Andolana originals

ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆ ; ಸುಗಮ ಆಡಳಿತದ ಚಿಂತೆ

ಸ್ಥಳೀಯ ಸಂಸ್ಥೆ ಅವಧಿ ಅಂತ್ಯ; ಜಿಪಂ, ತಾಪಂನಂತೆ ನಗರಸಭೆ, ಪುರಸಭೆ, ಪಪಂ, ಗ್ರಾಪಂಗೂ ಇಷ್ಟರಲ್ಲೇ ಆಡಳಿತಾಧಿಕಾರಿ ನೇಮಕ 

ಚಾಮರಾಜನಗರ: ರಾಜ್ಯದಲ್ಲಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ವಿವಿಧ ಕಾರಣಗಳಿಗೆ ಚುನಾವಣೆ ನಡೆಯದ ಕಾರಣ ೪ ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದ್ದು, ಅಂತೆಯೇ ಸದ್ಯದಲ್ಲೇ ಅವಧಿ ಮುಗಿಯಲಿರುವ ಕರ್ನಾಟಕದಲ್ಲಿನ ನಗರಸಭೆ, ಪುರಸಭೆ, ಪಪಂ, ಗ್ರಾಪಂಗಳಿಗೂ ಆಡಳಿತಾಧಿ ಕಾರಿಗಳು ಇನ್ನು ಕೆಲವೇ ದಿನಗಳಲ್ಲಿ ನೇಮಕ ಆಗಲಿದ್ದಾರೆ.

ಚುನಾವಣೆ ನಡೆದು ಹೊಸ ಚುನಾಯಿತರು ಆಯ್ಕೆಯಾಗುವವರೆಗೂ ನಗರ ಹಾಗೂ ಗ್ರಾಮೀಣ ಪ್ರದೇಶದ ಈ ಎಲ್ಲಾ ಸ್ಥಳೀಯ ಸಂಸ್ಥೆಗಳು ಆಡಳಿತಾಧಿಕಾರಿಗಳ ಸುಪರ್ದಿಯಲ್ಲಿ ಇರಲಿವೆ. ಸ್ಥಳೀಯ ಸಂಸ್ಥೆಗಳು ಹೀಗೆ ಒತ್ತಟ್ಟಿಗೆ ಆಡಳಿತಾಧಿಕಾರಿಗಳ ಪಾಲಾಗುತ್ತಿರುವುದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ೫ ವರ್ಷಗಳ ಅಧಿಕಾರ ಅವಧಿ ಪೂರೈಸುವ ಅಂಚಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಪಂ ಮತ್ತು ಗ್ರಾಮೀಣ ಭಾಗದಲ್ಲಿ ಗ್ರಾಪಂಗಳಿವೆ. ಈ ಕಾರಣಕ್ಕೆ ಇಲ್ಲಿಯೂ ಇನ್ನು ಆಡಳಿತಾಧಿಕಾರಿಗಳದ್ದೇ ದರ್ಬಾರ್.

ರಾಜ್ಯದ ಜಿಪಂ, ತಾಪಂಗಳ ಆಡಳಿತ ಅವಧಿಯು ೨೦೨೧ರ ಮೇ ತಿಂಗಳ ವಿವಿಧ ದಿನಾಂಕಗಳಂದೇ ಮುಕ್ತಾಯಗೊಂಡಿದ್ದು, ಅಂದಿನಿಂದಲೂ ಅಂದರೆ ೪ ವರ್ಷ ೫ ತಿಂಗಳಿಂದಲೂ ಆಡಳಿತಾಧಿಕಾರಿಗಳದ್ದೇ ಆಡಳಿತವಿದೆ! ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದಿದ್ದೇ ಅಧಿಕಾರ ವಿಕೇಂದ್ರೀಕರಣ ಸಲುವಾಗಿ. ೨೦೧೬ರಲ್ಲಿ ಚುನಾಯಿತರಾದವರ ೫ ವರ್ಷಗಳ ಅವಧಿ ೨೦೨೧ರಲ್ಲಿ ಮುಗಿದ ಕೂಡಲೇ ಚುನಾವಣೆ ಮಾಡಿದ್ದರೆ ಅವರ (೫ ವರ್ಷ ಗಳ )ಅವಧಿಯೂ ೨೦೨೬ಕ್ಕೆ ಕೊನೆಗೊಳ್ಳುತ್ತಿತ್ತು.

