ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ
ಸಾವಿರಕ್ಕೂ ಹೆಚ್ಚು ಚಿತ್ರಕಥೆಗಳಲ್ಲಿ ಅಂತಿಮ ಹಂತಕ್ಕೆ ೩೦ ಮಂದಿ ಆಯ್ಕೆ
ನವೆಂಬರ್ ೨೦ರಿಂದ ಗೋವಾದಲ್ಲಿ ನಡೆದ ಭಾರತದ ೫೭ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಾಳೆ ತೆರೆಬೀಳಲಿದೆ. ಒಂಬತ್ತು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ದೇಶವಿದೇಶಗಳ ಆಯ್ದ ಚಿತ್ರಗಳ ಪ್ರದರ್ಶನ, ಅಂತಾರಾಷ್ಟ್ರೀಯ ಸ್ಪರ್ಧೆ, ಚೊಚ್ಚಲ ಚಿತ್ರ ನಿರ್ದೇಶಕರ ಸ್ಪರ್ಧೆ, ಭವಿಷ್ಯದ ಸೃಜನಶೀಲ ಮನಸ್ಸು ವಿಭಾಗ ಸೇರಿದಂತೆ ಹಲವು ಸ್ಪರ್ಧೆಗಳಿದ್ದವು. ೫೭ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ ಎಫ್ಐ- ಇಫ್ಟಿ) ಅಂಗವಾಗಿ ಇದೇ ಮೊದಲ ಬಾರಿಗೆ ಪ್ರಸಾರ ಭಾರತಿ ಉದಯೋನ್ಮುಖ ಬರಹಗಾರರಿಂದ ಚಿತ್ರಕಥೆಯನ್ನು ಆಹ್ವಾನಿಸಿತ್ತು. ಪ್ರಸಾರ ಭಾರತಿಯ ಅಧ್ಯಕ್ಷ ಪ್ರಸೂನ್ ಜೋಶಿ ಪರಿಕಲ್ಪನೆಯ ಈ ಉಪಕ್ರಮವು ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರ ವಿಭಾಗಗಳಲ್ಲಿ ಹತ್ತು ಭಾರತೀಯ ಭಾಷೆಗಳಲ್ಲಿ ತಮ್ಮ ಮೂಲ ಕಥೆಗಳನ್ನು ಪ್ರಸ್ತುತಪಡಿಸಲು ಉದಯೋನ್ಮುಖ ಬರಹಗಾರರಿಗೆ ವಾರ್ಷಿಕ ರಾಷ್ಟ್ರೀಯ ವೇದಿಕೆಯನ್ನು ಸ್ಥಾಪಿಸುವ ಗುರಿ ಹೊಂದಿದೆ.
ಈ ಆಹ್ವಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಘೋಷಣೆಯಾದ ಕೇವಲ ಹತ್ತು ದಿನಗಳ ಸುಮಾರು ೧,೦೦೦ ಕಥೆಗಳು ಬಂದಿದ್ದವಂತೆ. ಇದು ದೇಶದ ಯುವ ಬರಹಗಾರರಲ್ಲಿರುವ ಅಪಾರ ಕಥೆ ಹೇಳುವ ಪ್ರತಿಭೆ ಮತ್ತು ಸೃಜನಶೀಲ ಆಶಯಗಳಿಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಜೋಶಿ. ಭಾರತದ ಯುವಜನರಲ್ಲಿರುವ ಸೃಜನಶೀಲ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಮತ್ತು