತೆ ಮೆರೆದರು. ಆತನಿಗೆ ಕೈಯಿಂದಲೇ ತುಸು ಊಟ ತಿಂಡಿಗೆ ಹಣ ನೀಡಿ, ಜಿ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಉಚಿತ ನ್ಯಾಯವಾದಿಗಳ ವ್ಯವಸ್ಥೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ಹಿನ್ನೆಲೆ ಹಾಗೂ ವೃದ್ಧನ ಸ್ಥಿತಿಯನ್ನು ಗಮನಿಸಿದ ನ್ಯಾಯಾಧೀಶರು ರೂ. ೫೦೦ ದಂಡ ವಿಧಿಸಿದರು; ಆ ಹಣವನ್ನೂ ವಕೀಲರೇ ಒಬ್ಬರು ಮಾನವೀಯತೆಯಿಂದ ಪಾವತಿಸಿ ವೃದ್ಧನನ್ನು ಬಿಡುಗಡೆಗೊಳಿಸಿದರು.
ಸ್ಥಳೀಯರ ಪ್ರಶಂಸೆ ಮತ್ತು ಸಾಮಾಜಿಕ ಜಲತಾಣದ ವ್ಯಂಗ್ಯದಿಂದ ಬಿಬಿಸಿಯ ಮೆಚ್ಚುಗೆಯವರೆಗೆ: ಈ ಅಪರೂಪದ ಯಶಸ್ಸನ್ನು ಸಾರ್ವಜನಿಕರಿಗೆ ಇಲಾಖೆಯ ಕುರಿತು ಭರವಸೆ ಮೂಡಿಸಲು ಸುದ್ದಿ ಪತ್ರಿಕೆಗಳು ತಮ್ಮ ಸಾಮಾಜಿಕ ಜಲತಾಣಗಳಲ್ಲಿ ಹಂಚಿಕೊಂಡಾಗ ನಮ್ಮ ಕಾರ್ಯವೈಖರಿ ಪ್ರತಿದಿನ ನೋಡುತ್ತಿದ್ದ ಸ್ಥಳೀಯ ನಾಗರಿಕರು ಪ್ರಶಂಸೆ ವ್ಯಕ್ತ ಪಡಿಸಿದರೆ, ಕೆಲವು ನೆಟ್ಟಿಗರು ಮಾತ್ರ :ಎಮ್ಮೆ ಕಳ್ಳನನ್ನು ಹಿಡಿಯಲು ೫೮ ವರ್ಷವೇ? ನಮ್ಮ ಪೊಲೀಸ್ ನಮ್ಮ ಹೆ(ಎ)ಮ್ಮೆ’, ‘ಕೊನೆಗೂ ಯಮರಾಜನ ವಾಹನವನ್ನು ಕಂಡು ಹಿಡಿದ ನಮ್ಮ ಪೊಲೀಸರು’, ‘ಎಮ್ಮೆಯ ಆತ್ಮಕ್ಕೆ ಚಿರಶಾಂತಿ ಕರುಣಿಸಿದ ಪೊಲೀಸರು’ ಎಂದೆಲ್ಲ ತರಹೇವಾರಿಯಾಗಿ ಪೋಸ್ಟ್ ಮಾಡಿ ಅಪಹಾಸ್ಯ ಮಾಡಿದ್ದರು.
