Andolana originals

ಎಚ್‌ಡಿಕೆಯಿಂದ ಅಂತರ, ಕೈ ನಾಯಕರಿಗೆ ಹತ್ತಿರ!

ಕೆ.ಬಿ.ರಮೇಶನಾಯಕ

ಜಿಪಂ, ತಾಪಂ ಚುನಾವಣೆ ಸನಿಹದಲ್ಲೇ ಕುತೂಹಲ ಮೂಡಿಸಿದ ಶಾಸಕ ಜಿ.ಟಿ.ದೇವೇಗೌಡರ ನಡೆ 

ಮೈಸೂರು: ದಳಪತಿಗಳೊಂದಿಗೆ ಮುನಿದು ಪಕ್ಷದ ನಾಯಕತ್ವ, ಸಂಘಟನೆಯಿಂದ ದೂರ ಉಳಿದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ದಿನದಿಂದ ದಿನಕ್ಕೆ ಕಾಂಗ್ರೆಸ್ ನಾಯಕರಿಗೆ ಹತ್ತಿರವಾಗುವ ಹೆಜ್ಜೆ ಇಟ್ಟಿದ್ದಾರೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಸನಿಹದಲ್ಲೇ ಜಿ.ಟಿ. ದೇವೇಗೌಡರು ಇಟ್ಟಿರುವ ನಿಗೂಢ ಹೆಜ್ಜೆ ಸಾಕಷ್ಟು ರಾಜಕೀಯ ಬದಲಾವಣೆಗೆ ದಾರಿಯಾಗುವಂತಿದೆ. ೨೦೨೮ರ ಚುನಾವಣೆಯಲ್ಲಿ ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಸಾರ್ವಜನಿಕ ವಾಗಿಯೇ ಹೇಳುವ ಮೂಲಕ ಸ್ವಪಕ್ಷ ಜಾ.ದಳ ಹಾಗೂ ಕಾಂಗ್ರೆಸ್‌ನಲ್ಲಿರುವ ಡಿಕೆಶಿ ವಿರೋಧಿ ಬಣಕ್ಕೂ ಸಂದೇಶ ರವಾನಿಸಿದ್ದಾರೆ. ಹಾಗೆಯೇ ಡಿಕೆಶಿ ಗುಂಪಿನ ಜೊತೆಗೆ ಮುಂದಿನ ದಿನಗಳಲ್ಲಿ ಕೈ ಜೋಡಿಸುವ ಸುಳಿವು ನೀಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

ಜಾ.ದಳ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೈತಪ್ಪಿದ್ದರಿಂದ ದಳಪತಿಗಳೊಂದಿಗೆ ಮುನಿದು ಪಕ್ಷದ ಸಭೆ, ಕಾರ್ಯಕ್ರಮಗಳಿಂದ ದೂರ ಉಳಿದು ತಮ್ಮ ಅಸಮಾಧಾನವನ್ನು ಹೊರ ಹಾಕಿ ಏಕಾಂಗಿಯಾಗಿ ಉಳಿದಿದ್ದರು. ಇದೇ ಹೊತ್ತಿನಲ್ಲಿ ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಅಂದಿನ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ-ಜಾ.ದಳ ನಾಯಕರು ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾಗಲೇ ೨೦೨೪ರ ಅ.೩ರಂದು ಚಾಮುಂಡಿಬೆಟ್ಟದಲ್ಲಿ ನಡೆದಿದ್ದ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.

ಎಫ್ಐಆರ್ ಹಾಕಿದಾಕ್ಷಣ ರಾಜೀನಾಮೆ ಏಕೆ ಕೊಡಬೇಕು? ಎಚ್.ಡಿ.ಕುಮಾರಸ್ವಾಮಿ ವಿರುದ್ಧವೂ ಎಫ್ಐಆರ್ ಆಗಿರುವುದರಿಂದ ಅವರು ರಾಜೀನಾಮೆ ಕೊಡುತ್ತಾರೆಯೇ? ಎನ್ನುವ ಮೂಲಕ ಜಾ.ದಳ ನಾಯಕ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಸಮಯ ಸಿಕ್ಕಾಗಲೆಲ್ಲಾ ಜಿ.ಟಿ.ದೇವೇಗೌಡರ ವಿರುದ್ಧ ಅತೃಪ್ತಿಯ ಮಾತುಗಳನ್ನಾಡುತ್ತಲೇ ಬಂದಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಕುರಿತು ಪ್ರಸ್ತಾಪಿಸಿದ್ದರು. ಆದರೆ, ಜಾ.ದಳದಲ್ಲಿ ಈ ಆಂತರಿಕ ಸಮಸ್ಯೆ ನಿವಾರಣೆಯಾಗಬಹುದೆಂದು ಭಾವಿಸಿರುವಾಗಲೇ ಜಿ.ಟಿ.ದೇವೇ ಗೌಡರು ಈಗ ಡಿ.ಕೆ.ಶಿವಕುಮಾರ್ ಅವರನ್ನು ಹಾಡಿ ಹೊಗಳುವ ಮೂಲಕ ಮತ್ತೊಂದು ದಾಳ ಉರುಳಿಸಿದ್ದಾರೆ.

