ಹೊಳಲು ಶ್ರೀಧರ್, ಪತ್ರಕರ್ತಕರು ಹಾಗೂ ನಿವೃತ್ತ ಅಧ್ಯಾಪಕರು, ಮಂಡ್ಯ
ದತ್ತಿನಿಧಿಗಳ ಮೂಲಕ ೩೯ ಮಂದಿ ಸಾಧಕರಿಗೆ ಇಂದು ಪ್ರಶಸ್ತಿ ಪ್ರದಾನ
ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳ ಕೇಂದ್ರವಾಗಿರುವ ಮಂಡ್ಯ ಕರ್ನಾಟಕ ಸಂಘವು ೧೯೪೬ರಲ್ಲಿ ನೋಂದಣಿಗೊಂಡು ವಕೀಲ ಎಂ. ಮಹಾಬಲರಾಯ, ಇಂಡುವಾಳು ಹೆಚ್.ಹೊನ್ನಯ್ಯ, ಕೆ.ವಿ.ಶಂಕರಗೌಡ, ಕೆ.ಸಿಂಗಾರಿಗೌಡ, ಬಿ.ಪಿ.ನಾಗರಾಜಮೂರ್ತಿ, ಪಿ.ಎನ್.ಜವರಪ್ಪಗೌಡ, ಜಿ. ಮಾದೇಗೌಡ ಮುಂತಾದ ಹಿರಿಯ ನಾಯಕರಿಂದ ಕಾಯಕಲ್ಪ ಪಡೆದ ಈ ಸಂಸ್ಥೆಯ ತೇರನ್ನು ನಾಡಿನ ಕವಿಗಳು, ವಿದ್ವಾಂಸರು, ಗಮಕಿಗಳು ಮುನ್ನಡೆಸಿದ್ದಾರೆ.
೧೯೬೨ರಲ್ಲಿ ಜಿ.ಮಾದೇಗೌಡರು ಅಧ್ಯಕ್ಷರಾಗಿದ್ದಾಗ ಸಂಘಕ್ಕೆ ಸ್ವಂತ ಕಟ್ಟಡ ದೊರೆತು ಚಟುವಟಿಕೆಗಳಿಗೆ ವೇಗ ಸಿಕ್ಕಿತು. ೨೦೦೬ರವರೆಗೆ ಕಾರ್ಯನಿರ್ವಹಿಸಿದ ಸಂಘ ಆರ್ಥಿಕ ಮುಗ್ಗಟ್ಟಿನಿಂದ ನರಳುತ್ತಿದ್ದಾಗ ಅಂದಿನ ಅಧ್ಯಕ್ಷರಾದ ಕೆ.ಟಿ.ಶಿವಲಿಂಗಯ್ಯ ಹಾಗೂ ಕಾರ್ಯದರ್ಶಿಗಳಾದ ಮರಾಧ್ಯ ಪ್ರಸನ್ನ, ಎನ್.ಎಸ್.ರಮೇಶ್ ಅವರಕೋರಿಕೆಯ ಮೇರೆಗೆ ನಿವೃತ್ತಿಯ ಅಂಚಿನಲ್ಲಿದ್ದ ಪ್ರೊ. ಬಿ.ಜಯಪ್ರಕಾಶಗೌಡರು ಕಾರ್ಯದರ್ಶಿಯಾಗಿ ಬಂದದ್ದು ಸಂಘದ ಇತಿಹಾಸದಂದು ಮುಖ್ಯ ಘಟ್ಟವಾಗುತ್ತದೆ.
ಅಲ್ಲಿಂದ ಪ್ರಾರಂಭವಾದ ಅಭಿವೃದ್ಧಿ ಕಾರ್ಯ ಈವರೆಗೂ ನಡೆದುಕೊಂಡು ಬರುತ್ತಿದ್ದು, ಕರ್ನಾಟಕ ಸಂಘ ಒಂದು ಪೂರ್ಣಕಾಲಿಕ ಸಂಸ್ಥೆಯಾಗಿ ರೂಪ ಪಡೆದುಕೊಂಡಿದೆ. ೨೦೧೦ರಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರೊ.ಜಯಪ್ರಕಾಶ ಗೌಡರು ಆವರೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮೀಸಲಾಗಿದ್ದ ಕರ್ನಾಟಕ ಸಂಘವನ್ನು ಶೈಕ್ಷಣಿಕವಾಗಿ, ಸಂಶೋಧನಾತ್ಮಕವಾಗಿ ಹಾಗೂ ಪ್ರಸಾರಾಂಗವಾಗಿಯೂ ಪುಸ್ತಕಗಳ ಪ್ರಕಟಣೆಗೆ ಹೆಜ್ಜೆ ಇಟ್ಟದ್ದು ಇತಿಹಾಸವೇ ಸರಿ. ಜಯಪ್ರಕಾಶಗೌಡರ ಕೋರಿಕೆಯ ಮೇರೆಗೆ ಅಂದಿನ ಶಾಸಕರಾದ ಎಂ. ಶ್ರೀನಿವಾಸ್, ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಬಿ.ರಾಮಕೃಷ್ಣ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಹಾಲಿ ಸದಸ್ಯರಾದ ಮಧು ಜಿ.ಮಾದೇಗೌಡ ಮತ್ತು ರಾಷ್ಟ್ರೀಯ ಜನತಾದಳದ ಕಾರ್ಯದರ್ಶಿಗಳಾದ ಜಫುಲ್ಲಾಖಾನ್ ಅವರನ್ನು ಪ್ರಧಾನ ಪೋಷಕರಾಗಿರುವಂತೆ ಒಪ್ಪಿಸಿದ್ದು ಕರ್ನಾಟಕ ಸಂಘದ ಅಭಿವೃದ್ಧಿಯ ಮತ್ತೊಂದು ಮಜಲು ಎನ್ನಬಹುದು.
ಹೀಗೆ ಕರ್ನಾಟಕ ಸಂಘದ ಕಾರ್ಯಬಾಹುಳ್ಯವನ್ನು ವಿಸ್ತರಿಸಿದ ಪ್ರೊ.ಜಯಪ್ರಕಾಶಗೌಡರ ದೂರದೃಷ್ಟಿಯಿಂದ ಕರ್ನಾಟಕ ಸಂಘವು ಹತ್ತು- ಹಲವು ಆಯಾಮಗಳಲ್ಲಿ ಮುನ್ನಡೆಯಲು ಕಾರಣವಾಗಿದೆ. ಹಂಪಿಯ ಕನ್ನಡ ವಿ.ವಿ.ಯಿಂದ ಸಂಶೋಧನಾ ಕೇಂದ್ರವೆಂದು ಮಾನ್ಯತೆ ಪಡೆದು ಪಿಎಚ್.ಡಿ. ಪದವಿಗೆ ಮಾರ್ಗದರ್ಶನವನ್ನು ಮಾಡುತ್ತಿದೆ.
ನಾಡಿನ ಅನೇಕ ವಿ.ವಿ. ಗಳು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಅಕಾಡೆಮಿಗಳ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅನೇಕ ಹಿರಿಯರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿ ಪ್ರತಿವರ್ಷ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ.
ಇವೆಲ್ಲದರ ಜೊತೆಗೆ ೪ ವರ್ಷದಿಂದ ‘ಜನಸಾಮಾನ್ಯರಿಂದ ಜನಸಾಮಾನ್ಯರಿಗಾಗಿ’ ಎಂಬ ಘೋಷವಾಕ್ಯದೊಡನೆ ಜಿಯ ವಿವಿಧ ಕ್ಷೇತ್ರಗಳ ಹತ್ತಾರು ಸಾಧಕರನ್ನು ಗುರುತಿಸಿ ರೂ.೧೫,೦೦೦ ನಗದಿನೊಡನೆ ಪ್ರಶಸ್ತಿಗಳನ್ನು ಪ್ರದಾನಮಾಡುತ್ತ ಬರುತ್ತಿರುವುದು ಹೆಗ್ಗಳಿಕೆಯ ವಿಷಯ. ೨೫ ಜನಕ್ಕೆ ಸೀಮಿತವಾಗಿ ಪ್ರಾರಂಭಗೊಂಡ ಪ್ರಶಸ್ತಿಗಳು ಇಂದು ೪೦ಕ್ಕೂ ಮೀರಿದೆ. ಸಾರ್ವಜನಿಕರು ತಮ್ಮ ಆದಾಯದ ಒಂದಿಷ್ಟು ಭಾಗವನ್ನು ತಮ್ಮ ಹಿರಿಯರ ಹೆಸರಿನಲ್ಲಿ ಮುಡಿಪಿಟ್ಟು ಅವರ ಹೆಸರಿನಲ್ಲಿ ಸಾಧಕರೋರ್ವರಿಗೆ ಪ್ರಶಸ್ತಿಯನ್ನು ನೀಡಲು ಮುಂದಾಗಿರುವುದು ಶ್ಲಾಘನೀಯ ವಿಚಾರ. ಹೀಗೆ ಪಂಡಿತ-ಪಾಮರರಿಬ್ಬರನ್ನೂ ತಬ್ಬಿ ಮುನ್ನಡೆಯುತ್ತಿರುವ ಕರ್ನಾಟಕ ಸಂಘ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಲಲಿತಕಲೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡು ವರ್ಷಪೂರ್ತಿ ಕ್ರಿಯಾಶಾಲವಾಗಿದೆ.
