ಚಿರಂಜೀವ ಸಿ.ಹುಲ್ಲಹಳ್ಳಿ
ಹುಲಿ, ಚಿರತೆ, ಇತರೆ ಪ್ರಾಣಿಗಳ ಪುನರ್ವಸತಿ ಸಂರಕ್ಷಣೆಗೆ ಸವಾಲು
ಕಳೆದ ಒಂದು ತಿಂಗಳಲ್ಲಿ ೧೦ ವ್ಯಾಘ್ರಗಳ ಸೆರೆ
ಪುನರ್ವಸತಿ ಕೇಂದ್ರದಲ್ಲಿ ನಾಲ್ಕು ಹುಲಿಗಳಿಗೆ ಆಶ್ರಯ
೬ ಹುಲಿಗಳು ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ
ನುಗು, ಮೊಳೆಯೂರು ವಲಯಗಳಲ್ಲಿ ಹುಲಿ ಸೆರೆ ಕಾರ್ಯಾಚರಣೆ
ಮೈಸೂರು: ನಾಗರಹೊಳೆ-ಬಂಡೀಪುರ ವ್ಯಾಪ್ತಿಯಲ್ಲಿ ಹುಲಿ ಕಾರ್ಯಾಚರಣೆ ಮುಂದುವರಿದಿದ್ದು, ಕಳೆದ ಒಂದು ತಿಂಗಳಲ್ಲಿ ೧೦ ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಆದರೆ, ಹುಲಿ ಆರೈಕೆಗೆ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿನ ಹುಲಿ ಸಂರಕ್ಷಣಾ ಮಿತಿ ಸಂಪೂರ್ಣ ಭರ್ತಿಯಾಗಿರುವುದು ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ.
ಸತತ ಒಂದು ತಿಂಗಳ ಅವಧಿಯಲ್ಲಿ ಬಂಡೀಪುರ-ನಾಗರಹೊಳೆ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಹಾವಳಿ ಅತಿಯಾಗಿದೆ. ರೈತರು ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ವೇಳೆ ಹುಲಿ ದಾಳಿಯಿಂದ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಓರ್ವ ರೈತ ಕಣ್ಣು ಕಳೆದುಕೊಂಡಿದ್ದಾರೆ. ಈ ಹುಲಿಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ. ಆದರೆ, ಇವುಗಳ ಆರೈಕೆ ಹೇಗೆ ಎಂಬುದು ಸಂಕಷ್ಟವಾಗಿ ಪರಿಣಮಿಸಿದೆ.
ಸದ್ಯಕ್ಕೆ ನುಗು ಮತ್ತು ಮೊಳೆಯೂರು ವನ್ಯಜೀವಿ ವಲಯದ ವ್ಯಾಪ್ತಿಯ ಮೂರು ಕಡೆಗಳಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಇತ್ತೀಚೆಗೆ ಮೈಸೂರಿನ ಇಲವಾಲದ ಸುತ್ತಮುತ್ತ ಕೂಡ ಹುಲಿ ಕಾಣಿಸಿಕೊಂಡು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಸದ್ಯಕ್ಕೆ ಸೆರೆ ಹಿಡಿಯುವ ಹುಲಿಗಳನ್ನು ಚೇತರಿಕೆಗಾಗಿ ಕೇಂದ್ರದಲ್ಲಿ ಚಿಕಿತ್ಸೆ ನೀಡುವುದು ಕಷ್ಟವಾಗಲಿದೆ. ಹಾಗಾಗಿ ಹುಲಿಗಳನ್ನು ಬನ್ನೇರುಘಟ್ಟ ವನ್ಯಜೀವಿ ಸಂರಕ್ಷಣೆ ಘಟಕಕ್ಕೆ ಕಳುಹಿಸಲಾಗುತ್ತಿದೆ.
ನಾಲ್ಕು ಹುಲಿ, ಮತ್ತೆ ಚಿರತೆಗಳು: ಸದ್ಯ ಮೈಸೂರು ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಎರಡು ಮರಿಗಳ ಜೊತೆಗೆ ಒಂದು ತಾಯಿ ಹುಲಿ ಹಾಗೂ ಕಾರ್ಯಾಚರಣೆಯಲ್ಲಿ ಸೆರೆಯಾದ ಒಂದು ಗಂಡು ಹುಲಿಗೆ ಆರೈಕೆ ನೀಡಲಾಗುತ್ತಿದೆ. ಇವುಗಳ ಜೊತೆಗೆ ಸೆರೆ ಹಿಡಿದ ಚಿರತೆಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದರಿಂದ ವಸತಿ ಕೇಂದ್ರವು ಸಂಪೂರ್ಣ ಭರ್ತಿಯಾಗಿದ್ದು, ಇನ್ನು ಮುಂದೆ ಸೆರೆ ಹಿಡಿಯಲಿರುವ ಹುಲಿಗಳನ್ನು ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ವಸತಿ ಪ್ರದೇಶ ವಿಸ್ತರಣೆ ಮತ್ತು ಹೆಚ್ಚುವರಿ ಕೇಂದ್ರಕ್ಕೆ ಆಗ್ರಹ: ರಾಜ್ಯದಲ್ಲಿ ವನ್ಯಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅರಣ್ಯ ಇಲಾಖೆ ಸೆರೆ ಹಿಡಿಯುವ ಹುಲಿಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಆದರೆ, ಇಲ್ಲಿನ ಪುನವರ್ಸತಿ ಕೇಂದ್ರ ಭರ್ತಿಯಾಗಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಇಲ್ಲಿನ ವಸತಿ ಕೇಂದ್ರದಲ್ಲಿ ಮತ್ತಷ್ಟು ಪ್ರಾಣಿಗಳ ಸಂರಕ್ಷಣೆಗಾಗಿ ಕೇಂದ್ರವನ್ನು ವಿಸ್ತರಿಸಬೇಕು ಎಂಬ ಕೂಗು ಕೇಳಿ ಬಂದಿದೆ.