ನಮ್ಮ ತಂಡದ ಕುರಿತು ಅವರ ಸಹೋದ್ಯೋಗಿಗಳು ಕೂಡ ‘ಎಮ್ಮೆ ಇನ್ವೆಸ್ಟಿಗೇಷನ್ ಟೀಮ’ ಅಂತ ಅಡ್ಡ ಹೆಸರಿಟ್ಟರು. ಆದರೆ ನಾನು ನಮ್ಮ ತಂಡಕ್ಕೆ ‘ಸುದ್ದಿಗಾಗಿ ಸೇವೆ ಬೇಡ, ಸೇವೆ ಮಾಡಿ ಸುದ್ದಿಯಾಗುವುದು ಬೇಡ, ಸದ್ದಿಲ್ಲದೇ ಸೇವೆ ಮಾಡಬೇಕು’ ಎಂದು ಮದರ್ ತೆರೇಸಾ ಅವರು ನನ್ನ ಹಿರಿಯ ಅಧಿಕಾರಿಯೊಬ್ಬರಿಗೆ ಹೇಳಿದ್ದ ಕಿವಿಮಾತುಗಳನ್ನು ನೆನಪಿಸಿದೆ. ಅವರ ಮನೋಬಲ ಕುಸಿಯದಂತೆ ಮಾಡಲು ಬಹಳ ಕಷ್ಟವೇ ಪಡಬೇಕಾಯಿತು. ವಿಕ್ರಮ ರಾಜನಿಗೆ ಪ್ರಶ್ನೆಯ ಉತ್ತರ ಹೊಳೆಯುವ ಮುನ್ನವೇ ಹೊರಟುಹೋಗುವ ಬೇತಾಳನನ್ನ ಮತ್ತೆ ಬೆಂಬತ್ತಿ ಹೊರಡುವಂತೆ, ನೆಟ್ಟಿಗರ ವ್ಯಂಗ್ಯೋಕ್ತಿಗಳಿಗೆ ತಲೆಕೆಡಿಸಿಕೊಳ್ಳದೆ ನಮ್ಮ ತಂಡ ಮತ್ತೊಂದು ಹಳೆಯ ಕಡತದ ‘ಬೇತಾಳ’ವನ್ನು ಬೆನ್ನಟ್ಟಿ ಕರ್ತವ್ಯದ ಹಾದಿಯಲ್ಲಿ ಮುನ್ನಡೆಯಿತು. ಆದರೆ, ಕೆಲವೇ ದಿನಗಳಲ್ಲಿ ಈ ವಿಶಿಷ್ಟ ಪ್ರಕರಣ ದೆಹಲಿ ಮೂಲದ ಪತ್ರಕರ್ತರೊಬ್ಬರ ಮೂಲಕ ಬಿಬಿಸಿ ಸುದ್ದಿವಾಹಿನಿಯಲ್ಲಿ ವರದಿಯಾಯಿತು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿದ್ದ ಅನ್ಯದೇಶದ ನನ್ನ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ನನಗೆ ಮೆಸೇಜ್ ಮಾಡಿ ನಮ್ಮ ತಂಡಕ್ಕೆ ಬೆನ್ನು ತಟ್ಟಿ ಪ್ರಶಂಸಿಸಿದರು.
” ಸದ್ದಿಲ್ಲದೆ ಸಾಗುವ ಪೊಲೀಸ್ ಸೇವೆಯಲ್ಲಿ ಎಷ್ಟೇ ಪ್ರಶಂಸೆ, ಟೀಕೆ-ವ್ಯಂಗ್ಯ ಮಾತುಗಳು ಬಂದರೂ, ಸತ್ಯ ಮತ್ತು ಕರ್ತವ್ಯದ ಹಾದಿಯಲ್ಲಿ ಮುನ್ನಡೆಯುವುದೇ ಖಾಕಿ ಧರಿಸಿದವರ ಬದ್ಧತೆ ಮತ್ತು ಸಾರ್ಥಕತೆಯಾಗಿದೆ”
ಕೆ.ಬಿ.ರಮೇಶನಾಯಕ ಜಿಪಂ, ತಾಪಂ ಚುನಾವಣೆ ಸನಿಹದಲ್ಲೇ ಕುತೂಹಲ ಮೂಡಿಸಿದ ಶಾಸಕ ಜಿ.ಟಿ.ದೇವೇಗೌಡರ ನಡೆ ಮೈಸೂರು: ದಳಪತಿಗಳೊಂದಿಗೆ ಮುನಿದು ಪಕ್ಷದ ನಾಯಕತ್ವ,…
ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅವಾಚ್ಯ…
ಶ್ರೀನಗರ: ಜಮ್ಮು–ಕಾಶ್ಮೀರದ ಕುಲ್ಗಾಮ್ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಲಷ್ಕರ್ ಉಗ್ರರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಸೇನೆ ಹಾಗೂ ಜಮ್ಮು–ಕಾಶ್ಮೀರ…
ಹಾಸನ: ಮೂರು ದಿನಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ! ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ. ನಾಗೇನಹಳ್ಳಿ…
ಕೊಡಗು: ಗುಜರಾತ್ ಮೂಲದ ದಂಪತಿಯನ್ನು ಬಲಿ ಪಡೆದ ಸ್ಪೀಡ್ ಬೋಟ್ ದುರಂತದ ಬೆನ್ನಲ್ಲೇ, ಕೊಡಗಿನ ಹಾರಂಗಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳನ್ನು…