Andolana originals

ಈ ಹಳೇ ಕಟ್ಟಡ ಕುಸಿದರೆ ವ್ಯಾಪಾರಿಗಳಿಗೆ ಸಂಚಕಾರ!

ರಾಜೇಶ್ ಬೆಂಡರವಾಡಿ

ಚಾಮರಾಜೇಶ್ವರ ದೇವಸ್ಥಾನಕ್ಕೆ ಸೇರಿದ ಈ ಕಟ್ಟಡದಲ್ಲಿ ಬೆಳೆದಿದೆ ಅರಳಿಮರ; ಶೀಘ್ರದಲ್ಲಿ ಕಟ್ಟಡ ತೆರವುಗೊಳಿಸಲು ಆಗ್ರಹ 

ಚಾಮರಾಜನಗರ: ಇಲ್ಲಿನ ಚಾಮರಾಜೇಶ್ವರ ದೇವಸ್ಥಾನಕ್ಕೆ ಸೇರಿದ ಮುಜರಾಯಿ ಇಲಾಖೆಯ ಹಳೇ ಕಟ್ಟಡ ರಥದ ಬೀದಿಯಲ್ಲಿದ್ದು ಯಾವಾಗ ಬೇಕಾದರೂ ಕುಸಿಯುವ ಅಪಾಯಕಾರಿ ಹಂತ ತಲುಪಿದೆ.

ಈ ಕಟ್ಟಡದ ಗೋಡೆಗೆ ಹೊಂದಿಕೊಂಡಂತೆ ಫಾಸ್ಟ್‌ಫುಡ್, ಟೀ ಕ್ಯಾಂಟೀನ್, ಕಡ್ಲೆಪುರಿ, ಖಾರ, ವಡೆ, ಬಜ್ಜಿ ಮೊದಲಾದ ವ್ಯಾಪಾರವನ್ನು ಹಲವರು ಮಾಡುತ್ತಿದ್ದು, ಯಾವಾಗಲೂ ಜನಸಂಚಾರ ಇರುವ ಈ ಸ್ಥಳದಲ್ಲಿ ಇಷ್ಟು ದಿನದವರೆಗೆ ಕಟ್ಟಡ ಕೆಡವದೇ ಬಿಟ್ಟಿರುವುದೇ ಮಹಾ ಅಪರಾಧ ಎಂದರೆ ತಪ್ಪಾಗಲಾರದು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಹೊಂದಿಕೊಂಡಿರುವ ಈ ಗತಕಾಲದ ಕಟ್ಟಡದ ಒಳಗಡೆಯೇ ಅರಳೀಮರ ಕಟ್ಟಡಕ್ಕಿಂತ ಎತ್ತರವಾಗಿ ಬೆಳೆದು ನಿಂತಿದೆ. ಸಾಲದೆಂಬಂತೆ ಕಟ್ಟಡದ ಹೊರಗೂ ಇನ್ನೂ ಒಂದು ಅರಳಿಮರ ಎತ್ತರವಾಗಿ ಬೆಳೆದಿದೆ. ಇವೆರಡೂ ಮರಗಳಬೇರುಗಳು ಕಟ್ಟಡವನ್ನು ಹಾವಿನಂತೆ ದೊಡ್ಡ ಆಕಾರದಲ್ಲಿ ವಿವಿಧೆಡೆ ಸುತ್ತಿಕೊಂಡಿರುವುದು ಎದ್ದು ಕಾಣುತ್ತಿದೆ. ಬೇರುಗಳು ಗೋಡೆಯ ಒಳಗೆ-ಹೊರಗೆ ಹೋಗಿರುವ ಪರಿಣಾಮ ವ್ಯಾಪಕವಾಗಿ ಕಟ್ಟಡದಲ್ಲಿ ಬಿರುಕು ಮೂಡಿ ಅವಶೇಷಗಳು, ಗಾರೆ ಕಿತ್ತು ಬೀಳುತ್ತಿವೆ.