ಬಿಡದಿ ಟೌನ್‌ಶಿಪ್, ಸ್ಟಿಂಗ್ ಆಪರೇಷನ್ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಡಿ.ಕೆ.ಶಿವಕುಮಾರ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ರಣಕಹಳೆ ಮೊಳಗಿಸಿರುವ ಸಂದರ್ಭದಲ್ಲೇ ಡಿಕೆಶಿ ಮತ್ತೊಮ್ಮೆ ಮುಖ್ಯ ಮಂತ್ರಿಯಾಗಬೇಕು ಎಂದು ಹೇಳುವ ಮೂಲಕ ಜಿಟಿಡಿ ಕುತೂಹಲ ಮೂಡಿಸಿದ್ದಾರೆ.

ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಲು ಮೈಸೂರು ದಾರಿಯಾಯಿತು. ಈಗಲೂ ನಿಮಗೆ ಸಿಎಂ ಆಗಲು ಮೈಸೂರು ಕಾರಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿಗಿಂತಲೂ ಹೆಚ್ಚು ಸಮಯ ಡಿಕೆಶಿ ಕೆಲಸ ಮಾಡುತ್ತಿದ್ದಾರೆಂದು ಬೆನ್ನುತಟ್ಟುವ ಮೂಲಕ ಮುಂದಿನ ನಡೆಯನ್ನು ಕಾಯುವಂತೆ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಹತ್ತಿರ: ೨೦೨೪ರಿಂದ ಕಾಂಗ್ರೆಸ್ ನಾಯಕರೊಂದಿಗೆ ಬಾಂಧವ್ಯ ಬೆಳೆಸಿಕೊಂಡು ಜಾ.ದಳದಿಂದ ದೂರವಿರುವ ಜಿ.ಟಿ.ದೇವೇಗೌಡರು, ಸಿದ್ದರಾಮಯ್ಯ ಅವರೊಂದಿಗೆ ಹಳೆಯ ಸ್ನೇಹ ಮುಂದುವರಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳಿಗೆ ಅನುದಾನ ದಕ್ಕಿಸಿಕೊಂಡಿದ್ದರು.

ಇದೀಗ ಒಕ್ಕಲಿಗ ಸಮುದಾಯದ ನಾಯಕ ಡಿಕೆಶಿ ಪರವಾಗಿ ನಿಂತಿದ್ದಾರೆ. ಒಂದು ತಿಂಗಳ ಹಿಂದಷ್ಟೇ ನಡೆದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರು ಅವಿರೋಧವಾಗಿ ಆಯ್ಕೆಯಾಗಲು ಸಿಎಂ ಡಿಕೆಶಿ ಅವರೇ ಕಾರಣಕರ್ತರಾಗಿದ್ದರು. ಈಗಾಗಲೇ ಎಚ್‌ಡಿಕೆ ಕ್ಯಾಂಪ್‌ನಲ್ಲಿದ್ದ ಎನ್. ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಅನೇಕ ಒಕ್ಕಲಿಗ ನಾಯಕರು ಡಿಕೆಶಿ ಜತೆಗೆ ಗಟ್ಟಿಯಾಗಿ ನಿಂತಿದ್ದರೂ ಮೈಸೂರು ಭಾಗದಲ್ಲಿ ಕೊರತೆ ಕಾಡುತ್ತಿತ್ತು. ಇದೀಗ ಡಿಕೆಶಿ ಜತೆಗೆ ಜಿಟಿಡಿ ಕಾಣಿಸಿಕೊಂಡು ಸೂಕ್ತ ಸಂದರ್ಭದಲ್ಲಿ ತಮ್ಮ ಮುಂದಿನ ರಾಜಕೀಯ ತೀರ್ಮಾನವನ್ನು ಹೊರ ಹಾಕುವುದಕ್ಕೆ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ

ಜಿಪಂ, ತಾಪಂ ಚುನಾವಣೆ ಹೊತ್ತಲ್ಲೇ ದಾಳ:  ಜಿಪಂ, ತಾಪಂ ಚುನಾವಣೆ ಬರುವ ಸನಿಹದಲ್ಲೇ ಜಿ.ಟಿ.ದೇವೇಗೌಡರ ಈ ನಡೆಯು ಜಿಲ್ಲೆಯ ಮಟ್ಟಿಗೆ ಒಂದಿಷ್ಟು ಬದಲಾವಣೆಗೆ ಕಾರಣವಾಗಲಿದೆ. ಜಾ.ದಳ ಸಂಘಟನೆಯಿಂದ ದೂರ ಉಳಿದಿರುವ ಜಿಟಿಡಿ ತಮ್ಮ ಬೆಂಬಲಿಗರು, ಹಿಂಬಾಲಕರ ಹಿತ ಕಾಪಾಡಬೇಕಿದೆ. ಜಾ.ದಳದಲ್ಲಿ ಕಣಕ್ಕಿಳಿಸಬೇಕಾದರೆ ಎಚ್‌ಡಿಕೆ ಜತೆ ಕೈ ಜೋಡಿಸಬೇಕಿದೆ. ಆದರೆ, ಅಂತಹ ವಾತಾವರಣ ಕಾಣಿಸದೆ ಹೋಗಿದ್ದು, ಕಾಂಗ್ರೆಸ್‌ನಲ್ಲೇ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿ ಪರೋಕ್ಷವಾಗಿ ಗೆಲ್ಲಿಸುವ ರಣತಂತ್ರ ಹೂಡಬೇಕಿದೆ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಮಟ್ಟಿಗೆ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕತ್ವದ ಕೊರತೆ ಇದೆ. ಚುನಾವಣೆಯಲ್ಲಿ ತನು-ಮನ-ಧನವನ್ನು ಅರ್ಪಿಸಿ ಗೆಲ್ಲಿಸಿಕೊಂಡು ಬರುತ್ತೇನೆಂದು ಹೇಳುವ ವರ್ಚಸ್ಸಿನ ಮುಖಂಡರೂ ಇಲ್ಲ. ಹೀಗಾಗಿಯೇ, ತಾವು ಹೇಳಿದವರಿಗೆ ಟಿಕೆಟ್ ಕೊಡಿಸಿ ಮನೆಯಲ್ಲೇ ಕುಳಿತು ಗೆಲ್ಲಿಸುವಮೂಲಕ ಹಿಡಿತ ಸಾಧಿಸಲು ಪ್ಲಾನ್ ಮಾಡಿರುವುದರಿಂದ ಸಾಕಷ್ಟು ಬದಲಾವಣೆ ನಡೆಯಬಹುದೆಂದು ಹೇಳಲಾಗಿದೆ

 

 

ಆಂದೋಲನ ಡೆಸ್ಕ್

Recent Posts

ಮೂರು ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ಗೆ ನಟ ಧನ್ವೀರ್‌!

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅವಾಚ್ಯ…

18 hours ago

ಕುಲ್ಗಾಮ್‌ನಲ್ಲಿ ಎನ್‌ಕೌಂಟರ್‌; ಲತೀಫ್‌ ಭಟ್‌ ಸೇರಿ ಇಬ್ಬರು ಲಷ್ಕರ್‌ ಉಗ್ರರ ಹತ್ಯೆ!

ಶ್ರೀನಗರ: ಜಮ್ಮು–ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಲಷ್ಕರ್‌ ಉಗ್ರರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಸೇನೆ ಹಾಗೂ ಜಮ್ಮು–ಕಾಶ್ಮೀರ…

18 hours ago

ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ; ರಸ್ತೆಗಿಳಿದ ಗ್ರಾಮಸ್ಥರು!

ಹಾಸನ: ಮೂರು ದಿನಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ! ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ. ನಾಗೇನಹಳ್ಳಿ…

20 hours ago

ಸ್ಪೀಡ್‌ ಬೋಟ್‌ ದುರಂತ: ಹಾರಂಗಿಯಲ್ಲಿ ಜಲಕ್ರೀಡೆಗೆ ತಾತ್ಕಾಲಿಕ ಬ್ರೇಕ್‌!

ಕೊಡಗು: ಗುಜರಾತ್‌ ಮೂಲದ ದಂಪತಿಯನ್ನು ಬಲಿ ಪಡೆದ ಸ್ಪೀಡ್‌ ಬೋಟ್‌ ದುರಂತದ ಬೆನ್ನಲ್ಲೇ, ಕೊಡಗಿನ ಹಾರಂಗಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳನ್ನು…

20 hours ago

ಮೇಲುಕೋಟೆಯಲ್ಲಿ ನಾಳೆ ರಾಜಮುಡಿ ಮಹೋತ್ಸವದ ಸಂಭ್ರಮ!

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನವೆಂಬರ್‌ 17ರ ರಾತ್ರಿ 7 ಗಂಟೆಗೆ ಅದ್ಧೂರಿ ರಾಜಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಲಿದೆ.…

22 hours ago