ಕೆ.ಬಿ.ರಮೇಶನಾಯಕ
ದಿಢೀರ್ ಸಭೆ ಮುಂದೂಡಿದ ಸಿಎಂ ಸಿದ್ದರಾಮಯ್ಯ ನಡೆಯಿಂದ ಅನುಮಾನ
ಬೃಹತ್ ಪಾಲಿಕೆ ರಚನೆ ಪರ-ವಿರೋಧ ನಿಲುವಿನಿಂದ ಮುಂದುವರಿದ ಗೊಂದಲ
ಮೈಸೂರು: ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ (ಗ್ರೇಟರ್ ಮೈಸೂರು) ಮೇಲ್ದರ್ಜೆಗೇರಿಸಬೇಕು ಎನ್ನುವ ಮಹದಾಸೆ ಹೊತ್ತಿರುವ ರಾಜ್ಯ ಸರ್ಕಾರದ ಪ್ರಸ್ತಾಪ ಮತ್ತೆ ಡೋಲಾಯಮಾನಕ್ಕೆ ಸಿಲುಕಿದೆ.
ಗ್ರೇಟರ್ ಮೈಸೂರು ರಚನೆ ಸಂಬಂಧ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಕರೆದಿದ್ದ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಢೀರನೆ ಮುಂದೂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗ್ರೇಟರ್ ಮೈಸೂರು ರಚನೆಗೆ ಎದ್ದಿರುವ ಪರ-ವಿರೋಧದ ಚರ್ಚೆಗಳೇ ಇದಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿವೆ. ಇದರಿಂದಾಗಿ ಗ್ರೇಟರ್ ಮೈಸೂರು ಪ್ರಸ್ತಾಪಕ್ಕೆ ಮತ್ತೆ ಜೀವ ಬರುವುದೋ ಅಥವಾ ಸಮಯ ದೂಡುವುದೇ ಎನ್ನುವ ಪ್ರಶ್ನೆ ಎದ್ದಿದೆ.
ಗ್ರೇಟರ್ ಮೈಸೂರು ರಚನೆಯಾದರೆ ಮೈಸೂರಿಗೆ ಹೊಂದಿಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಎಲ್ಲ ನೂತನ ಬಡಾವಣೆಗಳೂ ಬೃಹತ್ ಮೈಸೂರು ನಗರಪಾಲಿಕೆ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಸಹಜವಾಗಿಯೇ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗ್ರೇಟರ್ ಮೈಸೂರು ರಚನೆಗೆ ಒಲವು ತೋರಿದ್ದಾರೆ. ಆದರೆ, ಕಾಂಗ್ರೆಸ್‌ನ ಸಾಕಷ್ಟು ನಾಯಕರು ಹಾಗೂ ನಗರಪಾಲಿಕೆಯ ಮಾಜಿ ಸದಸ್ಯರು ಗ್ರೇಟರ್ ಮೈಸೂರಿನ ಕುರಿತು ಒಲವು ಹೊಂದಿಲ್ಲ. ಹೀಗಾಗಿ ಗ್ರೇಟರ್ ಮೈಸೂರು ರಚನೆ ಕೈಬಿಟ್ಟು ನಗರಪಾಲಿಕೆ ಚುನಾವಣೆ ಎದುರಿಸೋಣ ಎಂಬುದು ಅವರ ಸಲಹೆಯಾಗಿದೆ. ಈ ಕಾರಣಕ್ಕೆ ಸಿಎಂ ಸಭೆಯನ್ನು ದಿಢೀರನೆ ಮುಂದೂಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಕಳೆದ ತಿಂಗಳು ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಕರೆದಿದ್ದ ಸಭೆ ದಿಢೀರನೆ ಮುಂದೂಡಿದ್ದರೆ, ಸಿಎಂ ಅವರ ಅಧಿಕೃತ ಕಾರ್ಯಕ್ರಮದಲ್ಲಿದ್ದ ಸಭೆಯನ್ನೂ ಮುಂದೂಡಿರುವುದರಿಂದ ಯೋಜನೆ ಮತ್ತೆ ತೂಗುಯ್ಯಾಲೆಯಲ್ಲಿ ಇದೆ.