ಇದನ್ನು ಓದಿ: ದೀಪಾವಳಿ: ಈ ಬಾರಿ ಪಟಾಕಿ ಮಾರಾಟ ಕುಸಿತ

ಇನ್ನು ೭ ತಿಂಗಳುಗಳು ಕಳೆದರೆ ಒಂದು ಇಡೀ ಅವಧಿಯನ್ನು ಆಡಳಿತಾಧಿಕಾರಿಗಳೇ ಆಡಳಿತ ಮಾಡಿದ ಅಪಖ್ಯಾತಿಗೆ ನಮ್ಮ ರಾಜ್ಯದ ಜಿಪಂ, ತಾಪಂಗಳು ಒಳಪಡಲಿವೆ. ಕ್ಷೇತ್ರ ಪುನರ್ ವಿಂಗಡಣೆ, ಕ್ಯಾಟಗರಿ ನಿಗದಿ ಸೇರಿದಂತೆ ವಿವಿಧ ಕಾರಣಕ್ಕೆ ನ್ಯಾಯಾಲಯದ ಕದ ತಟ್ಟಲಾಗಿದ್ದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಗಳು ೨೦೨೧ರಿಂದಲೂ ಒಂದಿಲ್ಲೊಂದು ಕಾರಣಕ್ಕೆ ಮುಂದೂಡಿಕೆ ಆಗುತ್ತಲೇ ಇವೆ. ತನ್ಮೂಲಕ ಅಧಿಕಾರ ವಿಕೇಂದ್ರೀಕರಣದ ಮೂಲ ಆಶಯವೇ ಬುಡಮೇಲಾಗಿ ಬಹುತೇಕ ಅಧಿಕಾರ, ಅನುದಾನ ಆಯಾ ಕ್ಷೇತ್ರದ ಶಾಸಕರತ್ತ ಕೇಂದ್ರೀಕೃತಗೊಂಡು ಸಿಕ್ಕಿದ್ದೇ ಅವಕಾಶ ಎಂಬಂತೆ ಶಾಸಕರು, ಆಡಳಿತಾಽಕಾರಿಗಳು ಎಲ್ಲ ಅಧಿಕಾರವನ್ನೂ ಚಲಾಯಿಸುತ್ತಿದ್ದಾರೆ. ಕೇಂದ್ರೀಕೃತ ಈ ಅಧಿಕಾರ ವ್ಯವಸ್ಥೆಯಿಂದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಆಡಳಿತ ವ್ಯವಸ್ಥೆ ಹಳಿ ತಪ್ಪಿದೆ ಎಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಜಿಪಂ, ತಾಪಂಗಳ ಅಷ್ಟೂ ಸದಸ್ಯರು ಅವರವರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವುದಕ್ಕೂ ಒಬ್ಬೊಬ್ಬ ಆಡಳಿತಾಧಿಕಾರಿ ಇಡೀ ಜಿಪಂ, ತಾಪಂ ನಿಭಾಯಿಸುವುದಕ್ಕೂ ಭಾರೀ ವ್ಯತ್ಯಾಸವಿದೆ ಎಂಬ ಸಾರ್ವಜನಿಕರ ಅನಿಸಿಕೆ ನೈಜವಾದದ್ದಾಗಿದೆ.

ರಾಜ್ಯ ಸರ್ಕಾರವು ೨೦೨೬ಕ್ಕೆ ನಗರ ಸ್ಥಳೀಯ ಸಂಸ್ಥೆಗಳಾದ ನಗರಪಾಲಿಕೆ, ನಗರಸಭೆ, ಪುರಸಭೆ, ಪಪಂ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿಗಳ ಸಹಿತ ಈ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಏಕಾಕಾಲದಲ್ಲಿ ಚುನಾವಣೆ ಯನ್ನು ನಡೆಸುವ ಆಲೋಚನೆಯಲ್ಲಿ ಇದೆ ಎಂದು ಹೇಳಲಾಗುತ್ತಿದೆ.