ಮಳೆ ಬಿದ್ದರೆ, ನೀರು ಹೊರಗೇ ಬರುವುದಿಲ್ಲ. ಎಲ್ಲವೂ ಕಟ್ಟಡದ ಒಳಗಡೆಯೇ ಇಳಿಯುತ್ತಿದ್ದು, ಅಷ್ಟರ ಮಟ್ಟಿಗೆ ತಳಭಾಗ ಕುಸಿದು ಗಿಡಗಂಟಿಗಳು ಬೆಳೆದು ನಿಂತಿವೆ. ಗ್ರಂಥಾಲಯ ಇಲಾಖೆಯು ಶಿಥಿಲ ಕಟ್ಟಡದ ಒಂದು ಕೊಠಡಿಯನ್ನು ಈಗಲೂ ಬಳಕೆ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ೧೯೮೦ರ ದಶಕದಲ್ಲಿ ಸಿಂಡಿಕೇಟ್ ಬ್ಯಾಂಕ್ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಿತ್ತು. ೧೯೯೭ರಲ್ಲಿ ಹೊಸದಾಗಿ ಜಿಲ್ಲೆಯಾಗಿ ರಚನೆ ಆದ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಕಾರ್ಯಾಲಯವೂ ಇದೇ ಕಟ್ಟಡದಲ್ಲಿತ್ತು.

ಬೆಂಗಳೂರು ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್‌ಗೆ ಹೊಂದಿಕೊಂಡು ಬಟ್ಟೆ, ಚಪ್ಪಲಿ ಇತ್ಯಾದಿ ಮಾರಾಟ ಮಾಡುತ್ತಿ ದ್ದವರು ಸೇರಿದಂತೆ ಒಟ್ಟು ಏಳು ಜನ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಕೆಲದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ. ಆ ವಿಚಾರ ಕೇಳಿದ ಯಾರೇ ಆದರೂ ಚಾಮರಾಜೇಶ್ವರ ದೇವಸ್ಥಾನಕ್ಕೆ ಸೇರಿರುವ ಈ ಕಟ್ಟಡದ ದುಸ್ಥಿತಿ ನೋಡಿದರೆ ಕಟ್ಟಡದ ಗೋಡೆಗೆ ಹೊಂದಿಕೊಂಡು ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದರೆ ಎಂಥವರಿಗೂ ಭಯವಾಗುತ್ತದೆ.

ವ್ಯಾಪಾರದಿಂದಲೇ ಬದುಕು ಸಾಗಿಸುತ್ತಿರುವವರಿಗೆ ನಾವೆಷ್ಟು ಅಪಾಯದಲ್ಲಿದ್ದೇವೆ ಎಂಬ ಸತ್ಯ ಗೊತ್ತಿದೆ. ಬದುಕಿನ ಅನಿವಾರ್ಯತೆಯಿಂದ ಅವರು ಈ ಸ್ಥಳದಲ್ಲಿಯೇ ಇದ್ದಾರೆ. ಜಿಲ್ಲಾಡಳಿತಕ್ಕೆ, ಚುನಾಯಿತ ಪ್ರತಿನಿಧಿಗಳಿಗೆ ಸ್ವಲ್ಪವಾದರೂ ಜವಾಬ್ದಾರಿ ಎಂಬುದು ಇದ್ದರೆ ಕೂಡಲೇ ಕಟ್ಟಡ ಕೆಡವಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಕಟ್ಟಡ ಕೆಡವಿ ತೆರವಾಗುವ ಜಾಗದಲ್ಲೇ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎನ್ನುತ್ತಾರೆ ಜನತೆ.