ವಿರೋಧಕ್ಕೆ ಕಾರಣವೇನು?: ಮೈಸೂರು ನಗರ ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಬಿಲ್ ಪಾವತಿಸಲು ಕೂಡ ನಗರ ಪಾಲಿಕೆಯಲ್ಲಿ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯವಸ್ಥಿತವಾಗಿ ಅಭಿವೃದ್ಧಿಗೊಂಡಿರುವ ನಗರದಲ್ಲಿಯೇ ಇಷ್ಟೊಂದು ಸಮಸ್ಯೆ ಇರುವಾಗ ನಗರವನ್ನು ವಿಸ್ತರಣೆ ಮಾಡಿದರೆ ಹಲವಾರು ನೂತನ ಬಡಾವಣೆಗಳು ಪಾಲಿಕೆಗೆ ಒಳಪಡುತ್ತದೆ. ಆ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸುವುದು, ಪಾಲಿಕೆಗೆ ಹೆಚ್ಚುವರಿ ನೌಕರರು, ಪೌರ ಕಾರ್ಮಿಕರನ್ನು ನೇಮಕ ಮಾಡಲು ಸಾವಿರಾರು ಕೋಟಿ ರೂ.ಗಳ ಅವಶ್ಯಕತೆ ಇದೆ. ಹೊಸ ಬಡಾವಣೆಗಳ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವಷ್ಟು ಅನುದಾನವನ್ನು ಹೊಂದಿಸುವುದು ಸರ್ಕಾರಕ್ಕೆ ಸವಾಲಾಗುತ್ತದೆ.
ಹೀಗಾಗಿ ಗ್ರೇಟರ್ ಮೈಸೂರು ರಚನೆ ಬೇಡ ಎಂಬ ಸಲಹೆಯನ್ನು ಕಾಂಗ್ರೆಸ್‌ನ ಹಲವು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಆದ್ದರಿಂದ ಗ್ರೇಟರ್ ಮೈಸೂರು ರಚನೆ ಗೊಂದಲದ ಗೂಡಾಗಿದೆ. ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕಂಡುಕೊಂಡು ನಂತರ ಗ್ರೇಟರ್ ಮೈಸೂರು ರಚನೆಗೆ ಮುಂದಾಗುವ ಸಾಧ್ಯತೆ ಇದೆ.
ದಶಕಗಳ ಕೂಗು: ರಾಜ್ಯದಲ್ಲಿ ೨೦೦೮ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ‘ಗ್ರೇಟರ್ ಮೈಸೂರು’ ರಚನೆಯಾಗಬೇಕು ಎಂಬ ಒತ್ತಾಯ ಕೇಳಿ ಬಂತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ. ರಾಮದಾಸ್, ಗ್ರೇಟರ್ ಮೈಸೂರಿಗೆ ಯೋಜನೆ ಸಿದ್ಧಪಡಿಸಿದ್ದರು. ಆದರೆ ಕಾರಣಾಂತರಗಳಿಂದ ‘ಗ್ರೇಟರ್ ಮೈಸೂರು’ ಕನಸು ನನಸಾಗಲಿಲ್ಲ.
