ಕೆ.ಬಿ.ರಮೇಶನಾಯಕ
ಅಖಾಡಕ್ಕೆ ಧುಮುಕಿದ ಪ್ರಮುಖ ಮೂರು ಪಕ್ಷಗಳ ನಾಯಕರು
ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳಲು ಹಾಲಿ ಶಾಸಕರಲ್ಲೇ ಪೈಪೋಟಿ
ಘಟಾನುಘಟಿ ನಾಯಕರ ಮನದಲ್ಲೂ ತಲ್ಲಣ
ಡೆಲಿಗೇಟ್ಸ್‌ಗಳಿಗೆ ಭಾರೀ ಡಿಮ್ಯಾಂಡ್ ಸೃಷ್ಟಿ
ಮೈಸೂರು: ಗ್ರಾಮೀಣ ಪ್ರದೇಶದ ಲಕ್ಷಾಂತರ ರೈತರ ಕೃಷಿ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತಾ ಸಹಕಾರ ಕ್ಷೇತ್ರದಲ್ಲೇ ಪ್ರಮುಖ ಪಾತ್ರ ವಹಿಸುತ್ತಿರುವ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಗೆ ಜೂ.೨೬ರಂದು ಚುನಾವಣೆ ನಡೆಯುತ್ತಿದ್ದು, ಈ ಬಾರಿ ಸಹಕಾರ ಕ್ಷೇತ್ರದಲ್ಲಿ ಹಿಡಿತ ಸಾಧಿಸಬೇಕೆಂಬ ಒಂದಂಶದ ಸೂತ್ರದಿಂದಾಗಿ ರಾಜಕೀಯ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದೆ.
ಹಲವು ವರ್ಷಗಳಿಂದ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ತೆರೆಮರೆಯಲ್ಲಿದ್ದುಕೊಂಡು ತಮ್ಮವರನ್ನು ಗೆಲ್ಲಿಸಿಕೊಳ್ಳುತ್ತಿದ್ದ ಮುಖಂಡರು ಈ ಬಾರಿ ತಾವೇ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದರಿಂದ ರಾಜಕೀಯ ಪಕ್ಷಗಳ ನಡುವೆಯೇ ಪ್ರತಿಷ್ಠೆ, ಪೈಪೋಟಿಗೆ ದಾರಿಮಾಡಿಕೊಟ್ಟಿದೆ. ಎಂಸಿಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ, ಎಪಿಎಂಸಿ, ಟಿಎಪಿಸಿಎಂಎಸ್, ಹಾಪ್‌ಕಾಮ್ಸ್ ಸೇರಿ ಸಹಕಾರ ಕ್ಷೇತ್ರದ ಯಾವುದೇ ಚುನಾವಣೆ ನಡೆದರೂ ರಾಜಕೀಯ ಮುಖಂಡರು ದೂರ ಉಳಿದು ತಮ್ಮವರ ಗೆಲುವಿಗಾಗಿ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದರು.
ಫಲಿತಾಂಶ ಸೇರಿದಂತೆ ಎಲ್ಲವೂ ಸದ್ದಿಲ್ಲದೆ ನಡೆದು ಹೋಗುತ್ತಿತ್ತು. ಆದರೆ, ಈ ಬಾರಿಯ ಚುನಾವಣೆ ಒಂದು ರೀತಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಂತೆ ರಂಗುಪಡೆದುಕೊಂಡು ಎಲ್ಲರಲ್ಲೂ ಕುತೂಹಲ ಕೆರಳುವಂತೆ ಮಾಡಿದೆ.