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ, ಚಂದಕವಾಡಿ ನಾಡ ಕಚೇರಿಗಳು ಮಳೆ ಬಂದರೆ ಸೋರುತ್ತಿದ್ದು ಅದೇ ಕಟ್ಟಡದಲ್ಲಿ ಕಚೇರಿ ಕೆಲಸಗಳು ಇಂದಿಗೂ ನಡೆಯುತ್ತಿವೆ. ನಗರದಿಂದ ಕೇವಲ ೫ ಕಿ.ಮೀ. ದೂರದಲ್ಲಿರುವ ಹೋಬಳಿ ಕೇಂದ್ರವಾದ ಹರದನಹಳ್ಳಿಯಲ್ಲಿ ರಾಜಸ್ವ ನಿರೀಕ್ಷಕರ ಕೊಠಡಿ, ಅಲ್ಲಿನ ರೆಕಾರ್ಡ್ ರೂಂ ಸೋರುತ್ತಿವೆ. ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ಗ್ರೂಪ್ ಡಿ ನೌಕರರು ಮತ್ತು ಸಾರ್ವಜನಿಕರು ರಜಾ ದಿನ ಹೊರತುಪಡಿಸಿ ಇತರ ದಿನಗಳಲ್ಲಿ ಕಚೇರಿ ಅವಧಿಯಲ್ಲಿ ಇಲ್ಲಿ ಇರುತ್ತಾರೆ. ಆದ್ದರಿಂದ ಶಿಥಿಲ ಕಟ್ಟಡವನ್ನು ಬೇಗ ದುರಸ್ತಿ ಮಾಡಿಸಿದರೆ ಒಳ್ಳೆಯದು. ಮತ್ತೊಂದು ಹೋಬಳಿ ಕೇಂದ್ರವಾದ ಚಂದಕವಾಡಿಯಲ್ಲಿಯೂ ಉಪ ತಹಸಿಲ್ದಾರ್ ಕೊಠಡಿ, ಭೂದಾಖಲೆಗಳ ಕೊಠಡಿ ಎರಡೂ ಸೋರುತ್ತಿವೆ. ಮಳೆ ಬಂದಾಗ ಹೇಗೋ ಅತ್ತಿತ್ತ ಹೋಗಿ ರಕ್ಷಣೆ ಪಡೆದರೆ ಸಮಸ್ಯೆ ಬಗೆಹರಿಯುವುದಿಲ್ಲ. ಶಿಥಿಲ ಕಟ್ಟಡ ಮಳೆ ಬಂದಾಗಲೇ ಕುಸಿದು ಬೀಳಬೇಕೆಂದಿಲ್ಲ. ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ವಿಪರ್ಯಾಸ ಎಂದರೆ, ಹರದನಹಳ್ಳಿಯ ಶಿಥಿಲ ಕೊಠಡಿಗಳ ದುರಸ್ತಿಗೆಂದು ಬಹಳ ಹಿಂದೆಯೇ ಅಂದಾಜು ಪಟ್ಟಿ ತಯಾರಿಸಿ ನಿರ್ಮಿತಿ ಕೇಂದ್ರದವರೂ ಸ್ಥಳ ಪರಿಶೀಲನೆ ಮಾಡಿ ಹೋದರಾದರೂ ಕೆಲಸ ಮಾತ್ರ ಕೈಗೆತ್ತಿಕೊಳ್ಳಲಿಲ್ಲ ಎಂದು ಅಲ್ಲಿನ ನೌಕರರೊಬ್ಬರು ಬೇಸರ ವ್ಯಕ್ತಪಡಿಸಿದರು

ಸಾಗಡೆ ಅಂಗನವಾಡಿಯೂ ಶಿಥಿಲ…: 