ದೇಶದ ಯುವಜನರು ಹೇಳಲು ಬಯಸುವ ಕಥೆಗಳನ್ನು ಗುರುತಿಸುವುದು ಅತ್ಯಗತ್ಯ. ಚಲನಚಿತ್ರ ನಿರ್ಮಾಣದಲ್ಲಿ ಚಿತ್ರಕಥೆ ಬರವಣಿಗೆ ಅತಿ ಮುಖ್ಯ. ಚಿತ್ರಕಥೆ ಸಿದ್ಧಪಡಿಸುವುದೇ ಚಿತ್ರ ನಿರ್ಮಾಣ ಪ್ರಕ್ರಿಯೆಯ ಮೊದಲ ಹೆಜ್ಜೆ. ಚಿತ್ರ ನಿರ್ಮಾಣಕ್ಕೆ ಯೋಜನೆ ರೂಪಿಸುವುದು ಮೂಲಭೂತ ಅಗತ್ಯ. ಸಮರ್ಥ ಚಿತ್ರಕಥೆ ಚಲನಚಿತ್ರ ನಿರ್ಮಾಣದ ಅಡಿಪಾಯ – ಈ ಹಿನ್ನೆಲೆಯಲ್ಲಿ ಪ್ರಸಾರ ಭಾರತಿಯ ಈ ಹೆಜ್ಜೆ ಶ್ಲಾಘನೀಯ. ಸ್ಪರ್ಧೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಚಿತ್ರಕಥೆಗಳಲ್ಲಿ ೩೦ ಮಂದಿಯವನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಯಿತು. ಅವುಗಳಲ್ಲಿ ಅತ್ಯುತ್ತಮವಾದವುಗಳನ್ನು ಆಯ್ಕೆ ಮಾಡಲು ಸಿನಿಮಾ ತಜ್ಞರಿದ್ದರು. ಮೊದಲ, ಎರಡನೇ ಮತ್ತು ಮೂರನೇ ಬಹುಮಾನ ಪಡೆದ ಚಿತ್ರಕಥೆಗಳಿಗೆ ಕ್ರಮವಾಗಿ ರೂ.೫ ಲಕ್ಷ, ರೂ.೩ ಲಕ್ಷ ಮತ್ತು ರೂ.೨ ಲಕ್ಷ ಪಡೆದರೆ, ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಿಗಳ ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದವರಿಗೆ ತಲಾ ರೂ.೫೦,೦೦೦ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಏಳು, ಎಂಟು, ಒಂಬತ್ತು ಮತ್ತು ಹತ್ತನೇ ಸ್ಥಾನ ಪಡೆದವರಿಗೆ ಪ್ರಶಂಸನಾ ಪ್ರಮಾಣಪತ್ರಗಳನ್ನು ನೀಡಲಾಯಿತು. ಅಂತಿಮ ಸುತ್ತಿಗೆ ಆಯ್ಕೆಯಾದ ಅತ್ಯುತ್ತಮ ೩೦ ಬರಹಗಾರರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಲಾಯಿತು. ವೇವ್ಸ್ ಫಿಲಂ ಬಜರ್ನಲ್ಲೂ ಚಿತ್ರರಂಗಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಗೋಷ್ಠಿಗಳಿದ್ದವು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳಿದ್ದರು. ವಿವಿಧ ವಿಭಾಗಗಳ ಆಯ್ದವರ ಜೊತೆ ಚರ್ಚೆಗಳಿದ್ದವು. ಕನ್ನಡದಿಂದ ನಿರ್ದೇಶಕ ಅಭಯಸಿಂಹ ಅವರ ‘ಮಾಯಾಮೃಗ’ ಸ್ಕ್ರಿಪ್ಟ್ಲ್ಯಾಬ್ಗೆ ಆಯ್ಕೆಯಾಗಿತ್ತು. ಇತ್ತ ಚಿತ್ರೋತ್ಸವದಲ್ಲಿ ಪಾಲ್ಗೊಂಡ ಪ್ರತಿನಿಽಗಳಲ್ಲಿ ಮುಕ್ಕಾಲು ಭಾಗ ಕೇರಳದಿಂದ ಬಂದವರು! ಕೇರಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಳೆದ ವರ್ಷ ೧೩,೦೦೦ ಮಂದಿ ಪ್ರತಿನಿಧಿಗಳಿದ್ದರು. ಇಲ್ಲಿ ಈ ಬಾರಿ ಅದರ ಅರ್ಧದಷ್ಟಿರಬಹುದು ಅಷ್ಟೇ. ಚಿತ್ರೋತ್ಸವದ ಉದ್ಘಾಟನೆಯಲ್ಲಿ ಸಂಸದ, ನಟನೊಬ್ಬನ ಹೊರತುಪಡಿಸಿ ಚಿತ್ರೋದ್ಯಮದ ಯಾರನ್ನೂ ವೇದಿಕೆಗೆ ಹತ್ತಿಸಿರಲಿಲ್ಲ. ‘ಇದು ಅಂತಾರಾಷ್ಟ್ರೀಯ ಚಿತ್ರೋತ್ಸವ. ಯಾವುದೋ ಟಿವಿ ಕಾರ್ಯಕ್ರಮದಂತೆ ಮಾಡುವುದು ನನಗೆ ಇಷ್ಟವಿಲ್ಲ’ ಎನ್ನುವುದಾಗಿತ್ತಂತೆ, ಚಿತ್ರೋತ್ಸವ ನಿರ್ದೇಶಕರ ಅಭಿಪ್ರಾಯ. ಬಿಯಾಂಡ್ ಬಾರ್ಡರ್ಸ್ ಘೋಷವಾಕ್ಯದ ನಡುವೆ, ಚಿತ್ರೋತ್ಸವದ ಮೂಲ ಧ್ಯೇಯವಾಕ್ಯ ‘ವಸುಧೈವ ಕುಟುಂಬಕಂ’ ಮಾತು ಕೇಳಲಿಲ್ಲ. ಕರ್ನಾಟಕದಿಂದ ಈ ಉತ್ಸವದಲ್ಲಿ ಕೆಲವೇ ಕೆಲವು ಮಂದಿ ಪಾಲ್ಗೊಂಡಿದ್ದರು.
ಚಿತ್ರೋತ್ಸವದ ಸಂವಾದ ಕಾರ್ಯಕ್ರಮ ಗಿರೀಶ್ ಕಾಸರವಳ್ಳಿಯವರ ಜೊತೆ ಸಂವಾದದೊಂದಿಗೆ ಆರಂಭವಾಯಿತು. ಇತರ ಸಂವಾದ ಕಾರ್ಯಕ್ರಮಗಳಲ್ಲಿ, ಇತ್ತೀಚೆಗೆ ನಮ್ಮನ್ನು ಅಗಲಿದ ಗಾಯಕಿ ಎಸ್. ಜನಕಿಯವರ ನೆನಪನ್ನೂ ಮಾಡಲಾಯಿತು. ಪನೋರಮಾ ವಿಭಾಗದಲ್ಲಿ ಪಿ. ಶೇಷಾದ್ರಿಯವರ ‘ರೂಬಿ ಕ್ಯೂಬ್’, ಅನುಪಮ ಶರಧಿಯವರ ತುಳು ಚಿತ್ರ ‘ಪಿಲಿಚೆನ್ನೆ’ ಮತ್ತು ರಿಷಭ್ ಶೆಟ್ಟಿಯವರ ‘ಕಾಂತಾರ ಅಧ್ಯಾಯ ೧’, ಅದರ ಮುಖ್ಯವಾಹಿನಿ ವಿಭಾಗದಲ್ಲಿ ಪ್ರದರ್ಶನ ಕಂಡವು. ‘ಕಾಂತಾರ’ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದ ಭಾರತದ ಚಿತ್ರಗಳಲ್ಲಿ ಒಂದು. ಎರಡು ಕಿರುಚಿತ್ರಗಳೂ ಪನೋರಮಾ ವಿಭಾಗದಲ್ಲಿ ಪ್ರದರ್ಶನ ಕಂಡವು.
