Andolana originals

ಶ್ರೀ ಸಬ್ಬಮ್ಮ ನೆಲೆಯ ಮಲೆನಾಡಿನಾದ್ಯಂತ ಸುಗ್ಗಿ ಉತ್ಸವ ಶುರು

ಲಕ್ಷ್ಮಿಕಾಂತ್ ಕೊಮಾರಪ್ಪ

ಗ್ರಾಮೀಣ ಭಾಗದಲ್ಲಿ ಮನೆಮಾಡಿದ ಸಂಭ್ರಮ; ಭಕ್ತಿ ಭಾವದಿಂದ ಪ್ರಕೃತಿ-ಗ್ರಾಮದೇವಿಗೆ ಪೂಜೆ

ಸೋಮವಾರಪೇಟೆ: ಗ್ರಾಮೀಣ ಪ್ರದೇಶದ ಜನಪದದ ಪ್ರಮುಖ ಅಂಗವಾದ ಸುಗ್ಗಿ ಉತ್ಸವಗಳು ಮಲೆನಾಡು ಪ್ರದೇಶದಲ್ಲಿ ಶ್ರದ್ಧಾಭಕ್ತಿಯಿಂದ  ಆಚರಿಸಲ್ಪಡುತ್ತಿದ್ದು, ಈಗಾಗಲೇ ಹಲವು ಗ್ರಾಮ ದಲ್ಲಿ ಪ್ರಸಕ್ತ ವರ್ಷದ ಸುಗ್ಗಿ ಆರಂಭಗೊಳ್ಳುತ್ತಿದೆ.

ಇನ್ನೇನು ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯ ಸನ್ನಿಹಿತವಾಗುತ್ತಿರುವಾಗಲೇ ಕೃಷಿ ಕಾರ್ಯಗಳಿಗೆ ಯಾವದೇ ತೊಂದರೆಯಾಗಬಾರದು, ಗ್ರಾಮ ಸುಭಿಕ್ಷೆಯಿಂದಿರಬೇಕು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮ ದೇವರಿಗೆ ಹಾಗೂ ಪ್ರಕೃತಿ ದೇವಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಹಬ್ಬವಾದ ಸುಗ್ಗಿ ಉತ್ಸವಗಳು ತಾಲ್ಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಆರಂಭಗೊಂಡಿವೆ.

ಮಲೆನಾಡಿನ ಪ್ರದೇಶವಾದ ಪುಷ್ಪಗಿರಿ ಬೆಟ್ಟ ಶ್ರೇಣಿಯ ತಪ್ಪಲಲ್ಲಿರುವ ಗ್ರಾಮಗಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಕಂಡುಬರುತ್ತಿದೆ. ಈ ವ್ಯಾಪ್ತಿಯ ಗ್ರಾಮಗಳ ಗ್ರಾಮದೇವತೆಯಾದ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಒಟ್ಟುಸೇರಿವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಸಂದರ್ಭ ಗ್ರಾಮದ ಹೊರಭಾಗಗಳಲ್ಲಿ ನೆಲೆಸಿರುವ ಮಂದಿಯೂ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಇಡೀ ಗ್ರಾಮ ಸಂಭ್ರಮದಲ್ಲಿರುತ್ತದೆ. ಸುಗ್ಗಿ ಉತ್ಸವ ಪ್ರಾರಂಭವಾಗುತ್ತಿದ್ದಂತೆ ಗ್ರಾಮದ ಜನರ ಮನೆಗಳಲ್ಲಿ ಗ್ರಾಮದೇವತೆಗಳ ಪೂಜೆಗಳು ನಡೆಯುತ್ತವೆ. ಗ್ರಾಮದಲ್ಲಿ ರೋಗರುಜಿನಗಳು ಬರದಂತೆ, ಮುಂದೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವುದಕ್ಕೆ ಗ್ರಾಮದೇವತೆಗಳು ಹರಸಬೇಕೆಂದು ಪ್ರಾರ್ಥನೆ ಮಾಡುತ್ತಾರೆ.

ಸುಗ್ಗಿ ಉತ್ಸವ ಪ್ರಾರಂಭದ ದಿನದಿಂದ ಸುಗ್ಗಿ ಸಾರು ಎಂಬ ಕಟ್ಟುನಿಟ್ಟಿನ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಉತ್ಸವದ ೧೫ದಿನಗಳಲ್ಲಿ ಹಸಿ ಮರ ಕಡಿಯುವುದು, ಒಣಗಿದ ಗಿಡ ಬಳ್ಳಿಗಳನ್ನುಮುರಿಯದಂತೆ ಎಚ್ಚರ ವಹಿಸುತ್ತಾರೆ. ಹಗಲು ವೇಳೆ ನೆಂಟರಿಷ್ಟರು ಮನೆ ಸೇರದಂತೆ ನಿರ್ಬಂಧ ವಿಧಿಸುತ್ತಾರೆ. ನಕ್ಷತ್ರಗಳು ಕಂಡ ನಂತರವೇ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಹಗಲಿನ ವೇಳೆ ಹೊರಗಡೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತಿಲ್ಲ. ಇಂತಹ ಕಟ್ಟುಪಾಡು ಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸುಗ್ಗಿ ಸಂದರ್ಭ ಚಾಲ್ತಿಯಲ್ಲಿರುತ್ತವೆ.

ಏ.೬ರಂದು ಕೂತಿನಾಡು ಸುಗ್ಗಿ: 

ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ(ಲಕ್ಷ್ಮಿ) ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ವೈಶಿಷ್ಟ್ಯಗಳೊಂದಿಗೆ ಇದೆ ಏ.೬ರ ಸೋಮವಾರ ನೆರವೇರುತ್ತದೆ. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಪಕ್ಕದ ಸಕಲೇಶಪುರ ತಾಲ್ಲೂಕಿನ ಓಡಳ್ಳಿ ಸೇರಿದಂತೆ ಒಟ್ಟು ೧೮ ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿಕಾಲದಿಂದ ನಡೆದುಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಉತ್ಸವದ ಕೊನೆ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ ೪ ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ಪ್ರಕಟಗೊಳಿಸುವ ಬಹುಮುಖ್ಯ ಕ್ಷಣಗಳಾಗುತ್ತವೆ.

ಬಂದೂಕುಗಳಿಗೆ ಪೂಜೆ..!:  ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಕೂತಿನಾಡು, ತೋಳುನಾಡು ವ್ಯಾಪ್ತಿಯ ದೇವಿಯ ಕಟ್ಟೆಯಲ್ಲಿ ಸ್ಥಳೀಯ ಗ್ರಾಮದ ಮನೆಗಳಲ್ಲಿರುವ ಬಂದೂಕುಗಳನ್ನು ತಂದಿಟ್ಟು ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ದೇವರ ಕಟ್ಟೆಗೆ ಗ್ರಾಮಸ್ಥರ ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ಬಂದೂಕಿನಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಪದ್ಧತಿಯನ್ನು ಆಚರಿಸುವುದರೊಂದಿಗೆ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

” ಗ್ರಾಮದೇವತೆಯ ಆಶೀರ್ವಾದದಿಂದ ತಲೆತಲಾಂತರದಿಂದ ಕೃಷಿಕರು ಸಮೃದ್ಧಿಯ ಬದುಕು ನಡೆಸುತ್ತಿದ್ದಾರೆ ಎಂಬ ನಂಬಿಕೆ ಜನರಲ್ಲಿದೆ. ಮುಂದಿನ ಪೀಳಿಗೆಯೂ ಕೂಡ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬುದು ಹಿರಿಯರ ಉದ್ದೇಶವಾಗಿದೆ.ಪ್ರಕೃತಿ ಆರಾಧನೆಯ ಇನ್ನೊಂದು ಹೆಸರು ಸುಗ್ಗಿ ಉತ್ಸವ. ವರ್ಷಕೊಮ್ಮೆ ನಡೆಯುವ ಉತ್ಸವದಲ್ಲಿ ಜಾನಪದ ಕಲೆಯ ಪ್ರದರ್ಶನ ನಡೆಯಲಿದೆ.”

-ಕೆ.ಬಿ.ಜಗದೀಶ್, ಅಧ್ಯಕ್ಷರು, ಕೂತಿನಾಡು ಶ್ರೀ ಸಬ್ಬಮ್ಮ ಸಮಿತಿ

” ಸ್ಥಳೀಯ ಗ್ರಾಮಗಳ ಗ್ರಾಮದೇವತೆಯಾದ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಒಟ್ಟುಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಸಂದರ್ಭ ಗ್ರಾಮದ ಹೊರಭಾಗಗಳಲ್ಲಿ ನೆಲೆಸಿರುವ ಗ್ರಾಮದವರೇ ಹಬ್ಬಕ್ಕೆ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಇಡೀ ಗ್ರಾಮ ಸಂಭ್ರಮದಲ್ಲಿರುತ್ತದೆ. ಈ ಬಾರಿಯೂ ಸಂಭ್ರಮದಿಂದ ಉತ್ಸವ ನಡೆಸಲಾಗುತ್ತಿದೆ.”

-ರಾಜ್ ಗೋಪಾಲ್, ಅಧ್ಯಕ್ಷರು, ಶ್ರೀ ಸಬ್ಬಮ್ಮ ಸಮಿತಿ, ತೋಳುರುಶೆಟ್ಟಳ್ಳಿ 

 

 

ಆಂದೋಲನ ಡೆಸ್ಕ್

Recent Posts

ವರ್ತಕರಿಗೆ ಹಬ್ಬದ ನಿರಾಳತೆ: ದೀಪಾವಳಿ ನಂತರಕ್ಕೆ UPI ಮರ್ಚೆಂಟ್‌ ಶುಲ್ಕ ಜಾರಿ ಮುಂದೂಡಿಕೆ

ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್‌ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್‌ ಪಾವತಿಗಳ ಮೇಲಿನ…

10 hours ago

ಸ್ಟಿಂಗ್ ಆಪರೇಷನ್ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಿ: ಸಚಿವ ಪುಟ್ಟರಂಗಶೆಟ್ಟಿ

ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…

11 hours ago

ಸ್ಟಿಂಗ್ ಆಪರೇಷನ್ ಆರೋಪ: ಸಾಕ್ಷಿ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಒತ್ತಾಯ

ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…

11 hours ago

ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…

11 hours ago

ಕಾಡಾನೆ ದಾಳಿ: ರೈತ ಸಾವು

ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…

12 hours ago

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

15 hours ago