ಅಖಾಡಕ್ಕೆ ರಾಜಕೀಯ ನಾಯಕರು: ಮಾಜಿ ಸಚಿವ ಜಿ.ಟಿ.ದೇವೇಗೌಡರ ಕುಟುಂಬಕ್ಕೆ ಸೇರಿದ ಜಿ.ಡಿ.ಹರೀಶ್ಗೌಡ, ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಹೊರತುಪಡಿಸಿದರೆ ಉಳಿದ ಶಾಸಕರು ಅಥವಾ ಮಾಜಿ ಶಾಸಕರು ಕಣಕ್ಕೆ ಇಳಿದಿರಲಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳ ನಾಯಕರು ಅಖಾಡಕ್ಕೆ ಪ್ರವೇಶ ಪಡೆಯುತ್ತಿರುವುದು ವಿಶೇಷವಾಗಿದೆ. ಶಾಸಕರಾದ ಜಿ.ಡಿ.ಹರೀಶ್‌ಗೌಡ, ಅನಿಲ್ ಚಿಕ್ಕಮಾದು, ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ. ಗಣೇಶ್‌ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಮತ್ತೊಬ್ಬ ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ರ ಸಹೋದರ ಎಚ್.ಪಿ.ಅಮರನಾಥ್, ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್‌ರ ಪುತ್ರ ಅಮಿತ್ ವಿ. ದೇವರಹಟ್ಟಿ, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ ಅವರು ಪ್ರಮುಖವಾಗಿ ಕಣಕ್ಕಿಳಿಯುತ್ತಿದ್ದು, ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.
ಈ ಕ್ಷೇತ್ರದಲ್ಲಿ ಸ್ಥಳೀಯ ಶಾಸಕಸಿ.ಪುಟ್ಟರಂಗಶೆಟ್ಟಿ ಸ್ಪರ್ಧೆ ಮಾಡಿರುವ ಪರಿಣಾಮವಾಗಿ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುವವರು ತೀವ್ರ ಪೈಪೋಟಿ, ಸೆಣಸಾಟ ನಡೆಸಬೇಕಾಗಿದೆ. ತಮ್ಮ ತಮ್ಮ ತಾಲ್ಲೂಕಿನಲ್ಲಿ ಹಿಡಿತ ಸಾಽಸಿರುವ ಶಾಸಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಿಂದ ಮತ ಚಲಾಯಿಸಲು ಆಯ್ಕೆಯಾಗಿರುವಂತಹ ಡೆಲಿಗೇಟ್ಸ್‌ಗಳನ್ನು ತಮ್ಮ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುತ್ತಿದ್ದಾರೆ. ಜಾತಿ, ಪಕ್ಷ ಮತ್ತಿತರ ಕಾರಣಕ್ಕಾಗಿ ಕ್ಷೇತ್ರ ಕೈಜಾರದಂತೆ ನೋಡಿಕೊಳ್ಳಲು ಪ್ರತಿಯೊಂದು ಅಸವನ್ನೂ ಬಳಸುತ್ತಿರುವುದರಿಂದ ಡೆಲಿಗೇಟ್ಸ್‌ಗಳಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಒಂದೇ ಪಕ್ಷ, ವ್ಯಕ್ತಿಯ ಪರವಾಗಿ ನಿಲ್ಲುವ ಭರವಸೆ ನೀಡಿದರೆ, ಬೇರೆ ಬೇರೆ ಕಡೆಯಿಂದ ಸಿಗುವಂತಹ ಲಾಭಗಳನ್ನು ಕೈಚೆಲ್ಲಿ ಕೂರಬೇಕಾಗುತ್ತದೆ. ಅದರ ಬದಲಿಗೆ ಎಲ್ಲರಿಗೂ ಆಶ್ವಾಸನೆಯ ಸುರಿಮಳೆಗೈದು ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚಕರು, ಅನುಮೋದಕರಾಗಿ ಸಹಿ ಮಾಡುವ ಮೂಲಕ ಘಟಾನುಘಟಿ ನಾಯಕರ ಮನ ದಲ್ಲೂ ತಲ್ಲಣ ಉಂಟಾಗುವಂತೆ ಬೆಳವಣಿಗೆಗಳು ನಡೆದಿವೆ.
ಶಾಸಕರೊಬ್ಬರು ಕಣಕ್ಕಿಳಿಯುವ ತಾಲ್ಲೂಕೊಂದರಲ್ಲಿ ನಿನ್ನೆ-ಮೊನ್ನೆಯವರೆಗೆ ಜತೆಗೇ ಇದ್ದ ಡೆಲಿಗೇಟ್ಸ್‌ಗಳು ಈಗ ಸೌಜನ್ಯಯುತವಾಗಿ ಉಮೇದುವಾರಿಕೆ ಸಲ್ಲಿಸುತ್ತಿದ್ದ ಮುಖಂಡರೊಬ್ಬರ ನಾಮಪತ್ರಕ್ಕೆ ಸೂಚಕರಾಗಿ ಸಹಿಹಾಕುವ ಮೂಲಕ ಕೊನೆಯ ತನಕವೂ ಯಾವುದನ್ನು ನಿಖರವಾಗಿ ಹೇಳಲಾಗದಂತಹ ಸಂದೇಶ ರವಾನಿಸಿದ್ದಾರೆ.