ಸದ್ಯ ರಾಜ್ಯದಲ್ಲಿ ಮೈಸೂರು ಮತ್ತು ಬನ್ನೇರುಘಟ್ಟದಲ್ಲಿ ಮಾತ್ರ ವನ್ಯಜೀವಿಗಳಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಕೂಡ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು. ದಿನೇದಿನೆ ವನ್ಯಪ್ರಾಣಿಗಳ ಸೆರೆ ಕಾರ್ಯಾಚರಣೆ ಕೂಡ ಹೆಚ್ಚಾಗಿದೆ. ಹಾಗಾಗಿ ವನ್ಯಜೀವಿ ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸುವ ಅನಿವಾರ್ಯವಿದೆ.
ಪುನರ್ವಸತಿ ಕೇಂದ್ರದಲ್ಲಿ ೪ ಹುಲಿಗಳು: ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಗರಹೊಳೆ ವ್ಯಾಪ್ತಿಯಲ್ಲಿ ೧ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿ ೧೦ ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಆ ಪೈಕಿ ತಾಯಿ, ಎರಡು ಗಂಡು ಮರಿ ಹುಲಿಗಳು, ಮತ್ತೊಂದು ಗಂಡು ಹುಲಿ ಮಾತ್ರ ಮೈಸೂರಿನ ಪುನರ್ವಸತಿ ಕೇಂದ್ರದಲ್ಲಿ ಇವೆ. ಇತರ ಆರು ಹುಲಿಗಳನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಹುಲಿ ಸೆರೆ?:
೨೦೨೫ರ ಅಕ್ಟೋಬರ್ ೧೮ರಂದು ಬಡಗಪುರ ಸಮೀಪ ಒಂದೂವರೆ ವರ್ಷದ ಹೆಣ್ಣು ಹುಲಿ ಮರಿ, ಅಕ್ಟೋಬರ್ ೨೭ರಂದು ಮುಳ್ಳೂರುಸಮೀಪ ೪೦ರಿಂದ ೪೫ ದಿನಗಳ ವಯಸ್ಸಿನ ಎರಡು ಗಂಡು ಹುಲಿ ಮರಿಗಳು. ಅಕ್ಟೋಬರ್ ೨೮ರಂದು ಅಂಜನಾಪುರ – ಈರೇಗೌಡನಹುಂಡಿ ಬಳಿ ೬-೭ ವರ್ಷದ ಹೆಣ್ಣು ಹುಲಿ. ನವೆಂಬರ್.೫ರಂದು ಹೆಡಿಯಾಲ ವಲಯದಲ್ಲಿ ಒಂದೂವರೆ ವರ್ಷದ ಹೆಣ್ಣು ಹುಲಿ. ನವೆಂಬರ್ ೮ರಂದು ಹಳೇ ಹೆಗ್ಗುಡಿಲು ಬಳಿ ೧೨-೧೩ ವರ್ಷದ ಗಂಡು ಹುಲಿ. ನವೆಂಬರ್ ೧೦ರಂದು ಕಲ್ಲಹಳ್ಳಿ – ಪಡಗೂರು ಬಳಿ ೪ ವರ್ಷದ ಹೆಣ್ಣು ಹುಲಿ ಮತ್ತು ಮೂರು ಹುಲಿ ಮರಿಗಳನ್ನು ಸೆರೆಹಿಡಿಯಲಾಗಿದೆ.
” ಮೈಸೂರಿನ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೆರೆ ಹಿಡಿದ ಹುಲಿಗಳನ್ನು ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಹುಲಿಗಳು ಮಾತ್ರವಲ್ಲದೆ, ಚಿರತೆಗಳೂ ಇರುವುದರಿಂದ ಕೇಂದ್ರ ಭರ್ತಿಯಾಗಿದೆ.”
-ಅನುಷಾ, ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…