೨೦೨೬ರ ಫೆಬ್ರವರಿ ಹೊತ್ತಿಗೆ ಕೆಲವೊಂದು ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಕೊನೆಗೊಳ್ಳುತ್ತದೆ. ತದ ನಂತರ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇನ್ನೊಂದು ಬಹುಮುಖ್ಯವಾದ ಅಂಶ ಎಂದರೆ, ಗ್ರಾಮ ಪಂಚಾಯತಿಗಳಲ್ಲೂ ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಇದೆ. ಪ್ರಜಾಪ್ರಭುತ್ವದ ಬುನಾದಿ ಎನಿಸಿಕೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ೩ ದಶಕಗಳಿಗೂ ಹೆಚ್ಚು ಕಾಲದಿಂದಲೂ ಪಕ್ಷಾಂತರ ಕಾಯ್ದೆ ಅನ್ವಯ ಆಗದಂತೆ ಪಕ್ಷಾತೀತವಾಗಿ ನಡೆಸುತ್ತಾ ಬರಲಾಗಿದೆ.

ಆದರೆ, ಕರ್ನಾಟಕದಲ್ಲಿ ಮೊದಲ ಬಾರಿ ೧೯೮೭ರಲ್ಲಿ ನಡೆದಿದ್ದ ಮಂಡಲ ಪಂಚಾಯತ್ ಚುನಾವಣೆಯನ್ನು ಆಯಾ ರಾಜಕೀಯ ಪಕ್ಷಗಳ ಚಿಹ್ನೆಯಡಿಯೇ ನಡೆಸಲಾಗಿತ್ತು. ಮತ್ತೆ ಇದೇ ಮಾದರಿಯನ್ನು ಜಾರಿ ಮಾಡುವ ಚಿಂತನೆಯಲ್ಲಿ ಸರ್ಕಾರ ಇದೆ. ಅಂತಿಮವಾಗಿ ಏನಾಗುತ್ತದೆಯೋ ಕಾದು ನೋಡಬೇಕಿದೆ.

ಇದನ್ನು ಓದಿ: ‘ಕೈಮಗ್ಗ ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ’

ಇನ್ನು ೧೫ ದಿನಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯ: 

ಚಾ.ನಗರ: ಕೊಳ್ಳೇಗಾಲ ನಗರಸಭೆಯ ಐದು ವರ್ಷಗಳ ಅಧಿಕಾರಾವಧಿ ಇದೇ ಅ.೨೮ಕ್ಕೆ ಕೊನೆಗೊಳ್ಳಲಿದೆ. ಇದೇ ರೀತಿ ಚಾಮರಾಜನಗರ ನಗರಸಭೆಯದ್ದು ನ.೧ಕ್ಕೆ, ಗುಂಡ್ಲುಪೇಟೆ ಪುರಸಭೆ ಅವಧಿ ನ.೪ಕ್ಕೆ, ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿ ಅವಧಿ ಕ್ರಮವಾಗಿ ನ.೨, ೬ರಂದು ಮುಕ್ತಾಯಗೊಳ್ಳಲಿದೆ. ಈ ಐದೂ ನಗರ ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿದ ಮರುದಿನವೇ ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಲಿದೆ.