ಇದು ಎಲ್ಲ ತಾಲ್ಲೂಕುಗಳಲ್ಲೂ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಕೂಡ ತಲೆಕೆಡಿಸಿಕೊಳ್ಳುವಂತಾಗಿದೆ. ಶಾಸಕರಲ್ಲೇ ಪೈಪೋಟಿ: ಎಂಸಿಡಿಸಿಸಿ ಬ್ಯಾಂಕ್ ಆಡಳಿತವನ್ನು ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ತೆಗೆದು ಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಟಾಸ್ಕ್‌ನ್ನು ಚಾಚೂ ತಪ್ಪದೇ ಪಾಲಿಸಲು ಮುಂದಾಗಿರುವ ಶಾಸಕರು ಅದಕ್ಕೆ ತಕ್ಕಂತೆ ರಣತಂತ್ರ ಹೆಣೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೂವರು ಶಾಸಕರು ಸ್ಪರ್ಧೆ ಮಾಡುತ್ತಿರುವ ಕಾರಣ ಅಽಕಾರ ಹಿಡಿಯುವುದು ಅನಿವಾರ್ಯವಾಗಿದೆ.
ಇದರ ಜತೆಗೆ, ಶಾಸಕರೊಬ್ಬರ ತಂದೆ, ಮಾಜಿ ಶಾಸಕರ ಸಹೋದರ, ಮಾಜಿ ಶಾಸಕರೊಬ್ಬರು ಆಯ್ಕೆಯಾದರೆ ಸುಲಭವಾಗಿ ಅಧಿಕಾರ ಹಿಡಿಯಬಹುದು ಎನ್ನುವ ಲೆಕ್ಕಾಚಾರವೂ ಅಡಗಿದೆ. ಸರ್ಕಾರದ ನಾಮ ನಿರ್ದೇಶಿತನಾಲ್ವರಿಗೆ ಮತದಾನದ ಹಕ್ಕು ಇರುವ ಕಾರಣ ಕಾಂಗ್ರೆಸ್ ವಲಯದಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿವೆ.
ಜಿ.ಡಿ.ಹರೀಶ್‌ಗೌಡರ ಮೌನ ತಂತ್ರ:
ಸಹಕಾರ ಕ್ಷೇತ್ರದಲ್ಲಿ ಹಿಡಿತವನ್ನಿಟ್ಟುಕೊಂಡಿರುವ ಜಾತ್ಯತೀತ ಜನತಾದಳದ ಶಾಸಕ ಜಿ.ಡಿ.ಹರೀಶ್ಗೌಡರು ಮೌನವಾಗಿಯೇ ಕಾರ್ಯತಂತ್ರಹೆಣೆಯುತ್ತಿದ್ದಾರೆ. ಈ ಬಾರಿ ಕೆಲ ಶಾಸಕರು ಸ್ಪರ್ಧೆ ಮಾಡುತ್ತಿದ್ದರೂ ಮೌನವಾಗಿರುವ ಹರೀಶ್‌ಗೌಡರು, ತಮ್ಮದೇ ಆದ ದಾಳ ಉರುಳಿಸಲು ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಹುಣಸೂರು ತಾಲ್ಲೂಕು ಕ್ಷೇತ್ರದಿಂದ ತಾವು ಗೆಲ್ಲುವ ಜತೆಗೆ ಉಳಿದ ಕ್ಷೇತ್ರಗಳಲ್ಲೂ ತಮ್ಮವರನ್ನು ಗೆಲ್ಲಿಸಿಕೊಳ್ಳಬೇಕಿದೆ. ಒಂದು ವೇಳೆ ಬಹುಮತ ಸಿಗದಿದ್ದಲ್ಲಿ ಅಧಿಕಾರ ದೂರದ ಮಾತು. ಅಪೆಕ್ಸ್ ಬ್ಯಾಂಕ್‌ಗೆ ನಾಮ ನಿರ್ದೇಶನಗೊಳ್ಳಲು ಪೈಪೋಟಿ ಎದುರಿಸಬೇಕಾಗುತ್ತದೆ ಎನ್ನುವುದನ್ನು ಚೆನ್ನಾಗಿ ಬಲ್ಲ ಹರೀಶ್‌ಗೌಡರು ಮುಂದೆ ಯಾವ ರೀತಿಯ ಹೆಜ್ಜೆ ಇಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ
ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ:
ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದೆ. ಮಂಗಳವಾರ ಯಳಂದೂರು ತಾಲ್ಲೂಕು ಕ್ಷೇತ್ರದಿಂದ ವೈ.ಎಂ.ಜಯರಾಮು, ತಾಲ್ಲೂಕು ಜಿಲ್ಲೆ ಹಾಗೂ ಜಿಲ್ಲಾ ಮೇಲ್ಪಟ್ಟು ಕಾರ್ಯ ವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕುಗಳ ಕ್ಷೇತ್ರದಿಂದ ಎಚ್.ಜಿ.ಶಿವಶಂಕರ್, ಕೊಳ್ಳೇಗಾಲ ತಾಲ್ಲೂಕು ಮತ್ತು ಹನೂರು ತಾಲ್ಲೂಕಿನ ಕ್ಷೇತ್ರದಿಂದ ಸಿ.ನಾಗರಾಜು, ಬಿ. ಎಸ್.ಮಲ್ಲೇಶ್, ಗುಂಡ್ಲುಪೇಟೆ ತಾಲ್ಲೂಕು ಕ್ಷೇತ್ರದಿಂದ ಎಸ್.ಎಂ.ವೀರಪ್ಪ, ಪಿರಿಯಾಪಟ್ಟಣ ತಾಲ್ಲೂಕು ಕ್ಷೇತ್ರದಿಂದ ಸಿ.ಎನ್.ರವಿ, ಎಚ್.ಡಿ.ಕೋಟೆ ತಾಲ್ಲೂಕು ಕ್ಷೇತ್ರದಿಂದ ಶಿವಣ್ಣ, ಶಿವನಂಜೇಗೌಡ, ಜಿ.ಕೆ. ಲಕ್ಷ್ಮೀಪ್ರಸಾದ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದ್ದು, ಶಾಸಕರಾದ ಜಿ.ಡಿ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಎಚ್.ಎಂ.ಗಣೇಶ್ ಪ್ರಸಾದ್, ಎಚ್.ವಿ.ರಾಜೀವ್, ದೊಡ್ಡಸ್ವಾಮೇಗೌಡ, ಬಿ. ಸದಾನಂದ ಮೊದಲಾದವರು ನಾಮಪತ್ರ ಸಲ್ಲಿಸಲಿದ್ದಾರೆ.
ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…
ನಾಪೋಕ್ಲು : ಕಾಡಾನೆಗಳ ದಾಳಿಯಿಂದ ವಾಹನಗಳು ಜಖಂಗೊಂಡ ಘಟನೆ ಮಂಜಾಟ್ ಗಿರಿಜನ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಇಲ್ಲಿಗೆ ಸಮೀಪದ…
ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…
ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…
ನಂಜನಗೂಡು : ಬೈಕ್ ಸಮೇತ ಯುವಕ ಸಜೀವ ದಹನವಾಗಿರುವ ಘಟನೆ ತಾಲ್ಲೂಕಿನ ಕೊರೆಹುಂಡಿ ಗ್ರಾಮದ ಹುಲ್ಲಹಳ್ಳಿ ನಾಲೆ ಬಳಿ ನಡೆದಿದೆ.…
ಹನೂರು : ಯಾರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ ಅನ್ನೋದು ಮುಖ್ಯವಲ್ಲ. ಅಭಿವೃದ್ಧಿ ಮಾಡ್ತಿದ್ದಾರಾ, ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರಾ ಅನ್ನೋದೇ…