Andolana originals

ಗುಂಡ್ಲುಪೇಟೆ: ಟಿಪ್ಪರ್‌ಗಳಿಗೆ ಬೀಳಬೇಕಿದೆ ಬ್ರೇಕ್

ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟಿಪ್ಪರ್‌ಗಳ ಅಬ್ಬರದಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆಯಲು ಪ್ರಾರಂಭವಾಗಿದೆ. ೨-೩ ವರ್ಷಗಳ ಹಿಂದೆ ಕೇರಳ ನೋಂದಣಿ ಸಂಖ್ಯೆಯ ಟಿಪ್ಪರ್ ಗಳು ಇರಲಿಲ್ಲ. ಆದರೆ ಇತ್ತೀಚೆಗೆ ಯಾವ ಟಿಪ್ಪರ್ ನೋಡಿದರೂ ಬಹುತೇಕ ಕೇರಳ ನೋಂದಣಿ ಸಂಖ್ಯೆಯೇ ಇರುತ್ತದೆ. ಜೊತೆಗೆ ಬೃಹತ್ ಗಾತ್ರದ ಕಂಟೇನರ್ ಮಾದರಿಯ ಟಿಪ್ಪರ್‌ಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಿ ನೋಡಿದರೂ ಟಿಪ್ಪರ್‌ಗಳೇ ಕಾಣಿಸುತ್ತಿದ್ದು, ಅಪಘಾತಗಳ ಸಂಖ್ಯೆ ಉಲ್ಬಣಿಸಿದೆ ಎಂಬ ಆರೋಪ ಕೇಳಿಬಂದಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರು-ಕೇರಳ ರಸ್ತೆ ಹಾಗೂ ಜಿಲ್ಲಾ ಸಂಪರ್ಕ ರಸ್ತೆಯಲ್ಲಿ ಹಿರೀಕಾಟಿ, ಬೇಗೂರು, ಮಾದಾಪಟ್ಟಣ ಗೇಟ್, ರಾಘವಾಪುರ, ಗರಗನಹಳ್ಳಿ, ಬೆಂಡಗಳ್ಳಿ ಗೇಟ್, ವೀರನಪುರ ಗೇಟ್, ಕೇರಳ ರಸ್ತೆಯ ಮಲ್ಲಯ್ಯನಪುರ, ಕೂತನೂರು ಭೀಮನಬೀಡು, ಕಣ್ಣೇಗಾಲ ಗೇಟ್, ಬಸವಾಪುರ, ಕಲ್ಲಿಗೌಡನಹಳ್ಳಿ ಗೇಟ್, ಚಿಕತುಪ್ಪೂರು, ಕಗ್ಗಳ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ.

ಅರಣ್ಯ ಇಲಾಖೆ ಮೌನ: ಪ್ರತಿನಿತ್ಯ ನೂರಾರು ಟಿಪ್ಪರ್ ಅಧಿಕ ಬಾರದ ಕಲ್ಲುಗಳನ್ನು ತುಂಬಿ ಸಾಗಿಸುತ್ತಿದ್ದರೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಟಿಪ್ಪರ್‌ಗಳ ಓಡಾಟಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಆದೇಶ ಇರುವುದರಿಂದ ನಾವೇನು ಮಾಡಲು ಸಾಧ್ಯ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಾತ್ರಿ ಗಣಿಗಾರಿಕೆ, ಕ್ರಷರ್ ನಿಲ್ಲಿಸಿದರೆ ಟಿಪ್ಪರ್‌ಗಳಿಗೆ ಕಡಿವಾಣ:  ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಗಣಿಗಾರಿಕೆ ಕ್ರಷರ್‌ಗಳು ನಿಯಮಾನುಸಾರ ಪ್ರತಿದಿನ ಸಂಜೆ ೬ ಗಂಟೆಗೆ ಕಾರ್ಯ ಸ್ಥಗಿತಗೊಳಿಸಬೇಕು. ಆದರೆ ಕಾನೂನು ಗಾಳಿಗೆ ತೂರಿ ರಾತ್ರಿ ಪೂರ್ತಿ ಗಣಿಗಾರಿಕೆ, ಕ್ರಷರ್ ನಡೆಸಲಾಗುತ್ತಿದೆ. ಇದರಿಂದ ಟಿಪ್ಪರ್‌ಗಳು ಸಂಚಾರದ ಪ್ರಮಾಣ ಅಧಿಕವಾಗಿದೆ. ಹಗಲಿರುಳು ಎನ್ನದೇ ಟಿಪ್ಪರ್‌ಗಳು ಸಂಚರಿಸುತ್ತಿವೆ. ಇದರಿಂದ ಅಪಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ.

