Andolana originals

ಮಹಾರಾಜ ಕಾಲೇಜು ಕಟ್ಟಡ ಶಿಥಿಲ

ಚಿರಂಜೀವಿ ಸಿ ಹುಲ್ಲಹಳ್ಳಿ

ಮೈಸೂರು: ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಭವ್ಯ ಪಾರಂಪರಿಕ ಕಟ್ಟಡ, ದೊಡ್ಡ ಬಾಗಿಲು-ಕಿಟಕಿಗಳೊಂದಿಗೆ ಇನ್ನೂ ಗಟ್ಟಿಯಾಗಿ ನಿಂತಿದ್ದರೂ ಅದರೊಳಗಿನ ಸ್ಥಿತಿ ಆತಂಕಕಾರಿಯಾಗಿದೆ. ನಗರದ ಪ್ರತಿಷ್ಠಿತ ಮಹಾರಾಜ ಕಾಲೇಜು ಕಟ್ಟಡ ಇಂದು ಶಿಥಿಲಾವಸ್ಥೆಗೆ ತಲುಪಿರುವುದು ಕಳವಳಕಾರಿಯಾಗಿದೆ.

ಶೈಕ್ಷಣಿಕ ವಲಯದಲ್ಲಿ ವಿಶಿಷ್ಟ ಗುರುತು ಮೂಡಿಸಿರುವ ಈ ಕಾಲೇಜು, ನಿರ್ವಹಣೆಯ ಕೊರತೆಯಿಂದ ಅವನತಿಯ ಹಾದಿಯಲ್ಲಿದೆ. ಹಲವಾರು ತರಗತಿ ಕೊಠಡಿಗಳ ಗೋಡೆಗಳಲ್ಲಿ ಬಿರುಕುಗಳು ಮೂಡಿದ್ದು, ಗಾರೆ ಚೂರುಚೂರಾಗಿ ಉದುರುತ್ತಿವೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲೇ ವಿದ್ಯಾರ್ಥಿಗಳು ಪಾಠ ಆಲಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ೭ ಮಂದಿ ಮೃತಪಟ್ಟ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಈ ನಿಟ್ಟಿನಲ್ಲಿ ‘ಆಂದೋಲನ’ ದಿನಪತ್ರಿಕೆ ಮೈಸೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಕುರಿತು ಬೆಳಕು ಚೆಲ್ಲುವ ಸರಣಿ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾರಾಜ ಕಾಲೇಜಿನ ಕಟ್ಟಡವನ್ನು ಹಲವಾರು ವರ್ಷಗಳಿಂದ ನಿರ್ವಹಣೆ ಮಾಡದೆ ಶಿಥಿಲಾವಸ್ಥೆಗೆ ತಲುಪಿದ್ದರೂ ಅದೇ ಕೊಠಡಿಗಳಲ್ಲಿ ತರಗತಿಗಳನ್ನು ಮುಂದುವರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಬುಧವಾರ ರಾತ್ರಿ ಮೈಸೂರಿನಲ್ಲೂ ಭರ್ಜರಿ ಮಳೆ ಸುರಿದಿದ್ದು, ಇದರ ಜೊತೆಗೆ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಿ ಸುರಿಯಲಿದ್ದು, ಗಾಳಿಯೂ ಬಿರುಸಾಗಲಿದೆ ಎಂಬ ಮುನ್ಸೂಚನೆಯನ್ನುಸದ್ಯದ ವಾತಾವರಣ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಆಡಳಿತ ಮಂಡಳಿಯು ಯಾವುದೇ ಅಪಾಯ ಉಂಟಾಗದಂತೆ ಕ್ರಮವಹಿಸಬೇಕಿದೆ.

ಮಹಾರಾಜ ಕಾಲೇಜಿನ ಇತಿಹಾಸ ವಿಭಾಗ ಸೇರಿದಂತೆ ಹಲವು ವಿಭಾಗಗಳ ಕೊಠಡಿಗಳು ಹೆಚ್ಚು ಹಾನಿಗೊಳಗಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಸುರಕ್ಷಿತ ವಾತಾವರಣದ ಮನೋಭಾವ ಮೂಡುವಂತೆ ಕಾಲೇಜಿನ ಆಡಳಿತ ಮಂಡಳಿ ನಿರ್ವಹಣೆ ಮಾಡಬೇಕು. ಕಟ್ಟಡದ ಗೋಡೆಗಳ ಮೇಲ್ಭಾಗದಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ದೊಡ್ಡದಾದಂತೆ ಬಿರುಕುಗಳು ಅಗಲವಾಗುತ್ತಿವೆ. ಕಾಲೇಜಿನ ಬಲಭಾಗದಲ್ಲಿರುವ ಪತ್ರಿಕೋದ್ಯಮ ವಿಭಾಗದ ಕಟ್ಟಡ, ಡಿಜಿಟಲ್ ಗ್ರಂಥಾಲಯ, ಜಾನಪದ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗಗಳಲ್ಲಿಯೂ ಇದೇ ಚಿತ್ರಣ ಕಾಣಿಸುತ್ತದೆ.

ವಿದ್ಯಾರ್ಥಿಗಳಷ್ಟೇ ಅಲ್ಲದೆ, ಉಪನ್ಯಾಸಕರೂ ಆತಂಕದ ನಡುವೆಯೇ ಬೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿನಲ್ಲಿ ೨೫ಕ್ಕೂ ಹೆಚ್ಚು ಕೊಠಡಿಗಳಿದ್ದರೂ ಬಹುತೇಕ ಕೊಠಡಿಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಬಾಗಿಲುಗಳು, ಕಿಟಕಿಗಳು ಜೀರ್ಣಾವಸ್ಥೆಗೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿಯುವ ಭೀತಿ ಎದುರಾಗಿದೆ. ಹಿಂದೆ ನ್ಯಾಕ್ ಸಮಿತಿ ಪರಿಶೀಲನೆಗೆ ಬಂದಿದ್ದ ಸಂದರ್ಭದಲ್ಲಿ ಸುಣ್ಣ ಬಣ್ಣ ಬಳಿದು ಅಂದಗೊಳಿಸಲಾಗಿದ್ದರೂ, ನಂತರ ಯಾವುದೇ ಶಾಶ್ವತ ನಿರ್ವಹಣಾ ಕಾರ್ಯ ಕೈಗೊಳ್ಳಲಾಗಿಲ್ಲ.

ಶಿಥಿಲಾವಸ್ಥೆ ತಲುಪಿರುವ ಮಹಾರಾಜ ಕಾಲೇಜು ಕಟ್ಟಡದ ನಿರ್ವಹಣೆಗೆ ಮೈಸೂರು ವಿವಿ ಸೂಚನೆ ನೀಡಿದ್ದು, ಕಟ್ಟಡದ ಮೇಲೆ ಬೆಳೆಯುತ್ತಿರುವ ಗಿಡಗಂಟಿಗಳು, ಮರದ ಬೇರು, ಗೋಡೆಯಿಂದ ಗಾರೆ ಚಕ್ಕೆ ಉದುರುವಿಕೆಯ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಮಸ್ಯೆ ಬಗೆಹರಿದಿಲ್ಲ. ಇದರ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಅನುದಾನದ ಕುರಿತು ಪ್ರಸ್ತಾಪಿಸಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಎಂ.ಕೆ.ಸವಿತಾ ಮಾಹಿತಿ ನೀಡಿದರು.