ಪ್ರಸ್ತುತ ೩೯ ಜನ ಹಿರಿಯರ ಹೆಸರಿನಲ್ಲಿ ಪ್ರಾಯೋಜಕತ್ವವನ್ನು ಪಡೆದು ಶುಕ್ರವಾರ ಮಂಡ್ಯ ವಿ.ವಿ.ಯ ಸಿಂಡಿಕೇಟ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವರು ಹಾಗೂ ಮಂಡ್ಯ ಜಿ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಡ್ಯ ಶಾಸಕರಾದ ಪಿ.ರವಿಕುಮಾರ್ಗೌಡ ಗಣಿಗ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರರಂಗದಲ್ಲಿ ೩೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಖ್ಯಾತ ಚಿತ್ರಸಾಹಿತಿ, ಕವಿ ಹಾಗೂ ನಿರ್ದೇಶಕ ಡಾ.ವಿ.ನಾಗೇಂದ್ರಪ್ರಸಾದ್ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಂ.ಪಿ.ಸದಾಶಿವ ಅವರನ್ನು ಅಭಿನಂದಿಸಲಾಗುತ್ತಿದೆ.
ಇತ್ತೀಚೆಗೆ ಸಂಘದ ಕಾರ್ಯವೈಖರಿಯನ್ನು ಗಮನಿಸಿದ ಆದಿಚುಂಚಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಮಹಾಪೋಷಕರಾಗಿರಲು ಒಪ್ಪಿ, ೬ ಕೋಟಿ ರೂ. ವೆಚ್ಚದಲ್ಲಿ ಆಧುನಿಕ ರಂಗಮಂದಿರವನ್ನು ನಿರ್ಮಿಸಿಕೊಡುತ್ತಿರುವುದು ಈ ಸಂಘದ ಕಾರ್ಯಚಟುವಟಿಕೆಗಳಿಗೆ, ದೂರದೃಷ್ಟಿಗೆ ಸಾಕ್ಷಿಯಾಗಿದೆ.
ಪ್ರಶಸ್ತಿ ಪುರಸ್ಕತರು:
ಸಂಘಟನಾ ಕ್ಷೇತ್ರ: ಪಾಂಡವಪುರದ ಎ.ಎಲ್.ಕೆಂಪೂಗೌಡ, ಎಂ.ಎಸ್.ಚಿದಂಬರ್ ಮತ್ತು ಅರಕೆರೆಯ ಎ.ಆರ್. ಅನಿಲ್ ಬಾಬು, ಸಾಹಿತ್ಯ: ಡಾ.ಶುಭಶ್ರೀ ಪ್ರಸಾದ್, ನಾಗಮಂಗಲ ಕೃಷ್ಣಮೂರ್ತಿ, ಮಜ್ಜಿಗೆಪುರ ಶಿವರಾಮು ಮತ್ತು ಸಬ್ಬನಹಳ್ಳಿ ಶಶಿಧರ, ಪತ್ರಿಕೋದ್ಯಮ: ಮಂಡ್ಯದ ಟಿ.ಕೆ. ಹರೀಶ್, ಎ.ಎಲ.ಬಸವೇಗೌಡ, ಎಂ.ಸಿ.ಶ್ರೀಧರಮೂರ್ತಿ (ಹೊಳಲು ಶ್ರೀಧರ್) ಮತ್ತು ಅಂಬರಹಳ್ಳಿ ಸ್ವಾಮಿ, ಕ್ರೀಡೆ: ಮಂಡ್ಯದ ಲೋಕೇಶ್ ಮೊದಲಿಯಾರ್ ಮತ್ತು ಮದ್ದೂರಿನ ಎನ್.ಪ್ರಸನ್ನ (ಲಾರ ಪ್ರಸನ್ನ), ಜನಪದ: ಬೊಪ್ಪೇಗೌಡನಪುರದ ನಂಜುಂಡಸ್ವಾಮಿ, ಹೊನ್ನೆಮಡುವಿನ ಅರ್ಚಕ ಗಂಗಾಧರ, ತತ್ತ್ವಪದ: ಕೆರಗೋಡಿನ ಎಂ.ಶಿವಮ್ಮ; ರಂಗಭೂಮಿ: ವೈರಮುಡಿ ಹನಿಯಂಬಾಡಿ, ಎಂ.ಬಿ.ಶ್ರೀಧರ್, ಸೂರ್ಯಸೌಂಡ್ ರವಿ ಮತ್ತು ಹೊನ್ನಾಯಕನಹಳ್ಳಿಯ ಹೆಚ್. ಸಿ.ನವೀನ್ಕುಮಾರ್, ನೃತ್ಯ: ಮಂಡ್ಯದ ಮಧುರ ಮಧುಸೂದನ್, ಸಂಗೀತ: ಯರಹಳ್ಳಿಯ ವೈ.ಹೆಚ್. ಪುಟ್ಟಸ್ವಾಮಿ, ಶಿವಾರ ಉಮೇಶ್ ಮತ್ತು ಎಂ.ಹೆಚ್. ಚಂದ್ರು, ಸಮಾಜ ಸೇವೆ: ಜಿ.ಪಿ.ಭಕ್ತವತ್ಸಲ ಮತ್ತು ಡಾ.ಟಿ.ಮನೋಹರ್, ಚಿತ್ರಕಲೆ ಹಾಗೂ ಕರಕುಶಲ ಕಲೆ: ತೂಬಿನಕೆರೆ ಗೋವಿಂದ ಮತ್ತು ನಾಗರತ್ನ, ಶಿಕ್ಷಣ: ಅರಕೆರೆಯ ಎಂ.ರವೀಂದ್ರಸಿಂಗ್, ಹಾಡ್ಯದ ಹೆಚ್. ಡಿ.ವಿಶ್ವನಾಥ್ ಮತ್ತು ಡಾ.ಎಸ್.ಶಿವರಾಮು, ಕೃಷಿ: ಬೇಲೂರಿನ ಜಿ.ಎಂ.ದೇವೇಗೌಡ ಮತ್ತು ಮಳವಳ್ಳಿಯ ಬೋರೇಗೌಡ; ಉದ್ಯಮ: ಎಸ್.ಪ್ರೇಮ ಮತ್ತು ಹೆಚ್.ಕೆ.ಅನಿಲ, ಸಂಗೀತ ವಾದನ: ಗಾಮನಹಳ್ಳಿಯ ಸಿ.ದೇವರಾಜು, ಅರಕೆರೆಯ ಕೆ.ಸಿದ್ದರಾಮು, ಮಂಡ್ಯದ ಎಂ.ಎಸ್.ಜಯರಾಮು ಮತ್ತು ಅಕ್ಕಿಹೆಬ್ಬಾಳಿನ ಎ.ವಿ.ನಾರಾಯಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಹಳದಿ ಬೋರ್ಡ್ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಮೇಲ್ನೋಟಕ್ಕೆ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಸಾವಿರಕ್ಕೂ ಹೆಚ್ಚು ಚಿತ್ರಕಥೆಗಳಲ್ಲಿ ಅಂತಿಮ ಹಂತಕ್ಕೆ ೩೦ ಮಂದಿ ಆಯ್ಕೆ ನವೆಂಬರ್…
ಮಡಿಕೇರಿ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ…
ಕೊಡಗು: ಕೊಡಗಿನಲ್ಲಿ ಕಾಡಾನೆ ದಾಳಿಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಶಾಸಕರ…
ಮೈಸೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಆಶಯಗಳನ್ನು ಅಳವಡಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.…