ಗ್ರಾಪಂಗಳ ಅವಧಿ ಫೆಬ್ರವರಿಯಲ್ಲಿ ಕೊನೆ:  ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಐದು ವರ್ಷಗಳ ಅಧಿಕಾರಾವಧಿ ವಿವಿಧ ದಿನಾಂಕಗಳಂದು ಮುಗಿಯಲಿದೆ. ೨೦೨೬ರ ಜನವರಿಯಿಂದ ಫೆಬ್ರವರಿ ೫ರ ಒಳಗಿನ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ೧೩೦ ಗ್ರಾಪಂಗಳ ಪೈಕಿ ೧೨೯ರಲ್ಲಿ ಅಧಿಕಾರ ಅವಧಿ ಮುಗಿಯಲಿದೆ. ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮಪಂಚಾಯಿತಿ ಅಧಿಕಾರಾವಧಿ ಮಾತ್ರ ಇನ್ನೂ ೧ ವರ್ಷದ ಮೇಲಿದೆ. ಮತದಾನ ಬಹಿಷ್ಕಾರ ಮಾಡಿದ್ದ ಕಾರಣದಿಂದ ಇಲ್ಲಿ ಚುನಾವಣೆ ಬಹಳ ತಡವಾಗಿ ನಡೆದಿತ್ತು

” ಜಿಪಂ, ತಾಪಂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಒಂದಿಲ್ಲೊಂದು ಸಬೂಬು ಹೇಳಿಕೊಂಡು ಮುಂದೂಡುತ್ತಲೇ ಬಂದಿರುವುದು ದೊಡ್ಡ ದುರಂತ. ಸ್ಥಳೀಯ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಸಿಗಬೇಕೆಂದರೆ ಶೀಘ್ರ ಚುನಾವಣೆ ನಡೆಸಬೇಕು.”

ಎಂ.ರಾಮಚಂದ್ರ, ಜಿಪಂ ಮಾಜಿ ಅಧ್ಯಕ್ಷರು

” ಜಿಪಂ, ತಾಪಂ ಚುನಾವಣೆ ಮಾಡಿ ವ್ಯತಿರಿಕ್ತ ಫಲಿತಾಂಶ ಬಂದರೆ ಕುರ್ಚಿಗೆ ಕಂಟಕ ಆಗುತ್ತದೆ ಎಂಬ ಭಯ ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಇದೆ. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಸರ್ಕಾರ ಸ್ಥಳೀಯ ಸಂಸ್ಥೆಗಳು ಅಸ್ತಿತ್ವದಲ್ಲಿ ಇರುವುದೇ ಬೇಡ ಎಂಬ ಅಸಹಾಯಕ ಪರಿಸ್ಥಿತಿಯನ್ನು ತಲುಪಿದೆ.”

ಮಂಗಲ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು

” ಗ್ರಾಮೀಣ/ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಒಟ್ಟಿಗೇ ಘೋಷಣೆ ಮಾಡಿ ಪ್ರತ್ಯೇಕ ದಿನಗಳಂದು ಮತದಾನ ನಡೆಸುವುದು ಒಳ್ಳೆಯದು. ಇದರಿಂದ ಆರ್ಥಿಕ ಹೊರೆ ತಗ್ಗಲಿದೆ.”

ಆರ್.ಉಮೇಶ್, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ.

” ಜಿಪಂ, ತಾಪಂ ಚುನಾವಣೆಯನ್ನು ಒಟ್ಟಿಗೆಮತ್ತು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತ್ಯೇಕವಾಗಿ ನಡೆಸುವ ಈ ಹಿಂದಿನ ವ್ಯವಸ್ಥೆಯನ್ನೇ ಈಗಲೂ ಮುಂದುವರಿಸುವುದು ಸೂಕ್ತ.”

ಆಲೂರು ಪ್ರದೀಪ್, ಎಪಿಎಂಸಿ ನಿರ್ದೇಶಕರು

ರಾಜೇಶ್ ಬೆಂಡರವಾಡಿ

ಆಂದೋಲನ ಡೆಸ್ಕ್

Recent Posts

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು: ಸೆ.5ರ ಪ್ರತಿಭಟನೆ ಹಿಂಪಡೆದ ಸಿಜೆಪಿ

ನವದೆಹಲಿ: ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್‌ಗೆ…

12 hours ago

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಜುಲೈನಲ್ಲಿ…

13 hours ago

ನೇಪಾಳ ಪ್ರವಾಹ | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…

15 hours ago

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

15 hours ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

15 hours ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

22 hours ago