ನಂತರದ ಹಲವು ವರ್ಷಗಳಲ್ಲಿ ‘ಗ್ರೇಟರ್ ಮೈಸೂರು’ ವಿಷಯ ಕೇವಲ ಬಜೆಟ್ ಸಂದರ್ಭ ಮಾತ್ರ ಚರ್ಚೆಗೆ ಸೀಮಿತವಾಯಿತು. ಆದರೆ, ಕಳೆದ ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಮೈಸೂರಿಗರ ‘ಗ್ರೇಟರ್ ಮೈಸೂರು’ ಕನಸಿಗೆ ಮತ್ತೆ ರೆಕ್ಕೆ ಕಟ್ಟಲು ಪ್ರಾರಂಭಿಸಿದರು. ಈ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಿದರು. ಆದರೆ, ಕೋವಿಡ್, ಮಹಾಪೌರರ ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶಾಸಕರು, ಸಂಸದರ ಸಭೆ ನಡೆಸಿ ಗ್ರೇಟರ್ ಮೈಸೂರು ಕುರಿತು ಅಭಿಪ್ರಾಯ ಪಡೆಯಲಾಯಿತು. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಗ್ರೇಟರ್ ಮೈಸೂರು ಕುರಿತು ಒಲವು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಆದರೆ, ಈ ಬಗ್ಗೆ ನಗರಪಾಲಿಕೆ ಕೌನ್ಸಿಲ್ ಒಪ್ಪಿಗೆ ಪಡೆಯಲು ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ಆ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ನಗರ ಪಾಲಿಕೆ ಸದಸ್ಯರು ಪರಸ್ಪರ ದೋಷಾರೋಪಣೆಯಲ್ಲಿ ಮುಳುಗಿದ್ದರು. ಆ ನಂತರ ವಿಧಾನಸಭೆ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ೨೦೨೪ರ ದಸರಾ ನಂತರ ಗ್ರೇಟರ್ ಮೈಸೂರು ಚರ್ಚೆ ಮತ್ತೆ ಮುನ್ನೆಲೆಗೆ ಬಂತು. ದಸರಾ ಮುಕ್ತಾಯಗೊಂಡ ನಂತರ ನಡೆದ ಅನೌಪಚಾರಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಟರ್ ಮೈಸೂರು ರಚನೆ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಗ್ರೇಟರ್ ಮೈಸೂರು ರಚನೆಯಾದರೆ ಅಭಿವೃದ್ಧಿಗೆ ಹೊಸ ವೇಗ:
” ಗ್ರೇಟರ್ ಮೈಸೂರು ರಚನೆಯಾದರೆ ನಗರದ ಅಭಿವೃದ್ಧಿಗೆ ಹೊಸ ವೇಗ ದೊರೆಯುವುದು ನಿಶ್ಚಿತ. ನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಮೂಲಸೌಲಭ್ಯಗಳು ಶೀಘ್ರದಲ್ಲಿಯೇ ದೊರೆತು ನಗರ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ನಗರ ಹಾಗೂ ನಗರದ ಹೊರ ವಲಯದ ಜನರ ದಾಹ ನೀಗಿಸಲು ಹಳೇ ಉಂಡವಾಡಿ ಕುಡಿಯುವ ನೀರಿನ ಯೋಜನೆ, ಕಬಿನಿ ಎರಡನೇ ಹಂತದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರೇಟರ್ ಮೈಸೂರು ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಸೌಲಭ್ಯಗಳೂ ವೇಗವಾಗಿ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಎಲ್ಲ ಸೌಲಭ್ಯಗಳು ದೊರೆತರೆ ಸಹಜವಾಗಿಯೇ ಹೊಸ ಬಡಾವಣೆಗಳಲ್ಲಿ ಜನರು ಮನೆಗಳ ನಿರ್ಮಾಣಕ್ಕೆ ಉತ್ಸಾಹ ತೋರುತ್ತಾರೆ. ಇದರಿಂದ ಪಾಲಿಕೆಯ ಆದಾಯವೂ ವೃದ್ಧಿಯಾಗುತ್ತದೆ ಎಂದು ಗ್ರೇಟರ್ ಮೈಸೂರು ಪರವಾಗಿ ಅಭಿಪ್ರಾಯ ಹೊಂದಿರುವವರು ವಾದಿಸುತ್ತಿದ್ದಾರೆ”
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…