ಪಾರಂಪರಿಕ ಕಟ್ಟಡವಾಗಿರುವುದರಿಂದ ದುರಸ್ತಿ ಕಾರ್ಯಕ್ಕೆ ಪುರಾತತ್ವ ಇಲಾಖೆಯ ಅನುಮತಿ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮಹಾರಾಜ ಕಾಲೇಜು ಸೇರಿದಂತೆ ವಿವಿಧ ಕಟ್ಟಡಗಳ ದುರಸ್ತಿಗೆ ಯೋಜನೆ ಸಿದ್ಧವಾಗಿದ್ದರೂ ಹಣದ ಕೊರತೆಯಿಂದ ಕಾಮಗಾರಿ ಆರಂಭವಾಗಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನವೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ಒಳಿತು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಕಟ್ಟಡದ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸಬೇಕು ಎಂಬುದು ವಿದ್ಯಾರ್ಥಿಗಳು ಹಾಗೂ ಬೋಧಕರ ಒತ್ತಾಯವಾಗಿದೆ.

” ಹಿಂದೊಮ್ಮೆ ಉದುರಿದ್ದ ಕಾಲೇಜಿನ ಗೋಡೆಯ ಗಾರೆ ಕೆಲ ವರ್ಷಗಳ ಹಿಂದೆ ಮಹಾರಾಜ ಕಾಲೇಜಿನ ವಿಭಾಗವೊಂದರ ಕೊಠಡಿಯಲ್ಲಿ ಗೋಡೆಯ ಗಾರೆ ಉದುರಿ ವಿದ್ಯಾರ್ಥಿ ನಿಯೊಬ್ಬರಿಗೆ ಗಾಯವಾದ ಘಟನೆ ನಡೆದಿತ್ತು. ಇದರಿಂದ ಕೆಲ ದಿನಗಳು ಪಾಠ – ಪ್ರವಚನವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಅದೇ ಕೊಠಡಿಯಲ್ಲಿ ಪಾಠಗಳು ನಡೆಯುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಟ್ಟಡಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಪರಿಸ್ಥಿತಿ ಹದಗೆಡುತ್ತಿದೆ. ಈಗ ಕಾಲೇಜಿನ ಶೈಕ್ಷಣಿಕ ಅವಧಿ ಮುಗಿದಿರುವುದರಿಂದ ಅಲ್ಲಿ ತರಗತಿಗಳು ನಡೆಯುತ್ತಿಲ್ಲ. ಆದರೆ, ಇಲ್ಲಿಯವರೆಗೂ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದವು ಎಂದು ಪ್ರಾಧ್ಯಾಪಕರೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.”

” ಶಿಥಿಲಾವಸ್ಥೆಯಲ್ಲಿರುವ ಮಹಾರಾಜ ಕಾಲೇಜು ಕಟ್ಟಡದ ಪರಿಶೀಲನೆ ನಡೆಸಲಾಗಿದೆ. ಕಟ್ಟಡದ ಕುರಿತು ಪಾರಂಪರಿಕ ಕಟ್ಟಡಗಳ ಪರಿಣತರ ಸಮಿತಿ ರಚಿಸಿ ಮೂಲ ಸಮಸ್ಯೆಯನ್ನು ಅರಿತುಕೊಳ್ಳಲಾಗುವುದು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದಿಂದಾದ ದುರ್ಘಟನೆಯು ನಮ್ಮನ್ನು ಎಚ್ಚರಿಸಿದೆ. ಹೀಗಾಗಿ ಅಗತ್ಯಬಿದ್ದರೆ ಈ ಕಟ್ಟಡದಲ್ಲಿ ನಡೆಯುವ ತರಗತಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು.”

-ಎಂ.ಕೆ.ಸವಿತಾ, ಕುಲಸಚಿವರು, ಮೈಸೂರು ವಿಶ್ವವಿದ್ಯಾನಿಲಯ

” ಶಿಥಿಲಗೊಂಡಿರುವ ಮಹಾರಾಜ ಕಾಲೇಜಿನ ಪಾರಂಪರಿಕ ಕಟ್ಟಡವನ್ನು ತೆರವುಗೊಳಿಸಬೇಕು. ಕಟ್ಟಡದಲ್ಲಿ ತರಗತಿಗಳನ್ನು ನಡೆಯುತ್ತಿದ್ದರೆ ಬೇರೆಡೆಗೆ ವರ್ಗಾಯಿಸಬೇಕು. ಕಟ್ಟಡದ ಬಳಿ ವಿದ್ಯಾರ್ಥಿಗಳು ಕೂರುತ್ತಿದ್ದಾರೆ. ಹೀಗಾಗಿ ಅನಾಹುತ ಆಗುವ ಮುನ್ನ ಕಟ್ಟಡವನ್ನು ತೆರವುಗೊಳಿಸಬೇಕು.”