ತಾಲ್ಲೂಕಿನ ಸಾಗಡೆ ಗ್ರಾಮದ ಅಂಗನವಾಡಿ ಕೇಂದ್ರ (ಸಂಖ್ಯೆ -೨) ಶಿಥಿಲಗೊಂಡಿದ್ದು ಏಪ್ರಿಲ್ ೧ರಿಂದ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ ಮಾಡುವ ದಿನದವರೆಗೂ ಇದೇ ಕಟ್ಟಡದಲ್ಲಿ ೨೮ ಮಕ್ಕಳನ್ನು ಕೂರಿಸುತ್ತಿದ್ದುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಬಳಕೆಯಾಗದೇ ಉಳಿದಿದ್ದ ಶಾಲೆಯ ಕೊಠಡಿಯೊಂದನ್ನು ಈ ಅಂಗನವಾಡಿಗೆ ಬಿಡಿಸಿದ್ದು ಇಲ್ಲೇ ಅಂಗನವಾಡಿಯನ್ನು ಮುಂದಿನ ದಿನಗಳಲ್ಲಿ ನಡೆಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ, ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ನಡೆಸಿದರೆ ಮಕ್ಕಳನ್ನು ಕಳಿಸುವುದಿಲ್ಲ ಎಂದು ಪೋಷಕರಾದ ನಾವು ತಿಳಿಸಿದ್ದೇವೆ ಎಂದರು. ಈ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ ೨೦ ವರ್ಷ ಆಗಿರಬಹುದು. ಆಗಲೇ ಈ ಸ್ಥಿತಿ ತಲುಪಿದೆ ಎಂದರೆ ಕಾಮಗಾರಿ ಯಾವ ಮಟ್ಟಕ್ಕೆ ನಡೆದಿರಬಹುದೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

” ಚಂದಕವಾಡಿ ನಾಡಕಚೇರಿಯಲ್ಲಿ ಮಳೆನೀರು ಸೋರುವ ಸ್ಥಳಗಳಲ್ಲಿ ಬಕೆಟ್, ಚೀಲಗಳನ್ನು ಇರಿಸಿ ನೀರು ಸಂಗ್ರಹಿಸಿ ಹೊರ ಹಾಕಲಾಗುತ್ತಿದೆ. ದಾಖಲೆಗಳು ಒದ್ದೆಯಾಗದಂತೆ ರಕ್ಷಿಸಲು ಅಲ್ಲಿನ ನೌಕರರು ಭಾರೀ ಪ್ರಯಾಸ ಪಡುವಂತಾಗಿದೆ.”

ದಡದಹಳ್ಳಿ ರಮೇಶ್, ಕಾರ್ಯದರ್ಶಿ, ನೀರು ಬಳಕೆದಾರರ ಸಂಘ

” ಕನ್ನಡ ಚಳವಳಿಗಾರರಾದ ಶಾ.ಮುರಳಿ ಸೇರಿದಂತೆ ಇಬ್ಬರ ಮೇಲೆ ಈ ಹಳೇ ಕಟ್ಟಡದ ಅವಶೇಷ ಬೇರೆ ಬೇರೆ ಸಂದರ್ಭಗಳಲ್ಲಿ ಕಿತ್ತು ಬಿದ್ದು ಗಾಯಗೊಂಡಿರುವ ನಿದರ್ಶನ ಇದೆ. ಕೂಡಲೇ ಈ ಕಟ್ಟಡ ನೆಲಸಮ ಮಾಡದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.”

ಚಾ.ರಂ.ಶ್ರೀನಿವಾಸಗೌಡ, ಅಧ್ಯಕ್ಷರು, ಕರ್ನಾಟಕ ಸೇನಾ ಪಡೆ

” ನಗರಸಭೆ ಆಯುಕ್ತರಿಂದ ಕೂಡಲೇ ವರದಿ ಪಡೆದು ಶಿಥಿಲವಾಗಿರುವ ಈ ಹಳೇ ಕಟ್ಟಡವನ್ನು ಕೆಡವಲು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಹರದನಹಳ್ಳಿ ಮತ್ತು ಚಂದಕವಾಡಿ ನಾಡಕಚೇರಿಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗುವುದು.”

ಜವರೇಗೌಡ, ಎಡಿಸಿ, ಚಾ.ನಗರ 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

7 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

8 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

8 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

8 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

8 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

8 hours ago