ಕೇರಳಕ್ಕೆ ನೂರಾರು ಟಿಪ್ಪರ್‌ನಲ್ಲಿ ಖನಿಜ ಸಂಪತ್ತು ಸಾಗಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ರಾಜ್ಯದ ಎರಡು ಚೆಕ್ ಪೋಸ್ಟ್‌ಗಳಲ್ಲಿಯೂ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಲಂಚಕ್ಕಾಗಿ ಚಾಲಕರನ್ನು ಪೀಡಿಸಲಾಗುತ್ತದೆ. ಒಂದು ವೇಳೆ ತಕರಾರಿಲ್ಲದೆ ಲಂಚ ಕೊಟ್ಟರೆ, ದಾಖಲೆ ಇಲ್ಲದ ಟಿಪ್ಪರ್‌ಗಳನ್ನೂ ಸಲೀಸಾಗಿ ಚೆಕ್‌ಪೋಸ್ಟ್ ದಾಟಿಸಲಾಗುತ್ತದೆ ಎಂದು ಕೇರಳ ಮೂಲದ ಟಿಪ್ಪರ್ ಚಾಲಕರೊಬ್ಬರು ಅಲವತ್ತುಕೊಳ್ಳುತ್ತಾರೆ.

ಟಿಪ್ಪರ್‌ಗಳಿಂದ ಅಪಘಾತ: ಗುಂಡ್ಲುಪೇಟೆ, ಬೇಗೂರು ಭಾಗದಲ್ಲಿ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ಟಿಪ್ಪರ್‌ಗಳಿಂದ ಸಂಭವಿಸಿವೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ನಿಯಮ ಮೀರಿದ ಗಣಿಗಾರಿಕೆ, ನಿಯಮ ಮೀರಿದ ಕ್ರಷರ್‌ಗಳೇ ಕಾರಣ. ಹಾಗಾಗಿ ಸಂಜೆ ೬ ಗಂಟೆಗೆ ಕ್ರಷರ್ ಕ್ವಾರಿ ಕೆಲಸವನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು

” ಟಿಪ್ಪರ್ ಅಪಘಾತದಿಂದ ಮೂವರು ಮೃತಪಟ್ಟಿರುವ ಪ್ರಕರಣ ಆಘಾತ ಉಂಟುಮಾಡಿದೆ. ಟಿಪ್ಪರ್ ಹಾವಳಿ ಬಗ್ಗೆ ಜನರಲ್ಲಿ ಆಕ್ರೋಶ ವ್ಯಕ್ತವಾಗಿರುವುದು ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಕ್ರಷರ್ ಹಾಗೂ ಗಣಿಗಾರಿಕೆ ಮಾಡುವುದು ಸರಿಯಲ್ಲ. ಕನಿಷ್ಠ ಪ್ರತಿದಿನ ಸಂಜೆ ೭ ಗಂಟೆಗೆ ಕಾರ್ಯ ಸ್ಥಗಿತವಾಗಬೇಕು. ಈ ಬಗ್ಗೆ ಆದೇಶಿಸುವ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ.”

ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ

” ತಾಲ್ಲೂಕಿನಲ್ಲಿ ಕೇರಳ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಯಾವ ರೀತಿ ಕಡಿವಾಣ ಹಾಕಬಹುದು ಎಂಬುದರ ಬಗ್ಗೆ ಜಂಟಿ ನಿರ್ದೇಶಕರ ಜೊತೆ ಮಾತನಾಡುತ್ತೇನೆ. ದಿನಕ್ಕೆ ೬೦೦-೭೦೦ ಪರ್ಮಿಟ್ ವಿತರಣೆ ಯಾಗುತ್ತಿದೆ. ಕೆಲವು ಟಿಪ್ಪರ್‌ಗಳು ಪರ್ಮಿಟ್ ಇಲ್ಲದೆ ಓಡಾಡುತ್ತಿರಬಹುದು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಸಂಜೆಯ ನಂತರ ಕ್ರಷರ್ ಹಾಗೂ ಟಿಪ್ಪರ್‌ಗಳ ಸಂಚಾರ ಸ್ಥಗಿತದ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ಮಾಡಬೇಕು.”

ರಾಜೇಶ್, ಉಪ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ 

” ಗುಂಡ್ಲುಪೇಟೆ ಮಾರ್ಗದಲ್ಲಿ ರಾಜ್ಯದ ಖನಿಜ ಸಂಪತ್ತನ್ನು ಸಾಗಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಇದು ಅಧಿಕಾರಿಗಳಿಗೂ ಅಕ್ರಮವಾಗಿ ಹಣ ಸಂಪಾದಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಕೇರಳಕ್ಕೆ ಖನಿಜ ಸಂಪತ್ತು ಸಾಗಣೆ ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು. ಇಲ್ಲದಿದ್ದರೆ ರೈತ ಸಂಘದ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ.”

ಹೊನ್ನೂರು ಪ್ರಕಾಶ್, ಮುಖಂಡ, ಸಾಮೂಹಿಕ ನಾಯಕತ್ವ ರೈತ ಸಂಘ

 

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

10 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

12 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

13 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

15 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

16 hours ago