– ಆಸಿಯಾ ಬೇಗಂ, ಸಾರ್ವಜನಿಕರು

” ಮಹಾರಾಜ ಕಾಲೇಜಿನ ಕಟ್ಟಡ ಪಾರಂಪರಿಕ ಕಟ್ಟಡ ಆಗಿರುವುದರಿಂದ ಪುರಾತತ್ವ ಇಲಾಖೆ ಗಮನಕ್ಕೆ ತರಲಾಗಿದೆ. ಪುರಾತತ್ವ ಇಲಾಖೆಯು ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ತರಗತಿ ನಡೆಸದಂತೆ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಚರ್ಚಿಸಿ ಕಟ್ಟಡ ಸ್ಥಿತಿಗತಿ ಅರಿತು ಏನು ಮಾಡಬೇಕು ಎಂದು ನಿರ್ಧರಿಸಲಾಗುವುದು.”

– ಎನ್.ಎ.ಉಮೇಶ, ಪ್ರಭಾರ ಕಾರ್ಯಪಾಲಕ ಅಭಿಯಂತರರು, ಮೈಸೂರು ವಿವಿ

” ಶತಮಾನದ ಇತಿಹಾಸವಿರುವ ಮಹಾರಾಜ ಕಾಲೇಜು ಕಟ್ಟಡವನ್ನು ಪಾರಂಪರಿಕ ದೃಷ್ಟಿಯಿಂದ ಉಳಿಸಿಕೊಳ್ಳುವುದು, ಬಿಡುವುದು ಸಂಬಂಧಪಟ್ಟವರಿಗೆ ಬಿಟ್ಟ ವಿಷಯವಾಗಿದೆ. ಆದರೆ, ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ಕಟ್ಟಡವನ್ನು ತೆರವುಗೊಳಿಸುವುದು ಸೂಕ್ತ. ಮಹಾರಾಣಿ ಕಾಲೇಜು ಕಟ್ಟಡ ಕುಸಿದ ಘಟನೆಯೂ ಪೋಷಕರನ್ನು ಬೆಚ್ಚಿ ಬೀಳಿಸಿತ್ತು. ಅಂತಹ ಘಟನೆ ಮತ್ತೆ ಪುನರಾವರ್ತಿಸಬಾರದು.”

– ಚನ್ನೇಗೌಡ, ಸಾರ್ವಜನಿಕರು

” ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಅಸುನೀಗಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡ ಶಿಥಿಲಗೊಂಡಿರುವ ಹಲವು ಸರ್ಕಾರಿ ಕಟ್ಟಡಗಳಿವೆ. ಕುಸಿದು ಬೀಳಬಹುದಾದ ಶೋಚನೀಯ ಸ್ಥಿತಿಯಲ್ಲಿರುವ ಕಟ್ಟಡಗಳ ನಿರ್ವಹಣೆ, ಸಂರಕ್ಷಣೆಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ‘ಆಂದೋಲನ’ ದಿನಪತ್ರಿಕೆಯು ಸರ್ಕಾರಿ ಕಟ್ಟಡಗಳ ದುಸ್ಥಿತಿಯನ್ನು ಕುರಿತು ಸರಣಿ ಆರಂಭಿಸಿದ್ದು, ಮೊದಲನೇ ದಿನ ಮಹಾರಾಜ ಕಾಲೇಜಿನ ಕಟ್ಟಡದ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಾಗಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

7 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

7 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

7 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

7 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

7 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

7 hours ago