ಚಲನಚಿತ್ರ ಸಂಸ್ಕೃತಿಯಿಂದ ಸಾಕಷ್ಟು ಅಂತರದಲ್ಲಿರುವ ಗೋವಾದಲ್ಲಿ ಚಿತ್ರೋತ್ಸವ ಶಾಶ್ವತ ಸ್ಥಾನ ಪಡೆದ ಹಿನ್ನೆಲೆಯ ಕುರಿತು ಈ ಹಿಂದೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ಅಲ್ಲಿನ ಸರ್ಕಾರ ಈಗ ಕೊಂಕಣಿ ಚಿತ್ರಗಳಿಗೆ ಮಾತ್ರವಲ್ಲದೆ, ಭಾರತದ ಇತರ ಭಾಷಾ ಚಿತ್ರಗಳಿಗೂ ಸೌಲಭ್ಯ, ರಿಯಾಯಿತಿ ನೀಡುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಅದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಚಿತ್ರನಗರಿ ಸ್ಥಾಪನೆಯ ಮಾತನ್ನೂ ಅಲ್ಲಿನ ಮುಖ್ಯಮಂತ್ರಿಗಳು ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಸಾಮಾನ್ಯವಾಗಿ ಪ್ರತಿ ವರ್ಷ ಫಾಲ್ಕೆ ಪ್ರಶಸ್ತಿ ಪಡೆದ ಸಾಧಕರ ಚಿತ್ರಗಳ ಪ್ರದರ್ಶನ ಚಿತ್ರೋತ್ಸವದಲ್ಲಿ ಆಯೋಜಿಸುವುದಿತ್ತು. ಆದರೆ ಈ ಬಾರಿ ಅದನ್ನು ಕೈಬಿಡಲಾಗಿದೆ. ಕಲಾತ್ಮಕ ನಿರ್ದೇಶಕರು ಈ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಒಂದೆರಡು ವಿಭಾಗಗಳನ್ನು ಸೇರಿಸಲಾಗಿದೆಯಾದರೂ, ಇದನ್ನು ಕೈಬಿಟ್ಟದ್ದು ಸರಿ ಅಲ್ಲ. ವರ್ಷದಿಂದ ವರ್ಷಕ್ಕೆ, ಚಿತ್ರೋತ್ಸವದ ಗುಣಮಟ್ಟ ಇಳಿಯುತ್ತಿದೆ ಎನ್ನುವವರಿದ್ದಾರೆ. ಹೊಸತಿಗೆ ನಮ್ಮನ್ನು ತೆರೆದುಕೊಳ್ಳಬೇಕು ಎಂದು ವಾದಿಸುವವರೂ ಇದ್ದಾರೆ.
ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಆರಂಭದ ದಿನಗಳಲ್ಲಿ, ಬೆಂಗಳೂರಿನಲ್ಲಿ ಎರಡು ಚಿತ್ರೋತ್ಸವಗಳು ನಡೆದವು. ಒಂದು ‘ಗಂಧದ ಗುಡಿ ಸಿನಿ ಹಬ್ಬ’, ಇನ್ನೊಂದು ‘ಸಿನಿಮಿನಿ ಚಿತ್ರೋತ್ಸವ’. ಕಳೆದ ಐದು ವರ್ಷಗಳಿಂದ ಮೈಸೂರು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’, ಈ ಬಾರಿ ಬೆಂಗಳೂರಿನಲ್ಲಿ ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಎರಡು ದಿನಗಳ ಕಿರುಚಿತ್ರೋತ್ಸವವನ್ನು ಆಯೋಜಿಸಿತ್ತು. ಬೆಂಗಳೂರಿನ ಎಫ್ಕೆಸಿಸಿಐ ಆವರಣದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಆಡಿಟೋರಿಯಂನಲ್ಲಿ ಈ ಹಬ್ಬ ನಡೆಯಿತು. ಚಿತ್ರೋತ್ಸವದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಸುಮಾರು ೩೦ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರದರ್ಶನಗೊಂಡವು. ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಂದ ಸುಮಾರು ೧೨ ವಿಭಾಗಗಳಿಗೆ ಆಯ್ಕೆಯಾದ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜದ ಬೆಳವಣಿಗೆಗೆ ಸಿನಿಮಾ ಸೊಸೈಟಿಗಳು ಸಹಾಯಕವಾಗುತ್ತಿವೆ. ಸಿನಿಮಾ ಸೊಸೈಟಿಯಿಂದ ಸದಭಿರುಚಿಯ ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತಿದೆ. ಇದೊಂದು ಸಕಾರಾತ್ಮಕ ಅಂಶ. ಕಿರುಚಿತ್ರಗಳನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’ಯ ಕಾರ್ಯ ಪ್ರಶಂಸನೀಯ. ಕನ್ನಡ ಚಿತ್ರಗಳನ್ನು ಮತ್ತು ಸದಭಿರುಚಿ ಪ್ರೇಕ್ಷಕರನ್ನು ಬೆಳೆಸುವ ನಿಟ್ಟಿನಲ್ಲಿ ‘ಮೈಸೂರು ಸಿನಿಮಾ ಸೊಸೈಟಿ’ಯಂತಹ ಸಂಸ್ಥೆಗಳ ಅಗತ್ಯವಿದೆ. ಇಂಥ ವೇದಿಕೆಗಳ ಮೂಲಕ ನೂರಾರು ಹೊಸ ಕಲಾವಿದರು, ತಂತ್ರಜ್ಞರಿಗೆ ಮನ್ನಣೆ, ಮಾನ್ಯತೆ ಸಿಗುತ್ತಿದೆ. ಈ ವೇದಿಕೆಯನ್ನು ನಾವೆಲ್ಲರೂ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಸಿನಿಮಾಕ್ಕಾಗಿಯೇ ಇರುವ ಈ ಸಂಸ್ಥೆಯ ಕಾರ್ಯಕ್ರಮಗಳು ಹೀಗೆ ನಡೆಯಲಿ ಎಂದು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರ ಮಾತನ್ನು ಎಲ್ಲರೂ ಗಮನಿಸಬೇಕು. ವಿಶೇಷವಾಗಿ ಚಿತ್ರೋದ್ಯಮದ ಮಂದಿ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಮತ್ತು ಸತ್ಯ ಹೆಗಡೆ ಸ್ಟುಡಿಯೋಸ್ ಅರ್ಪಿಸುವ ಸಿನಿಮಿನಿ ಕಿರುಚಿತ್ರೋತ್ಸವವು ಉದಯೋನ್ಮುಖ ಚಿತ್ರನಿರ್ಮಾಪಕರಿಗೆ ವೇದಿಕೆ ಕಲ್ಪಿಸುವ, ಹೊಸ ಕಥೆಗಾರರನ್ನು ಪ್ರೋತ್ಸಾಹಿಸುವ ಹಾಗೂ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ವಿವಿಧ ವಿಭಾಗಗಳ ಸ್ಪರ್ಧೆ, ಚಿತ್ರ ಪ್ರದರ್ಶನ ಮತ್ತು ಪ್ರಶಸ್ತಿಗಳ ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಸಿನಿಮಿನಿಯ ಆಶಯವಾಗಿದೆ. ಅದರ ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
ಆಯೋಜಕರ ಪ್ರಕಾರ, ಈ ಬಾರಿ ಸಿನಿಮಿನಿಗೆ ಒಟ್ಟು ೨೮೦ ಚಿತ್ರಗಳ ಪ್ರವೇಶಗಳು ಬಂದಿದ್ದು, ಅವುಗಳಲ್ಲಿ ೨೪೧ ಕಿರುಚಿತ್ರಗಳು, ೨೬ ಎಐ ಚಿತ್ರಗಳು, ೧೧ ವರ್ಟಿಕಲ್ ಚಿತ್ರಗಳು ಹಾಗೂ ೨ ಮಿನಿ ಸರಣಿಗಳು ಸೇರಿದ್ದವು. ಆಯ್ಕೆಯಾದ ೩೫ ಕಿರುಚಿತ್ರಗಳು ಹಾಗೂ ವರ್ಟಿಕಲ್ ಮತ್ತು ಎಐ ವಿಭಾಗಗಳಿಂದ ಕಿರುಪಟ್ಟಿಗೆ ಆಯ್ಕೆಯಾದ ೪ ಚಿತ್ರಗಳನ್ನು ಪ್ರದರ್ಶಿಸಲಾಯಿತು. ವಿಭಿನ್ನ ಕಥಾವಸ್ತುಗಳು, ಹೊಸತನದ ನಿರೂಪಣೆ ಮತ್ತು ತಾಂತ್ರಿಕ ಸೃಜನಶೀಲತೆಯಿಂದ ಕೂಡಿದ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದವು. ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳೊಂದಿಗೆ ಅತ್ಯುತ್ತಮ ಕಥೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ, ಸಂಗೀತ ನಿರ್ದೇಶನ, ನಟ, ನಟಿ ಹಾಗೂ ಬಾಲನಟ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಮಹಿಳಾ ಚಿತ್ರನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅತ್ಯುತ್ತಮ ಮಹಿಳಾ ನಿರ್ದೇಶಕಿ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಇದರ ಜೊತೆಗೆ ೧೦ ವಿಶೇಷ ತೀರ್ಪುಗಾರರ ಪ್ರಶಸ್ತಿಗಳು ಮತ್ತು ೧೪ ವಿಶೇಷ ಮೆಚ್ಚುಗೆ ಪ್ರಶಸ್ತಿಗಳನ್ನು ನೀಡಿ ಪ್ರತಿಭಾವಂತ ಚಿತ್ರನಿರ್ಮಾಪಕರು ಹಾಗೂ ಕಲಾವಿದರನ್ನು ಗೌರವಿಸಲಾಯಿತು.
ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಯುವ ಪ್ರತಿಭಾವಂತರಿಗೆ ಇನ್ನೊಂದು ಚಿಮ್ಮುಹಲಗೆ. ಅಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಯೋಗ್ಯತೆ ಪಡೆಯುತ್ತದೆ. ಕಿರುಚಿತ್ರೋತ್ಸವಗಳು, ಚಿತ್ರಸಮಾಜಗಳು ಚಲನಚಿತ್ರ ಸಂಸ್ಕೃತಿ ಉಳಿಸಿ ಬೆಳೆಸಲು, ಉತ್ತಮ ಪ್ರೇಕ್ಷಕರನ್ನು ಸಿದ್ಧಗೊಳಿಸಲು ಅಗತ್ಯ. ಆ ನಿಟ್ಟಿನಲ್ಲಿ ಅಕಾಡೆಮಿ ಸೇರಿದಂತೆ ಎಲ್ಲರ ಗಮನ ಅಗತ್ಯ.
“ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಮತ್ತು ಸತ್ಯ ಹೆಗಡೆ ಸ್ಟುಡಿಯೋಸ್ ಅರ್ಪಿಸುವ ಸಿನಿಮಿನಿ ಕಿರುಚಿತ್ರೋತ್ಸವವು ಉದಯೋನ್ಮುಖ ಚಿತ್ರನಿರ್ಮಾಪಕರಿಗೆ ವೇದಿಕೆ ಕಲ್ಪಿಸುವ, ಹೊಸ ಕಥೆಗಾರರನ್ನು ಪ್ರೋತ್ಸಾಹಿಸುವ ಹಾಗೂ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.”
ಹೊಳಲು ಶ್ರೀಧರ್, ಪತ್ರಕರ್ತಕರು ಹಾಗೂ ನಿವೃತ್ತ ಅಧ್ಯಾಪಕರು, ಮಂಡ್ಯ ದತ್ತಿನಿಧಿಗಳ ಮೂಲಕ ೩೯ ಮಂದಿ ಸಾಧಕರಿಗೆ ಇಂದು ಪ್ರಶಸ್ತಿ ಪ್ರದಾನ …
ಮಡಿಕೇರಿ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ…
ಕೊಡಗು: ಕೊಡಗಿನಲ್ಲಿ ಕಾಡಾನೆ ದಾಳಿಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಶಾಸಕರ…
ಮೈಸೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಆಶಯಗಳನ್ನು ಅಳವಡಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.…
ಮೈಸೂರು: ಸಂವಿಧಾನ ದಿನಾಚರಣೆಯಂದು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಡಾ. ಶ್ರೀನಿಧಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಾನಪದ…